ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಕೃಷಿಕರಾಗೋಣ...

Last Updated 6 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಎಲ್ಲೋ ಒಂದು ಕಡೆ   ಕಲ್ಲಿದ್ದಲು ಗಣಿಗಾರಿಕೆ ನಡೆಸುವುದು, ಇನ್ನೊಂದು ಕಡೆ  ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದಿಸುವುದು, ಅದನ್ನು ಎಷ್ಟೋ ದೂರದ ಸ್ಥಳಕ್ಕೆ ರವಾನಿಸುವುದು, ಇದರಿಂದ ಅದೆಷ್ಟು ಇಂಧನ, ಶಕ್ತಿ ನಷ್ಟವಾಗುತ್ತದೆ ಎಂಬುದು ಎಲ್ಲರ ಅನುಭವಕ್ಕೆ ಬಂದಿದೆ. 

ನಾವು ಇರುವ ಕಡೆಯಲ್ಲೇ ನಮಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.  ಗ್ರಾಹಕರು `ವಿದ್ಯುತ್ ಕೃಷಿ~ ಕರಾದರೆ ಅಥವಾ ಸ್ಥಳೀಯವಾಗಿ ವಿದ್ಯುತ್ ಉತ್ಪಾದಿಸುವಂತೆ ಮಾಡಿದರೆ ತಪ್ಪೇನಿಲ್ಲ.

ಬ್ಯಾಂಕಾಕ್‌ನಲ್ಲಿ ಯಶಸ್ವಿಯಾದ ಪ್ರಯೋಗವನ್ನು ನಮ್ಮಲ್ಲೂ ಜಾರಿಗೆ ತರಬೇಕಾಗಿದೆ. ಸ್ವಂತ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆಯನ್ನು ಮನೆ ನಿರ್ಮಿಸುವ ಹಂತದಲ್ಲೇ ಮಾಡಿಕೊಂಡರೆ ಬಹಳಷ್ಟು ಅನುಕೂಲಗಳಿವೆ...


ತೆಲಂಗಾಣದಲ್ಲಿ ನಡೆದ ಮುಷ್ಕರ ಮತ್ತು ಕೆಲವು ರೈಲುಗಳ ಓಡಾಟ ಸ್ಥಗಿತಗೊಂಡದ್ದಕ್ಕೆ ಇಡೀ ದಕ್ಷಿಣ ಭಾರತ ಕಲ್ಲಿದ್ದಲಿಗಾಗಿ ಮೊರೆಯಿಟ್ಟಿತು. ಅಲ್ಲಿಯವರೆಗೆ ನಾವಾರೂ ಅದರ ಬಗ್ಗೆ ಯೋಚಿಸಿದವರೇ ಅಲ್ಲ, ದೂರದ ಧನಬಾದ್ ಮತ್ತು ಇತರ ಕಲ್ಲಿದ್ದಲು ಗಣಿಗಳಲ್ಲಿ ನೂರಾರು ಮೀಟರ್ ಆಳದಲ್ಲಿ ಗಣಿಗಾರಿಕೆ ನಡೆಸುವ ಜನರ ಬಗ್ಗೆ ನಾವು ಚಿಂತಿಸ್ದ್ದಿದೇ ಇಲ್ಲ. 50 ವರ್ಷಗಳಿಗೂ ಹೆಚ್ಚಿನ ಕಾಲದಿಂದ ಅಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿದೆ.

ದೇಶದ ವಿದ್ಯುತ್ ಕ್ಷೇತ್ರ ಇಂದು ಶೇ 80ರಷ್ಟು ಅವಲಂಬಿಸಿರುವುದು ಕ್ಲ್ಲಲಿದ್ದಲಿಗೆ. ರಾಮಗುಂಡಂ, ರಾಯಚೂರು, ನೈವೇಲಿ ಮತ್ತು ಇತರ ಉಷ್ಣ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಇಲ್ಲದೆ ಕಾರ್ಯಾಚರಣೆ ಮಾಡುವುದು ಸಾಧ್ಯವೇ ಇಲ್ಲ. ಉಷ್ಣ ವಿದ್ಯುತ್ ಉತ್ಪಾದನೆ ತಂತ್ರಜ್ಞಾನ 150 ವರ್ಷದಷ್ಟು ಹಳೆಯದು.

ನಾವು ಗಣಿಗಾರಿಕೆ ಮೂಲಕ ಹೊರತೆಗೆಯುವ ಒಟ್ಟು ಕಲ್ಲಿದ್ದಲಿನಲ್ಲಿ ಶೇ 30ರಷ್ಟು ಮಾತ್ರ ವಿದ್ಯುತ್ ಉತ್ಪಾದನೆಯಾಗಿ ಬಳಕೆಯಾಗುತ್ತದೆ. ಉಳಿದ ಶೇ 70ರಷ್ಟು ಕಲ್ಲಿದ್ದಲು ಉರಿದರೂ ಅದು ಶಾಖವೊಂದನ್ನು ಬಿಟ್ಟು ಬೇರೇನನ್ನು ಉತ್ಪಾದಿಸುವುದಿಲ್ಲ.

ಆದರೆ, ಶಾಖೋತ್ಪನ್ನ  ವಿದ್ಯುತ್ ಸ್ಥಾವರಗಳ ಸುತ್ತ ಬೆಟ್ಟದಂತೆ ಎದ್ದಿರುವ ಹಾರುಬೂದಿಗಳ ರಾಶಿ ಜನರಿಗೆ, ಪರಿಸರಕ್ಕೆ ಭಾರಿ ಹಾನಿ ಉಂಟುಮಾಡುತ್ತಿದೆ. 1960ರ ದಶಕದಿಂದ 2000ರ ನಡುವೆ ಈ ಹಾರುಬೂದಿ ಸಮಸ್ಯೆ ತೀವ್ರವಾಗಿದೆ.

ಕಲ್ಲಿದ್ದಲಿನ ಉತ್ಪಾದನಾ ಪ್ರಮಾಣ ಇಷ್ಟು ಕಡಿಮೆ ಎಂಬುದು ಗೊತ್ತಾದ ಮೇಲೆ, ಕಲ್ಲಿದ್ದಲಿನಿಂದ ಉತ್ಪಾದನೆಯಾದ ವಿದ್ಯುತ್ ಸರಬರಾಜಿನ ಬಗ್ಗೆಯೂ ಗಮನ ಹರಿಸಬೇಕು. ವಿದ್ಯುತ್ ಸೋರಿಕೆಯ ಪ್ರಮಾಣ ಎಷ್ಟಿದೆ ಎಂದರೆ, ವಿದ್ಯುತ್ ಉತ್ಪಾದಿಸುವ ಸ್ಥಳದಿಂದ ಗ್ರಾಹಕನ ಬಳಿಗೆ ಅದು ಬಂದು ತಲುಪುವಾಗ ಶೇ 80ರಷ್ಟು ವಿದ್ಯುತ್ ನಷ್ಟವಾಗಿರುತ್ತದೆ.

ಒಂದು ಟನ್ ಕಲ್ಲಿದ್ದಲಿನಿಂದ ನಾವು 1000 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಪಡೆಯುವುದಿಲ್ಲ. ಸೋರಿಕೆಯನ್ನು ಲೆಕ್ಕ ಹಾಕಿದರೆ ಹೀಗೆ ಉತ್ಪಾದನೆಯಾದ ವಿದ್ಯುತ್‌ನಲ್ಲಿ ನಾವು ಬಳಸುವುದು 200 ಯೂನಿಟ್‌ನಷ್ಟು ವಿದ್ಯುತ್ ಮಾತ್ರ.

ಬೆಂಗಳೂರು ಮಹಾನಗರ ಪ್ರತಿದಿನ 18 ಲಕ್ಷ ಯೂನಿಟ್ ವಿದ್ಯುತ್ ಪಡೆಯುತ್ತದೆ ಎಂದಿಟ್ಟುಕೊಂಡರೆ, 200 ಯೂನಿಟ್‌ಗೆ ಒಂದು ಟನ್‌ನಂತೆ ಕಲ್ಲಿದ್ದಲಿನ ಲೆಕ್ಕಾಚಾರ ಹಾಕಿದರೆ, ಒಂದು ದಿನದ ಬೆಂಗಳೂರಿನ ವಿದ್ಯುತ್ ಪೂರೈಕೆಗಾಗಿ ಅದೆಷ್ಟು ಟನ್ ಕಲ್ಲಿದ್ದಲು ಬಳಕೆಯಾಗುತ್ತದೆ ಎಂಬುದನ್ನು ಲೆಕ್ಕ ಹಾಕಬಹುದು.

ಎಲ್ಲೋ ಒಂದು ಕಡೆ ಕಲ್ಲಿದ್ದಲು ಗಣಿಗಾರಿಕೆ ನಡೆಸುವುದು, ಇನ್ನೊಂದು ಕಡೆ ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದಿಸುವುದು, ಅದನ್ನು ಎಷ್ಟೋ ದೂರದ ಸ್ಥಳಕ್ಕೆ ರವಾನಿಸುವುದು, ಇದರಿಂದ ಅದೆಷ್ಟು ಇಂಧನ, ಶಕ್ತಿ ನಷ್ಟವಾಗುತ್ತದೆ ಎಂಬುದು ಈಗಾಗಲೇ ಗೊತ್ತಾಗಿಬಿಟ್ಟಿದೆ. ಇದಕ್ಕೆ ಒಂದೇ ಒಂದು ಪರಿಹಾರ ಎಂದರೆ ನಾವು ಇರುವ ಕಡೆಯಲ್ಲೇ ನಮಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸುವುದು.

ದೇಶದಲ್ಲಿ ಒಂದು ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆ ಸಿದ್ಧಪಡಿಸಲು ರೂ. 4,500 ಕೋಟಿ  ಖರ್ಚು ಮಾಡಬೇಕಾಗುತ್ತದೆ. ಅಂದರೆ ಒಂದು ಕಿಲೋವಾಟ್ ವಿದ್ಯುತ್ ಉತ್ಪಾದನೆಗೆ ರೂ. 4.5 ಲಕ್ಷ ವೆಚ್ಚ ಬಿದ್ದಂತಾಗುತ್ತದೆ. ಇಂದು ಸೌರಶಕ್ತಿಯ ಪಿವಿ ಪ್ಯಾನೆಲ್‌ಗೆ ಎಲ್ಲಾ ರಿಯಾಯ್ತಿಗಳ ಬಳಿಕ ಮಾರುಕಟ್ಟೆಯ ವೆಚ್ಚ ರೂ. 4 ಲಕ್ಷದಷ್ಟಾಗುತ್ತದೆ.

ಹೀಗಿರುವಾಗ ಉತ್ಪಾದಿಸಿದ ವಿದ್ಯುತ್‌ನಲ್ಲಿ ಕೇವಲ ಶೇ 20ರಷ್ಟನ್ನು ಮಾತ್ರ ಬಳಸುವ ನಮಗೆ ಇಂತಹ ವಿದ್ಯುತ್ ಮೂಲ ಬಳಸುವ ಅಗತ್ಯ ಏನಿದೆ. ಸರ್ಕಾರ ಪ್ರತಿ ಕಿಲೊ ವಾಟ್ ವಿದ್ಯುತ್ ಉತ್ಪಾದಿಸುವುದಕ್ಕೆ ಬಳಸುವ ರೂ. 4.5 ಲಕ್ಷವನ್ನು ಯಾರು ವಿದ್ಯುತ್ ಬಳಸುತ್ತಾರೋ ಅವರಿಗೆ ತಮ್ಮದೇ ಸ್ವಂತ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸುವುದಕ್ಕೆ ನೀಡಬಾರದೇ? ಗ್ರಾಹಕರು `ವಿದ್ಯುತ್ ಕೃಷಿ~ಕರಾದರೆ ಅಥವಾ ಸ್ಥಳೀಯವಾಗಿ ವಿದ್ಯುತ್ ಉತ್ಪಾದಿಸುವಂತೆ ಮಾಡಿದರೆ ತಪ್ಪೇನಿದೆ?

ಇದೊಂದು ಹೊಸ ಚಿಂತನೆಯೇನಲ್ಲ. ಬ್ಯಾಂಕಾಕ್ ತನ್ನ ಪ್ರಜೆಗಳಿಗೆ ಆರು ವರ್ಷಗಳ ಹಿಂದೆಯೇ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಜಗತ್ತಿನಲ್ಲಿ ಇಂತಹ ವಿದ್ಯಮಾನ ನಡೆದಿರಲಿಲ್ಲವಾದ ಕಾರಣ ಬ್ಯಾಂಕಾಕ್ ಸಹ ಇದರ ಬಗ್ಗೆ ಅಂತಹ ಆಶಾಭಾವನೆ ಹೊಂದಿರಲಿಲ್ಲ.
 
ಸೌರಶಕ್ತಿಯಿಂದ ಅಥವಾ ಗಾಳಿ, ಸೂರ್ಯನನ್ನು ಬಳಸಿಕೊಂಡ ಹೈಬ್ರಿಡ್ ವ್ಯವಸ್ಥೆಯಿಂದ ಸ್ವಂತವಾಗಿ ವಿದ್ಯುತ್ ಉತ್ಪಾದಿಸುವ ಉಪಕರಣಗಳಿಗೆ ಶೇ 80ರಷ್ಟು ಸಬ್ಸಿಡಿ ನೀಡಿ ಉತ್ತೇಜಿಸಲಾಯಿತು. ಬ್ಯಾಂಕಾಕ್‌ನಲ್ಲಿ ಅದು ಯಶಸ್ವಿಯಾಗಿ ಜಾರಿಗೆ ಬಂದಿದೆ. ಅಲ್ಲಿ ಶೇ 50ರಷ್ಟು ವಿದ್ಯುತ್ ಇದೀಗ ಸ್ಥಳೀಯವಾಗಿಯೇ ಉತ್ಪಾದನೆಯಾಗುತ್ತಿದೆ.

ದೇಶದಲ್ಲಿ ಸಹ ನಮ್ಮ ಮನೆಗಳಿಗೆ ವಿದ್ಯುತ್ ಜೋಡಣೆಗಾಗಿ ಅಳವಡಿಸಲಾದ  ವಯರ್‌ಗಳನ್ನು ಸಂಪೂರ್ಣವಾಗಿ ಕಿತ್ತುಹಾಕಿ ಸ್ವಂತವಾಗಿ ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಸಾಧ್ಯವಿದೆ. 

ನಮ್ಮ ಮನೆಯ ತಾರಸಿ ಮೇಲೆ ಅಳವಡಿಸುವ ವಿದ್ಯುತ್ ಪ್ಯಾನೆಲ್‌ಗಳಿಂದಾಗಿ ಅದೆಂತಹ ಬದಲಾವಣೆ ಕಾಣುತ್ತದೆ ಎಂದರೆ ಗೀಸರ್ ಸಹಿತ ಹಳೆಯ ಪರಿಕರಗಳು ಕಣ್ಮರೆಯಾಗಿ ಹೊಸ ವಿದ್ಯುತ್‌ಗೆ ತಕ್ಕಂತಹ ಹೊಸ ದಕ್ಷ ರೀತಿಯ ಪರಿಕರಗಳು ಮನೆಗೆ ಬರುತ್ತವೆ. ಸರ್ಕಾರ ಪೂರೈಸುವ ವಿದ್ಯುತ್‌ಗೆ ಅವಲಂಬಿಸುವ ಅಗತ್ಯವೇ ಇರುವುದಿಲ್ಲ.

ನೀವು ನಿಮ್ಮ ಮನೆಯಲ್ಲಿ ಇಂತಹ ವ್ಯವಸ್ಥೆ ಅಳವಡಿಸಬೇಕಿದ್ದರೆ ಪ್ರತಿ ಕಿಲೊ ವಾಟ್ ವಿದ್ಯುತ್ ಉತ್ಪಾದನೆಗೆ ರೂ. 4.5 ಲಕ್ಷ ಬೇಕಾಗುತ್ತದೆ. ಅಂದರೆ, ಒಂದು ಮನೆಗೆ 5 ಕಿಲೋವಾಟ್ ವಿದ್ಯುತ್ ಅಗತ್ಯ ಇದೆ ಎಂದಾದರೆ ನಿಮ್ಮ ಮನೆಯಲ್ಲಿ ಸ್ವಸಾಮರ್ಥ್ಯದ ವಿದ್ಯುತ್ ಉತ್ಪಾದನೆ ವ್ಯವಸ್ಥೆ ರೂಪಿಸಲು ರೂ. 20 ಲಕ್ಷ  ಬೇಕಾಗುತ್ತದೆ.

5 ಕಿಲೊ ವಾಟ್ ಬದಲಿಗೆ ದಕ್ಷ ಉಪಕರಣಗಳ ಮೂಲಕ 3 ಕಿಲೋವಾಟ್‌ನಷ್ಟೇ ವಿದ್ಯುತ್ ಬಳಸುವ ವ್ಯವಸ್ಥೆ ಮಾಡಿಕೊಳ್ಳಬಹುದು. ಒಂದೇ ಬಾರಿಗೆ ಎರಡು ಉಪಕರಣಗಳಿಗಿಂತ ಹೆಚ್ಚು ಉಪಕರಣಗಳನ್ನು ಬಳಸದಂತೆ ಮನೆಮಂದಿಗೆ ತಿಳಿವಳಿಕೆ ನೀಡಿದರೆ ಕೇವಲ 3 ಕಿಲೊ ವಾಟ್ ವಿದ್ಯುತ್ ಉತ್ಪಾದಿಸಿದರೆ ಸಾಕು.

`ಎಸ್ಕಾಂ~ ನೀಡುವ ವಿದ್ಯುತ್ ನಮ್ಮ ಮನೆಯ ವಿದ್ಯುತ್ ಉತ್ಪಾದನೆಗಿಂತ ಕಡಿಮೆ ವೆಚ್ಚದ್ದು ಎಂಬುದು ನಿಜ. ಹೀಗಾಗಿ ಕೇವಲ 2 ಕಿಲೊ ವಾಟ್ ವಿದ್ಯುತ್ ಅಲ್ಲಿಂದ ಪಡೆದುಕೊಳ್ಳಬಹುದು. ಇಂತಹ ವ್ಯವಸ್ಥೆಯಿಂದ ಸ್ವಂತ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆಯೊಂದಿಗೆ, ಸರ್ಕಾರದಿಂದ ವಿದ್ಯುತ್ ಬಳಸುವ ಪ್ರಮಾಣ ಕಡಿಮೆಯಾಗುತ್ತದೆ.

ಇಂತಹ ಸ್ವಂತ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆಯನ್ನು ಮನೆ ನಿರ್ಮಿಸುವ ಹಂತದಲ್ಲೇ ಮಾಡಿಕೊಂಡರೆ ಬಹಳ ಅನುಕೂಲ. ಆದರೆ, ನಮ್ಮಲ್ಲಿ ಇಂತಹ ವಿಚಾರ ಮಾಡಿಕೊಂಡು ಮನೆ ಕಟ್ಟಿಕೊಡುವ ಯಾವೊಬ್ಬ ಕಟ್ಟಡ ನಿರ್ಮಾಣಗಾರ ಇದ್ದಂತೆ ಇಲ್ಲ.

ನಿಮ್ಮ ಮನೆಯಲ್ಲಿ ಸ್ವಂತ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆ ರೂಪಿಸಿಕೊಂಡಿದ್ದನ್ನು ಕಲ್ಪಿಸಿಕೊಳ್ಳಿ. ಇದರಿಂದ ನಿಮ್ಮ ಮನೆಯ ಬೇಡಿಕೆಯ ವ್ಯವಸ್ಥೆಯೇ ಸಂಪೂರ್ಣವಾಗಿ ಬದಲಾಗಿಬಿಡುತ್ತದೆ.

ನಿಮ್ಮ ಮನೆಯ ಉಪಕರಣಗಳೆಲ್ಲ ದಕ್ಷ ರೀತಿಯಿಂದ ವಿದ್ಯುತ್ ಬಳಸುವ ಉಪಕರಣಗಳಾಗಿ ಮಾರ್ಪಡುತ್ತವೆ. ಮನೆಯೊಳಗೆ ಅಳವಡಿಸುವ ಕೇಬಲ್‌ಗಳ ಗುಣಮಟ್ಟ ಬದಲಾಗುತ್ತದೆ. ನೀವು ಬಳಸುವ ಪ್ರತಿಯೊಂದು ವಿದ್ಯುತ್ ಮೋಟಾರ್‌ನ ಗುಣಮಟ್ಟವೂ ಸುಧಾರಿಸುತ್ತದೆ.

ಇದು ಏಕೆಂದರೆ ನೀವೇ ಉತ್ಪಾದಿಸುವ ವಿದ್ಯುತ್ ನಿಮ್ಮ ಉಪಕರಣಗಳಿಗೆ ಸಮರ್ಪಕವಾಗಿ ದೊರಕಬೇಕು ಎಂಬ ಭಾವನೆ ನಿಮ್ಮಲ್ಲಿರುತ್ತದೆ. ಜಗತ್ತು ಇಂದು ವೇಗವಾಗಿ ಬದಲಾಗುತ್ತಿದೆ. ನಮ್ಮಲ್ಲಿ ಇಂತಹ ಬದಲಾವಣೆ ಬರಲು ಎಷ್ಟು ಸಮಯ ಹಿಡಿಯಬಹುದು ಎಂಬುದೇ ಪ್ರಶ್ನೆ.

ಆದರೆ ಭಾರತದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕ ಶಕ್ತಿಗಳು ಇಂತಹ ಬದಲಾವಣೆಗೆ ಬೇಗನೆ ಸ್ಪಂದಿಸುವ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ಗ್ರಾಹಕರೇ ತಮಗೆ ಬೇಕಾದಂತಹ ವಿದ್ಯುತ್ ಉತ್ಪಾದಿಸಿಕೊಂಡರೆ ಲಂಚ ಪಡೆಯುವ ಅವಕಾಶ ತಪ್ಪಿಹೋಗುತ್ತದೆ ಎಂಬ ಭಾವನೆ ವ್ಯವಸ್ಥೆಯಲ್ಲಿ ಈಗಲೂ ನೆಲೆಸಿದೆ.

ಛತ್ತೀಸ್‌ಗಡ, ಬಿಹಾರ, ದಕ್ಷಿಣ ಬಂಗಾಳದಂತಹ ಸ್ಥಳಗಳಿಂದ ಕಲ್ಲಿದ್ದಲು ತರಿಸಿಕೊಳ್ಳುವ ಕಷ್ಟ, ಅದರಿಂದ ಉತ್ಪಾದಿಸುವ ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿರುವ ನಷ್ಟವನ್ನೆಲ್ಲ ನೋಡಿದಾಗ ಇಂತಹ ವಿಚಾರ ಸಹಜ. ನಾವೆಲ್ಲರೂ ವಿದ್ಯುತ್ ಉತ್ಪಾದಿಸುವ ಕೃಷಿಕರಾದರೆ ಹೊರಗಿನ ವಿದ್ಯುತ್‌ಗೆ ಆಶ್ರಯಿಸದೆ ಸ್ಥಳೀಯವಾಗಿಯೇ ವಿದ್ಯುತ್ ಉತ್ಪಾದಿಸುವುದು ಸಾಧ್ಯವಿದೆ.

ಸ್ಥಳೀಯವಾಗಿಯೇ ವಿದ್ಯುತ್ ಉತ್ಪಾದಿಸುವ ಪರಿಕಲ್ಪನೆ ನಮಗೆ ಹೊಸದೇನೂ ಅಲ್ಲ. ಸುಮಾರು 40 ವರ್ಷಗಳಷ್ಟು ಹಿಂದೆಯೇ ಸಕ್ಕರೆ ಕಾರ್ಖಾನೆಗಳು ತಮಗೆ ಅಗತ್ಯ ಇರುವ ವಿದ್ಯುತ್ ತಾವೇ ಉತ್ಪಾದಿಸಿಕೊಳ್ಳಬೇಕು ಎಂದು ಕಡ್ಡಾಯ ಮಾಡಲಾಗಿತ್ತು. ಹೀಗಾಗಿ ಬಳಸಿದ ಕಬ್ಬಿನ ತ್ಯಾಜ್ಯ ಬಳಸಿಕೊಂಡು ಶೇ 60ರಷ್ಟು ವಿದ್ಯುತ್ ಉತ್ಪಾದನೆ ನಡೆಯುತ್ತಿದೆ.

ಇದೇ ರೀತಿಯ ಚಿತ್ರಣ ನಮ್ಮ ಪ್ರತಿಯೊಂದು ಮನೆಯಲ್ಲೂ ಪ್ರತಿಫಲನಗೊಳ್ಳಬೇಕಿದೆ. ಸಾವಿರಾರು ಕಿಲೋಮೀಟರ್ ದೂರದಿಂದ ರೈಲು ಮಾರ್ಗದಲ್ಲಿ ಕಲ್ಲಿದ್ದಲು ಸರಬರಾಜಾಗುವುದು ನಿಲ್ಲಬೇಕಿದೆ. ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆ ಸ್ಥಗಿತಗೊಳ್ಳಬೇಕಿದೆ. ಇದೊಂದು ಸಾಧಿಸಲು ಸಾಧ್ಯವಿಲ್ಲದ ಕನಸು ಎಂಬ ಭಾವನೆ ನಿಮ್ಮಲ್ಲಿದೆಯೇ. ಅದನ್ನು ಮನಸ್ಸಿನಿಂದ ಕಿತ್ತುಹಾಕಿಬಿಡಿ.

ಈಗಿನಿಂದಲೇ ಪ್ರಯತ್ನಿಸಿದರೆ ಈ ಗುರಿ ಸಾಧನೆ ಕಷ್ಟವೇನಲ್ಲ. ಇಂತಹ ತಂತ್ರಜ್ಞಾನವನ್ನು ಸದ್ಯ ಕೆಲವೇ ಮಂದಿಗೆ ಸೀಮಿತವಾಗಿದೆ. ಅವರಿಂದ ಪ್ರೇರಣೆಗೊಂಡು ಇತರರೂ ಪ್ರಯತ್ನಿಸಿದರೆ ಈ ಗುರಿ ಈಡೇರುವುದು ಕಷ್ಟವೇನಲ್ಲ.

 (ಲೇಖಕರನ್ನು 99010 54321 ಕರೆ ಮಾಡಿ ಸಂಪರ್ಕಿಸಬಹುದು)


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT