ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತಕ್ಕೆ ಬೇಕಿರುವುದು ಹಿಂದುತ್ವವಲ್ಲ, ದಲಿತತ್ವ’

Last Updated 28 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆಸುತ್ತಿರುವ ಹೋರಾಟ ವಿವಿಧ ಆಯಾಮಗಳನ್ನು ಪಡೆಯುತ್ತಾ ಮುಂದುವರಿದಿದೆ. ರಾಜಕಾರಣ ನಡೆಸುತ್ತಿರುವ ಮಠಾಧೀಶರು, ಮಠಗಳನ್ನು ಓಲೈಸುತ್ತಿರುವ ರಾಜಕಾರಣಿಗಳು ಮತ್ತು ವಚನ ಸಾಹಿತ್ಯವೇ ತಮ್ಮ ಧರ್ಮಗ್ರಂಥ ಎಂದು ಸಕಾರಣಗಳ ಸಹಿತ ವಾದಿಸುತ್ತಿರುವ ಲಿಂಗಾಯತ ಚಿಂತಕರ ನಡುವೆ ಬಸವ ತತ್ವದ ವೈಶಾಲ್ಯತೆಯನ್ನು ಅಕ್ಷರಶಃ ಮರೆತು ಜಾತಿಯಾಗಿ ಸಂಕುಚಿತವಾಗಿರುವ ಬಹುತೇಕ ಲಿಂಗಾಯತ ಸಮುದಾಯ ಅಸಂಗತ ಆಸೆಯೊಂದನ್ನು ಎದೆಯಲ್ಲಿ ಇರಿಸಿಕೊಂಡು ಖಚಿತಗೊಳ್ಳದ ಲಾಭಕ್ಕಾಗಿ ಕಾಯುತ್ತಿದೆ.

ಹಾಗೆ ನೋಡಿದರೆ ಕರ್ನಾಟಕದಲ್ಲಿ ಪ್ರಬಲ ಸಮುದಾಯಗಳಾಗಿರುವ ಲಿಂಗಾಯತರು ಮತ್ತು ಒಕ್ಕಲಿಗರು ತಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿ ಯಾವುದೇ ಹೋರಾಟ ನಡೆಸುವಂಥ ವಾತಾವರಣ ಯಾವತ್ತೂ ನಿರ್ಮಾಣವಾಗಿರಲಿಲ್ಲ. ಅವುಗಳ ಹೋರಾಟ ಏನಿದ್ದರೂ ಸ್ಥಾನಮಾನಕ್ಕಾಗಿ. ಅದೇನೇ ಆದರೂ ಒಂದು ರೀತಿಯಲ್ಲಿ ಬ್ರಾಹ್ಮಣ್ಯದ ಆತ್ಮ ಇರುವ ಹಿಂದೂ ಧರ್ಮದ ಮುಖವಾಡ ತೊಟ್ಟ ಜೀವನ ಮಾರ್ಗದಿಂದ ಅರ್ಥಾತ್ ಬಿಗಿ ಹಿಡಿತದಿಂದ ಲಿಂಗಾಯತರೂ ಸೇರಿದಂತೆ ಯಾವುದೇ ಜಾತಿ ಹೊರಬರುವುದು ಸ್ವಾಗತಾರ್ಹವೇ.

ಆದರೆ ಹಿಂದೂ ಧರ್ಮದ ಬಿಗಿ ಹಿಡಿತ ತಪ್ಪಿಸಿಕೊಳ್ಳಬೇಕೆನ್ನುವ ಯಾವುದೇ ತಹತಹ ಅಥವಾ ಸಂಭ್ರಮ ಲಿಂಗಾಯತರಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅದೇನಿದ್ದರೂ ಅಲ್ಪಸಂಖ್ಯಾತ ಧರ್ಮದ ಹೆಸರಿನಲ್ಲಿ ಇನ್ನಷ್ಟು ಲಾಭ ಪಡೆಯುವುದು ಈ ಹೋರಾಟದ ಮರೆಯಲ್ಲಿ ಕಾಣುತ್ತಿರುವ ಲೆಕ್ಕಾಚಾರವಾಗಿದೆ. ಜಾತಿ ಅಸಮಾನತೆ ವಿರೋಧಿಸಿಯೇ ರೂಪುಗೊಂಡ ಲಿಂಗಾಯತ ಸಮುದಾಯ ಸಹಜವಾಗಿಯೇ ಶೋಷಿತ ಜಾತಿಗಳನ್ನೇ ಒಳಗೊಂಡಿದೆ.

ಲಿಂಗಾಯತ ಸಮುದಾಯ ಕೇವಲ ತೋರಿಕೆಯ ಮತಕ್ರಿಯಾ ವಿಧಿಗಳನ್ನಷ್ಟೇ ಅನುಸರಿಸದೆ ಅನುಭವ ಮಂಟಪದಿಂದ ಹೊರಟ ಅಮೃತದಂಥ ನುಡಿಗಳನ್ನು ಸಂಪೂರ್ಣ ಪ್ರಾಮಾಣಿಕವಾಗಿ ಪಾಲಿಸಿದ್ದರೆ ಈ ನೆಲದ ಅಸಂಖ್ಯಾತ ಸೌಲಭ್ಯವಂಚಿತ ಸಮುದಾಯಗಳಿಗೆ ಇದಕ್ಕಿಂತ ಬೇರೆ ಆಸರೆಯೇ ಬೇಕಿರಲಿಲ್ಲ. ಆದರೆ ವಿಶ್ವಮಾನ್ಯ ಮಹಾನ್ ಧರ್ಮವಾಗುವ ಎಲ್ಲ ಲಕ್ಷಣಗಳಿರುವ ಲಿಂಗಾಯತ ಧರ್ಮ ಕೆಲವು ಸ್ವಾರ್ಥ ಅನುಯಾಯಿಗಳಿಂದಾಗಿ ಎಡವಿರಬಹುದೇ ಹೊರತು ಅದರ ಮಠಗಳಲ್ಲಿ ಬಸವ, ಅಲ್ಲಮ, ಅಕ್ಕಮಹಾದೇವಿಯರ ನಲ್ನುಡಿಗಳ ಬೆಳಕಿನಲ್ಲಿ ಜಾತ್ಯತೀತ, ಧರ್ಮಾತೀತ ನೆಲೆಯಲ್ಲಿ ಅವಕಾಶ ಒದಗಿಸಿರುವುದನ್ನು ಮರೆಯುವಂತಿಲ್ಲ. ಉಳಿದ ಮಠಗಳಲ್ಲಿ ಈ ಜಾತ್ಯತೀತ, ಧರ್ಮಾತೀತ ಅವಕಾಶ ನೀಡಿರುವ ಉದಾಹರಣೆಗಳೇ ಇಲ್ಲ.

ದಲಿತರಿಗೆ ಅಂಬೇಡ್ಕರ್ ಎನ್ನುವ ಮಹಾನ್ ಅಸ್ತ್ರವಿದೆ. ಮುಸ್ಲಿಮರು, ಕ್ರೈಸ್ತರಿಗೆ ಅಲ್ಪಸಂಖ್ಯಾತರೆಂಬ ಹಣೆಪಟ್ಟಿ ಇದೆ. ಪ್ರಬಲ ಜಾತಿಗಳಿಗೆ ಸಂಖ್ಯಾಬಲವೇ ಅತಿ ಶಕ್ತಿಶಾಲಿ ಅಸ್ತ್ರವಾಗಿದೆ. ಪ್ರಭಾವಿ ಜಾತಿಗಳಿಗೆ ಅವಕಾಶ ಕಸಿಯುವ ಪಾರಂಪರಿಕ ಜಾಣ್ಮೆ ಇದೆ. ಈ ಕಾರಣಗಳಿಂದಲೇ ನಿಜಕ್ಕೂ ಹೋರಾಟ ಬೇಕಿರುವುದು ಸೌಲಭ್ಯವಂಚಿತ ಅಸಂಘಟಿತ ಸಣ್ಣಪುಟ್ಟ ಜಾತಿಗಳಿಗೆ. ಅಂದರೆ ಮಡಿವಾಳರು, ಗೊಲ್ಲರು, ಕುಂಬಾರರು, ಕಾಪಾಳರು, ಗಾಣಿಗರು, ಕ್ಷೌರಿಕರು, ಕಮ್ಮಾರರು ಸೇರಿದಂತೆ ಅದೆಷ್ಟೋ ಜಾತಿಗಳ ಜನರು ರಾಜಕೀಯ ಪ್ರಾತಿನಿಧ್ಯ ಹೋಗಲಿ ಬಹುತೇಕ ಸವಲತ್ತುಗ ಳಿಂದ ವಂಚಿತರಾಗಿದ್ದಾರೆ. ಅಷ್ಟೇ ಅಲ್ಲ, ಹಿಂದುತ್ವದ ಪಿತೂರಿಯಿಂದಾಗಿ ಕೋಮು ಗಲಭೆಗಳಲ್ಲಿ ಪೊಲೀಸ್ ಠಾಣೆ, ನ್ಯಾಯಾಲಯ, ಸೆರೆಮನೆಗೆ ಅಲೆಯುತ್ತಿರುವ ಈ ಜಾತಿಗಳ ಯುವಕರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಧರ್ಮ ಎನ್ನುವುದು ನಿಂತ ನೀರೂ ಆಗಬಾರದು. ಶೋಷಣೆಯ ಸೆರೆಮನೆಯೂ ಆಗಬಾರದು. ಒಂದು ಧರ್ಮ ಚಲನಶೀಲ ಸಮಾಜದ ಪ್ರತಿಬಿಂಬದಂತೆ ಇರಬೇಕು. ಹಾಗಿಲ್ಲದಿದ್ದಾಗ ತುಳಿತಕ್ಕೆ ಒಳಗಾದವರು ಪುಟಿದೇಳುವುದು ಸಹಜವೇ. ಅಸಮಾನತೆಯನ್ನೇ ಶತಮಾನಗಳ ಕಾಲ ಅನುಭವಿಸಿದ ಸಮುದಾಯ ಸಮಾನತೆಯನ್ನು ಬಯಸುತ್ತದೆ. ಇದರಿಂದಾಗಿಯೇ ಎಲ್ಲ ಧರ್ಮಗಳೂ ವಿವಿಧ ಕಾಲಘಟ್ಟಗಳಲ್ಲಿ ಬಂಡಾಯ ಎದುರಿಸಿ ಶಾಖೆಗಳಾಗಿ ಟಿಸಿಲೊಡೆದಿವೆ, ಹೊಸ ಧರ್ಮಗಳ ಉದಯಕ್ಕೆ ಕಾರಣವಾಗಿವೆ. ವ್ಯವಸ್ಥಿತ ಸಂಚಿನ ಫಲವಾಗಿ ಭಾರತದಿಂದ ಹೊರದಬ್ಬಿಸಿಕೊಂಡ ಬೌದ್ಧ ಧರ್ಮ ಇತ್ತೀಚಿನ ವರ್ಷಗಳಲ್ಲಿ ಅದೆಷ್ಟೋ ದೇಶಗಳಲ್ಲಿ ಶಕ್ತಿಶಾಲಿಯಾಗಿ ಬೆಳೆಯುತ್ತಿದೆ. ತಮ್ಮ ಧರ್ಮದ ಅನುಯಾಯಿಗಳು ಹೇಗಿರಬೇಕು ಎಂಬ ದಾರಿದೀಪಗಳನ್ನು ಒಳಗೊಂಡ ಧರ್ಮಗ್ರಂಥದ ಆಧಾರ ಕ್ರೈಸ್ತ, ಇಸ್ಲಾಂ, ಬೌದ್ಧ ಮತ್ತು ಸಿಖ್ ಧರ್ಮಗಳಿಗಿದ್ದರೆ ಹಿಂದೂ ಧರ್ಮಕ್ಕೆ ಬ್ರಾಹ್ಮಣ್ಯದ ಪಿಸುಮಾತಿನ ಸೂಚನೆಗಳೇ ಆಧಾರ. ಇದರ ವಿರುದ್ಧ ಬಂಡೆದ್ದವರೇ ಹಿಂದೂ ಧರ್ಮದಿಂದ ಹೊರಹೋಗುತ್ತಿದ್ದಾರೆ, ಹೊರಹೋಗುವ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ.

ಪ್ರಖ್ಯಾತ ಚಿಂತಕ ಕಂಚ ಐಲಯ್ಯ ಅವರ ‘WHY I AM NOT A HINDU’ ಕೃತಿಯಲ್ಲಿ ಈ ವಾದವನ್ನು ಪುಷ್ಟೀಕರಿಸುವ ಅಂಶಗಳನ್ನು ಕಾಣಬಹುದಾಗಿದೆ. ತೆಲಂಗಾಣದ ಕುರುಮಾ (ಕುರುಬ) ಸಮುದಾಯದಲ್ಲಿ ಜನಿಸಿದ ಐಲಯ್ಯ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುತ್ತಾ ತಮ್ಮ ಜಾತಿಗೂ ಇತರ ಜಾತಿಗಳಿಗೂ ಇರುವ ವ್ಯತ್ಯಾಸವನ್ನು ಹೇಳುತ್ತಲೇ ತಾವು ಹಿಂದೂ ಅಲ್ಲ ಎಂಬುದನ್ನು ವಿವಿಧ ಉದಾಹರಣೆಗಳ ಮೂಲಕ ಮನವರಿಕೆ ಮಾಡಿಕೊಡುತ್ತಾರೆ. ಅವರ ಪ್ರಕಾರ ಬ್ರಾಹ್ಮಣ, ವೈಶ್ಯ ಮತ್ತು ಕ್ಷತ್ರಿಯರು ಮಾತ್ರ ಹಿಂದೂಗಳು. ಈ ಮೂರು ವರ್ಣಗಳಲ್ಲಿ ಮಾತ್ರ ಬ್ರಾಹ್ಮಣ್ಯದ ಹೊಂದಾಣಿಕೆ ಇರುವುದರಿಂದ ಇತರರನ್ನು ಅವರು ದಲಿತಬಹುಜನ ಎಂದು ಗುರುತಿಸುತ್ತಾರೆ. ಇತರರು ಎಂದರೆ ಶೂದ್ರರಲ್ಲಿರುವ ಜಾತಿಗಳು ಮತ್ತು ದಲಿತರು.

ದಲಿತಬಹುಜನರ ಪ್ರತಿಯೊಂದು ಜಾತಿಯ ಭಾಷೆ ಉತ್ಪಾದನೆ ಆಧರಿತ ವ್ಯಾಕರಣದಿಂದ ರೂಪುಗೊಂಡಿದೆ. ಇದು ಲಿಖಿತ ಭಾಷೆಯಲ್ಲ, ಸಂವಹನಕ್ಕಾಗಿ ರೂಪುಗೊಂಡ ಭಾಷೆ. ಕುರುಬರಿಗೆ ಕೇವಲ ಕುರಿ, ಆಡು, ಮರ, ಗಿಡಗಳಷ್ಟೇ ಗೊತ್ತಿರುವುದಿಲ್ಲ. ಉಣ್ಣೆ ತಯಾರಿಸುವ ಮತ್ತು ಕಂಬಳಿ ಹೆಣೆಯುವ ಸಾಧನಗಳ ಹೆಸರುಗಳೂ ಗೊತ್ತಿರುತ್ತವೆ. ಕುಂಬಾರರಿಗೆ ಮಡಕೆ ಮಾಡುವುದಕ್ಕೆ ಯಾವ ಮಣ್ಣು ಆಯ್ಕೆ ಮಾಡಬೇಕು, ಹೇಗೆ ಹದಗೊಳಿಸಬೇಕು, ತಿರುಗಣಿಯಲ್ಲಿರಿಸಿ ಹೇಗೆ ಮಡಕೆ ಮಾಡಬೇಕು ಎನ್ನುವ ಕಸುಬಿನ ಭಾಷೆ ಗೊತ್ತಿರುತ್ತದೆ. ಆದರೆ ದೇವರ ಹೆಸರನ್ನು ಪಠಿಸುವುದೇ ಜ್ಞಾನ ಎಂದು ಪರಿಗಣಿಸುವ ಹಿಂದುತ್ವ, ಉತ್ಪಾದನೆ ಮಾಡುವ ಭಾಷೆಯ ತಿಳಿವಳಿಕೆಯನ್ನು ಜ್ಞಾನ ಎಂದು ಪರಿಗಣಿಸದಿರುವುದು ಕ್ರೂರ ವ್ಯಂಗ್ಯವಾಗಿದೆ.

ರಾಮಾಯಣ, ಮಹಾಭಾರತ, ಭಗವದ್ಗೀತೆ ಕಂಠಪಾಠ ಮಾಡಿ ಒಪ್ಪಿಸುವುದು ಪ್ರತಿಭೆಯಲ್ಲ, ಪ್ರತಿಭೆ ಎನ್ನುವುದು ದೇಶದ ಆರ್ಥಿಕ ವ್ಯವಸ್ಥೆಯ ಬಹುಮುಖ್ಯ ಭಾಗವಾಗಿರುವಉತ್ಪಾದಕತೆಯಲ್ಲಿ ತೊಡಗಿಸಿಕೊಂಡಿರುವ ದಲಿತಬಹುಜನರಲ್ಲಿ ಅಡಗಿದೆ ಎಂದು ಮನವರಿಕೆ ಮಾಡಿಕೊಡುತ್ತಾರೆ ಐಲಯ್ಯ. ದಲಿತಬಹುಜನರ ಪ್ರತಿಜಾತಿಯೂ ತನ್ನದೇ ಜ್ಞಾನ ಸಂಪತ್ತು, ಶಬ್ದಕೋಶವನ್ನು ನಿರ್ಮಿಸಿಕೊಂಡಿದೆ. ಈ ಅರಿವಿಗೂ ಸಂಘಟಿತ ಧರ್ಮಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಾರೆ ಅವರು.

ಮದುವೆ, ಕಾಮ, ದೇವರು, ಸಾವು, ಶಿಕ್ಷಣ ವ್ಯವಸ್ಥೆ, ಮಾರುಕಟ್ಟೆ, ಸಾಹಿತ್ಯ, ಸಂಸ್ಕೃತಿ, ಕಲೆ, ಸಾಮಾಜಿಕ ಸಂಬಂಧ ಸೇರಿದಂತೆ ವಿವಿಧ ವಿಷಯಗಳಲ್ಲಿ ಹಿಂದೂಗಳು ಮತ್ತು ದಲಿತ ಬಹುಜನರ ನಡುವಿನ ವ್ಯತ್ಯಾಸಗಳನ್ನು ಇವರು ಎಳೆಎಳೆಯಾಗಿ ಬಿಚ್ಚಿಡುತ್ತಾರೆ. ಪಠ್ಯಪುಸ್ತಕಗಳಲ್ಲಿ ಹೇಳುವ ನೈತಿಕತೆಗೂ ನಿಜ ಬದುಕಿನ ನೈತಿಕತೆಗೂ ಇರುವ ಭಿನ್ನತೆಯನ್ನು ಎತ್ತಿ ತೋರಿಸುತ್ತಾರೆ. ಪುರುಷ ಪ್ರಧಾನ ವ್ಯವಸ್ಥೆಯ ನಡುವೆಯೂ ದಲಿತಬಹುಜನ ಮಹಿಳೆಯರು ತಮ್ಮ ಗಂಡಂದಿರೊಂದಿಗೆ ಕುಲಕಸುಬಿನ ಶ್ರಮದಲ್ಲಿ ಸಮಾನವಾಗಿ ತೊಡಗಿಸಿಕೊಳ್ಳುವ ರೀತಿಯನ್ನೂ, ಕುಟುಂಬ ವ್ಯವಸ್ಥೆಯಲ್ಲಿ ಪ್ರಜಾಸತ್ತಾತ್ಮಕತೆ ರೂಪುಗೊಂಡ ಬಗೆಯನ್ನೂ ತಿಳಿಸುತ್ತಾರೆ. ಪುರುಷರೂ ಮಹಿಳೆಯರೂ ಯಾವುದೇ ತಾರತಮ್ಯ ಇಲ್ಲದೇ ಜತೆಯಾಗಿಯೇ ಮದ್ಯ ಸೇವಿಸುವ, ಚುಟ್ಟ ಸೇದುವ ವಿಷಯವನ್ನೂ ಪ್ರಸ್ತಾಪಿಸುತ್ತಾ ಹಿಂದೂಗಳಿಗಿಂತ ಭಿನ್ನ ಬದುಕಿನ ಚಿತ್ರವನ್ನೂ ಕಟ್ಟಿ ಕೊಡುತ್ತಾರೆ. ದಲಿತಬಹುಜನರ ದೇವರುಗಳಾದ ಬೀರಪ್ಪ, ಪೊಚ್ಚಮ್ಮ, ಕಬ್ಬಾಳಮ್ಮಗಳನ್ನು ಹಿಂದೂ ದೇವತೆಗಳು ಆಕ್ರಮಿಸಿಕೊಳ್ಳುವುದಕ್ಕೆ ಕಾರಣವಾದ ಸಂಚನ್ನೂ ಬಯಲು ಮಾಡುತ್ತಾರೆ.

ಆಂಧ್ರಪ್ರದೇಶದ ರೆಡ್ಡಿಗಳು ಸೇರಿದಂತೆ ದೇಶದ ವಿವಿಧ ಪ್ರಬಲ ಜಾತಿಗಳ ಜನರು ನವಕ್ಷತ್ರಿಯರಾಗಿರುವುದನ್ನೂ, 1947 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಬ್ರಾಹ್ಮಣರು, ಬನಿಯಾಗಳು ಮತ್ತು ನವಕ್ಷತ್ರಿಯರು ಪ್ರಜಾಸತ್ತೆಯ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವುದನ್ನೂ ಅವರು ವಿವರಿಸುತ್ತಾರೆ. 90ರ ದಶಕದ ಆರಂಭದಲ್ಲಿ ತೀವ್ರಗೊಂಡ ಹಿಂದುತ್ವವಾದಿ ಅಧಿಕಾರ ಹಿಡಿಯುವ ಹೋರಾಟ ಇಂದು ನರೇಂದ್ರ ಮೋದಿ ರೂಪದಲ್ಲಿ ಹೊಸತೊಂದು ತಿರುವು ಪಡೆದಿರುವ ಹಿನ್ನೆಲೆಯಲ್ಲಿ ಕಂಚ ಐಲಯ್ಯ ಅವರ ಈ ಕೃತಿ ಬಹು ಮುಖ್ಯವಾಗಿ ಕಾಣುತ್ತದೆ.

ಐಲಯ್ಯ ಅವರ ಪ್ರಕಾರ ಭಾರತಕ್ಕೆ ಬೇಕಿರುವುದು ಉತ್ಪಾದಕತೆ ಆಧರಿಸಿದ ದಲಿತತ್ವವೇ ಹೊರತು ಅನುತ್ಪಾದಕ ಹಿಂದುತ್ವವಲ್ಲ. ಇದಕ್ಕಾಗಿ ದಲಿತಕೇರಿ
ಗಳ ಬದುಕನ್ನು ಅನುಭವಿಸಿದರೆ ದಲಿತತ್ವ ಏನೆನ್ನುವುದು ಮನದಟ್ಟಾಗುತ್ತದೆ. ಮನುಷ್ಯ ಸಂಬಂಧಗಳೇ ಇಲ್ಲಿನ ಮುಖ್ಯ ಆಸ್ತಿ. ಶ್ರಮಿಕ ಶಕ್ತಿಯ ಮೇಲೆ ಇರುವ ವಿಶ್ವಾಸದಿಂದಾಗಿಯೇ ವೈಯಕ್ತಿಕ ಆಸ್ತಿ ಗಳಿಕೆ ಬಗ್ಗೆ ದಲಿತ ಕೇರಿಗಳಲ್ಲಿ ಅಂಥ ಆಸಕ್ತಿ ಇಲ್ಲ. ಸಮಾನತೆ ಅದರ ಸಹಜ ಶಕ್ತಿ. ದಲಿತ ಕೇರಿಗಳಲ್ಲಿನ ಪ್ರಜ್ಞೆ ಸಾಮುದಾಯಿಕವೇ ಹೊರತು ವೈಯಕ್ತಿಕವಲ್ಲ. ದಲಿತಬಹುಜನರು ಶ್ರಮಿಕ ಶಕ್ತಿಯಿಂದ ವಿಮುಖವಾದರೆ ಆಯಾ ಪಟ್ಟಣ ಮತ್ತು ಗ್ರಾಮಗಳ ಅರ್ಥವ್ಯವಸ್ಥೆಯೇ ಕುಸಿದುಬೀಳುತ್ತದೆ ಎನ್ನುವ ಎಚ್ಚರಿಕೆಯನ್ನೂ ಅವರು ನೀಡುತ್ತಾರೆ. ಮಣ್ಣು, ಬೀಜ, ಸಸಿ ನೆಡುವಿಕೆ, ಕೃಷಿಸಾಧನಗಳ ಬಳಕೆ ಕುರಿತ ದಲಿತಬಹುಜನರ ಜ್ಞಾನ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಗತಿಗೆ ಅತ್ಯಗತ್ಯವಾಗಿದೆ. ಅನುಭವದ ಜ್ಞಾನಕ್ಕೆ ಪಠ್ಯಗಳು ನೀರು ಮತ್ತು ಗೊಬ್ಬರವಾಗ
ಬಲ್ಲವೇ ಹೊರತು ಅವುಗಳೇ ಪ್ರಗತಿ ಸಾಧಿಸಲು ನೆರವಾಗುವುದಿಲ್ಲ. ದಲಿತಬಹುಜನರ ಸಮುದಾಯ ತಮ್ಮ ಕಸುಬಿನ ಅಸಾಧಾರಣ ಕೌಶಲ ಹೊಂದಿರುತ್ತದೆ. ಈ ಕಸುಬುಗಳು ಮಾನಸಿಕ ಮತ್ತು ದೈಹಿಕ ಶ್ರಮವನ್ನು ಆಧರಿಸಿರುತ್ತವೆ. ಇದಕ್ಕೆ ತದ್ವಿರುದ್ಧ ಎಂಬಂತೆ ಮೇಲ್ಜಾತಿಗಳು ಅನುತ್ಪಾದಕ ಶಕ್ತಿಗಳಾಗಿವೆ. ನಾಳೆಗಾಗಿ ಕೂಡಿಡುವ ಮನೋಧರ್ಮ ಆರಾಮ ಜೀವನವನ್ನು ಬಯಸುತ್ತದೆಯೇ ಹೊರತು ಶ್ರಮವನ್ನಲ್ಲ. ಈ ಹಿನ್ನೆಲೆಯಲ್ಲೇ ನಾಗರಿಕ ಸಮಾಜದಲ್ಲಿದಲಿತಬಹುಜನರು ಬಯಸುವ ಪ್ರಜಾಸತ್ತೆ ವಿರುದ್ಧ ಬ್ರಾಹ್ಮಣ್ಯದ ನಿರಂಕುಶತ್ವ ಸಂಘರ್ಷ ಮಾಡುತ್ತಲೇ ಬಂದಿದೆ ಎನ್ನುತ್ತಾರೆ ಐಲಯ್ಯ.

ಧರ್ಮಬೋಧಕರು, ಜ್ಯೋತಿಷಿಗಳು, ಬದುಕಿನ ಕಲೆ ಕಲಿಸುವ ಗುರೂಜಿಗಳು ಸೇರಿದಂತೆ ಸುಲಭವಾಗಿ ಆಸ್ತಿ ಸಂಪಾದಿಸುತ್ತಿರುವ ಅದೆಷ್ಟೋ ಜೀವಿಗಳು ಶ್ರಮರಹಿತ ಬದುಕಿನ ಮುಖ್ಯ ಉದಾಹರಣೆಗಳಾಗಿ ನಮ್ಮೆದುರೇ ಕಾಣುತ್ತಿದ್ದಾರೆ. ಇಡೀ ದೇಶವನ್ನು ಹಿಂದುತ್ವದ ಸಮೂಹ ಸನ್ನಿಗೆ ಒಳಪಡಿಸುವಷ್ಟು ಸುಲಭವಲ್ಲ ದಲಿತತ್ವಕ್ಕೆ ಒಳಪಡಿಸುವ ಚಳವಳಿ ಎನ್ನುವುದು ಐಲಯ್ಯ ಅವರಿಗೂ ಗೊತ್ತಿದೆ. ಯಾಕೆಂದರೆ ಹಿಂದೂಮೇಲ್ಜಾತಿಗಳಲ್ಲಿ ಜನಿಸಿ ಕ್ರಮೇಣ ಕಮ್ಯುನಿಸ್ಟರು, ನಾಸ್ತಿಕರು, ವಿಚಾರವಾದಿಗಳೂ ಆಗಿ ಮಿಂಚುತ್ತಿರುವ ನಾಯಕರ ಬಗ್ಗೆ ಅವರಿಗೆ ಅನುಮಾನಗಳಿವೆ. ಮೇಲ್ಜಾತಿಗಳು ತಮ್ಮದೇ ದೇವರು, ಪುರಾಣ, ಕಾವ್ಯಗಳನ್ನು ಹಾಡಿಹೊಗಳುತ್ತಿದ್ದರೆ ಅದೇ ವರ್ಗದ ವಿಚಾರವಾದಿಗಳು ಇದೇ ಕೃತಿಗಳ ಬಗ್ಗೆ ವಿಮರ್ಶೆ ಮಾಡುತ್ತಿದ್ದಾರೆಯೇ ಹೊರತು ದಲಿತಬಹು
ಜನರ ಸಂಸ್ಕೃತಿ, ಸಾಹಿತ್ಯ, ಕಲೆ, ಬದುಕಿನ ಬಗ್ಗೆ ಕಿಂಚಿತ್ತೂ ಪ್ರಸ್ತಾಪಿಸುತ್ತಿಲ್ಲ ಎಂದು ಅವರು ಆಕ್ಷೇಪಿಸುತ್ತಾರೆ. ದಲಿತಬಹುಜನ ಸಮುದಾಯದಲ್ಲೇ ಜನಿಸಿದ ಚಿಂತಕರು ತಮ್ಮ ಜಾತಿಗಳಿಗೆ ಹಿಂದುತ್ವದ ಅಪಾಯವನ್ನು ಮನವರಿಕೆ ಮಾಡಿಕೊಡಬೇಕಾಗುತ್ತದೆ. ಹಿಂದೂ ಧರ್ಮವನ್ನು ಅಮಾನವೀಯಗೊಳಿಸಿರುವ ಮೂಲಭೂತವಾದಿಗಳನ್ನು ಈಗ ಬೇರುಬಿಟ್ಟಿರುವ ಸ್ಥಳಗಳಿಂದ ವಿಚಲಿತಗೊಳಿಸಿ ಉತ್ಪಾದಕತೆಯ ಕೆಲಸಕ್ಕೆ ತಳ್ಳುವ ಮೂಲಕ ಅವರಲ್ಲಿ ಮಾನವೀಯತೆಯನ್ನು ಮತ್ತೆ ತರಬಹುದಾಗಿದೆ ಎಂದು ಅವರು ಆಶಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT