ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಮುಖದಲ್ಲೂ ದ್ವೇಷ ಗೆದ್ದವರು

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಒಂದು ಬಾರಿ ವಿಮಾನದಲ್ಲಿ  ಪ್ರಯಾಣ ಮಾಡುವಾಗ ಓದುವುದಕ್ಕೆ ಕೊಟ್ಟ ಪತ್ರಿಕೆಯಲ್ಲಿ  ಲೇಖನವೊಂದು ನನ್ನ ಗಮನ ಸೆಳೆಯಿತು. 

ಝೈರೆ ಎಂಬುದೊಂದು ಆಫ್ರಿಕಾ ಖಂಡದ ಪುಟ್ಟ ದೇಶವಾಗಿತ್ತು. 1993ರಲ್ಲಿ  ಆ ದೇಶ `ರಿಪಬ್ಲಿಕ್ ಆಫ್ ಕಾಂಗೊ~  ಎಂದು ಬದಲಾಯಿತು. ಈಗ ಅದು ಪ್ರಜಾಸತ್ತಾತ್ಮಕ ರಾಷ್ಟ್ರ. ಝೈರೆ ಆಗಿದ್ದಾಗ ಈ ಪ್ರದೇಶ ಕತ್ತಲೆ ಮತ್ತು ಅಜ್ಞಾನದಲ್ಲಿ  ಕಳೆದುಹೋಗಿತ್ತಂತೆ.

ಅಲ್ಲಿದ್ದ ಆದಿವಾಸಿಗಳಿಗೆ ಯಾವುದೇ ಸಹಾಯವಾಗಲಿ, ನಿರ್ದೇಶನವಾಗಲಿ ಇರಲಿಲ್ಲ. ಆ ದಟ್ಟ ಕಾಡು ಪ್ರದೇಶಗಳಲ್ಲಿ  ಅವರ ಇರುವಿಕೆಗೂ   ಅಲ್ಲಿಯ ಪ್ರಾಣಿಗಳ ಜೀವನಕ್ಕೂ ಯಾವ ಅಂತರವೂ ತೋರುತ್ತಿರಲಿಲ್ಲ.

ಆಗ ಆ ಪ್ರದೇಶಕ್ಕೆ ಕಾಲಿಟ್ಟರು ಕ್ರಿಶ್ಚಿಯನ್ ಮಿಷನರಿಗಳು. ತಾವು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ  ಬದುಕಿದರೂ, ನಗುಮುಖದಿಂದ ಅಲ್ಲಿಯ ಜನರ ಸೇವೆ ಮಾಡಿದರು. ಬೇಸರವಿಲ್ಲದೇ ಕಾಡು ಮೇಡುಗಳನ್ನಲೆದು ಔಷಧಗಳನ್ನು ಅರೆದರು, ರೋಗಿಗಳ ಶುಶ್ರೂಷೆ ಮಾಡಿದರು, ಅವರಿಗೆ ಪುಟ್ಟಪುಟ್ಟ ಮನೆಗಳನ್ನು ಕಟ್ಟಿಕೊಳ್ಳಲು ಕಲಿಸಿದರು. ನಿಧಾನವಾಗಿ ಅಕ್ಷರಾಭ್ಯಾಸ ಮಾಡಿಸಿದರು. ಇದೆಲ್ಲ ಸುಲಭದಲ್ಲಿ ಬೇಗದಲ್ಲಿ  ಆಗುವ ಕೆಲಸವಲ್ಲ.

ವರ್ಷಗಟ್ಟಲೇ ಇದೇ ಸುಧಾರಣೆಯ ಕೆಲಸ ನಡೆಯಿತು. ಕಾರ್ಯಕರ್ತರ ಹಣೆಯ ಮೇಲೆ ನಿರಿಗೆಗಳು ಮೂಡಲಿಲ್ಲ, ತುಟಿಯ ಮೇಲಿನ ಮಂದಹಾಸ ಕಡಿಮೆಯಾಗಲಿಲ್ಲ. ಆದರೂ ಅನೇಕ ಕಾರ್ಯಕರ್ತರು ಆ ದೇಶದಲ್ಲೇ ಮಡಿದರು. ಎರಡು ವರ್ಷಗಳ ಕೆಳಗೆ `ರಿಪಬ್ಲಿಕ್ ಆಫ್ ಕಾಂಗೊ~ದಲ್ಲಿ  ಒಂದು ಸಮಾರಂಭ ನಡೆಯಿತು. ಆಗ ದೇಶದ ಹಿರಿಯರೆಲ್ಲ ಮಿಷಿನರಿಗಳು ತೋರಿದ ಅಸಾಮಾನ್ಯ ತ್ಯಾಗ, ಕರುಣೆ, ಸಹನೆಗಳ ಬಗ್ಗೆ ಹೊಗಳಿ ಮಾತನಾಡಿದರು.

ಆ ಸಭೆಗೆ ಒಬ್ಬ ಹಣ್ಣುಹಣ್ಣು ಮುದುಕ ಬಂದಿದ್ದ. ಅವನಿಗೆ ಸುಮಾರು ತೊಂಬತ್ತು ವರ್ಷವಾದರೂ ವಯಸ್ಸಾಗಿದ್ದರಬೇಕು. ಅವನೂ ಆದಿವಾಸಿಗಳ ಗುಂಪಿಗೆ ಸೇರಿದವನು. ತಾನು ಮಾತನಾಡಲೇಬೇಕೆಂದು ಒತ್ತಾಯ ಮಾಡುತ್ತಿದ್ದ. ಕೆಲವರು ಅವನನ್ನು ತಡೆಯಲು ಪ್ರಯತ್ನಿಸಿದಾಗ ಆಗ ಕೂಗಿಕೊಂಡ, `ನನಗೆ ಅವಕಾಶ ಕೊಡದಿದ್ದರೆ ನನಗೆ ಗೊತ್ತಿರುವುದು ಹೊರಜಗತ್ತಿಗೆ ಎಂದಿಗೂ ಗೊತ್ತಾಗದೇ ಹೋಗುತ್ತದೆ~.

ಅಂತೂ ಅವನಿಗೆ ಅವಕಾಶ ಕೊಟ್ಟರು. ಆತ ತೊದಲುತ್ತ, ತಡೆತಡೆದು ಮಾತನಾಡುತ್ತ ಹೇಳಿದ, `ತಮಗಾರಿಗೂ ಗೊತ್ತಿರದ ಸಂಗತಿಯೊಂದು ನನಗೆ ತಿಳಿದಿದೆ. ನಾನು ಇಂದು ಹೇಳದಿದ್ದರೆ ಈ ವಿಷಯ ಇತಿಹಾಸದಿಂದ ಮಾಯವಾಗಿ ಹೋಗುತ್ತದೆ. ಈ ಮಿಷನರಿಗಳು ನಮ್ಮ ದೇಶಕ್ಕೆ ಬಂದು ಕೆಲಸ ಪ್ರಾರಂಭಮಾಡಿದಾಗ ಇವರು ಯಾರು. ಇಲ್ಲಿಗೇಕೆ ಬಂದರು. ಏನಿವರ ಕೆಲಸ ಎಂದು ಎಲ್ಲರೂ ಯೋಚಿಸುತ್ತಿದ್ದರು.

ಇವರು ನಮಗೆ ತೊಂದರೆ ಮಾಡಲೆಂದೇ ಬಂದಿರಬೇಕೆಂದುಕೊಂಡು ನಮ್ಮ ಹಿರಿಯರು ಈ ಸನ್ಯಾಸಿಗಳಿಗೆ ನಿಧಾನವಾದ ವಿಷ ನೀಡಿದರು. ಆದ್ದರಿಂದಲೇ ಅನೇಕ ಜನ ಸನ್ಯಾಸಿಗಳು ಒದ್ದಾಡಿ, ಒದ್ದಾಡಿ ಸತ್ತು ಹೋದರು. ಅವರು ಸಾಯುವುದನ್ನು ನಾವು ಗಮನಿಸಿದೆವು.

ಅವರು ತಮ್ಮ ಜೀವನದ ಕೊನೆಯ ಕ್ಷಣಗಳಲ್ಲಿ ಯೂ ನಮ್ಮ ಬಗ್ಗೆ ಒಳ್ಳೆಯದನ್ನೇ ಯೋಚಿಸುವುದನ್ನು ಕಂಡು ಅವರ ಬಗ್ಗೆ ಗೌರವಭಾವ ತಾಳಿದೆವು. ನಮ್ಮ ದ್ವೇಷ ಮಾಯವಾಯಿತು. ಬಹಳಷ್ಟು ಜನ ಮಿಷನರಿಗಳಿಗೆ ತಾವು ಏಕೆ ಹೀಗೆ ಒದ್ದಾಡಿ ಸಾಯುತ್ತಿದ್ದೇವೆ ಎಂಬುದರ ಕಲ್ಪನೆಯೂ ಇರಲಿಲ್ಲ. ಅವರ ದಯೆ ದೊಡ್ಡದು.

ಅವರು ಅಂದು ಹಾಗೆ ಸೇವೆ ಸಲ್ಲಿಸದಿದ್ದಲ್ಲಿ  ನಾವಿಂದು ನಾಗರಿಕರಾಗಿ ಬದುಕುವುದು ಸಾಧ್ಯವಿರಲಿಲ್ಲ. ಇಂದು ನಮ್ಮ ಜನಾಂಗದ ಹಿರಿಯ ವ್ಯಕ್ತಿಯಾಗಿ ನಮ್ಮ ಹಿರಿಯರು ಮಾಡಿದ ಅಪಚಾರಕ್ಕಾಗಿ ತಮ್ಮ ಪ್ರಾಣಗಳನ್ನು ಕಳೆದುಕೊಂಡ ಎಲ್ಲ ಸನ್ಯಾಸಿಗಳಿಂದ ಕ್ಷಮೆ ಯಾಚಿಸುತ್ತೇನೆ.
 
ಭಗವಂತ, ನಾವು ಅಜ್ಞಾನದಿಂದ ಮಾಡಿದ ಅಪರಾಧಗಳನ್ನು ಕ್ಷಮಿಸುತ್ತಾನೆ ಎಂದು ನಂಬಿದ್ದೇನೆ...~  ಹೀಗೆ ಹೇಳಿ ಕೆಳಕ್ಕೆ ಕುಸಿದು ಬಿಕ್ಕಿ ಬಿಕ್ಕಿ ಅತ್ತ. ತಾವು ಒದ್ದಾಡಿ ಸಾಯುತ್ತಿದ್ದರೂ, ತಮ್ಮ ಸಾವಿನ ಕಾರಣ ತಿಳಿಯದಿದ್ದರೂ ತಮ್ಮ ಕರ್ತವ್ಯ ಮರೆಯದೇ ದಯೆ, ಕರುಣೆ  ತೋರಿದ ಆ ಸನ್ಯಾಸಿಗಳ ಸೇವೆ ಅವಿಸ್ಮರಣೀಯ.
 
ಇದು ಪ್ರೀತಿ, ತ್ಯಾಗಗಳು ದ್ವೇಷ ಗೆದ್ದು ನಿಂತ ಪರಿ. ಜಗತ್ತಿನ ಉದ್ಧಾರಕ್ಕೆ ಮಾರ್ಗದರ್ಶನ ಸೂತ್ರ ಪ್ರೀತಿ, ಕರುಣೆ, ದಯೆ, ಸಂಯಮಗಳೇ ಹೊರತು ದ್ವೇಷವಲ್ಲ ಎಂದು ಸಾರಿದ ಘಟನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT