ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧಾರ್’ ಆದರಿಸುತ್ತಾ ಮರೆತದ್ದು...

Last Updated 15 ಮಾರ್ಚ್ 2016, 19:53 IST
ಅಕ್ಷರ ಗಾತ್ರ

ಸರಿಯಾಗಿ ಎರಡು ವರ್ಷಗಳ ಹಿಂದೆ. ಲೋಕಸಭಾ ಚುನಾವಣೆ ದಿನಗಳವು. ಇದೇ ಮಾರ್ಚ್ ತಿಂಗಳಿನಲ್ಲಿ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಅನಂತಕುಮಾರ್ ‘ನಾವು ಅಧಿಕಾರಕ್ಕೆ ಬಂದರೆ ಆಧಾರ್ ಯೋಜನೆಯನ್ನು ಕಸದಬುಟ್ಟಿಗೆ ಎಸೆಯುತ್ತೇವೆ’ ಎಂದಿದ್ದರು. ಇದಾದ ಮೇಲೆ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಅವರು ಈ ಮಾತುಗಳನ್ನು ಹಲವು ಬಾರಿ ಹೇಳಿದರು. ಅನಂತಕುಮಾರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಗೆದ್ದರು. ಅವರೆದುರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆಧಾರ್ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಮುಖ್ಯಸ್ಥರಾಗಿದ್ದ ನಂದನ್ ನಿಲೇಕಣಿ ಸೋಲುಂಡರು. ಆದರೆ ‘ಆಧಾರ್’ ಯೋಜನೆ ಮಾತ್ರ ಮುಂದುವರಿಯಿತು.

ಯುಪಿಎ ಸರ್ಕಾರ ಈ ಯೋಜನೆಯನ್ನು ಸಂಸತ್ತಿನಲ್ಲಿ ಚರ್ಚಿಸದೆ ಕೇವಲ ಒಂದು ಅನುಷ್ಠಾನಾದೇಶ  ಮೂಲಕ ಜಾರಿಗೆ ತಂದಿತ್ತು. ಆಗ ಇದನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದ ಎನ್‌ಡಿಎ ಇದಕ್ಕೆ ಸಂಬಂಧಿಸಿದ ಮಸೂದೆಯೊಂದನ್ನು ಲೋಕಸಭೆಯಲ್ಲಿ ಮಂಡಿಸಿ ಯೋಜನೆಗೆ ಕಾನೂನಿನ ಮಾನ್ಯತೆಯನ್ನು ದೊರಕಿಸಿಕೊಂಡಿತು. ಇದಕ್ಕೆ ಅನುಸರಿಸಿದ ವಿಧಾನ ಯುಪಿಎಯ ಅನುಷ್ಠಾನಾದೇಶ ಮಾರ್ಗಕ್ಕಿಂತ ಹೆಚ್ಚು ಭಿನ್ನವಾಗಿಯೇನೂ ಇಲ್ಲ. ಧನವಿನಿಯೋಗ ಮಸೂದೆಯ ಸ್ವರೂಪದಲ್ಲಿ ಇದನ್ನು ಲೋಕಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗಿದೆ. ಅಂದರೆ ರಾಜ್ಯಸಭೆ ಇದನ್ನು ಒಪ್ಪುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲದಂಥ ಮಾದರಿಯಲ್ಲಿ ಆಧಾರ್‌ಗೆ ಕಾನೂನು ಮಾನ್ಯತೆ ಪಡೆದುಕೊಳ್ಳಲಾಗಿದೆ.

ಎರಡು ವರ್ಷಗಳ ಹಿಂದೆ ಬಿಜೆಪಿ ಮತ್ತು ಎನ್‌ಡಿಎಯ ಹಲವು ನಾಯಕರಿಗೆ ‘ಆಧಾರ್’ ಎಂಬುದು ರಾಷ್ಟ್ರೀಯ ಭದ್ರತೆಗೆ ಮಾರಕವಾಗಿ ಕಾಣಿಸುತ್ತಿತ್ತು. ಅನಂತಕುಮಾರ್ ಅವರ ಮಾತುಗಳನ್ನೇ ಉಲ್ಲೇಖಿಸುವುದಾದರೆ ‘ಇದು ರಾಷ್ಟ್ರೀಯ ಭದ್ರತೆಗೆ ಮಾರಕ. ಅಮೆರಿಕ ಮತ್ತು ಯುನೈಟೆಡ್ ಕಿಂಗ್‌ಡಂಗಳು ಇದನ್ನು ರದ್ದುಪಡಿಸಿವೆ. ಆಸ್ಟ್ರೇಲಿಯಾ ತಾನು ರೂಪಿಸಿದ್ದ ಯೋಜನೆಯನ್ನು ರದ್ದು ಮಾಡುವ ಹಾದಿಯಲ್ಲಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಒಳಗೊಂಡಿರುವ ಎಲ್-1 ಮತ್ತು ಅಕ್ಸೆಂಚರ್‌ಗಳು ಭಾರತೀಯ ಕಂಪೆನಿಗಳಲ್ಲ. ಅಕ್ಸೆಂಚರ್ ಅನ್ನು ಅಮೆರಿಕವೇ ಕಪ್ಪು ಪಟ್ಟಿಗೆ ಸೇರಿಸಿದೆ’.

ರಾಷ್ಟ್ರೀಯ ಭದ್ರತೆಗೆ ಸವಾಲಾಗುವ, ಬೆರಳಚ್ಚಿನಂಥ ವೈಯಕ್ತಿಕ ಸೂಕ್ಷ್ಮ ಮತ್ತು ಖಾಸಗಿ ಮಾಹಿತಿಯನ್ನು ಪಡೆಯುವ, ವಿದೇಶಿ ಕಂಪೆನಿಗಳ ನೆರವಿನೊಂದಿಗೆ ಜಾರಿಯಾಗುವ ಯೋಜನೆ ಈಗ ಬಿಜೆಪಿಗೆ ಅಚ್ಚುಮೆಚ್ಚಿನದ್ದು. ಎರಡು ವರ್ಷಗಳ ಹಿಂದೆ ‘ಆಧಾರ್’ ಏಕೆ ಅಗತ್ಯ ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ಹೇಳುತ್ತಿದ್ದ ಎಲ್ಲಾ ಮಾತುಗಳನ್ನು ಈಗ ಬಿಜೆಪಿ ನೇತೃತ್ವ ಎನ್‌ಡಿಎ ಹೇಳುತ್ತಿದೆ. ವಿರೋಧ ಪಕ್ಷದ ಸ್ಥಾನದಿಂದ ಆಡಳಿತ ಪಕ್ಷದ ಸ್ಥಾನಕ್ಕೆ ಬರುವುದರೊಂದಿಗೆ ಆಧಾರ ಕುರಿತ ಬಿಜೆಪಿಯ ನಿಲುವು ಬದಲಾಯಿತು. ಅಂದರೆ ‘ರಾಷ್ಟ್ರೀಯ ಭದ್ರತೆ, ಖಾಸಗಿ ಮಾಹಿತಿಯ ರಕ್ಷಣೆ, ವಿದೇಶ ಕಂಪೆನಿಗಳಿಂದ ಅನುಷ್ಠಾನ’ ಎಂಬ ಮಾತುಗಳಿಗೇನು ಅರ್ಥ?

ಸರ್ಕಾರ ರೂಪಿಸುವ ಕಲ್ಯಾಣ ಯೋಜನೆಗಳು ಅರ್ಹರಿಗೆ ತಲುಪಿಸುವುದಕ್ಕೆ ಒಂದು ಸಮರ್ಪಕ ವ್ಯವಸ್ಥೆ ಬೇಕು. ವ್ಯಕ್ತಿಗಳನ್ನು ಸರಿಯಾಗಿ ಗುರುತಿಸುವುದಕ್ಕೆ ಒಂದು ವ್ಯವಸ್ಥೆ ಇದ್ದರೆ ಇದು ಸುಲಭವಾಗುತ್ತದೆ ಎಂಬುದನ್ನು ಯಾರೂ ಆಕ್ಷೇಪಿಸುತ್ತಿಲ್ಲ. ಇದಕ್ಕೆ ‘ಆಧಾರ್’ನಂಥ ಯೋಜನೆ ಬೇಕು ಎಂಬುದಕ್ಕೆ ಮಾತ್ರ ವಿರೋಧವಿತ್ತು. ಸಂಸತ್ತಿನಲ್ಲಿ ಇದರ ಕುರಿತಂತೆ ಚರ್ಚಿಸಿ ಒಪ್ಪಿಗೆ ಪಡೆಯುವ ಧೈರ್ಯವಿಲ್ಲದೆ ಯುಪಿಎ ಇದನ್ನು ಒಂದು ಅನುಷ್ಠಾನಾದೇಶದ ಮೂಲಕ ಕಾರ್ಯಗತಗೊಳಿಸಿತು.ಅದನ್ನೇ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೊಂದು ಬಗೆಯಲ್ಲಿ ಮಾಡಿದೆ. ಧನವಿನಿಯೋಗ ಮಸೂದೆಯ ಸ್ವರೂಪದಲ್ಲಿ ಇದನ್ನು ಮಂಡಿಸಿ ತನಗೆ ಭಾರೀ ಬಹುಮತವಿರುವ ಲೋಕಸಭೆಯಲ್ಲಿ ಅಂಗೀಕಾರ ಪಡೆದಿದೆ. ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ಯೋಜನೆಯೊಂದರ ಕುರಿತು ಸಂಸತ್ತಿನಲ್ಲಿ ವಿವರವಾಗಿ ಚರ್ಚಿಸುವುದಕ್ಕೆ ಹಿಂದಿನ ಯುಪಿಎಗೂ ಈಗಿನ ಎನ್‌ಡಿಎಗೂ ಅಡ್ಡಿಯಾದದ್ದು ಏನು ಎಂಬುದು ಇಂದಿಗೂ ಯಕ್ಷ ಪ್ರಶ್ನೆಯೇ.

ಭಾರತದಂಥ ದೇಶಗಳಲ್ಲಿ ‘ಗುರುತು’ ಅಥವಾ ಐಡೆಂಟಿಟಿ ಎಂಬುದು ದೊಡ್ಡ ಸಮಸ್ಯೆಯೇ. ಈ ಕಾರಣದಿಂದಾಗಿಯೇ ಸರ್ಕಾರ ರೂಪಿಸುವ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಆಯ್ಕೆ ಮತ್ತು ಅವರಿಗೆ ಸವಲತ್ತನ್ನು ಒದಗಿಸುವ ಕ್ರಿಯೆಯಲ್ಲಿ ಭಾರೀ ಅವ್ಯವಹಾರ ನಡೆಯುತ್ತದೆ. ಇದನ್ನು ನಿವಾರಿಸುವ ಯಾವುದೇ ಮಾರ್ಗವನ್ನು ಯಾವುದೇ ಆಡಳಿತ ವರ್ಗ ಸ್ವಾಗತಿಸುತ್ತದೆ. ‘ಆಧಾರ್’ ಕೂಡಾ ಅಂಥದ್ದೊಂದು ಮಾರ್ಗವಷ್ಟೇ ಆಗಿದೆ ಎಂದು ನಂಬುವುದಕ್ಕೆ ಕಷ್ಟವಾಗುವಂಥ ಸ್ಥಿತಿಯನ್ನು ಆಧಾರ್ ಪರಿಕಲ್ಪನೆಯ ಜನಕರಿಂದ ಆರಂಭಿಸಿ ‘ಆಧಾರ್’ನ ಹೊಸ ಪ್ರತಿಪಾದಕರ ತನಕದ ಎಲ್ಲರೂ ಸೇರಿ ಸೃಷ್ಟಿಸಿದ್ದಾರೆ. ಈಗ ಲೋಕಸಭೆಯ ಅಂಗೀಕಾರ ಪಡೆದಿರುವ ಆಧಾರ್ ಮಸೂದೆ ಇದಕ್ಕೆ ದೊಡ್ಡ ಸಾಕ್ಷಿ.

2010ರ ಡಿಸೆಂಬರ್‌ನಲ್ಲಿ ‘ಭಾರತದ ರಾಷ್ಟ್ರೀಯ ಗುರುತು ಪ್ರಾಧಿಕಾರ ಮಸೂದೆ’ ಯನ್ನು ಅಂದಿನ ಆಡಳಿತಾರೂಢ ಯುಪಿಎ ಮಂಡಿಸಿತ್ತು. ಅಂದಿನ ಮುಖ್ಯ ವಿರೋಧ ಪಕ್ಷವಾಗಿದ್ದ ಎನ್‌ಡಿಎಯ ಒತ್ತಾಯಕ್ಕೆ ಮಣಿದು ಮಸೂದೆಯನ್ನು ಹಣಕಾಸು ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿತ್ತು. ಬಿಜೆಪಿಯ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಯಶವಂತ್ ಸಿನ್ಹಾ ಅವರ ನೇತೃತ್ವದ ಸಮಿತಿ ಮಸೂದೆಯ ಕುರಿತಂತೆ ಸೂಕ್ಷ್ಮ ಅಧ್ಯಯನ ನಡೆಸಿತು. ‘ಆಧಾರ್’ ಯೋಜನೆಯನ್ನು ರೂಪಿಸಿದ ಯೋಜನಾ ಸಚಿವಾಲಯ, ಇದನ್ನು ಬಳಸಬೇಕಾದ ಬ್ಯಾಂಕರುಗಳ ಸಂಘಟನೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಸಂಶೋಧಕರಾದ ರಿತಿಕಾ ಖೇರಾ, ಉಷಾ ರಾಮನಾಥನ್ ಮುಂತಾದವರೊಂದಿಗೆ ಸಮಾಲೋಚನೆ ನಡೆಸಿದ ಸಮಿತಿ ಯೋಜನೆಯ ಕುರಿತಂತೆ ಅನೇಕ ಸಂಶಯಗಳನ್ನು ವ್ಯಕ್ತಪಡಿಸಿತ್ತು. ಜೊತೆಗೆ ಮಸೂದೆಯಲ್ಲಿ ಆಗಬೇಕಿರುವ ಬದಲಾವಣೆಗಳ ಕುರಿತಂತೆ ಅನೇಕ ಸಲಹೆಗಳನ್ನು ನೀಡಿತ್ತು.

ಯಶವಂತ್ ಸಿನ್ಹಾ ಅವರ ಪಕ್ಷವೇ ಈಗ ಅಧಿಕಾರದಲ್ಲಿದೆ. ಆದರೆ ಈ ಸಲಹೆಗಳಲ್ಲಿ ಯಾವೊಂದನ್ನೂ ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಸೂದೆ ಒಳಗೊಂಡಿಲ್ಲ. ಮಸೂದೆಯ ಹೆಸರು ಬದಲಾದುದನ್ನು ಹೊರತು ಪಡಿಸಿದರೆ ಸಂಸದೀಯ ಸ್ಥಾಯಿ ಸಮಿತಿ ಈ ಯೋಜನೆಯ ವೆಚ್ಚ ಮತ್ತು ಲಾಭದ ಕುರಿತಂತೆ ಒಂದು ವಿಶ್ಲೇಷಣೆಯನ್ನು ಬಯಸಿತ್ತು. ಈ ಸಲಹೆಗೆ ಬಹುಮುಖ್ಯ ಕಾರಣವಾಗಿ ಅದು ಮುಂದಿಟ್ಟದ್ದು ಯುನೈಟೆಡ್ ಕಿಂಗ್‌ಡಂ ತನ್ನ ರಾಷ್ಟ್ರೀಯ ಗುರುತು ಚೀಟಿ ಯೋಜನೆಯನ್ನು ರದ್ದು ಪಡಿಸುವ ಮುನ್ನ ಲಂಡನ್ ಸ್ಕೂಲ್ ಎಕನಾಮಿಕ್ಸ್‌ನ ಮೂಲಕ ನಡೆಸಿದ ಅಧ್ಯಯನ. ಜೊತೆಗೆ ‘ಆಧಾರ್’ ನೀಡುವುದಕ್ಕೆ ದತ್ತಾಂಶ ಸಂಗ್ರಹಿಸುವ ವಿಧಾನವನ್ನು ಸಮಿತಿ ಕಟುವಾಗಿ ಟೀಕಿಸಿತ್ತು. ಆಧಾರ್ ನೋಂದಾವಣಾ ಏಜೆನ್ಸಿಗಳಿಗೆ ನೋಂದಾಯಿಸಿಕೊಳ್ಳುವವರ ಪೂರ್ವಾಪರವನ್ನು ತಿಳಿಯಲು ಇರುವ ಸಾಮರ್ಥ್ಯವೇನು ಎಂಬ ಪ್ರಶ್ನೆಯನ್ನು ಸಮಿತಿಯ ವರದಿ ಎತ್ತಿತ್ತು. ಈ ಯಾವ ಪ್ರಶ್ನೆಗಳಿಗೂ ಹೊಸ ಕಾಯ್ದೆಯಲ್ಲೂ ಉತ್ತರಗಳಿಲ್ಲ ಎಂಬುದು ವಾಸ್ತವ.

ಯುಪಿಎ ಕಾಲದಲ್ಲಿ ಯೋಜನೆಯ ಅಗತ್ಯದ ಕುರಿತಂತೆ ಜನರಿಗೆ ವಿವರಿಸಲು, ಟೀಕಾಕಾರರಿಗೆ ಉತ್ತರ ನೀಡುವುದಕ್ಕೆ ವಾಣಿಜ್ಯ ಸಂಸ್ಥೆಗಳಂತೆ ‘ಸಾರ್ವಜನಿಕ ಸಂಪರ್ಕ’ ತಂತ್ರಗಳನ್ನು ಬಳಸಲಾಯಿತೇ ಹೊರತು ಪ್ರಜಾಸತ್ತಾತ್ಮಕ ಚರ್ಚೆಗಳನ್ನು ನಡೆಸಲಿಲ್ಲ. ಆರಂಭಿಕ ಹಂತದ ಯಶಸ್ಸನ್ನು ಹೇಳುವುದಕ್ಕಾಗಿ ಅಂದಿನ ಸರ್ಕಾರ ‘ಪ್ರಾಯೋಜಿತ ಸಂಶೋಧನೆ’ಗಳ ಮೊರೆಹೊಕ್ಕಿತ್ತು.  ಈ ಯೋಜನೆಯ ಕುರಿತಂತೆ ನಡೆದ ಸ್ವತಂತ್ರ ಸಂಶೋಧನೆಗಳ ಫಲಿತಾಂಶಕ್ಕೂ ‘ಪ್ರಾಯೋಜಿತ ಸಂಶೋಧನೆ’ಗಳ ಫಲಿತಾಂಶಕ್ಕೂ ವ್ಯತ್ಯಾಸಗಳಿವೆ.

ಎಲ್‌ಪಿಜಿ ಹಂಚಿಕೆಯಲ್ಲಿ ಸೋರಿಕೆಯಾಗುತ್ತಿದ್ದ 15 ಸಾವಿರ ಕೋಟಿ ರೂಪಾಯಿಗಳನ್ನು ತಡೆಯುವಲ್ಲಿ ಆಧಾರ್ ಯಶಸ್ವಿಯಾಗಿದೆ ಎಂಬುದು ಇಂಥದ್ದೇ ಒಂದು ವಾದ. ಕರ್ನಾಟಕದ ಉದಾಹರಣೆಯನ್ನೇ ಪರಿಗಣಿಸುವುದಾದರೆ ಎಲ್‌ಪಿಜಿ ಹಂಚಿಕೆಯ ಸೋರಿಕೆಯನ್ನು ತಡೆಯಲು ಕಾರಣವಾದದ್ದು ಆಧಾರ್ ಅಲ್ಲ. ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಲ್‌ಪಿಜಿ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕಗಳ ನಡುವೆ ಸಂಬಂಧ ಕಲ್ಪಿಸಿದ್ದು. ಬಹುತೇಕ ನಕಲಿ ಸಂಪರ್ಕಗಳು ಈ ಅಭಿಯಾನದಲ್ಲಿಯೇ ಇಲ್ಲವಾದವು. ಅಂದರೆ ಎಲ್‌ಪಿಜಿ ದುರುಪಯೋಗ ತಡೆಗೆ ಆಧಾರ್ ಒಂದೇ ಮಂತ್ರವಲ್ಲ ಎಂಬುದನ್ನು ಈ ಪ್ರಯೋಗವೇ ಸಾಬೀತು ಮಾಡುತ್ತದೆ.

ಆಧಾರ್ ಸಂಖ್ಯೆಯಿಂದ ಯಾವುದೇ ಗುರುತು ಚೀಟಿಗಳಿಲ್ಲದವರಿಗೆ ಒಂದು ಗುರುತು ನೀಡಲು ಸಾಧ್ಯವಾಗುತ್ತದೆ ಎಂಬುದು ಮತ್ತೊಂದು ವಾದ. ಆದರೆ ಇದನ್ನು ಸರ್ಕಾರ ನೀಡುತ್ತಿರುವ ಅಂಕಿ–ಅಂಶಗಳೇ ಅಲ್ಲಗಳೆಯುತ್ತವೆ. ಕಳೆದ ವರ್ಷದ ಅಂತ್ಯದ ವೇಳೆಗೆ ವಿತರಿಸಲಾಗಿದ್ದ 85 ಕೋಟಿ ಆಧಾರ್ ಸಂಖ್ಯೆಗಳಲ್ಲಿ ಯಾವುದೇ ಗುರುತು ಚೀಟಿ ಇಲ್ಲದೆ, ಆಧಾರ್ ಸಂಖ್ಯೆ ಇದ್ದವರು ಪರಿಚಯಿಸುವ ಮೂಲಕ ಆಧಾರ್ ಸಂಖ್ಯೆ ಪಡೆದವರ ಪ್ರಮಾಣ ಕೇವಲ ಶೇಕಡಾ 0.03ರಷ್ಟು ಮಾತ್ರ. ಇದನ್ನು ಎರಡು ಬಗೆಯಲ್ಲಿ ಅರ್ಥ ಮಾಡಿಕೊಳ್ಳಬಹುದು. ಒಂದು, ಯಾವುದೇ ಗುರುತುಚೀಟಿಗಳಿಲ್ಲದವರ ಸಂಖ್ಯೆ ಕಡಿಮೆ ಇದೆ. ಎರಡು, ಯಾವುದೇ ಗುರುತು ಚೀಟಿಗಳಿಲ್ಲದವರನ್ನು ಸಮೀಪಿಸುವುದಕ್ಕೆ ಆಧಾರ್‌ಗೆ ಸಾಧ್ಯವೇ ಆಗಿಲ್ಲ. ಎರಡರಲ್ಲಿ ಯಾವುದು ನಿಜವಾದರೂ ಆಧಾರ್ ಗುರುತಿನ ಏಕೈಕ ಮಾರ್ಗ ಎಂಬುದು ಸುಳ್ಳಾಗುತ್ತದೆ.

ಯುನೈಟೆಡ್ ಕಿಂಗ್‌ಡಂ ತನ್ನ ರಾಷ್ಟ್ರೀಯ ಗುರುತು ಚೀಟಿ ಯೋಜನೆಯನ್ನು ರದ್ದುಪಡಿಸುವುದಕ್ಕೆ ಬಹುಮುಖ್ಯ ಕಾರಣವಾದದ್ದು ಎಲ್ಲಾ ನಾಗರಿಕರ ಕೇಂದ್ರೀಕೃತ ಮಾಹಿತಿಯನ್ನು ಒಂದೆಡೆ ಸುರಕ್ಷಿತವಾಗಿ ಶೇಖರಿಸಿಡುವ ಮತ್ತು ಅದನ್ನು ಎಲ್ಲದಕ್ಕೂ ಬಳಸುವ ಪ್ರಕ್ರಿಯೆಗೆ ತಗುಲುವ ಭಾರೀ ವೆಚ್ಚ. ಮೂಗಿಗಿಂತ ಮೂಗುತಿ ಭಾರವಾಗುವ ಈ ಅಂಶದ ಕುರಿತಂತೆ ಮೊದಲಿನಿಂದಲೂ ಚರ್ಚೆ ನಡೆದಿಲ್ಲ. ಹೊಸ ಮಸೂದೆಯನ್ನು ಅಂಗೀಕರಿಸುವ ಪ್ರಕ್ರಿಯೆಯಲ್ಲಿಯೂ ಇದನ್ನು ಚರ್ಚಿಸುವ ಅವಕಾಶವೇ ಇಲ್ಲದಂತೆ ನೋಡಿಕೊಳ್ಳಲಾಯಿತು. ಇದರ ಹೊರತಾಗಿ ಖಾಸಗಿ ಮಾಹಿತಿ ರಕ್ಷಣೆಗೆ ಸಂಬಂಧಿಸಿದಂತೆ ಭಾರತದಲ್ಲಿ ಒಂದು ಕಾನೂನೇ ಇಲ್ಲದಿರುವ ಸ್ಥಿತಿಯಂತೂ ಇನ್ನೂ ಉಳಿದುಕೊಂಡಿದೆ.

ಇವೆಲ್ಲವನ್ನೂ ಒಟ್ಟಾಗಿಟ್ಟುಕೊಂಡು ನೋಡಿದರೆ ಆಧಾರ್‌ಗೆ ಕಾನೂನಿನ ಮಾನ್ಯತೆ ದೊರೆತಿದೆ ಎಂಬುದನ್ನು ಹೊರತು ಪಡಿಸಿದರೆ ಹಳೆಯ ಸಂಶಯಗಳು–ಎನ್‌ಡಿಎ ವಿರೋಧ ಪಕ್ಷದಲ್ಲಿದ್ದಾಗ ವ್ಯಕ್ತಪಡಿಸಿದವು– ಈಗಲೂ ಪರಿಹಾರವಾಗಿಲ್ಲ ಎಂಬುದು ವಾಸ್ತವ. ಅದಕ್ಕಿಂತ ದೊಡ್ಡ ದುರಂತವೆಂದರೆ ಎಲ್ಲರಿಗೂ ಅನುಕೂಲ ಕಲ್ಪಿಸಬೇಕೆಂಬ ಸದುದ್ದೇಶದ ಯೋಜನೆಯೊಂದನ್ನು ಪ್ರಜಾಸತ್ತಾತ್ಮಕವಾದ ಮಾರ್ಗದಲ್ಲಿ ಕಾರ್ಯರೂಪಕ್ಕೆ ತರುವುದಕ್ಕೆ ಭಾರೀ ಬಹುಮತವಿರುವ ಪಕ್ಷವೂ ಮುಂದಾಗದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT