ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನಸಾದಿದ್ರೆ ಕನಿಷ್ಠ ಕನಸಾದ್ರೂ ಉಳೀತಿತ್ತು’

Last Updated 13 ಜನವರಿ 2016, 19:30 IST
ಅಕ್ಷರ ಗಾತ್ರ

ನಳನಳಿಸುತ್ತಿದ್ದ ಹಸಿರು ಮಾನಸಗಂಗೋತ್ರಿಗೆ ಕಿರೀಟಪ್ರಾಯವಾಗಿತ್ತು. ಇಲ್ಲಿ ಓದುತ್ತಿರುವವರೆಲ್ಲರಿಗೂ ಇಂಥದ್ದೊಂದು ಕ್ಯಾಂಪಸ್ಸು ಭೂಮಂಡಲದ ಮೇಲೆ ಇನ್ನೆಲ್ಲಾದರೂ ಇದ್ದೀತೇ ಎನ್ನುವ ಹೆಮ್ಮೆ.

ನೆಲದಿಂದ ಬೊಡ್ಡೆ ಬಿರಿದು ಹೊರಟಂತೆ ಭೂಮಿಯಂಥಾ ಭೂಮಿಗೇ ಆಧಾರವಾಗಿವೆಯೇನೋ ಎನ್ನುವಂತಿದ್ದ ಬೃಹದಾಕಾರದ ಮರಗಳು; ಪ್ರತೀ ಮರದಲ್ಲೂ ಇದ್ದ ಲಕ್ಷ ಲಕ್ಷ ಪಕ್ಷಿಗಳು, ಸ್ವಚ್ಛ ಆಕಾಶ, ಸುತ್ತಲಿನ ಏರಿಯಾಗಳ ಮಲ ತನ್ನ ಹೊಟ್ಟೆ ಸೇರುತ್ತಿದ್ದರೂ ಚಳಿಗಾಲದ ತಿಂಗಳುಗಳಲ್ಲಿ ವಲಸೆ ಹಕ್ಕಿಗಳ ಟೆಂಪರರಿ ಮನೆಯಾಗಿ, ಆಕಾಶವೆನ್ನುವ ಕನ್ನಡಿಯ ಚಿಕ್ಕ ಚೂರು ಭೂಮಿಗೆ ಬಿದ್ದಂತಿದ್ದ ಕುಕ್ಕರಹಳ್ಳಿ ಕೆರೆ. ಅಬ್ಬಬ್ಬಾ! ಒಂದೇ ಎರಡೇ!

ಕನಸು ನನಸಾದಂತಿದ್ದ ಕ್ಯಾಂಪಸ್ಸಿನ ಸುಖವೇ ಸುಖ. ಈ ಪ್ರಶಾಂತ ವಾತಾವರಣದಲ್ಲಿ ಒಮ್ಮೊಮ್ಮೆ ಅಲ್ಲೋಲ ಕಲ್ಲೋಲ ಹುಟ್ಟಿಸುವ ಹಾಗೆ ಕೆಲವೊಮ್ಮೆ ಸಿನಿಮಾ ಶೂಟಿಂಗುಗಳು ಉದ್ಭವ ಮೂರ್ತಿಗಳ ಹಾಗೆ ಧುತ್ತೆಂದು ಪ್ರತ್ಯಕ್ಷವಾಗಿಬಿಡುತ್ತಿದ್ದವು.  ಆಗೆಲ್ಲ ಹುಡುಗ ಹುಡುಗಿಯರಿಗೆ ಸುಗ್ಗಿಯೋ ಸುಗ್ಗಿ. ಕ್ಲಾಸು ಬಿಟ್ಟು ಹೀರೊ ಎಷ್ಟು ಸಾರಿ ಟೇಕ್ ತಗೊಂಡ, ಸಿನಿಮಾದಲ್ಲಿ ‘ಯಂಗ್’ ಆಗಿ ಕಂಡರೂ ನಿಜವಾಗಿ ಹೇಗೆ ‘ಯಂಗೆಂಗೋ’ ಇದ್ದಾನೆ; ಹೀರೋಯಿನ್ನು ಎಷ್ಟು ಕೇಜಿ ಮೇಕಪ್ಪುಹೊತ್ತಿದ್ದಳು, ಅದಕ್ಕಿಂತಾ ಎಷ್ಟು ಕೆಟ್ಟ ಕನ್ನಡ ಮಾತನಾಡುತ್ತಿದ್ದಳು– ಇವೆಲ್ಲ ಬಹಳ ದಿನ ಚರ್ಚೆಯಾಗುತ್ತಿದ್ದವು. 

ಯರ್ಲಗಡ್ಡ ಈಶ್ವರಿಗೆ ಭರ್ಜರಿ ಸಿನಿಮಾ ಹುಚ್ಚು. ಹೊರಗಿನ ಹುಡುಗರ ಸಹವಾಸ ಸ್ವಲ್ಪ ಇದ್ದುದರಿಂದ ಕ್ಯಾಂಪಸ್ಸು ಬಿಟ್ಟು ಇನ್ನೆಲ್ಲಾದರೂ ಸಿನಿಮಾ ಶೂಟಿಂಗ್ ಆದರೂ ಅವಳಿಗೆ ಗೊತ್ತಾಗುತ್ತಿತ್ತು, ದೇಬಬ್ರತನೊಂದಿಗಿನ ಪ್ರೇಮ ಕಡಿದು ಬಿದ್ದುದನ್ನೂ, ತನ್ನ ಎಳೆ ವಯಸ್ಸಿನ ಡೈವೋರ್ಸನ್ನೂ ವಾರಕ್ಕೆ ನಾಲ್ಕು ಸಿನಿಮಾ ನೋಡುವುದರ ಮೂಲಕವೇ ನಿಭಾಯಿಸಿದ ದಿಟ್ಟೆ ಈ ತೆಲುಗು ಹೆಣ್ಣು.  ಅವಳಿಗೆ ಎನ್‌ಟಿಆರ್ ಅಂದರೆ ತೀರ್ಥರೂಪ-ಸಮಾನ. ಅಕ್ಕಿನೇನಿ ನಾಗಾರ್ಜುನ ಮಾತ್ರ ‘ಆಲ್ಫಾ ಮೇಲ್’. ಚಿರಂಜೀವಿ ಸ್ವಲ್ಪ ಹೊಳಪು ಕಳೆದುಕೊಳ್ಳುತ್ತಿದ್ದ. ಅವನ ಹೀರೋಯಿನ್ನುಗಳು ಆಗಲೇ ತಾಯಿ ಪಾತ್ರಕ್ಕೆ ಬಡ್ತಿ ಹೊಂದಿದ್ದರು.

ಪಕ್ಕಾ ತೆಲುಗು ಅಮ್ಮಾಯಿ ಈಶ್ವರಿಗೆ ಹಿಂದಿ ಸಿನಿಮಾ ಅಷ್ಟೊಂದು ಪರಿಚಯವಿರಲಿಲ್ಲ. ಅಲ್ಲಿನ ಹೀರೊಗಳು, ಹೀರೋಯಿನ್ನುಗಳು ಎಲ್ಲರೂ ಒಂದು ನಮೂನಿ ತೆಲುಗುವಿನ ಬಡ ಅವತರಣಿಕೆಯಂತೆ ಅವಳಿಗೆ ಅನ್ನಿಸುತ್ತಿತ್ತು. ತೆಲುಗೇನು, ಅದರ ಹಾಡೇನು, ಸಿನಿಮಾದ ಬಜೆಟ್ಟೇನು, ಸೆಟ್ಟೇನು, ಹೀರೋ ಡ್ಯಾನ್ಸೇನು... ಮಾ ತೆಲುಗು ಸಿನಿಮಾಲೇ ಮಂಚಿ ಎನ್ನಲು ಕಾರಣ ಒಂದೇ, ಎರಡೇ!

ಸಿನಿಮಾ ಎನ್ನುವುದು ಒಂದು ಕಲೆ ಎನ್ನುವ ಮಾತು ಒಂದಂಶ ನಿಜವಾದರೂ, ಅದು ವ್ಯಕ್ತಿನಿಷ್ಠ ಮಾಧ್ಯಮ. ಒಬ್ಬರಿಗೆ ಕಂಡ ಹಾಗೆ ಇನ್ನೊಬ್ಬರಿಗೆ ಕಾಣುವುದಿಲ್ಲ. ಕೆಲವರಿಗೆ ಸಿನಿಮಾ ವಾಸ್ತವವನ್ನು ಮೀರುವ ಪ್ರಯತ್ನ. ತಮ್ಮ ಹಗಲುಗನಸಿಗೆ ಇನ್ನೊಬ್ಬರು ಬಳಿದ ಬಣ್ಣವೇ ಇರಬಹುದು.

ಹಾಗೆ ನೋಡಿದರೆ ಹಗಲುಗನಸು ಕಾಣುವವರಿಗೆ ಸಿಗುವ ಸುಖ ವಾಸ್ತವದ ಬೇಗೆಯಲ್ಲಿ ಬೇಯುವವರಿಗೆ ಅರ್ಥವಾಗುವುದಿಲ್ಲ. ಕನಸುಕಂಗಳಿಗೆ ಆ ಸುಖ ಇದೆ ಅಂತಲೋ ಏನೋ ವಾಸ್ತವದಲ್ಲಿ ಬದುಕುವವರು ಯಾವಾಗಲೂ ಒಗ್ಗರಣೆಗೆ ಕಾದ ಎಣ್ಣೆಯಂತೆ ಸಿಡಿಯಲು ತಯಾರಾಗಿಯೇ ಇರುತ್ತಾರೆ. ಜಗತ್ತಿನ ವ್ಯಾಪಾರವಿದ್ದೂ ಅದರಲ್ಲಿ ಕಳೆದುಹೋಗದ ಮನಃಸ್ಥಿತಿಯ ಸುಖ, ಸಿಕ್ಕಲ್ಲಿ ನಿದ್ದೆ ಮಾಡುವ ಅದೃಷ್ಟ, ಕಣ್ಣಿಗೆ ಕಸವೇ ಕಾಣದ ದೃಷ್ಟಿ, ಹುಚ್ಚು ರುಚಿ ಬಯಸದ ನಾಲಿಗೆ– ಜಗತ್ತಿನಲ್ಲಿ ಸುಖಿಗಳು ಯಾರು ಎಂದರೆ ಇದ್ದಲ್ಲಿ, ಇದ್ದುದರಲ್ಲಿ ಸೌಂದರ್ಯ ಕಾಣುವ ಮನಸ್ಸುಗಳು, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯದ ಶ್ರೀಮಂತರು ಮಾತ್ರವೇ.

ಅಕ್ಕನ ಬಾಯ್‌ಫ್ರೆಂಡ್ ಅನ್ನು ‘ಎಕ್ಸ್‌ಚೇಂಜ್ ಪಾಲಿಸಿ’ಯಲ್ಲಿ ಮದುವೆಯಾಗಿ ಹೊಂದಿಕೊಳ್ಳಲಾಗದೆ ಡೈವೋರ್ಸ್ ಆದ ಕಥೆ, ಬಾಯ್‌ಫ್ರೆಂಡ್ ಆಗಬಹುದಿದ್ದ ದೇಬಬ್ರತನ ಪುಕ್ಕಲುತನದ ಪರಿಚಯ, ಅವನ ಅಮ್ಮನ ಹಣದ ದಾಹ, ಹಿಂದೆಯೇ ಬಂದ ತಿರಸ್ಕಾರ – ಹೀಗೆ ಅನುಭವಗಳು ಅಷ್ಟೇನೂ ಸಿಹಿಯಾಗಿ ಇರದಿದ್ದರೂ ಈಶ್ವರಿ ಮಾತ್ರ ಜೀವನೋತ್ಸಾಹ ಬಿಟ್ಟುಕೊಟ್ಟಿರಲಿಲ್ಲ. ಆಗಾಗ ಬಾಯ್‌ಫ್ರೆಂಡ್‌ಗಳನ್ನು ಬದಲಿಸುತ್ತಿದ್ದ ರಿಂಕಿ ಕೂಡ ಒಬ್ಬ ಹುಡುಗನಿಂದ ದೂರವಾಗಿ ಇನ್ನೊಬ್ಬ ಹುಡುಗನನ್ನು ಒಪ್ಪುವ ಮಧ್ಯಂತರದಲ್ಲಿ ತಕ್ಕಮಟ್ಟಿಗಿನ ಮನೋವೇದನೆ ಅನುಭವಿಸುತ್ತಾ ಹಾಸ್ಟೆಲಿಗೆ ಬಂದು ಬಟ್ಟೆಗಳನ್ನು ಒಗೆದು ಹಳಬನ ಗುರುತಿಲ್ಲದಂತೆ ಅವನ ಎಲ್ಲ ವಸ್ತುಗಳನ್ನು ಸುಟ್ಟು ಅಥವಾ ದಾನ ಮಾಡಿ ಮುಂದಿನ ಬಲಿಯನ್ನು ಹುಡುಕುವಾಗ ಈಶ್ವರಿಯನ್ನು ಕಂಡು ಸೋಜಿಗಪಡುತ್ತಿದ್ದಳು.

ಅವಳ ಪ್ರೇಮ ಪ್ರಕರಣವೊಂದು ಒಂದು ತಿಂಗಳೂ ಬಾಳದೆ ಅಕಾಲ ಮರಣಕ್ಕೆ ತುತ್ತಾದಾಗ ಬೇಗೆಯಲ್ಲಿ ಬೇಯುತ್ತಾ ರಿಂಕಿ ಹಾಸ್ಟೆಲಿಗೆ ಬಂದು ಅಳುತ್ತಾ ಕೂತಿದ್ದಳು. ಈಶ್ವರಿ ಆಗ ತಾನೇ ಯಾವುದೋ ಸಿನಿಮಾದಿಂದ ವಾಪಸ್‌ ಬಂದವಳು ಅಳುತ್ತಿದ್ದ ರಿಂಕಿ ಕಂಡು ಸಂತೈಸಲು ಪ್ರಯತ್ನ ಮಾಡಿದ್ದಳಾದರೂ ಸಫಲಳಾಗಿರಲಿಲ್ಲ.

‘ನೀನು ಅದೆಂಗ್ ಅಷ್ಟ್ ಆರಾಮಾಗಿ ಇರ್ತೀಯಾ? ಫ್ಯೂಚರ್ ಬಗ್ಗೆ ಬೇಜಾರಾಗಲ್ವಾ? ಒಬ್ಳೇ ಆಗ್ಬಿಡ್ತೀನಿ ಅಂತ ಹೆದರಿಕೆ ಇಲ್ವಾ?’ ರಿಂಕಿ ಒಮ್ಮೆ ಈಶ್ವರಿಯನ್ನು ಕೇಳಿದ್ದಳು. ಈಶ್ವರಿ ಬಹಳ ಮುಗ್ಧೆ. ಇದ್ದದ್ದನ್ನು ಇಲ್ಲದಂತೆ, ಇಲ್ಲದ್ದನ್ನು ಇದ್ದಂತೆ ಹೇಳುವ ವಿದ್ಯೆ ಅವಳಿಗೆಂದೂ ಸಿದ್ಧಿಸಿರಲಿಲ್ಲ.

‘ಫ್ಯೂಚರ್ರಾ? ಈಗ ಆಗಿರೋದಕ್ಕಿಂತಾ ಭಯಾನಕವಾಗಿರಲಾರದು ಅಂದ್ಕೊಂಡಿದೀನಿ. ಇರೋ ಸತ್ಯವನ್ನೇ ಬದುಕೋಕೆ ನೋಡೋದು. ಇಲ್ಲಾ ಅಂದರೆ ಕೆಲಸ-ಪಲಸ ಮಾಡಿಕೊಂಡು, ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ಆರಾಮಾಗಿ ಇರೋದು ಅಂದುಕೊಂಡಿದೀನಿ. ಜೊತೆಗೆ ಗಂಡನೋ, ಬಾಯ್‌ಫ್ರೆಂಡೋ ಇದ್ದರೂ ಆಯ್ತು, ಇಲ್ಲದಿದ್ದರೂ ಆಯ್ತು’ ಈಶ್ವರಿ ತನ್ನ ಮುಂದಿನ ಯೋಜನೆಯನ್ನು ಸೂಚ್ಯವಾಗಿ ಹೇಳಿದಳು.

ಇದನ್ನು ಕೇಳಿದ ರಿಂಕಿಗೆ ಮನಸ್ಸು ಹಗುರಾದ ಅನುಭವವಾಯಿತು. ಸ್ವಲ್ಪ ದಿನ ಕಳೆಯುವುದರಲ್ಲೇ ರಿಂಕಿ-ಈಶ್ವರಿ ಬಹಳ ಗಾಢ ಸ್ನೇಹಿತರಾದರು. ಇದನ್ನು ನೋಡಿ ಇಂದುಮತಿ, ರಶ್ಮಿ, ವಿಜಿ ಮುಸಿಮುಸಿ ನಗುತ್ತಿದ್ದರು. ಏಕೆಂದರೆ ರಿಂಕಿ ಮನಸ್ಸು ಮಂಗನದ್ದು. ಅದಕ್ಕೆ ಹಾರದಂತೆ ತಡೆದುಕೊಳ್ಳುವ ತಾಕತ್ತಿರುವುದು ಇನ್ನೊಂದು ಹುಡುಗನೆಂಬ ಮರವೋ, ಕೊಂಬೆಯೋ ಕಾಣುವ ತನಕ ಅಷ್ಟೇ. ಅದು ಕಂಡ ಮರುಕ್ಷಣ ತನ್ನದೇ ಅರಿವಿಗೂ ಬಾರದಂತೆ ರಿಂಕಿ ರಪ್ಪ್ ಎಂದು ಹಾರಿಬಿಡುತ್ತಿದ್ದಳು.

ಈಶ್ವರಿಗೆ ಇವ್ಯಾವೂ ದೊಡ್ಡ ವಿಷಯ ಅನ್ನಿಸುತ್ತಲೇ ಇರಲಿಲ್ಲ. ಬಂದದ್ದು ಬರಲಿ, ಮುಂದಿನದ್ದು ನೋಡಿಕೊಳ್ಳೋಣ ಸದ್ಯಕ್ಕೆ ಒಳ್ಳೆ ಪಿಚ್ಚರ್ ಇದ್ರೆ ಜೀವನ ನಡೆಯುತ್ತೆ ಅನ್ನುವ ಬಹಳ ಸರಳ ಸೂತ್ರ.

ಊರಿನ ಸೌಂದರ್ಯಕ್ಕೋ ಅಥವಾ ಇಲ್ಲಿ ಶೂಟ್ ಮಾಡಿದರೆ ಖರ್ಚು ಮಿಗುತ್ತೆ ಎನ್ನುವ ಕಾರಣಕ್ಕೋ ಮೈಸೂರಿನಲ್ಲಿ ಶೂಟಿಂಗುಗಳು ಸಾಕಷ್ಟು ನಡೆಯುತ್ತಿದ್ದವು, ಈಗಲೂ ನಡೆಯುತ್ತವೆ. ಹಾಗೆ ಶೂಟಿಂಗ್ ತಂಡ ಬಂದಾಗಲೆಲ್ಲ ಹುಡುಗರಿಗೆ ಮೊದಲು ಗೊತ್ತಾಗುತ್ತಿತ್ತು. ಕ್ಯಾಂಪಸ್ಸಿಗೆ ಬರುವುದಕ್ಕಿಂತ ಹೆಚ್ಚಾಗಿ ಬಲಮುರಿ, ಕೃಷ್ಣರಾಜಸಾಗರ, ಚಾಮುಂಡಿ ಬೆಟ್ಟ ಇಂಥಲ್ಲಿ ಹೆಚ್ಚು ಶೂಟಿಂಗ್ ಇರುತ್ತಿದ್ದವು. ಹೀಗೆ ಯಾವ ಹೀರೊ ಬಂದಿದ್ದಾನೆ ಎನ್ನುವ ವಿಷಯವನ್ನು ಹುಡುಗರು ಹುಡುಗಿಯರಿಗೆ ದಾಟಿಸುತ್ತಿದ್ದರು.

ಎರಡು ಮಟ್ಟದಲ್ಲಿ ಈ ಸಮಾಚಾರ ವಿನಿಮಯವಾಗುತ್ತಿತ್ತು. ಮೊದಲನೆಯದು ‘ಹಾಗೆ ಸುಮ್ಮನೆ’ ಎಂದು ಮಾಹಿತಿ ರೂಪದಲ್ಲಿ ಹೇಳುವವರಿದ್ದರೆ, ಎರಡನೇ ಕೆಟಗರಿಯಲ್ಲಿ ಭವಿಷ್ಯದ ಪ್ರೇಮಿಗಳಿರುತ್ತಿದ್ದರು. ವರ್ತಮಾನದ ಪ್ರೇಯಸಿಗೆ ಸುದ್ದಿ ಮುಟ್ಟಿಸಿ, ಅವಳು ಶೂಟಿಂಗ್ ಸ್ಥಳಕ್ಕೆ ಹೋಗುವ ಅಭೀಪ್ಸೆ ವ್ಯಕ್ತಪಡಿಸಿದರೆ ಒಂದೆರಡು ಬಾರಿ ಕರೆದುಕೊಂಡು ಹೋಗಿ, ಮೂರನೆ ಬಾರಿ ಗುಂಡಿಗೆ ಗಟ್ಟಿ ಮಾಡಿಕೊಂಡು ಪ್ರಪೋಸ್ ಮಾಡುವ ಪ್ಲಾನ್‌ ಇರುತ್ತಿತ್ತು.

ಆದರೆ, ನಮ್ಮ ಹುಡುಗಿಯರ ಗುಂಪು ಅಷ್ಟೇನೂ ಭಾರೀ ಹೆಣ್ತನದಿಂದ ಬಾಧಿತರಾಗಿರಲಿಲ್ಲವಾಗಿ, ಹುಡುಗರು ಪ್ರಪೋಸ್ ಮಾಡುವ ಮಟ್ಟದಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಹಾಸ್ಟೆಲ್ ಜೀವನದ ಸಂಪೂರ್ಣ ಮಜಾ ಅನುಭವಿಸಲು ಸಾಧ್ಯವಾಯಿತೆಂದುಕೊಂಡರೂ ತಪ್ಪಿಲ್ಲ. ಹೀಗಿರಲಾಗಿ ಈಶ್ವರಿಯ ಕ್ಲಾಸ್ ಮೇಟ್ ಗಣೇಶ ಒಂದು ದಿನ ಆಕೆಗೆ ಬಿಸಿಬಿಸಿ ಜಾಮೂನಿನಂತಹ ಸುದ್ದಿ ಕೊಟ್ಟ. ಬಲಮುರಿಯಲ್ಲಿ ರಜನೀಕಾಂತ್ ಸಿನಿಮಾ ಶೂಟಿಂಗ್ ನಡೀತಿದೆ.

ನಾಳೆನೇ ಕೊನೇ ದಿವಸ, ನಾವೆಲ್ಲಾ ಹೋಗ್ತಿದೀವಿ, ನೀನೂ ಬೇಕಾದ್ರೆ ಬಾ ಅಂದ. ಏನೂ ಇಲ್ಲದೇ ಸಿನಿಮಾ ಬಗ್ಗೆ ರೋಮಾಂಚಿತಳಾಗುವ ಹುಡುಗಿ, ಸೂಪರ್ ಸ್ಟಾರ್ ರಜನೀಕಾಂತ್ ನೋಡುವ ಅವಕಾಶ ಬಿಟ್ಟಾಳೆಯೇ?

ಸರಿ, ಗಣೇಶನಿಗೆ ನಾನೂ ನಿನ್ನ ಜೊತೆಗೆ ಬರುತ್ತೇನೆ ಎಂದು ಹೇಳಿದಳು. ಹಾಸ್ಟೆಲಿಗೆ ಬಂದು ತನ್ನ ಮಾರನೇ ದಿನದ ಪ್ಲಾನ್ ಅನ್ನು ಬಹಳ ಉತ್ಸುಕಳಾಗಿ ರಿಂಕಿ ಹತ್ತಿರ ಹಂಚಿಕೊಂಡಳು. ಇದನ್ನೆಲ್ಲ ಕೇಳಿ ರಿಂಕಿ ಮನಸ್ಸಿನಲ್ಲೂ ಆಸೆ ಮೂಡಿತು.

ಗಣೇಶನ ಹತ್ತಿರ ಇದ್ದದ್ದು ಟೂ ವೀಲರ್. ಅದರಲ್ಲಿ ಮೂವರು ಹೋಗುವಂತಿರಲಿಲ್ಲ. ಅಲ್ಲದೆ ಅವರ ಅಪ್ಪ ಊರಿನಿಂದ ಅಂದು ಬರುವವರಿದ್ದು ಯಾರ ಕೈಲೋ ಹಾಗಂತ ಹೇಳಿ ಕಳಿಸಿದ್ದರು. ಹಾಗಾಗಿ ಗಣೇಶನಿಗೆ ಸ್ವತಃ ಶೂಟಿಂಗ್ ನೋಡಲು ಹೋಗುವ ಉತ್ಸಾಹವೇ ಹೊರಟುಹೋಗಿತ್ತು. ಅವನೊಂದು ಉಪಾಯ ಮಾಡಿದ. ಸ್ನೇಹಿತನೊಬ್ಬನ ಕೈನೆಟಿಕ್ ಹೋಂಡಾವನ್ನು ಹುಡುಗಿಯರಿಗೆ ಕೊಡಿಸಿಕೊಟ್ಟು ನೀವು ಹೋಗಿ ಬನ್ನಿ ಎಂದು ಹೇಳಿದ.

ರಿಂಕಿಗೆ ಗಾಡಿ ಓಡಿಸಲು ಬರುತ್ತಿರಲಿಲ್ಲ. ಅಸಂಖ್ಯಾತ ಬಾಯ್‌ಫ್ರೆಂಡ್‌ಗಳನ್ನು ಇಟ್ಟುಕೊಳ್ಳಲು ಅವಳಿಗೆ ಇದೂ ಒಂದು ಬಲವಾದ ಕಾರಣ. ಎಲ್ಲಿಗಾದರೂ ಹೋಗಬೇಕೆಂದರೆ ಕರೆದುಕೊಂಡು ಹೋಗಲು ಒಬ್ಬನಾದರೂ ಬೈಕಿಗ ಇರಬೇಡವೇ?  ಈಶ್ವರಿಗೆ ಜೀವನದ ದುಸ್ತರತೆ ಕೆಲವು ಅನಿವಾರ್ಯಗಳನ್ನು ತಂದೊಡ್ಡಿತ್ತು. ಹಾಗಾಗಿ ಅವಳು ಸಾಕಷ್ಟು ಸ್ವಾವಲಂಬಿಯಾಗಿದ್ದಳು.

ಇಬ್ಬರೂ ಮಧ್ಯಾಹ್ನ ಊಟ ಮುಗಿಸಿ ಹೊರಟರು. ಬಲಮುರಿ ತಲುಪಿದಾಗ ಸಂಜೆ ನಾಲ್ಕು ಗಂಟೆ. ಚಂದದ ಪುಟ್ಟಾಣಿ ಜಲಪಾತದಂತಿರುವ ಬಲಮುರಿಯ ಸೌಂದರ್ಯ ಮಾತಿನಲ್ಲಿ ಹೇಗೆ ಹೇಳುವುದು? ಈಗಿನಷ್ಟು ಜನದಟ್ಟಣೆ ಇರಲಿಲ್ಲ ಆಗ. ನೀರು ಜುಳು ಜುಳು ಹರಿಯುತ್ತಿದ್ದರೆ ಅಲ್ಲೇ ಕಟ್ಟಿರುವ ಕಟ್ಟೆ ಮೇಲೆ ಆರಾಮಾಗಿ ಪಾದಗಳನ್ನು ನೀರಿನಲ್ಲಿ ನೆನೆಸುತ್ತಾ ಗಂಟೆಗಳ ಕಾಲ ಕೂರಬಹುದಿತ್ತು.

ಆದರೆ ಈಶ್ವರಿ, ರಿಂಕಿ ಅಲ್ಲಿಗೆ ಹೋಗಿದ್ದು ಪಿಕ್ನಿಕ್ಕಿಗಲ್ಲವಷ್ಟೇ! ರಜನೀಕಾಂತ್ ಅವರನ್ನು ಪ್ರತ್ಯಕ್ಷ ನೋಡುವ ಆಸೆಯಿಂದ, ಶೂಟಿಂಗ್ ನೋಡುವ ಧಾವಂತದಲ್ಲಿ ಅಲ್ಲಿ ಹೋಗಿ ನೋಡಿದರೆ ಏನಿದೆ? ಬರೀ ಸೌತೆಕಾಯಿ ಮಾರುವವರು ಚಿಲ್ಲರೆ ಕಾಸಿನ ವ್ಯಾಪಾರ ಮಾಡುತ್ತಾ ಓಡಾಡುತ್ತಿದ್ದರು. ಒಂದೆರಡು ದೊಡ್ಡ ಖಾಲಿ ಬಸ್ಸುಗಳು ನಿಂತಿದ್ದವು. ಅಲ್ಲೇ ಒಂದಷ್ಟು ಜನ ಹೆಂಗಸರು ಸ್ನಾನ ಮಾಡಿ ಅಡುಗೆ ಮಾಡಲು ಒಲೆ ಹೂಡಿ ಉಸ್ಸೋ ಉಸ್ಸೋ ಎಂದು ಕೊಳವೆಯಿಂದ ಗಾಳಿ ಊದುತ್ತಾ ಬೆಂಕಿ ಹೊರಡಿಸಲು ವಿಫಲ ಯತ್ನ ಮಾಡುತ್ತಿದ್ದರು. ಪುರುಲೆ ಇದ್ದವಾದರೂ ಗಾಳಿ ಸಾಕಷ್ಟಿದ್ದುದರಿಂದ ಬೆಂಕಿ ಕಣ್ಣಿಗೆ ಕಾಣದ ದೇವರಂತೆ ಪರೀಕ್ಷೆ ಮಾಡುತ್ತಿತ್ತು.

ಅಲ್ಲೇ ಅನತಿ ದೂರದಲ್ಲಿ ಪುಡಿ ವಯಸ್ಸಿನ ಮಕ್ಕಳು ಕಕ್ಕ ಮಾಡಲು ಕೂತಿದ್ದು, ಆ ಕೆಲಸ ಮರೆತು ಮಣ್ಣಿನಲ್ಲಿ ಚಿತ್ರ ಬರೆಯುತ್ತಾ ಒಬ್ಬರಿಗೊಬ್ಬರು ಕಲ್ಲು ಬೀಸುತ್ತಾ ಆಟವಾಡುತ್ತಿದ್ದವು. ನೀರ ಹತ್ತಿರ ಸ್ವಲ್ಪ ಜನ ಹೆಣ್ಣು ಮಕ್ಕಳು ಆಗ ತಾನೆ ಎರೆದ ಕೂದಲ ತುದಿಯಿಂದ ಸೊಂಟದ ಸೀಳಿನೊಳಕ್ಕೆ ನೀರು ಹರಿದು ಹೋಗುತ್ತಿದ್ದುದನ್ನೂ ಮರೆತು ಮರೆಯಲ್ಲಿ ಬೀಡಿ ಸೇದುತ್ತಾ ಇಸ್ಪೀಟ್ ಆಡುತ್ತಿದ್ದ ಗಂಡಂದಿರನ್ನು ಪಿಸುಮಾತಿನಲ್ಲಿ ಬಯ್ಯುತ್ತಾ ನೀರಿನತ್ತ ಸಾಗಿದ್ದರು.

ಒಡಿಶಾದ ರಿಂಕಿ ದಕ್ಷಿಣ ಭಾರತಕ್ಕೆ ಬಂದದ್ದು ಮೊದಲನೇ ಬಾರಿ, ಅದೂ ಓದಲೆಂದೇ. ಹಾಗಾಗಿ ದಕ್ಷಿಣದ ಬಗ್ಗೆ ಆಕೆಗೆ ಅಂಥಾ ಗುರುತರ ಪರಿಚಯವಾಗಲೀ, ಅಭಿಪ್ರಾಯಗಳಾಗಲೀ, ಆಲೋಚನೆಗಳಾಗಲೀ ಇರಲಿಲ್ಲ. ಇವರಿಬ್ಬರೂ ಬಲಮುರಿಗೆ ಬಂದಾಗ ಶೂಟಿಂಗ್ ನಡೆಯುತ್ತಿದ್ದ ಯಾವ ಲಕ್ಷಣವೂ ಕಾಣಲಿಲ್ಲ. ಹಾಗಿದ್ದರೆ ಇಷ್ಟು ಜನ ಸುಮ್ಮನೆ ಇಲ್ಲಿ ಓಡಾಡಿಕೊಂಡು ಇರುತ್ತಿದ್ದರೆ? ಈಶ್ವರಿ ರಿಂಕಿಗೆ ಗಾಡಿಯಿಂದ ಇಳಿಯಲು ಸೂಚಿಸಿ ಸುತ್ತಲೂ ನೋಡುವಂತೆ ಹೇಳಿ, ತಾನು ಗಾಡಿಯನ್ನು ಮನುಷ್ಯರಿದ್ದ ಕಡೆ ಸುರಕ್ಷಿತವಾಗಿ ಪಾರ್ಕ್ ಮಾಡಿ ಬರುತ್ತೇನೆಂದು ಹೇಳಿ ಹೋದಳು.

ರಿಂಕಿಗೂ ಈ ವಾತಾವರಣ ನೋಡಿ ತಮ್ಮನ್ನು ದಾರಿ ತಪ್ಪಿಸಲೆಂದೇ ಗಣೇಶ ಸುಳ್ಳು ಹೇಳಿದ್ದಾನೆ ಎನ್ನಿಸಿತು. ಈಶ್ವರಿಯ ದಾರಿ ಕಾಯುತ್ತಾ ಸುತ್ತಲೂ ನೋಡಿದಳು. ಹಾಗೇ ನೀರ ನಡುವೆ ಹೋಗಲು ಬಂಡೆಗಳನ್ನು ಜಾಗರೂಕವಾಗಿ ಮೆಟ್ಟಿಲಾಗಿಸಿಕೊಂಡು ದಾಟತೊಡಗಿದಳು.

ಅಲ್ಲೆಲ್ಲೋ ನೀರ ಮಧ್ಯೆ ಒಬ್ಬ ಮನುಷ್ಯ ತಲೆಗೆ ಬಟ್ಟೆ ಸುತ್ತಿಕೊಂಡು ಸುಮ್ಮನೆ ನೀರಿನಲ್ಲಿ ಕಾಲಿಳಿಬಿಟ್ಟುಕೊಂಡು ಕೂತಿದ್ದ. ಅವನ ಚರ್ಯೆ ಗಮನಿಸಿದರೆ ಮೀನು ಹಿಡಿಯಲು ಗಾಳ ಬಿಟ್ಟು ಕೂತ ಆಶಾವಾದಿಯಂತಿತ್ತು, ಈ ತೆಳ್ಳನೆ ನೀರಿನಲ್ಲಿ ಮೀನು ಹಿಡಿಯಲು ಕಾರಣ ಎರಡೇ. ಒಂದೋ ಮನೆಯಲ್ಲಿ ಹೆಂಡತಿಯ ಕಾಟ ಬಹಳ ಇರಬೇಕು, ಅದನ್ನು ತಪ್ಪಿಸಿಕೊಳ್ಳಲು ಇವ ಹೀಗೆ ಇಲ್ಲಿ ಬಂದಿರಬೇಕು.

ಇಲ್ಲವೇ ಕುಡಿದು ಟೈಟ್ ಆಗಿ ಈ ಕೆಲಸ ಮಾಡಲು ಸಮಯದ ಪರಿವೆ ಇಲ್ಲದೆ ತಿರುಗಾಮುರುಗ ಈ ಕೆಲಸ ಮಾಡುತ್ತಿರಬೇಕು. ಆದರೆ ಹಾಗೇನೂ ಇರಲಿಲ್ಲ. ಮನುಷ್ಯ ಸರಿಯಾಗಿಯೇ ಇದ್ದ. ಗಾಳಗೀಳ ನಾಸ್ತಿ. ಪಂಚೆಯುಟ್ಟು, ಸಾದಾ ಶರಟು ತೊಟ್ಟು ಕಾಲು ನೆನೆಸುತ್ತಿದ್ದ ನೀರನ್ನೇ ನೋಡುತ್ತಿದ್ದ.

ಶೂಟಿಂಗ್‌ ವಿಷಯ ಇವನಿಗೇನಾದರೂ ಗೊತ್ತಿರಬಹುದೇ ಎಂದು ಹರುಕುಮುರುಕು ಕನ್ನಡದಲ್ಲಿ ಕೇಳಿದಳು. ‘ಸರ್, ಇಲಿ ಶೂಟಿಈಂಗ್ ನಡೀತಿತು?’

‘ಆಂ?’

‘ಸೂಟಿಂಗ್, ಸೂಟಿಂಗ್? ಪಿಚ್ಚರ್ ಸೂಟಿಂಗ್? ರಜನೀಕಾಂತ್ ಸೂಟಿಈಈಈಈಂಗ್?’ ಮನುಷ್ಯ ನಸುನಕ್ಕು ಸುಮ್ಮನಾದ.

‘ಶೂಟಿಂಗ್ ಓವರ್’– ಅವನ ಬಾಯಲ್ಲಿ ಭಾಗಶಃ ಇಂಗ್ಲಿಷ್‌ ಕೇಳಿ ದಿಗ್ಭ್ರಮೆಗೊಂಡಳು. ‘ಯಾವಾಗ ಮುಗೀತು?’

‘ಮುಗಿದು ಒಂದು ಗಂಟೆ ಆಯಿತು’

‘ಓಹ್... ನಾವು ಸ್ವಲ್ಪ ಬೇಗ ಬರಬೇಕಿತ್ತು’

‘ಯಾಕೆ?’

‘ನನ್ನ ಫ್ರೆಂಡ್‌ ರಜನಿಕಾಂತ್ ಅವರನ್ನ ನೋಡಲು ಬಂದಳು. ಇಲ್ಲೇ ಗಾಡಿ ನಿಲ್ಲಿಸೋಕೆ ಹೋಗಿದಾಳೆ. ಶೂಟಿಂಗ್ ಮುಗೀತು ಗೊತ್ತಾದ್ರೆ ಬೇಜಾರಾಗುತ್ತೆ ಅವಳಿಗೆ’

‘ರಜನೀಕಾಂತ್ ತಾನೇ? ಭೇಟಿ ಮಾಡ್ಸೋಣ’

‘ನಿಮಗೆ ಗೊತ್ತಾ?’

‘ಓ ಯಸ್. ಕರಿ ನಿನ್ನ ಸ್ನೇಹಿತೇನಾ’

ರಿಂಕಿ ತಿರುಗಿ ನೋಡಿದರೆ ಈಶ್ವರಿ ಅವಳತ್ತಲೇ ಬಂಡೆ ದಾಟುತ್ತಾ ಬರುತ್ತಿದ್ದಳು. ರಿಂಕಿ ಅವಳಿಗೆ ವಿಷಯ ಹೇಳಿ ಬಹಳ ಎಕ್ಸೈಟ್ ಆದಳು. ರಿಂಕಿ, ಈಶ್ವರಿ ಇಬ್ಬರೂ ಹತ್ತಿರ ಹೋದರೆ ನೀರಿನಲ್ಲಿ ಕುಳಿತಿದ್ದ ಮನುಷ್ಯ ನಗುತ್ತಿದ್ದ. ಮೋಸ ಹೋದೆವೇನೋ ಎಂದುಕೊಂಡರು.

‘ಸರ್, ರಜನೀಕಾಂತ್ ಎಲ್ಲಿ?’

‘ಗ್ಲಾಡ್ ಟಿ ಮೀಟ್ ಯು. ನಾನು ರಜನಿಕಾಂತ್’ ಎಂದು ಮನುಷ್ಯ ಕೈ ಮುಂದೆ ಮಾಡಿದ. ಈಶ್ವರಿಗೆ ಶಾಕ್ ಹೊಡೆದಂತಾಯಿತು. ಹೀಗೆ ಇಲ್ಲಿ ಒಬ್ಬರೇ? ಸೂಪರ್ ಸ್ಟಾರ್ ಹೀಗಿರುತ್ತಾರಾ? ಕ್ಯಾಮೆರಾ ಇಲ್ಲ, ಆ ಕ್ಷಣಕ್ಕೆ ಸಾಕ್ಷಿಯಾಗಿ ಇನ್ಯಾರೂ ಇಲ್ಲ, ಹೋಗಲಿ ಆಟೋಗ್ರಾಫ್‌ಗೆ ಪುಸ್ತಕ ಇಲ್ಲ, ಪೆನ್ನೂ ಇಲ್ಲ. ಈ ಭೇಟಿಯನ್ನು ದಾಖಲಿಸಲು ಯಾವ ಪ್ರಾಪಂಚಿಕ ಸಾಮಗ್ರಿಗಳೂ ಇಲ್ಲ. ನಕ್ಷತ್ರ ನಭದಿಂದ ಕಳಚಿಬಿದ್ದಷ್ಟೇ ಸಹಜವಾಗಿ ಎಲ್ಲವೂ ನಡೆಯುತ್ತಿದೆ.

‘ಸರ್!’

‘ಯಸ್’

‘ನೀವು ನಿಜವಾಗ್ಲೂ ರಜನೀಕಾಂತಾ?’

ರಜನೀಕಾಂತ್ ನಗತೊಡಗಿದರು. ಅವರ ಡ್ರೈವರ್ ಅಲ್ಲೆಲ್ಲೋ ಇದ್ದವ ಹತ್ತಿರ ಬಂದ. ‘ಅಣೈ ಕೂಪ್ಡಿಂಗ್ಲಾ?’ (ಅಣ್ಣಾ ಕರೆದ್ರಾ?) ‘ಹುಡುಗಿಯರಿಗೆ ನಾನೇ ರಜನೀಕಾಂತಾ ಅಂತ ಅನುಮಾನವಂತೆ...’ ಅವನೂ ನಗತೊಡಗಿದ. ಆಮೇಲೆ ನಿಧಾನವಾಗಿ ಹುಡುಗಿಯರಿಗೂ ವಾಸ್ತವದ ಅರಿವು ಮೂಡಿ, ಸೂಪರ್ ಸ್ಟಾರ್ ಒಬ್ಬ ಸಾಮಾನ್ಯ ಮನುಷ್ಯನ ಥರಾ ಕೂತಿದ್ದನ್ನು ನೋಡಿ ಒಂಥರಾ ವಿಚಿತ್ರವೆನಿಸಿತು. ಐದು ನಿಮಿಷ ಮಾತನಾಡಿ ಅಲ್ಲಿಂದ ಹೊರಟರು. ಗಾಡಿ ಹತ್ತುವಾಗ ಈಶ್ವರಿಯ ಮುಖದಲ್ಲಿ ನಗುವಿಲ್ಲದ್ದನ್ನ ಗಮನಿಸಿ ರಿಂಕಿಗೆ ಅಚ್ಚರಿಆಯಿತು. ‘ಛೇ! ಅವರನ್ನ ಹಾಗೆ ನೋಡಬಾರ್ದಿತ್ತು ಕಣೆ. ಇನ್ನ್ ಮೇಲೆ ಅವ್ರು ಹೀರೊ ಅನ್ನಿಸೋದೇ ಇಲ್ಲ ನನಗೆ. ನನಸಾಗದಿದ್ರೆ ಕನಿಷ್ಠ ಕನಸಾದ್ರೂ ಉಳೀತಿತ್ತು’ ಈಶ್ವರಿ ಬೋಧಿವೃಕ್ಷದ ಕೆಳಗೆ ನಿಂತಿದ್ದಳು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT