ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಪ್ಪಿನ ಚಟವ ಮೀರಿದ ಬಂಧವಿಲ್ಲ ಕಾಣಿರೋ!

Last Updated 27 ಅಕ್ಟೋಬರ್ 2016, 4:37 IST
ಅಕ್ಷರ ಗಾತ್ರ
ಸುಳಿಯಲ್ಲಿ ಸಿಲುಕಿ ಜೀವನ ಮುಗಿಯುತ್ತೆ ಅನ್ನುವಾಗ ಬಚಾವಾಗಿ ಹರಿಗೋಲು ಓನರ್ ಸಿದ್ದನ ಹತ್ತಿರ ಬಯ್ಯಿಸಿಕೊಂಡು ಮತ್ತೆ ಪುರಂದರ ಮಂಟಪದ ಕಡೆ ಕವಿತಾ ಮತ್ತು ವಿಜಿ ನಡೆದರು.
 
ಮಾತಂಗ ಬೆಟ್ಟ ಹತ್ತಿ ಸೂರ್ಯ ಕಂತುವ ತನಕ ಕೂತು ಆಕಾಶವೆಲ್ಲ ಬಣ್ಣ ಎರಚಾಡುವುದನ್ನು ನೋಡಿ ಅಚ್ಚರಿ ಪಡಬೇಕಂತ ವಿಜಿ ಕಾಯುತ್ತಿದ್ದಳು. ಆದರೆ ಕವಿತಾಗೆ ಅದ್ಯಾವ ಸೀಮೆ ಬಣ್ಣ ಅನ್ನಿಸಿತ್ತು. ‘ಅಯ್ಯ... ದಿನಾ ಸೂರ್ಯ ಮುಳುಗೋದು ಅದೇ ಬಣ್ಣದಲ್ಲೇ. ಬಾ ಈವತ್ತು ನಿನಗೆ ಹೊಸ ಬಣ್ಣ ತೋರುಸ್ತೀನಿ...’ ಅಂತ ಕರೆದಳು.
 
ಆ ಹೊಸ ಬಣ್ಣ ತೊರಿಸೋದರಲ್ಲಿ ಹುಸೇನನ ಪಾತ್ರವೂ ಇದೆ ಎನ್ನುವುದು ವಿಜಿಗೆ ಅರಿವಾದರೂ ಇದ್ಯಾವ ಪರಿಯ ಅನುಭವ ಎನ್ನುವುದು ಸ್ಪಷ್ಟವಾಗದೆ ಒದ್ದಾಡಿದಳು. 
 
‘ಕವಿ ಹೊಸ ಬಣ್ಣ ಸರಿ. ಆದರೆ ಯಾವ್ ಥರ?’ ‘ಅಂದ್ರೆ?’ ‘ಹೊಸ ಎಕ್ಸ್‌ಪೀರಿಯನ್ಸು ಅಂತೀಯಲ್ಲ? ಯಾವ್ ಥರದ್ದು ಅದು?’ ‘ಹೆದರಿಕೊಂಡಿದೀಯಾ? ನಾನೇನಾದರೂ ಮಾಡಿಬಿಟ್ರೆ ಅಂತ ಭಯಾನಾ?’
 
‘ನೀನೇನೂ ಮಾಡಲಿಕ್ಕಿಲ್ಲ ಅಂತ ನಂಬಿಕೆ ಇದೆ. ಆದರೆ ಹೊಸ ಬಣ್ಣ ಯಾವ ಥರದ್ದು ಅಂತ ಗೊತ್ತಾಗದೆ ನಿನ್ನ ಜೊತೆ ಬರಕ್ಕೆ ಹೆದರಿಕೆ. ನಿನಗೇನು? ನಿಮ್ಮಪ್ಪ ಅಮ್ಮ ಎಲ್ಲೋ ಇದ್ದಾರೆ, ಯಾರಿಗೂ ಉತ್ತರಿಸಬೇಕಿಲ್ಲ...’
 
‘ಥತ್ತೇರಿ! ಪುಕ್ಕುಲೀನಾ ತಂದು!’ ‘ನೀನು ಏನು ಬೇಕಾರೂ ಅಂದುಕೋ. ಅದೇನು ಅಂತ ಗೊತ್ತಾಗೋವರೆಗೂ ನಾನು ನಿರ್ಧಾರ ಮಾಡಲಾರೆ. ನೀನು ಬೇಕಾದರೆ ಏನಾದ್ರೂ ಮಾಡ್ಕೊ. ನಾನು ಸುಮ್ಮನೆ ನೋಡ್ತೀನಿ...’
 
‘ಲೈ ಲೈ ಜೊತೇಲಿ ಕರ್ಕೊಂಬಂದು ನಿನಗೆ ತೊಂದರೆ ಆಗೋ ಹಾಗೆ ಮಾಡ್ತೀನೇನೆ? ನನ್ನ ಮೇಲೆ ಅನುಮಾನವೇನೆ ಹುಡುಗೀ?’ ‘ಕವಾ, ಅನುಮಾನ ಅವಮಾನ ಏನು ಬೇಕಾರೂ ಅಂದ್ಕೋ. ನಿನಗೆ ಹರ್ಟ್ ಆಗುತ್ತೆ ಅಂತ ನಾನು ನನ್ನ ಸೇಫ್ಟಿ ಬಗ್ಗೆ ಅಲಕ್ಷ್ಯ ಮಾಡಲಾರೆ.’
 
‘ಸರಿ ಬಿಡು... ನಿನಗೆ ಬೇಡ ಅಂದ್ರೆ ಬೇಡ...’ ‘ಬೇಡ ಅನ್ನಲಿಲ್ಲ ನಾನು. ಅದೇನು ವಿಷಯ ಹೇಳು ಅಂತ ಮಾತ್ರ ಕೇಳ್ತಿರೋದು. ನೀನು ಒಗಟೊಗಟಾಗಿ ಮಾತಾಡ್ತಾ ಇರೋದ್ರಿಂದ ನಿನ್ ಹೊಸ ಬಣ್ಣದ್ ಸಾವಾಸ ಬೇಡ ಅಂದೆ ಅಷ್ಟೆ’
 
‘ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಕೇಸಾ?’ ‘ಅಲ್ಲ... ‘ಬೆಟರ್ ಸೇಫ್ ದ್ಯಾನ್ ಸಾರಿ’ ಕೇಸು’ ‘ಸರಿ ಹಾಗಾದ್ರೆ ಕೇಳು... ಹುಸೇನ ತಂದು ಕೊಡ್ತೀನಿ ಅಂದನಲ್ಲ? ಅದಕ್ಕೆ ಭಂಗಿ ಅಂತಾರೆ. ಒಂಥರಾ ಸೊಪ್ಪು ಅದು. ಬ್ಯಾನ್ ಆಗಿರೋ ವಸ್ತು...’ 
 
‘ಮತ್ತೆ ಹುಸೇನನಿಗೆ ಎಲ್ಲಿಂದ ಸಿಗುತ್ತೆ?’ ‘ಅವನೂ ಬ್ಯಾನ್ ಆಗಿರೋ ವಸ್ತು ಅಲ್ವಾ? ಅವನ ನೆಲದಿಂದ ಅವನೇ ಬ್ಯಾನ್ ಆಗಿಬಿಟ್ಟಿದಾನೆ! ಅದಕ್ಕೆ ಭಂಗಿ ಅವನನ್ನೇ ಹುಡುಕ್ಕೊಂಡು ಬರುತ್ತೆ...’ ಎಂದು ನಗಲು ಶುರು ಮಾಡಿದಳು ಕವಿತಾ.
 
‘ಸರಿಯಾಗಿ ಹೇಳ್ತಿಯೋ ಇಲ್ವೋ? ಕಾನೂನಿಗೆ ವಿರುದ್ಧವಾದದ್ದನ್ನು ಹುಸೇನ ಯಾಕೆ ಮಾಡ್ತಾನೆ? ರಿಸ್ಕಿ ಅಲ್ವಾ?’ ‘ರಿಸ್ಕಿನೇ. ಅದರಲ್ಲಿ ಅನುಮಾನವಿಲ್ಲ. ಆದರೆ ಹುಸೇನನಿಗೆ ಕಾನೂನುಬದ್ಧವಾದದ್ದನ್ನ ಮಾಡಕ್ಕೆ ಸಾಕಷ್ಟು ಅವಕಾಶ ಇಲ್ಲ. ಮಾಡಿದರೂ ಅವನಿಗೆ ಅದರಲ್ಲಿ ಒಂದು ಹೊತ್ತಿನ ಊಟ ಹುಟ್ಟಲ್ಲ. ಅದಕ್ಕೇ ಹುಸೇನನಂಥವರು ಕಾನೂನು ಬಾಹಿರ ಕೆಲಸಕ್ಕೆ ಕೈ ಹಾಕ್ತಾರೆ. ಇವರೆಲ್ಲ ಪಳಗಿರೋ ಕೈ...’
 
‘ಮತ್ತೆ ಶಾಲು-ಪಾಲು ಹರಳು ಅಂತ ಏನೇನೋ ಮಾರುತ್ತಿದ್ದಾನೆ? ಅದರಲ್ಲಿ ದುಡ್ಡು ಹುಟ್ಟಲ್ವಾ?’ ‘ಅಯ್ಯೋ ಹುಚ್ಚಿ! ಅದರಲ್ಲಿ ಅವನ ಟೀ ಖರ್ಚೂ ಹುಟ್ಟಲ್ಲ! ಆ ಶಾಲು ಹರಳುಗಳು ಯಾವೂ ಅಸಲಿ ಅಲ್ಲ. ಅದಕ್ಕೇ ಅವಕ್ಕೆ ಸಿಕ್ಕಾಪಟ್ಟೆ ರೇಟು. ಅವನ ಹತ್ರ ಬರೋರು ಬೇರೆ ವ್ಯಾಪಾರಕ್ಕೇ ಬರೋದು!’
 
ಮುಳುಗುತ್ತಿರುವ ಸೂರ್ಯ ಭೂಮಿಯನ್ನು ಕಳ್ಳರ ಕೆಲಸಕ್ಕೆ ರಾತ್ರಿಯನ್ನು ಸಜ್ಜುಗೊಳಿಸುತ್ತಿರುವಾಗ ಮನೆ ಬಿಟ್ಟು ಬಂದ ಹುಸೇನನ ಬಗ್ಗೆ ಕವಿತಾ ಹೇಳಿದ್ದು ಸೃಷ್ಟಿಯ ರಹಸ್ಯವೊಂದನ್ನು ಬಿಚ್ಚಿಟ್ಟಷ್ಟೇ ಅಚ್ಚರಿಯಿಂದ ತುಂಬಿತ್ತು.
 
ಭೂಮಿಯ ನಿರ್ವ್ಯಾಜ ಪ್ರೀತಿಯನ್ನು ಧಿಕ್ಕರಿಸಿ ಅವಳನ್ನು ಕತ್ತಲು ಮಾಡಿ ತನ್ನ ಗಮ್ಯದತ್ತ ಹೊರಟಿದ್ದ ಈ ಸೂರ್ಯನೆಂಬ ಅಹಂಕಾರದ ಬೆಂಕಿಯ ಉಂಡೆ, ಮರುಬೆಳಿಗ್ಗೆ ಅವಳ ಮನೆಯ ಕದ ತಟ್ಟಿ ರಮಿಸಿ ಅರಳಿಸಿ ಹೊಳೆಹೊಳೆಯಿಸಿ ಸಿಟ್ಟು ಹೆಚ್ಚಾಗುವಂತೆ ಬೇಯಿಸಿ ಮತ್ತೆ ಹುಚ್ಚನಂತೆ ಅಲೆಯುತ್ತಾ ಇನ್ನೆಲ್ಲೋ ಹೋಗುತ್ತಿದ್ದ.
 
ಪೇಟೆಯ ಒಂದು ರೀತಿಯ ಆಕಾರ-ನಿರ್ದಿಷ್ಟತೆ-ಸಮಯಪಾಲನೆಯ ಜೀವನದಲ್ಲಿ ಸೂರ್ಯನ ಚಲನೆ ಬರೀ ಘಟನೆ ಇಲ್ಲವೇ ಗಡಿಯಾರದ ಮುಳ್ಳು ಮಾತ್ರ. ಪೇಟೆಯ ಜನಕ್ಕೆ ಅವ ಕಂಡೂ ಕಾಣದ ಅನಾಥ. 
 
ಆದರೆ ಹಂಪಿಯ ಅವಶೇಷಗಳ ಮೇಲೆ ಬೆಳಗುವ ಸೂರ್ಯನಿಗೆ ಘನ ಆರ್ದ್ರತೆಯೊಂದಿತ್ತು. ಅವನ ಬರುವಿಕೆ-ಇರುವಿಕೆ-ಹೋಗುವಿಕೆ ಎಲ್ಲವೂ ಕರಿಕಲ್ಲುಬಂಡೆಗಳ ಬೇಗೆಗೆ ರಣಕಳೆಯೊಂದನ್ನು ತಂದುಕೊಡುತ್ತಿತ್ತು. ಅವನ ಕಿರಣಗಳು ಹುಟ್ಟುತ್ತಾ ಮಗುವಿನ ನಗುವಿನಂತೆ ಅನಾಯಾಸ-ಅಪ್ರತಿಮ ಮುಗ್ಧತೆ ಹೊತ್ತಿದ್ದರೆ, ಸೂರ್ಯ ಮೇಲೇರಿದಂತೆಲ್ಲ ಆ ನಗು ಚೂಪಾದ ಭರ್ಜಿಯಾಗಿ ಬದಲಾಗುತ್ತಿತ್ತು. ಮಳೆಗಾಲವಾದರೇನೋ ಸರಿಯೇ.
 
ಉಳಿದೆಲ್ಲ ಕಾಲಕ್ಕೂ ಅವನು ಹುಟ್ಟಿಸುತ್ತಿದ್ದ ಉರಿ ಸಹಿಸಲಸಾಧ್ಯ. ಅನ್ನವಿಲ್ಲದ ಸಾವಿನ ಮನೆಯಲ್ಲಿ ಹಸಿದ ಮಗುವೊಂದು ರೊಚ್ಚಿಗೆದ್ದು ತಿರುತಿರುಗಿ ಅತ್ತಂತೆ ಸೂರ್ಯ ಹಂಪಿಯನ್ನು ಸುಡುತ್ತಿದ್ದ. ಭಗ್ನಗೊಂಡ ಕಲ್ಲಿನ ದೇವರುಗಳು ಆರ್ತವಾಗಿ ಮೊರೆಯಿಟ್ಟಂತೆ ಅರವತ್ತು ಕಿಲೋಮೀಟರ್ ವ್ಯಾಸವುಳ್ಳ ಆ ಊರು ಒಂದೊಮ್ಮೆ ವೈಭೋಗದ ಸುಪ್ಪತ್ತಿಗೆಯಾಗಿತ್ತು ಎನ್ನುವುದನ್ನು ನಂಬಲೂ ಸಾಧ್ಯವಿಲ್ಲದಂತೆ ಇಂದು ಕಲ್ಲಿನ ರಾಶಿಯಾಗಿ ಕುಳಿತಿತ್ತು.
 
ಹಂಪಿಗೆ ಬಂದು ಆ ಅವಶೇಷಗಳನ್ನು ನೋಡಿದಾಗಲೆಲ್ಲ ಕವಿತಾಗೆ ಯಾರೋ ನಿನ್ನೆ ತಾನೇ ಬಂದು ಎಲ್ಲವನ್ನೂ ಮುಗಿಸಿದ್ದಾರೇನೋ ಎನ್ನುವಂತೆ ದುಃಖವನ್ನುಂಟುಮಾಡುತ್ತಿತ್ತು. ಕ್ಯಾಮೆರಾ ಲೆನ್ಸಿನಲ್ಲೂ ಕಣ್ಣೀರು ತರಿಸಿಬಿಡಬಲ್ಲಷ್ಟು ಆಳವಾಗಿದ್ದವು ಅಲ್ಲಿ ಕಾಣುತ್ತಿದ್ದ ದೃಶ್ಯಗಳು.
 
ಅಲ್ಲೊಬ್ಬ ಮಂಜ... ಸಣ್ಣ ಹುಡುಗ. ನಳನಳಿಸುವ ಮುಗ್ಧ ಬಾಲ್ಯವನ್ನು ಹಂಪಿಯ ‘ಗತವೈಭವ’ವನ್ನು ಸಾರುವ ಟೂರಿಸಂಗೆ ಕಳೆದುಕೊಂಡವ. ‘ಯಾಕೋ ಸ್ಕೂಲಿಗೆ ಹೋಗಲ್ಲ?’ ಅಂತ ಕೇಳಿದ್ರೆ ‘ಅಲ್ಲಿ ಬರೀ ಕನ್ನಡ ಕಲಿಸ್ತಾರೆ. ನಂಗೆ ನೋಡಿ, ಫ್ರೆಂಚು, ಇಟಲಿ, ಇಂಗ್ಲೀಷು, ಹಿಂದಿ ಎಲ್ಲಾ ಬರುತ್ತೆ. ಜೊತೆಗೆ ಕನ್ನಡನೂ ಬರುತ್ತೆ’ ಅಂತ ಹುಚ್ಚುಚ್ಚಾರ ನಗುತ್ತಿದ್ದ.
 
ಎಲ್ಲವೂ ಸೇರಿಕೊಂಡು ಹಂಪಿಯ ಗಾಳಿಯಲ್ಲೇ ಒಂಥರಾ ವೈರುಧ್ಯಮಯ ಅಸಹನೆ-ಆಹ್ಲಾದ ಎರಡೂ ಸಮಪ್ರಮಾಣದಲ್ಲಿ ಮಿಳಿತವಾಗಿತ್ತು. ಅಲ್ಲಿ ದಾರಿಯಲ್ಲೇ ಸಿಕ್ಕ ಪುಟ್ಟ ತಟ್ಟಿ ಅಂಗಡಿಯಲ್ಲಿ ಕವಿತಾ, ವಿಜಿ ಟೀ ಕುಡಿದರು. ಹೆಚ್ಚಿಗೆ ಏನನ್ನೂ ತಿನ್ನಬೇಡ ಅಂತ ಕವಿತಾ ತಾಕೀತು ಮಾಡಿದಳು. ಯಾಕೆ ಅಂತ ಕೇಳಬೇಕೆನ್ನಿಸಿದರೂ ವಿಜಿ ಕೇಳಲಿಲ್ಲ.
 
ಸೂರ್ಯ ಮುಳುಗಿ ಭೂಮಿ ಅನಾಥಪ್ರಜ್ಞೆ ಹೊತ್ತು ನಿಂತಿರುವಾಗ ಇಬ್ಬರೂ ತಮ್ಮಬಾಡಿಗೆ ರೂಮಿನ ಕಡೆ ನಡೆದರು. ದಾರಿಯಲ್ಲೇ ಹುಸೇನನ ಅಂಗಡಿ ಇತ್ತು. ಅಂಗಡಿ ಬಾಗಿಲಲ್ಲೇ ನಿಂತಿದ್ದವ ಇವರಿಬ್ಬರನ್ನು ನೋಡಿ ‘ಯೆಸ್ ಮ್ಯಾಮ್ ವುಡ್ ಯೂ ಲೈಕ್ ಸಂಥಿಂಗ್’ ಅಂತ ಸೇಲ್ಸ್‌ಮನ್ನನ ರಾಗ ಎಳೆಯಲಾಗಿ ಕವಿತಾ ಅವನ ಕಡೆ ನೋಡಿದಳು. 
 
‘ಹೋ! ದೀದಿ...ಆಪ್! ಆಪ್ ಕಿ ಚೀಝ್ ಯಹಿ ಪೆ ಹೈ... ಆಪ್ ಜಾವ್ ಅಭಿ ಲಾಕೆ ದೇತಾ ಹೂಂ’ (ಅಕ್ಕಾ, ನಿಮ್ಮ ವಸ್ತು ಇಲ್ಲೇ ಇದೆ. ಈಗಲೇ ತಂದುಕೊಡ್ತೀನಿ) ಅಂತ ಲಗುಬಗೆಯಿಂದ ಅವರಲ್ಲಿ ಅಲ್ಲಿಂದ ಓಡಿಸಿದ. ರೂಮಿಗೆ ಹೋಗಿ ಇಬ್ಬರೂ ಉಸ್ಸಪ್ಪಾ ಎಂದು ಕುಳಿತರು.  
 
ಕೂತ ಎರಡು ನಿಮಿಷಕ್ಕೇ ಹುಸೇನ ಬಂದ. ‘ಕಹಾ ಕರೋಗೆ? ಇದರ ಪ್ರಯೋಗಕ್ಕೆ ಜಾಗ ಹುಡುಕಿಕೊಂಡಿರಾ?’ ಅಂತ ಕಕ್ಕುಲತೆಯಿಂದ ವಿಚಾರಿಸಿದ,
ನೀವೇನೇ ಹೇಳಿ ದುಶ್ಚಟ ಅಂತ ಯಾವ್ಯಾವುದನ್ನು ಜಗತ್ತು ಗುರುತಿಸುತ್ತಲ್ಲ, ಆ ಅಭ್ಯಾಸವುಳ್ಳವರಿಗೆ ಪ್ರಾಪಂಚಿಕ ಕಟ್ಟುಪಾಡುಗಳನ್ನು ಮೀರಿದ ಒಂದು ಕರುಳ ಸಂಬಂಧ ಅಂತ ಇರುತ್ತೆ. ಅದು ದೇಶ-ಭಾಷೆ-ಕಾಲಗಳ ಹಂಗು ಮೀರಿದ ಸಂಬಂಧ.
 
ಸಿಗರೇಟು, ಕುಡಿತ, ಡ್ರಗ್ಸು– ಇಂಥವನ್ನು ಮಾಡುವವರು ಎಲ್ಲಿಗೇ ಹೋದರೂ ತಮ್ಮ ಚಟಕ್ಕೆ ಪೂರಕ ಮಾಹಿತಿಯನ್ನು ಸಂಪಾದಿಸಿಕೊಂಡುಬಿಟ್ಟಿರುತ್ತಾರೆ. ಒಂದು ಪಕ್ಷ ಊಟ, ನೀರು ಅಥವಾ ಗಾಡಿ ಮೆಕ್ಯಾನಿಕ್ ಎಲ್ಲಿ ಸಿಗಬಹುದು ಅಂತ ಗೊತ್ತಾಗದೇ ಹೋದರೂ ತಮ್ಮ ಚಟದ ಮೂಲ ದ್ರವ್ಯ ಸಿಗುವ ಸ್ಥಳವನ್ನು ಕಂಡುಹಿಡಿದುಕೊಂಡು ಸಮಾನ-ಚಟಸ್ಕ ಪಾರ್ಟ್‌ನರುಗಳನ್ನೂ ಒಟ್ಟುಹಾಕಿಕೊಂಡಿರುತ್ತಾರೆ.
 
ಆಸ್ಪತ್ರೆಯಲ್ಲಿ ನಿಮಗೆ ಸಹಾಯ ಮಾಡುವವರು ಸಿಗುತ್ತಾರೋ ಇಲ್ಲವೋ, ಹೊಸ ಊರಲ್ಲಿ ಸ್ನೇಹಿತರು ಹುಟ್ಟುತ್ತಾರೋ ಇಲ್ಲವೋ, ಚಟವೊಂದಿದ್ದರೆ ಇದ್ದರೆ ನಿಮ್ಮ ಜೀವನ ಸಾರ್ಥಕ. ಅದೇ ಒಂದು ಕಳ್ಳು-ಬಳ್ಳಿ. 
 
ಹುಸೇನನಿಗೆ ಕವಿತಾಳನ್ನು ನೋಡಿದ ಕೂಡಲೇ ಇವಳಿಗೆ ಗಾಂಜಾದ ಅಭ್ಯಾಸ ಇದೆ ಎಂದು ಹೇಗೆ ಗೊತ್ತಾಯಿತು ಅಂತ ನೀವು ಕೇಳಿದರೆ ನಾಡಿವೈದ್ಯರ ಜ್ಞಾನ ಪ್ರಶ್ನಿಸಿದಷ್ಟೇ ಘೋರ ಅಪರಾಧವಾದೀತು.
 
ಅನುಭವೀ ಕಣ್ಣುಗಳು, ಅನುಭವೀ ಹೃದಯ – ಇಷ್ಟು ಗೊತ್ತಾದರೆ ಸಾಕು ಎಂದುಕೊಳ್ಳಿ. ಗಾಂಜಾ ಅಂತ ಕರೆದರೆ ಭಯಾನಕ ಎನ್ನಿಸುತ್ತೆ. ಆದರೆ, ನಿಜವಾಗಿ ಅದು ಅಂಥ ಅಪಾಯಕಾರಿ ಸೊಪ್ಪಲ್ಲ ಎನ್ನುವುದು ಕವಿತಾಗೆ ಗೊತ್ತಿತ್ತು.
 
ಅವಳ ಹಳೇ ಸ್ನೇಹಿತನೊಬ್ಬ ವೃತ್ತಿಯಿಂದ ಕಲಾವಿದನಾಗಿದ್ದ. ಆಗಾಗ ಈ ಸೊಪ್ಪನ್ನು ರೋಲ್ ಮಾಡಿ ಸಿಗರೇಟು ಸೇದುತ್ತಾ ಅದ್ಭುತ ಪೇಂಟಿಂಗ್ ಮಾಡುತ್ತಿದ್ದ. ಅವನದ್ದು ಸದಾ ತೇಲುಗಣ್ಣು. ಸಿಟ್ಟೇ ಬರುತ್ತಿರಲಿಲ್ಲ ಅವನಿಗೆ.
 
ಒಳಗೆ ಒಂಥರಾ ಅದಮ್ಯ ಪ್ರೀತಿ. ಬಾಚಿ ತಬ್ಬುವಷ್ಟು ಮಮತೆ. ಜೊತೆಗೇ ಎಲ್ಲದರ ಬಗ್ಗೆಯೂ ಸಮನಾದ ತಾತ್ಸಾರ. ಆ ಸೊಪ್ಪಿನ ಅಮಲು ಇಳಿದರೆ ಪ್ರಪಂಚದ ಜೊತೆ ವ್ಯವಹರಿಸಬೇಕಾಗುತ್ತಲ್ಲ ಅಂತ ಅವನಿಗೆ ವ್ಯಥೆಯಾಗುತ್ತಿತ್ತು. ಹಾಗಾಗಿ ಸದಾ ಒಂಥರಾ ಗುಂಗಲ್ಲೇ ಇರುತ್ತಿದ್ದ.
 
ಉದ್ದ ಕೂದಲು, ಸ್ವಲ್ಪ ಕೃಶ ದೇಹ. ತನ್ನ ಸೈಜಿಗಿಂತ ಮೂರು ಪಟ್ಟು ದೊಡ್ಡ ಅಳತೆಯ ಹಳೇ ಬಟ್ಟೆ ತೊಡುತ್ತಿದ್ದ. ನೋಡಲು ಸಾಕ್ಷಾತ್ ಯೇಸು ಕ್ರಿಸ್ತ! ಹತ್ತಿರ ಹೋದರೆ ಗಬ್ಬು ವಾಸನೆ. ಅವನ ಪಂಚೇಂದ್ರಿಯಗಳು ಸದಾ ಸ್ವಪ್ನಸ್ಥಿತಿಯಲ್ಲಿ ಇರುತ್ತಿದ್ದುದರಿಂದ ಈ ಜಗತ್ತಿನ ನಿಯಮಗಳು ಅವನಿಗೆ ಅನ್ವಯಿಸುತ್ತಿರಲಿಲ್ಲ.  
 
ಅವನಿಗೆ ಗಾಂಜಾ ಸರಿಯಾದ ಸಮಯಕ್ಕೆ ದೊರಕದೆ ವಾಸನಾ ಶಕ್ತಿ ಅನಿವಾರ್ಯವಾಗಿ ಜಾಗೃತವಾದ ದಿನ ಮಾತ್ರ ನೀರಿಗೂ ಮೈಗೂ ಸಂಬಂಧ ಏರ್ಪಡುತ್ತಿತ್ತು. ಸೊಪ್ಪು ಸಿಕ್ಕ ಮರುಗಳಿಗೆಯಿಂದ ಮತ್ತೆ ಯಥಾ ಅವತಾರದ ಪುನರಾವರ್ತನೆ. 
 
ಕವಿತಾಗೂ ಆಗಾಗ ಈ ಸೊಪ್ಪಿನ ಅಭ್ಯಾಸ ಮಾಡಿಸಿದ್ದನಾದರೂ ಅವಳು ಮಿತಿಮೀರಿ ಹಚ್ಚಿಕೊಂಡಿರಲಿಲ್ಲ. ಸ್ನೇಹಿತನ ಬಗ್ಗೆ ಅವಳಿಗೆ ಅದಮ್ಯ ಗೌರವವಿತ್ತು. ಆದರೆ ಹೀಗೇ ಸೊಪ್ಪು ಸೇದುತ್ತಿದ್ದರೆ ಅವನು ಹಾಗೇ ಸತ್ತೇ ಹೋದರೂ ಅವನಿಗೆ ಗೊತ್ತಾಗದು ಎಂದು ಕಳವಳಪಡುತ್ತಿದ್ದಳು.
 
ಅದನ್ನೆಲ್ಲ ಅವನ ಹತ್ತಿರ ಮಾತಾಡಿದರೆ ಅವ ನಕ್ಕು ಬಿಡುತ್ತಿದ್ದ. ‘ಸಾಯೋ ಬಗ್ಗೆ ನನಗೆ ಭಯವಿಲ್ಲ. ಬದುಕಿದ್ದೂ ಸತ್ತ ಹಾಗೆ ಇರೋ ಬಗ್ಗೆ ಭಯ ಇದೆ. ನನ್ನ ಪೇಂಟಿಂಗು ನಿಂತ ದಿನ ನಾನು ಸತ್ತ ಹಾಗೇ ಲೆಕ್ಕ. ಅಲ್ಲಿಯ ತನಕ ಬದುಕಿರ್ತೀನಿ. ಡೋಂಟ್ ವರಿ’ ಎನ್ನುತ್ತಿದ್ದ ಅವನ ಚಿತ್ರ ಕವಿಯ ಕಣ್ಣ ಮುಂದೆ ಹಾದು ಹೋಯಿತು.
 
‘ಡ್ರಗ್ ಅಡಿಕ್ಟಾ ನೀನು? ಗಾಂಜಾ ಡ್ರಗ್ ಅಲ್ವಾ?’ ವಿಜಿ ಪ್ರಶ್ನೆ ಮಾಡಿದಳು. ‘ಗಸಗಸೆ ಗೊತ್ತಲ್ಲ ನಿಂಗೆ?’ ಕವಿ ಕೇಳಿದಳು. ‘ಗೊತ್ತು. ಅದಕ್ಕೂ ಇದಕ್ಕೂ ಏನು ಸಂಬಂಧ?’
 
‘ಅವಸರಕ್ಕೆ ಹುಟ್ಟಿದೋಳ ಹಾಗೆ ಆಡಬೇಡ. ಭಂಗಿ ಸೊಪ್ಪಿನ ಲಕ್ಷಣಗಳೇ ಗಸಗಸೆ ಕಾಳಿನಲ್ಲೂ ಇವೆ. ಭಂಗಿ ಸ್ವಲ್ಪ ಸ್ಟ್ರಾಂಗು. ಅಂದರೆ ಭ್ರಮೆ ಉಂಟುಮಾಡುತ್ತೆ. ಗಸಗಸೆ ಸ್ವಲ್ಪ ನಾರ್ಮಲ್ಲು. ಬರೀ ನಿದ್ರೆಯನ್ನು ಗಾಢ ಮಾಡುತ್ತೆ. ಎರಡನ್ನೂ ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಬಳಸ್ತಾ ಇದಾರೆ ಗೊತ್ತಾ? ಡ್ರಗ್ಸ್ ಅಂತ ಇತ್ತೀಚೆಗೆ ಕರೆದದ್ದು...’
 
‘ಗಸಗಸೇಲಿ ಪಾಯಸ ಮಾಡ್ತಾರೆ. ಆದರೆ ಭಂಗಿ ಸೊಪ್ಪನ್ನ ಯಾತಕ್ಕೆ ಬಳಸ್ತಾರೆ?’ ‘ಉತ್ತರ ಭಾರತದಲ್ಲಿ ಹೋಳಿ ಹಬ್ಬದ ಟೈಮಲ್ಲಿ ಇದನ್ನ ಮಿಕ್ಸ್ ಮಾಡಿ ‘ಗೋಟಾ ಥಂಡಾಯಿ’ ಅಥವಾ ‘ಭಾಂಗ್ ಲಸ್ಸಿ’ ಅಂತ ಮಾಡ್ತಾರೆ. ಶಿವನಿಗೆ ಬಹಳ ಪ್ರಿಯವಂತೆ ಅದು...’
 
‘ಅಬಬಬ ಡ್ರಗ್ಸ್ ತಗೊಳೋದೇ ಅಲ್ಲದೆ ಅದನ್ನ ಸೈಂಟಿಫಿಕ್ಕಾಗಿ ತಿಳಕೊಂಡು ಜ್ಞಾನಿ ಥರ ಮಾತಾಡ್ತಾ ಇದೀಯಲ್ಲ? ದೇವರಿಗೆ ಬೇರೆ ಸಂಬಂಧ ಕಲ್ಪಿಸ್ತಾ ಇದೀಯಾ!’
‘ನಾನು ಸುಳ್ಳು ಹೇಳ್ತಿಲ್ಲ. ಹಂಪಿಯಲ್ಲಿ ಗಾಂಜಾ ಸಿಗೋದೇ ಇಲ್ಲಿ ದ್ವೀಪದಲ್ಲಿ ಇರೋ ಸನ್ಯಾಸಿಗಳ ಹತ್ತಿರ.
 
ಇಲ್ಲಷ್ಟೇ ಯಾಕೆ ಉತ್ತರ ಭಾರತದಲ್ಲಿ ನಾಗಾ ಸಾಧುಗಳು ಚಿಮಣಿಯಲ್ಲಿ ಸದಾ ಭಾಂಗ್ ಸೇದುತ್ತಾರೆ. ಅವರು ಸ್ಮಶಾನವಾಸಿ ಶಿವನ ಕಟ್ಟಾ ಭಕ್ತರು. ಅವರ ಭಕ್ತಿ ಪ್ರಶ್ನಾತೀತ. ಸರಿ ತಪ್ಪುಗಳ ಕಟ್ಟಳೆ ಇರೋದು ನನ್ನ ನಿನ್ನ ಥರದ ಆರ್ಡಿನರಿ ಮನುಷ್ಯರಿಗೆ ಮಾತ್ರ. ಸಾಧುಗಳೆಲ್ಲ ಭಕ್ತಿಯ ಪರಾಕಾಷ್ಠೆ ತಲುಪಿದವರು’
 
ಕವಿಯ ಜ್ಞಾನಭಂಡಾರವನ್ನು ಕಂಡು ಸೋಜಿಗವಾಯಿತು. ಅವಳ ಬಗ್ಗೆ ಹೆಮ್ಮೆ ಕೂಡ ಆಯಿತು. ವಿಜಿಗೆ ಈ ಭಾಂಗ್ ಪ್ರಯೋಗದಲ್ಲಿ ತನ್ನ ಪಾತ್ರವೇನು ಅನ್ನುವುದು ಇನ್ನೂ ಸ್ಪಷ್ಟ ಆಗಿರಲಿಲ್ಲ. 
 
‘ಈಗೇನು? ನೀನು ಸೇದ್ತೀಯಲ್ಲ? ನಿನಗೆ ಎಚ್ಚರ ಬರೋ ತನಕ ನಾನೇನು ಮಾಡಲಿ?’ ‘ನೀನೂ ಸೇದು!’ ‘ಇಲ್ಲ ನನಗೆ ಭಯ ಆಗುತ್ತೆ...’ ‘ಸರಿ ನಿನ್ನಿಷ್ಟ... ನಾನಂತೂ ಸೇದ್ತಿನಿ.’ ‘ಹುಸೇನ ನಮಗೆ ಅಪಾಯ ಮಾಡಕ್ಕೆ ನೋಡಿದರೆ?’ ‘ಅಯ್ಯೋ ಅವನೇನೂ ಮಾಡಲ್ಲ. ನನಗೆ ಗೊತ್ತು’ ‘ಏನೇ ಆಗಲಿ ನನಗಂತೂ ಬೇಡ’
‘ಸರಿ ಹಾಗೇ ಮಾಡು’
 
ಮಾತುಗಳು ಮುಗಿಯುವಷ್ಟರಲ್ಲಿ ಹುಸೇನ ಬಂದ. ಅವನ ಕೈಯಲ್ಲಿ ಸಣ್ಣಾತಿಸಣ್ಣ ಪ್ಯಾಕೆಟ್ ಇತ್ತು. ಅದರಲ್ಲಿ ಕಾಳುಕಾಳಿನಂತಹ ಉರುಟುರುಟು ಪುಟ್ಟಾಣಿ ಗೋಲಿಗಳು. ಸಾಸಿವೆ ಹಾಗೆ ಕಾಣುತ್ತಿದ್ದವು.
 
ಇದನ್ನು ನೋಡಿ ವಿಜಿಗೆ ಭ್ರಮ ನಿರಸನವಾಯಿತು. ಅಷ್ಟೆಲ್ಲಾ ಮೈಮನಸ್ಸಿನ ಮೇಲೆ ಕಂಟ್ರೋಲ್ ತೆಗೆದುಕೊಳ್ಳುವಂತಹ ವಸ್ತು ಹೇಗಿರುತ್ತೆ ಅಂತ ನೋಡಲು ಬಹಳ ಕುತೂಹಲದಿಂದ ಕಾದಿದ್ದಳು. ಈ ವಸ್ತುವಿನ ಗಾತ್ರ ನೋಡಿದರೆ ಕಸಕ್ಕಿಂತಲೂ ಕಡೆ.
 
ಇದನ್ನ ಸಿಕ್ಕಾಪಟ್ಟೆ ಗುಟ್ಟು ಮಾಡಿ ಇಡ್ತಾರಾ? ಯಾವನಿಗೆ ಗೊತ್ತಾಗುತ್ತೆ ಇದೇ ಭಂಗಿ ಸೊಪ್ಪು ಅಂತ? ಎನ್ನುವ ಆಲೋಚನೆಗಳು ಸುಳಿದು ಮರೆಯಾದವು. ಹುಸೇನ ಅದನ್ನು ಕವಿಗೆ ಹ್ಯಾಂಡ್ ಓವರ್ ಮಾಡಿ ಅಲ್ಲೇ ನಿಂತ. ಮತ್ತೇನು ಎನ್ನುವಂತೆ ಕವಿ ಅವನ ಮುಖ ನೋಡಿದಳು.
 
‘ಎಲ್ಲಿ ಜಾಗ ಇದಕ್ಕೆ?’ ‘ಓ ಅದಾ? ಆ ಬ್ರಿಜ್ ಇದೆಯಲ್ಲ? ಅರ್ಧ ಕಟ್ಟಿರೋದು? ಅಲ್ಲಿ’ ‘ದೀದಿ... ಅಲ್ಲಿಂದ ಮನೆ ದೂರ ಆಗಲ್ವಾ?’ ‘ಪರವಾಗಿಲ್ಲ ಕಣೋ...’ ‘ನನ್ನ ಬಗ್ಗೆ ತಪ್ಪು ತಿಳ್ಕೊಳಲ್ಲ ಅಂದ್ರೆ ಒಂದು ಮಾತು ಹೇಳಲಾ?’
 
‘ಹೇಳು...’ ‘ಹೊತ್ತು ಗೊತ್ತಿಲ್ಲದ ಟೈಮಲ್ಲಿ ಇದನ್ನ ಮಾಡೋಕೆ ಹೋಗ್ತಿದೀರ. ಅಲ್ಲಿಂದ ಮನೆಗೆ ಬರಕ್ಕೆ ದಾರಿ ಗೊತ್ತಾಗದೆ ಹೋದರೆ ತೊಂದರೆ ಆಗುತ್ತೆ. ನಿಮ್ಮ ಜೊತೆ ನಾನೂ ಬರ್ತೀನಿ...’ ವಿಜಿ ಅನುಮಾನದಿಂದ ಕವಿತಾ ಕಡೆ ನೋಡಿದಳು. ‘ಅಲ್ಲ... ನೀನು ಬಂದರೆ...’
 
‘ದೀದಿ ಅಂತ ಕರೆದಿದ್ದೀನಿ. ಇಲ್ಲಿಂದ ನೀವು ಸುರಕ್ಷಿತವಾಗಿ ಹೊರಡಬೇಕು, ಅಷ್ಟೇ ನನ್ನ ಕಾಳಜಿ...’ ‘ಯಾಕೋ ಸಂಕಷ್ಟಕ್ಕೆ ಸಿಕ್ಕಿಸ್ತೀಯಾ? ನಿಜ ಹೇಳ್ತೀನಿ ಕೇಳು. ನಿನ್ನನ್ನ ನಂಬೋದು ಹೇಗೆ ಅನ್ನೋ ಅನುಮಾನ ಇದೆ ನನಗೆ’ ‘ಓನರ್ ಆಂಟಿ ನನ್ನನ್ನ ಮಗ ಅಂತಾರೆ. ಅಲ್ಲದೆ, ಈ ಊರಿನಲ್ಲಿ ಲೋಕಲ್ ಜನ ನಾನಲ್ಲ, ನೀವು. ನಿಮಗೆ ಅಪಾಯ ಆದ್ರೆ ನಾನು ವಿಷ ತಗೋಬೇಕಾಗುತ್ತೆ...’
 
ಮನೆ ಮಠ ಅಸ್ತಿತ್ವವನ್ನೆಲ್ಲ ಕಳೆದುಕೊಂಡು ತನ್ನ ನೆಲೆಯಲ್ಲದ ಇನ್ಯಾವುದೋ ಊರಲ್ಲಿ ಇರುವ ಹುಡುಗ ಇಬ್ಬರು ಹುಡುಗಿಯರ ರಕ್ಷೆಯ ಜವಾಬ್ದಾರಿ ಹೊತ್ತುಕೊಂಡದ್ದಾದರೂ ಯಾಕೆ? ಯಾವುದೋ ನೆಲದ ಮೇಲೆ ಎಲ್ಲಿಂದಲೋ ಬಂದವರೊಂದಿಗೆ ಭಾವುಕ ಸಂಬಂಧ ಯಾಕೆ ಹುಟ್ಟಿಬಿಡುತ್ತೆ? v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT