ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿರುಲಿನಾ ಮಾಂತ್ರಿಕ ಮಾತ್ರೆ ದೇವೋಭವ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ನವೆಂಬರ್ ಮುಗಿಯಿತೆಂದರೆ ಕನ್ನಡ ಭಾಷೆಯಲ್ಲಿ ವಿಶಿಷ್ಟ ಸಾಧನೆಗಾಗಿ ಗೌರವ ಸನ್ಮಾನ ಪಡೆದವರ ಮನೆಗಳಲ್ಲಿ ಶಾಲು, ಸ್ಮರಣ ಫಲಕ, ಹಣ್ಣಿನ ಬುಟ್ಟಿ, ಪೇಟಾ ಮತ್ತು ಬಣ್ಣದ ಮಾಲೆಗಳ ಹೊಸ ಮಾಲು ಬಂದಿರುತ್ತದೆ. ಹಳತು ಅಟ್ಟಕ್ಕೊ ಗುಜರಿಗೊ ಸೇರುತ್ತವೆ. ಈಚೆಗೆ ಸೇಡಂ ಪಟ್ಟಣದ ‘ಅಮ್ಮ ಪ್ರಶಸ್ತಿ’ಯ ಗೌರವವನ್ನು ಪಡೆದವರ ಅನುಭವ ಭಿನ್ನವಾಗಿತ್ತು. ಎಂದಿನಂತೆ ಶಾಲು, ಮಾಲೆ, ಸ್ಮರಣ ಫಲಕಗಳ ಜೊತೆಗೆ ಹಣ್ಣಿನ ಬುಟ್ಟಿಯ ಬದಲಿಗೆ ತಲಾ ಎರಡೆರಡು ಕಿಲೊ ತೊಗರಿ ಬೇಳೆಯನ್ನು ನೀಡಲಾಯಿತು.

ಕಲಬುರ್ಗಿ ಜಿಲ್ಲೆ ಎಂದರೆ ತೊಗರಿಯ ತವರು ತಾನೆ? ಸೇಡಮ್ಮಿನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಈ ದಿನಗಳಲ್ಲಿ ತೊಗರಿಯ ಕಡ್ಡಿಯೇ ಕಾಣುತ್ತದೆ. ಬಡವರ ಗುಡಿಸಲ ಬಳಿಯ ಸೌದೆರಾಶಿ, ಸೂರು, ಕಸ ಗುಡಿಸುವ ಪೊರಕೆ, ತುಂಟ ಮಕ್ಕಳಿಗೆ ಛಡಿಯೇಟು ಎಲ್ಲಕ್ಕೂ ತೊಗರಿಯ ಕಡ್ಡಿ. ರಸ್ತೆಯ ಪಕ್ಕದ ಜಾಹೀರಾತು ಫಲಕಗಳಲ್ಲೂ ತೊಗರಿ ಬೆಳೆಗೆ ಎರಚುವ ವಿಷವಸ್ತುಗಳ ಆಕರ್ಷಕ ಜಾಹೀರಾತು; ತಳ್ಳುಗಾಡಿಯಲ್ಲಿ ಕಳ್ಳೇಪುರಿ ಅಳೆಯಲಿಕ್ಕೂ ಅದೇ ವಿಷದ ಖಾಲಿ ಡಬ್ಬಿಗಳು. ಶಾಲಾ ಮಕ್ಕಳ ಪಠ್ಯಗಳಲ್ಲಿ ಮಾತ್ರ ತೊಗರಿಯ ಬಗ್ಗೆ ಒಂದೇ ಒಂದು ಪಾಠವೂ ಇಲ್ಲ ಅನ್ನೋದನ್ನು ಬಿಟ್ಟರೆ, ಮಿಕ್ಕೆಲ್ಲ ಕಡೆ ತೊಗರಿಯದೇ ಸಾಹಿತ್ಯ.

ಹಣ್ಣಿನ ಬುಟ್ಟಿಯಲ್ಲಿ ಸೇಬು, ಸಪೋಟ, ಪಪಾಯಾ, ಪೈನಾಪಲ್ ಮುಂತಾದ ಪರಂಗಿ/ ಫಿರಂಗಿ ಫಲಗಳನ್ನು ತುಂಬುವ ಬದಲು ತಂತಮ್ಮ ಊರಿನ ವಿಶಿಷ್ಟ ಫಸಲನ್ನು ಅತಿಥಿಗಳಿಗೆ ಉಡುಗೊರೆಯ ರೂಪದಲ್ಲಿ ನೀಡುವ ಸಂಪ್ರದಾಯ ಮಲೆನಾಡಿನ ಜಿಲ್ಲೆಗಳಲ್ಲಿ ಹಿಂದಿನಿಂದಲೂ ಜಾರಿಯಲ್ಲಿದೆ. ದೂರದ ಗಣ್ಯರಿಗೆ ಏಲಕ್ಕಿ, ಕಾಳುಮೆಣಸು, ಲವಂಗ, ದಾಲಚಿನ್ನಿಯನ್ನು ಉಡುಗೊರೆಯಾಗಿ ನೀಡುತ್ತಾರೆ. ಈಚೆಗೆ ವಸಂತ ಪ್ರಕಾಶನದವರು ಬೆಂಗಳೂರಿನಲ್ಲಿ ಒಟ್ಟಿಗೆ ಎಂಟು ವೈದ್ಯ ಸಾಹಿತ್ಯ ಕೃತಿಗಳ ಬಿಡುಗಡೆಯ ಸಮಾರಂಭದಲ್ಲಿ ಗಣ್ಯರಿಗೆಲ್ಲ ಸುಂದರ ಪೊಟ್ಟಣಗಳಲ್ಲಿ ನವಣೆ, ಆರಕ, ಕೊರಲು, ಬರಗು ಮುಂತಾದ ಸಿರಿಧಾನ್ಯಗಳನ್ನು ನೀಡಿದ್ದರು. ಪ್ರತಿ ಪೊಟ್ಟಣದ ಮೇಲೂ ಆಯಾ ಧಾನ್ಯದ ಗುಣವಿಶೇಷಗಳನ್ನು ಮುದ್ರಿಸಲಾಗಿತ್ತು.

ಸನ್ಮಾನಿತರಿಗೆ ಒಂದರ್ಧ ಕಿಲೊಗ್ರಾಂ ಸ್ಪಿರುಲಿನಾ ಮಾತ್ರೆಗಳನ್ನು ಎಲ್ಲಾದರೂ ನೀಡಿದ ಪ್ರಸಂಗ ಇದೆಯೆ? ಇರಲಿಕ್ಕಿಲ್ಲ. ಸಿನೆಮಾ ತಾರೆಯರು, ಧನಿಕರು ಸೇವಿಸುವ ದುಬಾರಿ ವಸ್ತು ಅದು. ಈಚೆಗೆ ಕರ್ನಾಟಕದಲ್ಲಿ ತೀರಾ ಕಡುಬಡ ಮಕ್ಕಳು, ಗರ್ಭಿಣಿಯರಿಗೆ ಉಚಿತವಾಗಿ ಸಿಕ್ಕ ಗೋಲಿಭಾಗ್ಯವೂ ಹೌದು. ಇದು ಈ ದಿನಗಳಲ್ಲಿ ಸಂಡೂರಿನಿಂದ ಹಿಡಿದು ದಿಲ್ಲಿಯವರೆಗೂ ಸುದ್ದಿಯಲ್ಲಿದೆ.

ಸ್ಪಿರುಲಿನಾ ಎಂದರೆ ಜೌಗು ನೀರಿನಲ್ಲಿ ಬೆಳೆಯುವ ಹಸುರು ನೀಲಿ ಪಾಚಿ ಅಥವಾ ಹಾವಸೆ. ಬ್ಯಾಕ್ಟೀರಿಯದ ವರ್ಗಕ್ಕೆ ಸೇರಿದ ಏಕಕೋಶ ಜೀವಿ. ಅದು ದಟ್ಟವಾಗಿ ಬೆಳೆದ ನೀರಲ್ಲಿ ಕೈಹಾಕಿದರೆ ಹಸುರು ಬಟ್ಟೆಯಂತೆ ಪಾಚಿ ಕೈಗೆಲ್ಲ ಮೆತ್ತಿಕೊಳ್ಳುತ್ತದೆ. ನಾರಿನ ಎಳೆಗಳಂತೆ ಸಿಂಬೆ ಸುತ್ತಿಕೊಂಡು ಬೆಳೆಯುವ ಇದನ್ನು ಸೂಕ್ಷ್ಮದರ್ಶಕದಲ್ಲಿ ನೋಡಿದರೆ ಸುರುಳಿ ಸ್ಪ್ರಿಂಗ್‌ನಂತೆ ಕಾಣುತ್ತದೆ. ಸಿಂಬೆಯನ್ನು ನೀರಿನಿಂದ ಮೇಲೆತ್ತಿ ಹಿಂಡಿ ಒಣಗಿಸಿ ಕೇಕ್‌ನಂತೆ, ಇಲ್ಲವೆ ಕುಟ್ಟಿ ಪುಡಿ ಮಾಡಿ ಗಾಳಿಸಿ, ಉಂಡೆ ಮಾಡಬಹುದು.

ಪಾಚಿಗಳಲ್ಲಿ ಸಾವಿರಾರು ಬಗೆಗಳಿವೆ. ನೀರಲ್ಲಿ, ಉಪ್ಪುನೀರಲ್ಲಿ, ಬಂಡೆಗಳ ಮೇಲೆ, ಮರಗಳ ಕಾಂಡಗಳ ಮೇಲೆಲ್ಲ ಅವು ಬೆಳೆಯುತ್ತವೆ. ನೀರಲ್ಲಿ ಬೆಳೆಯುವ ನೀಲಿ ಹಸುರಿನ ಸ್ಪಿರುಲಿನಾ ಕೂಡ ಅದೇ ವರ್ಗಕ್ಕೆ ಸೇರಿದ ಅನಾದಿ ಕಾಲದ, ಹುಟ್ಟು-ಸಾವು ಇಲ್ಲದ ಚಿರಂಜೀವಿ. ತನ್ನನ್ನೇ ಇಬ್ಭಾಗಿಸಿಕೊಳ್ಳುತ್ತ ಬೆಳೆಯುತ್ತದೆ. ವಿಶೇಷ ಗುಣ ಏನೆಂದರೆ ಇದರಲ್ಲಿ ಪ್ರೊಟೀನು ತುಂಬ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಆಫ್ರಿಕದ ಕೆನೆಂಬು ಮೂಲ ನಿವಾಸಿಗಳು, ಮೆಕ್ಸಿಕೊದ ಆಜ್ಟೆಕ್ ಜನರು ಅನಾದಿ ಕಾಲದಿಂದಲೂ ಸ್ಪಿರುಲಿನಾ ಪಾಚಿಯನ್ನು ಆಹಾರವಾಗಿ ಬಳಸುತ್ತಿದ್ದರು.

ಸಾಕುಪ್ರಾಣಿಗಳಿಗೆ ಮೇವಾಗಿ ತಿನ್ನಿಸುತ್ತಿದ್ದರು. ಬೆಲ್ಜಿಯನ್ ವಿಜ್ಞಾನಿ ಝರ್ರೊಕ್ ಎಂಬಾತ ಐವತ್ತು ವರ್ಷಗಳ ಹಿಂದೆ 1966ರಲ್ಲಿ ಅದನ್ನೇ ತನ್ನ ಪಿಎಚ್‌.ಡಿ ಅಧ್ಯಯನಕ್ಕೆ ಆಯ್ದುಕೊಂಡ. ಈ ಪಾಚಿಯಲ್ಲಿ ಶೇ 60- 65ರಷ್ಟು ಪ್ರೊಟೀನು ಇದೆ, ಖನಿಜಾಂಶಗಳೂ ಸೂಕ್ಷ್ಮ ಪೋಷಕಾಂಶಗಳೂ ಆದರ್ಶ ಪ್ರಮಾಣದಲ್ಲಿವೆ ಎಂದು ಪ್ರಕಟಿಸಿದ ಮೇಲೆ ಸ್ಪಿರುಲಿನಾಕ್ಕೆ ಶುಕ್ರದೆಸೆ ಬಂತು. ಮರುವರ್ಷವೇ ಅದನ್ನೊಂದು ‘ಚಮತ್ಕಾರಿಕ ಆಹಾರ’ ಎಂದು ಸೂಕ್ಷ್ಮಜೀವ ವಿಜ್ಞಾನಿಗಳು ಘೋಷಿಸಿದರು. ಅದನ್ನು ಕೆರೆ ಹೊಂಡಗಳಲ್ಲಿ ಕೃತಕವಾಗಿ ಬೆಳೆಸುವ ಉದ್ಯಮಗಳು ನಾಯಿಕೊಡೆಗಳ ಹಾಗೆ ತಲೆ ಎತ್ತಿದವು.

ಈಗಂತೂ ಅದೊಂದು ಬಹುಕೋಟಿ ದಂಧೆಯಾಗಿ ಬೆಳೆದಿದೆ. ಗೂಗಲಿಸಿದರೆ ಹತ್ತಾರು ಸಾವಿರ ಪುಟಗಳ ಪ್ರಚಾರ ಸಾಮಗ್ರಿಗಳು, ಜಾಹೀರಾತುಗಳು, ಸಂಶೋಧನಾ ಅಂಕಿಸಂಖ್ಯೆಗಳು, ವೈದ್ಯಭಾಷೆಯ ಲೇಖನಗಳು ಸಾಲುಗಟ್ಟಿ ಬರುತ್ತವೆ. ಸಣಕಲು ದೇಹದವರನ್ನು ದಪ್ಪ ಮಾಡುವುದಕ್ಕೂ ಸ್ಪಿರುಲಿನಾ; ದಪ್ಪ ವ್ಯಕ್ತಿಗಳನ್ನು ಸಣಕಲು ಮಾಡಲಿಕ್ಕೂ ಸ್ಪಿರುಲಿನಾ! ಮೊಡವೆ, ತಲೆಹೊಟ್ಟಿನಿಂದ ಹಿಡಿದು ಹೊಟ್ಟೆಹುಳದವರೆಗಿನ ಎಲ್ಲ ಬಗೆಯ ಕಿರಿಕಿರಿಗಳ ನಿವಾರಣೆಗೆ ಸ್ಪಿರುಲಿನಾ ಕ್ರೀಮು, ಲೇಹ್ಯ, ಪೇಸ್ಟು, ತೈಲ ಅದಂತೆ ಇದಂತೆ. ಯಾವುದು ವೈಜ್ಞಾನಿಕ ಸತ್ಯ, ಯಾವುದು ಉತ್ಪ್ರೇಕ್ಷೆ ಎಂಬುದೇ ಗೊತ್ತಾಗದಷ್ಟು ಗೋಜಲು ಅದರಲ್ಲಿದೆ. ಬೆಲೆಗೂ ಲಂಗುಲಗಾಮಿಲ್ಲ. ಉತ್ಪಾದನಾ ವೆಚ್ಚ ಟನ್ನಿಗೆ ಗರಿಷ್ಠ ಹತ್ತು ಸಾವಿರ ರೂಪಾಯಿ ಇದ್ದರೂ ಒಂದು ಗ್ರಾಂ ತೂಕದ ಮಾತ್ರೆಗೆ ಒಂದು ರೂಪಾಯಿ ಲೆಕ್ಕದಲ್ಲಿ ಟನ್ನಿಗೆ 10 ಲಕ್ಷ ರೂಪಾಯಿ ಗಳಿಸಬಹುದು.

ಇಂಥ ಮಾಂತ್ರಿಕ ಮಾತ್ರೆಯನ್ನು ಅನುಕೂಲಸ್ಥರು ನಾನಾ ವಿಧದಲ್ಲಿ ಸೇವಿಸುತ್ತಾರೆ. ಅದನ್ನೇ ಸರ್ಕಾರಿ ವೆಚ್ಚದಲ್ಲಿ ಬಡ ಮಹಿಳೆಯರಿಗೆ, ಮಕ್ಕಳಿಗೆ ಕೊಟ್ಟರೆ ಅಪೌಷ್ಟಿಕತೆಯ ನಿವಾರಣೆ ಸಾಧ್ಯವಾದೀತಲ್ಲವೆ? ನಮ್ಮ ರಾಷ್ಟ್ರದಲ್ಲಿ ಹಸಿವೆ, ಅರೆಹೊಟ್ಟೆಯಿಂದ ಬಳಲುವ ಕುಪೋಷಿತರ ಸಂಖ್ಯೆ ಜಗತ್ತಿನ ಇತರೆಲ್ಲ ರಾಷ್ಟ್ರಗಳಲ್ಲಿನ ಅಂಥವರ ಒಟ್ಟೂ ಸಂಖ್ಯೆಗಿಂತ ಜಾಸ್ತಿ ಇದೆ. ಅಂಥವರ ನೆರವಿಗೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿ ಹಣ ಸುರಿಯುತ್ತಿವೆ. ವಿದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಧನಸಹಾಯ ಹರಿದು ಬರುತ್ತಿದೆ.

ಅವನ್ನೆಲ್ಲ ಬಳಸಿ, ಹಸಿವೆಯನ್ನು ನೀಗಿಸಲೆಂದು ಅನೇಕ ಸಂಘ ಸಂಸ್ಥೆಗಳು ವಿವಿಧ ಯೋಜನೆಗಳನ್ನು ಹೆಣೆಯುತ್ತವೆ. ತುಮಕೂರಿನಲ್ಲಿ ಸ್ಪಿರುಲಿನಾ ಮಾತ್ರೆಗಳನ್ನು ಉತ್ಪಾದಿಸುತ್ತಿದ್ದ ಸಂಸ್ಥೆಯೊಂದು ಅಂಗನವಾಡಿಗಳ ಮೂಲಕ ಬಸುರಿ, ಬಾಣಂತಿಯರಿಗೆ ಹಾಗೂ ಎಳೆ ಮಕ್ಕಳಿಗೆ ಇದನ್ನು ‘ಉಚಿತವಾಗಿ’ ವಿತರಿಸುವ ಯೋಜನೆಯನ್ನು ನಾಲ್ಕು ವರ್ಷಗಳ ಹಿಂದೆ ರೂಪಿಸಿತು. ‘ಒಂದು ಸ್ಪಿರುಲಿನಾ ಮಾತ್ರೆಯನ್ನು ನುಂಗಿದರೆ ಒಂದು ಕಿಲೊ ಅನ್ನಸಾರು ಪಲ್ಲೆ ತಿಂದಂತೆ’ ಎಂದೆಲ್ಲ ಹೊಗಳುವ ಸಾಹಿತ್ಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮುಂದೊಡ್ಡಿತು.

ಈ ಪುಣ್ಯಕಾರ್ಯಕ್ಕೆ ತಮ್ಮ ಸಿಎಸ್‌ಆರ್ ನಿಧಿಯಿಂದ ನೆರವು ನೀಡುವುದಾಗಿ ಜಿಂದಾಲ್ ಉಕ್ಕು ಕಾರ್ಖಾನೆ ಮತ್ತು ಬಯೊಕಾನ್ ಔಷಧ ಕಂಪನಿಗಳು ಮುಂದೆ ಬಂದವು. ಪೋಷಕಾಂಶ ತಜ್ಞರ ಆಕ್ಷೇಪಣೆಯನ್ನೂ ಲೆಕ್ಕಿಸದೆ ಸರ್ಕಾರ ಸ್ಪಿರುಲಿನಾ ಮಾತ್ರೆಗಳ ಉಚಿತ ವಿತರಣೆಗೆ ಮ.ಮ.ಕಲ್ಯಾಣ ಇಲಾಖೆ ಒಪ್ಪಿಗೆ ನೀಡಿತು. ಪ್ರಾಯೋಗಿಕವಾಗಿ ಸಂಡೂರಿನ ಸುತ್ತ 16  ಸಹಸ್ರ ಮಕ್ಕಳಿಗೆ, 5000 ಮಹಿಳೆಯರಿಗೆ ಮಾತ್ರೆ ವಿತರಣೆ ನಡೆಯಿತು.

ಸ್ಪಿರುಲಿನಾವನ್ನು ಕೆಸರು ಹೊಂಡಗಳಲ್ಲಿ ಬೆಳೆಸಬಹುದು. ನೀರಲ್ಲಿ ಕರಗಿದ ವಿಷವಸ್ತುಗಳನ್ನೂ ಅದು ಸುಲಭವಾಗಿ ಹೀರಿಕೊಂಡು ಬೆಳೆಯುತ್ತದೆ. ಔದ್ಯಮಿಕ ತ್ಯಾಜ್ಯಗಳಲ್ಲಿನ ಕ್ಯಾಡ್ಮಿಯಂ, ಪಾದರಸ, ಆರ್ಸೆನಿಕ್ ಮುಂತಾದ ಲವಣಗಳನ್ನು ಹೀರಿ ತೆಗೆಯಲೆಂದು ನಿರ್ಮಿಸಿದ ಪಾಚಿ ಹೊಂಡಗಳಲ್ಲಿ ಕೂಡ ಅದು ದಂಡಿಯಾಗಿ ಬೆಳೆಯುತ್ತದೆ. ಆಹಾರಕ್ಕೆಂದೇ ಶುದ್ಧ ಪರಿಸರದಲ್ಲಿ ಅದನ್ನು ಬೆಳೆಸಲು ಸಾಧ್ಯವಿದೆಯಾದರೂ ಅದರಲ್ಲಿ ವಿಶೇಷ ಪ್ರೊಟೀನು ಇದೆಯೆಂದು ಜಾಹೀರಾತುಗಳಲ್ಲಿ ಹೇಳಿದರೆ ನಂಬಬೇಡಿ. ಬಿ12 ಜೀವಸತ್ವ ಇರುವುದು ನಿಜವಾದರೂ ಅದು ಮನುಷ್ಯ ದೇಹದಲ್ಲಿ ಜೀರ್ಣವಾಗದ ರೂಪದಲ್ಲಿರುತ್ತದೆ ಎಂದು ವೈದ್ಯವಿಜ್ಞಾನಿಗಳು ಎಚ್ಚರಿಸುತ್ತಾರೆ. ಇನ್ನು ಮೈಕ್ರೊಸಿಸ್ಟಿನ್ ಎಂಬ ನಂಜಿನಂಶವಿರುವ ಪಾಚಿಯೂ ಅದರೊಂದಿಗೆ ಬೆಳೆಯುವ ಸಂಭವ ಇರುತ್ತದೆ.

ಬೆಳೆದವರಿಗೂ ಗೊತ್ತಾಗದೆ ಅಂತಹ ವಿಷಕಾರಿ ಜೀವಿ ಸೇರ್ಪಡೆಯಾದರೆ ಯಕೃತ್ತಿನ ಊತ ಉಂಟಾಗುವ ಸಂಭವ ಇರುತ್ತದೆ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ನರದೌರ್ಬಲ್ಯ, ಮೂಳೆ ಶಿಥಿಲತೆ, ದೀರ್ಘಾವಧಿ ಜೀರ್ಣಾಂಗ ಕಾಯಿಲೆ ಬರಬಹುದಾಗಿದೆ. ಸ್ಪಿರುಲಿನಾದಲ್ಲಿ ಸೇರಿಕೊಳ್ಳುವ ವಿಷಕಾರಿ ವಸ್ತುಗಳನ್ನು ಬೇರ್ಪಡಿಸಲಾಗದೆ ಚೀನಾ ಸರ್ಕಾರ ಮಕ್ಕಳಿಗಾಗಿ ತಾನು ವಿತರಿಸಿದ್ದ ಸ್ಪಿರುಲಿನಾ ಮಾತ್ರೆಗಳನ್ನು ಹಿಂಪಡೆದು ನಾಶಮಾಡಿತ್ತು.

ನಮ್ಮ ದುರ್ಬಲ ವರ್ಗದ ಬಸುರಿಯರಿಗೆ, ಅಪೌಷ್ಟಿಕ ಮಕ್ಕಳಿಗೆ ಕೈತುಂಬ, ಹೊಟ್ಟೆ ತುಂಬ ಊಟ ಬೇಕು. ‘ಧಾನ್ಯ, ಸೊಪ್ಪು ತರಕಾರಿ, ಹಾಲು ಮೊಟ್ಟೆಗಳ ಸಮೃದ್ಧ ಊಟದ ಬದಲು ಸಕ್ಕರೆ ಲೇಪಿತ ಪಾಚಿ ವಾಸನೆಯ ಮಾತ್ರೆಗಳನ್ನು ನೀಡುವುದು ಅಕ್ಷಮ್ಯ’ ಎನ್ನುತ್ತಾರೆ, ಬೆಂಗಳೂರಿನ ಆರೋಗ್ಯ ಕಾರ್ಯಕರ್ತೆ ಡಾ. ಸಿಲ್ವಿಯಾ ಕರ್ಪಾಗಂ. ಮೈಸೂರಿನ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ವಕ್ತಾರರ ಪ್ರಕಾರ ಸ್ಪಿರುಲಿನಾ ಮಾತ್ರೆಗಳನ್ನು ಮಾಮೂಲು ಊಟ ಸರಿಯಾಗಿ ಲಭ್ಯವಿರದ ಸಂದರ್ಭದಲ್ಲಿ ಪೂರಕ ವಸ್ತುವಾಗಿ ನೀಡಬಹುದೇ ವಿನಾ ತಿಂಗಳುಗಟ್ಟಲೆ ಅದೊಂದನ್ನೇ ನೀಡುವುದು ತಪ್ಪಾಗುತ್ತದೆ. ಇಷ್ಟಕ್ಕೂ ‘ಒಂದು ಕಿಲೊ ಊಟದಲ್ಲಿರಬೇಕಾದಷ್ಟು ಪೋಷಕಾಂಶ ಎರಡು ಗ್ರಾಮ್ ಮಾತ್ರೆಯಲ್ಲಿದೆ ಎಂಬುದೇ ಹಾಸ್ಯಾಸ್ಪದ ಸಂಗತಿ’ ಎನ್ನುತ್ತಾರೆ, ಹೈದರಾಬಾದಿನ ರಾಷ್ಟ್ರೀಯ ಪೋಷಕಾಂಶ ಸಂಸ್ಥೆಯಲ್ಲಿ ಉಪನಿರ್ದೇಶಕಿಯಾಗಿದ್ದ ವೀಣಾ ಶತ್ರುಘ್ನ.

ಅಂಗನವಾಡಿಗಳಿಗೆ ಗುತ್ತಿಗೆದಾರರ ಮೂಲಕ ಆಹಾರ ದ್ರವ್ಯಗಳನ್ನು ನೀಡಕೂಡದು ಎಂದು ಸರ್ವೋಚ್ಚ ನ್ಯಾಯಾಲಯದ ಆಜ್ಞೆಯೇ ಇದ್ದರೂ ಅದನ್ನು ಕಡೆಗಣಿಸಿ ಮೂರೂವರೆ ಕೋಟಿ ರೂಪಾಯಿ ವೆಚ್ಚದ ಸರ್ಕಾರಿ ಯೋಜನೆ ಜಾರಿಯಲ್ಲಿದೆ. ಮಾತ್ರೆ ನುಂಗಿದ ಮಕ್ಕಳ ಆರೋಗ್ಯ ಎಷ್ಟೊಂದು ವೃದ್ಧಿಯಾಗಿದೆ ಎಂದು ಮಾತ್ರೆ ಪೂರೈಸುವ ಸಂಸ್ಥೆಗಳೇ ವರದಿಯನ್ನೂ ನೀಡುತ್ತಿವೆ. ಅದನ್ನೇ ಆಧರಿಸಿ ‘ಸಂಡೂರು ತಾಲ್ಲೂಕಿನಲ್ಲಿ ಎರಡೇ ವರ್ಷಗಳಲ್ಲಿ ಅಪೌಷ್ಟಿಕ ಮಕ್ಕಳ ಶೇಕಡ ಪ್ರಮಾಣ 45ರಿಂದ 26ಕ್ಕೆ ಇಳಿದಿದೆ’ ಎಂದು ಸರ್ಕಾರ ವರದಿ ಒಪ್ಪಿಸುತ್ತದೆ. ಈ ಮಾಯಾಗೋಲಿಗಳು ಎಲ್ಲಿ ತಯಾರಾಗುತ್ತಿವೆ, ಅವುಗಳ ಗುಣಮಟ್ಟ ಹೇಗಿದೆ, ಅದನ್ನು ನುಂಗಿದ ಮಕ್ಕಳ ಗತಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಸ್ವತಂತ್ರ ತಜ್ಞರಿಂದ ಮೌಲ್ಯಮಾಪನ ಇಲ್ಲ.

ಒಡಿಶಾ ಸರ್ಕಾರ ತನ್ನ ಏಳು ಜಿಲ್ಲೆಗಳಲ್ಲಿ ಆದಿವಾಸಿ ಬಡಕುಟುಂಬಗಳಿಗೆ, ಮಹಿಳೆಯರಿಗೆ, ಮಕ್ಕಳಿಗೆಂದು ಸಿರಿಧಾನ್ಯಗಳನ್ನು ಅಂದರೆ ನವಣೆ, ಸೆಜ್ಜೆ, ಬರಗು, ಆರಕ, ರಾಗಿ, ಕೊರ್ಲೆ ಮುಂತಾದವನ್ನು ವಿತರಿಸತೊಡಗಿದೆ. ಪೋಷಕಾಂಶಗಳ ಆಗರವಾಗಿರುವ ಈ ಧಾನ್ಯಗಳೆಲ್ಲ ಹಸುರು ಕ್ರಾಂತಿಯ ಭರಾಟೆಯಲ್ಲಿ ಮೂಲೆಗುಂಪಾಗಿದ್ದವು. ಅವುಗಳನ್ನು ಬೆಳೆಯಲು ಕೃತಕ ನೀರಾವರಿ ಬೇಕಿಲ್ಲ, ರಸಗೊಬ್ಬರ ಅಥವಾ ಕೃಷಿವಿಷಗಳು ಬೇಕಿಲ್ಲ. ಬೆಳೆದ ನೆಲಕ್ಕೂ ಬಳಸುವವರ ಆರೋಗ್ಯಕ್ಕೂ ಒಳ್ಳೆಯದನ್ನೇ ಮಾಡುವ ಈ ಕಿರುಧಾನ್ಯಗಳನ್ನು ನಮ್ಮಲ್ಲೂ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಬಹುದಿತ್ತು.

ಕಡೇಪಕ್ಷ ಸಮಗ್ರ ಶಿಶು ಕಲ್ಯಾಣ ಯೋಜನೆಯ ಮೂಲಕ ಅಂಗನವಾಡಿಯ ಮಕ್ಕಳಿಗಾದರೂ ಸಿಗುವಂತೆ ಮಾಡಬಹುದಿತ್ತು. ಆದರೇನು, ಆಡಳಿತದ ಸಮಗ್ರ ವ್ಯವಸ್ಥೆಗೇ ಪಾಚಿ ಕಟ್ಟಿದಂತಿರುವಾಗ ಖಾಸಗಿ ಕಂಪನಿಗಳು ಪಾಚಿಯಲ್ಲೇ ಚಿನ್ನ ಎತ್ತುತ್ತವೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ಸಿಗಲೆಂಬ ತಾಯಂದಿರ ‘ಕರುಳಿನ ಕರೆ’ಯ ಬದಲು ಸರ್ಕಾರದ ‘ಸ್ಪಿರುಲಿನ ಕರೆ’ಯೇ ಹೆಚ್ಚು  ಸದ್ದು  ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT