ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈ ಮೇಲು’ ಮೇಲಾ ಫೀಮೇಲಾ?

Last Updated 6 ಜನವರಿ 2016, 19:53 IST
ಅಕ್ಷರ ಗಾತ್ರ

ಭಾರತವೆಂಬ ಜಾಗತೀಕರಣದ ಹೊಸ್ತಿಲಲ್ಲಿ ನಿಂತಿದ್ದ ರಾಷ್ಟ್ರದ ಹೊರಗೆ ನಿರೀಕ್ಷೆಗಳ ಬೆಟ್ಟವೇ ಬೆಳೆಯುತ್ತಿದ್ದರೆ, ಒಳಗೆ ಮಾರುಕಟ್ಟೆ ನಿರ್ಮಾಣವಾಗುತ್ತಿತ್ತು. ಜಾಗತೀಕರಣ ಎಂದರೆ ದಿಡ್ಡಿ ಬಾಗಿಲನ್ನು ತೆರೆದು ಮನೆಬಾಗಿಲನ್ನೂ ತೆರೆದು ಎಲ್ಲವನ್ನೂ ಬಟಾಬಯಲು ಮಾಡಿಕೊಂಡಂತೆ ಎನ್ನುವ ಅರ್ಥದ ಅಭಿಪ್ರಾಯಗಳು ಅಲ್ಲಲ್ಲಿ ಸುಳಿದಾಡುತ್ತಿದ್ದವು. ಆತಂಕ, ಉತ್ಸಾಹ ಎರಡೂ ಒಟ್ಟೊಟ್ಟಿಗೇ ಉಂಟಾಗುತ್ತಿದ್ದ ಕಾಲವದು.

ಸಿಂಗಾರ ಮಾಡಿಕೊಂಡು ತಯಾರಾಗಬೇಕು ಎಂದಾಗ ಅಪರೂಪಕ್ಕೆಂಬಂತೆ ಸನ್ ಸಿಲ್ಕು ಶಾಂಪೂ ಹಚ್ಚಿಕೊಳ್ಳುವುದು. ಇಲ್ಲದಿದ್ದರೆ ಅಸ್ಮಿತೆ ಕಾಪಾಡಿಕೊಳ್ಳಲು ಮೀರಾ ಸೀಗೇಪುಡಿ, ಸ್ವಲ್ಪ ಐಶ್ವರ್ಯಾ ರೈ ಅನ್ನು ನೆನೆಸಿಕೊಂಡು ಲಕ್ಸು ಸೋಪು ಕೊಂಡು ತರುತ್ತಿದ್ದುದು ಮಾಮೂಲಿ. ಅದ್ಯಾಕೋ, ಸುಶ್ಮಿತಾ ಸೇನ್, ಐಶ್ವರ್ಯಾ ರೈ ಇಬ್ಬರು ಸುಂದರಿಯರು ಪ್ರಪಂಚದ ದೊಡ್ಡ ಸೌಂದರ್ಯ ಸ್ಪರ್ಧೆಗಳನ್ನು ಗೆದ್ದಾಗ, ಭಾರತ ಕಾರ್ಗಿಲ್ ಮೇಲೆ ಸಾಧಿಸಿದ ಜಯಕ್ಕೂ ದಕ್ಕದ ಒಂದು ಭಾವನಾತ್ಮಕ ಪ್ರತಿಕ್ರಿಯೆ ಹೊರಟು ಕಣ್ಣು ತುಂಬಿ ಬಂದು ಹದಿಹರೆಯದ ಗಂಟಲುಗಳು ಕಟ್ಟಿದಾಗ, ಎಲ್ಲೋ ದೇಶಕ್ಕೆ ಮೋಸ ಮಾಡುತ್ತಿದ್ದೇವೇನೋ ಎಂಬ ಅಳುಕು. ಪಾಕಿಸ್ತಾನದ ಅಟ್ಟಹಾಸಕ್ಕೆ ಭಾರತ ಕೊಟ್ಟ ಉತ್ತರ ಯಾಕೋ ಸೇನ್, ರೈಗಳು ಹೊತ್ತ ಝಗಮಗಿಸುವ ಕಿರೀಟದ ಬೆಳಕಲ್ಲಿ, ಅವರ ನಗುವಿನ ಫಳಕಲ್ಲಿ ಮಂಕಾಗಿದ್ದುದಾದರೂ ಹೇಗೆ?

ಈ ಚೆಲುವಿಯರು ದೇಶದ ಮುಡಿಗೆ ಹುಲ್ಲ ತಾರದೇ ಜಾಗತಿಕ ಕಿರೀಟ ಹೊತ್ತು ತಂದದ್ದು ಭಾರತದ ಸಾಮಾನ್ಯ ಮಧ್ಯಮವರ್ಗದ ಹೆಣ್ಣು ಮಕ್ಕಳು ಇದ್ದಕ್ಕಿದ್ದ ಹಾಗೆ ಹೊಸಮನೆಗೆ ಹಾಲುಕ್ಕಿಸಿ ಪ್ರವೇಶ ಮಾಡಿದ ಹಾಗಿತ್ತು. ಲಿಪ್‌ಸ್ಟಿಕ್ಕಿಗೆ, ಮಸ್ಕಾರಾಕ್ಕೆ ಘನತೆಯ ಸ್ಥಾನ ದೊರಕಿತ್ತು.

ಹುಡುಗಿಯರು ಹೊಸ್ತಿಲ ಮೇಲೆ, ಕನ್ನಡಿಯ ಮುಂದೆ ನಿಲ್ಲಬಾರದು ಎನ್ನುವ ಮಾತುಗಳು ಬಲ ಕಳೆದುಕೊಂಡು ಲೋಕಲ್ ಬೆಡಗಿಯರು ಧೈರ್ಯವಾಗಿ ಕನ್ನಡಿ ಎದುರಿಗೆ ನಿಂತೇ ಹೊಸ್ತಿಲನ್ನೂ ದಾಟಿದರು. ಹಿಮಾಲಯದ ದಟ್ಟ ಮಂಜಿನಲ್ಲಿ ಚೆಲ್ಲಿದ ರಕ್ತದ ಮುಂದೆ ಮೇಕಪ್ಪಿನ ಬಣ್ಣವೇ ಹೆಚ್ಚು ಹೊಳೆದದ್ದು ವಿಪರ್ಯಾಸವಲ್ಲದೇ ಇನ್ನೇನು? ಭಾರತದ ಯುವ ಜನತೆಯ ಅಂದಿನ ಸಂದಿಗ್ಧ ‘ವಂದೇ ಮಾತರಂ’ ಎಂಬ ಹಾಡಿಗೆ ರೆಹಮಾನ್ ಮಾಡಿದ ಸಂಗೀತ ಸಂಯೋಜನೆ ಆ ಗೀತೆಗೆ ಮಾಡಿದ ಅಪಚಾರವೋ ಅಥವಾ ಸಲ್ಲಿಸಿದ ಗೌರವವೋ ಎಂದು ನಿರ್ಧರಿಸಲಾಗದೇ ಸಂದಿಗ್ಧದಲ್ಲಿ ಮುಳುಗಿದ್ದು.
ಜಗತ್ತು ವಿಸ್ತಾರವಾಗುತ್ತಿದೆಯೋ ಸಣ್ಣದಾಗುತ್ತಿದೆಯೋ ಅಥವಾ ಎರಡು ಪ್ರಕ್ರಿಯೆಗಳೂ ನಡೆಯುತ್ತಿದ್ದು ತನ್ನ ಅರಿವಿಗೂ ಬಾರದ ಹಾಗೆ ಇನ್ನೇನೋ ರೂಪುಗೊಳ್ಳುತ್ತಿದೆಯೇನೋ ಎಂದು ಹದಿಮನಸ್ಸುಗಳು ಚಿಂತೆಯಲ್ಲಿ ಮುಳುಗಿದ್ದ ಕಾಲ.

ಯಾಕೆಂದರೆ ಆಗಿನ ಕಾಲದ ಕರೋಡ್ ಪತಿ ಸಬೀರ್ ಭಾಟಿಯಾನ ಹೆಸರು ಗೊತ್ತಿತ್ತು. ಆದರೆ,  ಅವನ್ಯಾಕೆ ದಿಢೀರ್ ಆಗಿ ಕೋಟಿ ಬೆಲೆ ಬಾಳಿದ ಎಂದು ಸಂಪೂರ್ಣವಾಗಿ ಅರ್ಥವಾಗದಿದ್ದ ಕಾಲ. ಅಂದರೆ, ಭಾಟಿಯಾನ ಕಲ್ಪನೆಯ ಕೂಸಾದ ಹಾಟ್ ಮೇಲ್ ಸೃಷ್ಟಿಯಾಗಿತ್ತು. ತಂತ್ರಜ್ಞಾನ ತರಲಿದ್ದ ಪುಳಕಗಳನ್ನು ಅನುಭವಿಸಲು ಪ್ರಪಂಚ ಸಜ್ಜಾಗಿ ನಿಂತಿತ್ತು. ಆದರೆ, ಬಹಳ ಸ್ಪಷ್ಟವಾಗಿ ಎದ್ದಿದ್ದ ಗೋಡೆ ಎಂದರೆ ತಂತ್ರಜ್ಜಾನ ಗೊತ್ತಿದ್ದವರದ್ದು ಒಂದು ಗುಂಪು; ಗೊತ್ತಿಲ್ಲದ ಗಾಂಪರದ್ದು ಇನ್ನೊಂದು ಗುಂಪು. ತಂತ್ರಜ್ಞಾನದ ಸಾಧ್ಯತೆಗಳ ಅರಿವಿದ್ದ ಜನ ಕೆನೆಯುವ ಕುದುರೆಯಂತೆ ಉತ್ಸುಕರು. ಜಗತ್ತೇ ಅವರ ಕಾಲಡಿಯಲ್ಲಿತ್ತು.

ಜಗದಗಲ ಮುಗಿಲಗಲ
ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ
ಅಗಮ್ಯ ಅಗೋಚರ ಅಪ್ರತಿಮ ಅಪ್ರಮಾಣ ಲಿಂಗವೇ
ಕೂಡಲಸಂಗಮದೇವಯ್ಯ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ
ತಂತಿಗಳು ಕೊನೆಯಾದ ಕಂಪ್ಯೂಟರಿನಲ್ಲಿ ಪುಡಿ ಅಂಕಿಗಳು, ನಾಲ್ಕಕ್ಷರದ ಬೀಗ ಹಾಕಿದ ‘ಈ ಮೇಲ್’ ಎನ್ನುವ ಪ್ರಪಂಚ ಎಷ್ಟೆಲ್ಲ ರೋಮಾಂಚನವನ್ನುಂಟು ಮಾಡಿತಲ್ಲ? ನಮ್ಮ ಹಾಸ್ಟೆಲಿನ ನಾಯಕಿಯರಲ್ಲಿ ಮೊದಲಿಗೆ ಈ ಮೇಲ್ ವಿಚಾರ ಮಾತನಾಡಿದವಳು ರಶ್ಮಿ, ‘ಈ ಮೇಲ್ ಗೊತ್ತಾ ನಿಂಗೆ?’

‘ಮೇಲ್, ಫೀಮೇಲ್ ಗೊತ್ತು, ಈ ಮೇಲ್ ಅಂದ್ರೆ ಮೂರನೇ ಆಯ್ಕೆಯಾ?’ ಮುಗ್ಧಳಾಗಿ ಕೇಳಿದಳು ವಿಜಿ. ಇಂದುಮತಿ ಹಲ್ಲು ಕಿರಿಯುತ್ತಾ ಕೂತಿದ್ದಳು. ಈಶ್ವರಿ ಮಾತುಗಳನ್ನು ಲಾಲಿಸುತ್ತಿದ್ದರೆ ರಿಂಕಿ ಬಾತ್ರೂಮಿನಲ್ಲಿ ಬಟ್ಟೆ ತೊಳೆಯುತ್ತಿದ್ದಳು.  ಅಂದಹಾಗೆ, ರಿಂಕಿ ಜಗತ್ತಿನ ಆಗುಹೋಗುಗಳಿಗೆ ರಿಕ್ತಳಾದಂತೆ ಹೊಸ ಬಾಯ್ ಫ್ರೆಂಡ್ ಅನ್ನು ಹುಡುಕಿಕೊಂಡಿದ್ದಳು. ಅವನು ಯಾರು ಎನ್ನುವುದು ಮುಖ್ಯವಲ್ಲ. ಹೊಸಬ ಎನ್ನುವುದಷ್ಟೇ ಮುಖ್ಯ. ಪ್ರತೀ ಸಾರಿ ಬಾಯ್ ಫ್ರೆಂಡ್ ಬದಲಾಯಿಸಿದಾಗಲೂ ಹಳೆ ಗೆಳೆಯನ ಮನೆಯಲ್ಲಿ ಬಿಟ್ಟಿದ್ದ ಬಟ್ಟೆಗಳನ್ನು ತಂದು ಹಾಸ್ಟೆಲಿನಲ್ಲಿ ಶುಭ್ರವಾಗಿ ತೊಳೆದು, ಒಣಗಿಸಿಕೊಂಡು ಬ್ಯಾಗಿಗೆ ತುಂಬಿಸಿಕೊಂಡು ಹೊರಟರೆ ಮತ್ತೆ ಕಾಣುವುದು ಬಾಯ್ ಫ್ರೆಂಡ್ ಬದಲಾದ ಕಾಲಕ್ಕೇ. ಆಗ ಮತ್ತದೇ ಬಟ್ಟೆ ತೊಳೆಯುವ ಪುನರಾವರ್ತನೆ.

ರಶ್ಮಿಗೂ ಈ ಮೇಲ್ ಅನ್ನು ಸಮರ್ಥವಾಗಿ ಹೀಗೇ ಎಂದು ವಿವರಿಸಲು ಆಗಲಿಲ್ಲ. ತನಗೆ ತಿಳಿದಷ್ಟು ಹೇಳಿದಳು. ಕಂಪ್ಯೂಟರು, ಇಂಟರ್ನೆಟ್ಟು ಇದ್ದ ಕೆಫೆಗಳಲ್ಲಿ ಜಗತ್ತಿನ ಯಾವ ಮೂಲೆಯಲ್ಲಾದರೂ ಈ ಮೇಲ್ ಐಡಿ ಮುಖಾಂತರ ಪತ್ರಗಳನ್ನು ಓದಬಹುದು ಎಂದಳು. ಗಾಂಪಿಯರಿಗೆ ಇದು ಅರ್ಥವಾಗಲೇ ಇಲ್ಲ.

ಸಕ್ಕರೆ ರುಚಿಯನ್ನೇ ನೋಡದವರಿಗೆ ಮಾತಿನಲ್ಲಿ ಸಕ್ಕರೆ ರುಚಿ ಬಣ್ಣಿಸಬೇಕೆಂದರೆ ಎಷ್ಟೆಲ್ಲ ಉಪಮೆಗಳನ್ನು ಉಪಯೋಗಿಸಿದರೆ ಅದರ ಅರ್ಥವನ್ನು ದಾಟಿಸಲು ಸಾಧ್ಯವಾಗಬಹುದು? ಸುಲಭ ಮಾರ್ಗವೆಂದರೆ ಒಂದು ಚಮಚೆ ಸಕ್ಕರೆಯನ್ನು ಅವರ ಬಾಯಿಗೆ ಹಾಕಿ ರುಚಿ ನೋಡು ಎನ್ನುವುದು.
‘ಬೆಂಗಳೂರಿಗೆ ಹೋದಾಗ ತೋರಿಸಿಕೊಡ್ತೀನಿ. ಅಲ್ಲಿಗೆ ಬಂದ್ರೆ ಈ ಮೇಲು, ಕಂಪ್ಯೂಟರು ಎಲ್ಲಾ ಅರ್ಥ ಮಾಡ್ಕೋಬಹುದು’ ಎಂದು ರಶ್ಮಿ ಔದಾರ್ಯ ತೋರಿದಳು. ಆದರೆ, ತಮ್ಮ ಅಜ್ಞಾನವನ್ನು ಶೌರ್ಯ ಪದಕ ಎಂಬಂತೆ ಹೊತ್ತು ತಿರುಗುವವರಿಗೆ ಇದೆಲ್ಲ ಎಲ್ಲಿ ಅರ್ಥವಾಗಬೇಕು? ಇಂದುಮತಿಗೂ ವಿಜಿಗೂ ಒಂದೇ ಕ್ಲಬ್ಬಿನ ಸದಸ್ಯತ್ವ ಇತ್ತು.

‘ಬೆಂಗಳೂರಿಗೆ ಬರ್ಬೇಕಾ ಈ ಮೇಲನ್ನ ನೋಡಕ್ಕೆ?’
‘ಹೌದು’ ‘ಹಂಗ್ಯಾಕೆ?’
‘ಅದನ್ನ ತೋರಿಸಕ್ಕೆ ಕಂಪ್ಯೂಟರು, ಇಂಟರ್ನೆಟ್ಟು ಎಲ್ಲಾ ಇರಬೇಕು...’
‘ಮತ್ತೆ ಪ್ರಪಂಚದ ಯಾವ ಮೂಲೆಯಲ್ಲಾದರೂ ಇದನ್ನ ನೋಡಬಹುದು ಅಂದೆ?’
‘ಅದು ನಿಜವೇ ಆದರೆ ನೀನ್ ತಿಳ್ಕೊಂಡಿರೋ ಅರ್ಥದಲ್ಲಿ ಅಲ್ಲ. ನಾನೆಲ್ಲಿ ಹೇಳಿದೆ ಹಾಗೆ?’
‘ಆಗಲೆ ತಾನೆ ಹೇಳಲಿಲ್ವಾ ಇವಳು?’ ವಿಜಿ ಇಂದುಮತಿಯನ್ನ ಕೇಳಿದಳು. ಇಂದುಮತಿ ಹಲ್ಲು ಕಿರಿಯುವುದನ್ನು ಇನ್ನೂ ನಿಲ್ಲಿಸಿರಲಿಲ್ಲ.
‘ಹೌದು. ಅವಳು ಹಂಗೇ ಅಂದಿದ್ದು’ ಇಂದುಮತಿ ಎನ್ನುವ ಬೇಲಿ, ವಿಜಿ ಎನ್ನುವ ಓತಿಕ್ಯಾತಕ್ಕೆ ಸಾಕ್ಷಿ ನುಡಿಯಿತು.

‘ನೀವಿಬ್ರೂ ಮುಚ್ಕೊಂಡು ಇರ್ತೀರಾ ಇಲ್ಲಾ, ನಾಲ್ಕು ಬಿಡ್ಲಾ ಮೂತಿಗೆ? ಹೊಸ ವಿಷಯ ಹೇಳೋಣ ಅಂತ ಬಂದ್ರೆ ಸುಮ್ಮನೆ ಕ್ಯಾತೆ ತೆಗೀತೀರಾ? ಈ ಪೆದ್ದ್ ಲೌಡೀರ್ ಸಾವಾಸ ನಮ್ ಬುದ್ಧಿಗೇ ಕೇಡು...’ ರಶ್ಮಿಗೆ ರೇಗಿತು.

‘ಅವೆಲ್ಲ ಬ್ಯಾಡ ಅಮ್ಮಣ್ಣಿ. ಎಲ್‌ ಬೇಕಾದ್ರೂ ನೋಡಬಹುದು ಅಂದೆ? ಈ ದೇಶದಲ್ಲಿ ಬೇಕಾಗಿರೋ ಬಚ್ಚಲೇ ಎಲ್ಲಾ ಕಡೆ ಕಾಣಲ್ಲ ಇನ್ನ ಈ ಮೇಲು ಕಾಣುತ್ತಾ?’ ಇಂದುಮತಿ ಭಾರತ ದರ್ಶನ ಮಾಡಿಸಿದಳು.

‘ಹಂಗಲ್ಲ ಕಣೇ ಇಂದೂ...’
‘ಹಂಗಾದ್ರೆ ಹೇಳಮ್ಮ...ಒಂದ್ ಈ ಮೇಲ್ ಮಾಡ್ಕೊಳಕ್ಕೆ ಎಷ್ಟು ದುಡ್ಡು ಖರ್ಚಾಗುತ್ತೆ?’
ಉತ್ತರ ಹೇಳುವಾಗ ರಶ್ಮಿ ಉತ್ತೇಜಿತಗೊಂಡಳು. ತಂತ್ರಜ್ಞಾನದ ಸಾಧ್ಯತೆಗಳು ಬರೀ ಹಣದ ಮೂಲಕ ಅವಿರ್ಭಾವಗೊಳ್ಳುವುದಿಲ್ಲ ಎನ್ನುವುದೇ ಅದರ ಬಲವಾಗಿರುವಾಗ ಈಮೇಲು ಫ್ರೀ ಎನ್ನುವುದು ಬರೀ ಹೊಸ್ತಿಲಾಗಿತ್ತು. ಅದನ್ನು ದಾಟಿದರೆ ಹೊಸ ದಿಗಂತ ಅನಾವರಣಗೊಳ್ಳುತ್ತಿತ್ತು.
‘ಅದೇ ಕಣೇ ಅದರ ಬ್ಯೂಟಿ! ಈ ಮೇಲು ಫ್ರೀ ಕಣ್ರೇ!’

ತನ್ನಿಬ್ಬರೂ ಸ್ನೇಹಿತೆಯರು ಕಣ್ಣರಳಿಸಿ, ಮುಖವರಳಿಸಿ ಆಶ್ಚರ್ಯಚಕಿತರಾಗಿ ಇದನ್ನು ಕೇಳುತ್ತಾರೆ ಎಂದುಕೊಂಡ ರಶ್ಮಿಗೆ ಎದುರಿಗಿದ್ದ ಗಾಂಪಿಯರಿಂದ ಬಂದ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ಇಬ್ಬರೂ ಮಕ್ ಮಕ ನೋಡಿಕೊಂಡು ಕಿಸಿ ಕಿಸಿ ಅನ್ನಲು ಶುರು ಮಾಡಿದವರು ಬರುಬರುತ್ತಾ ಕಣ್ಣಲ್ಲಿ ನೀರು ಬರುವಷ್ಟು ಜೋರಾಗಿ ನಗತೊಡಗಿದರು.

ರಶ್ಮಿಗೆ ತಾನು ಸಂವಾದಿಸುತ್ತಿರುವುದು ಮೂರ್ಖರೊಂದಿಗೆ ಮಾತ್ರವಲ್ಲ ಸಂಸ್ಕಾರವಿಲ್ಲದ ಕಡು ಮರ್ಕಟಗಳೊಂದಿಗೆ ಎನ್ನುವುದು ಮತ್ತೆ ಮತ್ತೆ ಅರಿವಿಗೆ ಬರುವಂತೆ ಈ ಸಾರಿಯೂ ಬಂತು. ಬಹಳ ಬೇಸರವೂ ಆಯಿತು.

‘ಸರಿ ಬಿಡಿ. ನಿಮ್ಮ ಹತ್ರ ಮಾತಾಡಿ ಪ್ರಯೋಜನ ಇಲ್ಲ. ಯಾರ್ ಹತ್ರ ಬೇಕೋ ಅವರ ಹತ್ತಿರವೇ ಕೇಳಿ ತಿಳ್ಕೊಳ್ಳಿ’
‘ಏ ಹೇ ಹೇ ಹೇ! ಬೇಜಾರ್ ಮಾಡ್ಕೋಬೇಡ ಕಣೇ... ನಮಗೆ ನಿಜವಾಗ್ಲೂ ಅರ್ಥ ಆಗಲ್ಲ. ಈ ದೇಶದಲ್ಲಿ ಫ್ರೀ ಅಂದ್ರೆ ಮಠದಲ್ಲಿ, ದೇವಸ್ಥಾನಗಳಲ್ಲಿ ಹಾಕೋ ಊಟ ಮಾತ್ರ ಅಲ್ವಾ? ಅದು ಬಿಟ್ಟು ಇನ್ನೆಲ್ಲಕ್ಕೂ ದುಡ್ಡು ಕೊಡ್ಬೇಕು ತಾನೇ? ಬಸ್ ಸ್ಟಾಂಡಲ್ಲಿರೋ ಟಾಯ್ಲೆಟ್ ಉಪಯೋಗಿಸಕ್ಕೂ ಕಾಸ್ ಕೊಡೋ ಪರಿಸ್ಥಿತಿ ಇರೋವಾಗ ಈ ಮೇಲ್ ಥರದ ಅದ್ಭುತ ಫ್ರೀ ಅಂದ್ರೆ ನಂಬೋದು ಹೇಗೆ? ಪೂರ್ತಿ ಎಕ್ಸ್‌ಪ್ಲೇನ್ ಮಾಡು!’ ಎಂದಳು ವಿಜಿ. ರಶ್ಮಿಗೂ ಸಂಪೂರ್ಣ ವಿಷಯ ಗೊತ್ತಿರಲಿಲ್ಲ. ಆದರೆ ತನಗೆ ಗೊತ್ತಿದ್ದಷ್ಟನ್ನು ಸಮರ್ಥವಾಗಿ ತಿಳಿ ಹೇಳಿದಳು.

ಅದರಿಂದ ಆದ ಪರಿಣಾಮವೆಂದರೆ ತಂತಮ್ಮ ವಾರಗೆಯಲ್ಲಿ ಉಳಿದವರಿಗಿಂತ ಮುಂಚೆ ಇಬ್ಬರು ಭಂಡಿಯರಿಗೆ ಈ ಮೇಲಿನ ಬಗ್ಗೆ ಸಂಪೂರ್ಣ ತಿಳಿವಳಿಕೆ ಬಂದದ್ದು. ಅದನ್ನೂ ಮೀರಿ ಆದ ಅನಾಹುತವೆಂದರೆ, ಕಾಲಾಂತರದಲ್ಲಿ ಇಬ್ಬರ ಹತ್ತಿರವೂ ಅನಾಮತ್ತು ಬೇರೆಯವರ ಈ ಮೇಲ್‌ಗೆ ಸಂಬಂಧಿಸಿದ ಅಸಂಖ್ಯಾತ ಪಾಸ್ ವರ್ಡುಗಳ ಶೇಖರಣೆಯಾದದ್ದು. ಆಯಾ ಪೀಳಿಗೆಗೆ ಸಂಬಂಧಿಸಿದ ಹೊಸ ಸಾಧ್ಯತೆಯೊಂದು ಬೇರೆಯವರಿಗಿಂತ ಮುಂಚೆ ಒಂದು ಪುಟ್ಟ ಗುಂಪಿಗೆ ಅರ್ಥವಾದಾಗ ಕೆಲವರು ಆ ವಿಷಯದ ಮೇಲೆ ಹೆಚ್ಚಿನ ವಿಷಯ ಸಂಗ್ರಹಣೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಉಳಿದವರನ್ನು ಮೂರ್ಖರನ್ನಾಗಿಸುವ ಪ್ರಯತ್ನದಲ್ಲಿ ನಿರತರಾಗುತ್ತಾರೆ. ಇವರ ಕೈಯ್ಯಲ್ಲಿ ತಮ್ಮ ಜುಟ್ಟುಗಳನ್ನು ಕೊಟ್ಟು ಕೂರಲು ಉತ್ಸುಕರಾಗಿರುವವರ ಸಂಖ್ಯೆಯೇನೂ ಕಡಿಮೆಯಿರುವುದಿಲ್ಲ.

ರಶ್ಮಿ ಈ ಮೇಲಿನ ವಿಚಾರ ತಿಳಿಸಿದ ಕೆಲ ವಾರಗಳಲ್ಲೇ ಮೈಸೂರಿನಲ್ಲೊಂದು ಸೈಬರ್ ಕೆಫೆ ಇದೆ ಎನ್ನುವುದು ಗೊತ್ತಾಯಿತು. ಆಗೆಲ್ಲ ಇಂಟರ್ನೆಟ್ಟು ಬಂಗಾರ ವಜ್ರಕ್ಕಿಂತಲೂ ಮಿಗಿಲಾದ ಸಂಪತ್ತು. ಡಯಲ್ ಅಪ್ ಲೈನುಗಳು ಮಾತ್ರ ಇದ್ದವು. ಒಂದು ಈ ಮೇಲಿನ ಹೋಮ್ ಪೇಜು ಡೌನ್ ಲೋಡು ಆಗುವುದಕ್ಕೇ ಭರ್ಜರಿ ಸಮಯ ತೆಗೆದುಕೊಳ್ಳುತ್ತಿತ್ತು. ಅದಾದ ಮೇಲೆ ಈ ಮೇಲ್ ಐಡಿ ಟೈಪ್ ಮಾಡಿ, ಪಾಸ್ ವರ್ಡ್ ತುಂಬಿಸಿ ಅದು ಮತ್ತೆ ಎಲೆಕ್ಟ್ರಾನಿಕ್ ಜಗತ್ತಿನ ಗರ್ಭದೊಳಕ್ಕೆ ಹೋಗಿ ಮತ್ತೆ ಇನ್ ಬಾಕ್ಸ್ ಎನ್ನುವ ಇನ್ನೊಂದು ಪೇಜು ಓಪನ್ ಆಗುವಷ್ಟು ಸಮಯದಲ್ಲಿ ತಪಸ್ಸು ಕೈಗೊಂಡಿದ್ದರೆ ದೇವರೂ ಪ್ರತ್ಯಕ್ಷ ಆಗಿಬಿಡಬಹುದಿತ್ತು.

ಆದರೆ ಹೊಸ ಸಾಧ್ಯತೆಯ ರೋಮಾಂಚನದ ಮುಂದೆ ಸಮಯಕ್ಕೆ ಕಿಮ್ಮತ್ತು ಕಡಿಮೆ. ಇಂದುಮತಿ ಮತ್ತು ವಿಜಿ ಈ ಮೇಲನ್ನು ಹಾಸ್ಟೆಲಿನಲ್ಲಿ ಉಳಿದ ಹುಡುಗಿಯರಿಗೂ ಪರಿಚಯ ಮಾಡಿಸಿದರು. ತಂತಮ್ಮ ಈ ಮೇಲ್ ಐಡಿ ಗಳನ್ನು ಸೃಷ್ಟಿಸಿಕೊಳ್ಳುವುದಲ್ಲದೆ ಉಳಿದ ಹುಡುಗಿಯರಿಗೂ ಸಹಾಯ ಮಾಡಿದರು. ಇಂದುಮತಿಗೆ ಒಂದು ಅಮೋಘ ಐಡಿಯಾ ಹೊಳೆಯಿತು. ಯಾರ್‍್ಯಾರಿಗೆ ಈ ಮೇಲ್ ಹೊಂದಲು ಸಹಾಯ ಮಾಡಿದ್ದಳೋ ಅವರದ್ದೆಲ್ಲ ಪಾಸ್ ವರ್ಡುಗಳನ್ನೂ ಸಂಗ್ರಹ ಮಾಡತೊಡಗಿದಳು. ಆ ಉಪಾಯವನ್ನು ವಿಜಿಗೂ ಹೇಳಿಕೊಟ್ಟಳು.

ತಾನು ಹೇಳಿಕೊಟ್ಟದ್ದನ್ನು ಬಿಟ್ಟು ಈ ಇಬ್ಬರೂ ಮೂರು ಹೆಜ್ಜೆ ಮುಂದೆ ಹೋಗಿರುವುದನ್ನು ಕಂಡ ರಶ್ಮಿ ಮಾತ್ರ ದಂಗಾದಳು. ಇದು ಗೊತ್ತಾದದ್ದು ಟಿಬೆಟಿಯನ್ ಹುಡುಗಿ ಡೊಲ್ಮಾ ಸೆರಿಂಗ್ ಸೈಬರ್ ಕೆಫೆಗೆ ಹೋಗಿ ಬಂದ ನಂತರ.

ಇಂದುಮತಿಗೆ ಡೊಲ್ಮಾ ಈ ಮೇಲ್ ಕ್ರಿಯೇಟ್ ಮಾಡಿದ್ದ ವಿಷಯ ಗೊತ್ತಾಗಿ ಅವಳನ್ನ ರೂಮಿನಲ್ಲಿ ಕೂರಿಸಿಕೊಂಡು ಇಂಟರಾಗೇಶನ್ ಶುರು ಮಾಡಿದ್ದಳು. ರಶ್ಮಿ ಇಂದುಮತಿಯ ರೂಂ ದಾಟಿ ತನ್ನ ರೂಮಿಗೆ ಹೋಗುತ್ತಿರುವಾಗ ಇಂದೂ ಮತ್ತು ಡೊಲ್ಮಾ ನಡುವೆ ನಡೆಯುತ್ತಿದ್ದ ಮಾತುಗಳು ಕೇಳಿಸಿದವು.
‘ಈಮೇಲ್ ಫ್ರೀ ಅಲ್ವಾ?’

‘ಹೌದು. ಆದ್ರೆ ಫ್ರೀ ಹೆಂಗಾಗುತ್ತೆ ಅಂತ ಅರ್ಥ ಆಗಲೇ ಇಲ್ಲ. ಯಾವಾಗ್ಲಾದ್ರೂ ದುಡ್ಡು ಕೇಳ್ತಾರೇನೋ?’ ಡೊಲ್ಮಾ ಕನ್‌ಫ್ಯೂಷನ್‌ನಲ್ಲಿದ್ದಳು.
‘ಹೆಹೆಹೆ...ಇದು ಫ್ರೀನೇ. ದುಡ್ಡಿನ ಖರ್ಚೇ ಇಲ್ಲ.’

‘ರಿಯಲೀ?’
‘ಹೌದು ರಿಯಲೀ’
‘ನಿನ್ ಈ ಮೇಲ್ ಐಡಿ ಕೊಡು. ಯಾವಾಗ್ಲಾದ್ರೂ ನಿಂಗೆ ಮೇಲ್ ಕಳಿಸ್ತೀನಿ’
‘ಯಾಕೆ, ದಿನಾ ಇಲ್ಲೇ ಸಿಗ್ತೀವಲ್ಲ? ಇಲ್ಲೇ ಮಾತಾಡಿದ್ರಾಯ್ತು.’

‘ಅದ್ರಲ್ಲಿ ಏನ್ ಮಜಾ ಇರುತ್ತೆ? ಈ ಮೇಲಿನಲ್ಲಿ ಏನೇನೋ ಭಾವನೆಗಳನ್ನೆಲ್ಲ ಬರ್ಕೋಬಹುದು ಅಲ್ವಾ? ಓದಕ್ಕೆ ಚೆನ್ನಾಗಿರುತ್ತೆ’
‘ಓಹೋ! ಹೌದಲ್ವಾ’
‘ಯಸ್. ಬೇಗ ನಿನ್ ಮೇಲ್ ಐಡಿ ಬರ್ಕೊಡು.’

ಹೊಸದಾಗಿ ಈ ಮೇಲ್ ಐಡಿ ಸೃಷ್ಟಿಸಿಕೊಂಡಿದ್ದವರ ಪಾಡುಗಳಿಗೆ ಕೊನೆ ಮೊದಲಿರಲಿಲ್ಲ. ಈ ಮೇಲ್ ಐಡಿಯನ್ನೂ, ಪಾಸ್ ವರ್ಡನ್ನೂ ಜೋಪಾನ ಮಾಡುತ್ತಿದ್ದುದು ಬ್ಯಾಂಕಿನ ಲಾಕರಿನ ಕೀಲಿಯನ್ನು ಜಾಗ್ರತೆಯಾಗಿಟ್ಟುಕೊಳ್ಳುವಷ್ಟೇ ಅಸ್ಥೆಯಿಂದ. ತಮ್ಮ ಡೈರಿಯಲ್ಲೋ ಅಥವಾ ಫೋನ್ ಪುಸ್ತಕದಲ್ಲೋ ಎಲ್ಲರಿಗೂ ಕಾಣುವ ಹಾಗೆ ಢಾಳಾಗಿ ಬರೆದುಕೊಂಡಿರುತ್ತಿದ್ದರು. ಆಗಿನ ದಿನಗಳಲ್ಲಿ ಈ ತಾಂತ್ರಿಕ ಔನ್ನತ್ಯ ಒಂದು ಥರಾ ಆಭರಣಗಳ ಹಾಗೆ. ಜನ ಇದ್ದ ಕಡೆ ಧರಿಸಿ ಹೋಗಬೇಕು. ಇವೆಲ್ಲ ತನ್ನ ಹತ್ತಿರ ಇರುವುದು ಜನರಿಗೆ ಗೊತ್ತಾಗದಿದ್ದರೆ ತನ್ನ ಸಾಮಾಜಿಕ ಸ್ಥಾನಮಾನದ ಅರಿವು ಉಳಿದವರಿಗೆ ಉಂಟಾಗುವುದಾದರೂ ಹೇಗೆ?

ಇನ್ನೊಂದು ವಿಷಯವೆಂದರೆ ಜನರಿಗೆ ತಮ್ಮ ಪಾಸ್‌ವರ್ಡು ಬೇರೆಯವರಿಗೆ ಗೊತ್ತಿರುವುದು ಎಂಥಾ ಅಪಾಯ ಎಂದು ಗೊತ್ತಾಗುವ ಹೊತ್ತಿಗೆ ಕನಿಷ್ಠ ಒಂದು ವರ್ಷವಾದರೂ ಆಗುತ್ತಿತ್ತು. ಪತ್ರವನ್ನಾದರೆ ಬೇರೆಯವರು ಒಡೆದು ನೋಡಿದ್ದು ಸ್ಪಷ್ಟವಾಗಿ ಗೊತ್ತಾಗುತ್ತದೆ. ತನ್ನ ಮೇಲ್ ಬಾಕ್ಸನ್ನು ಬೇರೆಯವರು ಓಪನ್ ಮಾಡಿದ್ದು ಗೊತ್ತಾಗುವ ಸಾಧ್ಯತೆಯೇ ಇರಲಿಲ್ಲ. ಅಲ್ಲದೆ, ಹಾಟ್ ಮೇಲ್ ಅಥವಾ ಯಾಹೂ ಮೇಲ್ ಮಾತ್ರ ಇದ್ದವು. ಅಲ್ಲಿ ಹತ್ತಕ್ಕಿಂತ ಜಾಸ್ತಿ ಪತ್ರಗಳಿದ್ದರೆ ತಾನೇ ತಾನಾಗಿ ಡಿಲೀಟ್ ಆಗುವ ವ್ಯವಸ್ಥೆ ಇತ್ತು. ವಿಜಿ ಮತ್ತು ಇಂದುಮತಿಗೆ ಪಾಸ್‌ವರ್ಡಿನ ಜ್ಞಾನದಿಂದ ಸಾಧ್ಯವಿದ್ದ ಕುಚೇಷ್ಟೆಗಳ ಅರಿವು ಗಂಟೆ ಹೊಡೆದಷ್ಟು ಸ್ಪಷ್ಟವಾಗಿತ್ತು. ಯಾರಾದರೂ ಈ ಮೇಲ್ ಕ್ರಿಯೇಟ್ ಮಾಡಿ ಬಂದಿದ್ದಾರೆಂದು ಗೊತ್ತಾದ ಕೂಡಲೇ ಸಾಲ ಕೊಟ್ಟವರ ಹಾಗೆ ಅವರ ಬಳಿ ಹೋಗಿ ಡೊಲ್ಮಾಗೆ ದುಂಬಾಲು ಬಿದ್ದ ಹಾಗೆ ಗಂಟು ಬೀಳುತ್ತಿದ್ದರು.

‘ನಾನು ನಿನಗೆ ಈಮೇಲ್ ಕಳಿಸಬೇಕೆಂದರೆ ನಿನ್ ಪಾಸ್ ವರ್ಡು ಬೇಕು’
‘ಪಾಸ್ ವರ್ಡಾ? ಯಾಕೆ?’

‘ನೋಡು ಈ ಮೇಲು ಒಂದು ಮನೆ ಅಂದ್ಕೋ. ನಾನು ನಿನಗೆ ಮೇಲ್ ಕಳಿಸಿದರೆ ಅದು ನಿನ್ನ ಮನೆ ಒಳಗೆ ಬಂದು ಕೂತಿರುತ್ತೆ. ಆದರೆ ಪಾಸ್ ವರ್ಡು ಮನೆಗೆ ಕೀಲಿ ಇದ್ದ ಹಾಗೆ. ನೀನು ಕೀಲಿಯನ್ನು ನನ್ನ ಕೈಗೆ ಕೊಡದೇ ಹೋದರೆ ನಾನು ಅದನ್ನ ಒಳಗೆ ಕಳಿಸೋದಾದರೂ ಹೇಗೆ?’
‘ಓ! ಹೌದಲ್ವಾ? ತಗೊ ಬರ್ಕೋ...’

ಈ ತಂತ್ರ ಬಹಳ ಯಶಸ್ವಿಯಾಗಿ ಸುಮಾರು ಇಪ್ಪತ್ತೈದು ಹುಡುಗಿಯರ ಜೀವನದ ವೈಯಕ್ತಿಕ ವಿವರಗಳು ಇಂದುಮತಿ ಮತ್ತು ವಿಜಿಗೆ ಮುಂದೆ ಸುಮಾರು ಎರಡು ವರ್ಷಗಳ ಕಾಲ ಗೊತ್ತಾಗುತ್ತಲೇ ಇದ್ದವು. ಆಮೇಲೆ ತಂತಮ್ಮ ಜೀವನಗಳಲ್ಲಿ ಎಲ್ಲರೂ ಮುಳುಗಿ ಕೀಲಿ ಕೈಯ್ಯ ಸಹವಾಸ ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT