ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವನ್ನು ಸಂಭ್ರಮಿಸುವ ‘ಅಭಿವ್ಯಕ್ತಿ ಸ್ವಾತಂತ್ರ್ಯ’

Last Updated 2 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಜುಲೈ 20ರಂದು ಇಂಡಿಯಾ ಟುಡೇ ಬಳಗ  ಕುಟುಕು ಕಾರ್ಯಾಚರಣೆಯ ವರದಿಯನ್ನು ಪ್ರಕಟಿಸಿತು. ಸುಮಾರು ಒಂದು ವಾರಕ್ಕೂ ಹೆಚ್ಚಿನ ಅವಧಿಯಲ್ಲಿ ‘ಇಂಡಿಯಾ ಟುಡೇ’ಯ ವರದಿಗಾರರು ರಾಜಕೀಯ ಪಕ್ಷವೊಂದರ ಹೆಸರು ಹೇಳಿಕೊಂಡು ದೆಹಲಿ ಮತ್ತು ನೋಯ್ಡಾದಲ್ಲಿರುವ ‘ಆನ್‌ಲೈನ್ ರೆಪ್ಯುಟೇಷನ್ ಮ್ಯಾನೇಜ್ಮೆಂಟ್’ ಸಂಸ್ಥೆಗಳನ್ನು ಸಂದರ್ಶಿಸಿದರು.

ಅವರ ರಹಸ್ಯ ಕ್ಯಾಮೆರಾ ದಾಖಲಿಸಿರುವ ವಿಷಯಗಳು ಹೆದರಿಕೆ ಹುಟ್ಟಿಸುವಂತಿವೆ. ಈ ಸಂಸ್ಥೆಗಳು ಕೇವಲ ತಮಗೆ ಹಣ ಕೊಡುವವರ ಆನ್‌ಲೈನ್ ವ್ಯಕ್ತಿತ್ವಗಳನ್ನು ಉತ್ತಮ ಪಡಿಸುವ ಕೆಲಸವನ್ನಷ್ಟೇ ಮಾಡುವುದಿಲ್ಲ. ತಮ್ಮ ಗ್ರಾಹಕರ ಎದುರಾಳಿಗಳ ತೇಜೋವಧೆಗೆ ಬೇಕಿರುವ ಕಾರ್ಯಾಚರಣೆಗಳನ್ನೂ ನಡೆಸುತ್ತವೆಯಂತೆ.

ನೋಯ್ಡಾ ಮೂಲದ ವಿಬ್‌ಗ್ಯಾರ್ ಟೆಕ್ನೋ ಸಿಸ್ಟಮ್ಸ್ ಎಂಬ ಸಂಸ್ಥೆಯ ನಿರ್ದೇಶಕ ರಣವೀರ್ ಕುಮಾರ್ ಹೇಳಿರುವಂತೆ ಇದು ಕೇವಲ ಒಬ್ಬನ ರಾಜಕೀಯ ವ್ಯಕ್ತಿತ್ವದ ಬಗ್ಗೆಯಷ್ಟೇ ಅಪಪ್ರಚಾರ ಮಾಡುವುದಲ್ಲ ಆತನ ಸಂಪೂರ್ಣ ವ್ಯಕ್ತಿತ್ವವನ್ನೇ ನಕಾರಾತ್ಮಕವಾಗಿ ಪ್ರತಿಬಿಂಬಿಸುವುದು. ಇದರಲ್ಲಿ ಆತನ ವ್ಯಕ್ತಿತ್ವವನ್ನು ಹಾನಿಗೊಳಿಸುವ ರೀತಿಯಲ್ಲಿ ಮಹಿಳೆಯ ಜೊತೆಗೆ ಇರುವ ಚಿತ್ರಗಳು ಇತ್ಯಾದಿಗಳೆಲ್ಲಾ ಒಳಗೊಂಡಿರುತ್ತವೆ.

ದೆಹಲಿಯ ಸ್ಕ್ಯಾನ್ಫ್ ಸಲ್ಯೂಷನ್ಸ್ ಎಂಬ ಸಂಸ್ಥೆಯ ಜತಿನ್ ಅರೋರ ಹೇಳುವ ಮಾತುಗಳಂತೂ ಈ ಉದ್ಯಮ ಏನೇನು ಮಾಡಬಹುದು ಎಂಬುದರ ಚಿತ್ರಣ ನೀಡುತ್ತದೆ: ‘ವಿಡಿಯೋಗಳು ನಿಜವಾದವೇ ಆಗಿರಬೇಕೆಂದೇನೂ ಇಲ್ಲ. ಆದರೆ ಜನ ವಿಡಿಯೋಗಳನ್ನು ನಿಜ ಎಂದು ಭಾವಿಸುತ್ತಾರೆ. ಒಂದು ಹೊಡೆದಾಟದ ವಿಡಿಯೋವನ್ನು ಅದರಲ್ಲಿರುವ ವ್ಯಕ್ತಿಗಳು ಆಡಳಿತ ಪಕ್ಷದವರೆಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಿದರೆ ಸಾಕು’.

ಜತಿನ್ ಅರೋರ ಹೇಳುವ ಮಾತು ಎಷ್ಟು ಸರಿ ಎಂಬುದನ್ನು ಕಳೆದ ಎರಡು ಮೂರು ದಿನಗಳಲ್ಲಿ ಕರ್ನಾಟಕದಲ್ಲಿ ಅನಾವರಣಗೊಂಡು ಸಾಮಾಜಿಕ ಮಾಧ್ಯಮ ಚರ್ಚೆಗಳನ್ನು ಗಮನಿಸಿದರೆ ಸಾಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ರಾಕೇಶ್ ಅನಾರೋಗ್ಯದಿಂದ ಅಕಾಲ ಮರಣಕ್ಕೆ ತುತ್ತಾದರು.

ಅವರು ಬೆಲ್ಜಿಯಂನಲ್ಲಿ ನಡೆಯುವ ಸಂಗೀತೋತ್ಸವವೊಂದಕ್ಕೆ ಹೋಗಿದ್ದಾಗ ಸಾವು ಸಂಭವಿಸಿತು. ಈ ಸಾವು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾದ ಬಗೆ ಮಾತ್ರ ಇಲ್ಲಿ ಸಕ್ರಿಯರಾಗಿರುವ ಬಹುದೊಡ್ಡ ವಿಭಾಗವೊಂದರ ವಿಕೃತಿಗಳನ್ನು ಬಯಲುಗೊಳಿಸಿತು. ಸಾವಿನ ವಿಚಾರದಲ್ಲಿ ಮಾತನಾಡುವಾಗ ಖಾಸಗಿಯಾಗಿಯೂ ಆಡದ ಮಾತುಗಳು ಫೇಸ್‌ಬುಕ್ ಗೋಡೆಗಳಲ್ಲಿ, ಟ್ವಿಟ್ಟರ್ ಮತ್ತು ವಾಟ್ಸ್ಆ್ಯಪ್ ಸಂದೇಶಗಳಲ್ಲಿ ಕಾಣಿಸಿಕೊಂಡವು.

ಈ ಸಂವೇದನಾರಹಿತ ಸಂದೇಶಗಳ ಜೊತೆಯಲ್ಲೇ ವಿನಿಮಯವಾಗುತ್ತಿದ್ದ ಎರಡು ಛಾಯಾಚಿತ್ರಗಳು ಕುತೂಹಲಕಾರಿಯಾಗಿವೆ. ಬೆಲ್ಜಿಯಂನಲ್ಲಿ ತೆಗೆದದ್ದು ಎಂಬ ಶೀರ್ಷಿಕೆಯೊಂದಿಗೆ ಸಾಕಷ್ಟು ಜನ ಹಂಚಿಕೊಂಡಿದ್ದ ಚಿತ್ರ ವಾಸ್ತವದಲ್ಲಿ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ‘ಬಿಯರ್ ರಿಪಬ್ಲಿಕ್’ ಎಂಬ ರೆಸ್ಟೋರೆಂಟ್‌ನಲ್ಲಿ ತೆಗೆದದ್ದು. ಇದನ್ನು ತಿಂಗಳುಗಳ ಹಿಂದೆ ರಾಕೇಶ್ ತಮ್ಮ ರೆಸ್ಟೋರೆಂಟ್‌ಗೆ ಬಂದಾಗ ಕ್ಲಿಕ್ಕಿಸಲಾಗಿತ್ತು. ಎಂದು ‘ಬಿಯರ್ ರಿಪಬ್ಲಿಕ್’ನ ಮಾಲೀಕರೇ ಸ್ಪಷ್ಟನೆ ನೀಡಿದರು.

ಎರಡನೆಯ ಚಿತ್ರದ ಕಥೆ ಇನ್ನೂ ಕುತೂಹಲಕಾರಿಯಾಗಿದೆ. ಜೂನ್ ತಿಂಗಳಿನಲ್ಲಿ ದೆಹಲಿ ಮೂಲದ ನೀರಜ್ ವರ್ಮಾ ಸೇರಿದಂತೆ 310 ಮಂದಿ ಟ್ವೀಟ್ ಮಾಡಿದ ಈ ಚಿತ್ರಕ್ಕೂ ರಾಕೇಶ್‌ಗೂ ಯಾವುದೇ ಸಂಬಂಧವಿಲ್ಲ. ಆದರೆ ಇದು ರಾಕೇಶ್ ಹೆಸರಿನ ಶೀರ್ಷಿಕೆ ಸೇರಿಸಿಕೊಂಡು ವೈರಲ್ ಆಯಿತು.

ಈ ಚಿತ್ರಗಳನ್ನು ಹುಡುಕಿ ಅದಕ್ಕೊಂದು ದುರುದ್ದೇಶಪೂರಿತ ಶೀರ್ಷಿಕೆ ನೀಡಿದವರು ಮುಗ್ಧರಾಗಿರಲು ಸಾಧ್ಯವಿಲ್ಲ. ಈ ಕೃತ್ಯವನ್ನು ‘ಇಂಡಿಯಾ ಟುಡೇ’ಯ ಕುಟುಕು ಕಾರ್ಯಾಚರಣೆಯಲ್ಲಿ ಬಯಲಾದ ಸತ್ಯದ ಜೊತೆಗೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಯಾರು ಮಾಡಿದರು ಎಂಬುದನ್ನು ಕಂಡುಹಿಡಿಯುವುದು ಸದ್ಯ ಲಭ್ಯವಿರುವ ತಂತ್ರಜ್ಞಾನದಿಂದಾಗಿ ಬಹಳ ಸುಲಭವೂ ಹೌದು. ಆದರೆ ನಿಜವಾದ ಸಮಸ್ಯೆ ಇರುವುದು ಅದು ವೈರಲ್ ಅಥವಾ ಭಾರೀ ಪ್ರಮಾಣದಲ್ಲಿ ಮರು ಹಂಚಿಕೆಯಾದ ಪ್ರಕ್ರಿಯೆಯಲ್ಲಿ.

ಒಂದು ಸಾವಿನ ಸುದ್ದಿಯನ್ನು ಸಂಭ್ರಮಿಸುವುದು ಕರ್ನಾಟಕಕ್ಕೆ ಹೊಸತೇನೂ ಅಲ್ಲ. ಈ ಹಿಂದೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿಯವರ ಸಾವಿನ ಸಂದರ್ಭದಲ್ಲಿ ಇದು ಮೊದಲು ಅನಾವರಣಗೊಂಡಿತ್ತು. ಆಮೇಲೆ ಎಂ.ಎಂ.ಕಲಬುರ್ಗಿಯವರ ಭೀಕರ ಹತ್ಯೆಯ ಸಂದರ್ಭದಲ್ಲಿ ಇದು ಮರುಕಳಿಸಿತ್ತು. ಈ ಎರಡೂ ಸಂದರ್ಭಗಳಲ್ಲಿ ‘ಸಂಭ್ರಮಕ್ಕೆ’ ಕಾರಣವಾದದ್ದು ಮೃತರ ರಾಜಕೀಯ ನಂಬಿಕೆಗಳು.

ರಾಕೇಶ್ ಸಾವಿನ ಸಂದರ್ಭದಲ್ಲಿ ಇದಕ್ಕೆ ಕಾರಣವಾದದ್ದು ಅವರ ತಂದೆ ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದದ್ದು. ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಅಪಸವ್ಯಗಳು ಕಾಣಿಸಿಕೊಂಡಾಗಲೆಲ್ಲಾ ಅಲ್ಲೇ ಇದಕ್ಕೊಂದು ಪ್ರತಿರೋಧವೂ ಕಾಣಿಸಿಕೊಳ್ಳುತ್ತದೆ. ತಕ್ಷಣವೇ ಈ ರೀತಿಯ ಸಂವೇದನಾ ರಹಿತ ವರ್ತನೆಯನ್ನು ಸಮರ್ಥಿಸುವ ವಾದಗಳೂ ಇಲ್ಲಿ ಬರಲಾರಂಭಿಸುತ್ತವೆ

ರಾಕೇಶ್ ಸಾವನ್ನು ಸಂಭ್ರಮಿಸುವವರಿಗೆ ಸಮರ್ಥನೆಯಾಗಿ ದೊರೆತದ್ದು ಇಬ್ಬರು ಅಧಿಕಾರಿಗಳ ಆತ್ಮಹತ್ಯೆ ಮತ್ತು ಅದಕ್ಕೆ ಸರ್ಕಾರ ಪ್ರತಿಕ್ರಿಯಿಸಿದ ಬಗೆ. ಸರ್ಕಾರವೊಂದು ಸಂವೇದನಾರಹಿತವಾಗಿ ಪ್ರತಿಕ್ರಿಯಿಸಿದ್ದರೆ ಅದನ್ನು ತರ್ಕಬದ್ಧವಾಗಿ, ಸಾರ್ವಜನಿಕ ಚರ್ಚೆಗೆ ಬೇಕಿರುವ ಗಾಂಭೀರ್ಯದೊಂದಿಗೆ ಅನಾವರಣಗೊಳಿಸುವುದನ್ನು ಸಾಮಾಜಿಕ ಮಾಧ್ಯಮಗಳೇನೂ ತಡೆಯುವುದಿಲ್ಲ.

ಆದರೆ ಅಂಥದ್ದೊಂದು ಸಂವಾದಶೀಲತೆಗೆ ಬದಲಾಗಿ ವಿಚಾರಣೆಯೇ ಇಲ್ಲದೆ ಆರೋಪಿಯನ್ನು ಶಿಕ್ಷಿಸುವುದಕ್ಕೆ ಹೊರಡುವುದೇಕೆ? ಈ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕೆನಡಾದ ಮಾಧ್ಯಮ ತಜ್ಞ ಮಾರ್ಷಲ್ ಮ್ಯಾಕ್ಲುಹಾನ್ ‘ಮಾಧ್ಯಮವೇ ಸಂದೇಶ’ ಎಂಬ ನಿಗೂಢ ದ್ವಂದ್ವದಂಥ ಪರಿಕಲ್ಪನೆಯನ್ನು ಬಳಸಬಹುದೇನೋ. ಆತ ಈ ಪರಿಕಲ್ಪನೆಯನ್ನು ಮುಂದಿಟ್ಟು ಐದೂವರೆ ದಶಕಗಳೇ ಉರುಳಿ ಹೋದವು.

‘ಅಂಡರ್ ಸ್ಟ್ಯಾಂಡಿಂಗ್ ಮೀಡಿಯಾ’ ಎಂಬ ಕೃತಿಯಲ್ಲಿರುವ ಈ ಸಮೀಕರಣದ ಅರ್ಥಗಳು ಅನೇಕ ಬಗೆಯಲ್ಲಿ ಅನಾವರಣಗೊಂಡಿವೆ. ಘಟನೆಯೊಂದು ಸುದ್ದಿಯಾಗುವುದು ಅದಕ್ಕಿರುವ ಸುದ್ದಿಯಾಗುವ ಮೌಲ್ಯದಿಂದಲೇ ಅಥವಾ ಅದು ಮಾಧ್ಯಮವೊಂದರಲ್ಲಿ ಪ್ರಕಟವಾದ ಕಾರಣಕ್ಕೆ ಅದು ಸುದ್ದಿಯ ಮೌಲ್ಯವನ್ನು ಪಡೆಯುತ್ತದೆಯೇ ಎಂಬುದು ‘ಮಾಧ್ಯಮವೇ ಸಂದೇಶ’ ಎಂಬ ಮ್ಯಾಕ್ಲುಹಾನ್ ಹೇಳಿಕೆಯಲ್ಲಿರುವ ದ್ವಂದ್ವ. ಘಟನೆಯೊಂದು ಸುದ್ದಿಯ ಮೌಲ್ಯ ಪಡೆಯುವುದರ ಹಿಂದೆ ಅದು ಮಾಧ್ಯಮವೊಂದರಲ್ಲಿ ಪ್ರಕಟವಾಗುವ ಅಂಶವೂ ಸಾಕಷ್ಟು ಕೆಲಸ ಮಾಡುತ್ತದೆ ಎಂಬುದು ಬಹುಮಟ್ಟಿಗೆ ನಿಜ.

ಈ ಸತ್ಯವನ್ನು ಮೊದಲು ಗ್ರಹಿಸಿದವರು ‘ಸಾರ್ವಜನಿಕ ವ್ಯಕ್ತಿತ್ವ’ವುಳ್ಳ ವ್ಯಕ್ತಿಗಳು ಮತ್ತು ವಾಣಿಜ್ಯ ಸಂಸ್ಥೆಗಳು. ಈ ‘ಸಾರ್ವಜನಿಕ ವ್ಯಕ್ತಿತ್ವ’ ಸದಾ ಜನಮೆಚ್ಚುವಂತೆಯೇ ಇರುವಂತೆ ನೋಡಿಕೊಳ್ಳಬೇಕೆಂಬ ಅವರ ಉದ್ದೇಶವನ್ನು ಈಡೇರಿಸುವುದಕ್ಕಾಗಿಯೇ ‘ಮಾಧ್ಯಮ ನಿರ್ವಹಣೆ’ಯೆಂಬ ದೊಡ್ಡ ಉದ್ಯಮವೇ ಹುಟ್ಟಿಕೊಂಡಿತು.

ಈ ಉದ್ಯಮ ತನ್ನ ಗಿರಾಕಿಗಳ ಹಿತ ಕಾಯುವುದಕ್ಕಾಗಿ ‘ಜನಾಭಿಪ್ರಾಯವನ್ನು ಉತ್ಪಾದಿಸುವ’ ಕೆಲಸದಲ್ಲಿ ತೊಡಗಿತು. ಸಾಂಪ್ರದಾಯಿಕ ಸಮೂಹ ಮಾಧ್ಯಮಗಳಿಗೆ ಇದ್ದ ಸಾಂಸ್ಥಿಕ ಸ್ವರೂಪದ ಸಂಕೀರ್ಣತೆ ಈ ‘ಉತ್ಪಾದನೆ’ಯನ್ನು ಬಹುಮಟ್ಟಿಗೆ ಕ್ಲಿಷ್ಟಕರವಾಗಿಸಿತ್ತೆಂಬುದೇನೋ ನಿಜ. ಆದರೂ ‘ಮಾಧ್ಯಮ ನಿರ್ವಾಹಕರು’ ಚಿತ್ರ ವಿಚಿತ್ರ ತಂತ್ರಗಳಲ್ಲಿ ತಮ್ಮ ಗಿರಾಕಿಗಳ ‘ಸಾರ್ವಜನಿಕ ವ್ಯಕ್ತಿತ್ವ’ವನ್ನು ಮಾಧ್ಯಮಗಳನ್ನು ಬಳಸಿಕೊಂಡೇ ರೂಪಿಸುತ್ತಿದ್ದರು ಎಂಬುದೂ ವಾಸ್ತವವೇ.

ಸಾಮಾಜಿಕ ಮಾಧ್ಯಮಗಳ ಪ್ರವೇಶದೊಂದಿಗೆ ಸಮೂಹ ಮಾಧ್ಯಮದ ಸ್ವರೂಪ ಬದಲಾಯಿತು. ಒಂದರ್ಥದಲ್ಲಿ ಇದು ಸಾಂಪ್ರದಾಯಿಕ ಮಾಧ್ಯಮಗಳ ಏಕಸ್ವಾಮ್ಯವನ್ನು ಮುರಿಯಿತು. ಯಾರಿಗೆ ಏನನ್ನು ಬೇಕಾದರೂ ಹೇಳುವುದಕ್ಕೆ ಬೇಕಿರುವ ಮಾಧ್ಯಮವೊಂದು ಸೃಷ್ಟಿಯಾಯಿತು. ಸಾಂಪ್ರದಾಯಿಕ ಮಾಧ್ಯಮಗಳ ಮಿತಿಗಳ ಕುರಿತ ಸಾರ್ವಜನಿಕ ಚರ್ಚೆಗೂ ಅವಕಾಶವಾಯಿತು. ಆದರೆ ಇಷ್ಟೇ ಪ್ರಮಾಣದಲ್ಲಿ ಈ ಮಾಧ್ಯಮದ ದುರ್ಬಳಕೆಯ ಯುಗವೂ ಆರಂಭವಾಯಿತು.

ಮಾಧ್ಯಮದಲ್ಲಿ ಪ್ರಕಟವಾದ ಕಾರಣಕ್ಕಾಗಿಯೇ ಘಟನೆಯೊಂದು ಸುದ್ದಿಯ ಮೌಲ್ಯವನ್ನು ಪಡೆದುಬಿಡುವ ವೈರುದ್ಯ ಸಾಂಪ್ರದಾಯಿಕ ಮಾಧ್ಯಮದ ಸಂದರ್ಭದಲ್ಲಿ ಒಂದು ಅಪವಾದವಷ್ಟೇ ಆಗಿದ್ದರೆ ಸಾಮಾಜಿಕ ಮಾಧ್ಯಮದಲ್ಲಿ ಅದು ನಿತ್ಯ ಸತ್ಯವಾಯಿತು. ಇದರ ಅತಿದೊಡ್ಡ ಲಾಭ ಪಡೆದದ್ದು ‘ಜನಾಭಿಪ್ರಾಯದ ಉತ್ಪಾದಕರು’.

ಮಾಹಿತಿಯ ಬಹುಮೂಲಗಳು ತೆರೆದುಕೊಂಡಾಗ ಸಾರ್ವಜನಿಕ ಚರ್ಚೆಗಳ ಗುಣಮಟ್ಟ ಸಹಜವಾಗಿಯೇ ಉತ್ತಮಗೊಳ್ಳಬೇಕಾಗಿತ್ತು. ಆದರೆ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಗತ್ಯವಾಗಿ ಬೇಕಿರುವ ಅರಿವುಳ್ಳ ಚರ್ಚೆಯೇ ಇಲ್ಲವಾಗುತ್ತಿರುವ ವಿಚಿತ್ರವೊಂದು ಏಕೆ ಸಂಭವಿಸುತ್ತಿದೆ? ಇದಕ್ಕೆ ಎರಡು ಸಂಭಾವ್ಯ ಉತ್ತರಗಳಿವೆ. ಒಂದು: ಸಾಮಾಜಿಕ ಜಾಲತಾಣಗಳು ಒದಗಿಸಿರುವ ಅಭಿವ್ಯಕ್ತಿಯ ಅನಂತ ಅವಕಾಶ ನಮ್ಮ ವಿವೇಚನಾ ಸಾಮರ್ಥ್ಯವನ್ನು ಕುಗ್ಗಿಸಿವೆ.

ಪ್ರತಿಯೊಬ್ಬರೂ ತಮ್ಮದೇ ಆದ, ತಮಗಿಷ್ಟವಿರುವುದನ್ನು ಹೇಳುವ ಗುಂಪಿನೊಳಗಷ್ಟೇ ಇರುತ್ತಾರೆ. ಹಾಗಾಗಿ ತಪ್ಪನ್ನು ತಪ್ಪು ಎಂದು ಹೇಳುವುದಕ್ಕೂ ಯಾರೂ ಇರುವುದಿಲ್ಲ. ಉದ್ರಿಕ್ತ ಜನರ ಗುಂಪು ಪ್ರತಿಕ್ರಿಯಿಸುವಂತೆ ಇಲ್ಲಿನ ಪ್ರತಿಕ್ರಿಯಿಗಳಿರುತ್ತವೆ. ಎರಡು: ನಾವು ಮೂಲತಃ ವಿವೇಚನೆಯುಳ್ಳ ಸಂವಾದಶೀಲತೆಯಲ್ಲಿ ನಂಬಿಕೆಯಿಟ್ಟಿಲ್ಲ. ಆ ಕ್ಷಣದಲ್ಲಿ ಕಣ್ಣೆದುರು ಕಂಡದ್ದನ್ನು ವಿವೇಚನೆಯೇ ಇಲ್ಲದೆ ಒಪ್ಪಿಕೊಂಡು ಗುಂಪು ನ್ಯಾಯಕ್ಕೆ ಮುಂದಾಗುತ್ತೇವೆ.

ಮಂಗಳೂರಿನ ಪಬ್ ದಾಳಿಯಿಂದ ಆರಂಭಿಸಿ ಸತ್ತ ದನದ ಚರ್ಮ ಸುಲಿಯುತ್ತಿದ್ದ ದಲಿತರನ್ನು ಥಳಿಸುವ ತನಕದ ಎಲ್ಲಾ ಪ್ರಕರಣಗಳಲ್ಲಿಯೂ ಇದು ಕಾಣಿಸಿದೆ. ಇದೇ ಮನೋಭಾವ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರತಿಬಿಂಬಿಸುತ್ತಿದೆ.

ಗುಂಪು ನ್ಯಾಯಕ್ಕೆ ಮುಂದಾಗುವ ಎಲ್ಲಾ ಗುಂಪುಗಳೂ ತಮ್ಮ ಅಭಿಪ್ರಾಯಗಳನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹೆಸರಿನಲ್ಲಿ ಪ್ರತಿಪಾದಿಸುತ್ತಾ ತಮ್ಮ ನಿಲುವಿಗೆ ವಿರುದ್ಧವಾಗಿರುವ ಎಲ್ಲಾ ಅಭಿಪ್ರಾಯಗಳನ್ನೂ ತುಳಿಯಲು ಹೊರಡುತ್ತವೆ. ಅರ್ಥಾತ್ ಯಾವುದೇ ತಾರ್ಕಿಕ ಚರ್ಚೆಯೇ ಸಾಧ್ಯವಿಲ್ಲದಂಥ ಗದ್ದಲವನ್ನು ಸೃಷ್ಟಿಸುತ್ತಿರುತ್ತವೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಮೂಲಕವೇ ಹತ್ತಿಕ್ಕುವ ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT