ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿತ್ತೀಯ ಸಂಸ್ಥೆಗಳ ಎಚ್ಚರಿಕೆಯ ನಡೆ

Last Updated 17 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಷೇರುಪೇಟೆ ಸೂಚ್ಯಂಕಗಳು ಪುಟಿದೆದ್ದು ಹೊಸ ದಾಖಲೆಯತ್ತ ದಾಪುಗಾಲು ಇಡುತ್ತಿವೆ. ಗುಜರಾತ್ ಚುನಾವಣೆಗೆ ಮುನ್ನ ಭಾರಿ ಒತ್ತಡದಲ್ಲಿದ್ದ ಷೇರಿನ ಬೆಲೆಗಳು  ಚುನಾವಣಾ ದಿನ  ಮಧ್ಯಾಹ್ನದ ನಂತರ ಕಂಡ ಚೇತರಿಕೆಯು ಅಚ್ಚರಿ ಮೂಡಿಸುವಂತಿದೆ. ಪ್ರತಿದಿನವೂ ಸ್ವದೇಶಿ ವಿತ್ತೀಯ ಸಂಸ್ಥೆಗಳು ಖರೀದಿಸಿದರೆ, ವಿದೇಶಿ ವಿತ್ತೀಯ ಸಂಸ್ಥೆಗಳು ಮಾರಾಟ ಮಾಡುವ ಅಥವಾ ಸ್ವದೇಶಿ ವಿತ್ತೀಯಸಂಸ್ಥೆಗಳು ಮಾರಾಟ ಮಾಡಿದರೆ ವಿದೇಶಿ ವಿತ್ತೀಯ ಸಂಸ್ಥೆಗಳು ಖರೀದಿಸುವ ವಿಭಿನ್ನತೆಯಿಂದ ಸಮತೋಲನೆ ಮೂಡಿಸುತ್ತಿದ್ದ ಚಟುವಟಿಕೆಯು ಬುಧವಾರ ಈ ಎರಡೂ ಸಮೂಹ ಸಂಸ್ಥೆಗಳು ಕೇವಲ ಮಾರಾಟ ಮಾಡಿ ಹೆಚ್ಚಿನ ಒತ್ತಡ ನಿರ್ಮಿಸಿದವು.

ಅಂದರೆ ಒಂದು ರೀತಿಯ ಮುನ್ನೆಚ್ಚರಿಕೆಯ ಚಟುವಟಿಕೆ ನಡೆಸಿವೆ. ಆದರೆ, ಗುರುವಾರ ಗುಜರಾತ್ ರಾಜ್ಯದ ಎರಡನೇ ಮತ್ತು ಅಂತಿಮ ಸುತ್ತಿನ ಮತದಾನದಿಂದಾಗಿ ಪೇಟೆ ಎಷ್ಟರಮಟ್ಟಿಗೆ ಅಸ್ಥಿರತೆ ಕಂಡುಕೊಂಡಿತು ಎಂದರೆ ದಿನದ ಪೂರ್ವಾರ್ಧದಲ್ಲಿ ಸಂವೇದಿ ಸೂಚ್ಯಂಕವು ಸುಮಾರು 166 ಅಂಶ ಇಳಿಯಿತು. ನಂತರದಲ್ಲಿ ಭಾರಿ ಕೊಳ್ಳುವಿಕೆಯ ಕಾರಣ ಸೂಚ್ಯಂಕವು ಪುಟಿದೆದ್ದು 268 ಅಂಶಗಳ ಏರಿಕೆ ಪಡೆದು ಅಂತಿಮವಾಗಿ  193 ಅಂಶಗಳ  ಏರಿಕೆಯಿಂದ ಕೊನೆಗೊಂಡಿದೆ. ಮಧ್ಯಾಹ್ನದವರೆಗೂ ಇಳಿಕೆಯಲ್ಲಿದ್ದ ಷೇರಿನ ಬೆಲೆಗಳು ದಿಢೀರ್ ದಿಸೆ ಬದಲಿಸಿ ಏರಿಕೆ ಪಡೆದುಕೊಂಡವು.

ಗುರುವಾರ ನಡೆದ ವಹಿವಾಟಿನ ಗಾತ್ರವು ₹12.76 ಲಕ್ಷ ಕೋಟಿ ಮೀರಿರುವುದು ಪೇಟೆಯಲ್ಲಿ ಶೂನ್ಯ ಮಾರಾಟಗಾರರ ಖರೀದಿಯೋ ಅಥವಾ ವ್ಯಾಲ್ಯೂ ಪಿಕ್ ಚಟುವಟಿಕೆಯಾಗಿದೆಯೋ ಎಂಬುದು ನಿರ್ಧರಿಸುವುದು ಅಸಾಧ್ಯವಾದರೂ, ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆಗಳು ಭಾರಿ ಕುಸಿತ ಕಂಡಿರುವುದು, ಬೆಂಬಲಕ್ಕೆ ಕಾರಣವಾಗಿದೆ.  ಹಿಂದಿನ ದಿನ ಬುಧವಾರ ವಹಿವಾಟಿನ ಗಾತ್ರವು ₹8.70 ಲಕ್ಷ ಕೋಟಿಯಾಗಿತ್ತು. ಚುನಾವಣಾ ಸಮೀಕ್ಷೆಗಳ ನಂತರದ ದಿನ ಸಂವೇದಿ ಸೂಚ್ಯಂಕವು ಆಕರ್ಷಕ ಏರಿಕೆ ಕಂಡರೂ ಸಹ ಅಂದಿನ ವಹಿವಾಟು ₹4.92 ಲಕ್ಷ ಕೋಟಿಗೆ ಇಳಿದಿತ್ತು. ಈ ಅಂಶಗಳು ವಿಸ್ಮಯಕಾರಿಯಾಗಿ ಕಂಡರೂ ಸಹಜವಾಗಿವೆ.

ಪೇಟೆಗಳು ಉತ್ತುಂಗದಲ್ಲಿರುವುದರಿಂದ ತ್ವರಿತವಾಗಿ ಹಣ ಮಾಡಿಕೊಂಡು ಹೊರಬಂದು ತಮ್ಮ ನಿವ್ವಳ ಸಂಪತ್ತು ಮೌಲ್ಯ (ಎನ್‌ಎವಿ) ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವುದು ಸಹಜವಾಗಿದೆ. ಈ ಉದ್ದೇಶಕ್ಕಾಗಿ ಅವರು  ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಷೇರುಗಳನ್ನು ಆಯ್ಕೆ ಮಾಡಿಕೊಳ್ಳುವುದೇಕೆಂದರೆ ಗಜ ಗಾತ್ರದ ಖರೀದಿ ನಡೆಸಿದರೆ ಸಾಕು ಅವುಗಳ  ಬೆಲೆ ಗಗನಕ್ಕೆ ಚಿಮ್ಮುತ್ತವೆ.

ಕೆಲವು ಮ್ಯೂಚುವಲ್‌ ಫಂಡ್‌ಗಳಲ್ಲಿ ಮಿಡ್ ಕ್ಯಾಪ್ ಫಂಡ್ ಮತ್ತು ಸ್ಮಾಲ್ ಕ್ಯಾಪ್ ಫಂಡ್ ಸಂಗ್ರಹಣೆ ಕಳೆದ ಎರಡು ವರ್ಷಗಳಲ್ಲಿ ಮೂರು- ನಾಲ್ಕು ಪಟ್ಟು ಹೆಚ್ಚು ಸಂಗ್ರಹಣೆಯಾಗಿದ್ದು, ಆ ಹಣವು ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಷೇರುಗಳ ಬೆಲೆಗಳನ್ನು ಪುಟಿದೇಳುವಂತೆ ಮಾಡುತ್ತಿದೆ.  ಸಂಗ್ರಹಣೆ ಹೆಚ್ಚಾಗಿರುವ ಕಾರಣ ಆ ಫಂಡ್ ಗಳು ತಮ್ಮ ಹೂಡಿಕೆಗುಚ್ಛದಲ್ಲಿನ ಕಂಪನಿಗಳನ್ನು ವಿಸ್ತರಿಸಿದ್ದು ಚಟುವಟಿಕೆ ಇತರೆ ಕಂಪನಿಗಳಿಗೆ ಹರಡಿಕೊಳ್ಳಲು ಕಾರಣವಾಗಿವೆ.

ಒಂದೇ ತಿಂಗಳಲ್ಲಿ ₹480 ರ ಸಮೀಪದಿಂದ ₹793 ರ ಗರಿಷ್ಠ ತಲುಪಿ ಸುಮಾರು ₹300 ಕ್ಕೂ ಹೆಚ್ಚಿನ ಏರಿಕೆ ಪ್ರದರ್ಶಿಸಿದರೆ ಒಂದು ವಾರದಲ್ಲಿ ₹638 ರಿಂದ ₹793 ಕ್ಕೆ ಜಿಗಿತ ಕಂಡು ಅಂದರೆ ₹150 ಕ್ಕೂ ಹೆಚ್ಚಿನ ಏರಿಕೆಯನ್ನು ಕಂಡ ಕಂಪನಿ ಎಂದರೆ ಹಿಂದೂಜಾ ವೆಂಚರ್ಸ್ ಲಿ. ದಿನವೂ ಅಧಿಕವಾದ ಅಂತರದ ಏರಿಳಿತ ಸತತವಾಗಿ ಪ್ರದರ್ಶಿಸುತ್ತಿದೆ. ಅದೇ ರೀತಿ ಪರಾಗ್ ಮಿಲ್ಕ್ ಕಂಪನಿ ಷೇರು ₹246 ರ ಸಮೀಪದಿಂದ ₹281 ರವರೆಗೂ ಏರಿಕೆ ಕೇವಲ ಒಂದೇ ವಾರದಲ್ಲಿ ಕಂಡಿದೆ.  ಕೈಗಾರಿಕಾ ಟೆಕ್ಸ್ ಟೈಲ್ ವಲಯದ ಮತ್ತೊಂದು ಕಂಪನಿ ಇಂಡಿಯನ್ ಕಾರ್ಡ್ ಕ್ಲಾತಿಂಗ್ ಷೇರಿನ ಬೆಲೆಯೂ ₹180 ರಿಂದ ₹223 ರವರೆಗೂ ಜಿಗಿತ ಪ್ರದರ್ಶಿಸಿ ₹205.90 ರಲ್ಲಿ ವಾರಾಂತ್ಯ ಕಂಡಿತು.

ಮ್ಯೂಚುವಲ್‌ ಫಂಡ್‌ಗಳು ತಮ್ಮ ಹಣವನ್ನು ಹೆಚ್ಚಾಗಿ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಕಂಪೆನಿಗಳತ್ತ ಹೆಚ್ಚು ಹೂಡಿಕೆ ಮಾಡುತ್ತವೆ. ಆದರೆ ಅಗ್ರಮಾನ್ಯ ಕಂಪನಿಗಳ ಷೇರುಗಳತ್ತ ಏಕೆ ಒಲವು ತೋರುವುದಿಲ್ಲ.  ಅಗ್ರಮಾನ್ಯ ಕಂಪನಿಗಳ ಷೇರುಗಳಲ್ಲಿ ಕಂಡು ಬರುವ ದರಗಳ ಬದಲಾವಣೆ ಹೆಚ್ಚಾಗಿರುವುದಿಲ್ಲ.  ಅಲ್ಲಿ ಕಂಪನಿಯ ಸಾಧನೆ, ಘನತೆಯಾಧರಿಸಿ ಉಂಟಾಗುವ ಬೆಳವಣಿಗೆಗಳು ಏರಿಕೆ ಅಥವಾ ಇಳಿಕೆಗೆ ಕಾರಣವಾಗಿರುತ್ತವೆ.  ಅಲ್ಲದೆ ಹರಿದಾಡುವ ಷೇರುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ತೀಕ್ಷ್ಣವಾದ ಬದಲಾವಣೆ ತೀರಾ ವಿರಳ.  ಉದಾಹರಣೆಗಾಗಿ ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್,  ಒಎನ್‌ಜಿಸಿ, ಐ ಟಿ ಸಿ ಕಂಪನಿಗಳನ್ನು ಹೆಸರಿಸಬಹುದು. ಬಿಎಚ್‌ಇಎಲ್  ಕಂಪನಿಗೆ ₹7,300 ಕೋಟಿ ಮೌಲ್ಯದ ಆರ್ಡರ್ ಬಂದಿದೆ ಎಂದರೂ ಷೇರಿನ ಬೆಲೆಯಲ್ಲಿ ಬದಲಾವಣೆ ಆಗುವುದಿಲ್ಲ. ಹೀಗಾಗಿ ದೀರ್ಘಕಾಲೀನ ಹೂಡಿಕೆಗೆ ಅಗ್ರಮಾನ್ಯ ಕಂಪನಿಗಳೇ ಉತ್ತಮ.

ಹೊಸ ಷೇರು: ಪ್ರತಿ ಷೇರಿಗೆ ₹664 ರಂತೆ ಸಾರ್ವಜನಿಕ ವಿತರಣೆ ಮಾಡಿದ ಫ್ಯೂಚರ್ ಸಪ್ಲೈ ಚೇನ್ ಸೊಲ್ಯೂಷನ್ಸ್ ಲಿಮಿಟೆಡ್ ಕಂಪನಿಯ 4 ಕೋಟಿ ಷೇರುಗಳು 18 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿವೆ.

ಬೋನಸ್ ಷೇರು: ಬಾಲಕೃಷ್ಣ ಇಂಡಸ್ಟ್ರೀಸ್ ಕಂಪನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 23 ನಿಗದಿತ ದಿನ.

ಲಾಭಾಂಶ ವಿಚಾರ: ಕಾಲ್ಗೇಟ್ ಪಾಲ್ಮೊಲೀವ್ ಪ್ರತಿ ಷೇರಿಗೆ ₹4 (ಮು ಬೆ ₹1)

(ಮೊ: 98863 13380, ಸಂಜೆ 4.30ರಿಂದ)

***

ಷೇರುಪೇಟೆಯು ಒದಗಿಸುತ್ತಿರುವ ಹೂಡಿಕೆಯ ಅವಕಾಶಗಳನ್ನು ಈಗಿನ ದಿನಗಳಲ್ಲಿ ಅನಿವಾರ್ಯವಾಗಿಯಾದರೂ ಬಳಸಿಕೊಳ್ಳಬೇಕಾಗಿದೆ.  ಯಾವುದೇ ಬೇರೆ  ವಿಧಗಳಲ್ಲಿ  ಹೂಡಿಕೆ ಮಾಡಿದ ಹಣವನ್ನು ನಗದೀಕರಿಸಿಕೊಳ್ಳುವುದು ಸುಲಭ ಸಾಧ್ಯವಿಲ್ಲ.  ಒಂದು ಬ್ಯಾಂಕ್‌ಗೆ ಬೇರೆ ಬ್ಯಾಂಕ್‌ನ  ಚೆಕ್‌  ಹಣವನ್ನು ಜಮೆ ಮಾಡಲು ನೀಡಿದಾಗ ಅದು ತೀರುವಳಿಯಾಗಿ ಖಾತೆಗೆ ಜಮೆಯಾಗುವ ಸಮಯಕ್ಕಿಂತ ಶೀಘ್ರವೇ ಷೇರುಗಳ ಮಾರಾಟ ಮಾಡಿದ ಹಣ ಖಾತೆಗೆ ಜಮೆಯಾಗುವ ಸೌಲಭ್ಯವು ಗಮನಾರ್ಹವಾಗಿದೆ.

ಈ ಶೀಘ್ರ ನಗದೀಕರಣವು ಎಲ್ಲೆಡೆ ಇರುವ ಹಣವನ್ನು ಷೇರುಪೇಟೆ ತನ್ನತ್ತ ಆಕರ್ಷಿಸುತ್ತಿದೆ. ಬ್ಯಾಂಕ್ ಬಡ್ಡಿ ದರ ಕಡಿಮೆಯಾಗುತ್ತಲಿದ್ದು, ಖಾಸಗಿಯಾಗಿ ಡಿಪಾಜಿಟ್ ಮಾಡುವುದು ಅಪಾಯಕಾರಿಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಷೇರುಪೇಟೆ ಎಲ್ಲರ ಗಮನ ಸೆಳೆಯುವುದರಲ್ಲಿ ಸಂದೇಹವಿಲ್ಲ.

ಹಿಂದಿನ ದಿನಗಳಲ್ಲಿ ಉಳಿತಾಯ ಮಾಡುವ ಹವ್ಯಾಸವನ್ನು ಶಾಲಾ ಮಕ್ಕಳಲ್ಲಿ ಬೆಳೆಸಲು ಶಾಲೆಗಳಲ್ಲಿ ಬಚತ್ ಯೋಜನೆ ಅಳವಡಿಸಲಾಗಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಶಾಲಾ / ಕಾಲೇಜು  ಮಕ್ಕಳಲ್ಲಿ  ಷೇರುಪೇಟೆಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಈ ದಿಸೆಯಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಷೇರುಪೇಟೆಯ ಮೂಲಕ ಉಳಿತಾಯ ಮಾಡುವುದನ್ನು ಎಸ್ಐಪಿ ಮೂಲಕ ಬೆಳೆಸುವುದು ಅಗತ್ಯವಾಗಿದೆ. ಇವರು ಹೂಡಿಕೆ ಮಾಡಲು ಕೇವಲ ಕೆಲವೇ ಆಯ್ದ ಅಗ್ರಮಾನ್ಯ ಕಂಪನಿಗಳನ್ನು ಹೆಸರಿಸಿ ಅವರ ಡಿಮ್ಯಾಟ್ ಖಾತೆಗೆ ಕೇವಲ ಈ ಸಮೂಹದ ಷೇರುಗಳು ಮಾತ್ರ ಹರಿದಾಡುವುದಕ್ಕೆ ಸೀಮಿತಗೊಳಿಸದೆ, ಅವರ ಮುಂದಿನ ಭವಿಷ್ಯದಲ್ಲಿ ಉತ್ತಮ ಹೂಡಿಕೆಗುಚ್ಛ ಹೊಂದುವುದರಲ್ಲಿ ಸಂಶಯವೇ ಇಲ್ಲ.  ಈ ಹವ್ಯಾಸವು ಅವರಲ್ಲಿ ರೂಪಾಯಿಯ ಮೌಲ್ಯವನ್ನು ತಿಳಿಸುವುದಲ್ಲದೆ, ಅದರ ಉಪಯೋಗದ ಅಳವಡಿಕೆಯಿಂದ  ಹಲವರಲ್ಲಿ ಇರಬಹುದಾದ ದುಶ್ಚಟಗಳಿಂದ ದೂರವಿಡುವ ಸಾಧ್ಯತೆಯೂ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT