ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ವಲಯದಲ್ಲಿ ಅಸಹನೆಯ ಗೀಳು

Last Updated 29 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಕಲೆ, ಸಾಹಿತ್ಯ, ಸಿನಿಮಾಗಳ ಮೂಲ ಉದ್ದೇಶದ ಅರ್ಥವ್ಯಾಪ್ತಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಬೆಳವಣಿಗೆಯನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ನೂರು ತುಂಬಿದರೂ ನಾವು ಸಿನಿಮಾಗಳನ್ನು, ಸಿನಿಮಾ ಎಂದೇ ಭಾವಿಸಿ ನೋಡುತ್ತಿಲ್ಲ.

ನಾಟಕ, ಸಾಹಿತ್ಯವನ್ನು ಕೂಡ ಅದರ ಚೌಕಟ್ಟಿನಿಂದಾಚೆಗೆ ಎಳೆದು ಅರ್ಥೈಸುವ ಯತ್ನವೇ ಹೆಚ್ಚಾಗಿ ಕಾಣುತ್ತಿರುವುದಕ್ಕೆ ಆಯಾ ವಲಯದ ಸ್ವರೂಪದಲ್ಲಾದ ಸ್ಥಿತ್ಯಂತರಗಳೇ ಕಾರಣ ಎಂದೂ ಹೇಳಬಹುದು. ಸಾಂಸ್ಕೃತಿಕ ವಲಯದಲ್ಲಿ ಕಲೆಯ ರಸಾಸ್ವಾದನೆಗಿಂತ ಹೆಚ್ಚಾಗಿ ಅಸಹನೆಯೇ ಹೆಚ್ಚಾಗಿ ಕಾಣಬರುತ್ತಿರುವುದು ಇತ್ತೀಚಿನ ಜಾಗತಿಕ ಬೆಳವಣಿಗೆಯಾಗಿ ತೋರುತ್ತದೆ.

ಪ್ರಭಾವಿ ಮಾಧ್ಯಮವಾಗಿ ಬೆಳೆದು ನಿಂತಿರುವ ಚಲನಚಿತ್ರರಂಗದಲ್ಲಿ ಇಂತಹ ಅಸಹನೆ ಮಿತಿ ಮೀರಿರುವುದು ಇತ್ತೀಚಿನ ಬೆಳವಣಿಗೆ.
‘ಮದ್ರಾಸ್ ಕೆಫೆ’ ಹಿಂದಿ ಚಿತ್ರದ ಬಿಡುಗಡೆಗೆ ತಮಿಳುನಾಡಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ‘ತಲೈವಾ’ ಚಿತ್ರವನ್ನು ಮೂರು ವಾರಗಳ ಕಾಲ ತಡೆಹಿಡಿಯಲಾಯಿತು. ಪಾಕಿಸ್ತಾನದಲ್ಲಿ ‘ರಾಣ್‌ಝಾನಾ’ ಚಿತ್ರವನ್ನು ನಿಷೇಧಿಸಲಾಗಿದೆ. ಸಿಂಗೂರು ಚಳವಳಿಯ ಅಂಶಗಳಿರುವ ಚಿತ್ರಕ್ಕೆ ಪಶ್ಚಿಮ ಬಂಗಾಳದಲ್ಲಿ ಸೆನ್ಸಾರ್ ಮಂಡಳಿ ತಡೆ ನೀಡಿದೆ. ಎಂ.ಎಫ್. ಹುಸೇನರ ಕಲಾಕೃತಿ ಪ್ರದರ್ಶನಕ್ಕೆ ಅಡ್ಡಿ ಮಾಡಿದ್ದು, ಕಾಶ್ಮೀರಿ ಹುಡುಗಿಯರ ರಾಕ್‌ಬ್ಯಾಂಡ್ ನಿಷೇಧಿಸಿದ್ದು... ಎಲ್ಲ ವಲಯದಲ್ಲೂ ಸಾಂಸ್ಕೃತಿಕ ಅಸಹನೆ ಢಾಳಾಗಿ ಎದ್ದು ಕಾಣುತ್ತಿದೆ.

‘ಮದ್ರಾಸ್ ಕೆಫೆ’ ಚಿತ್ರ ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ತಯಾರಾಗಿದೆ. ರಾಜೀವ್ ಗಾಂಧಿ ಹತ್ಯೆ ಹಾಗೂ ಎಲ್.ಟಿ.ಟಿ.ಇ. ಸಂಚು ಕುರಿತ ವಸ್ತುವುಳ್ಳ ಈ ಚಿತ್ರ ತಮಿಳರ ಸ್ವಾತಂತ್ರ್ಯ ಹೋರಾಟವನ್ನು ಅಸಡ್ಡೆಯಿಂದ ಕಂಡಿದೆ ಎಂದು ಆಪಾದಿಸುತ್ತಿರುವ ಎಲ್.ಟಿ.ಟಿ.ಇ. ಪರ ಸಂಘಟನೆಗಳು ಚಿತ್ರದ ನಿಷೇಧಕ್ಕೆ ಕರೆ ನೀಡಿವೆ. ಚಿತ್ರದ ನಿರ್ಮಾಪಕರು ಸಂಘಟನೆಗಳ ಮುಖಂಡರಿಗಾಗಿ ಪ್ರತ್ಯೇಕ ಪ್ರದರ್ಶನವೊಂದನ್ನು ಏರ್ಪಡಿಸಿದ್ದರು. ಎಲ್.ಟಿ.ಟಿ.ಇ. ನಾಯಕ ಪ್ರಭಾಕರನ್ ಹೆಸರು ಚಿತ್ರದಲ್ಲಿ ಭಾಸ್ಕರನ್ ಎಂದಾಗಿದೆ.

ಎಲ್.ಟಿ.ಟಿ.ಇ. ಹೆಸರನ್ನು ಎಲ್‌ಟಿಎಫ್ ಎಂದು ಬದಲಿಸಲಾಗಿದೆ. ವಿಶೇಷ ಪ್ರದರ್ಶನದಿಂದ ಚಿತ್ರ ವಿರೋಧಿ ಸಂಘಟಕರು ತೃಪ್ತರಾಗುವ ಬದಲು ಮತ್ತಷ್ಟು ಕೆರಳಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಾವು ಅಡ್ಡಿ ಮಾಡುವುದಿಲ್ಲ. ಆದರೆ ಒಂದು ಸಮೂಹದ ಹೋರಾಟದ ಚಿತ್ರಣ ವಿಕೃತಗೊಳ್ಳಬಾರದೆಂಬುದೇ ನಮ್ಮ ಕಾಳಜಿ ಎಂದು ನಾಮ್ ತಮಿಳರ್ ಪಾರ್ಟಿಯ ನಾಯಕರು ಹೇಳುತ್ತಾರೆ. ಇಲ್ಲಿ ಚರಿತ್ರೆ ಹಾಗೂ ವಾಸ್ತವಗಳ ನಡುವಿನ ಘರ್ಷಣೆಯನ್ನು ಕಾಣಬಹುದು. ಇಂತಹ ನೈಜ ಘಟನೆಯನ್ನಾಧರಿಸಿದ ಕತೆಗಳು ಚಲನಚಿತ್ರವಾದಾಗ ಮೂಲ ಆಶಯ ಕಣ್ಣಿಗೆ ಕಾಣದಂತಿರುತ್ತದೆ. ಕತೆಯ ಸ್ವರೂಪ ಕೂಡ ಮೌಖಿಕವಾಗಿ ನಾನಾ ರೂಪ ತಾಳುವುದರಿಂದ ನೈಜತೆ ಎನ್ನುವುದೇ ಚರ್ಚಾಸ್ಪದವೂ, ವಿವಾದಾಸ್ಪದವೂ ಆಗುತ್ತದೆ.

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ನ ಕತೆ ಇತ್ತೀಚೆಗೆ ನಾನು ನೋಡಿದ ಸ್ವರೂಪದಲ್ಲಿ ಇರುವುದೇ ಬೇರೆ, ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಅಲ್ಲಿನ ಚಿತ್ರಣವೇ ಬೇರೆ ಇದೆ. ವ್ಯಾಖ್ಯಾನಗಳು ಸಂಶೋಧಕರಿಂದ ಸಂಶೋಧಕರಿಗೆ ಬದಲಾಗುತ್ತದೆ. ಆರು ತಿಂಗಳ ಹಿಂದೆ ಕಮಲಹಾಸನ್ ಅಭಿನಯದ ‘ವಿಶ್ವರೂಪಂ’ ಚಿತ್ರದ ಬಿಡುಗಡೆಗೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಕೂಡ ಇಂಥದೇ ಅಸಹನೆಯ ಪರಂಪರೆ. ಮಣಿರತ್ನಂ ನಿರ್ದೇಶನದ ‘ಕಡಲ್’ ಚಿತ್ರಕ್ಕೆ ಕ್ರೈಸ್ತ ಸಮುದಾಯದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದರು. ಕಲೆಗೆ ಈ ರೀತಿಯ ಅಡ್ಡಗೋಡೆಗಳನ್ನು ನಿರ್ಮಿಸಿಕೊಳ್ಳುವುದೇ ಅನಾಗರಿಕತೆ.

ವಿಜಯ್ ಅಭಿನಯದ ‘ತಲೈವಾ’ ಚಿತ್ರದ ನಿಷೇಧದ ಕಾರಣಗಳೂ ಕೂಡ ಅಸಂಬದ್ಧ. ಹಾಗೆ ನೋಡಿದರೆ ಈ ಚಿತ್ರದ ಕತೆಯೇ ಅಸಂಗತ. ಇಷ್ಟೊಂದು ಕಳಪೆ ಚಿತ್ರಕ್ಕೆ ಅಷ್ಟೊಂದು ಪ್ರಚಾರವೇ ಅನಗತ್ಯವಾಗಿತ್ತು. ‘ತಲೈವಾ’ ಇತರ ರಾಜ್ಯಗಳಲ್ಲಿ ಬಿಡುಗಡೆಯಾದರೂ ತಮಿಳುನಾಡಿನಲ್ಲಿ ಬಿಡುಗಡೆ ಮಾಡಲು ಪ್ರದರ್ಶಕರು ಹಿಂದೇಟು ಹಾಕಿದರು. ಚಿತ್ರಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಬಂದ ಕಾರಣದಿಂದ ಪ್ರದರ್ಶಕರು ಹೆದರಿದರು ಎನ್ನುವುದು ಒಂದು ಕಾರಣ. ಆದರೆ ವಾಸ್ತವಿಕವಾಗಿ ಈ ಚಿತ್ರಕ್ಕೆ ಮನರಂಜನಾ ತೆರಿಗೆ ಮನ್ನಾ ಮಾಡಲು ಸರ್ಕಾರ ನಿರಾಕರಿಸಿತು ಎನ್ನುವುದೇ ನಿಜವಾದ ಕಾರಣ. ತಮಿಳುನಾಡಿನ ರಾಜಕೀಯ ಮತ್ತು ಸಿನಿಮಾ ಪರಸ್ಪರ ಬೆಸೆದುಕೊಂಡಿರುವುದರಿಂದ ಯಾವ ಸಮಯದಲ್ಲಿ ಯಾರು ಎದ್ದು ನಿಂತು ಗುಡುಗುತ್ತಾರೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ.

ನಾಯಗನ್, ದಳಪತಿ, ವಾಸ್ತವ್, ಸರ್ಕಾರ್ ಮೊದಲಾದ ಭೂಗತಲೋಕದ ಪಾತಕಿಗಳ ಕತೆಯ ಸಮ್ಮಿಶ್ರಣದಂತಿರುವ ‘ತಲೈವಾ’ ಮೂಲಕ ವಿಜಯ್, ರಾಜಕೀಯವಾಗಿ ಬೆಳೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಜೊತೆ ಮುನಿಸಿಕೊಂಡು, ಜಯಲಲಿತಾ ಪಕ್ಷವಾದ ಎಐಎಡಿಎಂಕೆಗೆ ಬೆಂಬಲ ವ್ಯಕ್ತಪಡಿಸಿದ್ದ ವಿಜಯ್, ಈಗ ಜಯಲಲಿತಾ ಅವರ ಕೋಪಕ್ಕೆ ಗುರಿಯಾಗಿದ್ದಾರೆ. ಈ ಚಿತ್ರದಲ್ಲಿನ ಒಂದು ಸಂಭಾಷಣೆ ‘ಚೆನ್ನೈಗೆ ನೀರು ತರಲೇ ಇಲ್ಲ’ ಎಂದಿದೆ. ಈ ವಾಕ್ಯ ಜಯಲಲಿತಾ ಅವರನ್ನು ಕೆರಳಿಸಿದೆ. ಚಿತ್ರ ಶೀರ್ಷಿಕೆಯ ಅಡಿ ಬರಹದಲ್ಲಿ ‘ಟೈಂಟು ಲೀಡ್’ ಎಂದು ಬರೆಯಲಾಗಿದೆ. ಚಿತ್ರದ ಅಂತ್ಯದಲ್ಲೂ ಈ ಅಡಿ ಟಿಪ್ಪಣಿ ತೆರೆಯ ಮೇಲೆ ಬರುತ್ತದೆ. ಈಗಾಗಲೇ ವಿಜಯಕಾಂತ್, ರಾಜಕೀಯ ಪ್ರವೇಶಿಸಿ ತಮಿಳುನಾಡಿನ ರಾಜಕೀಯ ಚಿತ್ರಣವನ್ನೇ ಬದಲಾಯಿಸಿದ್ದಾಗಿದೆ. ಇನ್ನು ಈ ಯುವ ನಟ ರಾಜಕೀಯ ಪ್ರವೇಶಿಸಿದರೆ... ಎಂಬ ದೂರಾಲೋಚನೆ ಕೂಡ ಈ ಚಿತ್ರ ಪ್ರದರ್ಶನ ತಡೆಯಲು ಕಾರಣವಾಗಿರಬಹುದು. ಮೂರು ವಾರಗಳ ತಾಕಲಾಟದ ನಂತರ ‘ತಲೈವಾ’ ಬಿಡುಗಡೆಗೆ ಹಸಿರು ಬಾವುಟ ತೋರಿಸಲಾಗಿದೆ. ಈಗ ಬಿಡುಗಡೆಯಾಗಿರುವ ಚಿತ್ರದಲ್ಲಿ ಜಯಲಲಿತಾ ಕುರಿತ ಸಂಭಾಷಣೆ, ಅಡಿಟಿಪ್ಪಣಿ ಎರಡಕ್ಕೂ ಕತ್ತರಿ ಹಾಕಲಾಗಿದೆ.

ಯಾರೇ ರಾಜಕೀಯವಾಗಿ ಬೆಳೆಯಲು ಯತ್ನಿಸಿದರೂ ಅವರನ್ನು ಬಗ್ಗು ಬಡಿಯುವ ತಂತ್ರ ತಮಿಳುನಾಡಿನಲ್ಲಿ ಕಾಣಸಿಗುವಂತೆ ಬೇರೆಲ್ಲೂ ಸಿಗುವುದಿಲ್ಲ. ಚಿತ್ರಕತೆಗೆ ಸಂಬಂಧಿಸಿದಂತೆ ತಿರುನಲ್ವೇಲಿಯ ವ್ಯಕ್ತಿಯೊಬ್ಬರು ನ್ಯಾಯಾಲಯದ ಕಟ್ಟೆ ಹತ್ತಿದ್ದಾರೆ. 1980ರಲ್ಲಿ ಮುಂಬೈನಲ್ಲಿರುವ ದಾರಾವಿಯಲ್ಲಿ ಎಸ್‌ಎಸ್‌ಕೆ ಮತ್ತು ಎಸ್ಕೆಆರ್ ಎಂದೇ ಹೆಸರಾದ ಅಪ್ಪ-–ಮಗ ಇದ್ದರು. ‘ತಲೈವಾ’ ಕತೆ ಈ ಇಬ್ಬರ ಕತೆಯನ್ನಾಧರಿಸಿದೆ. ಚಿತ್ರದ ನಾಯಕ ಹಾಗೂ ಅವರ ಅಪ್ಪ ಧರಿಸಿರುವ ವೇಷಭೂಷಣ ಕೂಡ ನಮ್ಮ ತಾತನ ಶೈಲಿಯಲ್ಲೇ ಇದೆ.

ಇವರಿಬ್ಬರೂ ಭೂಗತ ಲೋಕದ ಪಾತಕಿಗಳು ಎನ್ನುವಂತೆ ಚಿತ್ರಿಸಿರುವುದು ಅನ್ಯಾಯ ಎಂದು ನ್ಯಾಯಾಲಯದಲ್ಲಿ ದೂರಿರುವುದು ಕೂಡ ಚಿತ್ರಕ್ಕೆ ಇದುವರೆಗೆ ಕಂಟಕವಾಗಿತ್ತು. ಸುಮಾರು 70 ಲಕ್ಷ ರೂಪಾಯಿ ಬಜೆಟ್‌ನಲ್ಲಿ ತಯಾರಾಗುವ ಇಂತಹ ಚಿತ್ರಗಳು ಈ ರೀತಿಯ ವಿವಾದಕ್ಕೆ ಸಿಲುಕಿಕೊಂಡರೆ, ಚಿತ್ರ ನಿರ್ಮಾಪಕ ತರಗೆಲೆಯಂತಾಗುತ್ತಾನೆ. ‘ವೀರಬಸವಣ್ಣ’ ಚಿತ್ರದ ನಿರ್ಮಾಪಕರು ಕೂಡ ಇದೇ ರೀತಿ ಶೀರ್ಷಿಕೆ ವಿವಾದದಲ್ಲಿ ಸಿಕ್ಕಿ ಹಾಕಿಕೊಂಡು ತರಗೆಲೆ ಆದರು. ನಟ ಉಪೇಂದ್ರ ತಣ್ಣಗಿದ್ದರು. ಕೋಟಿಗಟ್ಟಲೆ ಸಂಭಾವನೆ ಪಡೆಯುವ ವಿಜಯ್ ಕೂಡ, ಸಂಭಾವನೆಯ ಭಾರವನ್ನು ಇಳಿಸಿ ನಿರ್ಮಾಪಕರನ್ನು ಕಾಪಾಡಲು ಮುಂದಾಗಬೇಕು.

ಚಲನಚಿತ್ರಗಳ ಗುಣಮಟ್ಟವನ್ನು ಹಾಗೂ ಅದರ ಕಲಾತ್ಮಕತೆಯನ್ನು ಕಾಪಾಡುವ ಹೊಣೆಗಾರಿಕೆ ಯಾರದು? ನಟ ನಟಿಯರದು, ನಿರ್ಮಾಪಕರದು, ನಿರ್ದೇಶಕರದು ವ್ಯಾಪಾರೀ ಮನೋಭಾವ. ಹಣ ದುಪ್ಪಟ್ಟು ಮಾಡುವುದೇ ಅವರ ಗುರಿಯಾಗಿರುವುದರಿಂದ ಕಲೆಯ ವಿಕೃತಿ ಸಿನಿಮಾ ನಿರ್ದೇಶಕನ ಕಣ್ಣಿಗೆ ಬೀಳುವುದೇ ಇಲ್ಲ. ನ್ಯಾಯಾಲಯ ಕೂಡ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಲನ ಚಿತ್ರಗಳೇ ಬರುತ್ತಿಲ್ಲ ಎಂದು ಟೀಕಿಸಿದ್ದು ಈ ಕಾರಣದಿಂದಲೇ.

ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರರಂಗದ ಮಾತೃಸಂಸ್ಥೆಯಾಗಿದೆ. ಸೆನ್ಸಾರ್ ಮಂಡಳಿ ಇದೆ. ನ್ಯಾಯಾಲಯ ಇದೆ. ಈ ಮೂರೂ ಅಂಗಗಳೂ ಚಲನಚಿತ್ರದ ದಿಕ್ಕನ್ನು ತೋರಿಸುತ್ತಲೇ ಇವೆ. ಆದರೂ ಅಸಹನೆ ಬೆಳೆಯುತ್ತಲೇ ಇದೆ. ಇತ್ತೀಚಿನ ‘ಸಿಲ್ಕ್’ ಚಿತ್ರದ ವಿವಾದವನ್ನೇ ನೋಡಿ. ‘ಸಿಲ್ಕ್’ ಚಿತ್ರದಲ್ಲಿ ಅಶ್ಲೀಲತೆ ಇರುವುದರಿಂದ ಚಿತ್ರ ಪ್ರದರ್ಶನಕ್ಕೆ, ಪೋಸ್ಟರ್‌ಗಳ ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಎಂದು ‘ಕರ್ನಾಟಕ ನವ ನಿರ್ಮಾಣ ಸೇನೆ’ ಎನ್ನುವ ಸಂಘಟನೆಯೊಂದು ನಗರ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಇದೂ ಕೂಡ ಅಸಹನೆಯ ಪರಮಾವಧಿ. ಈ ಸಂಘಟನೆ ಸಂಸ್ಕೃತಿ ರಕ್ಷಣೆಯ ಗುತ್ತಿಗೆ ಪಡೆದಿದೆಯೇ? ಈ ಚಿತ್ರದ ವಿಷಯಕ್ಕೆ ಮಾತ್ರ ನ್ಯಾಯಾಲಯದ ಕಟ್ಟೆ ಏರಲು ಕಾರಣವೇನು? ‘ದಂಡುಪಾಳ್ಯ’ದಂತಹ ವಿಕೃತಿ ಇರುವ ಚಿತ್ರ ಬಂದಾಗ ಈ ಸೇನೆಯವರು ಎಲ್ಲಿ ಹೋಗಿದ್ದರು?

ಚಲನಚಿತ್ರ ಎನ್ನುವುದು ಮನರಂಜನೆಯ ಮಾಧ್ಯಮ, ಅದರೊಟ್ಟಿಗೇ ಅದು ನಮ್ಮ ಸಂಸ್ಕೃತಿಯ ಪ್ರತೀಕ ಕೂಡ. ಇದನ್ನು ಕಲೆಯಾಗಿ ನೋಡದೆ, ಹಗೆತನದ ಕಿಡಿ ಹಾರಿಸುವುದು, ನಿಷೇಧದ ಬೊಬ್ಬೆ ಹಾಕುವುದು ಬೆಳವಣಿಗೆಯ ಲಕ್ಷಣವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT