ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಲಿಯನ್‌ಳ ಸಾಧನೆ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಇದೊಂದು ಪುಟ್ಟ ಹುಡುಗಿಯ ಸಾಧನೆಯ ರೋಮಾಂಚಕ ಕಥೆ. ಹೃದಯದಲ್ಲಿ ಆದರ್ಶ ತುಂಬಿಕೊಂಡು ಪರಿಶ್ರಮಕ್ಕೆ, ಪ್ರಯತ್ನಕ್ಕೆ ಹೆದರದೇ ಮುನ್ನುಗ್ಗಿ ಅಪಾರ ಸಾಧನೆ ಮಾಡಿದ ಮಹಿಳೆಯ ಕಥೆ ಇದು.

ಅಕೆಯ ಹೆಸರು ಲಿಲಿಯನ್. ಆಕೆ ತನ್ನ ಇಪ್ಪತ್ತೈದನೇ ವಯಸ್ಸಿಗೆ ಡಿಕ್‌ಸನ್ ಎಂಬ ಪಾದ್ರಿಯನ್ನು ಮದುವೆಯಾದಳು. ಇಬ್ಬರೂ ದೈವಭಕ್ತರು. ದಿನಾಲು ದೇವರನ್ನು ಪ್ರಾರ್ಥಿಸುತ್ತ ತಮ್ಮಿಂದ ಜಗತ್ತಿಗೆ ಪ್ರಯೋಜನಕಾರಿಯಾದ ಯಾವುದಾದರೂ ಕೆಲಸವನ್ನು ಮಾಡಲು ತಮ್ಮನ್ನು ಉಪಕರಣವನ್ನಾಗಿ ಬಳಸಿಕೊಳ್ಳಲು ಕೇಳಿಕೊಳ್ಳುತ್ತಿದ್ದರು. 

ಒಂದು ದಿನ ಮಾತನಾಡುತ್ತ ಕುಳಿತಿದ್ದಾಗ ತಾವು ಯಾವ ಕೆಲಸ ಮಾಡಿದರೆ ಅದು ದೇವರಿಗೆ ಪ್ರಿಯವಾದೀತು ಎಂಬ ಚರ್ಚೆ ಬಂದಿತು. ಆಕೆಯ ಗಂಡ ಹೇಳಿದ, `ನಾವು ಉಳ್ಳವರ ಸೇವೆ ಮಾಡಿದರೆ ಪ್ರಯೋಜನವಿಲ್ಲ. ಏನೂ ಇಲ್ಲದವರಿಗೆ, ಅಸಹಾಯಕರಿಗೆ ಸಹಾಯ ಮಾಡಿದರೆ ಅದು ಖಂಡಿತವಾಗಿಯೂ ದೇವರಿಗೆ ಪ್ರಿಯವಾಗುತ್ತದೆ.~  `ಹಾಗಾದರೆ ನಾವು ಇಲ್ಲಿ ಕುಳಿತು ಏನು ಮಾಡುತ್ತಿದ್ದೇವೆ?  ಬನ್ನಿ ಎಲ್ಲಿ ಹೆಚ್ಚು ದರಿದ್ರತನವಿದೆಯೋ, ಅಸಹಾಯತೆ ಇದೆಯ ಅಲ್ಲಿಗೆ ಹೋಗೋಣ~ ಎಂದಳಾಕೆ.

ನಂತರ ಹುಡುಕಾಟ ಶುರುವಾಯಿತು. ಆಫ್ರಿಕಾದ ಮೂಲೆಯಲ್ಲಿದ್ದ ಫೋರ್ಮೋಸಾ ದ್ವೀಪವನ್ನು ಆರಿಸಿಕೊಂಡದ್ದಾಯಿತು. ಅಲ್ಲಿದ್ದ ದಾರಿದ್ರ್ಯ, ಕಷ್ಟ ಬೇರೆಲ್ಲಿಯೂ ಕಾಣಲಿಲ್ಲ. ಮರುದಿನವೇ ಹಡಗನ್ನೇರಿ ನಡೆದರು ರೋಗ, ನರಳಿಕೆ, ಅನಕ್ಷರತೆ ತಾಂಡವವಾಡುತ್ತಿದ್ದ ಫೋರ್ಮೋಸಾ ದೀಪಕ್ಕೆ. ಅಲ್ಲಿ ತಲುಪಿದ ಮೇಲೆ ಸಮಾಜ ಕಲ್ಯಾಣ ಇಲಾಖೆಗೆ ಹೋಗಿ ತಾವು ಸೇವಾಕಾರ್ಯಕ್ಕೆ ಬಂದಿರುವುದಾಗಿ ಹೇಳಿದರು. ಆಗ ಆ ಅಧಿಕಾರಿಗೆ ಭಾರೀ ಆಶ್ವರ್ಯವಾಯಿತು. `ನೀವಾಗಿಯೇ ಬಂದಿದ್ದೀರೋ ಅಥವಾ ಯಾರಾದರೂ ಧನಸಹಾಯ ಮಾಡಿಕಳುಹಿಸಿದ್ದಾರೋ?~ ಎಂದು ಕೇಳಿದ.  ಲಿಲಿಯನ್, `ಇಲ್ಲ ಸರ್, ನಾವಾಗಿಯೇ ಏನಾದರೂ ಮಾಡೋಣವೆಂದು ಬಂದಿದ್ದೇವೆ~ ಎಂದಾಗ ಆ ಅಧಿಕಾರಿ ನಕ್ಕು ಹೇಳಿದ, `ನೀವಿನ್ನು ಚಿಕ್ಕ ವಯಸ್ಸಿನವರು, ಜೀವನ ಹಾಳು ಮಾಡಿಕೊಳ್ಳಬೇಡಿ.  ಮರಳಿ ಅಮೆರಿಕೆಗೆ ಹೋಗಿ ಬಿಡಿ. ಇಲ್ಲಿ ಇದುವರೆಗೂ ಯಾರೂ ಯಶಸ್ವಿಯಾಗಿಲ್ಲ, ಆಗುವುದೂ ಇಲ್ಲ~ ಎಂದು ತನ್ನ ಕೊಠಡಿಯ ಹಿಂಭಾಗಕ್ಕೆ ಹೋಗಿ ಇವರನ್ನು ಕರೆದು, ಕಿಟಕಿಯಿಂದ ಹೊರಗೆ ಭೋರ್ಗರೆಯುತ್ತಿದ್ದ ಸಮುದ್ರವನ್ನು ತೋರಿಸಿ ಮತ್ತೆ ಹೇಳಿದ, `ನೀವು ಈ ಜನರಿಗೆ ಸಹಾಯ ಮಾಡಲು ಬಂದಿದ್ದೀರಾ? ಹೊರಗೆ ಸಮುದ್ರ ಕಾಣುತ್ತಿದೆಯೋ? ಇಲ್ಲಿ ದಾರಿದ್ರ್ಯದಿಂದ ಮುಳುಗಿ ಹೋಗಿರುವ ಜನರಿಗೆ ಸಹಾಯ ಮಾಡುವುದೂ ಒಂದೇ, ಈ ಸಮುದ್ರದಿಂದ ಒಂದು ಬಕೆಟ್ ನೀರನ್ನು ತೆಗೆಯುವುದೂ ಒಂದೇ.  ಒಂದು ಬಕೆಟ್ ತೆಗೆದರೆ ಈ ಮಹಾಸಮುದ್ರಕ್ಕೆ ಯಾವ ವ್ಯತ್ಯಾಸವೂ ಆಗುವುದಿಲ್ಲ.~

ಆಗ ಲಿಲಿಯನ್ ಮೇಲೆದ್ದಳು,  `ಸರ್, ನನಗೆ ಸಮುದ್ರವನ್ನು ಖಾಲಿ ಮಾಡುವ ಯೋಚನೆ ಇಲ್ಲ. ಆದರೆ ನನ್ನ ಬಕೆಟ್‌ನ್ನು ಮಾತ್ರ ತುಂಬಿಸಿಕೊಳ್ಳುತ್ತೇನೆ~. ಆಕೆಯ ಕಣ್ಣಲ್ಲಿ ಅದೇನೋ ಹೊಳಪು ಆತ್ಮವಿಶ್ವಾಸ!

ಲಿಲಿಯನ್ ಮತ್ತು ಆಕೆಯ ಗಂಡ ಆ ದ್ವೀಪದಲ್ಲೇ ಉಳಿದರು. ಮೂವತ್ತು ವರ್ಷಗಳ ಸತತ ಪ್ರಯತ್ನದ ನಂತರ ಗಂಡ ತೀರಿಕೊಂಡ. ಲಿಲಿಯನ್ ಅಮೆರಿಕೆಗೆ ಬರದೇ ಅಲ್ಲಿಯೇ ಉಳಿದು ಮತ್ತೆ ಇಪ್ಪತ್ತು ವರ್ಷ ಶ್ರಮಿಸಿದಳು. ಈ ಐವತ್ತು ವರ್ಷಗಳಲ್ಲಿ ಆಕೆ ಮಾಡಿದ ಸಾಧನೆ ಯಾವ ಪ್ರಮಾಣದ್ದು ಗೊತ್ತೇ? ಒಂದು ಬಕೆಟ್ ನೀರು ಖಾಲಿ ಮಾಡುತ್ತೇನೆಂದು ಹೇಳಿದವಳು ಸಾವಿರಕ್ಕೂ ಮೇಲ್ಪಟ್ಟು ಶಾಲೆಗಳನ್ನು, ಆಸ್ಪತ್ರೆಗಳನ್ನು, ಚರ್ಚುಗಳನ್ನು ಸ್ಥಾಪಿಸಿದಳು. ಅವುಗಳಿಗೊಂದು ವ್ಯವಸ್ಥೆ ಮಾಡಿ ಸರಿಯಾಗಿ ನಡೆಯುವಂತೆ ನೋಡಿಕೊಂಡಳು. ಸಹಸ್ರಾರು ಜನರು ತಮ್ಮ ತಮ್ಮ ಜೀವನಗಳಲ್ಲಿ ನೆಮ್ಮದಿಯನ್ನು ಪಡೆಯುವಂತೆ ಮಾಡಿದಳು.

ಭಗವಂತ ನಮ್ಮಲ್ಲೂ ಅಂಥದೇ ಶಕ್ತಿ ಕೊಟ್ಟಿದ್ದಾನೆ. ನಮ್ಮಂತಹ ಸಾಮಾನ್ಯರಿಂದ ಅಸಾಮಾನ್ಯ ಕೆಲಸ ಮಾಡಿಸುವುದು ಸಮಾಜ ಪ್ರೀತಿ, ಉತ್ಸಾಹ ಮತ್ತು ಆತ್ಮವಿಶ್ವಾಸ.  ಅವೆಲ್ಲ ನಮ್ಮಲ್ಲಿಯೇ ಇವೆ.  ಲಿಲಿಯನ್‌ಳ ಹಾಗೆ ನಾವೂ ಅವುಗಳನ್ನು ಹೊರತೆಗೆದು ಬಳಸಿದ್ದೇ ಆದರೆ ಪ್ರಪಂಚ ತುಂಬ ಸುಂದರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT