ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧ್ಯತೆಗಳು

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಇತ್ತೀಚಿಗೆ ರಾಬರ್ಟ್ ಶುಲ್ಲರ್ ಎಂಬ ಪಾದ್ರಿಯೊಬ್ಬರು ತಾವು ಸಂದರ್ಶನ ಮಾಡಿದ ವಿಶಿಷ್ಟ ವ್ಯಕ್ತಿಯೊಬ್ಬರ ಬಗ್ಗೆ ಲೇಖನವನ್ನು ಬರೆದಿದ್ದಾರೆ. ಅದು ನಮ್ಮೆಲ್ಲರಿಗೂ ಅದರಲ್ಲೂ ತರುಣ ತರುಣಿಯರಿಗೆ ಪ್ರಯೋಜಕವಾದದ್ದು.

ಅವರು ಸಂದರ್ಶಿಸಿದ್ದು 43 ವರ್ಷದ ವ್ಯಕ್ತಿಯೊಬ್ಬರನ್ನು. `ನಿಮ್ಮ ಬಾಲ್ಯದ ಬಗ್ಗೆ ಸ್ವಲ್ಪ ತಿಳಿಸಿ~ ಎಂದು ಶುಲ್ಲರ್ ಕೇಳಿದಾಗ ಆತ ಹೇಳಿದ,  `ನಿಮಗೆ ಆಶ್ಚರ್ಯವಾಗಬಹುದು, ನಾನು ಹುಡುಗನಾಗಿದ್ದಾಗ ನಮ್ಮ ಜೊತೆಗಾರರದೊಂದು ಗ್ಯಾಂಗೇ ಇತ್ತು. ನನ್ನ ಗೆಳೆಯರಲ್ಲಿ ಹನ್ನೊಂದು ಜನ ಸತ್ತು ಹೋಗಿದ್ದಾರೆ, ಐವರ ಕೊಲೆಯಾಗಿದೆ ಮತ್ತು ನಾಲ್ವರು ಕೊಲೆ ಮಾಡಿದ ಆರೋಪದ ಮೇಲೆ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ನಾನು ಅಂತಹ ಜನರ ವಾತಾವರಣದಲ್ಲೇ ಬಾಲ್ಯವನ್ನು ಕಳೆದದ್ದು.~ ಶುಲ್ಲರ್‌ರವರಿಗೆ ಗಾಬರಿಯಾಯಿತು.

ಆತ ತನ್ನ 18ನೇ ವಯಸ್ಸಿನಲ್ಲಿ ಹೈಸ್ಕೂಲ್ ಶಿಕ್ಷಣವನ್ನು  `ಡಿ~  ಗ್ರೇಡ್ ಪಡೆದು ಪಾಸಾದ. ಅಲ್ಲಲ್ಲಿ ತಿರುಗಾಡಿ ಚಿಕ್ಕ ಪುಟ್ಟ ಕೆಲಸ ಮಾಡಿದ. ಆಗಲೇ ತನ್ನ ಮನೆ ಪಕ್ಕದಲ್ಲೇ ಇದ್ದ ಹುಡುಗಿಯನ್ನು ಮದುವೆಯಾಗಿ ತನಗೆ ಇಪ್ಪತ್ತೊಂದು ವರ್ಷವಾಗುವುದರೊಳಗೆ ಎರಡು ಮಕ್ಕಳ ತಂದೆಯಾಗಿದ್ದ. ಸರಿಯಾದ ಕೆಲಸವಿಲ್ಲ, ಆದಾಯವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಈ ಬೆಳೆಯುತ್ತಿರುವ ಸಂಸಾರವನ್ನು ನಿಭಾಯಿಸುವುದು ಹೇಗೆ? ಅವನನ್ನು ಖಿನ್ನತೆ ಆವರಿಸಿಕೊಂಡು ಬದುಕನ್ನೇ ಶೂನ್ಯವಾಗಿಸಿಬಿಟ್ಟಿತು. ಯಾರೋ ಅವನನ್ನು ಮಾನಸಿಕ ಸಲಹೆಗಾರರ ಕಡೆಗೆ ಕರೆದೊಯ್ದರು. ಅವರು ಇವನ ಮನಃಸ್ಥಿತಿಯನ್ನು ಪರೀಕ್ಷಿಸಿ `ನೀನು ಮೆಕ್ಯಾನಿಕ್ ಆದರೂ ಆಗು ಇಲ್ಲವೇ ಯಾವುದೇ ವಸ್ತುವಿನ ಮಾರಾಟಗಾರನಾಗು~ ಎಂದು ಸಲಹೆ ನೀಡಿದರು.

ಈತ ಕಷ್ಟಪಟ್ಟು ಜನರಲ್ ಮೋಟಾರ್ಸ್‌ ಕಂಪನಿಯಲ್ಲಿ ಮಾರಾಟಗಾರನಾಗಿ ಸೇರಿದ. ಆತನಿಗೆ ಯಾವ ಪದವಿ ಇಲ್ಲದಿದ್ದುದರಿಂದ ತುಂಬ ಕಡಿಮೆ ಸಂಬಳ ನೀಡಲಾಗಿತ್ತು. ಆದರೆ ಈತ ವಾರದಲ್ಲೇ ಹದಿನೈದು ಕಾರು ಮಾರಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದ ಇವನ ಮಾರಾಟ ಮಾಡುವ ಕೌಶಲ್ಯವನ್ನು ಕಾರು ಕೊಂಡ ಒಬ್ಬ ಗಿರಾಕಿ ಗಮನಿಸಿ ತನ್ನ ಮನೆಗೆ ಕರೆದೊಯ್ದ. ಅವನದೊಂದು ಮರದ ಪೀಠೋಪಕರಣಗಳನ್ನು ಮಾರಾಟ ಮಾಡುವ ಅಂಗಡಿ ಇತ್ತು. ಆತ ಈ ತರುಣನಿಗೆ ಒಂದಷ್ಟು ಸಂಬಳವನ್ನು ನೀಡಿ ಅದರೊಂದಿಗೆ ಮಾರಾಟ ಮಾಡಿ ಬಂದ ಲಾಭದಲ್ಲಿ ಕಮೀಶನ್ ಕೂಡ ನೀಡಿದ.

ಮೊದಲನೇ ವರ್ಷದಲ್ಲೇ ಅವನ ಆದಾಯ 28,000 ಡಾಲರ್‌ನಷ್ಟಾಯಿತು. ಮರುವರ್ಷ ವಾರ್ಷಿಕ ಆದಾಯ 48,000 ಡಾಲರ್ ಆಯಿತು. ತನ್ನ 24ನೇ ವರ್ಷದಲ್ಲಿ 10,000 ಡಾಲರ್ ಸಾಲ ಪಡೆದು ತನ್ನದೇ ಒಂದು ಪೀಠೋಪಕರಣದ ಅಂಗಡಿಯನ್ನು ಹಾಕಿದ, ದಿನರಾತ್ರಿ ದುಡಿದ. ವರ್ಷದ ಕೊನೆಗೆ ಅವನಿಗೆ ಆದ ಲಾಭ ಒಂದು ಲಕ್ಷ ಡಾಲರ್. ತನ್ನ ಮೂವತ್ತನೇ ವಯಸ್ಸಿಗೆ ಆತನ ಒಟ್ಟು ಗಳಿಕೆ 2.25 ಲಕ್ಷ ಡಾಲರ್ ಆದಾಗ ಅಂಗಡಿಯನ್ನು ಬೇರೆಯವರಿಗೆ ಒಪ್ಪಿಸಿ ನಿವೃತ್ತನಾದ.

ಈಗ ಆತ ತನ್ನ ಹಣವನ್ನು ಬೇರೆ ಬೇರೆ ವ್ಯಾಪಾರಗಳಲ್ಲಿ ಹೂಡಿ, ಕಂಪೆನಿಗಳ ಡೈರೆಕ್ಟರ್ ಆಗಿ ಕೋಟ್ಯಂತರ ಡಾಲರ್ ಗಳಿಸುವುದಲ್ಲದೇ ಜನಮನ್ನಣೆ ಗಳಿಸಿದ್ದಾನೆ. ಸಮಾಜಸೇವೆಯ ಮುಂಚೂಣಿಯಲ್ಲಿದ್ದಾನೆ. ಅವನು ಅನೇಕ ತರುಣರನ್ನು ಹುರಿದುಂಬಿಸಿ ತನ್ನದೇ ಮಾದರಿಯನ್ನು ಅವರಿಗೆ ನೀಡಿ ಪ್ರಚೋದಕನಾಗಿದ್ದಾನೆ.

ನಾವು ನಮ್ಮಿಂದ ಯಾವ ಹೆಚ್ಚಿನ ಸಾಧನೆಯೂ ಆಗಿಲ್ಲವೆಂದು ಕೊರಗುವಾಗ ಈತನ ಸ್ಮರಣೆ ಮಾಡಿಕೊಳ್ಳಬೇಕು. ಅಸಾಧ್ಯ ಎನ್ನುವುದು ಸೋತ ಮನಸ್ಸಿನಲ್ಲಿ ಮಾತ್ರ ಇದೆ. ಸಾಧ್ಯತೆಗಳತ್ತ ಮುಖ ಮಾಡಿ ನಿಂತು ಮನಸ್ಸನ್ನು ಅರಳಿಸಿಕೊಂಡು ಪರಿಶ್ರಮ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಅರಿವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT