ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮರು ಹೆಚ್ಚಿಲ್ಲ; ಮಹಾನ್ ಹುತಾತ್ಮ ಇದ್ದಾನೆ

Last Updated 14 ಮೇ 2017, 19:30 IST
ಅಕ್ಷರ ಗಾತ್ರ

ಗುಜರಾತಿನಲ್ಲಿ ಹುತಾತ್ಮರು ಯಾರಾದರೂ ಇದ್ದಾರಾ?  ಗುಜರಾತಿನ ಯಾರಾದರೂ ದೇಶಕ್ಕಾಗಿ ಹೋರಾಡಿ, ಹುತಾತ್ಮರಾಗಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕೆಲವರಿಗೆ ಕೋಪ ಬರುವಂತೆ ಮಾಡಿದ್ದಾರೆ. ಕಾಶ್ಮೀರದ ಲೆಫ್ಟಿನೆಂಟ್ ಉಮರ್ ಫಯಾಜ್ ಅವರನ್ನು ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರು ಹತ್ಯೆ ಮಾಡಿದ ನಂತರ ಅಖಿಲೇಶ್ ಈ ಮಾತು ಆಡಿದ್ದಾರೆ.

‘ಕೆಲವರು ಇದ್ದಾರೆ. ಅವರ ಸಂಖ್ಯೆ ಹೆಚ್ಚಿಲ್ಲ’ ಎಂದು ಅಖಿಲೇಶ್ ಅವರ ಪ್ರಶ್ನೆಗೆ ಉತ್ತರಿಸಬಹುದು. ಗುಜರಾತಿನವರು ಸೇನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದಿಲ್ಲ ಎಂಬುದು ಇದಕ್ಕೆ ಕಾರಣ. ಈ ಬಗ್ಗೆ ನಾನು ಕೆಲವು ವರ್ಷಗಳ ಹಿಂದೆ ಸಂಶೋಧನೆ ಕೈಗೊಂಡಿದ್ದೆ. 10 ಲಕ್ಷಕ್ಕಿಂತ ಹೆಚ್ಚಿನ ಸೈನಿಕರನ್ನು ಹೊಂದಿರುವ ಸೇನೆಗೆ 2009ರಲ್ಲಿ ಗುಜರಾತಿನಿಂದ 719 ಜನ ಮಾತ್ರ ಸೇರಿದ್ದರು. ಈ ಸಂಖ್ಯೆಯೂ ಒಂದು ದಾಖಲೆ. ಗುಜರಾತಿನಿಂದ ಇಷ್ಟು ಜನ ಸೇನೆಗೆ ಸೇರಿದ ದಾಖಲೆಯೇ ಇರಲಿಲ್ಲ. ಬೃಹತ್ ಪ್ರಮಾಣದಲ್ಲಿ ನಡೆದ ಜಾಗೃತಿ ಅಭಿಯಾನದ ನಂತರ ಇಷ್ಟು ಜನ ಸೇನೆ ಸೇರಿದ್ದರು. ಅದರ ಹಿಂದಿನ ಎರಡು ವರ್ಷಗಳಲ್ಲಿ ಸೇನೆಗೆ ಸೇರಿದ ಗುಜರಾತಿಗಳ ಸಂಖ್ಯೆ 230 ಮಾತ್ರ.
ಗುಜರಾತಿನ ಜನಸಂಖ್ಯೆ ಆರು ಕೋಟಿಗಿಂತ ಹೆಚ್ಚು. ಆದರೆ, ಭಾರತೀಯ ಸೇನೆಯಲ್ಲಿ ಗುಜರಾತಿಗಳಿಗಿಂತ ವಿದೇಶಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದು ವಾಸ್ತವ. ವಿಸ್ತೀರ್ಣದಲ್ಲಿ ಗುಜರಾತಿನ ಅರ್ಧಕ್ಕಿಂತ ಕಡಿಮೆ ಇರುವ ನೇಪಾಳವು, ಭಾರತದ ಪರವಾಗಿ ಹೋರಾಡಲು ಗುಜರಾತು ಕಳುಹಿಸಿರುವುದಕ್ಕಿಂತ ಹಲವು ಪಟ್ಟು ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಕಳುಹಿಸಿದೆ. ಗೂರ್ಖಾ ರೆಜಿಮೆಂಟ್‌ಗಳು ವಿಶ್ವದ ಅತ್ಯುತ್ತಮ ಸೇನಾ ತುಕಡಿಗಳಲ್ಲಿ ಒಂದಾಗಿವೆ.


ಸೇನಾಪಡೆಗೆ ಸೈನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಿದ ಪರಂಪರೆ ಗುಜರಾತ್‌ಗೆ ಇಲ್ಲ. ಇದು ತೀರಾ ಅನನ್ಯ ಉದಾಹರಣೆಯೇನೂ ಅಲ್ಲ. ಭಾರತ ಹಾಗೂ ಪಾಕಿಸ್ತಾನದ ಸೇನೆಗಳಿಗೆ ಎಲ್ಲ ಪ್ರದೇಶಗಳಿಂದ ಸೇರುವ ಜನರ ಪ್ರಮಾಣ ಒಂದೇ ರೀತಿ ಇಲ್ಲ. ‘ನೂರು ತಲೆಮಾರುಗಳಿಂದಲೂ ನನ್ನ ಕುಟುಂಬದ ವೃತ್ತಿ ಸೇನೆಗೆ ಸೇರುವುದು’ ಎಂದು ಗಾಲಿಬ್ ಒಮ್ಮೆ ಹೇಳಿದ್ದ. ಇದೇ ಮಾತನ್ನು ಮರಾಠರು, ಪಂಜಾಬಿಗಳು ಹಾಗೂ ಗೂರ್ಖಾಗಳು ಹೇಳಬಲ್ಲರು. ಆದರೆ ಗುಜರಾತಿನ ಯಾವುದೇ ಸಮುದಾಯ ಈ ಮಾತು ಹೇಳಲಾರದು.
ಇದಕ್ಕೂ ಧೈರ್ಯಕ್ಕೂ ಸಂಬಂಧವಿಲ್ಲ. ಅವಕಾಶಗಳು ಹಾಗೂ ಪರಂಪರೆಗೆ ಸಂಬಂಧಿಸಿದ ವಿಚಾರ ಇದು. ಬ್ರಿಟಿಷರು ಭಾರತದಲ್ಲಿ ತಾವು ಮೊದಲು ಗೆದ್ದುಕೊಂಡ ಪ್ರದೇಶಗಳಲ್ಲೇ ವೃತ್ತಿಪರ ಸೇನೆ ಕಟ್ಟಿದರು. ಇದಕ್ಕೆ ಅಪವಾದಗಳಿವೆ ಎಂಬುದು ನಿಜ. 1857ರ ದಂಗೆಯಲ್ಲಿ ಬಂಗಾಳದ ಸೇನೆ ಪಾಲ್ಗೊಂಡಿದ್ದ ಕಾರಣ, ಅದರ ನಂತರ ಬ್ರಿಟಿಷರು ಪಂಜಾಬಿನ ಹಿಂದೂ, ಮುಸ್ಲಿಂ ಹಾಗೂ ಸಿಖ್ಖರತ್ತ ಮುಖ ಮಾಡಿದರು. ಇವರಲ್ಲಿ ಬಹುತೇಕರು ಜಾಟರಾಗಿದ್ದರು. (ಜನರಲ್ ಜಿಯಾ ಉಲ್‌ ಹಕ್‌ ಅವರು ಸೇನಾ ಪರಂಪರೆ ಇಲ್ಲದ ಅರಾಯನ್ ಸಮುದಾಯಕ್ಕೆ ಸೇರಿದವರು ಎಂಬುದನ್ನು ಪಾಕಿಸ್ತಾನ ಸೇನೆಯಲ್ಲಿದ್ದ ಹಲವರು ಗಮನಿಸಿದ್ದಾರೆ.) ಆದರೆ, ಬಹುಪಾಲು ನೇಮಕಾತಿಗಳು ಸಿಪಾಯಿ ದಂಗೆಗೆ ಮೊದಲೇ ಆರಂಭವಾಗಿದ್ದವು.

ಬೆಂಗಳೂರಿನಲ್ಲಿ ನನ್ನ ಮನೆ ಸೇನಾ ಪ್ರದೇಶದಲ್ಲಿದೆ. ಮನೆಗೆ ಸಮೀಪದಲ್ಲಿರುವ ಮದ್ರಾಸ್ ಸ್ಯಾಪರ್ಸ್‌ ಸೇನಾ ತುಕಡಿ ಜನ್ಮತಾಳಿದ್ದು 1780ರಲ್ಲಿ, ಅಂದಿನಿಂದಲೂ  ಇದು ಭಾರತ ಸೇನೆಯ ಸೇವೆಯಲ್ಲಿದೆ. ಇಂಥದ್ದೊಂದು ಪರಂಪರೆಯನ್ನು ಬೆಳೆಸಿದಾಗ, ಸೇನಾ ಕಾರ್ಯವನ್ನು ತಂದೆಯ ನಂತರ ಮಗ ಕೈಗೆತ್ತಿಕೊಳ್ಳುತ್ತಾನೆ. ಆದರೆ, ಬಹು ಹಿಂದಿನಿಂದಲೂ ಇಂಥದ್ದೊಂದು ನೇಮಕಾತಿಯನ್ನು ಕಾಣದ ಪ್ರದೇಶಗಳಲ್ಲಿ ಇದು ಸಾಧ್ಯವಿಲ್ಲ.

ಗುಜರಾತಿನಲ್ಲಿ ಕೂಡ ಕೆಲವು ‘ಯೋಧ’ ಸಮುದಾಯಗಳಿವೆ. ಈ ಸಮುದಾಯಗಳಿಗೆ ಸೇರಿದವರು ಸೇನೆಯನ್ನು ಸೇರುತ್ತಾರೆ. ಜಡೇಜಾ, ಸೋಲಂಕಿ ಎಂಬ ಹೆಸರು ಹೊಂದಿರುವ ದರ್ಬಾರ್ (ರಜಪೂತ) ಸಮುದಾಯಗಳು ಇವುಗಳಲ್ಲಿ ಸೇರಿವೆ. ಹಾಗಾಗಿ, ಗುಜರಾತ್ ಮೂಲದ ಹುತಾತ್ಮರ ಸಂಖ್ಯೆ ಕಡಿಮೆ ಆದರೂ ಸೊನ್ನೆ ಆಗಿರಲು ಸಾಧ್ಯವಿಲ್ಲ. ಗುಜರಾತ್ ಎಂಬ ಪ್ರದೇಶವು ಯುದ್ಧವನ್ನು ಹೆಚ್ಚಾಗಿ ಕಂಡಿಲ್ಲದಿರುವುದು, ಇಲ್ಲಿಂದ ಸೇನೆಯನ್ನು ಸೇರಿದವರ ಸಂಖ್ಯೆ ಕಡಿಮೆಯಿರಲು ಕಾರಣ.

ಅಲ್ಲಾವುದ್ದೀನ್‌ ಖಿಲ್ಜಿ ಗುಜರಾತನ್ನು 1297ರಲ್ಲಿ ವಶ ಮಾಡಿಕೊಂಡ. ಇದಾದ ನಂತರ ಗುಜರಾತಿನಲ್ಲಿ ತುಸು ಪ್ರಮಾಣದಲ್ಲಿ ಸಂಘರ್ಷ ಇದ್ದರೂ, ಇದರಲ್ಲಿ ಗುಜರಾತಿಗಳು ಭಾಗಿಯಾಗಿದ್ದು ಕಡಿಮೆ. ಅಹಮದಾಬಾದ್ ಪ್ರದೇಶವನ್ನು ಅಕ್ಬರ್ ವಶಪಡಿಸಿಕೊಳ್ಳುವವರೆಗೂ ಉತ್ತರ ಭಾಗದ ಮುಸ್ಲಿಮರು ತಮ್ಮಲ್ಲೇ ಹೊಡೆದಾಡಿಕೊಂಡಿದ್ದರು. ನಂತರದ ದಿನಗಳಲ್ಲಿ ಮರಾಠರು ಗುಜರಾತಿನ ಬಹುಪಾಲು ಪ್ರದೇಶವನ್ನು ವಶಪಡಿಸಿಕೊಂಡರು. ಬರೋಡದಲ್ಲಿ ಇಂದಿಗೂ ಅವರ ಪ್ರಾಬಲ್ಯವಿದೆ. ನಂತರ, ಸೂರತ್‌ನಿಂದ ಆರಂಭಿಸಿ ಬ್ರಿಟಿಷರ ಗುಜರಾತ್ ಆಕ್ರಮಣ ಶುರುವಾಯಿತು. ಈ ಎಲ್ಲ ಸಂಘರ್ಷಗಳಲ್ಲಿ ಗುಜರಾತಿನ ಹಿಂದೂಗಳು, ಮುಸ್ಲಿಮರು ಅಥವಾ ಪಾರ್ಸಿಗಳು ಭಾಗಿಯಾಗಿದ್ದು ತೀರಾ ಕಡಿಮೆ.
ಗುಜರಾತಿಗಳಲ್ಲಿ ವ್ಯಾಪಾರಿ ಮೌಲ್ಯ ಹೆಚ್ಚಿರುವುದು ಇವರು ಸೇನೆಗೆ ಸೇರುವುದು ಕಡಿಮೆ ಇರುವುದಕ್ಕೆ ಇನ್ನೊಂದು ಕಾರಣ. ಈ ಮೌಲ್ಯವು ಒಂದು ಅರ್ಥದಲ್ಲಿ ಮಾನಕ್ಕಿಂತ ಹೆಚ್ಚಿನ ಆದ್ಯತೆಯನ್ನು ವ್ಯಾವಹಾರಿಕ ವಿಚಾರಗಳಿಗೆ ನೀಡುತ್ತದೆ. ಯೋಧ ಸಮುದಾಯಗಳು ಈ ಬಗ್ಗೆ ಲಘುವಾಗಿ ಮಾತನಾಡಬಹುದು. ಆದರೆ, ಗುಜರಾತ್‌ ರಾಜ್ಯವು ಬಹುದೊಡ್ಡ ವ್ಯಾಪಾರಿಗಳನ್ನು ಸೃಷ್ಟಿಸಿರುವುದಕ್ಕೆ ಕಾರಣ ಈ ಮೌಲ್ಯ. ಮಾನಕ್ಕೆ ನೆಚ್ಚಿ ನಿಲ್ಲುವುದಕ್ಕಿಂತ, ಸಂದರ್ಭದ ಜೊತೆ ರಾಜಿಯಾಗುವ ಗುಣ ಕೂಡ ಮಹಾನ್ ವ್ಯಾಪಾರಿಗಳನ್ನು ರೂಪಿಸಲು ಕಾರಣ. ಸ್ವಾತಂತ್ರ್ಯ ಪೂರ್ವದ ಭಾರತದ ನಾಲ್ಕು ಪ್ರಮುಖ ರಾಜಕೀಯ ವ್ಯಕ್ತಿಗಳ ಪೈಕಿ ಮೂವರು – ಗಾಂಧಿ, ಜಿನ್ನಾ ಮತ್ತು ಪಟೇಲ್ – ಗುಜರಾತಿನವರು.

ಈ ಸಂಸ್ಕೃತಿಯು ಇಂದು ಕುತೂಹಲಕರ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಪಟೇಲ ಸಮುದಾಯದವರಲ್ಲಿ. ಹರಿಯಾಣದ ಜಾಟರಲ್ಲಿ ಇರುವಂತೆಯೇ, ನಮ್ಮಲ್ಲಿ ಕೂಡ ದೇಶದ ಅತ್ಯಂತ ಕಡಿಮೆ ಪ್ರಮಾಣದ ಲಿಂಗಾನುಪಾತ ಇದೆ. ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವ ಪ್ರಮಾಣ, ಹೆಣ್ಣು ಶಿಶುವನ್ನು ಸಾಯಿಸುವ ಪ್ರಮಾಣ ಕೂಡ ಹೆಚ್ಚಿದೆ. ಇದು ನಾಚಿಕೆಯ ಸಂಗತಿ. ಪಟೇಲ ಸಮುದಾಯದವರು ಇದನ್ನು ಸರಿಪಡಿಸಿಕೊಳ್ಳಬೇಕು. ಆದರೆ ಜಾಟರಲ್ಲಿ ಇರುವಂತೆ, ಮರ್ಯಾದೆಗೇಡು ಹತ್ಯೆಗಳು ಪಟೇಲರಲ್ಲಿ ಇಲ್ಲ. ಇದಕ್ಕೆ ಕಾರಣ, ವ್ಯಾಪಾರಿ ಮೌಲ್ಯವು ಮರ್ಯಾದೆಗೆ ಅಷ್ಟೇನೂ ಅಂಜುವುದಿಲ್ಲ.

ಅಖಿಲೇಶ್ ಮಾತು ಕೇಳಿ ಜನರಿಗೆ ನೋವಾಗುವುದು ಸಹಜ. ಆದರೆ ಅವರ ಮಾತುಗಳಿಗೆ ಆಧಾರ ಇದೆ. ಸೇನೆಯಲ್ಲಿ ಸೇವೆ ಸಲ್ಲಿಸುವ ಪರಂಪರೆ ತಮ್ಮಲ್ಲಿ ಕಡಿಮೆ ಎಂದು ಗುಜರಾತಿಗಳು ನಾಚಿಕೆಪಟ್ಟುಕೊಳ್ಳಬೇಕಿಲ್ಲ. ಅವರು ದೇಶಕ್ಕೆ ಬೇರೊಂದು ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಅಲ್ಲದೆ, ಗುಜರಾತಿಗಳು ಇನ್ನೊಂದು ಹೆಮ್ಮೆಯ ವಿಚಾರ ಹೇಳಿಕೊಳ್ಳಬಹುದು. ಗುಜರಾತಿನಲ್ಲಿ ಹುತಾತ್ಮರು ಹೆಚ್ಚಿಲ್ಲದಿರಬಹುದು. ಆದರೆ ಮಹಾನ್ ಹುತಾತ್ಮ ಗಾಂಧಿ ಜನಿಸಿದ್ದು ಗುಜರಾತಿನಲ್ಲಿ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT