ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿಯುತ ಬ್ಯಾಟರಿ ಈ ಫೋನ್ ಹೆಗ್ಗಳಿಕೆ

Last Updated 24 ಜನವರಿ 2018, 19:30 IST
ಅಕ್ಷರ ಗಾತ್ರ

ಗ್ಯಾಜೆಟ್‌ಲೋಕ ಅಂಕಣದಲ್ಲಿ ವಿಮರ್ಶೆ ಮಾಡಿರುವ, ಮಾಡುತ್ತಿರುವ ಬಹುತೇಕ ಫೋನ್‌ಗಳು ಚೀನಾದ ಕಂಪನಿಗಳವು. ಕೆಲವು ಕಂಪನಿಗಳು (ಉದಾ – ಶಿಯೋಮಿ) ಭಾರತದಲ್ಲೇ ಫೋನ್ ತಯಾರಿಸುತ್ತವಾದರೂ ಅವು ಭಾರತೀಯ ಕಂಪನಿಗಳಲ್ಲ. ಕೆಲವು ಓದುಗರು ಮತ್ತೆ ಮತ್ತೆ ಪ್ರಶ್ನಿಸುತ್ತಾರೆ –ನೀವು ಯಾಕೆ ಭಾರತೀಯ ಕಂಪನಿಗಳ ಉತ್ಪನ್ನಗಳ ವಿಮರ್ಶೆ ಬರೆದು ಅವನ್ನು ಪ್ರೋತ್ಸಾಹಿಸುವುದಿಲ್ಲ ಎಂದು.

ಭಾರತೀಯ ಕಂಪನಿಗಳು ಇರುವುದು ಕೆಲವೇ ಕೆಲವು. ಅವುಗಳಲ್ಲಿ ಹಲವನ್ನು ಎಷ್ಟು ಸಲ ಸಂಪರ್ಕಿಸಿದರೂ ತಮ್ಮ ಉತ್ಪನ್ನಗಳನ್ನು ವಿಮರ್ಶೆಗೆ ನೀಡಿಲ್ಲ. ವಿಮರ್ಶೆಗೆ ನೀಡಿದ ಭಾರತೀಯ ಉತ್ಪನ್ನ ನೋಶನ್ ಇಂಕ್ ಅವರ ಚಿಕ್ಕ ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್ರೋನ್ ಅವರ ಫೋನ್‌ಗಳ ವಿಮರ್ಶೆ ಬರೆದಿದ್ದೇನೆ. ಈ ಸಲ ವಿಮರ್ಶೆ ಮಾಡುತ್ತಿರುವುದು ಭಾರತೀಯ ಕಂಪನಿಯ ಉತ್ಪನ್ನ ಸ್ಮಾರ್ಟ್ರೋನ್ ಟಿ.ಫೋನ್.ಪಿ (Smartron t.Phone.P)

ಕಡಿಮೆ ಬೆಲೆಯ ಫೋನ್ ಆದರೂ ಇದರ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಲೋಹದ ದೇಹವಿದೆ. ಬಲಗಡೆ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ ಇವೆ. ಇದರ ಆನ್/ಆಫ್ ಬಟನ್ ಮೇಲ್ಮೈ ಸ್ವಲ್ಪ ದೊರಗಾಗಿದೆ. ಬೇರೆ ಯಾವ ಫೋನಿನಲ್ಲೂ ನಾನು ಇಂತಹ ವಿನ್ಯಾಸ ಕಂಡಿಲ್ಲ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇದೆ. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಯಿದೆ. ಎಡಗಡೆ ಸಿಮ್ ಮತ್ತು ಮೆಮೊಡಿ ಕಾರ್ಡ್ ಹಾಕಲು ಟ್ರೇ ಇದೆ. ಎರಡು ನ್ಯಾನೋ ಸಿಮ್ ಅಥವಾ ಒಂದು ನ್ಯಾನೋ ಸಿಮ್ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಹಾಕಬಹುದು. ಹಿಂದುಗಡೆಯ ಕವಚ ತೆಗೆಯಲು ಸಾಧ್ಯವಿಲ್ಲ. ಅಂದರೆ ಬ್ಯಾಟರಿ ತೆಗೆಯುವಂತಿಲ್ಲ. ಕವಚ ತುಂಬ ದೊರಗೂ ಅಲ್ಲ, ತುಂಬ ನಯವೂ ಅಲ್ಲ ಎಂಬಂತಿದ್ದು ಕೈಯಿಂದ ಜಾರಿ ಬೀಳುವ ಭಯವಿಲ್ಲ. ಹಿಂಭಾಗದ ಸ್ವಲ್ಪ ಮೇಲುಗಡೆ ಮಧ್ಯ ಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಮೇಲ್ಭಾಗದ ಮೂಲೆಯಲ್ಲಿ ಕ್ಯಾಮೆರಾವಿದೆ. ಅದರ ಪಕ್ಕದಲ್ಲಿ ಫ್ಲಾಶ್ ಇದೆ. 2.5D ಗಾಜು ಇದೆ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸ ಕಡಿಮೆ ಬೆಲೆಯ ಫೋನಿನಂತಿಲ್ಲದೆ ಉತ್ತಮವಾಗಿದ್ದು ಒಂದು ಮಟ್ಟಿನ ಮಧ್ಯಮ ಮೇಲ್ದರ್ಜೆಯ ಫೋನಿನಂತಿದೆ.

ಈ ಫೋನಿನ ಹೆಗ್ಗಳಿಕೆಯಿರುವುದು ಇದರ ಅಗಾಧ ಶಕ್ತಿಯ ಬ್ಯಾಟರಿಯಲ್ಲಿ. ಇಷ್ಟು ಶಕ್ತಿಯ ಬ್ಯಾಟರಿ ಇರುವ ಇತರೆ ಫೋನ್‌ಗಳೆಲ್ಲ ಇದಕ್ಕಿಂತ ಗಮನಾರ್ಹವಾಗಿ ದೊಡ್ಡದಾಗಿದ್ದು ತೂಕವೂ ಹೆಚ್ಚಾಗಿರುತ್ತವೆ. ಇದನ್ನು ಕೈಯಲ್ಲಿ ಹಿಡಿದಾಗ 5000 mAh ಶಕ್ತಿಯ ಬ್ಯಾಟರಿ ಇರುವ ಫೋನ್ ಎಂದು ಅನ್ನಿಸುವುದಿಲ್ಲ. ಸಣ್ಣ ಪರದೆ (5.2 ಇಂಚು) ಆಗಿರುವುದರಿಂದ ಮತ್ತು ತುಂಬ ಶಕ್ತಿಯ ಬ್ಯಾಟರಿ ಇರುವುದರಿಂದ ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಆರಾಮವಾಗಿ ಎರಡು ಎರಡೂವರೆ ದಿನ ಬಳಸಬಹುದು. ಆದರೆ ಇವರು ವೇಗವಾಗಿ ಚಾರ್ಜ್ ಮಾಡುವ (ಕ್ವಿಕ್ ಚಾರ್ಜ್) ಸವಲತ್ತು ನೀಡಿಲ್ಲ. ಪೂರ್ತಿ ಚಾರ್ಜ್ ಆಗಲು ಸುಮಾರು ಎರಡೂವರೆಯಿಂದ ಮೂರು ಗಂಟೆ ಸಮಯ ಬೇಕಾಗುತ್ತದೆ. ಈ ಫೋನಿನಿಂದ ಇತರೆ ಗ್ಯಾಜೆಟ್‌ಗಳಿಗೆ ಚಾರ್ಜ್ ಮಾಡಬಹುದು. ಆದರೆ ಅದಕ್ಕೆ ಬೇಕಾದ ಯುಎಸ್‌ಬಿ-ಓಟಿಜಿ ಕೇಬಲ್ ನೀಡಿಲ್ಲ.

‌ಇದರಲ್ಲಿರುವುದು ಬಹುತೇಕ ಶುದ್ಧ ಆ್ಯಂಡ್ರಾಯ್ಡ್. ಇವರು ತಮ್ಮದೇ ಹೊದಿಕೆ ಸೇರಿಸಿಲ್ಲ. ಮೂರು ಸಾಫ್ಟ್ ಬಟನ್‌ಗಳು ಪರದೆಯ ಕೆಳಗೆ ಪ್ರತ್ಯೇಕ ಇವೆ. ನನಗೆ ವೈಯಕ್ತಿಕವಾಗಿ ಹೀಗೆ ಮೂರು ಪ್ರತ್ಯೇಕ ಬಟನ್‌ಗಳೇ ಇಷ್ಟ.

ತಕ್ಕಮಟ್ಟಿಗೆ ವೇಗದ ಎನ್ನಬಹುದಾದ ಪ್ರೊಸೆಸರ್ ಮತ್ತು ಗ್ರಾಫಿಕ್ಸ್‌ ಪ್ರೊಸೆಸರ್ ಇರುವುದರಿಂದ ಇದರ ಕೆಲಸದ ವೇಗ ತಕ್ಕ ಮಟ್ಟಿಗೆ ಚೆನ್ನಾಗಿದೆ ಎನ್ನಬಹುದು. ಇದರ ಅಂಟುಟು ಬೆಂಚ್‌ಮಾರ್ಕ್ 44,589 ಇದೆ. ಅಂದರೆ ಅತಿ ವೇಗದ ಫೋನ್ ಅಲ್ಲ. ಕಡಿಮೆ ಶಕ್ತಿಯನ್ನು ಬೇಡುವ ಆಟಗಳನ್ನು ಸರಾಗವಾಗಿ ಆಡಬಹುದು. ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮಗಳ ಆಟ, ಕ್ಲಿಷ್ಟವಾದ ಪ್ರತ್ಯನುಕರಣೆಗಳು (simulation), ಎಲ್ಲ ಅಷ್ಟು ತೃಪ್ತಿದಾಯಕವಾಗಿಲ್ಲ. ಹಲವು ಕೆಲಸಗಳನ್ನು ಏಕಕಾಲದಲ್ಲಿ ಮಾಡಬಹುದು. ನೀಡುವ ಬೆಲೆಗೆ ಹೋಲಿಸಿದರೆ ಈ ವೇಗ ಉತ್ತಮ ಎನ್ನಬಹುದು.

ಹೈಡೆಫಿನಿಶನ್ ವಿಡಿಯೊಗಳು ಪ್ಲೇ ಆಗುತ್ತವೆ. ಆದರೆ 4k ವಿಡಿಯೊ ಪ್ಲೇ ಆಗುವುದಿಲ್ಲ. ಪರದೆಯ ಗುಣಮಟ್ಟ ತೃಪ್ತಿದಾಯಕವಾಗಿದೆ. ಅಂದರೆ ಸಿನಿಮಾ ವೀಕ್ಷಿಸುವ ಅನುಭವ ಚೆನ್ನಾಗಿದೆ ಎನ್ನಬಹುದು. ಆಡಿಯೊ ಇಂಜಿನ್ ಅಲ್ಲಿಂದಲ್ಲಿಗೆ ತೃಪ್ತಿದಾಯಕವಾಗಿದೆ. ಉತ್ತಮ ಎನ್ನುವಂತಿಲ್ಲ. ಇಯರ್‌ಫೋನ್ ನೀಡಿಲ್ಲ.

ಕ್ಯಾಮೆರಾದ ವಿಷಯಕ್ಕೆ ಬಂದಾಗ ಫಲಿತಾಂಶ ಸ್ವಲ್ಪ ನಿರಾಶಾದಾಯಕ ಎಂದು ನನಗೆ ಅನ್ನಿಸಿತು. ಹತ್ತಿರದ ವಸ್ತುಗಳ ಫೋಟೊ ಪರವಾಗಿಲ್ಲ. ಪ್ರಕೃತಿ ದೃಶ್ಯಗಳ (scenery) ಫೋಟೊಗಳು ಒಂದು ಮಟ್ಟಿಗೆ ಚೆನ್ನಾಗಿ ಮೂಡಿ ಬಂದವು. ಇಂತಹ ಫೋಟೊಗಳಲ್ಲಿ ಬಣ್ಣಗಳು ತುಂಬ ಶ್ರೀಮಂತವಾಗಿದ್ದವು. ವಿಡಿಯೊ ಚಿತ್ರೀಕರಣ ಚೆನ್ನಾಗಿಲ್ಲ. ಆದರೆ ಆಪ್ಟಿಕಲ್ ಸ್ಟೆಬಿಲೈಸೇಶನ್ ಇಲ್ಲದಂತಿದೆ. ಕ್ಯಾಮೆರಾ ವಿಭಾಗದಲ್ಲಿ ಈ ಫೋನಿಗೆ ಪಾಸ್ ಮಾರ್ಕು ನೀಡುವಂತಿಲ್ಲ. ಕ್ಯಾಮೆರಾ ನಿಮ್ಮ ಪ್ರಥಮ ಆದ್ಯತೆಯಾಗಿದ್ದಲ್ಲಿ ಈ ಫೋನ್ ನಿಮಗಲ್ಲ.

ಕನ್ನಡದ ಸಂಪೂರ್ಣ ಬೆಂಬಲ ಇದೆ. ಅಂದರೆ ಕನ್ನಡದಲ್ಲೇ ಮೆನು, ಆದೇಶಗಳು (ಯೂಸರ್ ಇಂಟರ್‌ಫೇಸ್) ಇದೆ. ಸ್ಮಾರ್ಟ್ರೋನ್ ಭಾರತೀಯ ಕಂಪನಿ. ಆದರೆ ಈ ಫೋನನ್ನು ಸ್ಮಾರ್ಟ್ರೋನ್‌ನವರಿಗಾಗಿ ಅವರು ನೀಡಿದ ವಿನ್ಯಾಸದಂತೆ ತಯಾರಿಸಿದ್ದು ಚೀನಾದ ಝಡ್‌ಟಿಇ ಕಂಪನಿ.

ವಾರದ ಆ್ಯಪ್: ಫಝಲ್‌ರಾಮ

ಸಮಸ್ಯೆಗಳನ್ನು ಪರಿಹರಿಸುವುದು ನಿಮಗಿಷ್ಟವೇ? ಅಂತಹ ಹಲವು ಆಟಗಳನ್ನು ನಾನು ಹಲವು ಸಲ ಈ ಅಂಕಣದಲ್ಲಿ ನೀಡಿದ್ದೇನೆ. ಉದಾಹರಣೆಗೆ, ಒಂದೇ ಬಣ್ಣದ ಚೌಕ ಅಥವಾ ವೃತ್ತಗಳನ್ನು ಜೋಡಿಸುವುದು. ಇಂತಹ ಹಲವು ಸಮಸ್ಯೆಗಳು ಒಂದೇ ಆಟದಲ್ಲಿರುವುದು ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Puzzlerama ಎಂದು ಹುಡುಕಬೇಕು ಅಥವಾ http://bit.ly/gadgetloka313 ಜಾಲತಾಣಕ್ಕೆ ಭೇಟಿ ನೀಡಬೇಕು. ಇದರಲ್ಲಿ ಹಲವು ನಮೂನೆಯ ಸಮಸ್ಯೆಗಳಿವೆ. ಪ್ರತಿಯೊಂದರಲ್ಲೂ ಹಲವು ಹಂತಗಳಿವೆ. ಸಮಯ ಕಳೆಯಲು ಜೊತೆಗೆ ಮೆದುಳಿಗೆ ಕಸರತ್ತು ನೀಡಲು ಉತ್ತಮ ಆಟಗಳಿವು.

ಗ್ಯಾಜೆಟ್ ಸಲಹೆ

ಯಾದಗಿರಿಯ ಖಿಜರ್ ಅಹಮದ್ ಕೆ. ಪಿ. ಅವರ ಪ್ರಶ್ನೆ: ನಾನು ಕಾರವಾರದ ಸರ್ಕಾರಿ ತಾಂತ್ರಿಕ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ದ್ವಿತೀಯ ವರ್ಷದಲ್ಲಿ ಓದುತ್ತಿದ್ದು, ನನಗೆ ಲ್ಯಾಪ್‌ಟಾಪ್‌ನ ಅವಶ್ಯಕತೆ ಇದೆ. ಆದ ಕಾರಣ ತಾವು ನನಗೆ ಒಂದು ವಿದ್ಯಾರ್ಥಿಸ್ನೇಹಿ ಲ್ಯಾಪ್‌ಟಾಪ್‌ನ ಬಗ್ಗೆ ಮಾಹಿತಿ ಕೊಡಿ. ಬಜೆಟ್ ಚಿಂತೆ ಇಲ್ಲ.
ಉ: ನೀವು ಏಸುಸ್ ವಿವೊಬುಕ್ ಎಸ್ 510 ಕೊಳ್ಳಬಹುದು. ಇದರ ವಿಮರ್ಶೆ ಮುಂದಿನ ವಾರ ಬರಲಿದೆ.

ಗ್ಯಾಜೆಟ್ ತರ್ಲೆ

ವೈವಾಹಿಕ ಜಾಲತಾಣದಲ್ಲಿ ಕಂಡ ಜಾಹೀರಾತು: ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸದಲ್ಲಿರುವ ತಂತ್ರಜ್ಞನಿಗೆ ಮದುವೆಗೆ ಹುಡುಗಿ ಬೇಕಾಗಿದೆ. ಆಸಕ್ತರು ವೈಯಕ್ತಿಕ ಮಾಹಿತಿ ಜೊತೆ ಬ್ಯೂಟಿ ಎಫೆಕ್ಟ್ ಬಳಸದೆ ತೆಗೆದ ಫೋಟೊ ಇಮೇಲ್‌ ಮೂಲಕ ಕಳುಹಿಸಿರಿ.

ಗ್ಯಾಜೆಟ್ ಪದ: Virtual Reality - ಮಿಥ್ಯಾವಾಸ್ತವ

ಯಾವುದಾದರೊಂದು ವಸ್ತು, ದೃಶ್ಯ ಅಥವಾ ಕೆಲಸವನ್ನು ಮೂರು ಆಯಾಮಗಳಲ್ಲಿ ಕೃತಕವಾಗಿ ಸೃಷ್ಟಿಸಿದಂತೆ ಭ್ರಮೆ ಮೂಡಿಸುವುದು. ಉದಾಹರಣೆಗೆ, ಕಟ್ಟಡಗಳ ಪ್ರತಿಕೃತಿ. ಮಿಥ್ಯಾವಾಸ್ತವ ವೀಕ್ಷಕವನ್ನು ಬಳಸಿ ನೋಡಿದರೆ ನೀವು ಕಟ್ಟಡದ ಒಳಗೆಲ್ಲ ಸುತ್ತಾಡಿದಂತೆ ನಿಮಗೆ ಭಾಸವಾಗುತ್ತದೆ. ನೀವು ಕೊಳ್ಳಲಿರುವ ಅಪಾರ್ಟ್‌ಮೆಂಟಿನ ಕೋಣೆಗಳು, ಅಡುಗೆ ಮನೆ, ಹಾಲ್ ಎಲ್ಲ ಹೇಗಿವೆ ಎಂದು ನೀವು ಮನೆಯಲ್ಲೇ ಕುಳಿತು ಮೂರು ಆಯಾಮದಲ್ಲಿ ವೀಕ್ಷಣೆ ಮಾಡಬಹುದು. ಇದೇ ತಂತ್ರಜ್ಞಾನದ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವುದನ್ನು, ವಿಮಾನ ಚಾಲಕರಿಗೆ ವಿಮಾನ ಹಾರಿಸುವುದನ್ನು, ಇನ್ನೂ ಹಲವು ವಿಷಯಗಳ ಕಲಿಕೆಯಲ್ಲಿ ಇದನ್ನು ಬಳಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT