ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಕ್ಕೆ ದೊರೆಯದ ಪೀಠ ತಾನಾಗಿಯೇ ಬಂತು

Last Updated 16 ಜೂನ್ 2013, 19:59 IST
ಅಕ್ಷರ ಗಾತ್ರ

ದು ವರ್ಷಗಳಿಂದ ಧಾರವಾಡ ಮತ್ತು ಗುಲ್ಬರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೈಕೋರ್ಟ್ ಸಂಚಾರಿ ಪೀಠಗಳನ್ನು ಕಾಯಂ ಪೀಠ ಮಾಡುವ ಮೂಲಕ ಕೇಂದ್ರ ಸರ್ಕಾರ ಉತ್ತರ ಕರ್ನಾಟಕ ಭಾಗದ ಜನರ ನಾಲ್ಕು ದಶಕಗಳಷ್ಟು ಹಳೆಯದಾದ ಕನಸನ್ನು ನನಸು ಮಾಡಿದೆ.

ರಾಜ್ಯ ಪುನರ್ವಿಂಗಡಣೆಯಾದ ಸುಮಾರು 15 ವರ್ಷಗಳ ಕಾಲ ಈ ರೀತಿಯ ಕೂಗು ರಾಜ್ಯದಲ್ಲಿ ಎದ್ದಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಈ ಭಾಗದ ಜನರಿಗೆ ಏಕೋ ನಮಗೂ ನಾಗಪುರ ಮಾದರಿಯ ಹೈಕೋರ್ಟ್ ಪೀಠ ಬೇಕು ಎಂಬ ಭಾವನೆ ಮೂಡಿತು. ಅದೇ ಸಂದರ್ಭದಲ್ಲಿ, ಅಂದರೆ ಎಪ್ಪತ್ತರ ದಶಕದಲ್ಲಿ ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ವಕೀಲರ ಸಮ್ಮೇಳನದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕೂಗು ಮೊಳಗಿತು.

ಇದಕ್ಕೆ ಮೂಲ ಕಾರಣ ಕಕ್ಷಿದಾರರಿಗೆ ಅವರ ಮನೆಯ ಸಮೀಪದಲ್ಲೇ ನ್ಯಾಯ ದೊರೆಯುವಂತಹ ವ್ಯವಸ್ಥೆ ಆಗಬೇಕು ಎಂಬುದಾಗಿತ್ತು. ಬೆಳಗಾವಿ, ವಿಜಾಪುರ, ಬೀದರ್, ಗುಲ್ಬರ್ಗ ಮೊದಲಾದ ದೂರದ ಊರುಗಳಿಂದ ಬೆಂಗಳೂರಿಗೆ ಹೋಗಿ ಹೈಕೋರ್ಟ್‌ನಲ್ಲಿ ಕೇಸು ನಡೆಸುವುದು ಬಡ ಕಕ್ಷಿದಾರರಿಗೆ ಬಲು ತ್ರಾಸದ ಕೆಲಸವಾಗಿತ್ತು. ಕೇಸಿಗಾಗಿ ಬೆಂಗಳೂರಿಗೆ ಹೋಗಿ ಬರುವುದೆಂದರೆ ಬಹಳ ತೊಂದರೆ, ಜತೆಗೆ ಖರ್ಚು ಬಹಳ ಬರುತ್ತಿತ್ತು.

ಇದೆಲ್ಲವನ್ನೂ ಗಮನಿಸಿ ಈ ಭಾಗದ ಜನರ ಅನುಕೂಲದ ದೃಷ್ಟಿಯಿಂದ ಹೈಕೋರ್ಟ್ ಕಾಯಂ ಪೀಠ ಸ್ಥಾಪನೆಯಾಗಬೇಕು ಎಂಬ ಕೂಗು ಎದ್ದಿತು. ಕಾಂಗ್ರೆಸ್ ಪಕ್ಷ ಮನಸ್ಸು ಮಾಡಿದ್ದರೆ ಈ ಕಾರ್ಯ 30 ವರ್ಷಗಳ ಹಿಂದೆಯೇ ಬಹಳ ಸುಲಭವಾಗಿ ಆಗುತ್ತಿತ್ತು. ಏಕೆಂದರೆ  ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಗಳಿದ್ದವು. ಆದರೆ ಏಕೋ ಏನೋ ಆಗ ಕಾಂಗ್ರೆಸ್ ಪಕ್ಷ ಮನಸ್ಸು ಮಾಡಲಿಲ್ಲ.

1972ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದ ಧಾರವಾಡದ ವಕೀಲ ಡಿ.ಕೆ.ನಾಯ್ಕರ್ ನಂತರ ರಾಜ್ಯದ ಕಾನೂನು ಸಚಿವರಾಗಿದ್ದರು. ಉತ್ತರ ಕರ್ನಾಟಕದ ಹೈಕೋರ್ಟ್ ಪೀಠದ ಬೇಡಿಕೆಗೆ ಅವರೇ ದನಿಯಾದರು. ಜತೆಗೆ ರಾಜ್ಯದ ಆಗಿನ ಮುಖ್ಯ ನ್ಯಾಯಮೂರ್ತಿ ಡಿ.ಎಂ.ಚಂದ್ರಶೇಖರ್ ಕೂಡ ಶಾಶ್ವತ ಪೀಠದ ಪರವಾಗಿಯೇ ಇದ್ದರು. ಅವರಿಂದಲೂ ಒಪ್ಪಿಗೆ ಪಡೆದು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತು.

ನಾಯ್ಕರ್ ಅವರ ನಂತರ ರಾಜ್ಯದಲ್ಲಿ ಕಾನೂನು ಸಚಿವರಾದ ಯಾರೂ ಈ ಬಗ್ಗೆ ಗಮನಹರಿಸಲಿಲ್ಲ. ಲೋಕಸಭಾ ಸದಸ್ಯರೂ ಆಸಕ್ತಿ ತೋರಲಿಲ್ಲ. ಕೇಂದ್ರಕ್ಕೆ ಸಲ್ಲಿಕೆಯಾಗಿದ್ದ ಪ್ರಸ್ತಾವ ಯಾವ ಸ್ಥಿತಿಯಲ್ಲಿದೆ. ಏನಾಗಿದೆ. ಅದರ ಅನುಷ್ಠಾನಕ್ಕೆ ಏನು ಮಾಡಬೇಕು ಎಂಬುದನ್ನು ಯಾರೂ ನೋಡಲಿಲ್ಲ. ನಂತರ ದೇಶ-ರಾಜ್ಯದಲ್ಲಿ ರಾಜಕೀಯ ವಾತಾವರಣ ಬದಲಾಯಿತು.

1983ರಿಂದ ಕೇಂದ್ರದಲ್ಲಿ ಒಂದು ಪಕ್ಷದ ಸರ್ಕಾರವಿದ್ದರೆ ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುವಂತಹ ವಾತಾವರಣ ನಿರ್ಮಾಣವಾಗಿ ಪ್ರಸ್ತಾವ ಹಳ್ಳ ಹಿಡಿಯಿತು.ಸಂಚಾರಿ ಪೀಠವನ್ನು ರಾಜ್ಯದ ರಾಜ್ಯಪಾಲರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ರಾಜ್ಯ ಸರ್ಕಾರ ಸಮಾಲೋಚಿಸಿ ಸ್ಥಾಪಿಸಬಹುದು. ಆದರೆ ಶಾಶ್ವತ ಪೀಠಕ್ಕೆ ಕೇಂದ್ರದ ಅನುಮತಿ ಕಡ್ಡಾಯ. ಹಿಂದೆ ಮಹಾರಾಷ್ಟ್ರದಲ್ಲಿ ಎ.ಆರ್.ಅಂಟುಳೆ ಮುಖ್ಯಮಂತ್ರಿಯಾಗಿದ್ದಾಗ ಔರಂಗಾಬಾದ್‌ನಲ್ಲಿ ಸಂಚಾರಿ ಪೀಠ ಸ್ಥಾಪಿಸಿದ್ದರು.

ನಾಯ್ಕರ್ ಅವರು ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ಶಾಶ್ವತ ಪೀಠ ಸ್ಥಾಪನೆಗೆ ಒತ್ತು ನೀಡಿದ್ದರಿಂದ ಸಂಚಾರಿ ಪೀಠ ಸ್ಥಾಪನೆಗೆ ಅವರು ಪ್ರಯತ್ನಿಸಲಿಲ್ಲ. ಒಂದು ವೇಳೆ ಆಗಲೇ ಈ ಕೆಲಸವಾಗಿದ್ದಿದ್ದರೆ  ಈಗ ಗುಲ್ಬರ್ಗಕ್ಕೆ ಅವಕಾಶವೇ ಸಿಗುತ್ತಿರಲಿಲ್ಲ. ಏಕೆಂದರೆ ಆಗ ಗುಲ್ಬರ್ಗದಲ್ಲಿ ಈ ಕುರಿತ ಕೂಗು ಎದ್ದಿರಲಿಲ್ಲ. ಧಾರವಾಡ ಅಥವಾ ಹುಬ್ಬಳ್ಳಿಯಲ್ಲಿ ಒಂದು ಕಡೆ ಮಾತ್ರ ಇರುತ್ತಿತ್ತು. ಈಗ ನಾವು ಆಗಿದ್ದೆಲ್ಲಾ ಒಳ್ಳೆಯದಕ್ಕೆ ಎಂದು ಅಂದುಕೊಳ್ಳಬೇಕು.

ಇತರೆ ರಾಜ್ಯಗಳಿಂದಲೂ ಹೈಕೋರ್ಟ್ ಪೀಠಗಳಿಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನ್ಯಾಯಮೂರ್ತಿ ಜಸ್ವಂತ್‌ಸಿಂಗ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು. ಆದರೆ ಈ ಕುರಿತ ಪ್ರಸ್ತಾವಗಳ ಬಗ್ಗೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳದ ಸಮಿತಿಯು ಬದಲಿಗೆ ಹೈಕೋರ್ಟ್ ಪೀಠಗಳ ಸ್ಥಾಪನೆಗೆ ಮಾರ್ಗಸೂಚಿ ಸಿದ್ಧಪಡಿಸಿತು. ಆಗಲೂ ಸಮಿತಿ ವರದಿ ಬಗ್ಗೆ ರಾಜ್ಯ ಸರ್ಕಾರ ಪ್ರತಿಕ್ರಿಯಿಸಲಿಲ್ಲ.

ಈ ನಡುವೆ, ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ ಸತತ ಪ್ರತಿಭಟನೆಗಳು, ಹೋರಾಟಗಳು ನಡೆದವು. ತಿಂಗಳುಗಟ್ಟಲೆ ನ್ಯಾಯಾಲಯದ ಕಲಾಪಗಳು ಸ್ಥಗಿತಗೊಂಡವು. ಅದಕ್ಕಿಂತ ವಿಪರ್ಯಾಸವೆಂದರೆ ಒಂದು ನಿರ್ದಿಷ್ಟ ಜಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಲಿ ಎಂದು ಯಾರೂ ಹೋರಾಟ ಮಾಡಲೇ ಇಲ್ಲ. ಬದಲಿಗೆ ಎಲ್ಲ ಜಿಲ್ಲೆಯವರೂ ತಮ್ಮ ತಮ್ಮ ಜಿಲ್ಲೆಯಲ್ಲಿಯೇ ಆಗಬೇಕು ಎಂದು ಹೋರಾಟ ಆರಂಭಿಸಿದರು. ಇದಕ್ಕೆ ಉತ್ತರ ಕನ್ನಡ ಜಿಲ್ಲೆ ಮಾತ್ರ ಹೊರತಾಗಿತ್ತು.

ಧಾರವಾಡ ಮತ್ತು ಹುಬ್ಬಳ್ಳಿಯಲ್ಲೂ ಪೀಠಕ್ಕಾಗಿ ಪ್ರತ್ಯೇಕ ಹೋರಾಟ ನಡೆದುದು ಮಾತ್ರ ಅಚ್ಚರಿ ಎನಿಸುತ್ತದೆ. ಒಟ್ಟಾರೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಹೋರಾಟ ಉತ್ತುಂಗಕ್ಕೇರಿತ್ತು.ಸಂಚಾರಿ ಪೀಠವಾದರೆ ಈ ಭಾಗಗಳಿಗೆ ಬಂದು ಕಾರ್ಯನಿರ್ವಹಿಸಲು ನ್ಯಾಯಮೂರ್ತಿಗಳಿಗೆ ತೊಂದರೆಯಾಗುತ್ತದೆ ಎಂದು ಹೈಕೋರ್ಟ್ ಕೂಡ ಅಷ್ಟಾಗಿ ಈ ಬೇಡಿಕೆಯತ್ತ ಗಮನಹರಿಸುತ್ತಿರಲಿಲ್ಲ.

ಹೈಕೋರ್ಟ್ ಮನವೊಲಿಸುವ ಕಾರ್ಯವನ್ನು ಸರ್ಕಾರ ಕೂಡ ಸಮರ್ಪಕವಾಗಿ ಮಾಡುತ್ತಿರಲಿಲ್ಲ. ಅಲ್ಲದೇ ಒಮ್ಮತದಿಂದ ಒಂದು ನಿರ್ದಿಷ್ಟ ಸ್ಥಳದಲ್ಲಿ ಪೀಠ ಸ್ಥಾಪನೆಗೆ ಪಟ್ಟು ಹಿಡಿಯುವ ಬದಲಿಗೆ ಎಲ್ಲ ಕಡೆಯಿಂದಲೂ ಬೇಡಿಕೆ ಬರುತ್ತಿದ್ದರಿಂದ ವಿಳಂಬಕ್ಕೆ ಕಾರಣವಾಗಿರಬಹುದು.

ಇದೆಲ್ಲದರ ನಡುವೆಯೂ, 2004ರಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್.ಕೆ.ಜೈನ್, ಆಗ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಇದ್ದ ಅಡೆತಡೆಗಳನ್ನು ಪೂರ್ಣವಾಗಿ ನಿವಾರಿಸಿದರು. ಆದರೆ ಮೊದಲಿನ ಬೇಡಿಕೆಯಂತೆ ಒಂದು ಕಡೆಗೆ ಬದಲಾಗಿ ಎರಡು ಕಡೆ ಸಂಚಾರಿ ಪೀಠ ಸ್ಥಾಪನೆಗೆ ಒಪ್ಪಿಗೆ ದೊರೆಯಿತು.

ರಾಜ್ಯ ಸರ್ಕಾರ ಇಲ್ಲಿ ಜಾಣ್ಮೆ ತೋರಿತು. ಅನುಮತಿ ಸಿಕ್ಕಿದ್ದು ಸಂಚಾರಿ ಪೀಠಕ್ಕಾದರೂ ಸರ್ಕಾರ ಮಾತ್ರ ಶಾಶ್ವತ ಪೀಠ ಸ್ಥಾಪನೆಗೆ ಬೇಕಾದ ಎಲ್ಲ ಮೂಲಸೌಕರ್ಯಗಳನ್ನು ಒಮ್ಮೆಗೇ ಕಲ್ಪಿಸಿತು. ಎರಡೂ ಕಡೆ ಕರ್ನಾಟಕ ಹೈಕೋರ್ಟ್ ಮಾದರಿಯಲ್ಲಿಯೇ ಬೃಹತ್ ಕಟ್ಟಡಗಳನ್ನು ನಿರ್ಮಿಸಿ, ನ್ಯಾಯಮೂರ್ತಿಗಳಿಗೆ, ಸಿಬ್ಬಂದಿಗೆ ಅಗತ್ಯವಿರುವ ನಿವಾಸಗಳನ್ನು ಕಟ್ಟಿಸಿತು. ಈಗ ಈ ಪೀಠಗಳಲ್ಲಿ ಮೊಕದ್ದಮೆಗಳ ಸಂಖ್ಯೆಯೂ ಸಾಕಷ್ಟಿವೆ. ರೊಟೇಷನ್ ಮೇಲೆ ನ್ಯಾಯಮೂರ್ತಿಗಳು ಈಗ ಇಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತ್ದ್ದಿದಾರೆ.

ಈಗ ಶಾಶ್ವತ ಪೀಠಕ್ಕಾಗಿ ಹೋರಾಟಗಳೇನೂ ನಡೆದಿರಲಿಲ್ಲ. ಹಿಂದೆ ಹೋರಾಟ ಉತ್ತುಂಗದಲ್ಲಿದ್ದಾಗಲೂ ಮನಸ್ಸು ಮಾಡದ ಕೇಂದ್ರ ಸರ್ಕಾರ ದಿಢೀರನೇ ಈ ನಿರ್ಧಾರ ಪ್ರಕಟಿಸಿದೆ. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಸಂಪುಟದಲ್ಲಿ ಒತ್ತಡ ತಂದು ಶಾಶ್ವತ ಪೀಠಕ್ಕೆ ಅನುಮೋದನೆ ದೊರೆಯುವಂತೆ ಮಾಡಿದ್ದಾರೆ. ಕಾಕತಾಳೀಯವೆಂದರೆ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ತಿಂಗಳಾಗಿದೆ. ಆದರೆ ರಾಜ್ಯ ಸರ್ಕಾರದಿಂದ ಈ ಕುರಿತ ಪ್ರಸ್ತಾವ ಈಗ ಹೋಗಿರುತ್ತದೆ ಎನ್ನಲಾಗದು. ಆದರೂ ಈ ಕೆಲಸ ಆಗಿರುವುದು ಉತ್ತರ ಕರ್ನಾಟಕದ ದೃಷ್ಟಿಯಿಂದ ಒಳ್ಳೆಯದು.

ಈಗ ಶಾಶ್ವತ ಪೀಠವಾಗಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಈ ಊರುಗಳಲ್ಲಿಯೇ  ಇರುತ್ತಾರೆ. ಹೊಸದಾಗಿ ಕರ್ನಾಟಕಕ್ಕೆ 9-10 ನ್ಯಾಯಮೂರ್ತಿಗಳ ನೇಮಕವಾಗುತ್ತದೆ. ನೇಮಕಾತಿಯಲ್ಲಿ ಉತ್ತರ ಕರ್ನಾಟಕದವರಿಗೆ ಅವಕಾಶವಾಗಲೂಬಹುದು. ಇನ್ನಷ್ಟು ಸಿಬ್ಬಂದಿ ನೇಮಕಾತಿ ಸಂದರ್ಭದಲ್ಲೂ ಈ ಭಾಗದವರಿಗೆ ಅವಕಾಶವಾಗಬಹುದು. ರೊಟೇಷನ್ ಮೇಲೆ ನ್ಯಾಯಮೂರ್ತಿಗಳು ಸಂಚಾರಿ ಪೀಠಕ್ಕೆ ಬಂದು-ಹೋಗುವುದು, ಬೆಂಗಳೂರಿನ ಹೈಕೋರ್ಟ್‌ನಲ್ಲಿನ ಕೆಲಸದ ಒತ್ತಡ ಮೊದಲಾದ ಕಾರಣಗಳಿಂದ ನ್ಯಾಯದಾನ ಕೂಡ ಸ್ವಲ್ಪ ವಿಳಂಬವಾಗುತ್ತಿತ್ತು. ಮುಂದಿನ ದಿನಗಳಲ್ಲಿ ಶೀಘ್ರಗತಿಯಲ್ಲಿ ನ್ಯಾಯದಾನ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ.

ನ್ಯಾಯಾಲಯ, ನ್ಯಾಯಮೂರ್ತಿಗಳಿಗೆ ಕೊಟ್ಟಷ್ಟೇ ಆದ್ಯತೆಯನ್ನು ಸರ್ಕಾರ ನ್ಯಾಯವಾದಿಗಳಿಗೂ ಕೊಡಬೇಕು. ಅವರೂ ನ್ಯಾಯಾಂಗ ವ್ಯವಸ್ಥೆಯ ಅವಿಭಾಜ್ಯ ಅಂಗ. ಧಾರವಾಡ ಹೈಕೋರ್ಟ್ ಸಮುಚ್ಚಯದ ಸಮೀಪದಲ್ಲೇ ಇರುವ `ವಾಲ್ಮಿ'ಗೆ ಸೇರಿದ 162 ವಸತಿಗೃಹಗಳನ್ನು ಸುಮಾರು ಎರಡು ದಶಕಗಳಿಂದ ಬಳಸುತ್ತಿಲ್ಲ.

ಈಗ ಅವುಗಳನ್ನು ರಿಪೇರಿ ಮಾಡಿಸಿ, ಸುಸ್ಥಿತಿಗೆ ತಂದು ವಕೀಲರಿಗೆ ಕೊಡಬಹುದು. ಆಗ ಅವರಿಗೂ ಒಂದಿಷ್ಟು ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಹೈಕೋರ್ಟ್ ಪೀಠದ ಕಟ್ಟಡಗಳಿಗೆ 200 ಕೋಟಿ ರೂಪಾಯಿ ವಿನಿಯೋಗಿಸಿರುವ ಸರ್ಕಾರಕ್ಕೆ ಇದೊಂದು ದೊಡ್ಡ ಕೆಲಸವಾಗಲಾರದು. ತಕ್ಷಣ ಸರ್ಕಾರ ಇತ್ತ ಗಮನಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT