ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಂಬೊ’ ಹೋರಿಯ ಕ್ಷಯಸಂತಾನಗಳು

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ
ಸರಿಯಾಗಿ ಹತ್ತು ವರ್ಷಗಳ ಹಿಂದೆ ಬ್ರಿಟನ್ನಿನಲ್ಲಿ ‘ಶಂಬೊ’ ಹೆಸರಿನ ಹರಕೆಯ ಹೋರಿಯೊಂದು ದೊಡ್ಡ ವಿವಾದದಲ್ಲಿ ಸಿಲುಕಿತ್ತು. ವೇಲ್ಸ್‌ನಲ್ಲಿರುವ ‘ಸ್ಕಂದ ವೇಲ್’ ಶಿವಾಲಯದಲ್ಲಿ ಮಿರಿಮಿರಿ ಮಿಂಚುತ್ತ ಭಕ್ತರ ಕಣ್ಮಣಿಯಾಗಿದ್ದ ಆರು ವರ್ಷದ ಆ ಹೋರಿಯ ಶರೀರದಲ್ಲಿ ಕ್ಷಯದ ರೋಗಾಣುಗಳು ಇವೆಯೆಂದೂ ಹೋರಿಯನ್ನು ವಧಿಸಲೇಬೇಕೆಂದೂ ಬ್ರಿಟಿಷ್ ವೈದ್ಯತಜ್ಞರು ಶಿಫಾರಸು ಮಾಡಿದ್ದರು. ಅದನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಹಿಂದೂ ಭಕ್ತರು ಪಣ ತೊಟ್ಟು ಬೇರೊಬ್ಬ ವೈದ್ಯನಿಂದ ಮರುಪರೀಕ್ಷೆ ಮಾಡಿಸಿ, ನ್ಯಾಯಾಲಯದ ತಡೆಯಾಜ್ಞೆಯನ್ನೂ ತಂದು, ಲಕ್ಷಾಂತರ ಹಿಂದೂಗಳಿಂದ ಇ-ಮೇಲ್ ತರಿಸಿ, ಏನೇ ಮಾಡಿದರೂ ಬ್ರಿಟಿಷ್ ಸರ್ಕಾರ ಜಪ್ಪೆನ್ನಲಿಲ್ಲ. ತಡೆಯಾಜ್ಞೆ ತೆರವುಗೊಳಿಸಿ ವಧಾ ದಿನವನ್ನು ನಿಗದಿ ಮಾಡಿಯೇಬಿಟ್ಟರು. ಕಂಗೆಟ್ಟ ಹಿಂದೂಗಳು ದಯಾಭಿಕ್ಷೆ ಯಾಚಿಸಿ, ಮೃತ್ಯುಂಜಯ ಜಪಕ್ಕೆ ಕೂತು, ಮಾನವ ಸರಪಳಿಯನ್ನು ನಿರ್ಮಿಸಿ ನಿಂತಿದ್ದೂ ಪ್ರಯೋಜನಕ್ಕೆ ಬರಲಿಲ್ಲ. ಸರಪಳಿಯನ್ನು ಭೇದಿಸಿ ಪೊಲೀಸರು ‘ಶಂಬೊ’ಗೆ ದಯಾಮರಣ ಕೊಟ್ಟು ಕತ್ತರಿಸಿ ಹೂತರು.
 
ನಮ್ಮಲ್ಲಿ ಹಕ್ಕಿಜ್ವರ ಬಂದಾಗ ಹೆಸರುಘಟ್ಟದಲ್ಲಿ ಸಾವಿರಾರು ಕೋಳಿಗಳನ್ನು ಕೊಂದು ಹೂಳುವ ಹಾಗೆ ಬ್ರಿಟನ್ನಿನಲ್ಲಿ ಹಸುಗಳಿಗೆ ಕಾಲುಬಾಯಿ ರೋಗ, ಬ್ರುಸೆಲ್ಲೊಸಿಸ್, ಸಿಜೆಡಿ, ಕ್ಷಯ- ಹೀಗೆ ಎಂಥದ್ದೇ ಚಿಕ್ಕ ದೊಡ್ಡ ಕಾಯಿಲೆ ಬಂದರೂ ಕಟ್ಟುನಿಟ್ಟಾಗಿ ಕೊಂದು ಹೂಳುತ್ತಾರೆ. ಹಿಂದೆ 80ರ ದಶಕದಲ್ಲಿ ಹುಚ್ಚುಹಸು (ಸಿಜೆಡಿ) ಕಾಯಿಲೆ ವ್ಯಾಪಕವಾಗಿ ಹಬ್ಬಿದಾಗ ಅಕ್ಷರಶಃ ಇಪ್ಪತ್ತು ಲಕ್ಷ ಹಸುಗಳನ್ನು ವಧಿಸಿ, ಟಿ.ವಿ ಕ್ಯಾಮರಾಗಳ ಎದುರೇ ಸುಟ್ಟು ಹೂತಿದ್ದರು. ಮಾಂಸಾಹಾರದ ಪ್ರಶ್ನೆ ಬಂದಾಗ ತಾನೆಷ್ಟು ಕ್ಲೀನ್ ಎಂಬುದನ್ನು ಬ್ರಿಟನ್ ಜಗತ್ತಿಗೆ ತೋರಿಸಿಕೊಟ್ಟಿತ್ತು. ಶಂಬೊನನ್ನು ಮುಗಿಸುವ ಮುನ್ನ ಅದೇ 2007ರಲ್ಲಿ ಕ್ಷಯರೋಗ ತಗುಲಿದ್ದ ಇತರ 20 ಸಾವಿರ ರೋಗಗ್ರಸ್ಥ ಹಸುಗಳನ್ನು ಬಲಿ ಹಾಕಿದ್ದರು. 
 
ಸಾರ್ವಜನಿಕ ಸ್ವಾಸ್ಥ್ಯದ ವಿಷಯದಲ್ಲಿ ಅಲ್ಲಿನವರು ದಯೆದಾಕ್ಷಿಣ್ಯ ತೋರುವುದಿಲ್ಲ. ಅವರ ಪ್ರಾಣಿದಯೆಯ ಪರಿಕಲ್ಪನೆಯೇ ಬೇರೆ. ಬದುಕಿದಷ್ಟು ವರ್ಷ ನಿರೋಗಿಯಾಗಿರಬೇಕು. ಪ್ರಾಣ ಹೋಗುವ ಮುನ್ನ ನೋವಾಗಬಾರದು ಅಷ್ಟೆ. ನಮ್ಮಲ್ಲಿಯ ಹಾಗೆ ದಿನವೂ ಲಕ್ಷಾಂತರ ಕುರಿಮೇಕೆಗಳನ್ನು ಅವುಗಳ ಮರಿಗಳ ಎದುರೇ ಕ್ರೂರವಾಗಿ ಕೊಂದು, ವಿಕಾರವಾಗಿ ರಸ್ತೆ ಬದಿಯಲ್ಲಿ ಪ್ರದರ್ಶಿಸುತ್ತ, ಜಲ್ಲಿಕಟ್ಟು, ಕಂಬಳದ ಕೋಣಗಳಿಗೆ ಛಡಿಯೇಟಿನ ಹಿಂಸೆ ಕೂಡದೆಂದು ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಶೋಕಿ ದಯೆಯಲ್ಲ. ಯುರೋಪಿನ ಪ್ರಾಣಿಗಳು ರಸ್ತೆಬದಿಯ ಹಾಳುಮೂಳನ್ನೂ ತಿಪ್ಪೆಗುಂಡಿಯ ಪ್ಲಾಸ್ಟಿಕ್ಕನ್ನೂ ತಿಂದು ನರಳುವುದಿಲ್ಲ; ರಸ್ತೆ ಅಪಘಾತಕ್ಕೆ ಸಿಲುಕಿ ಅರೆಜೀವ ಬಿದ್ದಿರುವುದಿಲ್ಲ. ಅಲ್ಲಿ ದನಗಳ ಮಾಂಸ ಮಾರಾಟವೇ ಪ್ರಮುಖ ರಫ್ತು ಉದ್ಯಮ ಆಗಿರುವಾಗ ಮಾಂಸದ ಅಂಗಡಿಗೆ ಬರುವ ತುಂಡುಗಳೆಲ್ಲ ಶುಚಿಯಾಗಿ, ರೋಗರಹಿತವಾಗಿರಬೇಕು- ಇದು ಅಲ್ಲಿನವರ ಧೋರಣೆ. ಪ್ರಾಣಿಗಳಿಗೆ ತಗಲುವ ರೋಗರುಜಿನಗಳು ಅಪ್ಪಿತಪ್ಪಿಯೂ ಮನುಷ್ಯರಿಗೆ ಬರಬಾರದು.
 
ಭಾರತವೂ ಅಂಥದ್ದೊಂದು ಸ್ವಚ್ಛ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ನೀಲನಕ್ಷೆ ಹಾಕಿಕೊಂಡಿದೆ. ಪೋಲಿಯೊ ನಿರ್ಮೂಲನೆಯ ನಂತರ ಇದೀಗ ದಢಾರ ಮತ್ತು ರುಬೆಲ್ಲಾ ನಿರ್ಮೂಲನೆಗೆ ರಾಷ್ಟ್ರವ್ಯಾಪಿ ಆಂದೋಲನ ನಡೆದಿದೆ (ಕೆಲವು ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅದರ ವಿರುದ್ಧ ವಿನಾಕಾರಣ ಪ್ರಚಾರ ನಡೆಸುತ್ತಿದ್ದಾರೆ). ಮುಂದಿನ ವರ್ಷದ ಕೊನೆಯೊಳಗೆ ಕುಷ್ಠರೋಗವನ್ನೂ 2020ರ ವೇಳೆಗೆ ದಢಾರವನ್ನೂ 2025ರೊಳಗೆ ಕ್ಷಯರೋಗವನ್ನೂ ನಿರ್ಮೂಲನ ಮಾಡಿಸುವುದಾಗಿ ಪ್ರಧಾನಿ ಮೋದಿಯವರು ಈ ವರ್ಷದ ಸೈನ್ಸ್ ಕಾಂಗ್ರೆಸ್ ಮೇಳದಲ್ಲಿ ದೇಶಕ್ಕೆ ವಾಗ್ದಾನ ಮಾಡಿದ್ದಾರೆ. ಅದಕ್ಕೆಂದೇ ವಿತ್ತ ಸಚಿವ ಜೇಟ್ಲಿಯವರು ಈ ವರ್ಷದ ಮುಂಗಡ ಪತ್ರದಲ್ಲಿ ಸಾರ್ವಜನಿಕ ಸ್ವಾಸ್ಥ್ಯ ರಕ್ಷಣೆಗೆಂದೇ ಎಂದಿಗಿಂತ ಶೇ 23.5ರಷ್ಟು ಹೆಚ್ಚಿನ ಹಣವನ್ನು ಮೀಸಲಾಗಿಟ್ಟು ಭೇಷ್ ಎನ್ನಿಸಿಕೊಂಡಿದ್ದಾರೆ. ಆದರೂ ಕ್ಷಯರೋಗ ನಿರ್ಮೂಲನೆಯ ಪ್ರಶ್ನೆ ಬಂದಾಗ ಎನ್‌ಡಿಎ ಸರ್ಕಾರಕ್ಕೆ ಬಹುದೊಡ್ಡ ಸವಾಲು ಎದುರಾಗಲಿದೆ. ದನಗಳ ಮೇಲೆ ಪೂಜನೀಯ ಭಾವ, ಕರುಣೆ, ದಯೆದಾಕ್ಷಿಣ್ಯ ಇದ್ದಷ್ಟು ಕಾಲ ಕ್ಷಯರೋಗ ನಿರ್ಮೂಲನ ಸಾಧ್ಯವಿಲ್ಲ. ಏಕೆಂದರೆ ದನಗಳಿಗೆ ಬರುವ ಕ್ಷಯವೇ ಹಾಲಿನ ಡೇರಿಯ ಕೆಲಸಗಾರರಿಗೆ, ಆ ಮೂಲಕ ಮನೆಯವರಿಗೆ, ಅವರ ಮೂಲಕ ಸಮಾಜದ ಇತರರಿಗೆ ಬರುತ್ತದೆ ಎಂಬುದು ಎಂದೋ ಪ್ರಮಾಣಿತವಾಗಿದೆ. ಮನುಷ್ಯರಿಂದ ಮನುಷ್ಯರಿಗೆ ಕ್ಷಯರೋಗ ಹಬ್ಬದ ಹಾಗೆ ಅದೆಷ್ಟೇ ಬಿಗಿಯಾದ ಕ್ರಮಗಳನ್ನು ಕೈಗೊಂಡರೂ ದನಗಳಿಗೆ ಕ್ಷಯರೋಗ ಬರುತ್ತಿದ್ದರೆ ಆ ಮೂಲಕ ಮತ್ತೆ ಮತ್ತೆ ಅದು ಮನುಷ್ಯರಿಗೂ ಬಂದೇ ಬರುತ್ತದೆ. 
ಕ್ಷಯ (ಟಿ.ಬಿ) ರೋಗದ ಹಿನ್ನೆಲೆ ಇಷ್ಟು: ಅದು ಮೈಕೊಬ್ಯಾಕ್ಟೀರಿಯಂ ಟುಬರ್ಕುಲೊಸಿಸ್ (ಎಮ್‌ಟಿಬಿ) ಎಂಬ ಏಕಾಣು ಜೀವಿಯಿಂದ ಬರುತ್ತದೆ. ಪದೇಪದೇ ಕೆಮ್ಮು, ಕಫದಲ್ಲಿ ಆಗಾಗ ರಕ್ತ, ತೂಕದ ಸತತ ಇಳಿತ, ಆಗಾಗ ಜ್ವರ, ನಿರಂತರ ಅಶಕ್ತತೆ ಇವು ಅದರ ಮುಖ್ಯ ಲಕ್ಷಣಗಳು. ಹೆಚ್ಚಿನ ರೋಗಿಗಳಿಗೆ ಶ್ವಾಸಕೋಶದ ಟಿ.ಬಿ ಇರುತ್ತದೆ. ಅಪರೂಪಕ್ಕೆ ಮೂಳೆ ಟಿ.ಬಿ, ಸ್ನಾಯು ಟಿ.ಬಿ, ಹಾಲ್ರಸನಾಳದ ಟಿ.ಬಿ ಕೂಡ ಬರಬಹುದು. ಎದೆಯ ಎಕ್ಸ್-ರೇ ಮತ್ತು ಕಫದ ಪರೀಕ್ಷೆಯ ಮೂಲಕ ಶ್ವಾಸಕೋಶದ ಟಿ.ಬಿಯನ್ನು ಸುಲಭವಾಗಿ ಪತ್ತೆ ಮಾಡಬಹುದು. ದಿನಕ್ಕೆ ಮೂರು ಬಾರಿಯಂತೆ ಅತ್ಯಂತ ಕಟ್ಟುನಿಟ್ಟಾಗಿ ಆರುತಿಂಗಳ ಕಾಲ ಔಷಧ ಸೇವಿಸಬೇಕು. ಮಧ್ಯೆ ಒಮ್ಮೆ ತಪ್ಪಿದರೆ ಮತ್ತೆ ಆರಂಭದಿಂದ ಮಾತ್ರೆಗಳ ಸೇವನೆ ಮಾಡಬೇಕು.
 
ನಮ್ಮ ಬಹುತೇಕ ಎಲ್ಲರ ಶರೀರದಲ್ಲೂ ಕ್ಷಯದ ಏಕಾಣುಜೀವಿ ಇರುತ್ತದೆ. ಆದರೆ ರೋಗನಿರೋಧಕ ಶಕ್ತಿ ಗಟ್ಟಿ ಇದ್ದರೆ ಆ ರೋಗಾಣುವಿನ ಸುತ್ತ ಪೊರೆ ಕಟ್ಟಿ ಬಂಧಿತವಾಗಿರುತ್ತದೆ. ಬಂಧ ಗಟ್ಟಿಯಾಗಿದ್ದಷ್ಟು ದಿನ ರೋಗದ ಭಯವಿಲ್ಲ. ಸತತ ಧೂಮಪಾನ, ಏಡ್ಸ್ ಅಥವಾ ಕೆಲವರಿಗೆ ಸಕ್ಕರೆ ಕಾಯಿಲೆ ಇದ್ದರೂ ಬಂಧನ ಸಡಿಲವಾಗಿ ರೋಗ ಶರೀರಕ್ಕೆ ಹರಡುತ್ತದೆ. ಶ್ವಾಸದ ಮೂಲಕ, ದೇಹದ್ರವಗಳ ಮೂಲಕ ಆಸುಪಾಸಿನ ಇತರರಿಗೆ ಹರಡುತ್ತದೆ. ನಮ್ಮಲ್ಲಿ ರೋಗದ ಬಗೆಗಿನ ಅಜ್ಞಾನ, ಔಷಧ ಸೇವನೆಯಲ್ಲಿ ಅಶಿಸ್ತು, ಕಂಡಲ್ಲಿ ಉಗುಳುವ ಅಭ್ಯಾಸ ಈ ಎಲ್ಲ ಕಾರಣದಿಂದಾಗಿ ರೋಗನಿಯಂತ್ರಣ ದುಸ್ತರವಾಗಿದೆ. ಅಂದಾಜಿನ ಪ್ರಕಾರ, ಸುಮಾರು 22 ಲಕ್ಷ ರೋಗಿಗಳು ನಮ್ಮಲ್ಲಿದ್ದು ಪ್ರತಿ ದಿನವೂ ಸರಾಸರಿ 960 ಜನರು (ಪ್ರತಿ ಗಂಟೆಗೆ 90 ಜನ) ಈ ಕಾಯಿಲೆಯಿಂದ ಸಾಯುತ್ತಿದ್ದಾರೆ. ಯಾವ ಔಷಧವೂ ನಾಟದಂಥ ಹೊಸ ಹೊಸ ಕ್ಷಯತಳಿಗಳು ಸೃಷ್ಟಿ ಆಗುತ್ತಿರುವುದರಿಂದ ರೋಗ ನಿಯಂತ್ರಣ ವರ್ಷವರ್ಷಕ್ಕೆ ಕಠಿಣವಾಗುತ್ತ ಹೋಗುತ್ತಿದೆ. 
ಇಂಗ್ಲೆಂಡ್, ಐರೋಪ್ಯ ಸಂಘ, ಕೆನಡಾ, ಅಮೆರಿಕಗಳಲ್ಲಿ ಮನುಷ್ಯರ ಕ್ಷಯರೋಗದ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳಿವೆ. ಆದರೆ ಪ್ರಾಣಿಗಳಿಗೂ ಬಾರದಂತೆ ತಡೆಯುವುದು ದೊಡ್ಡ ಸಮಸ್ಯೆಯಾಗಿದೆ. ಇಂಗ್ಲೆಂಡ್‌ನಲ್ಲಂತೂ ಹಸುಗಳ ಟಿ.ಬಿ ನಿಯಂತ್ರಣದ ಜಟಾಪಟಿ ಆ ದೇಶಕ್ಕೆಲ್ಲ ವ್ಯಾಪಿಸಿದೆ. ಏಕೆಂದರೆ ದನಗಳ ಕ್ಷಯರೋಗಕ್ಕೆ ಬ್ಯಾಜರ್ ಎಂಬ ಪ್ರಾಣಿಯೇ ಮುಖ್ಯ ಕಾರಣ ಎಂದು ವಿಜ್ಞಾನಿಗಳು ಎಂದೋ ಹೇಳಿಬಿಟ್ಟಿದ್ದಾರೆ. ಬ್ಯಾಜರ್ ಎಂದರೆ ನಮ್ಮ ಬೆಕ್ಕಿನ ಗಾತ್ರದ, ಅಳಿಲಿನಂತ ಪಟ್ಟೆ ಮೂತಿಯುಳ್ಳ ಕಾಡುಪ್ರಾಣಿ. ನಮ್ಮಲ್ಲೂ ಇದರ ಒಂದು ಪ್ರಭೇದಕ್ಕೆ ತರಕರಡಿ ಎನ್ನುತ್ತಾರೆ. ಬೆನ್ನಮೇಲೆ ಕಂದು ಕಂಬಳಿ ಹೊತ್ತಂತಿರುವ ಇದು ಅಪರೂಪಕ್ಕೆ ಕಾಡುಗಳಲ್ಲಿ ಕಾಣುತ್ತದೆ. ಬ್ರಿಟನ್ ಮತ್ತು ಐರ್ಲ್ಯಾಂಡ್ ದೇಶಗಳಲ್ಲಿ ಹಸುಗಳ ಕ್ಷಯರೋಗವನ್ನು ತಡೆಯಲೆಂದು ಕಂಡ ಕಂಡಲ್ಲಿ ಈ ಪ್ರಾಣಿಯನ್ನು ಕೊಲ್ಲುವ ಯೋಜನೆ ಜಾರಿಯಲ್ಲಿದೆ. ಸರ್ಕಾರವೇ ಇಂತಿಂಥ ಊರಲ್ಲಿ ಇಂತಿಷ್ಟು ಬ್ಯಾಜರ್‌ಗಳನ್ನು ಕೊಲ್ಲಲು ಅನುಮತಿ ನೀಡುತ್ತದೆ. ಪ್ರಾಣಿದಯಾ ಸಂಘದವರು ಅದೆಷ್ಟೊ ಬಾರಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೂ ರೈತ ಸಂಘದವರು ಅದರ ವಿರುದ್ಧ ಸಂಸತ್ತಿನ ಮೆಟ್ಟಿಲು ಏರಿದ್ದೂ ಕೊನೆಗೆ ಕ್ಷಯದ ಔಷಧಿಯನ್ನು ಕಾಡಿನ ಪ್ರಾಣಿಗೆ ಕೊಡಲು ಹೆಣಗಿ ಸೋತಿದ್ದೂ ವರ್ಷವಿಡೀ ಅಲ್ಲಿ ಸುದ್ದಿಗೆ ಗ್ರಾಸವಾಗುತ್ತಲೇ ಇರುತ್ತದೆ. ರೈತರ ವೋಟು ಬೇಕೆಂದರೆ ಬ್ಯಾಜರ್‌ಗಳನ್ನು ಕೊಲ್ಲಬೇಕು; ಮಾಂಸ ರಫ್ತು ಮಾಡುವ ಕಂಪನಿಗಳನ್ನು ಓಲೈಸಿಕೊಳ್ಳಬೇಕೆಂದರೆ ಬ್ಯಾಜರ್‌ಗಳನ್ನು ಕೊಲ್ಲಲೇಬೇಕು. ನಗರವಾಸಿಗಳ ವೋಟು ಬೇಕೆಂದರೆ ಮಾತ್ರ ಬ್ಯಾಜರ್‌ಗಳ ರಕ್ಷಣೆ ಮಾಡಬೇಕು ಎಂಬಂತಾಗಿದೆ. ನಗರವಾಸಿಗಳು ಪ್ರಾಣಿದಯಾ ಸಂಘಗಳ ಪರವಾಗಿ ಪ್ರತಿಭಟನೆ ಮಾಡುತ್ತಾರೆ ವಿನಾ ಚುನಾವಣೆ ಬಂದಾಗ ಮತದಾನಕ್ಕೆ ಅಷ್ಟೇ ಉತ್ಸಾಹದಿಂದ ಹೋಗುವುದಿಲ್ಲ. ಹಾಗಾಗಿ ಸರ್ಕಾರಗಳು ಸದಾ ಬ್ಯಾಜರ್‌ಗಳ ವಿರುದ್ಧವಾಗಿಯೇ ಕೆಲಸ ಮಾಡುತ್ತವೆ. ಕಳೆದ ಐದು ತಿಂಗಳಲ್ಲಿ 14,800 ಬ್ಯಾಜರ್‌ಗಳನ್ನು ಕೊಲ್ಲಲಾಗಿದೆ ಎಂದು ಸರ್ಕಾರ ಹೆಮ್ಮೆಯಿಂದ ಹೇಳಿಕೊಂಡಿದೆ. ಸತ್ತ ಬ್ಯಾಜರಿನ ಮೊಲೆ ಚೀಪುತ್ತಿರುವ ಮರಿಯ ಚಿತ್ರಗಳನ್ನು ಶಾಲಾ ಮಕ್ಕಳಿಗೆ ತೋರಿಸಿ ಅವರನ್ನೂ ಪ್ರತಿಭಟನಾ ಮೆರವಣಿಗೆಗೆ ಹೊರಡಿಸಲಾಗುತ್ತಿದೆ. ಅಂಥ ಮಕ್ಕಳನ್ನೆಲ್ಲ ರಾಷ್ಟ್ರವಿರೋಧಿ ಎಂದು ಘೋಷಿಸಬೇಕಾಗಿ ಬಂದೀತೆಂದು ಸರ್ಕಾರ ಎಚ್ಚರಿಕೆ ನೀಡಿದೆ. ಈ ವರ್ಷದ ಅಂತ್ಯದ ವೇಳೆಗೆ ಅರ್ಧ ಬ್ರಿಟನ್ನನ್ನು ‘ದನಕ್ಷಯ ಮುಕ್ತ’ ಎಂದು ಘೋಷಿಸಲು ಅಲ್ಲಿ ಸಿದ್ಧತೆ ನಡೆದಿದೆ. 
 
ಭಾರತದಲ್ಲಿ ದನಕ್ಷಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ಅಷ್ಟೇನೂ ವ್ಯಾಪಕವಾಗಿ ನಡೆಯುತ್ತಿಲ್ಲ. ಇಲ್ಲಿನ ಕೊಳಕು ಡೇರಿಗಳು, ಅಶಿಕ್ಷಿತ ಪಶುವೈದ್ಯ ಸಿಬ್ಬಂದಿ, ಹಸೀ ಹಾಲು ಕುಡಿಯುವ ಪರಿಪಾಠ ಇವೆಲ್ಲ ಕಾರಣಗಳಿಂದ ಮನುಷ್ಯರು ಮತ್ತು ಸಾಕುಪ್ರಾಣಿಗಳ ನಡುವೆ ಕ್ಷಯ ರೋಗಾಣುಗಳ ವಿನಿಮಯ ಸತತವಾಗಿ ನಡೆಯುತ್ತಲೇ ಇರುತ್ತದೆ. ರೋಗಪೀಡಿತ ಹಸುಗಳನ್ನು ಕೊಲ್ಲುವ ಮಾತು ಹಾಗಿರಲಿ, ರೋಗಾಣುಗಳ ಪತ್ತೆಗೆ ಹೋದರೂ ಪ್ರತಿಭಟನೆ ಎದುರಾಗುವ ಸಂಭವ ಇದೆ. ನಾಲ್ಕು ವರ್ಷಗಳ ಹಿಂದೆ ಗುಜರಾತ್‌ನಲ್ಲಿ ಹಸುಗಳ ಕ್ಷಯದ ಬಗ್ಗೆ ನಡೆದ ವಿಚಾರ ಸಂಕಿರಣಕ್ಕೂ ಪ್ರತಿರೋಧ ಬಂದಿತ್ತು. ದನಗಳಿಗೆ ಕ್ಷಯ ಬಾರದಂತೆ ತಡೆಗಟ್ಟಬಲ್ಲ ಲಸಿಕೆಯಂತೂ ಫಲಕಾರಿ ಆಗುತ್ತಿಲ್ಲ. ಇನ್ನುಳಿದ ಕೊನೆಯ ಪ್ರಯತ್ನ ಏನೆಂದರೆ ಹಸುಗಳ ಭ್ರೂಣದ ಹಂತದಲ್ಲೇ ಇತ್ತೀಚಿನ ಕ್ರಿಸ್ಪ್-ಆರ್ ತಂತ್ರವನ್ನು ಪ್ರಯೋಗಿಸಿ ರೋಗವೇ ಬಾರದಂಥ ತಳಿಗಳನ್ನು ಸೃಷ್ಟಿಸಬೇಕು. ಚೀನಾದಲ್ಲಿ ಅಂಥ ಹೊಸ ತಳಿಯ ಕರುಗಳು ಹುಟ್ಟಿವೆ ಎಂಬ ವರದಿಗಳು ಬರುತ್ತಿವೆ. ಅವು ಬೆಳೆದು ದೊಡ್ಡವಾಗಿ, ಭಾರತಕ್ಕೆ ಅಂಥ ಹೊಸತಳಿಗಳು ಹತ್ತು ವರ್ಷಗಳ ಮೇಲೆ ಬಂದರೂ ದೇಶೀ ತಳಿಗಳನ್ನು ಅಥವಾ ನಮ್ಮ ದೇಶದ್ದೇ ಆಗಿಹೋಗಿರುವ ಎಚ್ಚೆಫ್/ ಜೆರ್ಸಿಗಳನ್ನು ಏನು ಮಾಡುವುದು? ಒಂದುವೇಳೆ ನಮ್ಮದೇ ವಿಜ್ಞಾನಿಗಳು ನಮ್ಮ ಹಸುಗಳಲ್ಲೇ ರೋಗನಿರೋಧಕ ತಳಿಗಳನ್ನು ಸೃಷ್ಟಿ ಮಾಡಿದರೂ ಈಗಿರುವ ಹಸುಗಳ ತಳಿಗಳನ್ನು ಏನು ಮಾಡುವುದು?
 
ತೀರ ಸಂಕೀರ್ಣ ಸವಾಲುಗಳು ನಮ್ಮೆದುರು ಇವೆ. ಬಿಟ್ಟೂಬಿಡದೆ ಕೆಮ್ಮು ಬರುತ್ತಿದ್ದರೆ, ನಿಷ್ಕಾರಣವಾಗಿ ತೂಕ ಕಡಿಮೆ ಆಗುತ್ತಿದ್ದರೆ ಹತ್ತಿರದ ಆಸ್ಪತ್ರೆಗೆ ಹೋಗಿ ಕಫ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ಸರ್ಕಾರಿ ರೇಡಿಯೋದಲ್ಲಿ ಬಿಟ್ಟೂಬಿಡದೆ ಸಂದೇಶಗಳೇನೊ ಬರುತ್ತಿವೆ. ಆದರೂ ರೋಗಿಗಳನ್ನು ಆಸ್ಪತ್ರೆಗಳತ್ತ ಹೊರಡಿಸುವುದು ದಿನದಿನಕ್ಕೆ ಕಷ್ಟವಾಗುತ್ತಿದೆ. ಏಕೆಂದರೆ ಸರ್ಕಾರಿ ಸೇವೆಗಳೆಂದರೆ ವಿಶ್ವಾಸ ಉಳಿದಿಲ್ಲ; ಖಾಸಗಿ ಆಸ್ಪತ್ರೆಗಳತ್ತ ಹೋಗುವಷ್ಟು ಹಣ ಕೈಯಲ್ಲಿಲ್ಲ. ಪ್ರಧಾನಿಯ ಆಶ್ವಾಸನೆ ಏನೇ ಇರಲಿ, ಕ್ಷಯರಹಿತ ಭವಿಷ್ಯದತ್ತ ಮನುಷ್ಯರನ್ನು ಮುನ್ನಡೆಸುವುದೇ ಕಷ್ಟವಾಗಿರುವಾಗ ದನಗಳನ್ನು ಹೊರಡಿಸುವುದು ಸುಲಭವೆ? 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT