ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ಥಕ ಕಾರ್ಯ

Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಅಲ್ಗೀಥಾ ಬ್ರೌನ್, ಅಮೆರಿಕದ ಗಾಯಕಿ. ಆಕೆಯ ಗಂಡ ಹಿರಿಯ ವಾಯುಪಡೆಯ ಅಧಿಕಾರಿಯಾಗಿ ಕೆಲಸ ಮಾಡಿದವರು. ಎರಡನೆ ಮಹಾಯುದ್ಧ ಮುಗಿದ ಕೂಡಲೇ ಬ್ರೌನ್ ಅವರನ್ನು ಜರ್ಮನಿಗೆ ವರ್ಗಮಾಡಲಾಗಿತ್ತು. ಆಗ ಎರಡನೇ ಮಹಾಯುದ್ಧ ಕಾಲದಲ್ಲಿ  ಆದ ಅಪಾರ ಪ್ರಾಣಹಾನಿಯ ಬಗ್ಗೆ ತನಿಖೆ ನಡೆಯುತ್ತಿದ್ದವು. ಅವು `ನ್ಯೂರೆಂಬರ್ಗ ತನಿಖೆ'ಗಳು ಎಂದು ಖ್ಯಾತವಾಗಿದ್ದವು. ಹಿಟ್ಲರ್‌ನ ಬಗ್ಗೆ ದ್ವೇಷ ಎಲ್ಲೆಲ್ಲಿ ಯೂ ಇದ್ದ ಕಾಲ. ನಾಜಿ ಸೈನಿಕರೊಡನೆ ಅತ್ಯಂತ ದೂರದ ಸಂಪರ್ಕವಿರುವವರನ್ನೂ ಕೂಡ ಬಂಧಿಸಿ ತನಿಖೆಗೆ ಒಳಪಡಿಸುತ್ತಿದ್ದರು. ಹೀಗಾಗಿ ಅನೇಕ ಜನ ಹೊರಪ್ರಪಂಚಕ್ಕೆ ಕಾಣಿಸದಂತೆ ಭೂಗತರಾಗಿರುತ್ತಿದ್ದರು.

 ಒಂದು ದಿನ ಅಲ್ಗೀಥಾಳ ಮಗನಿಗೆ ಕಾವಿನಿಂದ ಮೈಮೇಲೆಲ್ಲ ಗುಳ್ಳೆಗಳೆದ್ದವು. ಅವನನ್ನು ಒಂದು ಬೇರೆ ಕೊಠಡಿಯಲ್ಲಿ  ಮಲಗಿಸಲಾಗಿತ್ತು. ಆ ಹುಡುಗನಿಗೆ ಕೆಂಡಾಮಂಡಲ ಜ್ವರ ಬೇರೆ. ಆತ ತುಂಬ ನಿತ್ರಾಣನಾಗಿದ್ದ. ತಾಯಿ ಕ್ಷಣಕಾಲ ಹೊರಗೆ ಹೋಗಿದ್ದಾಗ ತಂಪುಗಾಳಿಗೆಂದು ತೆರೆದ ಕಿಟಕಿಯ ಬಳಿಗೆ ಹೋದ. ನಂತರ ಬಗ್ಗಿ ರಸ್ತೆಯನ್ನು ನೋಡುತ್ತಿದ್ದಾಗ ಜೋರಾಗಿ ಬಂದ ಗಾಳಿಗೆ ತೆರೆದ ಕಿಟಕಿ ಮುಚ್ಚಿಕೊಳ್ಳುವಾಗ ಬಡಿದು ಈತ ನಾಲ್ಕನೆಯ ಮಹಡಿಯಿಂದ ಹಾರಿ ಕೆಳಗೆ ಬೀಳತೊಡಗಿದ. ಎರಡನೆ ಮಹಡಿಯ ಬಾಲ್ಕನಿಯ ಕಬ್ಬಿಣದ ಸರಳುಗಳು ಈತನ ಎಡಗೈಯಲ್ಲಿ  ತೂರಿಹೋಗಿ ರಕ್ತ ಚಿಮ್ಮಿತು. ಕೈಗೆ ಅಪಾರ ಪೆಟ್ಟಾದರೂ ಕೆಳಕ್ಕೆ ಬೀಳುವ ವೇಗ ಕಡಿಮೆಯಾಯಿತು. ಕೊನೆಗೆ ನೆಲದ ಮೇಲೆ ಅವನ ದೇಹ ಅಪ್ಪಳಿಸಿತು. ಹೌಹಾರಿದ ತಾಯಿ ಕ್ಷಣದಲ್ಲಿ  ಆ ಸ್ಥಳಕ್ಕೆ ಬಂದಳು. ಅಂಬುಲೆನ್ಸ್ ಬಂದಿತು. ತಕ್ಷಣ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ಅಸ್ಪತ್ರೆಗೆ ಸೇರಿಸಿದರು.

ಎರಡು ದಿನಗಳ ಸತತ ಪ್ರಯತ್ನದಿಂದ ಅವನ ಪ್ರಾಣ ಉಳಿಸಲು ವೈದ್ಯರು ಸಮರ್ಥರಾದರೂ ಅವನ ಎಡಗೈಯನ್ನು ಉಳಿಸುವುದು ಸಾಧ್ಯವಿಲ್ಲವೆಂದರು. ಅವನ ಕೈಯನ್ನು ಕತ್ತರಿಸಿ ತೆಗೆಯದಿದ್ದರೆ ಜೀವಕ್ಕೇ ಅಪಾಯವೆಂದು ಒಪ್ಪಿಸಿ ನಾಲ್ಕು ದಿನಗಳ ನಂತರ ಶಸ್ತ್ರಚಿಕಿತ್ಸೆಯನ್ನು ನಿರ್ಧರಿಸಿದರು. ಪುಟ್ಟ, ಸುಂದರ ಬಾಲಕ ಕೈ ಕಳೆದುಕೊಳ್ಳುವುದನ್ನು ನೆನೆದು ಚಿಂತಿಸುತ್ತ ಅಲ್ಗೀಥಾ ವಾರ್ಡಿನಲ್ಲಿ  ಕುಳಿತಾಗ ಒಬ್ಬ ನರ್ಸ ಅಲ್ಲಿಗೆ ಬಂದು, `ಅಲ್ಗೀಥಾ, ಈ ವಿಷಯ ನಿಮಗೆ ಹೇಗೆ ಹೇಳಬೇಕೆಂಬುದು ನನಗೆ ತಿಳಿಯದು. ನನಗೊಬ್ಬ ವೈದ್ಯ ಗೊತ್ತು. ಆತ ಮಾತ್ರ ನಿಮ್ಮ ಮಗುವಿನ ಕೈ ಉಳಿಸಬಲ್ಲ. ಆದರೆ ಆತ ತನಿಖೆಗೆ ಹೆದರಿ ಭೂಗತನಾಗಿದ್ದಾನೆ. ನನಗೆ ಅವನ ಪರಿಚಯವಿದೆ, ಕೇಳಿ ನೋಡುತ್ತೇನೆ'  ಎಂದಳು. ಅಲ್ಗೀಥಾ ಕೈ ಮುಗಿದು  ಪ್ರಯತ್ನಿಸು  ಎಂದಳು.


ಮರುದಿನ ಒಬ್ಬ ಭಿಕ್ಷುಕನ ತರಹದ ವ್ಯಕ್ತಿ ಆಸ್ಪತ್ರೆಗೆ ಬಂದು ಅಲ್ಗೀಥಾಳನ್ನು ಕಂಡು,  `ನಾನೇ ಆ ವೈದ್ಯ, ಮಗುವನ್ನು ಪರೀಕ್ಷಿಸುತ್ತೇನೆ. ಆದರೆ ಈ ವಿಷಯ ಅತ್ಯಂತ ಗೌಪ್ಯವಾಗಿರಬೇಕು'  ಎಂದು ಮಗುವನ್ನು ಪರೀಕ್ಷೆ ಮಾಡಿದ, ಅವನ ಕೈಯನ್ನು ಉಳಿಸಬಹುದು ಎಂದ. ಎರಡು ದಿನಕ್ಕೇ ಶಸ್ತ್ರಚಿಕಿತ್ಸೆ ನಿರ್ಧರಿಸಿದರು. ಆತ ಎರಡು ದಿನ ಅಪರೇಷನ್ ಥಿಯೇಟರ್‌ನಿಂದ ಹೊರಗೆ ಬರದೇ ನಾಲ್ಕು ಬಾರಿ ಶಸ್ತ್ರಚಿಕಿತ್ಸೆ ಮಾಡಿದ. ರಾತ್ರಿಯೇ ಅಲ್ಲಿಂದ ಕಣ್ಮರೆಯಾದ.  ಈ ಮಗು ಚೇತರಿಸಿಕೊಂಡಿತು. ಪತ್ರಿಕೆಗಳು ಅದನ್ನು ವೈದ್ಯಕೀಯ ಇತಿಹಾಸದ ಪವಾಡ ಎಂದು ವರ್ಣಿಸಿದವು. ಯಾರು ಈ ಶಸ್ತ್ರಚಿಕಿತ್ಸೆ  ಮಾಡಿರಬಹುದು ಎಂಬ ವಿಷಯ ತುಂಬ ಚರ್ಚೆಯಾಯಿತು. ಇಂಥ ಪವಾಡ ಸದೃಶ ಚಿಕಿತ್ಸೆಯನ್ನು ಮಾಡುವ ಶಕ್ತಿ ಇದ್ದ ಒಬ್ಬನೇ ವೈದ್ಯ ಈಗ ಭೂಗತನಾಗಿದ್ದಾನೆ ಎಂದು ಕಂಡುಹಿಡಿದರು.

ನಂತರ ಮೂರೇ ದಿನಗಳಲ್ಲಿ  ಆತನ ಬಂಧನವಾಯಿತು. ಕೋರ್ಟಿನಲ್ಲಿ  ತೀವ್ರ ತನಿಖೆಯಾಗಿ ಆ ವೈದ್ಯನಿಗೆ ಐದು ವರ್ಷಗಳ ಉಗ್ರ ಜೈಲು ಶಿಕ್ಷೆ  ವಿಧಿಸಲಾಯಿತು. ಕೃತಜ್ಞಳಾದ ತಾಯಿ ಅಲ್ಗೀಥಾ ಕೋರ್ಟಿಗೆ ಹೋಗಿ, ವೈದ್ಯರನ್ನು ಜೈಲಿಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ  ನಿಲ್ಲಿಸಿ ಕಣ್ಣೀರುದುಂಬಿ ಕೇಳಿದಳು  `ಸರ್, ನಿಮ್ಮ ಬಂಧನದ ಸಾಧ್ಯತೆ ಗೊತ್ತಿದ್ದೂ ನೀವು ನನ್ನ ಮಗನ ಶಸ್ತ್ರಚಿಕಿತ್ಸೆಗೆ ಏಕೆ ಒಪ್ಪಿಕೊಂಡು ಬಂದಿರಿ. ಎಂಥ ಅಪಾಯವನ್ನು ಮೈಮೇಲೆ ಹಾಕಿಕೊಂಡಿರಿ' ಎಂದಳು.

  ಆ ವೈದ್ಯ ನಕ್ಕು ಹೇಳಿದ,  `ಒಳ್ಳೆಯ, ಸಾರ್ಥಕ ಕೆಲಸ ಮಾಡುವಾಗ ಅಪಾಯಗಳು ಇದ್ದೇ ಇರುತ್ತವೆ. ಅವುಗಳಿಗೆ ಹೆದರಿ ನನ್ನ ಕರ್ತವ್ಯ  ಮರೆಯಲೇ'. ಹೀಗೆ ಅಪಾಯವನ್ನು ಎದುರಿಸಿಯೇ ಮಾಡಿದ ಸಾರ್ಥಕ ಕೆಲಸಗಳು ಜೀವಕ್ಕೆ ಧನ್ಯತೆ ನೀಡುವುದರೊಂದಿಗೆ ಅವು ಮತ್ತಷ್ಟು ಜೀವಗಳಿಗೆ ಮಾದರಿಯಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT