ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಸಾಧನೆ ಅಳೆಯುವ ಪ್ರಹಸನ

Last Updated 4 ಜೂನ್ 2017, 20:08 IST
ಅಕ್ಷರ ಗಾತ್ರ

ಹೋದ ತಿಂಗಳು ಪೂರ್ತಿ ರಾಜ್ಯ ಸರ್ಕಾರದ ನಾಲ್ಕು ವರ್ಷಗಳ ಸಾಧನೆ ಮತ್ತು ವೈಫಲ್ಯಗಳನ್ನು ಮಾಧ್ಯಮಗಳು ಜರಡಿಗೆ ಹಿಡಿದದ್ದಾಯಿತು. ಹೆಚ್ಚು ಕಡಿಮೆ ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರದ ಕೆಲಸವನ್ನು ಅಳೆದು ತೂಗುವ ಕೆಲಸ ಕೂಡಾ ನಡೆದಿದೆ. ಈ ಲೇಖನ ರಾಜ್ಯ ಸರ್ಕಾರದ  ಕುರಿತಾದ ವರದಿಗಳಿಗೆ ಮಾತ್ರ ಸೀಮಿತ. ಅದಕ್ಕೆ ಕಾರಣ ರಾಜ್ಯ ಸರ್ಕಾರದ ಕೆಲಸದ ಕುರಿತಾಗಿ ಮಾಧ್ಯಮಗಳು ನಡೆಸುವ ಕೊನೆಯ ವಾರ್ಷಿಕ ಕಸರತ್ತು ಇದು.

ಮುಂದಿನ ವರ್ಷ ಇದನ್ನು ಮಾಧ್ಯಮಗಳು ಮಾಡಬೇಕಿಲ್ಲ, ಜನರೇ ಮಾಡುತ್ತಾರೆ. ಅಂದರೆ ಚುನಾವಣೆ ನಡೆಯುತ್ತದೆ. ಕೇಂದ್ರ ಸರ್ಕಾರದ ಕುರಿತಂತೆ ಮಾಧ್ಯಮಗಳು ನಡೆಸಲಿರುವ ಕೊನೆಯ ಜಮಾಬಂದಿಗೆ ಇನ್ನೂ ಒಂದು  ವರ್ಷ ಇದೆ.

ಮಾಧ್ಯಮಗಳಲ್ಲಿ ಬರುವ ಸರ್ಕಾರಗಳ ಸಾಧನೆ-ವೈಫಲ್ಯಗಳ ಸಮೀಕ್ಷೆ ಒಂದು ರೀತಿ ವಾರ್ಷಿಕ ತಮಾಷೆ. ಈ ಪ್ರಕ್ರಿಯೆಯಲ್ಲಿ ಯಾರು ಏನು ಹೇಳಿದರು, ಯಾರು ಏನು ಅರ್ಥ ಮಾಡಿಕೊಂಡರು ಎಂದು ಯಾವತ್ತೂ ಯಾರಿಗೂ ಸ್ಪಷ್ಟವಾಗುವುದಿಲ್ಲ. ಒಂದು ಸರ್ಕಾರ ಏನು ಮಾಡಿತು, ಏನು ಮಾಡಿಲ್ಲ ಎನ್ನುವುದನ್ನು ಇದ ಮಿತ್ತಂ ಎಂದು ಹೇಳುವುದಕ್ಕೆ ಮಾಧ್ಯಮಗಳ ಬಳಿಯಾಗಲೀ, ಮಾಧ್ಯಮಗಳಿಗೆ ಹೊರಗಿನಿಂದ ಬರೆಯುವ ಪರಿಣತರ  ಬಳಿಯಾಗಲೀ ಯಾವುದೇ ಸಿದ್ಧ ಸೂತ್ರ ಇರುವುದಿಲ್ಲ. ಎಲ್ಲರೂ ಅವರವರ ಭಾವಕ್ಕೆ, ಅವರವರ ಭಕ್ತಿಗೆ ತಕ್ಕಂತೆ ತೀರ್ಪು ನೀಡುತ್ತಾರೆ.

ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲವನ್ನೂ ಹೆಚ್ಚು ಕಡಿಮೆ ಅನುಷ್ಠಾನ ಮಾಡಿದ್ದೇವೆ ಎನ್ನುವ ಕಾರಣಕ್ಕೆ ನಾವು ಪ್ರಥಮ ದರ್ಜೆಯಲ್ಲೇ ತೇರ್ಗಡೆಯಾಗಿದ್ದೇವೆ ಎನ್ನುವ ಮಾತು ಆಳುವ ಪಕ್ಷದವರಿಂದ  ಬಂತು. ಒಂದು ವೇಳೆ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲವನ್ನೂ ಸರ್ಕಾರ ಮಾಡಿದೆ  ಎಂದೇ ಒಪ್ಪಿಕೊ೦ಡರೂ ಅಷ್ಟು ಮಾತ್ರಕ್ಕೆ ಸರ್ಕಾರವೊಂದು ಒಳ್ಳೆಯ ಆಡಳಿತ ನೀಡಿತು ಎಂದಾಗುತ್ತದೆಯೇ?

ಅಷ್ಟಕ್ಕೂ ಈ ಚುನಾವಣಾ ಪ್ರಣಾಳಿಕೆ ಎಂದರೆ ಏನು? ಅದರಲ್ಲಿ ಜನರಿಗೆ ನಿಜಕ್ಕೂ ಅಗತ್ಯ ಇರುವ ಮತ್ತು ಈ ಕಾಲಕ್ಕೆ ಆದ್ಯತೆಯಲ್ಲಿ ಕೈಗೊಳ್ಳಬೇಕಾದ ಅಂಶಗಳೇ ಸೇರಿವೆ ಎನ್ನುವುದನ್ನು ಯಾರು ಪರಿಶೀಲಿಸಿದ್ದಾರೆ?

ಸಾಮಾನ್ಯವಾಗಿ ಮಾಧ್ಯಮಗಳು ನಡೆಸುವ ಸರ್ಕಾರದ ವಾರ್ಷಿಕ ಮೌಲ್ಯ ಮಾಪನ ಹೀಗಿರುತ್ತದೆ: ಸರ್ಕಾರ  ಬಜೆಟ್ ನಲ್ಲಿ ಘೋಷಿಸಿದ ಯೋಜನೆಗಳನ್ನೆಲ್ಲಾ ಸಾಲಾಗಿ ಬರೆದರೆ ಅಲ್ಲಿಗೆ ಸಾಧನೆಗಳ ಪಟ್ಟಿ ಮುಗಿಯಿತು. ಇನ್ನು ಆ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡದ್ದು, ಈ ಅಧಿಕಾರಿ ರಾಜೀನಾಮೆ ನೀಡಿದ್ದು, ಬಜೆಟ್ ಮಂಡಿಸುವಾಗ ಕರೆಂಟ್ ಹೋದದ್ದು, ಯಾರದ್ದೋ ಬೆಡ್ ರೂಮ್‌ನಲ್ಲಿ ಅಡಗಿಸಿಟ್ಟ ವಿಡಿಯೊದಲ್ಲಿ ಏನೋ ದಾಖಲಾಗಿದ್ದು ಇವೆಲ್ಲವನ್ನೂ ಪಟ್ಟಿಮಾಡಿದರೆ ಅಲ್ಲಿಗೆ ವೈಫಲ್ಯಗಳ ಪಟ್ಟಿ ರೆಡಿ. ಇದು ಮಾಧ್ಯಮಗಳ ಮಾಮೂಲಿ ಶೈಲಿ.

ಮಾಧ್ಯಮಗಳಲ್ಲಿ ಬರೆಯುವ ಪರಿಣತರೂ ಇದಕ್ಕೆ ಹೊರತಲ್ಲ. ಒಬ್ಬ ಪರಿಣತರ ಪ್ರಕಾರ ರಾಜ್ಯದಲ್ಲಿ ಇನ್ನೂ ವಿದ್ಯುತ್‌ ಸಮಸ್ಯೆ ಕಾಡುತ್ತಿದೆ, ಇದು ಸರ್ಕಾರದ ವೈಫಲ್ಯ; ರಾಜ್ಯದಲ್ಲಿ ಇನ್ನೂ ಕುಡಿಯುವ ನೀರಿಗೆ ತತ್ವಾರವಿದೆ, ಇದು ಸರ್ಕಾರದ ವೈಫಲ್ಯ, ರಾಜ್ಯ ಸರ್ಕಾರ ಇನ್ನೂ ಹೆಚ್ಚಿನ ಅಧಿಕಾರ ವಿಕೇಂದ್ರೀಕರಣ ನಡೆಸಬಹುದಿತ್ತು; ಹಾಗೆ ಮಾಡಿಲ್ಲ, ಇದು ರಾಜ್ಯ ಸರ್ಕಾರದ ವೈಫಲ್ಯ.

ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದ ಬಳಿಕವೂ ಹಳ್ಳಿಗಳಲ್ಲಿ ವಿದ್ಯುತ್ ಕೊರತೆ ಇದೆ ಎಂದು ಹೇಳಿದರೆ ಏನನ್ನೂ ಹೇಳಿದಂತೆ ಆಗುವುದಿಲ್ಲ. ವಿದ್ಯುತ್ ವಿಚಾರದಲ್ಲಿ ಸರ್ಕಾರದ ಸಾಧನೆ ಅಥವಾ ವೈಫಲ್ಯ ಏನು ಎಂದು ತಿಳಿಯಬೇಕಾದರೆ ಈ ಸರ್ಕಾರ ಅಧಿಕಾರಕ್ಕೆ ಬಂದ ವರ್ಷ ಹಳ್ಳಿಗಳಲ್ಲಿ ಎಷ್ಟು ಗಂಟೆ ವಿದ್ಯುತ್ ಕಡಿತ ಇರುತ್ತಿತ್ತು ಮತ್ತು ಈಗ ಎಷ್ಟಿದೆ ಎನ್ನುವ ಸ್ಪಷ್ಟ ಅಂಕಿ ಅಂಶ ಮತ್ತು ಜನರ ಅನುಭವದ ದಾಖಲೀಕರಣ ಬೇಕಾಗುತ್ತದೆ.

ಆಗ ಈ ಕ್ಷೇತ್ರದಲ್ಲಿ ಸರ್ಕಾರ  ಏನು ಮಾಡಿದೆ, ಎಷ್ಟು ಮಾಡಿದೆ ಎನ್ನುವ ಅಭಿಪ್ರಾಯಕ್ಕೆ ಯಾರಾದರೂ ಬರಬಹುದು. ಇದೇ ರೀತಿ ನೀರಾವರಿ, ವಸತಿ, ಅರೋಗ್ಯ, ವಿದ್ಯಾಭ್ಯಾಸ ಇತ್ಯಾದಿ ಕ್ಷೇತ್ರಗಳ ವಿಚಾರ ಕೂಡ. ಸರ್ಕಾರ ಅಧಿಕಾರಕ್ಕೆ ಬಂದಾಗ ಪರಿಸ್ಥಿತಿ ಹೇಗಿತ್ತು, ಮತ್ತು ಈಗ ಹೇಗಿದೆ ಎನ್ನುವ ತುಲನೆ ಮಾಡದೇ ಸಾಧನೆ-ವೈಫಲ್ಯಗಳ ಬಗ್ಗೆ ಏನೂ ಹೇಳಲಾಗದು.

ಸಮಸ್ಯೆ ಇದೆ ಎಂದ ಮಾತ್ರಕ್ಕೆ ಅದು ಸರ್ಕಾರದ ವೈಫಲ್ಯ ಆಗುವುದಿಲ್ಲ. ಸರ್ಕಾರವೊಂದರ ಅವಧಿಯಲ್ಲಿ ಸಮಸ್ಯೆ ಹಾಗೆಯೇ ಉಳಿದಿದ್ದರೆ ಅಥವಾ ಇನ್ನೂ ಬಿಗಡಾಯಿಸಿದ್ದಾರೆ ಅದು ವೈಫಲ್ಯ. ಆದರೆ ನಾವು ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ಕಾಣುವ ಯಾವ ವರದಿ, ಲೇಖನ, ವಿಶ್ಲೇಷಣೆ, ಜಾಹೀರಾತುಗಳಲ್ಲಿಯೂ ಈ ರೀತಿಯ ತುಲನೆ ಇರುವುದಿಲ್ಲ.

ಇನ್ನೊಂದು ರೀತಿಯಲ್ಲಿ ಈ ಸರ್ಕಾರದ ಸಾಧನೆ ಮತ್ತು ವೈಫಲ್ಯಗಳನ್ನು ಲೆಕ್ಕ ಹಾಕುವುದು ಎಂದರೆ ನಾಲ್ಕು ವರ್ಷಗಳ ಆಡಳಿತದ ಬಳಿಕ ಹಿಂದಿನ ಸರ್ಕಾರ  ವಿವಿಧ ಕ್ಷೇತ್ರಗಳಲ್ಲಿ ಎಲ್ಲಿ ಪ್ರಾರಂಭಿಸಿ ಎಲ್ಲಿ ಬಂದು ನಿಂತಿತ್ತು ಮತ್ತು ಈ ಸರ್ಕಾರ  ಎಲ್ಲಿ ಪ್ರಾರಂಭಿಸಿ ಎಲ್ಲಿ ಬಂದು ನಿಂತಿದೆ ಎನ್ನುವ ತುಲನಾತ್ಮಕ ಪರಿಶೀಲನೆ ನಡೆಸುವುದು.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ 2013 ರಿಂದ ಹಿಡಿದು 2017ರವರೆಗೆ ಕಾಂಗ್ರೆಸ್ ಸರ್ಕಾರ ಏನು ಮಾಡಿತು, ಎಷ್ಟು ಮಾಡಿತು ಎನ್ನುವುದರ ಬಗ್ಗೆ ತೀರ್ಮಾನಕ್ಕೆ ಬರಬೇಕಾದರೆ 2008 ಮತ್ತು 2012ರ ಅವಧಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರ  ಯಾವ ಯಾವ ಕ್ಷೇತ್ರಗಳಲ್ಲಿ ಏನು ಮಾಡಿತ್ತು, ಎಷ್ಟು ಮಾಡಿತ್ತು ಎನ್ನುವ ಅಂಕಿ-ಅಂಶಗಳ ಜತೆ ಮತ್ತು ಅನುಭವ ಕಥನದ ಜತೆಗೆ ಹೋಲಿಕೆ ಮಾಡಿ ನೋಡಬೇಕಾಗುತ್ತದೆ.

ಅಂತಹ ಹೋಲಿಕೆಗಳು ನಡೆಯುವುದಿಲ್ಲ. ಸರ್ಕಾರದ ಜಾಹೀರಾತುಗಳು ‘ಅಷ್ಟು ಮೀಸಲಿಟ್ಟಿದ್ದೇವೆ, ಇಷ್ಟು  ಖರ್ಚು ಮಾಡಿದ್ದೇವೆ’ ಎನ್ನುತ್ತವೆಯೇ ಹೊರತು ಪರಿಸ್ಥಿತಿ ಹೇಗೆ ಬದಲಾಗಿದೆ ಎಂದು ಯಾವತ್ತೂ ಹೇಳುವುದಿಲ್ಲ. ಹೇಳಿದರೂ ಆಧಾರ ಇರುವುದಿಲ್ಲ. 

ತಂತ್ರಜ್ಞಾನ ಮತ್ತು ಮಾಹಿತಿ ವಿಶ್ಲೇಷಣೆಗೆ ಬೇಕಾದ ಸೂತ್ರ-ಪರಿಕರಗಳು ಹಿಂದೆಂದಿಗಿಂತಲೂ ಹೆಚ್ಚು ಈ ಕಾಲದಲ್ಲಿ ಲಭ್ಯ ಇರುವಾಗ ಸರ್ಕಾರದ ಕುರಿತಾದ ಮಾಧ್ಯಮ ವಿಶ್ಲೇಷಣೆಗಳು ಇಷ್ಟೊಂದು ನಿಕೃಷ್ಟ ಸ್ಥಿತಿಯಲ್ಲಿ ಇರುವುದು ಯಾಕೆ? ಅಥವಾ ಮಾಧ್ಯಮಗಳಿಗೆ ಮಾಹಿತಿ ಮತ್ತು ವಿಶ್ಲೇಷಣೆಗಳನ್ನು ಒದಗಿಸಬೇಕಾದ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳೆಲ್ಲಾ ಏನು ಮಾಡುತ್ತಿವೆ? ಸ್ವಲ್ಪಮಟ್ಟಿಗೆ ಕೇಂದ್ರ ಸರ್ಕಾರದ ಸಾಧನೆ, ವೈಫಲ್ಯಗಳ ಬಗ್ಗೆ ಅಂಕಿ-ಅಂಶಗಳನ್ನು ಇಟ್ಟುಕೊಂಡು ವಸ್ತುನಿಷ್ಠವಾದ ಚರ್ಚೆ ನಡೆಯುತ್ತದೆ. ರಾಜ್ಯ ಸರ್ಕಾರದ ವಿಚಾರಕ್ಕೆ ಬಂದರೆ ಬರೀ ಶಬ್ದಾಡಂಬರ ಮಾತ್ರ ಕೇಳಿಸುತ್ತದೆ.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್ ಒಂದನ್ನು ತಯಾರಿಸಿ ಬಿಡುಗಡೆ ಮಾಡಿತು. ಕಾಂಗ್ರೆಸ್ ಎಂದಿನಂತೆ ತನ್ನ ಸಾಧನೆ ಹೇಳಿಕೊಳ್ಳಲು ಸಾಲು ಸಾಲು ಪತ್ರಿಕಾ ಜಾಹೀರಾತು ನೀಡಿತು, ಇನ್ನೂ ನೀಡುತ್ತಿದೆ. ಈ ತನಕ ಒಂದೇ ಒಂದು ಕಡೆ ಬಿಜೆಪಿ ತಯಾರಿಸಿದ ಚಾರ್ಜ್‌ಶೀಟ್‌ನಲ್ಲಿ ಎಷ್ಟು ಸತ್ಯ ಇದೆ, ಕಾಂಗ್ರೆಸ್ ನೀಡುತ್ತಿರುವ ಜಾಹೀರಾತುಗಳಲ್ಲಿ ಎಷ್ಟು ಸುಳ್ಳು ಇದೆ ಎನ್ನುವುದನ್ನು ಯಾವ ಮಾಧ್ಯಮದವರೂ ಕನಿಷ್ಠ ಕಣ್ಣೆತ್ತಿಯೂ ನೋಡಿದ ಹಾಗಿಲ್ಲ. ರಾಜಕೀಯದಲ್ಲಿ ಅಂಕೆ-ಸಂಖ್ಯೆಗಳನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು.

ಸತ್ಯ ಹೇಳಲು ಬಳಸಬಹುದಾದ ಅಂಕಿ-ಅಂಶಗಳನ್ನೇ ಹಿಡಿದುಕೊಂಡು ಹಸಿ-ಹಸಿ ಸುಳ್ಳು ಹೇಳಬಹುದು. ಸತ್ಯವನ್ನು ಸುಳ್ಳಿನ ಒಡಲಿನಿಂದ ಬಗೆದು ತೆಗೆಯಬಹುದು. ಸರ್ಕಾರ ನೀಡಿದ ಅಂಕಿ-ಅಂಶಗಳನ್ನು ಜಾಹೀರಾತುಗಳಲ್ಲಿ ಪ್ರಕಟಿಸಿ ದುಡ್ಡು ಪಡೆದುಕೊಳ್ಳುವುದು, ಸರ್ಕಾರ ಮತ್ತು ವಿರೋಧ ಪಕ್ಷಗಳು ಹೇಳಿದ್ದನ್ನು ಚಾಚೂ ತಪ್ಪದೆ ಪ್ರಕಟಿಸಿಬಿಡುವುದು, ಜತೆಗೆ ಅವರ ಅಭಿಪ್ರಾಯ ಮತ್ತು ಇವರ ಅಭಿಪ್ರಾಯ ಫೋಟೊಸಹಿತ ಪ್ರಕಟಿಸಿಬಿಡುವುದು- ಇಲ್ಲಿಗೆ ಮುಗಿದುಬಿಡುತ್ತದೆ ಮಾಧ್ಯಮಗಳು ನಡೆಸುವ ಸರ್ಕಾರಗಳ ಮೌಲ್ಯಮಾಪನ.

ಈ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಯಾವುದೇ ಆಧಾರವಿಲ್ಲದೆ ಕೆಲ ‘ಮಾಧ್ಯಮ ಸತ್ಯ’ಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಈಗಿನ ಮುಖ್ಯಮಂತ್ರಿಯವರು ಮುಖ್ಯಮಂತ್ರಿಯಾಗುವುದಕ್ಕೆ ಮುನ್ನ ಸಮರ್ಥ ಆಡಳಿತಗಾರರಾಗಿದ್ದರು ಎನ್ನುವುದನ್ನು ಪ್ರತೀ ಬಾರಿ ಸರ್ಕಾರದ ಸಾಧನೆಯ ಮೌಲ್ಯಮಾಪನದ ಸಂದರ್ಭದಲ್ಲಿ ಹೇಳಲಾಗುತ್ತಿದೆ. ಹಿಂದೆ ದಕ್ಷರಾಗಿದ್ದವರು ಈಗ ಹಾಗಿಲ್ಲ ಎನ್ನುವುದನ್ನು ಒತ್ತಿ ಹೇಳಲು ಬಳಸಲಾಗುವ ಹೇಳಿಕೆ ಇದು.

ಈಗ ದಕ್ಷರಾಗಿಲ್ಲ ಎನ್ನುವುದರ ಸತ್ಯಾಸತ್ಯತೆ ಏನೇ ಇರಲಿ, ಹಿಂದೆ ಅವರು ಅಷ್ಟೊಂದು ದಕ್ಷರಾಗಿದ್ದರು ಎನ್ನುವುದನ್ನು ಯಾವ ಆಧಾರದ ಮೇಲೆ ಹೇಳಲಾಗುತ್ತಿದೆ ಎನ್ನುವುದು ಒಂದು ಒಗಟು. ಮುಖ್ಯಮಂತ್ರಿಯಾಗುವುದಕ್ಕೆ ಮೊದಲು ಸುದೀರ್ಘ ಅವಧಿಗೆ ಅವರು ಹಣಕಾಸು ಖಾತೆಯನ್ನು ನಿರ್ವಹಿಸಿದ್ದರು. ಆ ಕಾರಣಕ್ಕಾಗಿ ಮತ್ತೆ ಮತ್ತೆ ಬಜೆಟ್ ಮಂಡಿಸಿದ್ದರು. ಮಾಧ್ಯಮಗಳಲ್ಲಿ ಬರುವ ಅಭಿಪ್ರಾಯ ಹೇಗಿರುತ್ತದೆ ಎಂದರೆ ಹೆಚ್ಚಿನ ಸಂಖ್ಯೆಯಲ್ಲಿ ಬಜೆಟ್ ಮಂಡಿಸಿದ ಕಾರಣಕ್ಕೆ ಅವರು ಅಪ್ರತಿಮ ಆಡಳಿತಗಾರ!

ಬಜೆಟ್ ಮಂಡಿಸುವುದು ಒಂದು ಯಾಂತ್ರಿಕ ಕ್ರಿಯೆ, ಅದನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಂಡಿಸಿದ ಕಾರಣ ಯಾರೂ ದಕ್ಷರೂ ಆಗುವುದಿಲ್ಲ, ಕಡಿಮೆ ಸಂಖ್ಯೆಯಲ್ಲಿ ಮಂಡಿಸಿದವರು ಅದಕ್ಷರೂ ಆಗುವುದಿಲ್ಲ. ಬಜೆಟ್‌ನ ಆಚೆಗೆ ಯಾವ ಆಧಾರದ ಮೇಲೆ ಅವರ ಆಡಳಿತ ಸಾಮರ್ಥ್ಯವನ್ನು ಮಾಧ್ಯಮಗಳು ಅಳೆದದ್ದು ಎನ್ನುವುದು ಉತ್ತರವಿಲ್ಲದ ಪ್ರಶ್ನೆ.

ಅದೇ ರೀತಿ ವಿರೋಧ ಪಕ್ಷದ ನಾಯಕರನ್ನು ದೊಡ್ಡ ಜನಪರ ಹೋರಾಟಗಾರ ಎನ್ನಲಾಗುತ್ತದೆ. ಒಂದು ಹಂತದವರೆಗೆ ಅವರ ಪಕ್ಷವನ್ನು ಕಟ್ಟಿ ಬೆಳೆಸುವುದರಲ್ಲಿ ಅವರ ಕೊಡುಗೆ ಇರಬಹುದು. ಅಷ್ಟು ಮಾತ್ರಕ್ಕೆ ಅವರನ್ನು ಹೋರಾಟಗಾರ ಎಂದು ಕರೆಯಲಾಗುತ್ತದೆಯೇ- ಒಂದು ಪಾದಯಾತ್ರೆ, ಒಂದಷ್ಟು ಧರಣಿ ಮಾಡಿದವರೆಲ್ಲ ಅಪ್ರತಿಮ ಹೋರಾಟಗಾರಗುತ್ತಾರೆಯೇ?

ನಾಯಕರ ಮತ್ತು ಸರ್ಕಾರದ ಸಾಧನೆಗಳ ಬಗ್ಗೆ ಈ ರೀತಿಯ ಅರ್ಧ ಸತ್ಯ ಮತ್ತು ಉತ್ಪ್ರೇಕ್ಷಿತ ಸತ್ಯ, ಅರ್ಧ ಸುಳ್ಳು ಮತ್ತು ಉತ್ಪ್ರೇಕ್ಷಿತ ಸುಳ್ಳುಗಳೇ ಹರಿದಾಡುತ್ತಿರುವಾಗ ಜನಾಭಿಪ್ರಾಯ ಯಾವ ರೀತಿಯಲ್ಲಿ ರೂಪುಗೊಳ್ಳುತ್ತಿರಬಹುದು? ಜನ ಪ್ರತಿಯೊಂದು ಸರ್ಕಾರದ ಬಗ್ಗೆ, ಪ್ರತಿಯೊಬ್ಬ ನಾಯಕನ ಬಗ್ಗೆ ತಮ್ಮದೇ ಆದ ಒಲವು-ನಿಲುವುಗಳನ್ನು ಇಟ್ಟುಕೊಂಡಿರುತ್ತಾರೆ. ಅವರು ತಾವು ಅನುಭವಿಸಿದ ಸತ್ಯ ಮತ್ತು ಕೇಳುವ-ನೋಡುವ ಸುಳ್ಳುಗಳ ಆಧಾರದ ಮೇಲೆ ತಮ್ಮ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಂಡಿರುತ್ತಾರೆ.

ಜನಾಭಿಪ್ರಾಯದ ಬಗ್ಗೆ ಮಾತನಾಡುವಾಗ ಆಳುವ ಕಾಂಗ್ರೆಸ್ ಪಕ್ಷ ಗಮನಿಸಲೇ ಬೇಕಾದ ಸತ್ಯವೊಂದನ್ನು  ಐಎಎಸ್‌ ಅಧಿಕಾರಿಯಾಗಿದ್ದ ಜಿ. ಗುರುಚರಣ್ ಅವರ ನೇತೃತ್ವದ ಬೆಂಗಳೂರಿನ ಸಾರ್ವಜನಿಕ ವ್ಯವಹಾರಗಳ ಸಂಸ್ಥೆ (Public Affairs Centre) ಹೊರಗೆಡಹಿದೆ. ದೇಶದಾದ್ಯಂತ ವಿವಿಧ ರಾಜ್ಯಗಳ ಆಡಳಿತ ಗುಣಮಟ್ಟವನ್ನು ಪರಿಶೀಲಿಸಿ ಈ ಸಂಸ್ಥೆ ಲೆಕ್ಕಹಾಕಿದ  ಸೂಚ್ಯಂಕದ ಪ್ರಕಾರ ದೇಶದ 18 ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕ ನಾಲ್ಕನೆಯ ಸ್ಥಾನದಲ್ಲಿದೆ. ಅಂದರೆ ರಾಜ್ಯದ ಸಾಧನೆ ಚೆನ್ನಾಗಿಯೇ ಇದೆ.

ಹೋದ ವರ್ಷ ಮೂರನೆಯ ಸ್ಥಾನದಲ್ಲಿತ್ತು ಎನ್ನುವುದನ್ನು ಪರಿಗಣಿಸಿದರೆ ರಾಜ್ಯ ಸಣ್ಣದೊಂದು ಹಿನ್ನಡೆ ಕಂಡಿದೆ. ಆದರೆ ಇದಕ್ಕಿಂತ ಮುಖ್ಯವಾಗಿ  ಆಡಳಿತ ಪಕ್ಷ ಇಲ್ಲಿ ಗಮನಿಸಬೇಕಾದ ವಿಶೇಷ ಏನು ಎಂದರೆ ಅಧಿಕೃತ ಅಂಕಿಅಂಶಗಳ ಆಧಾರದ ಮೇಲೆ ಲೆಕ್ಕ ಹಾಕಿದ ಸೂಚ್ಯಂಕದ ಪ್ರಕಾರ ಕರ್ನಾಟಕ ನಾಲ್ಕನೆಯ ಸ್ಥಾನದಲ್ಲಿ ಇದ್ದರೆ ಅದೇ ಸೂಚ್ಯಂಕವನ್ನು ಜನರ ಅಭಿಪ್ರಾಯದ ಆಧಾರದಲ್ಲಿ ಲೆಕ್ಕ ಹಾಕಿದಾಗ ರಾಜ್ಯ 13ನೆಯ ಸ್ಥಾನಕ್ಕೆ ಕುಸಿಯುತ್ತದೆ. ಅಂದರೆ ಕರ್ನಾಟಕದ ಆಡಳಿತದ ಕುರಿತಂತೆ ಅಂಕಿ-ಅ೦ಶಗಳು ಹೇಳುವುದು ಒಂದಾದರೆ ಜನರ ಅಭಿಪ್ರಾಯ ಇನ್ನೊಂದು.

ಜನರ ಹಣದಲ್ಲಿ ಸರ್ಕಾರ ಈಗ ನೀಡುತ್ತಿರುವ ಸಾಲು ಸಾಲು ಪತ್ರಿಕಾ ಜಾಹೀರಾತುಗಳು ಈ ಅಭಿಪ್ರಾಯವನ್ನು ಬದಲಿಸುತ್ತವೆ ಅಂತ ಆಳುವ ಪಕ್ಷ ಅಂದುಕೊಂಡರೆ ಅದು ಭ್ರಮೆ. ಮಾಡಿದ ಕೆಲಸಕ್ಕನುಗುಣವಾಗಿ ಜನಾಭಿಪ್ರಾಯ ರೂಪುಗೊಂಡಿಲ್ಲ ಎಂದಾದರೆ ಒಂದೋ ಮಾಡಿದ ಕೆಲಸದಲ್ಲಿ ದೋಷವಿರಬೇಕು. ಇಲ್ಲವೆಂದಾದರೆ ಸರ್ಕಾರ ಮುನ್ನಡೆಸುತ್ತಿರುವ ನಾಯಕರ ನಡವಳಿಕೆಯಲ್ಲಿ ದೋಷ ಇರಬೇಕು. ಇದು ಇನ್ನೊಂದು ವರ್ಷದಲ್ಲಿ ಸರಿಪಡಿಸಬಹುದಾದ ವಿಷಯವೇ ಎನ್ನುವುದು ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT