ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಕ್ಕಳ ಶಿಕ್ಷಣ ಮತ್ತು ಡಿಜಿಟಲೀಕರಣ

Last Updated 19 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಯಾವುದೇ ಕಷ್ಟ ನಷ್ಟ ಇರಲಿ ಒಬ್ಬ ಮಂತ್ರವಾದಿ ‘ಛೂ! ಮಂತ್ರ ಗಾಳಿ’ ಎಂದು ಹೇಳಿ ಗಾಳಿ ಊದಿಬಿಟ್ಟರೆ ಅವೆಲ್ಲ ಥಟ್ಟನೆ ನಿವಾರಣೆ ಆಗಿಬಿಡುತ್ತದೆ ಎಂದು ಬಲವಾಗಿ ನಂಬಿದ ದೇಶ ನಮ್ಮದು. ಅದರಂತೆ ನರೇಂದ್ರ ಮೋದಿ ಎಂಬ ತಂತ್ರವಾದಿ, ಭ್ರಷ್ಟಾಚಾರ ಕಪ್ಪುಹಣ ಇತ್ಯಾದಿ ಜನರ ಕಷ್ಟ- ದೇಶದ ನಷ್ಟಗಳಿಗೆಲ್ಲ ‘ಛೂ! ತಂತ್ರ ಗಾಳಿ’ ಎಂದು ಊದಿಬಿಟ್ಟಿದ್ದಾರೆ! ನಮ್ಮ ದೇಶದ ಎಲ್ಲ ಆರ್ಥಿಕ ಸಮಸ್ಯೆಗಳಿಗೂ ತಂತ್ರಜ್ಞಾನ- ತಾಂತ್ರಿಕತೆಯೇ ಪರಮ ಪರಿಹಾರ, ಡಿಜಿಟಲೀಕರಣ ಎನ್ನುವುದು ಸಕಲರೋಗ ನಿವಾರಿಣಿ ಎಂಬ ಅವರ ಮಂತ್ರದ ಹಿಂದೆ ದೊಡ್ಡ ರಾಜಕೀಯ ತಂತ್ರಜ್ಞಾನವೇ ಇರುವಂತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ.

ಕಪ್ಪುಹಣದ ಮೇಲೆ ಅವರು ಸಾರಿದ ಎರಡನೇ ಮಹಾಯುದ್ಧವು ಕೊನೆಗೆ ಬಡಜನರ ಮೇಲೆ ಪ್ರಯೋಗಿಸಿದ ಡಿಜಿಟಲೀಕರಣ ಎಂಬ ನಿರ್ದಿಷ್ಟ ದಾಳಿಯಾಗಿ ಬದಲಾಗಿ ಹೋಯಿತು. ಡಿಜಿಟಲೀಕರಣ ಎಂಬ ಈ ತಂತ್ರಾಧಾರಿತ ಮಂತ್ರವನ್ನು ತೆಪ್ಪಗೆ ಒಪ್ಪಿ ಉಗುಳು ನುಂಗಿಕೊಳ್ಳುವುದು ಎಲ್ಲರಿಗೆ ಅನಿವಾರ್ಯವಾಯಿತು.

ಸರ್ಕಾರ ನೀಡಿದ ‘ಗೋ ಕ್ಯಾಷ್‌ಲೆಸ್’ ಎಂಬ ಆದೇಶವನ್ನು ಎಟಿಎಂಗಳು ಮಾತ್ರ ಉತ್ಸಾಹದಿಂದ ಪಾಲಿಸಿದರೂ ಜನ ಜೋರಾಗಿ ಬಾಯಿ ತೆರೆದು ಕೂಗಾಡಲು ಭಾರತವೇನು ವೆನಿಜುವೆಲಾ ಅಲ್ಲವಲ್ಲ? ವೆನಿಜುವೆಲಾ ದೇಶದಲ್ಲಿ ನಮ್ಮ ಹಾಗೇ ನೋಟುಗಳನ್ನು ದಿಢೀರನೆ ಅಮಾನ್ಯ ಮಾಡಿ ನಂತರ ಜನ ದಂಗೆಯೇಳುವ ಸೂಚನೆ ಕಂಡ ಮೇಲೆ ಕೆಲವು ಮೌಲ್ಯದ ನೋಟುಗಳನ್ನು ಮತ್ತೆ ಮಾನ್ಯ ಮಾಡಲಾಗಿದೆ.  ಆದರೆ ನಮ್ಮಲ್ಲೇನು ಹಾಗೆ ಆಗುವ ಭಯವಿಲ್ಲ.

ಸ್ವಿಸ್ ಬ್ಯಾಂಕ್ ಖಾತೆಗಳು, ನಮ್ಮ ಬ್ಯಾಂಕ್ ಲಾಕರ್‌ಗಳಲ್ಲಿರುವ ನೋಟುಗಳನ್ನು ಬಯಲಿಗೆ ತರುವುದು ಇರಲಿ, ಸಾಮಾನ್ಯ ಜನರು ದೈನಂದಿನ ವ್ಯವಹಾರಕ್ಕೆ ಬಳಸುವ ನೋಟುಗಳನ್ನೂ ಈಗ ಕಾಣದಂತೆ ಮಾಯ ಮಾಡಲು ಡಿಜಿಟಲೀಕರಣ ಮಂತ್ರ ಹೇಳಲಾಗುತ್ತಿದೆ. ‘ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ...’ ಎಂದು ಇಂಥದನ್ನು ಕುರಿತೇ ದಾಸರು ಹಾಡಿರಬೇಕು! 

ಆದರೂ ‘ಡಿಜಿಟಲೈಸ್ ಆರ್ ಪೆರಿಶ್- ಡಿಜಿಟಲೀಕರಣ ಇಲ್ಲವೇ ಮರಣ’ ಎಂಬ ಈ ಸರ್ವಾಧಿಕಾರಿ ಕಟ್ಟಪ್ಪಣೆಯ ಬಗ್ಗೆ ಅಲ್ಲಲ್ಲಿ ಗೊಣಗಾಟಗಳು ಕೇಳದಿರಲು ಸಾಧ್ಯವಿಲ್ಲ. ‘ಡಿಜಿಟಲೀಕರಣಕ್ಕೆ ನೀವೇನೋ ಪಟ್ಟ ಕಟ್ಟಿದಿರಿ ಸ್ವಾಮಿ, ಆದರೆ ಮನೆಯಲ್ಲಿ ಮರಣ ಹೊಂದಿದವರಿಗೆ ಚಟ್ಟ ಕಟ್ಟುವಾಗ ನಾವೇನು  ಮಾಡೋಣ?’ ಎನ್ನುವ ನೈಜವಾದ ನೋವೂ ‘ಪೇಟಿಎಂ ಕರೋ ಎನ್ನುವುದೇನೋ ಸರಿ ಸಾರ್, ಆದರೆ ಲೈಂಗಿಕ ಕಾರ್ಯಕರ್ತೆಗೆ ಅದನ್ನು ಮಾಡಲು ಭಯವಾಗುತ್ತದೆ’ ಎನ್ನುವ ಕೆಟ್ಟ ತಮಾಷೆಯೂ ಕೇಳಿತು.

ಸರ್ಕಾರದ ಮಾತಿಗೆ ಹೆದರಿ ಜನರು ಮೊಬೈಲ್, ಸ್ವೈಪಿಂಗ್ ಯಂತ್ರ ಇವುಗಳನ್ನು ಬಳಸಲು ಆರಂಭಿಸಿದರೆ ಒಳ್ಳೆಯದು- ಅವುಗಳಿಗೆ ಸಂಬಂಧಿಸಿದ ಉದ್ಯಮಗಳಿಗೂ ಲಾಭ ಆಗುತ್ತದೆ, ನೋಟು ಬದಲಾವಣೆ ಮಾಡುವ ದಂಧೆಯಲ್ಲಂತೂ ಅಧಿಕಾರಿಗಳು, ಏಜೆಂಟರಿಗೆ ಹೇರಳವಾಗಿ ಹೊಸ ಕಪ್ಪುಹಣ ಸಿಕ್ಕಿಬಿಟ್ಟಿದೆ, ಯಾವುದೇ ಸರ್ಕಾರದ ಇಂಥ ದಿಢೀರ್ ನಿರ್ಧಾರದಿಂದ ಕನಿಷ್ಠ ಕೆಲವರಿಗಾದರೂ ಒಳ್ಳೆಯದಾಗುತ್ತದೆ ಎಂದೆಲ್ಲಾ ಟೀಕಿಸಲಾಯಿತು.

ಏನಾದರಾಗಲಿ, ಈಗಂತೂ ನಗರಗಳಲ್ಲಿ ಸೊಪ್ಪು ಮಾರುವ ಹೆಂಗಸರೂ ಕರಾವಳಿಯಲ್ಲಿ ಮೀನು ಮಾರುವ ಮಹಿಳೆಯರೂ ಸೇರಿದಂತೆ ಎಲ್ಲರೂ ಡಿಜಿಟಲೀಕರಣದ ವಶೀಕರಣಕ್ಕೆ ಒಳಗಾಗುವುದು ಬಿಟ್ಟರೆ ಬೇರೆ ದಾರಿಯಿಲ್ಲ. ಮೊಬೈಲ್ ಅನ್ನುವುದು ಇನ್ನುಮೇಲೆ ಎಲ್ಲರ ಅಂಗೈ ಮೇಲಿನ ನೆಲ್ಲೀಕಾಯಿಯಂತೆ ಕಂಗೊಳಿಸಬಹುದು. ಆ ಮೂಲಕ ಪ್ರತಿಯೊಬ್ಬರೂ ತಮಗೆ ಚೆನ್ನಾಗಿ ಗೊತ್ತೇ ಇರುತ್ತಿದ್ದ ತಮ್ಮ ಹಣಕಾಸು ತಾಪತ್ರಯವನ್ನು ಕರತಲಾಮಲಕ ಮಾಡಿಕೊಳ್ಳಬಹುದು.

ಕಪ್ಪುಹಣವನ್ನು ನಿರ್ಮೂಲ ಮಾಡುವ ಉದ್ದೇಶದ ನೋಟುಗಳ ಅಮಾನ್ಯೀಕರಣ ಎನ್ನುವುದು ದಿನನಿತ್ಯದ ಸಕಲೆಂಟು ವ್ಯವಹಾರಗಳ ಡಿಜಿಟಲೀಕರಣವಾಗಿ ದಿಢೀರನೆ ಬದಲಾದ್ದರ ಬಗ್ಗೆ ಬೇಕಾದಷ್ಟು ಆರ್ಥಿಕ, ಸಾಮಾಜಿಕ ವಿಶ್ಲೇಷಣೆಗಳು, ಹಲವಾರು ಪ್ರಶ್ನೆಗಳು ಹೊರಬರುತ್ತಿವೆ. ಮೊದಲಿಗೆ, ಕೆಲವೇ ಕೆಲವು ಭ್ರಷ್ಟರ ಬಳಿ ಇದ್ದ ಕಪ್ಪುಹಣದ ಮೇಲೆ ಹಾಕಲಾದ ಕಣ್ಣು, ಈಗ ಇಡೀ ದೇಶದ ಜನರ ಹಣಕಾಸು ವ್ಯವಹಾರದ ಮೇಲೆ ‘ಆಕಾಶಕ್ಕೇ ಹಾಕಿದ ಸಿಸಿ ಟಿವಿ ಕಣ್ಣು’ ಆಗಿ ಥಟ್ಟನೆ ಬದಲಾಗಿಹೋಯಿತು.

ಮೊದಲು ಬಲಗೈ ಖರ್ಚು ಮಾಡಿದ್ದು ಎಡಗೈಗೆ ತಿಳಿಯದಂತೆ ಇರಬಹುದಿತ್ತು. ಆದರೆ ಈಗ ‘ನನ್ನ ಕೂಲಿ, ನನ್ನ ಖರ್ಚು, ಯಾರಿಗೂ ಹೇಳಬೇಕಿಲ್ಲ’ ಎಂದು ದಿನಗೂಲಿ ಬಡವರೂ ಹೇಳುವಂತಿಲ್ಲ. ನಮ್ಮ ಎಲ್ಲ ವ್ಯವಹಾರಗಳನ್ನೂ ಓಡಾಟಗಳನ್ನೂ ಯಾರೋ ಗಮನಿಸುತ್ತಿದ್ದಾರೆ ಎನ್ನುವ ಆಲೋಚನೆಯೇ ವೈಯಕ್ತಿಕ ಅಸ್ವಸ್ಥತೆಗೆ, ನಾಗರಿಕ ಅಸಹನೆಗೆ ದಾರಿ ಮಾಡಬಹುದು. ಡಿಜಿಟಲೀಕರಣ ಎಂಬ ಏಕಪಕ್ಷೀಯವಾದ, ಚರ್ಚಾತೀತವಾದ ಕ್ರಮ, ಪ್ರಜೆಗಳ ಖಾಸಗಿತನದ ಮೇಲೆ ಅವರ ಇಷ್ಟಾನಿಷ್ಟಗಳ ಮೇಲೆ ಮಾಡುವ ನಿರ್ದಿಷ್ಟ ದಾಳಿ ಅಲ್ಲವೇ ಎಂಬ ಆತಂಕವೂ ವ್ಯಕ್ತವಾಗುತ್ತಿದೆ.

ಏನಾದರಾಗಲಿ, ಡಿಜಿಟಲೀಕರಣ ಎನ್ನುವುದು ಜನಸಾಮಾನ್ಯರ ವ್ಯವಹಾರಗಳನ್ನು ನೇರಗೊಳಿಸಿ ಅವರ ಆರ್ಥಿಕ ಸಬಲೀಕರಣಕ್ಕೆ ಬೇಕಾದ ಮೂಲ ನೆಲೆಯನ್ನು ಒದಗಿಸಬಹುದು ಎನ್ನುವ ಆಶಾಭಾವನೆಯೂ ಮೂಡಿದೆ. ಯಾವುದೇ ಹೊಸ ತಾಂತ್ರಿಕತೆಯನ್ನು ಸಾಮಾಜಿಕ ಜೀವನಕ್ಕೆ ಅಳವಡಿಸುವಾಗ ಮೂಡುವ ಸಂದೇಹಗಳು ಇದರಲ್ಲೂ ಇದ್ದೇ ಇವೆ. ಆದರೆ ಇವುಗಳನ್ನು ಮೀರಿ, ಆರ್ಥಿಕತೆಯ ಲಕ್ಷಾಂತರ ಅಂಶಗಳು ಈಗ ಒಮ್ಮೆಲೇ ಕಣ್ಣೋಟಕ್ಕೆ ದಕ್ಕುವಂತೆ ಮಾಡುವ ತಾಂತ್ರಿಕ ಸೌಲಭ್ಯವನ್ನು ದೂರವಿಡುವ ಕಾಲ ಇದಲ್ಲ. ಆದರೆ ಇವೆಲ್ಲವೂ ಕೇವಲ ದುಡಿಯುವ ಜನರ ವ್ಯವಹಾರಗಳಿಗೆ ಹಾಕುವ ಚೌಕಟ್ಟು ಮಾತ್ರವಾಗಬಹುದೇ ಎನ್ನುವ ಶಂಕೆಯನ್ನು ಕೂಡ ಮಾನ್ಯ ಮಾಡಲೇ ಬೇಕು.

ಸಾವಿರಾರು ಕೋಟಿ, ಲಕ್ಷಾಂತರ ಕೋಟಿ ವ್ಯವಹಾರಗಳನ್ನು ಮಾಡುತ್ತ ಅಷ್ಟೇ ತೆರಿಗೆಯನ್ನು ಸರ್ಕಾರಕ್ಕೆ ವಂಚಿಸುತ್ತ ಇರುವ ಮಹಾ ಉದ್ಯಮಿಗಳು ಮಾತ್ರ ಅಂಕೆಶಿಕ್ಷೆಯಿಲ್ಲದೆ ಪಾರಾಗಲು ಅವರು ಅಧಿಕಾರ ಸೂತ್ರ ಹಿಡಿಯುವ ಯಾರಿಗಾದರೂ ಹತ್ತಿರದವರೇ ಆಗಿರುವುದು ಕಾರಣ ಎನ್ನುವುದೂ ಬಹಿರಂಗ ಸತ್ಯ. ರಾಜಕೀಯ ವಿಶ್ಲೇಷಕಿಯೊಬ್ಬರು ಉಲ್ಲೇಖಿಸುವ ಪ್ರಕಾರ, ‘ಒಬ್ಬ ಹೊಸ ‘ಐಟಿ’ (ಅಂದರೆ ಇನ್ಫರ್‌ಮೇಶನ್ ಟೆಕ್ನಾಲಜಿ) ವ್ಯಕ್ತಿ, ಈಗ ಹಳೆಯ ಸಾವಿರ ‘ಐಟಿ’ (ಅಂದರೆ ಇನ್‌ಕಂ ಟ್ಯಾಕ್ಸ್) ವ್ಯಕ್ತಿಗಳ ಕೆಲಸ ಮಾಡಬಲ್ಲ’ ಎಂದು ಆರ್ಥಿಕ ತಜ್ಞರೊಬ್ಬರು ಪ್ರಧಾನಮಂತ್ರಿಗಳಿಗೆ ಜೈಕಾರ ಹೇಳುತ್ತ ವಿವರಿಸಿದರಂತೆ. ತಿಮಿಂಗಿಲ ಉದ್ಯಮಿಗಳು ರಾಜಕಾರಣಿಗಳ ಕೋಠಿಗಳಲ್ಲಿ ಅಡಗುವುದನ್ನು ಪ್ರಾಮಾಣಿಕವಾಗಿ ತಪ್ಪಿಸಿದರೆ ಮಾತ್ರ ಯಾವ ‘ಐಟಿ’ಯನ್ನಾದರೂ ದೇಶ ಒಪ್ಪಿಕೊಳ್ಳುತ್ತದೆ. ಆಗ ಮಾತ್ರ ಈ ಎಲ್ಲ ಹೊಸ ಕ್ರಮಗಳಿಗೂ ಅರ್ಥ ಬರುತ್ತದೆ. ಇಲ್ಲದಿದ್ದರೆ, ಜನಸಾಮಾನ್ಯರ ಭಯ ನಿಜವಾಗುತ್ತದೆ.

‘ಬಾಯಲ್ಲಿ ಪ್ರಾಚೀನ ಹಿಂದುತ್ವ ಮಂತ್ರ ಪಠಣ, ಕೈಯಲ್ಲಿ ಅತ್ಯಾಧುನಿಕ ಡಿಜಿಟಲೀಕರಣ- ಹೀಗೆ ಹಳತುಹೊಸತುಗಳ ಅತಾರ್ಕಿಕ ಮದುವೆಯನ್ನೂ ನಾವೀಗ ನೋಡುತ್ತಿದ್ದೇವೆ’ ಎಂದೆಲ್ಲ ಡಿಜಿಟಲೀಕರಣ ಕುರಿತು ಬಂದ ಸಾಮಾಜಿಕ ವಿಶ್ಲೇಷಣೆಯನ್ನೂ ನಾವು ಗಂಭೀರವಾಗಿ ಪರಿಗಣಿಸಬೇಕು. ದೇವಾಲಯಗಳ ರಥೋತ್ಸವ ಕಾಲದಲ್ಲಿ ಭಕ್ತರು ಶ್ರದ್ಧೆಯಿಂದ ಎಳೆಯುತ್ತಿದ್ದ ತೇರು, ರಥಗಳಿಗೂ ಮೋಟಾರ್ ಅಳವಡಿಕೆ ಆಗುತ್ತಿರುವ ಸೋಜಿಗವನ್ನು ‘ಯಾಕಾಗಬಾರದು’ ಎಂದು ಒಪ್ಪಿಕೊಳ್ಳುವಷ್ಟು ಸುಲಭವಾಗಿ, ಇದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಏಕೆಂದರೆ, ಮೇಲಿನ ವಿಶ್ಲೇಷಣೆಗೆ ವ್ಯಾಪಕ ಆಯಾಮಗಳಿವೆ.

ಎಲ್ಲ ಆಧುನಿಕ ಬೌದ್ಧಿಕ ಸಾಮಾಜಿಕ ವಿಚಾರಗಳನ್ನೂ ಉಗ್ರವಾಗಿ ವಿರೋಧಿಸುತ್ತ, ಆದರೆ ಆಧುನಿಕ ತಂತ್ರಜ್ಞಾನವನ್ನು ಮಾತ್ರ ಆದರದಿಂದ ಒಪ್ಪಿಕೊಳ್ಳುತ್ತ, ಅದೇ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ ಎಂದು ಬಲವಾಗಿ ಪ್ರತಿಪಾದಿಸುತ್ತ ಗರ್ಜಿಸುವ ಹೊಸಕಾಲದ ಹಳಬರು ದೇಶದ ತುಂಬಾ ಹರಡಿಕೊಂಡಿದ್ದಾರೆ.

ಇವರಿಗೆ ಸಾಮಾನ್ಯರ ಚಿಲ್ಲರೆ ಸಮಸ್ಯೆಗಳು ಅರ್ಥವಾಗುವುದಿಲ್ಲ. ಜೊತೆಗೆ ‘ಡಿಜಿಟಲೀಕರಣ ಒಪ್ಪಿಕೊಂಡು ನೂರಿನ್ನೂರು ರೂಪಾಯಿಗಳಿಗೂ ಆನ್‌ಲೈನ್ ವ್ಯವಹಾರ ಮಾಡಬೇಕು ಎಂದು ಆಗ್ರಹಿಸುವುದಾದರೆ, ಅಂತರ್ಜಾತಿ, ಅಂತರ್‌ಧರ್ಮೀಯ ಮದುವೆಗಳನ್ನೂ ಮುಕ್ತವಾಗಿ ಸ್ವಾಗತಿಸಬೇಕು- ಹೊಸ ಬೆಳವಣಿಗೆ ಅದು ಮಾತ್ರ ಬೇಕು ಇದು ಬೇಡವೇ ಬೇಡ ಎನ್ನುವುದು ಸರಿಯೇ’ ಎಂದು ಯಾರಾದರೂ ಪ್ರಶ್ನೆ ಮಾಡಿದರೆ ಏನು ಹೇಳೋಣ?

‘ಮೊಬೈಲ್ ಮತ್ತು ಸ್ವೈಪ್ ಯಂತ್ರ ಕೈಯಲ್ಲಿ ಹಿಡಿದು ಕ್ಯಾಷ್‌ಲೆಸ್ ವ್ಯವಹಾರ ಮಾಡಿ’ ಎಂದು ಪ್ರಧಾನ ಮಂತ್ರಿಗಳು ಅಪ್ಪಣೆ ಕೊಡಿಸಿದ ಮೇಲೆ ಜನರು ಡಿಜಿಟಲೀಕರಣವನ್ನು ನಿರ್ವಾಹವಿಲ್ಲದೆ ಒಪ್ಪಿಕೊಂಡು ಇನ್ನುಮುಂದೆ ಎಲ್ಲದಕ್ಕೂ ಮೊಬೈಲ್ ಕೈಗೆತ್ತಿಕೊಳ್ಳಬಹುದು. ಆದರೆ ಈ ಹಿಂದೆ ಇವರೇ ‘ಸ್ವಚ್ಛ ಭಾರತ’ ನಿರ್ಮಾಣಕ್ಕಾಗಿ ಎಲ್ಲರೂ ದೇಶವನ್ನು ಸ್ವಚ್ಛಗೊಳಿಸಲು ಪೊರಕೆ ಕೈಗೆತ್ತಿಕೊಳ್ಳಿ ಎಂದು ಕರೆ ಕೊಟ್ಟಿದ್ದರು. ಅದನ್ನು ಮನ್ನಿಸಿ ಎಷ್ಟು ಜನ ಪೊರಕೆ ಕೈಗೆತ್ತಿಕೊಂಡರೆನ್ನುವುದು ದೇಶದ ಉದ್ದಗಲಕ್ಕೆ ಗೊತ್ತಾಗುತ್ತಿದೆ.

ಡಿಜಿಟಲೀಕರಣದಿಂದ ದೇಶದ ಆರ್ಥಿಕ ವ್ಯವಹಾರ ಬದಲಾಗಬಹುದು, ಆದರೆ ಸಾಮಾಜಿಕ ಚಿಂತನೆ ಬದಲಾಗುವುದಿಲ್ಲ. ಮೊಬೈಲ್ ಹಿಡಿಯುವುದೇ ಬೇರೆ, ಪೊರಕೆ ಹಿಡಿಯುವುದೇ ಬೇರೆ. ಇದಕ್ಕೆ ಇರುವ ಛಲ, ಅದಕ್ಕೂ ಬೇಕು. ಸ್ವಚ್ಛ ಭಾರತ ಆಂದೋಲನ ಈಗ ಬರೀ ಜಾಹೀರಾತುಗಳಲ್ಲಿ ನಡೆಯುತ್ತಿದೆ ಎಂಬ ವ್ಯಂಗ್ಯ ಸಕಾರಣವಾಗಿದೆ.

ಅದನ್ನು ನೆಲಜಲಗಳಿಗೆ ಇಳಿಸುವುದು ಹೇಗೆ, ನಮ್ಮ ಜನರು ಶೌಚಾಲಯ ನಿರ್ಮಾಣಕ್ಕೆ ಒಪ್ಪದಿದ್ದರೂ ಅನಿವಾರ್ಯವಾಗಿ ಉಪಕರಣಗಳನ್ನು ಖರೀದಿಸಬಹುದು, ಆದರೆ ಅವರನ್ನು ಅದಕ್ಕೆ ಒಪ್ಪಿಸುವುದು ಹೇಗೆ ಎನ್ನುವುದು ಡಿಜಿಟಲೀಕರಣವನ್ನು ಮೀರಿದ ಬಹಳ ದೊಡ್ಡ ಸವಾಲು ಎನ್ನುವುದರಲ್ಲಿ ಅನುಮಾನವಿಲ್ಲ ಡಿಜಿಟಲೀಕರಣದ ಯಶಸ್ಸನ್ನು ಅಣಕಿಸುವ ನೂರೆಂಟು ಸಾಮಾಜಿಕ ಸಮಸ್ಯೆಗಳನ್ನು ಪಟ್ಟಿ ಮಾಡಬಹುದು, ಅವು ಅರ್ಥವ್ಯವಸ್ಥೆಯನ್ನು ಮೀರಿದ ಅನರ್ಥಗಳೆನ್ನುವುದು ನಿಜ. ಉತ್ತರ ಪ್ರದೇಶದಲ್ಲಿ ಶಾಲಾ ಮುಖ್ಯಸ್ಥನೊಬ್ಬ ಒಂದು ತರಗತಿಗೆ ಎ-ಬಿ-ಸಿ ಎಂದು ಮೂರು ಸೆಕ್ಷನ್‌ಗಳನ್ನು ಮಾಡುವಾಗ ಮೇಲ್ಜಾತಿಯ, ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳನ್ನು ಅವುಗಳಿಗೆ ವಿಂಗಡಿಸಿ ಹಾಕಿದನಂತೆ.

ಅಷ್ಟು ಸಾಲದೆಂಬಂತೆ, ಆಯಾ ಜಾತಿಯ ಶಿಕ್ಷಕರನ್ನೇ ಅವುಗಳಿಗೆ ನೇಮಿಸಿದನಂತೆ. ದೇಶದ ಶಿಕ್ಷಣ ವ್ಯವಸ್ಥೆಗೇ ಇಂಥಾ ಕೆಟ್ಟ ಪಾಠವನ್ನು ಹೇಳಿಕೊಟ್ಟ ಅವನಂಥವರ ತಲೆಯಲ್ಲಿರುವ ಕಪ್ಪುಕಸ ತೆಗೆದು ಹಾಕಲು ಬರೀ ಡಿಜಿಟಲ್ ಉಪಕರಣ ಸಾಕಾಗದು. ಇದು ದೇಶದಲ್ಲಿ ತಾಂಡವವಾಡುತ್ತಿರುವ ಅಸ್ಪೃಶ್ಯತೆ, ಜಾತೀಯತೆ, ಧರ್ಮಾಂಧತೆಗಳ ಒಂದು ಸಣ್ಣ ಉದಾಹರಣೆಯಷ್ಟೇ.

ಇದನ್ನು ಜೊತೆಗೇ ತೊಡೆದು ಹಾಕದೆ ಆರ್ಥಿಕ ಪ್ರಗತಿಗೆ ಅರ್ಥವಿಲ್ಲ. ‘ಕ್ಯಾಷ್ ಲೆಸ್’ ಆರ್ಥಿಕ ವ್ಯವಹಾರ ಎಷ್ಟು ಮುಖ್ಯವೋ ‘ಕ್ಯಾಸ್ಟ್ ಲೆಸ್’ ಸಾಮಾಜಿಕ ವ್ಯವಹಾರವೂ ಅಷ್ಟೇ ಮುಖ್ಯ. ಇವೆಲ್ಲ ಹಳೆಯ ಸಮಸ್ಯೆಗಳು ಹಿಂದಿನಿಂದಲೂ ಇದ್ದದ್ದೇ ಎನ್ನುವುದು ನಿಜ, ಆದರೆ ಇಂದು ಅವುಗಳ ನಿವಾರಣೆಗೆ ಪ್ರಯತ್ನಿಸದೆ ಸಮಾಜ ಮುಂದುವರೆಯಲು ಸಾಧ್ಯವಿಲ್ಲ.

ಪ್ರಧಾನ ಮಂತ್ರಿಗಳೇ ಪ್ರತಿಪಾದಿಸಿದ ‘ಬೇಟಿ ಬಚಾವೊ, ಬೇಟಿ ಪಢಾವೊ’ ಮಂತ್ರಕ್ಕೂ ಬರೀ ತಂತ್ರಜ್ಞಾನದ ಅರಿವು ಸಾಕಾಗುವುದಿಲ್ಲ. ಹಾಗೆ ನೋಡಿದರೆ ತಂತ್ರಜ್ಞಾನ ಬೆಳೆದ ಹಾಗೆ ಹೆಣ್ಣುಮಕ್ಕಳ ಕಷ್ಟವೂ ಹೆಚ್ಚಿತೆನ್ನಬಹುದು. ಮೊದಲು ಹೆಣ್ಣಿಗೆ ಹುಟ್ಟುವ ಹಕ್ಕಾದರೂ ಇತ್ತು, ವೈದ್ಯಕೀಯ ತಂತ್ರಜ್ಞಾನ ಬೆಳೆದು ಅವಳ ಹುಟ್ಟುವ ಹಕ್ಕನ್ನೂ ಕಸಿಯಿತು.

ಹೊಟ್ಟೆಯಲ್ಲಿರುವುದು ಗಂಡೋ ಹೆಣ್ಣೋ ಎನ್ನುವುದನ್ನು ತಂತ್ರಜ್ಞಾನದ ನೆರವಿನಿಂದ ಮೊದಲೇ ತಿಳಿದು ಹೆಣ್ಣಾದರೆ ಅವಳನ್ನು ಅಲ್ಲೇ ಹೊಸಕಿ ಹಾಕುವ ಹೊಸ ಸಾಮಾಜಿಕ ಬೆಳವಣಿಗೆ ಆಯಿತು. ಹೆಣ್ಣುಮಕ್ಕಳನ್ನು ಉಳಿಸುವ, ಸರಿಯಾದ ಪೋಷಣೆಯೊಂದಿಗೆ ಬೆಳೆಸುವ ಮತ್ತು ಅವರನ್ನು ಶಾಲೆಗೆ ಓದಲು ಕಳಿಸುವ ಯೋಜನೆ ಸರಿಯಾಗಿ ಜಾರಿಯಲ್ಲಿದೆಯೇ ಎನ್ನುವುದನ್ನು ತಿಳಿಯಲು ಸಾಮಾಜಿಕ ‘ಸಿಸಿಟಿವಿ’ ಕ್ಯಾಮೆರಾಗಳು ಬೇಕೇಬೇಕು. ಅಂಥ ಚಿಂತನೆಯನ್ನು ಸಮಾಜದಲ್ಲಿ ಬೆಳೆಸಲು ಜನರ ತಲೆಯೊಳಗಿನ ಪುರುಷ ಪ್ರಧಾನ ಲೆಕ್ಕಾಚಾರಗಳನ್ನು ಅಳಿಸಿ ಹಾಕುವ ಹೊಸ ಸಾಮಾಜಿಕ ಡಿಜಿಟಲೀಕರಣ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT