ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್ 11: ಒಂದು ದಿನ, ಮೂರು ಕಥನ

Last Updated 21 ಸೆಪ್ಟೆಂಬರ್ 2017, 19:58 IST
ಅಕ್ಷರ ಗಾತ್ರ

ಇದೊಂದು ರೀತಿಯಲ್ಲಿ ಅಚ್ಚರಿ. ಚರಿತ್ರೆಯ ಪುಟಗಳನ್ನು ಸರಿಸುವಾಗ ಕೆಲವು ದಿನಾಂಕಗಳು ಎದ್ದು ಕಾಣುತ್ತವೆ. ಅದೇ ದಿನ ವಿವಿಧ ಕಾಲಘಟ್ಟದಲ್ಲಿ, ವಿವಿಧ ದೇಶ, ಪ್ರಾಂತ್ಯಗಳಲ್ಲಿ ಮಹತ್ವದ್ದೇನೋ ಘಟಿಸಿರುತ್ತದೆ. ಆ ದಿನಾಂಕಗಳ ಪೈಕಿ ಸೆಪ್ಟೆಂಬರ್ 11 ಕೂಡ ಒಂದು. ಭಾರತ, ಇಂಗ್ಲೆಂಡ್ ಮತ್ತು ಅಮೆರಿಕದ ಪಾಲಿಗೆ ಸೆಪ್ಟೆಂಬರ್ 11 ಚಾರಿತ್ರಿಕ ಮತ್ತು ಸ್ಮರಣಾರ್ಹ ದಿನ.

ಅಮೆರಿಕದೊಂದಿಗೇ ವಿಷಯವನ್ನು ಆರಂಭಿಸುವುದಾದರೆ, ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಥಾಮಸ್ ಫ್ರೀಡ್ಮನ್ ತಮ್ಮ ‘The World is Flat’ ಕೃತಿಯಲ್ಲಿ ‘ಈ ಐವತ್ತು ವರ್ಷಗಳಲ್ಲಿ ಅಮೆರಿಕನ್ನರ ಬದುಕನ್ನು ಮರುರೂಪಿಸಿದ ಎರಡು ಮಹತ್ವದ ದಿನಗಳು ಎಂದರೆ 9/11 ಮತ್ತು 11/9’ ಎನ್ನುತ್ತಾರೆ.

2001ರ ಸೆಪ್ಟೆಂಬರ್ 11 (9/11) ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ನಡೆದ ದಿನವಾದರೆ, 1989ರ ನವೆಂಬರ್ 9 (11/9) ಬರ್ಲಿನ್ ಗೋಡೆಯನ್ನು ಕೆಡವಿದ ದಿನ. ಈ ಎರಡೂ ಅಮೆರಿಕದ ಪಾಲಿಗೆ ಚಾರಿತ್ರಿಕ ದಿನಗಳು. ಬರ್ಲಿನ್ ಗೋಡೆಯ ಪತನದೊಂದಿಗೆ ಮುಚ್ಚಿದ್ದ ಹಲವು ಕಿಟಕಿಗಳು ತೆರೆದುಕೊಂಡರೆ, ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಉಗ್ರರ ದಾಳಿಯಿಂದಾಗಿ ಅಗೋಚರ ಗೋಡೆಗಳು ವ್ಯಕ್ತಿ, ಸಮುದಾಯಗಳ ನಡುವೆ ಸೃಷ್ಟಿಯಾದವು.

ಬರ್ಲಿನ್ ಗೋಡೆಯನ್ನು ಪಶ್ಚಿಮ ಬರ್ಲಿನ್ ಜನ ‘ವಾಲ್ ಆಫ್ ಶೇಮ್’ ಎಂದು ಕರೆದದ್ದು ಇದೆ. ಗೋಡೆ ಎದ್ದದ್ದಕ್ಕೆ ಕಾರಣಗಳೇನು, ಜಾನ್ ಕೆನಡಿ ಮತ್ತು ರೊನಾಲ್ಡ್ ರೇಗನ್ ಆ ಗೋಡೆಯ ಎದುರು ನಿಂತು ಮಾಡಿದ ಐತಿಹಾಸಿಕ ಭಾಷಣ ಮತ್ತು ಇನ್ನಿತರ ರೋಚಕ ಘಟನೆಗಳನ್ನು ವಿಸ್ತಾರವಾಗಿಯೇ ನೋಡಬೇಕು. ಇಲ್ಲಿ ಚುಟುಕಾಗಿ ಹೇಳುವುದಾದರೆ, ಗೋಡೆಯ ಉಗಮಕ್ಕೆ ಕಾರಣವಾದದ್ದು ಎರಡನೇ ವಿಶ್ವಯುದ್ಧದ ನಂತರದ ಶೀತಲ ಸಮರ.

ಗೋಡೆಯ ಪತನಕ್ಕೆ ಕಾರಣವಾದದ್ದು, ಪೂರ್ವ ಜರ್ಮನಿಯಲ್ಲಿ ಉಂಟಾದ ವಿಪ್ಲವ. ಪೋಲೆಂಡ್, ಹಂಗೆರಿಗಳಲ್ಲಾದ ಕ್ರಾಂತಿ. 1989ರ ಸೆಪ್ಟೆಂಬರ್‌ನಲ್ಲಿ ಹಂಗೆರಿಯ ಹಿತ್ತಲ ಬಾಗಿಲಿನಿಂದ 13 ಸಾವಿರ ಪಶ್ಚಿಮ ಜರ್ಮನ್ನರು ಬಿಡುಗಡೆ ಹೊಂದಿದರು. ಇದು ಇನ್ನಷ್ಟು ಮತ್ತಷ್ಟು ಜನರನ್ನು ಪ್ರೇರೇಪಿಸಿತು. ಕೊನೆಗೆ ಗೋಡೆಯೇ ಇಲ್ಲವಾಯಿತು.

ಯುರೋಪಿನಲ್ಲಿ ಕಮ್ಯುನಿಸಂ ಪ್ರಭಾವ ಪಸರಿಸದಂತೆ ತಡೆಯಲು ಸರ್ವಪ್ರಯತ್ನ ಮಾಡುತ್ತಿದ್ದ ಅಮೆರಿಕಕ್ಕೆ ಗೋಡೆಯ ಪತನ ಮತ್ತು ಸೋವಿಯತ್‌ಗೆ ಆದ ಹಿನ್ನಡೆ ರಾಜಕೀಯವಾಗಿ ಗೆಲುವು ತಂದುಕೊಟ್ಟಿದ್ದಲ್ಲದೇ, ವ್ಯಾವಹಾರಿಕವಾಗಿ ತನ್ನ ಮಾರುಕಟ್ಟೆಯನ್ನು ಹಿಗ್ಗಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. ಎರಡು ವರ್ಷಗಳಲ್ಲಿ ಜಗತ್ತಿನ ಏಕೈಕ ಸೂಪರ್ ಪವರ್ ರಾಷ್ಟ್ರವಾಗಿ ಅಮೆರಿಕ ನಿಂತಿತ್ತು.

ಇನ್ನು, 2001ರ ಸೆಪ್ಟೆಂಬರ್ 11, ಎರಡನೇ ವಿಶ್ವ ಯುದ್ಧದ ಬಳಿಕ ಅಮೆರಿಕ ಎದುರಿಸಿದ ಕರಾಳ ದಿನ. ಆ ಘಟನೆ ನಡೆದು 16 ವರ್ಷಗಳು ಕಳೆದಿವೆಯಾದರೂ ಅಮೆರಿಕನ್ನರ ಮನದಲ್ಲಿ ಇಂದಿಗೂ ದುಗುಡದ ಪಸೆ ಆರಿಲ್ಲ. ಆ ದಿನದ ಭೀಕರತೆ ಹೇಗಿತ್ತು ಎಂದರಿಯಬೇಕಾದರೆ ಆ ಘಟನೆಯನ್ನು ವರದಿ ಮಾಡಿದ, ಸಿಬಿಎಸ್ ಸುದ್ದಿ ಮನೆಯಲ್ಲಿ ಕೂತು ತಾಸುಗಟ್ಟಲೆ ಚರ್ಚಿಸಿದ ಪತ್ರಕರ್ತರ ಅನುಭವಗಳನ್ನು ನೋಡಬೇಕು.

ಹಿರಿಯ ಪತ್ರಕರ್ತ ಬಾಬ್ ಶೀಫರ್ ‘What I could not tell you on TV’ ಕೃತಿಯಲ್ಲಿ ‘ಅಮೆರಿಕದ ಯಾವುದೇ ಪತ್ರಕರ್ತ ಇಂತಹದೊಂದು ಘಟನೆಯನ್ನು ವರದಿ ಮಾಡುವ ಸಂದರ್ಭ ಬರುತ್ತದೆ ಎಂದು ಎಣಿಸಿರಲಿಕ್ಕಿಲ್ಲ. ಆ ಮಂಗಳವಾರ ಬೆಳಿಗ್ಗೆ 8.55ಕ್ಕೆ ವಾಣಿಜ್ಯ ಕಟ್ಟಡದಿಂದ ದಟ್ಟ ಹೊಗೆ ಬರುತ್ತಿದೆ ಎಂದು ಆರಂಭವಾದ ಸುದ್ದಿ, ಶನಿವಾರ ಮುಂಜಾನೆ 6 ಗಂಟೆಯವರೆಗೆ ಸತತವಾಗಿ ಪ್ರಸಾರವಾಯಿತು.

ಇತರರ ದುಃಖ, ಸಂಕಷ್ಟಗಳನ್ನು ವರದಿ ಮಾಡುತ್ತಿದ್ದ ಪತ್ರಕರ್ತ ಅಂದು ತನ್ನದೇ ಕುಟುಂಬದವರ ಸಾವು ನೋವನ್ನೂ ವರದಿ ಮಾಡುವಂತಾಯಿತು. ಹಲವು ಪತ್ರಕರ್ತರು ನಾಲ್ಕು ದಿನ ಮನೆಗೆ ತೆರಳದೇ ಕಾರ್ಯನಿರ್ವಹಿಸಿದರು. ನಾಲ್ಕು ತಾಸಿಗಿಂತ ಹೆಚ್ಚು ನಿದ್ದೆ ತೆಗೆದ ಪತ್ರಕರ್ತರು ಇರಲಿಕ್ಕಿಲ್ಲ.

ಭಾವೋದ್ರೇಕಗಳನ್ನು ಬದಿಗಿಟ್ಟು ಕ್ಷಣ ಕ್ಷಣದ ನಿಖರ ಮಾಹಿತಿಯನ್ನು ಬಿತ್ತರಿಸುವುದು ಮಾತ್ರ ಪ್ರತಿಯೊಬ್ಬರ ಆದ್ಯತೆಯಾಗಿತ್ತು’ ಎಂದು ಆ ದಿನ ಸುದ್ದಿ ಮನೆಯಲ್ಲಿದ್ದ ತಳಮಳವನ್ನು ವಿವರಿಸಿದ್ದಾರೆ.

ಅಮೆರಿಕದ ಜನಪ್ರಿಯ ಪತ್ರಿಕೆ ‘ವಾಲ್ ಸ್ಟ್ರೀಟ್ ಜರ್ನಲ್’ ಮುಖ್ಯ ಕಚೇರಿ ಇದ್ದದ್ದು ವಾಣಿಜ್ಯ ಕೇಂದ್ರದಿಂದ ಒಂದು ರಸ್ತೆಯ ಆಚೆಗೆ. ಹಾಗಾಗಿ ದಾಳಿಯಾದ ಕೂಡಲೇ ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ತೆರವುಗೊಳಿಸಲಾಗಿತ್ತು. ಆದರೆ ಎಷ್ಟೇ ಅಡ್ಡಿ ಬಂದರೂ ಮರುದಿನದ ಪತ್ರಿಕೆ ಪುಷ್ಕಳವಾಗಿ ತಾಜಾ ಸುದ್ದಿ ಹೊತ್ತು ಬರಬೇಕು ಎಂಬ ಬದ್ಧತೆ ಸಂಪಾದಕ ಪಾಲ್ ಸ್ಟೀಜರ್ ಅವರಿಗಿತ್ತು.

ತಮ್ಮ ಸಹೋದ್ಯೋಗಿಗಳನ್ನು ಕರೆದೊಯ್ದು ನ್ಯೂಜೆರ್ಸಿಯ ವಿಭಾಗೀಯ ಕಚೇರಿಯಿಂದ ಕಾರ್ಯನಿರ್ವಹಿಸಿದರು. ಮರುದಿನದ ಪತ್ರಿಕೆ ಎಂದಿನಂತೆಯೇ ಪ್ರಕಟವಾಯಿತು. ಆದರೆ ಪತ್ರಕರ್ತರಿಗಿದ್ದ ಸವಾಲು ಎಂದರೆ ಸುದ್ದಿಯ ಸತ್ಯಾಸತ್ಯ ಅರಿಯುವುದು. ಎರಡು ಕಟ್ಟಡಗಳು ಕುಸಿಯುತ್ತಿದ್ದಂತೆ ಸುದ್ದಿಗೆ ರೆಕ್ಕೆ ಪುಕ್ಕ ಬಂತು. ಮುಂದಿನ ಗುರಿ ಶ್ವೇತ ಭವನವಂತೆ ಎಂಬ ಸುದ್ದಿ ಪಸರಿಸಿ ಅಲ್ಲಿನ ಸಿಬ್ಬಂದಿ, ಪತ್ರಕರ್ತರನ್ನು ತರಾತುರಿಯಲ್ಲಿ ಬೇರೆಡೆಗೆ ಸ್ಥಳಾಂತರಿಸಲಾಯಿತು. ವಿಮಾನ ಕಂಡಲ್ಲೆಲ್ಲಾ ಕ್ಯಾಮೆರಾ ತಿರುಗಿಸುವಂತಾಯಿತು.

ಷಿಕಾಗೊದ ಜನಪ್ರಿಯ ವಿಲ್ಲೀಸ್ ಟವರ್ ಬಳಿಯಲ್ಲಿ ವಿಮಾನ ಕಂಡವರು ಕಂಗಾಲಾದರು. ವಿಚಾರಿಸಿ ನೋಡಿದಾಗ ಅದು ದುಬೈ ಕಡೆಗೆ ಹಾರುತ್ತಿದ್ದ ಡೆಲ್ಟಾ ಏರ್‌ಲೈನ್ಸ್ ಆಗಿತ್ತು. ಹೀಗೆ ಪತ್ರಕರ್ತರು ನಾಲ್ಕಾರು ದಿನ ತ್ರಾಸಪಟ್ಟರು. ಕೊನೆಗೆ ಪತ್ರಿಕೆಗಳ, ಸುದ್ದಿ ವಾಹಿನಿಗಳ ಸಂಪಾದಕರು ಪೈಪೋಟಿ ಬದಿಗಿಟ್ಟು, ಸುದ್ದಿಗಳನ್ನು ಪರಸ್ಪರ ಹಂಚಿಕೊಳ್ಳುವ ಒಮ್ಮತಕ್ಕೆ ಬಂದರು. ಒಟ್ಟಿನಲ್ಲಿ, ಈ ದಾಳಿ ಆಡಳಿತಾತ್ಮಕವಾಗಿ ಅಮೆರಿಕ ಸರ್ಕಾರಕ್ಕೆ ಪಾಠವಾಯಿತು.

ರಷ್ಯಾದ ವಿರುದ್ಧವಾಗಿ ತಾನು ಸಾಕಿ ಸಲುಹಿದ ಉಗ್ರರು ತನ್ನ ಮೇಲೆಯೇ ದಾಳಿಗೆ ಮುಂದಾದಾಗ ಉಗ್ರ ನಿಗ್ರಹದ ವಿರುದ್ಧ ಕಠಿಣ ಮಾತುಗಳನ್ನು ಅಮೆರಿಕ ಆಡಿತು. ನಂತರ ಅದು ಇಟ್ಟ ಹೆಜ್ಜೆಗಳ ಸಾಧಕ ಬಾಧಕದ ಅವಲೋಕನ ಬೇರೆ. ಆದರೆ ತನ್ನ ಮೂಗಿನ ನೇರಕ್ಕೆ ಜಗತ್ತು ನಡೆಯುತ್ತದೆ, ನಾನು ಬಲಾಢ್ಯ, ಹಿರಿಯಣ್ಣ ಎಂಬ ಭಾವದಲ್ಲಿದ್ದ ಅಮೆರಿಕಕ್ಕೆ ಅಂಜಿಕೆ, ಭಯ ಮತ್ತು ಸೂತಕದ ಅನುಭವ ಸೆಪ್ಟೆಂಬರ್ 11ರ ಘಟನೆಯಿಂದ ಆಯಿತು.

ಇನ್ನು, ಇಂಗ್ಲೆಂಡ್ ವಿಷಯದಲ್ಲಿ ಸೆಪ್ಟೆಂಬರ್ 11, ಹೇಗೆ ಮುಖ್ಯವಾಯಿತು ಎಂಬುದನ್ನು ನೋಡುವುದಕ್ಕೆ ಎರಡನೇ ವಿಶ್ವಯುದ್ಧ ನೆನಪಿಸಿಕೊಳ್ಳಬೇಕು. ಇಂಗ್ಲೆಂಡಿನ ಪ್ರಧಾನಿಯಾಗಿದ್ದ ಚರ್ಚಿಲ್ ಮಗ ರಾಂಡಲ್ಫ್ ಚರ್ಚಿಲ್, ತಮ್ಮ ತಂದೆಯ ಕುರಿತ ಕೃತಿಯಲ್ಲಿ ಒಂದು ಸನ್ನಿವೇಶ ವಿವರಿಸುತ್ತಾರೆ. ಅದಾಗ ರಾಂಡಲ್ಫ್ ಉತ್ತರ ಇಂಗ್ಲೆಂಡಿನಲ್ಲಿ ಸೇನಾ ತರಬೇತಿ ಪಡೆಯುತ್ತಿದ್ದರು. ಯುದ್ಧ ನಿರ್ಣಾಯಕ ಹಂತ ತಲುಪಿತ್ತು.

ಜರ್ಮನಿಯ ಸೇನೆ ಫ್ರಾನ್ಸ್ ಮೇಲೆ ಸತತ ದಾಳಿ ನಡೆಸುತ್ತಿತ್ತು. ಹೀಗೇ ಮುಂದುವರೆದರೆ ಸೋಲು ಖಚಿತ ಎಂಬ ಭಾವ ಇಂಗ್ಲೆಂಡ್ ಪಾಳಯದಲ್ಲಿ ಆತಂಕ ಸೃಷ್ಟಿಸಿತ್ತು. ರಾಂಡಲ್ಫ್ ತಂದೆಯನ್ನು ನೋಡಲು ಬಂದಾಗ ಚರ್ಚಿಲ್ ತಣ್ಣನೆಯ ಭಾವದಲ್ಲಿ ಕನ್ನಡಿ ಎದುರು ನಿಂತು ಕ್ಷೌರ ಮಾಡಿಕೊಳ್ಳುತ್ತಿದ್ದರು.

ತಂದೆಯ ನಿರಾಳ ಭಾವ ನೋಡಿ ಅಚ್ಚರಿಗೊಂಡ ಮಗ ಕೇಳಿದ, ‘Can we avoid Defeat?’ ಚರ್ಚಿಲ್ ‘ಖಚಿತವಾಗಿ’ ಎಂದರು. ಮಗ ಮರುಪ್ರಶ್ನಿಸಿದ ‘ಗೆಲ್ಲುವ ಯಾವ ಮಾರ್ಗ ನಮಗೆ ಉಳಿದಿದೆ?’ ಆಗ ನುಣುಪಾದ ಗಲ್ಲ ಸವರಿಕೊಳ್ಳುತ್ತಾ ಚರ್ಚಿಲ್ ‘I shall drag the United States in’ ಎಂದಿದ್ದರು.

ಹೌದು, ಜರ್ಮನಿಯ ಶಕ್ತಿಶಾಲಿ ಸೇನೆ ಎದುರು ಗೆಲ್ಲಲು ಇಂಗ್ಲೆಂಡಿಗೆ ಅಮೆರಿಕದ ನೆರವು ಬೇಕಿತ್ತು. ಆದರೆ ಅಮೆರಿಕ ಯುದ್ಧೋತ್ಸಾಹ ತೋರುತ್ತಿರಲಿಲ್ಲ. ಆದರೆ ಚರ್ಚಿಲ್, ಅಮೆರಿಕ ಅಧ್ಯಕ್ಷ ರೂಸ್ವೆಲ್ಟ್ ಅವರ ಸ್ನೇಹ ಗಳಿಸಲು ಪ್ರಯತ್ನಿಸುತ್ತಿದ್ದರು. ತಮ್ಮ ‘Marlborough - His life and Times’ ಕೃತಿಯನ್ನು ರೂಸ್ವೆಲ್ಟ್ ಅವರಿಗೆ ಕಳುಹಿಸಿ ಮುಂದಡಿಯಿಟ್ಟಿದ್ದರು.

ಯುರೋಪಿನ ಒಂದೊಂದೇ ದೇಶವನ್ನು ಜರ್ಮನಿ ವಶಪಡಿಸಿಕೊಳ್ಳುತ್ತಿರುವಾಗ 1939ರ ಸೆಪ್ಟೆಂಬರ್ 3 ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದ ರೂಸ್ವೆಲ್ಟ್, ‘Passionately though we may desire detachment, we are forced to realize that every battle that is fought, does affect the American future’ ಎಂದು ಭಾಷಣ ಮಾಡಿದರು.

ಆಗಿನ್ನೂ ಚರ್ಚಿಲ್ ಬ್ರಿಟನ್ ಪ್ರಧಾನಿ ಆಗಿರಲಿಲ್ಲ. ಆದರೆ ಪ್ರಧಾನಿ ಚಂಬರ್ಲಿನ್, ಯುದ್ಧದ ದೃಷ್ಟಿಯಿಂದ ಪ್ರಮುಖ ಜವಾಬ್ದಾರಿಯನ್ನು ಚರ್ಚಿಲ್ ಹೆಗಲಿಗೇರಿಸಿ ಸಂಪುಟದ ಭಾಗವಾಗಿಸಿಕೊಂಡಿದ್ದರು. 1939ರ ಸೆಪ್ಟೆಂಬರ್ 11 ರಂದು ರೂಸ್ವೆಲ್ಟ್ ಆಪ್ತ ಪತ್ರವೊಂದನ್ನು ಬರೆದರು. ‘ಮೈ ಡಿಯರ್ ಚರ್ಚಿಲ್’ ಎಂದು ಆರಂಭವಾದ ಪತ್ರ ‘You can always send sealed letters through your pouch or my pouch’ ಎಂಬ ವಾಕ್ಯದೊಂದಿಗೆ ಅಂತ್ಯವಾಗಿತ್ತು. ಅಲ್ಲಿಂದಾಚೆಗೆ ಚರ್ಚಿಲ್ ಮತ್ತು ರೂಸ್ವೆಲ್ಟ್ ಸ್ನೇಹ ಗಾಢವಾಯಿತು.

ಯುದ್ಧಕ್ಕೆ ಸಂಬಂಧಿಸಿದಂತೆ ಮಾಹಿತಿ ವಿನಿಮಯ ಆರಂಭವಾಯಿತು. ಯುದ್ಧ ತಂತ್ರಗಾರಿಕೆಗೆ ಇಬ್ಬರೂ ಕೂತರು. ಆದರೂ ಅಮೆರಿಕ ಯುದ್ಧದಲ್ಲಿ ನೇರ ಭಾಗಿಯಾಗಿರಲಿಲ್ಲ. ಮೊದಲ ವಿಶ್ವ ಯುದ್ಧದಲ್ಲಿ ಬಸವಳಿದ ಮೇಲೆ ಅಮೆರಿಕ ತನಗೆ ನೇರವಾಗಿ ಸಂಬಂಧಿಸದ ಯಾವುದೇ ಯುದ್ಧ ಕುರಿತು ತಟಸ್ಥ ಧೋರಣೆ ತಳೆಯಬೇಕು ಎಂಬ ‘ನ್ಯೂಟ್ರಾಲಿಟಿ ಆ್ಯಕ್ಟ್’ ಅನ್ನು ಅನುಮೋದಿಸಿತ್ತು.

ಹಾಗಾಗಿ ಜರ್ಮನಿಯ ದಿಗ್ವಿಜಯವನ್ನು ತುಟಿಕಚ್ಚಿ ಸಹಿಸಿಕೊಂಡಿತ್ತು. ಆದರೆ ಅಷ್ಟರ ಹೊತ್ತಿಗೆ ಜಪಾನ್ ಕಾಲು ಕೆರೆದು ಪರ್ಲ್ ಹಾರ್ಬರ್ ಮೇಲೆ ದಾಳಿ ಮಾಡಿತು. ಅಮೆರಿಕ ಯುದ್ಧಕ್ಕೆ ಧುಮುಕುವುದು ಅನಿವಾರ್ಯವಾಯಿತು. ಚರ್ಚಿಲ್ ತೋಳುಗಳಲ್ಲಿ ಶಕ್ತಿ ಸಂಚಯವಾಯಿತು. ಹೀಗೆ 1939ರ ಸೆಪ್ಟೆಂಬರ್ 11ರ ಪತ್ರ ಚರ್ಚಿಲ್ - ರೂಸ್ವೆಲ್ಟ್ ಸ್ನೇಹಕ್ಕೆ ತನ್ಮೂಲಕ ಎರಡನೇ ವಿಶ್ವಯುದ್ಧಕ್ಕೆ ಹೊಸತಿರುವು ನೀಡಿತು.

ಬಿಡಿ, ಭಾರತದ ವಿಷಯದಲ್ಲಂತೂ ನಿಮಗೆ ಗೊತ್ತೇ ಇದೆ. ಸೆಪ್ಟೆಂಬರ್ 11 ಎಂದರೆ ನೆನಪಾಗುವುದೇ, 1893ರ ಆ ದಿನ. ಅದು ಭಾರತದ ವಿವೇಕ, ಮೌಲ್ಯ, ಸಾಮರ್ಥ್ಯ ಜಗತ್ತಿನ ವೇದಿಕೆಯಲ್ಲಿ ಜಾಹೀರಾದ ದಿನ. ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಗಳಾಗಿ ಅನೇಕರು ವೇದಿಕೆಯಲ್ಲಿದ್ದರು.

ರಾಘವಜೀ ಗಾಂಧಿ, ಪಿ.ಸಿ ಮಜುಂದಾರ್, ಬಿ.ಬಿ. ನಗರ್ಕರ್, ಧರ್ಮಪಾಲ್, ಪ್ರೊಫೆಸರ್ ಜಿ.ಎನ್. ಚಕ್ರವರ್ತಿ ಮುಂತಾದ ಎಲ್ಲರೂ ವಿದ್ವಾಂಸರೇ. ಆದರೆ ಜಗತ್ತಿನ ಮನಗೆದ್ದದ್ದು, ಗರ್ಜಿಸಿದ್ದು ತರುಣ ಸನ್ಯಾಸಿ ವಿವೇಕಾನಂದ. ಸಮ್ಮೇಳನದ ಬಳಿಕ ಹಲವೆಡೆ ವಿವೇಕಾನಂದರ ಭಾಷಣಗಳು ನಡೆದವು. 1893, ಸೆಪ್ಟೆಂಬರ್ 20ರ ‘ಷಿಕಾಗೊ ಟ್ರಿಬ್ಯೂನ್’ ಪತ್ರಿಕೆ ದೊಡ್ಡಕ್ಷರದಲ್ಲಿ ವರದಿ ಮಾಡಿತು, ‘Hindu Criticizes Christianity’.

ವಿವೇಕಾನಂದರು ತಮ್ಮ ಖಡಕ್ ಮಾತಿನಿಂದ ಗಳಿಸಿದ ಜನಪ್ರಿಯತೆ ಹೇಗಿತ್ತೆಂದರೆ, ಅಮೆರಿಕದಲ್ಲಿದ್ದಷ್ಟು ದಿನ ಹಲವು ನಗರಗಳಲ್ಲಿ ವೇದಾಂತ, ಗೀತಾ ಪ್ರವಚನ, ಅಮೆರಿಕನ್ನರ ಮನೆಯಲ್ಲಿ ವಾಸ್ತವ್ಯ, ಚರ್ಚುಗಳಲ್ಲಿ ಚರ್ಚೆ– ಸಂವಾದ ನಡೆದವು. ಮುಖ್ಯವಾಗಿ ಎಲ್ಲೆಡೆಯೂ ವಿವೇಕಾನಂದರು ಭಾರತದ ಬಗೆಗಿನ ತಪ್ಪು ತಿಳಿವಳಿಕೆಗಳನ್ನು ದೂರಮಾಡುವ, ದೇಶದ ಘನತೆಯನ್ನು ಎತ್ತಿಹಿಡಿಯುವ ಮಾತನ್ನೇ ಆಡಿದರು.

ಅಮೆರಿಕದ ವಾಷಿಂಗ್ಟನ್ ಪೋಸ್ಟ್ , ಷಿಕಾಗೊ ಟ್ರಿಬ್ಯೂನ್, ಮಾರ್ನಿಂಗ್ ಹೆರಾಲ್ಡ್ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾದ ಅವರ ಸಂದರ್ಶನಗಳನ್ನು, ಪ್ರವಚನದ, ಸಂವಾದದ ಆಯ್ದ ಭಾಗಗಳನ್ನು ಗಮನಿಸಿದರೆ ಅವರಿಗೆ ಸಿಕ್ಕ ಮನ್ನಣೆಯ ಅರಿವಾಗುತ್ತದೆ.

ಗಾಂಧಿ, ಸುಭಾಷ್, ರಾಜಾಜಿ, ಅರವಿಂದರಂತಹ ಮಹನೀಯರಿಗೂ ಸ್ಫೂರ್ತಿಯಾಗಿದ್ದ ವಿವೇಕಾನಂದ, ಭಾರತದ ಘನತೆಯನ್ನು ಜಾಗತಿಕ ವೇದಿಕೆಯಲ್ಲಿ ಎತ್ತಿ ಹಿಡಿದು, ಭಾರತೀಯರಲ್ಲಿ ಸ್ವಾಭಿಮಾನ ಜಾಗೃತಗೊಳಿಸಿದ ದಿನ ಸೆಪ್ಟೆಂಬರ್ 11.

ಈ ವರ್ಷ ಅವರ ಆ ಐತಿಹಾಸಿಕ ಭಾಷಣಕ್ಕೆ 125 ತುಂಬಿತು ಎಂಬುದು ಮತ್ತೊಂದು ಹಿಗ್ಗು. ಹೀಗೆ 9/11 ಮೂರು ರಾಷ್ಟ್ರಗಳ ಇತಿಹಾಸ ಪುಟಗಳಲ್ಲಿ ಸಂಕಟ, ಸ್ನೇಹ, ಸಾಮರ್ಥ್ಯ ಪ್ರಕಟಗೊಂಡ ಸ್ಮರಣಾರ್ಹ ದಿನವಾಗಿ ಗುರುತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT