ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ನಿರ್ಣಯದ ಸಂಕಷ್ಟಗಳು...

Last Updated 18 ಮೇ 2013, 19:59 IST
ಅಕ್ಷರ ಗಾತ್ರ

“ಮೇಡಂ, ಈ ಮಗು ಗಂಡೂ ಅಲ್ಲ, ಹೆಣ್ಣೂ ಅಲ್ಲ. ಪ್ರಸವ ಕೊಠಡಿಯೊಳಗೆ ಯಾವ ಲಿಂಗದ ವಿಭಾಗದಲ್ಲಿ ಇದನ್ನು ಇರಿಸಬೇಕೆಂದು ಗೊಂದಲವಾಗುತ್ತಿದೆ”- ಕಳೆದ ತಿಂಗಳು ಈ ಮಗುವಿನ ಜನನದ ಸಂದರ್ಭದಲ್ಲಿ ಹಾಜರಿದ್ದ ಡಾ. ಅನಿತಾ ವಿಷಾದದ ದನಿಯಲ್ಲಿ ಹೇಳಿದರು.

ಕನಕಪುರದ ಕುಗ್ರಾಮವೊಂದರಿಂದ ಬಂದಿದ್ದ ಜವರಪ್ಪ ಮತ್ತು ಸಿದ್ದಮ್ಮ ಐದು ವರ್ಷಗಳ ಹಿಂದೆ ಮದುವೆಯಾದವರು. ಗರ್ಭಪಾತದಿಂದ ಸಿದ್ದಮ್ಮ ಎರಡು ಬಾರಿ ತಾಯಿಯಾಗುವ ಅವಕಾಶ ಕಳೆದುಕೊಂಡಿದ್ದರು. ಹೀಗಾಗಿ ಈ ಬಡದಂಪತಿ ಮೂರನೇ ಗರ್ಭಾವಸ್ಥೆಯ ವೇಳೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಎಲ್ಲಾ ಬಗೆಯ ವೈದ್ಯಕೀಯ ತಪಾಸಣೆಗಳನ್ನು ಪಡೆದುಕೊಳ್ಳಲು ನಿರ್ಧರಿಸಿದರು. `ಜನನಿ ಶಿಶು ಸುರಕ್ಷಾ ಯೋಜನಾ' (ಜೆಎಸ್‌ಎಸ್‌ವೈ) ಅಡಿಯಲ್ಲಿ ಈ ಖರ್ಚಿನ ಬಹುತೇಕ ಹಣವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ನಿಯತ ಪರೀಕ್ಷೆಗಳಲ್ಲಿ ಎಲ್ಲವೂ ಸಹಜವಾಗಿರುವುದು ಸ್ಪಷ್ಟವಾಗಿತ್ತು.

ಮನೆಗೆ ಹೊಸ ಅತಿಥಿಯ ಆಗಮನಕ್ಕಾಗಿ ದಂಪತಿ ಕಾತರದಿಂದ ಕಾದಿದ್ದರು. `ಗಂಡು ಬೇಕೋ, ಹೆಣ್ಣು ಮಗುವೋ'? ಎಂದು ನಾನು ಜವರಪ್ಪ ಅವರನ್ನು ಕೇಳಿದಾಗ- `ಮನೆಯಲ್ಲಿ ಒಂದು ಮಗುವಿಲ್ಲದೆ ಐದು ವರ್ಷದ ವೈವಾಹಿಕ ಬದುಕು ನಿರರ್ಥಕವೆನಿಸಿದೆ. ಹೀಗಾಗಿ ಯಾವ ಮಗುವಾದರೂ ಅಡ್ಡಿಯಿಲ್ಲ' ಎಂದಿದ್ದರು. ಎರಡು ಬಸಿರನ್ನು ಕಳೆದುಕೊಳ್ಳುವಂಥ ಶಾಪ ತಮಗೇಕೆ ತಗುಲಿತು ಎಂದು ದಂಪತಿ ಆಶ್ಚರ್ಯಪಡುತ್ತಿದ್ದರು.

ವಾಣಿ ವಿಲಾಸ ಆಸ್ಪತ್ರೆಯಲ್ಲಿ ಪ್ರತಿ ಹೆರಿಗೆಯನ್ನೂ, ವಿಶೇಷವಾಗಿ ಈ ರೀತಿಯ ಅತಿ ಸೂಕ್ಷ್ಮ ಹೆರಿಗೆಯ ಸಂದರ್ಭದಲ್ಲಿ ಶಿಶುವೈದ್ಯರೊಬ್ಬರು ಹಾಜರಿರುತ್ತಾರೆ. ಹೀಗೆ ಈ ಹೆರಿಗೆ ವೇಳೆ ಉಪಸ್ಥಿತರಿರಲು ನವಜಾತ ಶಿಶುವಿಭಾಗದ ಡಾ. ಅನಿತಾ ಅವರನ್ನು ನಿಯೋಜಿಸಲಾಗಿತ್ತು. ಪ್ರಸವ ಕೊಠಡಿಯೊಳಗಿನಿಂದಲೇ ನನ್ನನ್ನು ಕರೆದ ಅವರು, ಓಡುತ್ತಲೇ ಹೊರಬಂದರು. ನನ್ನ ಕೊಠಡಿಯೊಳಗೆ ಅಡಿಯಿಡುವಾಗ ಅವರ ಮೊಬೈಲ್ ಕ್ಯಾಮೆರಾದಲ್ಲಿ ಆ ಮಗುವಿನ ಚಿತ್ರವಿತ್ತು.

ಅತ್ತ ಪ್ರಸವ ಕೊಠಡಿಯಲ್ಲಿ ಸಂತುಷ್ಟ ತಾಯಿ ತನ್ನ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸತೊಡಗಿದರು. ಎಲ್ಲಾ ತಾಯಂದಿರು ಸಹಜವಾಗಿ ಕೇಳುವಂತೆ ಮಗುವಿನ ಲಿಂಗವನ್ನೂ ಕೇಳಿದರು. ಆದರೆ ಆ ಕೊಠಡಿಯೊಳಗಿನ ನೀರವ ಮೌನ ಆಕೆಯನ್ನು ವ್ಯಾಕುಲಗೊಳಿಸಿತು. `ಮಗು ಆರೋಗ್ಯವಾಗಿದೆ' ಎಂಬ ನಮ್ಮ ಮಾತನ್ನು ಆಕೆ ಅರ್ಥಮಾಡಿಕೊಳ್ಳದಾಗಿದ್ದರು. ಹಾಗಿದ್ದರೆ ನಾವೇಕೆ ಅದರ ಲಿಂಗವನ್ನು ಹೇಳುತ್ತಿಲ್ಲ? ಹೊಕ್ಕಳು ಬಳ್ಳಿ ಕತ್ತರಿಸುವುದು, ಶಿಶುವನ್ನು ಶುಚಿಗೊಳಿಸುವುದು, ತೂಕ ನೋಡುವುದು ಮತ್ತು ಗುರುತಿನ ಟ್ಯಾಗ್ ಅಂಟಿಸುವ ಎಂದಿನ ಕಾರ್ಯಗಳು ಮುಗಿದ ಬಳಿಕ ಬಟ್ಟೆಯಲ್ಲಿ ಸುತ್ತಿ, ಎದೆಹಾಲುಣಿಸಲು ತಾಯಿ ಬಳಿ ವರ್ಗಾಯಿಸಲಾಯಿತು. ಆ ತಾಯಿ ಸಂತೋಷದಿಂದ ಹಾಲುಣಿಸಿದರು.

ಅಲ್ಲಿದ್ದ ಪ್ರತಿಯೊಬ್ಬರೂ ಯಾವ ಮಗು ಎಂದು ತಿಳಿಯದೆ ಒಬ್ಬರ ಮುಖವನ್ನೊಬ್ಬರು ನೋಡುತ್ತಿದ್ದರು. ಡಾ. ಅನಿತಾ ಯಾವ ಲಿಂಗವೆಂದು ನಿರ್ಣಯಿಸಲು `ಎಬಿ ಮೇಡಂ' ಅವರನ್ನು ಕಾಣಲು ಹೋಗಿದ್ದಾರೆ ಎಂದು ಅವರಿಗೆ ಹೇಳಲಾಯಿತು. ಎಲ್ಲರಿಗೂ ಅದು ವಿಚಿತ್ರವಾಗಿ ಕಾಣಿಸುತ್ತಿತ್ತು. ಅನಿತಾ ಮತ್ತು ನಾನು ಆ ಮಗುವಿನ ಲಿಂಗ ಪತ್ತೆಗೆ ಕುಳಿತುಕೊಂಡೆವು. ಮಗುವಿನ ಲಿಂಗ ಯಾವುದೆಂದು ಪೋಷಕರಿಗೆ ಹೇಳಲೇಬೇಕಿತ್ತು. ಒಂದು ಲಿಂಗವೆಂದು ನಿಗದಿಪಡಿಸುವ ಮುನ್ನ ನಮಗೆ ಸಮಯ ಬೇಕಿತ್ತು. ಏಕೆಂದರೆ, ಅದು ಸುಲಭದ ಕೆಲಸವಾಗಿರಲಿಲ್ಲ. ಅದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುವ ಸಲುವಾಗಿ ನಾವು ಮಗುವನ್ನು ನವಜಾತ ಶಿಶು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಿದೆವು. ಆಸ್ಪತ್ರೆಯ ಸಿಬ್ಬಂದಿಯೆಲ್ಲರೂ ಈ ಮಗುವನ್ನು ಕುತೂಹಲದ ವಸ್ತುವೆಂಬಂತೆ ದಿಟ್ಟಿಸುತ್ತಿದ್ದರು. ಈ ಹೊತ್ತಿಗೆ ಜವರಪ್ಪ ಮತ್ತು ಅವರ ಒಂದಿಬ್ಬರು ಸಂಬಂಧಿಕರು ನಮ್ಮ ಮೇಲೆ ಅಸಮಾಧಾನಗೊಂಡರು. `ಎಲ್ಲವೂ ಸಹಜವಾಗಿದೆ ಎಂದು ಹೇಳುತ್ತಿದ್ದೀರಿ. ಆದರೆ ನನ್ನ ಮಗುವಿನ ಲಿಂಗ ಯಾವುದೆಂದು ಮಾತ್ರ ಹೇಳುತ್ತಿಲ್ಲ. ಹೇಳಿದರೆ ನಾನು ಬಟ್ಟೆಗಳನ್ನಾದರೂ ತರಬಹುದು...' ಎಂದರು.

ನಾವು ಆತನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ, `ನಿಮ್ಮ ಮಗು ಇತರ ಮಕ್ಕಳಿಗಿಂತ ವಿಭಿನ್ನವಾಗಿದೆ' ಎಂದು ಹೇಳಿದೆವು. ಆ ವೇಳೆಗೆ ಆತನ ತಾಳ್ಮೆ ಮೀರಿತ್ತು. `ಏನು ವಿಭಿನ್ನ' ಎಂದು ಪ್ರಶ್ನಿಸಿದರು. ಅವರನ್ನು ಹೇಗೋ ಸಮಾಧಾನಪಡಿಸಿ ಆಪ್ತಸಮಾಲೋಚನಾ ಕೊಠಡಿಯಲ್ಲಿ ಗುಪ್ತವಾಗಿ ಎಲ್ಲವನ್ನೂ ವಿವರಿಸತೊಡಗಿದೆವು. ನಿಧಾನವಾಗಿ, ತಾಳ್ಮೆಯಿಂದ ಮತ್ತು ನಮ್ಮ ಪುಸ್ತಕಗಳಲ್ಲಿದ್ದ ಚಿತ್ರಗಳ ಸಹಾಯದಿಂದ ಸ್ಪಷ್ಟವಾಗಿ, ಆ ಮಗು ಗಂಡೂ ಅಲ್ಲ, ಹೆಣ್ಣೂ ಅಲ್ಲ ಎಂದು ಆತನಿಗೆ ಮನದಟ್ಟು ಮಾಡಿದೆವು. ಅದು ಅಸಹಜ ಜನನಾಂಗ ಅಥವಾ ವಿಲಕ್ಷಣ ಜನನಾಂಗದ ಪ್ರಕರಣವಾಗಿತ್ತು.

`ನನ್ನ ಮಗು ಹಿಜಡಾವೇ?' ಎಂದಷ್ಟೇ ಕೇಳಿದ ಜವರಪ್ಪ, ಬಿಕ್ಕಿಬಿಕ್ಕಿ ಅಳಲಾರಂಭಿಸಿದರು. ಅವರನ್ನು ಸಮಾಧಾನಪಡಿಸುವುದು ಅಸಾಧ್ಯವಾಗಿತ್ತು. `ಮಗು ಹುಟ್ಟುವ ಸಂಭ್ರಮವನ್ನು ಆಚರಿಸುವುದಕ್ಕೆ ಐದು ವರ್ಷದಿಂದ ಕಾದು ಕುಳಿತಿದ್ದೆವು. ಈಗ ನೋಡಿದರೆ ಮಗು ಗಂಡೂ ಅಲ್ಲ ಹೆಣ್ಣೂ ಅಲ್ಲ ಎನ್ನುತ್ತಿದ್ದೀರಿ' ಎಂದು ಕಣ್ಣೀರಿಡುತ್ತಲೇ ಹೇಳಿದರು. `ನಾನು ನನ್ನ ಹೆಂಡತಿಯನ್ನು ಹೇಗೆ ಎದುರಿಸಲಿ.

ಜನನಾಂಗದ ಹೊರತು ಮತ್ತೆಲ್ಲವೂ ಸಹಜವಾಗಿರುವಂತೆ ಕಾಣುವ ಈ ಮಗುವಿನೊಂದಿಗೆ ನಾವು ಏನು ಮಾಡುವುದು. ಜನನ ಪ್ರಮಾಣಪತ್ರದಲ್ಲಿ ನೀವು ಏನೆಂದು ಬರೆಯುವಿರಿ, ಯಾವ ಬಟ್ಟೆಯನ್ನು ನಾನು ಕೊಳ್ಳಲಿ, ಯಾವ ಶಾಲೆಗೆ ಸೇರಿಸಲಿ, ನನ್ನ ಸಂಬಂಧಿಕರು ಮತ್ತು ಸ್ನೇಹಿತರಿಗೆ ಏನೆಂದು ಹೇಳಲಿ..'- ಜವರಪ್ಪ ಗದ್ಗದಿತರಾಗಿ, ಅತೀವ ದುಃಖದೊಂದಿಗೆ (ಎದೆಯನ್ನು ಬಡಿದುಕೊಳ್ಳುತ್ತಾ) ಮಾತನಾಡುತ್ತಿದ್ದರೆ, ನಮ್ಮ ಕಣ್ಣುಗಳಲ್ಲೂ ನೀರು ಜಿನುಗತೊಡಗಿತು. ಅವರ ಪ್ರಶ್ನೆಗಳಿಗೆ ನಮ್ಮಲ್ಲಿ ತಕ್ಷಣದ ಉತ್ತರಗಳಿರಲಿಲ್ಲ.

1987ರಲ್ಲಿ ನಾನು ಆಗಷ್ಟೇ ಖಾಸಗಿ ಅಭ್ಯಾಸ ಪ್ರಾರಂಭಿಸಿದ್ದೆ. ಜನಪ್ರಿಯ ನಟರೊಬ್ಬರ ದೂರದ ಸಂಬಂಧಿಯೊಬ್ಬರು ತಮ್ಮ ಎರಡು ವರ್ಷದ ಮಗಳು ಶ್ರೀಮತಿಯನ್ನು ನನ್ನ ಬಳಿ ಕರೆದುಕೊಂಡು ಬಂದಿದ್ದರು. ರೋಗಿಯ ಸವಿವರವಾದ ಇತಿಹಾಸ ತೆಗೆದುಕೊಳ್ಳುವ ಮತ್ತು ಜಾಗರೂಕತೆಯಿಂದ ತಪಾಸಣೆ ನಡೆಸುವ ಅಭ್ಯಾಸ ನನ್ನದು. ಅದಾದ ಬಳಿಕ ಆ ಮಗುವಿನ ಬಾಹ್ಯ ಜನನಾಂಗಗಳಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು. `ದಿ ಬೆಂಗಳೂರು ಆಸ್ಪತ್ರೆ'ಯ ಮಕ್ಕಳ ತಜ್ಞ ಶ್ರೀಮೂರ್ತಿ ಅವರ ಬಳಿ ತೋರಿಸುವಂತೆ ಸಲಹೆ ನೀಡಿದೆ. ಅವರು ಕೂಡಲೇ ಆಂತರಿಕ ಅಂಗಗಳನ್ನು ನೋಡಲು ಅಂಗಾಂಗ ಪರೀಕ್ಷೆ ಮತ್ತು ಉದರ ದರ್ಶಕ ಪರೀಕ್ಷೆಗಳಿಗೆ ಸೂಚಿಸಿದರು. ಹಲವು ಸುತ್ತುಗಳ ಚರ್ಚೆ ಬಳಿಕ ಆ ದಂಪತಿ ಅದಕ್ಕೆ ಒಪ್ಪಿಕೊಂಡರು. ಅಂಗಾಂಶ ಪರೀಕ್ಷೆ ವರದಿ ಬಂದದ್ದು `ಈ ಮಗು ಗಂಡು ಮತ್ತು ಹೆಣ್ಣು ಎರಡೂ ಹೌದು (ಜನನಾಂಗಗಳು ಮತ್ತು ವೃಷಣಗಳು)' ಎಂದು. ಉಭಯ ಲಿಂಗತ್ವದ ನೈಜ ಪ್ರಕರಣವಿದು. ಒಂದು ವೇಳೆ ಈ ಗಡ್ಡೆಯನ್ನು ತೆಗೆಯದಿದ್ದರೆ ಅದು ಹಲವು ಸಮಸ್ಯೆಗಳಿಗೆ ಎಡೆಮಾಡಿಕೊಡುವ ಸಾಧ್ಯತೆಗಳಿದ್ದವು. ಗಡ್ಡೆ (ಜನನ ಗ್ರಂಥಿ- ovatestis) ತೆಗೆಯುವ ಮೊದಲು ದೇಶದ ವಿವಿಧೆಡೆಯ ಶಿಶುವೈದ್ಯರು, ಅಂತಃಸ್ರಾವ ಶಾಸ್ತ್ರಜ್ಞರನ್ನು ಸಂಪರ್ಕಿಸಿದರು. ಅದೇ ಸಮಯಕ್ಕೆ ಷಿಕಾಗೋಕ್ಕೆ ತೆರಳುತ್ತಿದ್ದ ನಾನು `ಶ್ರೀಮತಿಯ ಪ್ರಕರಣ ಕಡತ'ವನ್ನೂ ಕೊಂಡೊಯ್ದಿದ್ದೆ. ಷಿಕಾಗೊದ ಇಲ್ಲಿನೊಯಿಸ್ ವಿಶ್ವವಿದ್ಯಾನಿಲಯದ ಖ್ಯಾತ ಶಿಶು ಅಂತಃಸ್ರಾವ ಶಾಸ್ತ್ರಜ್ಞ ಪ್ರೊ. ರೊಸೆಂಥಾಲ್ ಅವರನ್ನು ಭೇಟಿಯಾದೆ. ಗಡ್ಡೆಯನ್ನು ತೆಗೆಯಲೇಬೇಕು ಮತ್ತು ಶಿಶುವನ್ನು ಹೆಣ್ಣುಮಗುವಿನಂತೆ ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು. ಅದನ್ನು ಪೋಷಕರು ಆಗಲೇ ಪಾಲಿಸುತ್ತಿದ್ದರು.

ನಾನು ಹಿಂದಿರುಗಿದ ನಂತರ, ಮನವೊಲಿಕೆಯಾಗಿದ್ದ ಕುಟುಂಬ ಜನನಗ್ರಂಥಿಯನ್ನು ಪಡೆದುಕೊಳ್ಳಲು ಒಪ್ಪಿಕೊಂಡರು. ತೀವ್ರ ಮನವೊಲಿಕೆಯ ಬಳಿಕ ಆಂತರಿಕ ಗಂಡು ಸಂರಚನೆಯನ್ನು ತೆಗೆದುಹಾಕಲಾಯಿತು. ನಾನು ಶ್ರೀಮತಿಯನ್ನು ಕೊನೆಯ ಬಾರಿ ನೋಡಿದಾಗ ಆಕೆಗೆ 12 ವರ್ಷ. ಶಿಶು ಅಂತಃಸ್ರಾವ ಶಾಸ್ತ್ರಜ್ಞರ ಮೇಲ್ವಿಚಾರಣೆಯಲ್ಲಿ ಆಕೆಯನ್ನು ಸ್ತ್ರೀಲೈಂಗಿಕ ಹಾರ್ಮೋನುಗಳಲ್ಲಿ ಇರಿಸಲಾಯಿತು. ಹೀಗಾಗಿ ಆಕೆಯಲ್ಲಿ ಸ್ತನಗಳು ಬೆಳವಣಿಗೆಯಾಗುತ್ತದೆ ಮತ್ತು ಹೆಣ್ಣಾಗಿ ಕಾಣಿಸುತ್ತಾಳೆ. ತಮ್ಮ ಮಗಳಿಗಾಗಿ ಈ ಸಿರಿವಂತ ಕುಟುಂಬ ಕೋಟಿಗಟ್ಟಲೆ ಹಣ ವ್ಯಯಿಸಿತ್ತು. ಅವರು ಮತ್ತೊಂದು ಮಗುವನ್ನು ಬಯಸಿರಲಿಲ್ಲ. `ದೇವರು ಇಂಥ ಶಾಪ ಒಮ್ಮೆ ಕೊಟ್ಟಿರುವುದು ಸಾಲದೇ?'. ಈ ಸುಶಿಕ್ಷಿತ ಪೋಷಕರಿಗೆ ಶ್ರೀಮತಿಯ ಭವಿಷ್ಯ ಹೇಗೆಂಬುದು ತಿಳಿದಿಲ್ಲ. ಆಕೆ ವಿವಾಹ ಆಗಬಹುದೇ?

ಮಾನವ ದೇಹದೊಳಗೆ ಸಂಭವಿಸುವ ಸಂಕೀರ್ಣ ಪ್ರಕ್ರಿಯೆಯಲ್ಲಿ ಗಂಡು ಅಥವಾ ಹೆಣ್ಣು ಎಂದು ಹೇಳುವುದು ಕಷ್ಟ ಎಂದರೆ ನಿಮಗೆ ಅಚ್ಚರಿ ಆಗಬಹುದು. ಮೂಲತಃ ನಾವೆಲ್ಲರೂ ಹೆಣ್ಣು! ಆದರೆ `ವೈ' ವರ್ಣತಂತುವಿನ ಆನುವಂಶಿಕ ಪದಾರ್ಥಗಳ ಅಸ್ತಿತ್ವದಿಂದ ಲಿಂಗ ವ್ಯತ್ಯಾಸ ಉಂಟಾಗುತ್ತದೆ. ಖ್ಯಾತ ಅಂಗರಚನಾಶಾಸ್ತ್ರಜ್ಞರೊಬ್ಬರು ಹೇಳಿರುವಂತೆ, `ಗಂಡಾಗಲು ಗರ್ಭಕೋಶದಲ್ಲಿ ಹೋರಾಟ ನಡೆಯುತ್ತದೆ'. ನಮ್ಮಲ್ಲಿ ಜನನ ಗ್ರಂಥಿಯನ್ನು ನಿರ್ಧರಿಸುವ ಆನುವಂಶಿಕ (ವರ್ಣತಂತು ಲಿಂಗ) ಇರುತ್ತದೆ. ಈ ಲೈಂಗಿಕ ಹಾರ್ಮೋನುಗಳ ಪ್ರಭಾವದಿಂದ, ನಾವು ಒಂದು ಆಂತರಿಕ ಲಿಂಗ ಮತ್ತು ಒಂದು ಬಾಹ್ಯ ಅಂಗರಚನೆಯ ಲಿಂಗ ಹೊಂದಿರುತ್ತೇವೆ. ಲಿಂಗ ಅಭಿವೃದ್ಧಿಯಲ್ಲಿ ಹಲವು ಹಂತಗಳಿವೆ. ಲಿಂಗ ಅಭಿವೃದ್ಧಿಯು ಗರ್ಭದಾರಣೆ ಸಂದರ್ಭದಿಂದಲೇ ಶುರುವಾಗುತ್ತದೆ. ಗರ್ಭಕೋಶದೊಳಗಿನ ಅವಧಿಯಲ್ಲಿ, ಬಾಲ್ಯದ ಆರಂಭದ ಸಮಯದಲ್ಲಿ ಮುಂದುವರಿದು, ತಾರುಣ್ಯ ಮತ್ತು ವಯಸ್ಕ ಹಂತದಲ್ಲಿಯೂ ಸಾಗುತ್ತದೆ. ಏಕೆಂದರೆ, ಮಾನವ ಜೀವನದಲ್ಲಿ ಲಿಂಗದ ಅಭಿವೃದ್ಧಿಯು ಅನೇಕ ಹಂತಗಳಲ್ಲಿ ನಡೆಯುತ್ತದೆ. ಪ್ರತಿ ವ್ಯಕ್ತಿಗೂ ಅದನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಇವೆಯಾದರೂ ಅವು ಸಹಜವಾದುದಲ್ಲ. ಲಿಂಗ ಅಭಿವೃದ್ಧಿಯು ಕಡಿಮೆ ಪಥಗಳಲ್ಲಿ ಸಂಭವಿಸಿದರೆ ಅದನ್ನು `ಲೈಂಗಿಕ ಅಭಿವೃದ್ಧಿಯ ವ್ಯಾಧಿ' (ಡಿಎಸ್‌ಡಿ) ಎಂದು ಕರೆಯಲಾಗುತ್ತದೆ.

ನಾನು ಫಿಟ್‌ನೆಸ್ ಕಾಪಾಡಿಕೊಳ್ಳಲು ಆದ್ಯತೆ ನೀಡುವವಳು. ಒಮ್ಮೆ ಜಿಮ್‌ನಲ್ಲಿ ನನ್ನ ಪಕ್ಕದಲ್ಲಿ ಟ್ರೆಡ್‌ಮಿಲ್ ಮಾಡುತ್ತಿದ್ದ `ಮಿ. ಆರ್' ಕುಸಿದುಬಿದ್ದರು. ಅವರಿಗೆ ಹೃದಯಾಘಾತ ಆಗಿರಬೇಕೆಂದು ಕೂಡಲೇ ಅವರ ಪ್ರಥಮ ಚಿಕಿತ್ಸೆಗೆ ಮುಂದಾದೆ. ಸ್ವಲ್ಪ ಹೊತ್ತಿಗೆ ಅವರು ಅತಿ ದುಃಖದಿಂದ ಅಳುತ್ತಾ, ತಮ್ಮ ಜೊತೆ ಹೊರಗೆ ಬರುವಂತೆ ಕೇಳಿಕೊಂಡರು. ಸನಿಹದಲ್ಲಿದ್ದ ಕಾಫಿ ಡೇನಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಇಬ್ಬರೂ ಕುಳಿತಿದ್ದೆವು. ಬಳಿಕ ಅವರು ಎಲ್ಲವನ್ನೂ ಹೇಳತೊಡಗಿದರು. ತಮ್ಮ ಪತ್ನಿ ಸಲಿಂಗಕಾಮಿ ಎನ್ನುವುದನ್ನು ಅವರು ಕಂಡುಹಿಡಿದಿದ್ದರು. ಅದು ಅವರಿಗೆ ಜೀರ್ಣಿಸಿಕೊಳ್ಳಲಾಗದ ಆಘಾತವಾಗಿತ್ತು.

ಅಪ್ಪಾಜಿಯ ಸ್ನೇಹಿತ, ಬಾಂಬೆಯ ಖ್ಯಾತ ಶಿಶುವೈದ್ಯರೊಬ್ಬರು ತಮ್ಮದೇ ಲಿಂಗದ ಸಹಪಾಠಿಯನ್ನು ಮದುವೆಯಾಗಿ ಅಮೆರಿಕಕ್ಕೆ ತೆರಳಿದರು. ಅದು ಸಲಿಂಗಿಗಳ ವಿವಾಹ. ಆಗಿನ ದಿನಗಳಲ್ಲಿ ಇದನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟವಾಗಿತ್ತು. ಹೀಗೆ 1990ರಲ್ಲಿ `ಎಲ್‌ಜಿಟಿಬಿ' (ಲೆಸ್ಬಿಯನ್, ಗೇ, ಟ್ರಾನ್ಸ್‌ಜೆಂಡರ್ ಬೈಸೆಕ್ಷುವಲ್) ಹುಟ್ಟಿಕೊಂಡಿತು. ಮಾಧ್ಯಮ ಮತ್ತು ಸಾಮಾನ್ಯ ಜನರು ಈ ಪದವನ್ನು ಬಳಿಸಿದರೆ, ನಾವು ವೃತ್ತಿಪರರು `ಲೈಂಗಿಕ ಅಭಿವೃದ್ಧಿಯ ವ್ಯಾಧಿ' (ಡಿಎಸ್‌ಡಿ) ಎಂದು ಕರೆಯುತ್ತೇವೆ.

ಭಾರತದಲ್ಲಿ `ಎಲ್‌ಜಿಟಿಬಿ'ಯನ್ನು ಸರಳವಾಗಿ ಕರೆಯುವುದು `ಹಿಜಡಾ'ಗಳೆಂದು. ಅವರು ದೈಹಿಕವಾಗಿ ಪುರುಷರು, ಮಹಿಳೆಯರಂತೆ ದಿರಿಸು ತೊಟ್ಟಿರುತ್ತಾರೆ. ಪೋಷಕರು ಅವರನ್ನು ಮನೆಯಿಂದ ಹೊರಹಾಕಿರುತ್ತಾರೆ ಅಥವಾ ತಮ್ಮಂತೆ ಇರುವ ಜನರನ್ನು ಹುಡುಕುವ ಸಲುವಾಗಿ ಅವರೇ ಮನೆ ಬಿಟ್ಟು ಓಡಿಬಂದಿರುತ್ತಾರೆ. ಇಂಥವರು ಆಯ್ದುಕೊಳ್ಳುವುದು ವೇಶ್ಯಾವಾಟಿಕೆ ಅಥವಾ ಭಿಕ್ಷೆ ಬೇಡುವ ವೃತ್ತಿಯನ್ನು. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹೊಟ್ಟೆಪಾಡಿಗಾಗಿ ತಮ್ಮ ಹಾವಭಾವದ ಮೂಲಕ ಮುಜುಗರ ಉಂಟುಮಾಡುತ್ತಾ ಭಿಕ್ಷೆ ಬೇಡುವ ಅವರನ್ನು ಕಂಡಾಗ ದುಃಖವಾಗುತ್ತದೆ. ಒಮ್ಮೆ ಯೋಚಿಸಿ ನೋಡಿ, ಅವರದು ಸಹಜ ಮಾನಸಿಕ ಸ್ಥಿತಿ, ಆದರೆ ದೋಷಯುತ ಲಿಂಗ. ಅವರನ್ನು ಹೆದರಿಸಬೇಡಿ ಅಥವಾ ಮುಜುಗರಕ್ಕೊಳಗಾಗಬೇಡಿ. ಅವರೂ ನನ್ನಂತೆ, ನಿಮ್ಮಂತೆ ಮನುಷ್ಯರೇ. ಆದರೆ ತಮ್ಮದಲ್ಲದ ತಪ್ಪಿಗೆ ಬೇರೆ ಲಕ್ಷಣ ಹೊಂದಿದ್ದಾರಷ್ಟೆ.

ಇದೂ ಸಾಲದೆಂಬಂತೆ ನಮ್ಮಲ್ಲಿ ಇನ್ನೂ ಒಂದು ಲಿಂಗವಿದೆ. ಅದು ಮಗುವಿನ ಪೋಷಣೆಯ ಹಂತದಲ್ಲಿ ಕಾಣಿಸುವಂತಹದ್ದು. ಹೆಣ್ಣುಮಗುವಿಗಾಗಿ ಹಂಬಲಿಸುವ ಕೆಲವು ಅಮ್ಮಂದಿರಿಗೆ ಗಂಡು ಮಗು ಜನಿಸಿರುತ್ತದೆ. ಅಂಥವರು ಗಂಡುಮಗುವಿಗೇ ಹೆಣ್ಣು ಮಗುವಿನ ಉಡುಪು ತೊಡಿಸುವುದು ಮಾತ್ರವಲ್ಲ, ಹೆಣ್ಣಿನಂತೆಯೇ ಬೆಳೆಸುತ್ತಾರೆ. ಇದೆಲ್ಲವೂ ಮುಂದೆ `ಲೈಂಗಿಕ ಅಸ್ಮಿತೆ ಬಿಕ್ಕಟ್ಟು' ಸನ್ನಿವೇಶಕ್ಕೆ ಕಾರಣವಾಗುತ್ತದೆ. ಅಲ್ಲದೆ, ಲಿಂಗ ವ್ಯತ್ಯಾಸದ ಮೇಳದ ಅಡಿಯಲ್ಲಿ `ಗಂಡು ಮೆದುಳು' ಮತ್ತು `ಹೆಣ್ಣು ಮೆದುಳು' ಇರುತ್ತದೆ. ಈ ಸಂಕೀರ್ಣ ವಿಷಯವನ್ನು ನಮ್ಮ ಓದುಗರಿಗೆ ಅರ್ಥವಾಗುವಂತೆ ಹೇಗೆ ವಿವರಿಸುವುದು?

ಲಿಂಗ ನಿರ್ಣಯ ಮಾಡುವುದು ಸುಲಭವಲ್ಲ ಮತ್ತು ನಿಖರವಾಗಿರುವ ನಮ್ಮ ಸೃಷ್ಟಿಕರ್ತ ತುಂಬಾ ನಿಪುಣನಾಗಿದ್ದಾನೆ. ಒಂದು ಸಾವಿರ ಹುಟ್ಟುಗಳಲ್ಲಿ ಆತ ಒಮ್ಮೆ ಮಾತ್ರ ಇಂಥ ತಪ್ಪು ಎಸಗುತ್ತಾನೆ. ಜನಿಸುವ 1500 ಮಕ್ಕಳಲ್ಲಿ ಒಂದು ಡಿಎಸ್‌ಡಿಯಾಗಿ ಹುಟ್ಟಿರುತ್ತದೆ. ಅಲ್ಲದೆ ಪ್ರಕೃತಿ, ಸಹಜವಾಗಿ ಅವರನ್ನು ಗರ್ಭಪಾತದ ರೂಪದಲ್ಲಿ ಹೊರಹಾಕುತ್ತದೆ.

ಒಂದು ವಾರದ ನಂತರ ಜವರಪ್ಪ ಮತ್ತು ಸಿದ್ದಮ್ಮ, ಮಗುವಿನ ಲಿಂಗ ನಿಗದಿಯ ವೆಚ್ಚವನ್ನು ತಿಳಿದುಕೊಂಡು ತಮ್ಮ `ಸಂತೋಷದ ಮೂಟೆ' (?) ಹೊತ್ತು ಆಸ್ಪತ್ರೆಯಿಂದ ಹೊರನಡೆದರು.

ವರ್ಷಗಳ ಹಿಂದಿನ ಘಟನೆಯೊಂದರ ನೆನಪು ಮನದಲ್ಲಿ ಹಾದುಹೋಯಿತು. ಕರ್ತವ್ಯ ನಿರತಳಾಗಿದ್ದಾಗ, ತಾಯಿಯೊಬ್ಬಳು ಕರೆದುಕೊಂಡು ಬಂದಿದ್ದ ಮಗುವಿನ ಜನನಾಂಗ ಸಂದೇಹಾಸ್ಪದ ಆಗಿರುವುದು ಕಂಡುಬಂದಿತು. ಮಾರನೇ ದಿನ ಕೆಲವು ಪರೀಕ್ಷೆಗಳನ್ನು ನಡೆಸಿ ಮಗುವಿನ ಲಿಂಗ ನಿರ್ಧರಿಸಬೇಕಾಗುತ್ತದೆ ಎಂದು ಆ ತಾಯಿಗೆ ತಿಳಿಸಿದೆ. ಒಂದು ಗಂಟೆಯ ಬಳಿಕ ಆ ತಾಯಿ ಮೃತ ಮಗುವನ್ನು ಕರೆತಂದಳು. ಆಗ ನನ್ನ ಜೊತೆಯಲ್ಲಿ ಕರ್ತವ್ಯದಲ್ಲಿದ್ದ ದಾದಿ ದಿ. ಎಲಿಜಬೆತ್, `ಡಾಕ್ಟರ್, ನನಗೆ ಗೊತ್ತು. ಮಗು ಹಿಜಡಾ ಎಂದು ಗೊತ್ತಾಗಿ ಆಕೆ ಅದನ್ನು ಸಾಯಿಸಿದ್ದಾಳೆ'. `ತರುವಾಗಲೇ ಮಗು ಮೃತಪಟ್ಟಿತ್ತು' ಎಂದು ನಾನು ಪ್ರಮಾಣೀಕರಿಸಿದೆ!

(ಲೇಖನದಲ್ಲಿ ಪ್ರಸ್ತಾಪಿಸಿರುವ ವ್ಯಕ್ತಿಗಳ ಹೆಸರನ್ನು ಬದಲಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT