ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪನ್ಮೂಲಗಳ ದುರ್ಬಳಕೆ

Last Updated 19 ಜುಲೈ 2011, 19:30 IST
ಅಕ್ಷರ ಗಾತ್ರ

ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟಗಳು ಬರಿದಾಗುತ್ತಿವೆ. ಹಿಮಪರ್ವತಗಳಿಂದ ಹರಿದು ಬರುವ ನದಿಗಳು ಬತ್ತುತ್ತಿವೆ. ಮಣ್ಣಿಗೆ ಕೀಟನಾಶಕ, ರಾಸಾಯನಿಕ ಉಣಿಸುತ್ತ ವಿಷಗೊಳಿಸಲಾಗುತ್ತಿದೆ.
 
ನಗರವಾಸಿಗಳ `ಹಸಿವು~ ಎಲ್ಲವನ್ನೂ, ಎಲ್ಲರನ್ನೂ ಆಪೋಶನ ತೆಗೆದುಕೊಳ್ಳುತ್ತಿದೆ. ಪ್ರಗತಿಯ ಹಾದಿಯಲ್ಲಿ ಪರಿಸರಕ್ಕೆ ಆಗುತ್ತಿರುವ ನಷ್ಟ, ಹಸಿ ಗೋಡೆಯ ಮೇಲೆ ಬರೆದಷ್ಟು ಸ್ಪಷ್ಟವಾಗಿದೆ. ಅದರಿಂದ ಇಂದಿನ ಮತ್ತು ಭವಿಷ್ಯದ ಪೀಳಿಗೆಯೂ ಪಾಠ ಕಲಿಯಬೇಕಾಗಿದೆ...


ದೇಶದ ಒಟ್ಟು ದೇಶೀಯ ಉತ್ಪನ್ನವನ್ನು (ಜಿಡಿಪಿ) ಲೆಕ್ಕ ಹಾಕುವಾಗ ಕೃಷಿ ಮತ್ತು ಕೈಗಾರಿಕೆಗಳು ತಲಾ ಶೇ 20ರಷ್ಟು ಕೊಡುಗೆ ನೀಡುವುದು ಗಮನಕ್ಕೆ ಬರುತ್ತದೆ. ಉಳಿದ ಪಾಲು ಸೇವಾ ಕ್ಷೇತ್ರದಿಂದ ಬರುತ್ತದೆ.

1980ರಿಂದೀಚೆಗೆ ಪ್ರಸ್ಥಭೂಮಿಯಲ್ಲಿನ ನೀರಾವರಿ ಪ್ರದೇಶಗಳಲ್ಲಿ ರೈತರು ಭತ್ತ, ಗೋಧಿಯಂತಹ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಇವು ದೇಶದ ನಗರವಾಸಿಗಳು ದಿನನಿತ್ಯ ಬಳಸುವ  ಪ್ರಮುಖ ಆಹಾರ ಧಾನ್ಯಗಳಾಗಿವೆ. 

ನಾವು ಈಚಿನ ದಿನಗಳಲ್ಲಿ ಹಣ್ಣು, ತರಕಾರಿಗಳ ಉತ್ಪಾದನೆಯಲ್ಲೂ ಶೇ 45ರಷ್ಟು ಹೆಚ್ಚಳ ಕಂಡಿದ್ದೇವೆ.`ಯುಪಿಎ~ ಸರ್ಕಾರದ ಸಾಧನೆಗಳ ಬಗ್ಗೆ ಯಾರಾದರೂ ಕೇಳಿದರೆ ನಾವು ಆರ್ಥಿಕ ಕಾರ್ಯಸೂಚಿಗಳತ್ತ ಗಮನ ಹರಿಸಬೇಕಾಗುತ್ತದೆ.

ಅದು ಆರೋಗ್ಯ ಮತ್ತು ಶಿಕ್ಷಣದೊಂದಿಗೆ ಸಂಬಂಧ ಹೊಂದಿರುವಂತದ್ದು. ಕಳೆದ ದಶಕದಲ್ಲಿ ಇಂಧನ ಮತ್ತು ನೀರು ಬಹಳ ಪ್ರಾಮುಖ್ಯ ಪಡೆದರೂ ಸರ್ಕಾರ ಮಾತ್ರ ಎಚ್ಚೆತ್ತುಕೊಂಡಿಲ್ಲ. ನಾವೀಗ ಈ ಶತಮಾನದ ಎರಡನೇ ದಶಕದಲ್ಲಿದ್ದೇವೆ.

1991ರ ಸಮಯದಲ್ಲಿ ದೇಶವು ಪಾವತಿ ಬಾಕಿಯ ಭಾರಿ ಬಿಕ್ಕಟ್ಟು ಎದುರಿಸುತ್ತಿತ್ತು. ಆ ದುಃಸ್ವಪ್ನವನ್ನು ಅಂದಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರು ಸಮರ್ಥವಾಗಿ ಬಗೆಹರಿಸಿದ್ದರು.
 
ಅಲ್ಲಿಂದೀಚೆಗೆ ಹಣಕಾಸು ಸಚಿವರಾದವರೆಲ್ಲ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಇಂತಹ ಆರ್ಥಿಕ ಸಂಕಷ್ಟ ನಿಶ್ಚಿತ ಎಂಬ ನಿರೀಕ್ಷೆಯೊಂದಿಗೇ ಜಾಗರೂಕತೆಯಿಂದ ಹೆಜ್ಜೆ ಇರಿಸುತ್ತ ಬಂದರು.

ಈಚಿನ ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಚೀನಾದಂತೆ  ಭಾರತ ಸಹ ಧೃತಿಗೆಡದೆ ಇರುವುದಕ್ಕೆ ನಮ್ಮ ನೆಹರೂ ಅವರ ಧೋರಣೆಯ ಭದ್ರ ನೆಲೆಗಟ್ಟೇ ಕಾರಣವಾಗಿತ್ತು.
 
ಸ್ವಾತಂತ್ರ್ಯ ಲಭಿಸಿದಾಗಿನಿಂದ 4 ದಶಕಗಳ ಕಾಲ ನಾವು ಅನುಸರಿಸಿದ್ದು `ಮಿಶ್ರ ಆರ್ಥಿಕತೆ~. ಅದರ ನೆಲೆಗಟ್ಟು ಇಂದಿಗೂ ಭದ್ರವಾಗಿಯೇ ಇದೆ.ದೇಶಕ್ಕೆ ಈ ಹಂತದಲ್ಲಿ ಮಹತ್ವವಾಗಿ ಬೇಕಾಗಿರುವುದು ಏನು? 2010-11ರಲ್ಲಿ ದೇಶದಲ್ಲಿ 20 ಶತಕೋಟಿ ಡಾಲರ್‌ನಷ್ಟು ಹೂಡಿಕೆಯಾಗಿದ್ದರೆ, ಚೀನಾದಲ್ಲಿ ಆಗಿರುವುದು 7 ಶತಕೋಟಿ ಡಾಲರ್‌ನಷ್ಟು ಹೂಡಿಕೆ ಮಾತ್ರ.

ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಭಾರತ ಸುಸ್ಥಿರವಾಗುತ್ತಿರುವುದೇ ದೇಶ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಆಕರ್ಷಿಸಲು ಕಾರಣ. ಬೆಚ್ಚಿ ಬೀಳಿಸುವ ಸಂಗತಿ ಏನೆಂದರೆ ದೇಶದ ಸಂಪತ್ತನ್ನು ಸೃಷ್ಟಿಸಿದವರು ಶೇ 94ರಷ್ಟಿರುವ ಆರ್ಥಿಕತೆಯ ಬಗ್ಗೆ ಜ್ಞಾನ ಇಲ್ಲದವರು. ಉಳಿದ ಕೇವಲ ಶೇ 6ರಷ್ಟು ಮಂದಿ ಮಾತ್ರ ಸಂಪತ್ತನ್ನು ನಿರ್ವಹಿಸುತ್ತಿದ್ದಾರೆ.

ಇಂತಹ ಬೆಳವಣಿಗೆಯಿಂದಾಗಿ ನಮ್ಮ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆಯಿಂದ ಆಗಿರುವ ವೆಚ್ಚವನ್ನು ನಾವು ಕಡೆಗಣಿಸುವಂತಾಗಿದೆ. ಛತ್ತೀಸ್‌ಗಡ ಮತ್ತು ಜಾರ್ಖಂಡ್‌ಗಳಲ್ಲಿನ ಅಮೂಲ್ಯ ಬೆಟ್ಟಗಳನ್ನು ಸದ್ದಿಲ್ಲದೆ ದೀರ್ಘಾವಧಿಗೆ ಅಡವು ಇಡಲಾಗುತ್ತಿದೆ.

ಹಲವಾರು ಅಭಿವೃದ್ಧಿ ಯೋಜನೆಗಳಿಂದಾಗಿ ಹಿಮ ಪರ್ವತಗಳಲ್ಲಿ ಹುಟ್ಟಿ ಬರುವ ನದಿಗಳು ಕಣ್ಮರೆಯಾಗುತ್ತಿವೆ. ಈ ನದಿಗಳು ನಮ್ಮ ದಟ್ಟ ಅರಣ್ಯ ಸಂರಕ್ಷಣೆಯಲ್ಲಿ ಮತ್ತು ಆಹಾರ ಒದಗಿಸುವ ಫಲವತ್ತಾದ ಮಣ್ಣಿಗೆ ನೀರು ಉಣಿಸುವಂತಹ ಜೀವನದಿಗಳಾಗಿದ್ದವು.

ನಮ್ಮ ಜಮೀನಿಗೆ ಭಾರಿ ಪ್ರಮಾಣದಲ್ಲಿ ರಸಗೊಬ್ಬರ ಸೇರಿಸುತ್ತ ಅದನ್ನು ವಿಷಗೊಳಿಸುತ್ತಿದ್ದೇವೆ. ನಮ್ಮ ನಗರಗಳ ವ್ಯಾಪ್ತಿ ದೇಶದ ಇತರ ಪ್ರದೇಶಗಳಿಗೆ ಹೋಲಿಸಿದರೆ ಶೇ 5ರಷ್ಟು ಸಹ ಇಲ್ಲ.
 
ಆದರೆ, ನಮ್ಮ ಪ್ರಕೃತಿ ನೀಡುವ ಪ್ರತಿಯೊಂದನ್ನೂ ದೊಡ್ಡ ಪ್ರಮಾಣದಲ್ಲಿ ಉಣ್ಣುವವರು ನಗರವಾಸಿಗಳೇ.

ಗ್ರಾಮೀಣ ಪ್ರದೇಶಗಳಲ್ಲೂ ಜನರಲ್ಲಿ ಜೀವನ ಪ್ರೀತಿ ಹುಟ್ಟಿಸಿ ಅವರ ಜೀವನದಲ್ಲೂ ಘನತೆ ತರಲು ಹೇಗೆ ಸಾಧ್ಯವಾದೀತು? ಗ್ರಾಮೀಣರ ಬದುಕು ನಗರವಾಸಿಗಳಿಗಿಂತ ಮಿಗಿಲಾದುದು ಎಂಬುದನ್ನು ಅವರ ಮನದಲ್ಲಿ ಬೇರೂರಿಸುವುದು ಹೇಗೆ? ಇದೆಲ್ಲ ನಮ್ಮಶಾಲಾ ಹಂತದಲ್ಲೇ ನಡೆಯಬೇಕು.

ನಮ್ಮ 40 ಕೋಟಿ ಮಕ್ಕಳು ತಮ್ಮ ಸಂಸ್ಕೃತಿಯಲ್ಲಿ ಗೌರವ ಇಟ್ಟುಕೊಂಡು ಬೆಳೆಯುವಂತೆ ಮಾಡಬೇಕಿದೆ. `ಯುಪಿಎ~ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಎನ್‌ಆರ್‌ಇಜಿಎ) ಮತ್ತು ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು (ಐಆರ್‌ಡಿಪಿ) ಜನರ ಘನತೆಯನ್ನು ಗೌರವಿಸಿಕೊಂಡು ಜಾರಿಗೆ ತರುವುದು ಸಾಧ್ಯವಾಗಿದೆ ಎಂಬುದನ್ನು ತಿಳಿದುಕೊಂಡರೆ ಅದೊಂದು ಸರ್ಕಾರದ ದೊಡ್ಡ ಸಾಧನೆ ಎಂದೇ ಹೇಳಬೇಕಾಗುತ್ತದೆ.

ತನ್ನ ಪ್ರಯತ್ನಕ್ಕೆ ಪ್ರತಿಫಲ ಪಡೆಯುವುದಕ್ಕೆ ಸರ್ಕಾರಕ್ಕೆ ಇದಕ್ಕಿಂತ ಉತ್ತಮ ಅವಕಾಶ ಇನ್ನೊಂದು ಇರಲಾರದು. ದೇಶದಾದ್ಯಂತ ಸಮಾನ ಅಭಿವೃದ್ಧಿ ಕನಸು ನನಸಾಗುವುದು ಇಂತಹ ಕಾರ್ಯಕ್ರಮಗಳ ಮೂಲಕವೇ.

ಆದರೆ, ಇಂತಹ ಪ್ರಗತಿಯ ಹಾದಿಯ ಮಧ್ಯೆ ನಮ್ಮ ಪರಿಸರಕ್ಕೆ ಆಗುತ್ತಿರುವ ಹಾನಿ ಗೋಡೆಯಲ್ಲಿ ಬರೆದಷ್ಟು ಸ್ಪಷ್ಟವಾಗಿ ಗೋಚರಿಸುತ್ತಿದೆ.

ನಮ್ಮ ನಗರಗಳು ಈಗ ಬಳಸುವ ಇಂಧನಕ್ಕಿಂತ ಶೇ 50ರಷ್ಟು ಕಡಿಮೆ ಇಂಧನ ಬಳಸಬೇಕಿತ್ತು, ಈಗ ಬಳಸುವ ನೀರಿಗಿಂತ ಶೇ 70ರಷ್ಟು ಕಡಿಮೆ ನೀರು ಬಳಸಬೇಕಿತ್ತು. ನಗರದ ನೀರಿನ ಬೇಡಿಕೆ ಶೇ 70ರಷ್ಟು ತಗ್ಗುವಷ್ಟರ ಮಟ್ಟಿಗೆ ಅದು ತನ್ನ ನೀರನ್ನು ಮರುಬಳಕೆ ಮಾಡಿಕೊಳ್ಳಬೇಕು.

ನಗರ ಪ್ರದೇಶಗಳಲ್ಲಿ ಇಂಧನ, ನೀರು ಮತ್ತು ತ್ಯಾಜ್ಯಗಳ ವಿಲೇವಾರಿಯಲ್ಲಿ ವ್ಯವಹರಿಸುವ ಮಂದಿಗೆ ರಿಯಾಯಿತಿಗಳನ್ನು ನೀಡುವ ಮೂಲಕ ಪರಿಸರ ಸಂರಕ್ಷಣೆಗೆ `ಯುಪಿಎ~ ಸರ್ಕಾರ ನೆರವಾಗಬೇಕಿದೆ.

ಪರಿಸರ ಪೂರಕ ಮನೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಎದ್ದು ಕಾಣುವಂತಹ ಮಾರ್ಗಸೂಚಿಗಳು ಮತ್ತು ಕ್ರಮಗಳನ್ನು ಕೈಗೊಳ್ಳಬೇಕು. ಇದರಿಂದ ಹವಾಮಾನ ಬದಲಾವಣೆಯಿಂದ ಎದುರಾಗಿರುವ ಆತಂಕವನ್ನು ಎದುರಿಸುವ ಸ್ಪಷ್ಟ ಸಂದೇಶವನ್ನು ಸರ್ಕಾರ ನೀಡಿದಂತಾಗುತ್ತದೆ. 

ಮಹಾನ್ ಶಕ್ತಿಯಾಗಿ ಹೊರಹೊಮ್ಮುತ್ತಿರುವ ದೇಶವು ಜಗತ್ತಿಗೆ ಉತ್ತಮ ನಿದರ್ಶನವನ್ನೂ ಒದಗಿಸಿದಂತಾಗುತ್ತದೆ.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT