ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ ಬಳಸಿ ಉತ್ತಮ ಫೋಟೊ ತೆಗೆಯುವುದು ಹೇಗೆ?

Last Updated 30 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳು ಉತ್ತಮವಾಗುತ್ತ ಬರುತ್ತಿವೆ. ಅವುಗಳಿಂದಾಗಿ ಕೆಲವು ಉತ್ಪನ್ನಗಳು ಮಾರುಕಟ್ಟೆ ಯಿಂದ ಮಾಯವಾಗುತ್ತಿವೆ. ಎಂಪಿ3 ಪ್ಲೇಯರ್ ಮತ್ತು ಏಮ್-ಆಂಡ್-ಶೂಟ್ ಕ್ಯಾಮೆರಾಗಳು ಅವುಗಳಲ್ಲಿ ಪ್ರಮುಖವಾದವು. ಏಮ್-ಆಂಡ್-ಶೂಟ್ ಕ್ಯಾಮೆರಾಗಳು ಅವುಗಳ ಹೆಸರೇ ಸೂಚಿಸುವಂತೆ ಸರಳ ಕ್ಯಾಮೆರಾಗಳು. ಈ ಕ್ಯಾಮೆರಾಗಳು ಮಾಡುವ ಕೆಲಸವನ್ನು ಈಗಿನ ಸ್ಮಾರ್ಟ್‌ಫೋನ್‌ಗಳೇ ಮಾಡುತ್ತಿವೆ. ಏಮ್-ಆಂಡ್-ಶೂಟ್ ಕ್ಯಾಮೆರಾಗಳಲ್ಲಿ ಸಾಮಾನ್ಯವಾಗಿ ಮ್ಯಾನ್ಯುಯಲ್ ಮೋಡ್ ಇರುವುದಿಲ್ಲ. ಆದರೆ ಇತ್ತೀಚೆಗೆ ಹಲವು ಸ್ಮಾರ್ಟ್‌ಫೋನ್ ಕ್ಯಾಮೆರಾಗಳಲ್ಲಿ ಉತ್ತಮ ಮ್ಯಾನ್ಯುಯಲ್ ಮೋಡ್ ಆಯ್ಕೆಗಳಿವೆ. ಅವುಗಳನ್ನು ಬಳಸಿ ಉತ್ತಮ ಫೋಟೊ ತೆಗೆಯುವುದು ಹೇಗೆ ಎಂದು ನೋಡೋಣ.

ಈ ಮ್ಯಾನ್ಯುಯಲ್ ಮೋಡ್ ಎನ್ನುವುದು ಡಿಎಸ್‌ ಎಲ್‌ಆರ್‌ ಕ್ಯಾಮೆರಾಗಳ ಪ್ರಮುಖ ಆಕರ್ಷಣೆ. ಕ್ಯಾಮೆರಾದ ಹಲವು ಆಯ್ಕೆಗಳನ್ನು ನಾವೇ ಮಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ. ಸ್ಮಾರ್ಟ್‌ಫೋನ್ ಕ್ಯಾಮೆರಾಗಳಲ್ಲಿ ಸಾಮಾನ್ಯವಾಗಿರುವ ಆಟೊಮೋಡ್‌ನಲ್ಲಿ ಎಲ್ಲ ಆಯ್ಕೆಗಳನ್ನು ಅದುವೇ ಮಾಡಿಕೊಳ್ಳುತ್ತದೆ. ಹಲವು ಸಂದರ್ಭಗಳಲ್ಲಿ ಇದು ಸಾಕು ಅನ್ನಿಸಿದರೂ ನಿಮಗೆ ವೃತ್ತಿಪರಿಣತರಂತೆ ಫೋಟೊ ತೆಗೆಯಬೇಕಾದರೆ ಮ್ಯಾನ್ಯುಯಲ್ ಮೋಡ್ ಬೇಕು. ಮ್ಯಾನ್ಯುಯಲ್ ಮೋಡ್‌ನಲ್ಲಿ ಅದರ ಹೆಸರೇ ಸೂಚಿಸುವಂತೆ ಎಲ್ಲ ಆಯ್ಕೆಗಳನ್ನು ನಾವೇ ಮಾಡಿಕೊಳ್ಳಬೇಕು.

ಅವುಗಳೆಂದರೆ ಐಎಸ್‌ಓ, ಷಟ್ಟರ್ ವೇಗ, ಬೆಳಕಿನ ತೀವ್ರತೆ, ವಸ್ತುವಿನ ದೂರ (ಫೋಕಸಿಂಗ್), ಇತ್ಯಾದಿ. ಹಲವು ಸ್ಮಾರ್ಟ್‌ಫೋನ್ ಕ್ಯಾಮೆರಾಗಳಲ್ಲಿ ಈ ಮ್ಯಾನ್ಯುಯಲ್ ಮೋಡ್ ಎಂದು ಇದ್ದರೂ ಎಲ್ಲ ಆಯ್ಕೆಗಳಿರುವುದಿಲ್ಲ. ಮುಖ್ಯವಾಗಿ ಮ್ಯಾನ್ಯುಯಲ್ ಫೋಕಸಿಂಗ್ ಇರುವುದಿಲ್ಲ. ಆದರೆ ಒನ್‌ಪ್ಲಸ್ ಫೋನಿನ ಮ್ಯಾನ್ಯುವಲ್ ವಿಧಾನದಲ್ಲಿ ಎಲ್ಲ ಆಯ್ಕೆಗಳಿವೆ. ನಿಮ್ಮ ಸ್ಮಾರ್ಟ್‌ಫೋನಿನ ಮ್ಯಾನ್ಯುವಲ್ ವಿಧಾನದಲ್ಲಿ ಎಲ್ಲ ಆಯ್ಕೆಗಳಿಲ್ಲವಾದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ ಓಪನ್ ಕ್ಯಾಮೆರಾ ಎಂಬ ಕಿರುತಂತ್ರಾಂಶ ಹಾಕಿಕೊಳ್ಳಬಹುದು. ಆದರೆ ಎಲ್ಲ ಆಯ್ಕೆಗಳನ್ನು ಮಾಡಿಕೊಳ್ಳಲು ನಿಮ್ಮ ಸ್ಮಾರ್ಟ್‌ಫೋನಿನ ಕ್ಯಾಮೆರಾ ಯಂತ್ರಾಂಶವು ಅನುವು ಮಾಡಿಕೊಟ್ಟರೆ ಮಾತ್ರ ಓಪನ್ ಕ್ಯಾಮೆರಾದ ಎಲ್ಲ ಆಯ್ಕೆಗಳು ಲಭ್ಯವಾಗುತ್ತವೆ. ಬೇರೆ ಬೇರೆ ಆಯ್ಕೆಗಳನ್ನು ಹೇಗೆ ಬಳಸುವುದು ಎಂದು ನೋಡೋಣ.

ಐಎಸ್‌ಓ ಆಯ್ಕೆ: ಐಎಸ್‌ಓ ಆಯ್ಕೆಯು ಫಿಲ್ಮ್ ಕ್ಯಾಮೆರಾದಿಂದ ಬಂದುದು, ಕ್ಯಾಮೆರಾದಲ್ಲಿ ಬಳಸಿದ ಫಿಲ್ಮ್ ಎಷ್ಟು ಸೂಕ್ಷ್ಮ ಸಂವೇದನಾತ್ಮಕ (sensitive) ಎಂಬುದನ್ನು ಸೂಚಿಸುತ್ತದೆ. ಈ ಸಂಖ್ಯೆಯು ಸಾಮಾನ್ಯ ವಾಗಿ 100, 200, 400, 800, 1600, 3200, 6400, ಈ ಶ್ರೇಣಿಯಲ್ಲಿರುತ್ತದೆ. ಸಂಖ್ಯೆ ಜಾಸ್ತಿ ಇದ್ದಷ್ಟೂ ಕಡಿಮೆ ಬೆಳಕಿನಲ್ಲಿ ಫೋಟೊ ತೆಗೆಯಬಹುದು. ರಾತ್ರಿ ಬೆಳಕಿನಲ್ಲಿ, ಕ್ಯಾಂಡಲ್ ಬೆಳಕಿನಲ್ಲಿ, ರಸ್ತೆ ದೀಪ, ವಾಹನಗಳ ದೀಪಗಳ ಫೋಟೊ ಎಲ್ಲ ತೆಗೆಯುವ ಸಂದರ್ಭಗಳಲ್ಲಿ ಐಎಸ್‌ಓ ಸಂಖ್ಯೆಯನ್ನು ಹೆಚ್ಚು ಮಾಡಬೇಕು. ಆದರೆ ಈ ಸಂಖ್ಯೆ ಜಾಸ್ತಿ ಆದಂತೆ ಫೋಟೊ ಜಾಳು ಜಾಳಾಗುತ್ತದೆ (grainy). ಆದುದರಿಂದ ಒಂದು ಸಮತೋಲನವನ್ನು ಕಾಯ್ದುಕೊಳ್ಳಬೇಕು.

ಷಟ್ಟರ್ ವೇಗ: ಇದು ಬಹಳ ಪ್ರಮುಖವಾದುದು. ಷಟ್ಟರ್ ವೇಗವನ್ನು 30, 60, 80, 100, .. 500, 1000,.. ಇತ್ಯಾದಿಗಳಲ್ಲಿ ನಮೂದಿಸಿರುತ್ತಾರೆ. ಷಟ್ಟರ್ ವೇಗ 500 ಎಂದರೆ 1/500 ಸೆಕೆಂಡು ಕಾಲಾವಧಿಯಲ್ಲಿ ಕವಾಟವು ತೆರೆದು ಮುಚ್ಚುತ್ತದೆ ಎಂದು ಅರ್ಥ. ಸ್ಮಾರ್ಟ್‌ಫೋನ್ ಡಿಜಿಟಲ್ ಕ್ಯಾಮೆರಾಗಳಲ್ಲಿ ಭೌತಿಕವಾದ ಷಟ್ಟರ್ ಇರುವುದಿಲ್ಲ. ಯಾವುದಾದರೂ ಕ್ರೀಡೆ, ಹಾರುವ ಹಕ್ಕಿ, ಚಿಟ್ಟೆ, ಓಡುತ್ತಿರುವ ವ್ಯಕ್ತಿ –ಇಂತಹ ಸಂದರ್ಭಗಳಲ್ಲಿ ಫೋಟೊ ಮಸುಕಾಗದಂತೆ ತೆಗೆಯಬೇಕಾದರೆ ಅಧಿಕ ಷಟ್ಟರ್ ವೇಗವನ್ನು ಇಟ್ಟುಕೊಳ್ಳಬೇಕು.

ಅಧಿಕ ಷಟ್ಟರ್ ವೇಗ ಎಂದರೆ ಕಡಿಮೆ ಬೆಳಕು ಕ್ಯಾಮೆರಾ ದೊಳಗೆ ಹೋಗುತ್ತದೆ ಎಂದು ಅರ್ಥ. ಲಭ್ಯವಿರುವ ಬೆಳಕಿಗೆ ಅನುಗುಣವಾಗಿ ಐಎಸ್‌ಓ ಆಯ್ಕೆಯನ್ನೂ ಮಾಡಿಕೊಳ್ಳಬೇಕು. ರಾತ್ರಿ ರಸ್ತೆಯಲ್ಲಿ ಹೋಗುವ ವಾಹನಗಳ ಬೆಳಕಿನ ಫೋಟೊ ತೆಗೆಯಬೇಕಿದ್ದಲ್ಲಿ ಕಡಿಮೆ ಷಟ್ಟರ್ ವೇಗವನ್ನು ಇಟ್ಟುಕೊಳ್ಳಬೇಕು. ಇದನ್ನು ಫೋಟೊಗ್ರಫಿ ಪರಿಭಾಷೆ ಯಲ್ಲಿ long exposure ಎನ್ನುತ್ತಾರೆ. ಹೀಗೆ ಮಾಡುವಾಗ ನಿಮ್ಮ (ಸ್ಮಾರ್ಟ್‌ಫೋನ್) ಕ್ಯಾಮೆರಾ ಅಲುಗಾಡಬಾರದು. ಅಂದರೆ ಇಂತಹ ಸಂದರ್ಭದಲ್ಲಿ ನೀವು ಟ್ರೈಪಾಡ್ ಬಳಸಬೇಕು.

ಬೆಳಕಿನ ತೀವ್ರತೆ: ಲಭ್ಯವಿರುವ ಬೆಳಕಿನ ತೀವ್ರತೆಗೆ ಅನುಗುಣವಾಗಿ ನಿಮ್ಮ ಕ್ಯಾಮೆರಾದಲ್ಲಿ ಅದಕ್ಕೆ ಸರಿಯಾದ ಆಯ್ಕೆಯನ್ನು ಮಾಡಿಕೊಳ್ಳಬೇಕು. ಇದನ್ನು white balance ಎನ್ನುತ್ತಾರೆ. ಇದನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಲು ನೀವು ನಿಜವಾಗಿಯೂ ಪರಿಣತರಾಗಿರಬೇಕು. ಬಹುತೇಕ ಸಂದರ್ಭಗಳಲ್ಲಿ ಈ ಆಯ್ಕೆಯನ್ನು ಆಟೊಮೋಡ್‌ನಲ್ಲಿಟ್ಟರೂ ನಡೆಯುತ್ತದೆ.

ಫೋಕಸಿಂಗ್‌: ನೀವು ಯಾವ ವಸ್ತುವಿನ ಫೋಟೊ ತೆಗೆಯುತ್ತೀರೋ ಕ್ಯಾಮೆರಾದಿಂದ ಅದರ ದೂರವನ್ನು ನೀವೇ ಆಯ್ಕೆ ಮಾಡಿಕೊಳ್ಳುವುದನ್ನು ಮ್ಯಾನ್ಯುವಲ್ ಫೋಕಸಿಂಗ್ ಎನ್ನುತ್ತಾರೆ. ಅಂದರೆ ಕ್ಯಾಮೆರಾದಲ್ಲಿರುವ ಆಯ್ಕೆಯನ್ನು ನೋಡಿಕೊಂಡು ಮತ್ತು ಕ್ಯಾಮೆರಾದ ಪರದೆಯನ್ನು ನೋಡಿಕೊಂಡು ದೂರವನ್ನು ಹೆಚ್ಚು ಕಡಿಮೆ ಮಾಡುತ್ತ ಹೋಗುವುದು.

ವಸ್ತು ತೀಕ್ಷ್ಣವಾಗಿ ಕಂಡುಬಂದಾಗ ಫೋಕಸ್ ಸರಿಯಾಗಿದೆ ಎಂದು ಅರ್ಥ. ಫೋಟೊ ತೆಗೆಯಬೇಕಾದ ವಸ್ತು ಮಾತ್ರ ನಮಗೆ ತೀಕ್ಷ್ಣವಾಗಿರಬೇಕು ಮತ್ತು ಹಿನ್ನೆಲೆಯಲ್ಲಿರುವ ದೃಶ್ಯಗಳು ಮಸುಕಾಗಿರಬೇಕು ಎಂದಲ್ಲಿ ನೀವು ಸ್ವಲ್ಪ ಇತರೆ ಆಯ್ಕೆಗಳನ್ನೂ ಮಾಡಿಕೊಳ್ಳಬೇಕು. ಕವಾಟದ ತೆರೆಯುವಿಕೆ, ಅಂದರೆ ಅಪೆರ್ಚರ್ ಜಾಸ್ತಿಯಾದಷ್ಟು ನಾವು ಫೋಕಸ್ ಮಾಡಿದ ವಸ್ತು ಮಾತ್ರ ತೀಕ್ಷ್ಣವಾಗಿದ್ದು (sharp) ಹಿನ್ನೆಲೆಯಲ್ಲಿರುವ ವಸ್ತುಗಳು ಮಸುಕಾಗಿ ಬರುತ್ತವೆ. ಆದರೆ ಸ್ಮಾರ್ಟ್‌ಫೋನ್ ಕ್ಯಾಮೆರಾಗಳಲ್ಲಿ ಅಪೆರ್ಚರ್ ಆಯ್ಕೆ ಇರುವುದಿಲ್ಲ. ಆದರೂ ನಾವು ಐಎಸ್‌ಓ ಮತ್ತು ಷಟ್ಟರ್ ವೇಗಗಳನ್ನು ಸರಿಯಾಗಿ ಆಯ್ಕೆ ಮಾಡುವ ಮೂಲಕ ನಮಗೆ ಬೇಕಾದ ಅಪೆರ್ಚರ್ ಬರುವಂತೆ ಮಾಡಬಹುದು.

ಒಂದು ಜೇಡ ಬಲೆ ನೇಯುತ್ತಿರುವ ದೃಶ್ಯವನ್ನು ಸಮರ್ಥವಾಗಿ ಸೆರೆಹಿಡಿಯಬೇಕಾಗಿದೆ ಎಂದಿಟ್ಟುಕೊಳ್ಳಿ. ಜೇಡ ಸಾಮಾನ್ಯವಾಗಿ ಕಪ್ಪು ಬಣ್ಣದ್ದು. ಹಿನ್ನೆಲೆ ಬಿಳಿ ಅಥವಾ ಹಳದಿ ಬಣ್ಣ ಇರುವ ಸಾಧ್ಯತೆ ಇದೆಯೋ ನೋಡಿ. ಆ ರೀತಿ ಬರುವಂತೆ ಕ್ಯಾಮೆರಾವನ್ನು ಹಿಡಿದುಕೊಳ್ಳಿ. ಜೇಡ ಬಲೆ ನೇಯುವಾಗ ಓಡಾಡುತ್ತಿರುತ್ತದೆ. ಅಂದರೆ ಸ್ವಲ್ಪ ಜಾಸ್ತಿ ಷಟ್ಟರ್ ವೇಗ ಇಟ್ಟುಕೊಳ್ಳಬೇಕು. 1/250 - 1/500 ಇಟ್ಟುಕೊಂಡರೆ ಉತ್ತಮ. ಈ ಷಟ್ಟರ್ ವೇಗಕ್ಕೆ, ಲಭ್ಯವಿರುವ ಬೆಳಕಿಗೆ ಸರಿಹೊಂದುವಂತೆ ಐಎಸ್‌ಓ ಆಯ್ಕೆ ಮಾಡಿಕೊಳ್ಳಬೇಕು. ಹಿನ್ನೆಲೆ ಮಸುಕಾಗಲು ಅಪೆರ್ಚರ್ ಜಾಸ್ತಿ ಇರಬೇಕು.

ನಂತರ ಮ್ಯಾನ್ಯುಯಲ್ ಆಗಿ ಪರದೆ ನೋಡಿಕೊಂಡು ಜೇಡಕ್ಕೆ ಫೋಕಸ್ ಮಾಡಬೇಕು. ಬಲೆಯೂ ಸ್ಪಷ್ಟವಾಗಿ ಬರುವಂತೆ ಎಚ್ಚರಿಕೆಯಿಂದ ಫೋಕಸ್ ಮಾಡಿ ಫೋಟೊ ತೆಗೆಯಬೇಕು. ನಾನು ಒನ್‌ಪ್ಲಸ್‌ಫೋನಿನ ಕ್ಯಾಮೆರಾ ಬಳಸಿ ಇಂತಹ ಹಲವು ಫೋಟೊಗಳನ್ನು ತೆಗೆದಿದ್ದೇನೆ.

***

ವಾರದ ಆ್ಯಪ್: ಮೇಘಶಾಲಾ

ಅಂತರಜಾಲದಲ್ಲಿರುವ ಪಾಠಗಳ ಸಂಖ್ಯೆ ಅಪಾರ. ಅವುಗಳಲ್ಲಿ ಹಲವಕ್ಕೆ ಮೊಬೈಲ್ ಕಿರುತಂತ್ರಾಂಶಗಳೂ (ಆ್ಯಪ್‌) ಇವೆ. ಅವುಗಳಲ್ಲಿ ಬಹುತೇಕ ಅಮೆರಿಕದಲ್ಲಿ ತಯಾರಾದವು ಅಥವಾ ಇಂಗ್ಲಿಷ್ ಮೂಲಕ ಕಲಿಯುವವರಿಗಾಗಿ ತಯಾರಾದವು. ನಮ್ಮ ಪಠ್ಯಕ್ರಮಕ್ಕೆ ಸರಿಹೊಂದುವಂತೆ ನಮ್ಮ ಭಾಷೆಯಲ್ಲೇ ತಯಾರಾದ ಪಾಠಗಳು ಬೇಕೇ? ಹಾಗಿದ್ದರೆ ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Meghshala ಎಂದು ಹುಡುಕಬೇಕು ಅಥವಾ bit.ly/gadgetloka293 ಜಾಲತಾಣಕ್ಕೆ ಭೇಟಿ ನೀಡಬೇಕು. ಇಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಪೂರಕವಾದ ಪಾಠಗಳಿವೆ. ಬಹುತೇಕ ಪಾಠಗಳು ಕಲಿಸುವವರನ್ನು ಉದ್ದೇಶಿಸಿ ತಯಾರಾಗಿವೆ. 40 ನಿಮಿಷಗಳ ಒಂದು ಪೀರಿಯಡ್‌ನಲ್ಲಿ ಕಲಿಸಲು ಸಹಾಯವಾಗುವಂತೆ ವಿಭಜಿಸಲಾಗಿದೆ. ಕನ್ನಡದಲ್ಲೂ ಪಾಠಗಳಿವೆ. ಕೆಲವು ವಿಡಿಯೊಗಳು ಮಾತ್ರ ಇಂಗ್ಲಿಷಿನಲ್ಲೇ ಇವೆ. ಆದರೆ ಪಾಠಗಳು ಇನ್ನಷ್ಟು ಪ್ರತಿಸ್ಪಂದನಾತ್ಮಕವಾಗಿದ್ದರೆ ಚೆನ್ನಾಗಿತ್ತು. ಕಲಿಕೆಯ ಜೊತೆ ಮನರಂಜನೆಯೂ, ಅಂದರೆ ಕಲಿಕಾರಂಜನೆ (edutainment) ಇದ್ದಿದ್ದರೆ ಇನ್ನೂ ಚೆನ್ನಾಗಿತ್ತು. ಈ ಎಲ್ಲ ಪಾಠಗಳು ಸಂಪೂರ್ಣ ಉಚಿತ.

***

ಗ್ಯಾಜೆಟ್ ಸುದ್ದಿ : ಮೂರ್ಖ ಪೇಟೆಂಟ್

ನೀವು ಯಾವತ್ತಾದರೂ gadgetloka@gmail.comಗೆ ಇಮೇಲ್ ಮಾಡಿದ್ದೀರಾ? ಅದಕ್ಕೆ ಇಮೇಲ್ ಮಾಡಿದ ತಕ್ಷಣ ನಿಮಗೆ ಒಂದು ಸ್ವಯಂಚಾಲಿತ ಉತ್ತರ ಬರುತ್ತದೆ. ಇದಕ್ಕೆ ಇಮೇಲ್ ಪರಿಭಾಷೆಯಲ್ಲಿ out-of-office email ಎನ್ನುತ್ತಾರೆ. ಸಾಮಾನ್ಯವಾಗಿ ಕಂಪೆನಿ ಉದ್ಯೋಗಿಗಳು ರಜೆಯಲ್ಲಿ ಹೋಗುವಾಗ ತಾವು ವಾಪಸು ಬರುವ ತನಕ ಕಂಪೆನಿ ಕೆಲಸಕ್ಕೋಸ್ಕರ ಯಾರಾದರೂ ತಮಗೆ ಇಮೇಲ್ ಮಾಡಿದರೆ ಅದಕ್ಕೆ ಉತ್ತರ ರೂಪವಾಗಿ ಇಂತಹ ಇಮೇಲ್‌ಗಳನ್ನು ತಯಾರಿಸಿ ಅದು ಸ್ವಯಂಚಾಲಿತವಾಗಿ ಇಮೇಲ್ ಕಳುಹಿಸಿದವರಿಗೆ ಹೋಗುವಂತೆ ಏರ್ಪಾಡು ಮಾಡಿರುತ್ತಾರೆ. ಇದನ್ನು ದಶಕಗಳಿಂದ ಜನ ಬಳಸುತ್ತಿದ್ದಾರೆ.

ಇದರಲ್ಲೇನೂ ವಿಶೇಷ ಇಲ್ಲ ಅಲ್ಲವೇ? ಆದರೆ ಅಮೆರಿಕದ ಪೇಟೆಂಟ್ ನೀಡುವವರು ಇಂಥ ಇಮೇಲ್ ಕಳುಹಿಸುವುದನ್ನು ಆವಿಷ್ಕರಿಸಿದವರು ಎಂದು ಐಬಿಎಂ ಕಂಪೆನಿಗೆ ಪೇಟೆಂಟ್ ನೀಡಿದೆ. ಐಬಿಎಂ ಕಂಪೆನಿ ತಾನು ಇದನ್ನು ಬಳಸುವುದಿಲ್ಲ ಎಂದು ಹೇಳಿಕೊಂಡಿದೆ. ಈ ಪೇಟೆಂಟ್ ಅನ್ನು ಐಬಿಎಂ ಕಂಪೆನಿ ಬಳಸಿದರೆ ನಾವು ಯಾರೂ ಸ್ವಯಂಚಾಲಿತವಾಗಿ ಇಮೇಲ್ ಉತ್ತರ ಕಳುಹಿಸುವಂತಿಲ್ಲ ಅಥವಾ ಹಾಗೆ ಮಾಡಿದರೆ ಐಬಿಎಂ ಕಂಪೆನಿಗೆ ಹಣ ನೀಡಬೇಕಾಗುತ್ತದೆ!

***

ಗ್ಯಾಜೆಟ್ ಸಲಹೆ

ಶ್ರೀನಿವಾಸರ ಪ್ರಶ್ನೆ: ನನ್ನ ಹತ್ತಿರ Le Eco Le 2 ಮೊಬೈಲ್ ಇದೆ. ಒಂದು ಸಾರಿ ನಾನು ಅದನ್ನು ನನ್ನ ಗೆಳೆಯನಿಗೆ ಕೊಟ್ಟಿದ್ದೆ. ಅವನು ಅದರಲ್ಲಿ ಏನು ಮಾಡಿದನೋ ನನಗೆ ಗೊತ್ತಿಲ್ಲ. ಆವಾಗಿನಿಂದ ನಾನು ಮೊಬೈಲ್‌ನಲ್ಲಿ ಗೂಗಲ್‌ ಕ್ರೋಮ್ ಬಳಸಿ ಯಾವುದಾದರೂ ಹಾಡನ್ನು ಡೌನ್‌ಲೋಡ್ ಮಾಡಲು ಹೋದಾಗ ಈ ರೀತಿ ಸಂದೇಶ ಬರುತ್ತದೆ -Your mobile has been damaged 28.1 percent by 4 viruses and your sim card will also be damaged now ಮತ್ತು ಅದರ ಕೆಳಗೆ repair quickly ಎಂದು ಬರೆದಿರುತ್ತದೆ. ಈಗ ಏನು ಮಾಡಬೇಕು?

ಉ: ಇದಕ್ಕೆ ಬ್ರೌಸರ್ ಹೈಜಾಕಿಂಗ್ ಎನ್ನುತ್ತಾರೆ. ನಿಜವಾಗಿ ವೈರಸ್ ಬಂದಿರುವು ದಿಲ್ಲ. ಆದರೆ ನೀವು ಅದು ಹೇಳಿದಂತೆ ಕ್ಲಿಕ್ ಮಾಡಿದರೆ ಖಂಡಿತ ವೈರಸ್ ಬರುತ್ತದೆ. ಸೆಟ್ಟಿಂಗ್ಸ್‌ನಲ್ಲಿ ಆ್ಯಪ್‌ ಆಯ್ಕೆ ಮಾಡಿಕೊಂಡು ಅದರಲ್ಲಿ ಕ್ರೋಮ್ ಬ್ರೌಸರ್ ಆಯ್ಕೆ ಮಾಡಿ. ನಂತರ Clear Cache ಮತ್ತು Clear Data ಮಾಡಿ. ಇನ್ನೂ ಸರಳ ಉಪಾಯವೆಂದರೆ ಕ್ರೋಮ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಮೆಮೊರಿ ಕ್ಲೀನ್ ಮಾಡಿ ಪುನಃ ‌ಇನ್‌ಸ್ಟಾಲ್ ಮಾಡಿ.

***

ಗ್ಯಾಜೆಟ್ ತರ್ಲೆ

ಮೂರ್ಖ ಪೇಟೆಂಟ್‌ಗಳ ಸಾಲಿಗೆ ಇನ್ನೊಂದು ಸೇರ್ಪಡೆ – ಗೂಗಲ್‌ ಕಂಪೆನಿ ಕ್ಯಾಮೆರಾ ಲಗತ್ತಿಸಿದ ಟೋಪಿಯನ್ನು ಪೇಟೆಂಟ್ ಮಾಡಿದೆ. ಇದು ಮಾಮೂಲಿ ಕ್ಯಾಮೆರಾ ಅಲ್ಲ. ಇದು ಅಂತರಜಾಲದ ಮೂಲಕ ಸಂಪರ್ಕ ಹೊಂದುವಂಥದ್ದು. ಅದರಲ್ಲೇನು ವಿಶೇಷ? ಅಂತಹ ಕ್ಯಾಮೆರಾಗಳು ಬೇಕಾದಷ್ಟಿವೆ, ಅದನ್ನು ಟೋಪಿಗೆ ಜೋಡಿಸಿದರೆ ಆಯಿತು ಎನ್ನುತ್ತೀರಾ? ಅದನ್ನು ಹೋಗಿ ಅಮೆರಿಕದ ಪೇಟೆಂಟ್ ಆಫೀಸಿಗೆ ತಿಳಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT