ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂಘೋಷಿತ ಸ್ವಾಮೀಜಿಯಿಂದ ಜೀವಂತವಾಗಿ ಮಣ್ಣಾದ ‘ಸುಂದರಿ’

Last Updated 6 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ ಅವರ ಮೊಮ್ಮಗಳಾದ ಶಕೀರಾ ಖಲೀಲಿ ಅಪ್ರತಿಮ ಸುಂದರಿ. ಇರಾನ್‌ ಹಾಗೂ ಇಟಲಿಯಲ್ಲಿ ಭಾರತದ ರಾಯಭಾರಿಯಾಗಿದ್ದ ಹಿರಿಯ ಐಎಫ್‌ಎಸ್‌ ಅಧಿಕಾರಿ  ಅಕ್ಬರ್‌  ಮಿರ್ಜಾ ಖಲೀಲಿಯವರ ಪತ್ನಿಯಾಗಿದ್ದರು ಈಕೆ. ಪತಿ ಹಾಗೂ ನಾಲ್ಕು ಮಕ್ಕಳ ಜೊತೆ ವಾಸವಾಗಿದ್ದರು. ಸಂಸ್ಥಾನಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಮುರಳಿ ಮನೋಹರ ಮಿಶ್ರ ಉರ್ಫ್‌ ಶ್ರದ್ಧಾನಂದ (ಸ್ವಯಂಘೋಷಿತ) ಸ್ವಾಮೀಜಿಯ ಕಣ್ಣು ಶಕೀರಾ ಅವರ ಕೋಟ್ಯಂತರ ರೂಪಾಯಿ ಆಸ್ತಿಯ ಮೇಲೆ ಬಿತ್ತು. ಹೇಗಾದರೂ ಅದನ್ನು ಲಪಟಾಯಿಸುವ ಯೋಚನೆ ಬಂತು.

ಅಕ್ಬರ್‌ ಅವರು ಕೆಲಸದ ನಿಮಿತ್ತ ದೇಶ–ವಿದೇಶ ಸುತ್ತುತ್ತಾ ಇದ್ದುದು ಶ್ರದ್ಧಾನಂದನಿಗೆ ವರದಾನವಾಯಿತು. ಮೇಲಿಂದ ಮೇಲೆ ಶಕೀರಾ ಅವರನ್ನು  ಭೇಟಿ ಮಾಡತೊಡಗಿದ. ಈ ಭೇಟಿ ಪ್ರೇಮಕ್ಕೆ ತಿರುಗಿತು. ಅದು ಯಾವ ಮಟ್ಟಿಗೆ ಹೋಯಿತು ಎಂದರೆ ಶಕೀರಾ ತಮ್ಮ ಪತಿ ಹಾಗೂ ಮಕ್ಕಳನ್ನು ಬಿಟ್ಟು ಶ್ರದ್ಧಾನಂದನ ಜೊತೆ ನೆಲೆಸುವ ನಿರ್ಧಾರಕ್ಕೆ ಬಂದುಬಿಟ್ಟರು. 1985ರಲ್ಲಿ ಪತಿಗೆ ವಿಚ್ಛೇದನ ನೀಡಿ 1986ರಲ್ಲಿ ಶ್ರದ್ಧಾನಂದನ ಜೊತೆ ವಿವಾಹವಾಗಿ ಬೆಂಗಳೂರಿನ ರಿಚ್‌ಮಂಡ್‌ ರಸ್ತೆಯಲ್ಲಿ ಬಂದು ನೆಲೆಸಿದರು ಶಕೀರಾ.

ಹೇಳಿ ಕೇಳಿ ಶ್ರದ್ಧಾನಂದ ಮದುವೆಯಾಗಿದ್ದು ಆಸ್ತಿಗಾಗಿ. ಇನ್ನು ಕೇಳಬೇಕೆ? ಶಕೀರಾ ಅವರನ್ನು ತಮ್ಮ ಮಾತಿನ ಮೋಡಿಯಲ್ಲಿ ಸಿಲುಕಿಸುತ್ತಲೇ ಹೋದ. ಶಕೀರಾ ಇವನನ್ನು ಎಷ್ಟು ನಂಬಿಬಿಟ್ಟರು ಎಂದರೆ ತಮ್ಮ ಎಲ್ಲಾ ಆಸ್ತಿಯ ‘ಪವರ್‌ ಆಫ್‌ ಅಟಾರ್ನಿ’ಯನ್ನು ಆತನ ಕೈಗೆ ಕೊಟ್ಟರು. ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಯಿತು ಶ್ರದ್ಧಾನಂದನಿಗೆ. ಹಣಕಾಸು ವ್ಯವಹಾರ, ಬ್ಯಾಂಕ್‌ ವ್ಯವಹಾರ ಎಲ್ಲವನ್ನೂ ತಾನೇ ನಡೆಸತೊಡಗಿದ. ಎಷ್ಟೋ ತಿಂಗಳ ನಂತರ ಇದು ಶಕೀರಾ ಅವರ ಗಮನಕ್ಕೆ ಬಂತು. ಮಾತಿಗೆ ಮಾತು ಬೆಳೆಯಿತು. ತನ್ನ ಕುತಂತ್ರವೆಲ್ಲಾ ಪತ್ನಿಗೆ ತಿಳಿಯುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಶ್ರದ್ಧಾನಂದ ಅವರನ್ನು ಮುಗಿಸುವ ಯೋಚನೆಗೆ ಬಂದ.

1991ರ ಏಪ್ರಿಲ್‌ 28ರಂದು ಶಕೀರಾ ಅವರ ಕಾಫಿಯಲ್ಲಿ ನಿದ್ದೆ ಬರಿಸುವ ಮಾತ್ರೆಯನ್ನು ಹಾಕಿದ. ಶಕೀರಾ ನಿದ್ದೆಗೆ ಜಾರಿದ ಮೇಲೆ ಮೊದಲೇ ತರಿಸಿಟ್ಟುಕೊಂಡಿದ್ದ ಪೆಟ್ಟಿಗೆಯಲ್ಲಿ ಅವರನ್ನು ಜೀವಸಹಿತವಾಗಿ ಹಾಕಿ ಹಿತ್ತಲಿನಲ್ಲಿ ಗುಂಡಿತೋಡಿಸಿ ಪೆಟ್ಟಿಗೆಯನ್ನು ಹಾಗೆಯೇ ಹೂತುಬಿಟ್ಟ! ಏನೂ ಆಗದವರಂತೆ ಅದೇ ಮನೆಯಲ್ಲಿ ವಾಸಮಾಡತೊಡಗಿದ. ಮರು ಮದುವೆಯಾದ ಮೇಲೂ ಶಕೀರಾ ತಮ್ಮ ಮಕ್ಕಳ ಜೊತೆ ಫೋನಿನ ಮೂಲಕ ಸಂಪರ್ಕದಲ್ಲಿದ್ದರು. ಆದರೆ ತುಂಬಾ ದಿನಗಳಿಂದ ಅಮ್ಮನ ಕರೆ ಬರದ ಕಾರಣ ಶಕೀರಾ ಮಗಳು ಸಭಾ ಶ್ರದ್ಧಾನಂದನಲ್ಲಿ ಕೇಳಿದಾಗ ಆತ ಹಾರಿಕೆ ಉತ್ತರ ಕೊಡತೊಡಗಿದ. ಕೊನೆಗೆ, ‘ನಿಮ್ಮ ಅಮ್ಮ ಗರ್ಭಿಣಿಯಾಗಿದ್ದಾಳೆ.

ವೈದ್ಯರು ವಿಶ್ರಾಂತಿ ಬೇಕು ಎಂದು ಹೇಳಿರುವ ಕಾರಣ ಅಮೆರಿಕಕ್ಕೆ ಕಳಿಸಿದ್ದೇನೆ’ ಎಂದ. ಅಲ್ಲಿಯ ಆಸ್ಪತ್ರೆಯೊಂದರ ಹೆಸರನ್ನೂ ಹೇಳಿದ. ಆದರೆ ಸಭಾ ಆ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಶಕೀರಾ ಹೆಸರಿನ ಯಾರೊಬ್ಬರೂ ದಾಖಲಾಗಿಲ್ಲ ಎಂದು ತಿಳಿಯಿತು. ಇದರಿಂದ ಸಂಶಯಗೊಂಡ ಸಭಾ  ‘ಅಮ್ಮ ಕಾಣೆಯಾಗಿದ್ದಾಳೆ’ ಎಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ತನಿಖೆ ನಡೆಸಿದರೂ ಮೂರು ವರ್ಷ ಕೊಲೆಯ ಬಗ್ಗೆ ಸುಳಿವು ಸಿಗಲೇ ಇಲ್ಲ. ತನಿಖೆ ಇನ್ನೂ ಚುರುಕುಗೊಂಡಿತು. ‘ಶಕೀರಾ ಏಕೋ ಇತ್ತೀಚೆಗೆ ಮಾನಸಿಕವಾಗಿ ನೊಂದುಕೊಂಡಿದ್ದಳು. ನಾನು ಊರಿನಲ್ಲಿ ಇಲ್ಲದಾಗ ಮನೆ ಬಿಟ್ಟು ಹೋದಳು’ ಎಂಬ ಕಾರಣವನ್ನು ಪೊಲೀಸರ ಎದುರು ಹೇಳಿದ ಶ್ರದ್ಧಾನಂದ.

ಆದರೆ ಇದನ್ನು ಒಪ್ಪದ ಪೊಲೀಸರು  ಶ್ರದ್ಧಾನಂದನನ್ನು ಕಠಿಣ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಿದರು. ತಾನು ಕೊಲೆ ಮಾಡಿರುವುದಾಗಿ ಕೊನೆಗೂ ಒಪ್ಪಿಕೊಂಡ ಆತ. ಶಕೀರಾ ಅವರನ್ನು ಹೂತಿಟ್ಟ ಜಾಗವನ್ನೂ ತೋರಿಸಿದ. ಜಾಗವನ್ನು ಪೊಲೀಸರು ಅಗೆದು ನೋಡಿದಾಗ ಅಲ್ಲಿ ಅಸ್ಥಿಪಂಜರ ಕಾಣಿಸಿತು. ಈ ಎಲ್ಲಾ ಕಾರ್ಯಾಚರಣೆಯ ವಿಡಿಯೊ ಚಿತ್ರೀಕರಣ ಮಾಡಲಾಯಿತು. ಅಸ್ಥಿಪಂಜರದ ಮೇಲಿದ್ದ ಆಭರಣಗಳನ್ನು ಅವರ ತಾಯಿ ಗುರುತಿಸಿದರೆ, ಬಟ್ಟೆಯನ್ನು ಮನೆಯ ಕೆಲಸದವರು ಗುರುತಿಸಿದರು. ಶವದ ಕೂದಲು, ತಲೆಬುರುಡೆ ಇತ್ಯಾದಿಗಳ ಪರೀಕ್ಷೆ ನಡೆಯಿತು. ಇವುಗಳಿಂದ ಶವ, ಶಕೀರಾ ಅವರದ್ದೇ ಎಂದು ದೃಢೀಕರಿಸಿದ ಪೊಲೀಸರು 1994ರ ಮಾರ್ಚ್‌ 28ರಂದು  ಕೊಲೆ ಆರೋಪದ ಮೇಲೆ ಶ್ರದ್ಧಾನಂದನನ್ನು ಬಂಧಿಸಿದರು.

ಪ್ರಕರಣ ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ ಮೆಟ್ಟಿಲೇರಿತು. ಈ ಪ್ರಕರಣದಲ್ಲಿ ನನ್ನನ್ನು ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ನೇಮಕ ಮಾಡಲಾಯಿತು. ತಾನೇ ಕೊಲೆ ಮಾಡಿರುವುದಾಗಿ ಶ್ರದ್ಧಾನಂದ ಪೊಲೀಸರ ಎದುರು ಹೇಳಿದರೂ ಕೋರ್ಟ್‌ಗೆ ಸಾಕ್ಷಿ ಬೇಕಲ್ಲ? ಇಂಥ ಪ್ರಕರಣಗಳಲ್ಲಿ ಪೊಲೀಸರ ಮುಂದೆ ಆರೋಪಿಯ ಹೇಳಿಕೆಗಳಿಗೆ ‘ಭಾರತೀಯ ಸಾಕ್ಷ್ಯ ಕಾಯ್ದೆ’ ಅಡಿ ಮಾನ್ಯತೆ ಇಲ್ಲ. ಅಷ್ಟೇ ಅಲ್ಲದೇ ಈ ಪ್ರಕರಣದಲ್ಲಿ ಕೊಲೆ ಮಾಡಿ ಹೂತು ಹಾಕಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿಗಳೇ ಇರಲಿಲ್ಲವಲ್ಲ. ಎಲ್ಲವೂ ಸಾಂದರ್ಭಿಕ ಸಾಕ್ಷ್ಯಾಧಾರಗಳಷ್ಟೇ. ಶ್ರದ್ಧಾನಂದ ಹಾಗೂ ಶಕೀರಾ ಅವರ ಹೆಸರಿನಲ್ಲಿ ‘ಎಸ್‌.ಎಸ್‌.ಫರ್ಮ್‌’ ಎಂಬ ಕಂಪೆನಿ ಹುಟ್ಟುಹಾಕಲಾಗಿತ್ತು. ಶಕೀರಾ ಅವರ ಕೊಲೆ ನಂತರವೂ ಶ್ರದ್ಧಾನಂದ ಕಂಪೆನಿಯ ಬೋರ್ಡ್‌ ಮೀಟಿಂಗ್‌ನಲ್ಲಿ ಆಕೆಯ (ನಕಲಿ) ಸಹಿ ಹಾಕಿದ್ದ.

ಇದು ಶಕೀರಾ ಅವರದ್ದೇ ಸಹಿ ಎಂದು ನಂಬಲಾಗಿತ್ತು. ಆದ್ದರಿಂದ ಅವರು ಜೀವಂತ ಇದ್ದಾರೆಂದು ಭಾವಿಸಲಾಗಿತ್ತು. ಆ ಸಹಿ ಕೂಡ ಸುಳ್ಳು ಎಂಬುದು ಸಾಬೀತಾಗಬೇಕಿತ್ತು. ಏಕೆಂದರೆ ಮದುವೆ ನಂತರ ತನ್ನ ಮೇಲೆ ಶಕೀರಾ ಅವರ ಸಂಬಂಧಿಗಳಿಗೆ ಸಂದೇಹ ಬರುವ ರೀತಿಯಲ್ಲಿ ಶ್ರದ್ಧಾನಂದ ನಡೆದುಕೊಂಡೂ ಇರಲಿಲ್ಲ. ಹಾಗಿದ್ದ ಮೇಲೆ ಈ ಪ್ರಕರಣದಲ್ಲಿ ಆತನನ್ನು ಅಪರಾಧಿಯನ್ನಾಗಿಸುವುದು ಹೇಳುವಷ್ಟು ಸುಲಭವಾಗಿರಲಿಲ್ಲ. ಸಾಕ್ಷ್ಯಾಧಾರಗಳನ್ನು  ಕಲೆ ಹಾಕುವುದು ದೊಡ್ಡ ಸಾಹಸವೇ ಆಯಿತು. ಏನೇ ಮಾಡಿದರೂ ಕೊಲೆಗಾರ ಒಂದಲ್ಲಾ ಒಂದು ಸುಳಿವು ಬಿಟ್ಟೇ ಇರುತ್ತಾನಲ್ಲ! ಈ ಘಟನೆ ಕುರಿತು ನಾನು ಸಾಕಷ್ಟು ಅಧ್ಯಯನ ನಡೆಸಿ ಘಟನೆಯ ಆಳಕ್ಕೆ ಹೋದಾಗ ಈತನ ವಿರುದ್ಧ ಅನೇಕ ಸುಳಿವು ನನಗೆ ಸಿಕ್ಕವು.

ಒಂದನೆಯದ್ದು: ಶಕೀರಾ ಅವರನ್ನು ಹೂತುಹಾಕುವ ಯೋಚನೆಯನ್ನು ಮೊದಲೇ ಮಾಡಿದ್ದ ಶ್ರದ್ಧಾನಂದ ಆಕೆಯ ಅಳತೆಯ ಪೆಟ್ಟಿಗೆಯನ್ನು ತಯಾರಿಸಲು ಕೊಟ್ಟಿದ್ದ.  ತಮ್ಮ ಬಳಿ ಇರುವ ಕೆಲವೊಂದು ವಸ್ತುಗಳನ್ನು ಮಾರಾಟ ಮಾಡಬೇಕಿರುವ ಕಾರಣ ದೊಡ್ಡ ಪೆಟ್ಟಿಗೆ ಬೇಕೆಂದು ಪೆಟ್ಟಿಗೆ ಮಾಡುವವರಿಗೆ ಹೇಳಿದ್ದ ಆತ ಅದನ್ನು ಒಯ್ಯಲು ಪೆಟ್ಟಿಗೆಗೆ ಚಕ್ರ ಕಡ್ಡಾಯವಾಗಿ ಇರಿಸುವಂತೆ ಸೂಚಿಸಿದ್ದ (ಹಿತ್ತಲಿಗೆ ಒಬ್ಬನೇ ಪೆಟ್ಟಿಗೆ ಒಯ್ಯಲು ಸಾಧ್ಯವಾಗಬೇಕಲ್ಲ, ಅದಕ್ಕೇ).

ಎರಡನೆಯದ್ದು: ಮನೆ ಕೆಲಸಕ್ಕಿದ್ದ ದಂಪತಿಗೆ ದುಡ್ಡುಕೊಟ್ಟು ತೀರ್ಥಯಾತ್ರೆಗೆ ಕಳಿಸಿದ್ದ. ಅಲ್ಲಿಂದ ಬಂದ ಮೇಲೆ ಕೆಲಸದಾಕೆಯ ತಾಯಿಗೆ ಹುಷಾರಿಲ್ಲದ ಕಾರಣ, ಅವರನ್ನು ನೋಡಿಬರುವಂತೆ ಹಣಕೊಟ್ಟು ಕಳಿಸಿದ್ದ!

ಮೂರನೆಯದ್ದು: ಆಕೆಯನ್ನು ಹೂತುಹಾಕಲು ಗುಂಡಿ ತೋಡಿಸಬೇಕಲ್ಲ. ಅದಕ್ಕಾಗಿಯೇ ನೀರಿನ ಪೈಪ್‌  ಹಾಕಿಸುವ ನೆಪದಲ್ಲಿ ಗುಂಡಿ ತೋಡಿಸಿದ್ದ. ಯಾರಿಗೂ ಗೊತ್ತಾಗಬಾರದೆಂದು ಅದನ್ನು ಮಣ್ಣಿನಿಂದ ಮುಚ್ಚಿ ಗಿಡಗಳನ್ನು ನೆಟ್ಟಿದ್ದ. ಇದು ಗುಂಡಿ ತೋಡಿದ ಕೆಲಸಗಾರನಿಂದ ಪತ್ತೆಯಾಯಿತು.

ಇವೆಲ್ಲವನ್ನೂ ಒಂದಕ್ಕೊಂದು ಕೊಂಡಿಯ ರೂಪದಲ್ಲಿ ಜೋಡಿಸುತ್ತಾ ಹೋದಾಗ ಈತನೇ ಕೊಲೆ ಮಾಡಿರುವುದು ಸ್ಪಷ್ಟವಾಯಿತು. ಆದರೆ ಇಂಥ ಕ್ರೂರ ಕೃತ್ಯ ಎಸಗಿದ್ದ ಶ್ರದ್ಧಾನಂದನಿಗೆ ಕಠಿಣ ಶಿಕ್ಷೆ ಕೊಡಿಸಲು ಇನ್ನಷ್ಟು ಸಾಕ್ಷ್ಯಾಧಾರ ಬೇಕಿತ್ತು. ಅದನ್ನು ಹುಡುಕುತ್ತಿದ್ದಾಗ ಕಂಡದ್ದು ಆತನ ಮನೆಯ ಬಾಗಿಲ ಬಳಿಯ ಗೋಡೆ ಕೊರೆದದ್ದು. ಪೆಟ್ಟಿಗೆ ದೊಡ್ಡ ಗಾತ್ರದ್ದಾಗಿದ್ದರಿಂದ ಅದನ್ನು ಆ ಬಾಗಿಲಿನಿಂದ ಸಾಗಿಸಲು ಶ್ರದ್ಧಾನಂದನಿಗೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ಆತ ಬಾಗಿಲ ಬಳಿ ಪೆಟ್ಟಿಗೆ ಹೋಗುವಷ್ಟು ಜಾಗವನ್ನು ಕೊರೆಸಿದ್ದ. ನಂತರ ಆ ಜಾಗದಲ್ಲಿ ಪ್ಲಾಸ್ಟರ್‌ ಹಾಕಿಸಿ ಗೋಡೆಯ ಬಣ್ಣದ್ದೇ ಪೇಂಟಿಂಗ್‌ ಮಾಡಿಸಿದ್ದ. ಪೇಂಟಿಂಗ್‌ ಬಣ್ಣ ಒಂದೇ ಇದ್ದರೇನಂತೆ?

ಹಳೆಯ ಪೇಂಟಿಂಗ್‌ಗೂ, ಹೊಸದಕ್ಕೂ ಸ್ವಲ್ಪವಾದರೂ ವ್ಯತ್ಯಾಸ ಇರಲೇಬೇಕಲ್ಲವೇ? ಇಲ್ಲೂ ಹಾಗೆಯೇ ಆಗಿತ್ತು. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಗೋಡೆ ಕೊರೆದದ್ದು ಎಲ್ಲವೂ ಗೋಚರಿಸಿತು. ಇದಕ್ಕಿಂತ ಬೇರೆ ಸಾಕ್ಷ್ಯ ಬೇಕಿರಲಿಲ್ಲ. ಅಷ್ಟೇ ಅಲ್ಲದೇ, ಶ್ರದ್ಧಾನಂದ ಪತ್ನಿಯನ್ನು ಹೂತಿಟ್ಟ ಜಾಗದ ಪಕ್ಕದ ಜಮೀನನ್ನು ಮಾರಾಟ ಮಾಡಲು ಮುಂದಾಗಿದ್ದ. ರಿಯಲ್‌ ಎಸ್ಟೇಟ್‌ ಏಜೆಂಟ್‌ ಒಬ್ಬರಿಂದ ಮುಂಗಡ ಹಣವನ್ನೂ ಪಡೆದಿದ್ದ. ಕಟ್ಟಡ ನಿರ್ಮಾಣ ಮಾಡುವಾಗ ಜಾಗವನ್ನು ಅಗೆದರೆ ಶವದ ಪೆಟ್ಟಿಗೆ ಸಿಗಬಹುದೆಂಬ ಕಾರಣದಿಂದ ಆ ಜಾಗವನ್ನು ಮಾತ್ರ ಕೊಡಲು ಒಪ್ಪಿರಲಿಲ್ಲ. ತನ್ನ ಪತ್ನಿ ಓಡಾಡಿಕೊಂಡಿದ್ದ ಜಾಗ ಅದಾಗಿದ್ದು, ಆಕೆಯ ನೆನಪಿಗಾಗಿ ಅದನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದ. ಇದೂ ಒಂದು ಸಾಕ್ಷ್ಯವಾಯಿತು.

11 ವರ್ಷ ನಡೆದ ಕೇಸು!
1994ರಲ್ಲಿ ಸೆಷನ್ಸ್‌ ಕೋರ್ಟ್‌ನಲ್ಲಿ ಆರಂಭಗೊಂಡಿದ್ದ ಈ ಪ್ರಕರಣ ಅಂತ್ಯಗೊಂಡಿದ್ದು 2005ರಲ್ಲಿ ಅರ್ಥಾತ್‌ 11 ವರ್ಷಗಳ ಬಳಿಕ. ಕಾರಣ ಇಷ್ಟೇ. ಶ್ರದ್ಧಾನಂದನಿಗೆ ತನಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಗೊತ್ತಾಗಿತ್ತು. ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಘಟಾನುಘಟಿ ವಕೀಲರನ್ನು ನೇಮಕ ಮಾಡತೊಡಗಿದ. ಇನ್ನೇನು ಕೇಸು ಒಂದು ಹಂತಕ್ಕೆ ಬರುತ್ತದೆ ಎನ್ನುವಾಗ ಮತ್ತೊಬ್ಬ ವಕೀಲರನ್ನು ನೇಮಿಸಿಕೊಳ್ಳುತ್ತಿದ್ದ. ಹೀಗೆ 7–8 ಮಂದಿ ವಕೀಲರು ಬದಲಾದ ಕಾರಣ, ವಿಚಾರಣೆ ಮುಂದಕ್ಕೆ ಹೋಗುತ್ತಲೇ ಇತ್ತು. 2005ರಲ್ಲಿ ಅಂತೂ ವಾದ–ಪ್ರತಿವಾದ ಪೂರ್ಣಗೊಂಡು ಸೆಷನ್ಸ್‌ ಕೋರ್ಟ್‌ ಶ್ರದ್ಧಾನಂದನಿಗೆ ಗಲ್ಲುಶಿಕ್ಷೆ ವಿಧಿಸಿತು. ಈಗಾಗಲೇ 11 ವರ್ಷ ಆತ ಜೈಲಿನಲ್ಲಿಯೇ ಕಳೆದಿರುವ ಕಾರಣ, ಆತನನ್ನು ಬಿಡುಗಡೆ ಮಾಡುವಂತೆ ಆತನ ವಕೀಲರು ಕೋರಿಕೊಂಡರೂ ಕೋರ್ಟ್‌ ಮಾನ್ಯ ಮಾಡಲಿಲ್ಲ. 

ಈ ಆದೇಶವನ್ನು ಹೈಕೋರ್ಟ್‌ ಕೂಡ ಎತ್ತಿಹಿಡಿಯಿತು. ಗಲ್ಲುಶಿಕ್ಷೆ ರದ್ದತಿಗೆ  ಕೋರಿ ಶ್ರದ್ಧಾನಂದ ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ. ವಿಭಾಗೀಯ ಪೀಠದ ಇಬ್ಬರು ನ್ಯಾಯಮೂರ್ತಿಗಳ ಪೈಕಿ ಒಬ್ಬರು ಈ ಅಮಾನವೀಯ ಕೃತ್ಯಕ್ಕೆ ಮರಣದಂಡನೆಯೇ ಸರಿಯಾದದ್ದು ಎಂದರೆ, ಇನ್ನೊಬ್ಬ ನ್ಯಾಯಮೂರ್ತಿ ಜೀವಾವಧಿ ಶಿಕ್ಷೆ ಸಾಕು ಎಂದು ತೀರ್ಪಿತ್ತರು. ಇಬ್ಬರು ನ್ಯಾಯಮೂರ್ತಿಗಳು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳ ಪೂರ್ಣ ಪೀಠಕ್ಕೆ ವರ್ಗಾಯಿಸಲಾಯಿತು. ಅಲ್ಲಿ ಆತನ ಗಲ್ಲುಶಿಕ್ಷೆಯನ್ನು ರದ್ದು ಮಾಡಿದ ನ್ಯಾಯಮೂರ್ತಿ ಬಿ.ಎನ್‌.ಅಗರ್‌ವಾಲ್‌  ನೇತೃತ್ವದ ಪೀಠ, ಜೀವ ಇರುವವರೆಗೂ ಜೈಲಿನಲ್ಲಿಯೇ ಇರುವಂಥ ಜೀವಾವಧಿ ಶಿಕ್ಷೆ ವಿಧಿಸಿತು. ಈ ತೀರ್ಪು ಹೊರಬಂದದ್ದು 2008ರ ಜುಲೈ 22ರಲ್ಲಿ.

ಸಾಮಾನ್ಯವಾಗಿ ಜೀವಾವಧಿ ಶಿಕ್ಷೆಯಲ್ಲಿ 14 ವರ್ಷ ಅಥವಾ ಕೋರ್ಟ್‌ ನಿಗದಿ ಮಾಡುವ ಅವಧಿಯಂತೆ ಅಪರಾಧಿಗಳನ್ನು ಜೈಲಿನಲ್ಲಿ ಇಟ್ಟು ಬಿಡುಗಡೆ ಮಾಡಲಾಗುವುದು. ಆದರೆ ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾದ್ದರಿಂದ ಜೀವ ಇರುವವರೆಗೂ ಜೈಲಿನಲ್ಲಿಯೇ ಇರುವಂಥ ತೀರ್ಪು ನೀಡಲಾಯಿತು. 1991ರ ಕೊಲೆ ಪ್ರಕರಣ ಅಂತಿಮವಾಗಿ 2008ರಲ್ಲಿ ಅಂತ್ಯಕಂಡಿತು. ಇಷ್ಟು ಸುದೀರ್ಘವಾಗಿ ವಿಚಾರಣೆ ನಡೆದರೂ ಒಬ್ಬರೇ ಒಬ್ಬರು ಸಾಕ್ಷಿದಾರರೂ ಪ್ರತಿಕೂಲ ಸಾಕ್ಷಿಯಾಗಿ ಪರಿಣಮಿಸದೇ ಇದ್ದುದು ಕೂಡ ಇದರ ವಿಶಿಷ್ಟತೆ ಎಂದೇ ಹೇಳಬಹುದು.

ಲೇಖಕ ಹೈಕೋರ್ಟ್‌ನ ಹಿರಿಯ ವಕೀಲ

(ಮುಂದಿನ ವಾರ: ವಕೀಲನ ವರ್ಚಸ್ಸಿಗೆ ಬಲಿಯಾದ ಆರೋಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT