ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಿಗೆ ಭಾರತ ರತ್ನ ಕೊಟ್ಟರೆ ದೇಶಕ್ಕೇ ಗೌರವ

Last Updated 3 ಜೂನ್ 2012, 19:30 IST
ಅಕ್ಷರ ಗಾತ್ರ

ಮೊದಲು ವಿಶ್ವನಾಥನ್ ಆನಂದ್ ಅವರಿಗೆ ಅಭಿನಂದನೆಗಳು. ಅವರು ಐದನೇ ಸಲ ವಿಶ್ವ ಚೆಸ್ ಕಿರೀಟವನ್ನು ಧರಿಸಿದ್ದು, ಬರೀ ಕ್ರೀಡಾಪ್ರೇಮಿಗಳಷ್ಟೇ ಅಲ್ಲ, ಇಡೀ ದೇಶದ ಜನರ ಮನಸ್ಸನ್ನು ಮುದಗೊಳಿಸುವಂಥ ಸಾಧನೆ.
 
ಮುಂಬೈನ ಮರೀನ್ ಡ್ರೈವ್‌ನಲ್ಲಾಗಲೀ, ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಾಗಲೀ ಅಥವಾ ಬೆಂಗಳೂರು, ಚೆನ್ನೈ, ನವದೆಹಲಿಯ ಬೀದಿ ಬೀದಿಗಳಲ್ಲಾಗಲೀ ಯಾರೂ ಕುಣಿ(ಡಿ)ದು ಕುಪ್ಪಳಿಸಲಿಲ್ಲ.
 
ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರಗಳಾಗಲೀ ಮುಗಿಬಿದ್ದು ಉಡುಗೊರೆಗಳ ಸುರಿಮಳೆಗೈಯಲಿಲ್ಲ. ಆದರೆ ವಿಶ್ವವಿಜೇತ `ವಿಶಿ~ಗೆ ಜನರು ಮನಸ್ಸಿನಲ್ಲೇ `ಶಹಬ್ಬಾಸ್~ ಎಂದು ಸೆಲ್ಯೂಟ್ ಹೊಡೆದದ್ದು ಮತ್ತೇರಿದ ಆಡಂಬರಕ್ಕಿಂತ ಎಷ್ಟೋ ಪಟ್ಟು ದೊಡ್ಡದು. ಕ್ರಿಕೆಟ್ ಸಮೂಹಸನ್ನಿಯ ಆರಾಧನೆಯಾದರೆ   ಚೆಸ್‌ಗೆ ಇರುವುದು ಮನಸ್ಸಿನಾಳದಿಂದ ಬರುವ ಬುದ್ಧಿಪೂರ್ವಕ  ರಾಜಮರ್ಯಾದೆ.

ವಿಶ್ವನಾಥನ್ ಆನಂದ್‌ಗೂ ಕ್ರಿಕೆಟ್ ವಿಶ್ವ ಚಾಂಪಿಯನ್ನರಿಗೂ ಹೋಲಿಕೆಯೇ ಇಲ್ಲ, ಇರಬಾರದು. ಆನಂದ್ ಸಾಧನೆ ಆಕಸ್ಮಿಕ ಅಲ್ಲ. ಅವರು ಒಂದೊಂದೇ ಮೆಟ್ಟಿಲೇರುತ್ತ ಚಕ್ರವರ್ತಿಯ ಸಿಂಹಾಸನದ ಮೇಲೆ ಕುಳಿತವರು.
 
ಆದರೆ ಕ್ರಿಕೆಟ್‌ನಲ್ಲಿ ಎಲ್ಲವೂ ಆಕಸ್ಮಿಕವೇ. ಅಂದಿನ ದಿನದ ಆಟದಲ್ಲಿ ಯಾವನಾದರೊಬ್ಬ ಮಿಂಚಿದರೆ ಸಾಕು. ಹಾಗೆಂದು ಸಚಿನ್ ತೆಂಡೂಲ್ಕರ್ ಅಥವಾ ರಾಹುಲ್ ದ್ರಾವಿಡ್ ಅವರ ಸಾಧನೆ ಕಡಿಮೆ ಎಂದು ಹೇಳುತ್ತಿಲ್ಲ. ಅವರು ತಮ್ಮ ವೈಯಕ್ತಿಕ ಮಟ್ಟವನ್ನು ಛಲದಿಂದಲೇ ಏರಿಸಿಕೊಂಡವರು. ಅವರನ್ನು ಹಾಡಿಹೊಗಳುವುದರಲ್ಲಿ ತಪ್ಪೂ ಇಲ್ಲ. ಆದರೆ ವಿಶ್ವನಾಥನ್ ಆನಂದ್ ಅಥವಾ ಬೇರೆ ಆಟಗಳ ಸಾಧಕರಿಗೆ ಕ್ರಿಕೆಟ್‌ಪಟುಗಳಿಗೆ ಸಿಗುತ್ತಿರುವ ಪ್ರಚಾರ ಅಥವಾ ಹಣದ ಪುರಸ್ಕಾರ ದೊರೆಯುವುದಿಲ್ಲ. 

ಐಪಿಎಲ್‌ನಂಥ ಶುದ್ಧ ತರ್ಕಹೀನ ಮತ್ತು ಮಿಲಾಪಿ ಆಟದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಗೆದ್ದಾಗ ಅದನ್ನು ವಿಶ್ವ ಗೆಲುವಿಗೆ ಸಮ ಎಂದು ಹೇಳುತ್ತ ಆಟಗಾರರ ಕೊರಳಿಗೆ ಚಿನ್ನದ ಸರಗಳನ್ನು ಹಾಕಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅನಂದ್ ಅವರನ್ನು ಬಾಯಿಮಾತಿನಲ್ಲಷ್ಟೇ ಅಭಿನಂದಿಸುತ್ತಾರೆ.
 
ಸಹೋದ್ಯೋಗಿಯೊಬ್ಬರು ಹೇಳಿದಂತೆ, ಮಮತಾ ಅವರ ದಿಢೀರ್ ಕ್ರಿಕೆಟ್‌ಪ್ರೇಮದ ಹಿಂದೆ ರಾಜಕೀಯವೂ ಇರಬಹುದು. ಕೋಲ್ಕತ್ತದ ಫುಟ್‌ಬಾಲ್ ಮೋಹವನ್ನು ಕಮ್ಯುನಿಸ್ಟರೂ ಪೋಷಿಸಿದ್ದರು. ಕಮ್ಯುನಿಸ್ಟರನ್ನು ಮೂಲೆಗುಂಪು ಮಾಡಿದ ಮಮತಾ ಈಗ `ಚೇಂಜ್ ದ ಗೇಮ್~ ಅನ್ನುತ್ತಿರಬಹುದು!

ನಮ್ಮಲ್ಲಿ ಹೊಗಳಿಕೆ ಮತ್ತು ತೆಗಳಿಕೆಯಲ್ಲಿ ಎಲ್ಲವೂ ಅತಿ ಎನ್ನುವ ಮಾತಿದೆ. ಆದರೆ ಅದೀಗ ಮೂರು `ಸಿ~ ಗಳಿಗೆ ಮಾತ್ರ ಸೀಮಿತವಾಗಿದೆಯೆಂದೆನಿಸುತ್ತಿದೆ. ಅಂದರೆ ಕ್ರಿಕೆಟ್, ಸಿನೇಮಾ ಮತ್ತು ಕ್ರೈಮ್.
 
ಟಿವಿ ಮಾಧ್ಯಮಗಳಿಗಂತೂ ಈ ಮೂರೇ ಜೀವ ಎಂದು ಅದರಲ್ಲಿದ್ದವರೇ ಹೇಳುತ್ತಾರಂತೆ! ಹಿಂಸೆ ಮತ್ತು ನಿಜಜೀವನಕ್ಕಿಂತ ದೊಡ್ಡದಾದ ಅಂದರೆ ಅತಿರಂಜಿತ ಬಿಂಬ ತೋರಿಸುವ ಸಿನೇಮಾ ಸಹಜವಾಗಿಯೇ ಜನರಿಗೆ ಇಷ್ಟವಾಗುವ ವಿಷಯಗಳು.

ಆದರೆ ಈಗ ಕ್ರಿಕೆಟ್ ಕೂಡ ಅತಿರಂಜಿತವಾಗಿಯೇ ಇವುಗಳನ್ನು ಸೇರಿಕೊಂಡಿದೆ. ಶ್ರೀಮಂತಿಕೆಯ ಅಟ್ಟಹಾಸ ಅದರಲ್ಲಿ ಕಂಡುಬರುತ್ತದೆ. ಸಿನೇಮಾ ಜೊತೆ ಕ್ರಿಕೆಟ್ ಒಳಗೂ ಹೊಕ್ಕಿರುವ ಶಾರೂಖ್ ಖಾನ್  ಮತ್ತು ಅವರ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಸಿಗುತ್ತಿರುವ ಮರ್ಯಾದೆ ಈ `ಅತಿ~ಗಳಲ್ಲೊಂದು.

ಶಾರೂಖ್ ಖರೀದಿಸಿದ ಆಟಗಾರರು ಟ್ರೋಫಿ ಗೆದ್ದರಾದರೂ ಸಭ್ಯ ಆಟದ `ಫೇರ್‌ಪ್ಲೇ~ ಗೌರವ ರಾಹುಲ್ ದ್ರಾವಿಡ್ ನಾಯಕತ್ವದ ರಾಜಸ್ತಾನ ರಾಯಲ್ಸ್ ತಂಡದ್ದಾಗಿತ್ತು.  ಕ್ರಿಕೆಟ್‌ನಲ್ಲಿ ಸಭ್ಯತೆ ಬಹಳ ಮುಖ್ಯ. ಶಾರೂಖ್ ಸಭ್ಯತೆಯ ಎಲ್ಲೆ ಮೀರಿ ವರ್ತಿಸಿದರೂ ಅವರ ತಂಡ ಜಯಭೇರಿ ಬಾರಿಸಿದ್ದು ಕ್ರಿಕೆಟ್ ವಿಪರೀತಗಳಲ್ಲಿ ಇನ್ನೊಂದು.

ಸಚಿನ್ ತೆಂಡೂಲ್ಕರ್ ಅವರಿಗೆ `ಭಾರತ ರತ್ನ~ ಗೌರವ ಸಿಗಬೇಕು ಎಂದು ಹಲವು ವರ್ಷಗಳಿಂದ ಕೂಗು ಎದ್ದಿದೆ. ಭಾರತ ಕಳೆದ ವರ್ಷ ವಿಶ್ವ ಕಪ್ ಗೆದ್ದಾಗ, ಆಮೇಲೆ ಸಚಿನ್ ಪರದಾಡುತ್ತಲೇ ತಮ್ಮ ನೂರನೇ ಶತಕ ಗಳಿಸಿದಾಗ ಮತ್ತೆ ಅದೇ ಒತ್ತಾಯ ಮೂಡಿಬಂದಿತ್ತು. ಅದೇ ಸಮಯದಲ್ಲಿ, ಹಾಕಿ ಮಾಂತ್ರಿಕನೆಂದು ಹೆಸರಾಗಿದ್ದ, ಧ್ಯಾನಚಂದ್ ಅವರಿಗೆ ಮರಣೋತ್ತರವಾಗಿ `ಭಾರತ ರತ್ನ~ ಗೌರವ ದಯಪಾಲಿಸಬೇಕೆಂದು ಅವರ ಮಗ ಸೇರಿ ಹಲವರು ವಾದಿಸಿದ್ದರು. ವಿಶ್ವನಾಥನ್ ಆನಂದ್ ಅವರೂ ಅದಕ್ಕೆ ಅರ್ಹರು ಎಂಬ ಪಿಸುಮಾತು ಕೂಡ ಕೇಳಿಬಂದಿತ್ತು.

ಈಗ ಆನಂದ್ ಮತ್ತೆ ವಿಶ್ವ ಚಾಂಪಿಯನ್ ಆದ ಮೇಲೆ ಮತ್ತೊಮ್ಮೆ ಆ ದನಿ ದೊಡ್ಡದಾಗಿದೆ. ಸಚಿನ್‌ಗೆ ಕೊಡಬಾರದೆಂದೇನೂ ಅಲ್ಲ. ಅವರದ್ದು ಪ್ರತಿಯೊಂದು ನಾಲಿಗೆಯ ಮೇಲೆ ನಲಿದಾಡುವ ಹೆಸರೇ ಆದರೂ ಆನಂದ್ ಕುಳಿತಿರುವ ಸಿಂಹಾಸನ ನಿಜಕ್ಕೂ `ರತ್ನ~ಖಚಿತವಾದದ್ದು ಎಂಬುದು ನನ್ನ ಅಭಿಪ್ರಾಯ.
 
ಜಗತ್ತಿಗೆ ಚದುರಂಗದಾಟವನ್ನು ಪರಿಚಯಿಸಿದ್ದು ಭಾರತವೇ. ಚೆಸ್ ಜಗತ್ತಿನ ಎಲ್ಲ ಮನೆಗಳಲ್ಲಿ ಇರುವಂಥ ಆಟ. ಜಗತ್ತಿನ ಮೂಲೆಮೂಲೆಗಳಲ್ಲಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದವರು ಆನಂದ. ಅವರಿಗೆ ಎಲ್ಲ ಪದ್ಮ ಪ್ರಶಸ್ತಿಗಳೂ ಬಂದಿವೆ. `ಭಾರತ ರತ್ನ~ ಪ್ರಶಸ್ತಿಯನ್ನು ಅವರಿಗೆ ಕೊಡುವುದರಿಂದ ಇಡೀ ದೇಶವೇ ತನ್ನನ್ನು ತಾನೇ ಗೌರವಿಸಿಕೊಂಡಂತಾಗುತ್ತದೆ.

 ಇಂದು ದೇಶದಲ್ಲಿ ಬೇರೆ ಕ್ರೀಡೆಗಳಿಗೆ ಇರುವ ದುಃಸ್ಥಿತಿಯನ್ನು ನೋಡಿದಾಗ ಕಿರಿಕಿರಿಯಾಗುತ್ತದೆ. ಇದು ಒಲಿಂಪಿಕ್ಸ್ ವರ್ಷ. ಮುಂದಿನ ತಿಂಗಳು ಲಂಡನ್‌ನಲ್ಲಿ ಒಲಿಂಪಿಕ್ ಕ್ರೀಡೆಗಳು ನಡೆಯುತ್ತವೆ. ಒಲಿಂಪಿಕ್ಸ್ ಎಂದರೆ ನಿಜವಾಗಿಯೂ ಸಮಗ್ರ ವಿಶ್ವ ಮಟ್ಟದ ಕ್ರೀಡಾಕೂಟ. ಜಗತ್ತಿನಾದ್ಯಂತದ ಹತ್ತು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ.

ಈ ಸಂದರ್ಭದಲ್ಲಿ, ಭಾರತಕ್ಕೆ ಪದಕವೊಂದನ್ನು ಗೆದ್ದುಕೊಟ್ಟ ಪೈಲ್ವಾನನೊಬ್ಬ ಕೊನೆಗೆ ಅನಾಮಿಕ ಬಡವನಾಗಿ ಕೊನೆಯುಸಿರೆಳೆದ ಘಟನೆ ನೆನಪಾಗುತ್ತದೆ. 1952 ರ ಹೆಲ್ಸಿಂಕಿ ಒಲಿಂಪಿಕ್ಸ್‌ನ ಬಾಂಟಮ್ ವೇಟ್ ಕುಸ್ತಿಯಲ್ಲಿ ಭಾರತದ ಖಾಶಾಬಾ ಜಾಧವ ಎಂಬ ಪೈಲ್ವಾನ ಕಂಚಿನ ಪದಕ ಗೆದ್ದರು.
 
ಹಾಕಿ ಬಿಟ್ಟರೆ ಭಾರತಕ್ಕೆ ವೈಯಕ್ತಿಕ ಪದಕವೊಂದು ಬಂದದ್ದು ಅದೇ ಮೊದಲು. ಈ ದಾಖಲೆ 1996 ರ ಒಲಿಂಪಿಕ್ಸ್ ವರೆಗೂ ಉಳಿದಿತ್ತು. ಜಾಧವ ಹೆಲ್ಸಿಂಕಿಯಿಂದ ಅವರ ಊರಾದ ಮಹಾರಾಷ್ಟ್ರದ ಗೋಲೇಶ್ವರ ಎಂಬ ಹಳ್ಳಿಗೆ ವಾಪಸ್ಸಾದಾಗ, ಅಭೂತಪೂರ್ವ ಸ್ವಾಗತ ನೀಡಲಾಗಿತ್ತು. ಹಳ್ಳಿಗರೆಲ್ಲ ಸೇರಿ 40 ಕಿಮಿ ದೂರ ಅವರನ್ನು 151 ಅಲಂಕೃತ ಚಕ್ಕಡಿಗಳ ಮೆರವಣಿಗೆಯಲ್ಲಿ ಕರೆತಂದಿದ್ದರು.

ಆದರೆ ದೇಶ ಅವರನ್ನು ಬಹಳ ಬೇಗ ಮರೆಯಿತು. (ಕಳೆದ ವರ್ಷ ಮುಂಬೈನಲ್ಲಿ ವಿಶ್ವ ಕಪ್ ಕ್ರಿಕೆಟ್ ಫೈನಲ್ ನಡೆಯುತ್ತಿರುವ ಸಮಯದಲ್ಲೇ ಜಾಧವ ಸ್ಮಾರಕ ಅಖಿಲ ಭಾರತ ಮಟ್ಟದ ಕುಸ್ತಿ ಏರ್ಪಡಿಸಲಾಗಿತ್ತು. ಆದರೆ ಅದನ್ನು ನೋಡಲು ಜನರೇ ಇರಲಿಲ್ಲ. ಮುಂಬೈಕರಗಳೆಲ್ಲ ತಮ್ಮ ಮನೆಯ ಟಿವಿ ಮುಂದೆ ದೋನಿ ತಂಡ ವಿಶ್ವ ಕಪ್ ಗೆಲ್ಲುವುದನ್ನು ನೋಡಲು ಕುಳಿತಿದ್ದರು.) ಅವರಿಗೆ ದೇಶ ಏನನ್ನೂ ಕೊಡಲಿಲ್ಲ.
 
ಅದೇ ರೀತಿ ಏಷ್ಯನ್ ಕ್ರೀಡೆಗಳಲ್ಲಿ ಪದಕ ಗೆದ್ದ ಹಲವು ಮಂದಿ ಕ್ರೀಡಾಪಟುಗಳು ಯಾವ ಪುರಸ್ಕಾರವೂ ಇಲ್ಲದೇ ಕೊರಗಿರುವ ವರದಿಗಳನ್ನು ಓದಿದ್ದೇನೆ. ಆದರೆ ಯಾವೊಬ್ಬ ಕ್ರಿಕೆಟ್‌ಪಟುವೂ ಬಡತನದಲ್ಲಿ ನರಳಿದ್ದನ್ನು ಕೇಳಿಲ್ಲ.
 
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ, ಐಪಿಎಲ್ ಸಮಯದಲ್ಲಿ ಎಲ್ಲ ಮಾಜಿ ಟೆಸ್ಟ್ ಮತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ ಆಟಗಾರರಿಗೆ ಲಕ್ಷಗಟ್ಟಲೆ ರೂಪಾಯಿಗಳನ್ನು ನೀಡಿ ಸನ್ಮಾನಿಸಿತು.
 
ಇದು ಬೇರೆ ಕ್ರೀಡಾ ಸಂಸ್ಥೆಗಳ ಕಣ್ಣು ತೆರೆಸಬೇಕು. ಈ ದೇಶಕ್ಕಾಗಿ ಕ್ರೀಡಾ ಸಾಧನೆ ಮಾಡಿದವರನ್ನು ಮರೆಯಬಾರದು. ಅವರಿಗೆ ನಾವು ನೀಡುವ ಗೌರವವೇ ಮುಂದಿನ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗುತ್ತದೆ.

ಒಲಿಂಪಿಕ್ ಕ್ರೀಡೆಗಳಿಗೆ ಕ್ಷಣಗಣನೆ ಆರಂಭವಾಗಿದೆ. ಭಾರತದ ಹಲವು ಮಂದಿ ಕ್ರೀಡಾಪಟುಗಳು ತಯಾರಿ ನಡೆಸಿದ್ದಾರೆ. ಅವರಿಗೆಲ್ಲ ನಾವು ಕ್ರಿಕೆಟ್‌ಗೆ ತೋರಿರುವ ಪ್ರೋತ್ಸಾಹ, ಆರ್ಥಿಕ ಬೆಂಬಲದ ಅಗತ್ಯ ಇದೆ.

ಎಲ್ಲಕ್ಕಿಂತ ಹೆಚ್ಚಾಗಿ ಹಾಕಿ ಆಟಗಾರರಿಗೆ ಇಡೀ ದೇಶ ಅವರ ಹಿಂದಿದೆ ಹಾಗೂ ಚಿನ್ನದ ಪದಕದ ನಿರೀಕ್ಷೆಯಲ್ಲಿದೆ ಎಂಬ ಸಂದೇಶ ನೀಡಬೇಕಾಗಿದೆ. ಎಲ್ಲ ಕ್ರೀಡಾಪಟುಗಳಿಗೂ ಸೂಕ್ತ ಗೌರವ ಸಿಕ್ಕಾಗಲೇ ರಾಷ್ಟ್ರದ ಕ್ರೀಡಾ ಸಂಸ್ಕೃತಿ ಬೆಳೆಯುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT