ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲ್ಫೀಗೆ 24 ಮೆಗಾಪಿಕ್ಸೆಲ್!

Last Updated 11 ಜನವರಿ 2018, 10:58 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ ತಯಾರಿಸುವ ಕಂಪನಿಗಳಲ್ಲಿ ವಿವೊ ಕೂಡ ಒಂದು. ಈ ಅಂಕಣದಲ್ಲಿ ವಿವೊ ಕಂಪನಿಯ ಕೆಲವು ಸ್ಮಾರ್ಟ್‌ಫೋನ್‌ಗಳ ವಿಮರ್ಶೆ ನೀಡಲಾಗಿತ್ತು. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಫೋನ್‌ಗಳಂತೆ ವಿವೊ ಕಂಪನಿಯ ಫೋನ್‌ಗಳ ವಿನ್ಯಾಸ ಮತ್ತು ದೇಹದ ಗುಣಮಟ್ಟ ಕೂಡ ಉತ್ತಮವಾಗಿವೆ. ಇದೇ ಕಂಪನಿಯ ವಿವೊ ವಿ7 (Vivo V7) ಸ್ಮಾರ್ಟ್‌ಫೋನ್ ನಮ್ಮ ಈ ವಾರದ ಅತಿಥಿ.

ಇತ್ತೀಚೆಗಿನ ಬಹುತೇಕ ಮಧ್ಯಮ ಮತ್ತು ಸ್ವಲ್ಪ ಮೇಲ್ಮಟ್ಟದ ಫೋನ್‌ಗಳಂತೆ ವಿವೊ ಫೋನ್‌ಗಳ ದೇಹದ ರಚನೆ ಮತ್ತು ವಿನ್ಯಾಸವೂ ತೃಪ್ತಿದಾಯಕವಾಗಿದೆ. ಹಿಂಭಾಗ ಸ್ವಲ್ಪ ಉಬ್ಬಿದ್ದು ತಲೆದಿಂಬಿನಾಕಾರದಲ್ಲಿದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿಗಳಿವೆ. ಎಡಭಾಗದಲ್ಲಿ ಸಿಮ್ ಕಾರ್ಡ್ ಮತ್ತು ಮೆಮೊರಿ ಹಾಕಲು ಹೊರಬರುವ ಟ್ರೇ ಇದೆ.

ಎರಡು ನ್ಯಾನೊಸಿಮ್ ಮತ್ತು ಒಂದು ಮೈಕ್ರೊಸಿಮ್ ಕಾರ್ಡ್ ಹಾಕಬಹುದು. ಇದು bezelless ಫೋನ್ ಅಂದರೆ ಪರದೆ ಬಹುಪಾಲು ಜಾಗವನ್ನು ಆಕ್ರಮಿಸಿದೆ. ಪರದೆ ಮತ್ತು ದೇಹದ ಗಾತ್ರಗಳ ಅನುಪಾತ ಉತ್ತಮವಾಗಿದೆ. ಮುಂದುಗಡೆ ಸ್ಥಳವಿಲ್ಲದಿರುವುದರಿಂದ ಬೆರಳಚ್ಚು ಸ್ಕ್ಯಾನರ್ ಹಿಂಭಾಗದಲ್ಲಿದೆ. ಹಿಂಭಾಗದ ಮೂಲೆಯಲ್ಲಿ ಕ್ಯಾಮೆರಾ ಮತ್ತು ಫ್ಲಾಶ್ ಇವೆ. ಮುಂಭಾಗದಲ್ಲಿ ಕೆಳಭಾಗದಲ್ಲಿ ಮೂರು ಸಾಫ್ಟ್ ಬಟನ್‌ಗಳಿಲ್ಲ. ಬದಲಿಗೆ ಪರದೆಯಲ್ಲೇ ಅಗತ್ಯಬಿದ್ದಾಗ ಅವು ಮೂಡಿಬರುತ್ತವೆ. ಹಿಂಬದಿಯ ಕವಚ ತೆಗೆಯಲಿಕ್ಕಾಗುವುದಿಲ್ಲ. ಈ ಕವಚ ಸ್ವಲ್ಪ ನಯವಾಗಿದೆ.

ಕೈಯಿಂದ ಜಾರಿಬೀಳದಂತೆ ಅಧಿಕ ಕವಚ ಹಾಕಿಕೊಂಡರೆ ಉತ್ತಮ. ಒಂದು ಕವಚವನ್ನೂ ನೀಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಕೈಯಲ್ಲಿ ಹಿಡಿದಾಗ ಮೇಲ್ದರ್ಜೆಯ ಫೋನ್ ಹಿಡಿದುಕೊಂಡಂತೆ ಭಾಸವಾಗುತ್ತದೆ. ಈ ವಿಭಾಗದಲ್ಲಿ ಇತರೆ ವಿವೊ ಫೋನ್‌ಗಳಂತೆ ಇದಕ್ಕೂ ಪೂರ್ತಿ ಮಾರ್ಕು ನೀಡಬಹುದು.

ಕೆಲಸದ ವೇಗ ಪರವಾಗಿಲ್ಲ. ಇದರ ಅಂಟುಟು ಬೆಂಚ್‌ಮಾರ್ಕ್ 55,178 ಇದೆ. ಅಂದರೆ ಇದು ಮಧ್ಯಮ ವೇಗದ ಫೋನ್. ಮಾಮೂಲಿ ಆಟ ಮತ್ತು ಮೂರು ಆಯಾಮಗಳ ಆಟ ಆಡುವ ಅನುಭವ ತೃಪ್ತಿದಾಯಕವಾಗಿದೆ. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೊಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವಿಡಿಯೊಗಳು ಸರಿಯಾಗಿ ಪ್ಲೇ ಆಗುವುದಿಲ್ಲ. ಇತರೆ ವಿವೊ ಫೋನ್‌ಗಳಂತೆ ಇದರ ಆಡಿಯೊ ಇಂಜಿನ್ ಕೂಡ ಚೆನ್ನಾಗಿದೆ. ಇಯರ್‌ಫೋನ್ ನೀಡಿದ್ದಾರೆ. ಆದರೆ ಅದು ಚೆನ್ನಾಗಿಲ್ಲ. ನಿಮ್ಮಲ್ಲಿ ಉತ್ತಮ ಇಯರ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿ ಉತ್ತಮ ಗುಣಮಟ್ಟದ ಸಂಗೀತ ಆಲಿಸಬಹುದು.

ಇದರಲ್ಲಿ 16 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 24 ಮೆಗಾಪಿಕ್ಸೆಲ್‌ನ ಸ್ವಂತೀ ಕ್ಯಾಮೆರಾಗಳಿವೆ. ಕ್ಯಾಮೆರಾದಲ್ಲಿ ಹಲವು ಆಯ್ಕೆಗಳಿವೆ. ಮ್ಯಾನ್ಯುವಲ್ ಆಯ್ಕೆ ಕೂಡ ಇದೆ. ಪ್ರಾಥಮಿಕ ಕ್ಯಾಮೆರಾದಲ್ಲಿ ತೆಗೆದ ಫೋಟೊಗಳ ಗುಣಮಟ್ಟ ತೃಪ್ತಿದಾಯಕವಾಗಿದೆ. ಈ ಫೋನಿನ ವೈಶಿಷ್ಟ್ಯವಿರುವುದು ಇದರ ಸ್ವಂತೀ ಕ್ಯಾಮೆರಾದಲ್ಲಿ. ಅದು 24 ಮೆಗಾಪಿಕ್ಸೆಲ್‌ನದು.

ಅತ್ಯುತ್ತಮ ಸ್ವಂತೀ (selfie) ಬೇಕು ಎನ್ನುವವರಿಗೆ ಇದು ಉತ್ತಮ ಕ್ಯಾಮೆರಾ ಫೋನ್ ಎನ್ನಬಹುದು. ಇದರ ಸ್ವಂತೀ ಕ್ಯಾಮೆರಾದಲ್ಲಿ ಒಂದು ಸಮಸ್ಯೆ ಇದೆ. ಅದು ನಿಮ್ಮ ಮುಖವನ್ನು ಅತಿಯಾಗಿ ಸುಂದರ ಮಾಡುತ್ತದೆ. ಅದರಲ್ಲಿ ತೆಗೆದ ಸ್ವಂತೀ ಫೋಟೊ ನೋಡಿದರೆ ನೀವು ಈಗಷ್ಟೆ ಬ್ಯೂಟಿ ಪಾರ್ಲರಿನಿಂದ ಬಂದಿದ್ದೀರಿ ಎಂಬ ಭಾವನೆ ಬರುತ್ತದೆ! ಅದು ಹಾಗೆ ಮಾಡಬಾರದೆಂದಿದ್ದರೆ ಆಯ್ಕೆಗಳಲ್ಲಿ ತುಂಬ ತಡಕಾಡಬೇಕು. ಪ್ರಾಥಮಿಕ ಕ್ಯಾಮೆರಾವೂ ಚೆನ್ನಾಗಿರುವ ಕಾರಣ ನೀಡುವ ಹಣಕ್ಕೆ ತೃಪ್ತಿ ನೀಡುವ ಕ್ಯಾಮೆರಾ ಫೋನ್ ಬೇಕು ಎನ್ನುವವರು ಇದನ್ನು ಕೊಳ್ಳಬಹುದು.

ಇತ್ತೀಚೆಗಿನ ಕೆಲವು ಫೋನ್‌ಗಳಲ್ಲಿರುವಂತೆ ಈ ಫೋನಿನಲ್ಲೂ ಮುಖವನ್ನು ಗುರುತುಹಿಡಿಯುವ ಸವಲತ್ತಿದೆ. ನಿಮ್ಮ ಮುಖವನ್ನೇ ಪಾಸ್‌ವರ್ಡ್ ಮಾದರಿಯಲ್ಲಿ ಬಳಸಬಹುದು. ಅಂದರೆ ಫೋನ್ ಲಾಕ್ ಆಗಿದ್ದಾಗ ಅದನ್ನು ನೋಡಿದರೆ ಅದು ಅನ್‌ಲಾಕ್ ಆಗುತ್ತದೆ. ಮುಖವನ್ನು ಗುರುತು ಹಿಡಿಯುವ (face recognition) ವ್ಯವಸ್ಥೆ ಈ ಫೋನಿನಲ್ಲಿ ನಿಜಕ್ಕೂ ಉತ್ತಮವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಒಂದು ಮಟ್ಟಿಗೆ ಚೆನ್ನಾಗಿರುವ ರಚನೆ ಮತ್ತು ವಿನ್ಯಾಸ, ಕೈಯಲ್ಲಿ ಹಿಡಿದಾಗ ಉತ್ತಮ ಅನುಭವ ನೀಡುವ, ಉತ್ತಮ ಸ್ವಂತೀ ಕ್ಯಾಮೆರಾ ಮತ್ತು ಆಡಿಯೊ ಎಲ್ಲ ಇರುವ ಫೋನ್ ಎನ್ನಬಹುದು.

ವಾರದ ಆ್ಯಪ್‌: ಭವಿಷ್ಯ ಮತ್ತು ಹಸ್ತಸಾಮುದ್ರಿಕ

ಫಲಜ್ಯೋತಿಷ್ಯ ಎಷ್ಟು ಸತ್ಯ ಎಂಬುದರ ಚರ್ಚೆ ಇಲ್ಲಿ ಬೇಡ. ಆದರೆ ಅದನ್ನು ನಂಬುವವರು ಜಗತ್ತಿನಾದ್ಯಂತ ಇದ್ದಾರೆ. ಜನ್ಮದಿನಾಂಕದ ಪ್ರಕಾರ, ಹುಟ್ಟಿನ ಸಮಯದಲ್ಲಿ ಆಕಾಶದಲ್ಲಿದ್ದ ಗ್ರಹಗಳ ಪ್ರಕಾರ, ಕುಂಡಲಿ ಪ್ರಕಾರ ಎಲ್ಲ ಜ್ಯೋತಿಷ್ಯ ಹೇಳಲಾಗುತ್ತದೆ. ಅಂಗೈಯಲ್ಲಿನ ರೇಖೆಗಳ ಪ್ರಕಾರ ವ್ಯಕ್ತಿತ್ವ ಮತ್ತು ಭವಿಷ್ಯ ಹೇಳುವುದು ಹಸ್ತಸಾಮುದ್ರಿಕ.

ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Alpha Horoscope - Free Daily Forecast & Palmistry ಎಂದು ಹುಡುಕಿದರೆ ನಿಮಗೆ ಒಂದು ಕಿರುತಂತ್ರಾಂಶ (ಆ್ಯಪ್) ದೊರೆಯುತ್ತದೆ. ಇದು ದೈನಿಕ, ವಾರದ, ತಿಂಗಳಿನ ಮತ್ತು ವರ್ಷದ ಭವಿಷ್ಯ ತಿಳಿಸುತ್ತದೆ. ಇದಕ್ಕಾಗಿ ನೀವು ನಿಮ್ಮ ಜನ್ಮದಿನಾಂಕ ನೀಡಬೇಕು. ಇದರ ವೈಶಿಷ್ಟ್ಯವೆಂದರೆ ಇದು ನಿಮ್ಮ ಅಂಗೈಯ ಫೋಟೊ ತೆಗೆದು ಗೆರೆಗಳನ್ನು ಗುರುತಿಸಿ ನಿಮ್ಮ ವ್ಯಕ್ತಿತ್ವ ಮತ್ತು ಭವಿಷ್ಯ ತಿಳಿಸುತ್ತದೆ. ಈ ಕಿರುತಂತ್ರಾಂಶವನ್ನು http://bit.ly/gadgetloka311 ಜಾಲತಾಣದ ಮೂಲಕವೂ ಪಡೆಯಬಹುದು.

ಗ್ಯಾಜೆಟ್‌ ಸಲಹೆ

ಶಶಾಂಕ ಲಿಂಬಿಕಾಯಿ ಅವರ ಪ್ರಶ್ನೆ: ನೀವು ಯಾಕೆ ಆ್ಯಪಲ್ ಗ್ಯಾಜೆಟ್‌ಗಳ ಬಗ್ಗೆ ಬರೆಯುವುದಿಲ್ಲ ಮತ್ತು ಐಫೋನ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉ: ನಾನು ನನಗೆ ವಿಮರ್ಶೆಗೆ ಕಳುಹಿಸಿದ ಅಥವಾ ನಾನೇ ಕೊಂಡುಕೊಂಡು ಬಳಸಿದ ಗ್ಯಾಜೆಟ್‌ಗಳ ಬಗ್ಗೆ ಮಾತ್ರ ಬರೆಯುವುದು. ಆ್ಯಪಲ್‌ನವರು ಇದು ತನಕ ಯಾವುದೇ ಗ್ಯಾಜೆಟ್ ವಿಮರ್ಶೆಗೆ ನೀಡಿಲ್ಲ. ನನ್ನ ಪ್ರಕಾರ ಐಫೋನ್ ಅನವಶ್ಯಕವಾಗಿ ಅತಿ ದುಬಾರಿ ಫೋನ್. ಅದರ ಅರ್ಧ ಬೆಲೆಗೆ ಅಷ್ಟೇ ಉತ್ತಮವಾದ ಹಲವು ಆ್ಯಂಡ್ರಾಯ್ಡ್ ಫೋನ್‌ಗಳು ಮಾರುಕಟ್ಟೆಯಲ್ಲಿವೆ. ಉದಾಹರಣೆಗೆ ಒನ್‌ಪ್ಲಸ್. ಆ್ಯಪಲ್‌ನವರ ಕೆಲವು ವ್ಯವಹಾರದ ನೀತಿಗಳು ನನಗೆ ಸಮ್ಮತವಿಲ್ಲ. ಅವುಗಳ ಬಗ್ಗೆ ಒಂದು ಪೂರ್ತಿ ಅಂಕಣವನ್ನೇ ಬರೆಯಬೇಕು.

ಗ್ಯಾಜೆಟ್‌ ಪದ: Bezelless = ಅಂಚುರಹಿತ

ಸ್ಮಾರ್ಟ್‌ಫೋನ್ ಪರದೆಗಳನ್ನು ಸಾಮಾನ್ಯವಾಗಿ ಒಂದು ಅಂಚುಪಟ್ಟಿಯ (ಫ್ರೇಂ) ಒಳಗೆ ಕುಳ್ಳಿರಿಸಿರುತ್ತಾರೆ. ಈ ಪಟ್ಟಿಯ ಅಗಲದಿಂದಾಗಿ ಫೋನಿನ ಪರದೆಯ ಮತ್ತು ದೇಹದ ಅನುಪಾತ ಕಡಿಮೆಯಾಗುತ್ತದೆ. ಅಂದರೆ ನಮಗೆ ವೀಕ್ಷಣೆಗೆ ಸಿಗುವ ಪರದೆ ಫೋನಿನ ಗಾತ್ರಕ್ಕೆ ಹೋಲಿಸಿದಾಗ ತುಂಬ ಕಡಿಮೆ ಆಗಿರುತ್ತದೆ. ಈ ಅಂಚುಪಟ್ಟಿಯನ್ನು ತೆಗೆದುಹಾಕಿದಾಗ ಅದು bezelless ಅರ್ಥಾತ್ ಅಂಚುರಹಿತ ಎನಿಸಿಕೊಳ್ಳುತ್ತದೆ. ಈಗಿನ ಹಲವು ಹೊಸ ಮಾದರಿಯ ಫೋನ್‌ಗಳು ಅಂಚುರಹಿತವಾಗಿದ್ದು ಉತ್ತಮವಾದ ಪರದೆಯ ಮತ್ತು ದೇಹದ ಗಾತ್ರಗಳ ಅನುಪಾತವನ್ನು ಹೊಂದಿರುತ್ತವೆ.

ಗ್ಯಾಜೆಟ್‌ ತರ್ಲೆನಿಮ್ಮ ಮುಖವನ್ನು ಸುಂದರವಾಗಿಸಬೇಕೇ? ಅದಕ್ಕಾಗಿ ದುಬಾರಿ ಸೌಂದರ್ಯವರ್ಧಕಗಳು ಬೇಡ, ಬ್ಯೂಟಿ ಪಾರ್ಲರಿಗೆ ಹೋಗುವುದೂ ಬೇಡ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಸ್ವಂತೀ ಫೋನ್‌ಗಳನ್ನು ಬಳಸಿ ಸ್ವಂತೀ ತೆಗೆಯಿರಿ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT