ನೇರ ನೇಮಕಾತಿ, ವರ್ಗಾವಣೆಗೆ ಆಯೋಗದಿಂದ ಒಪ್ಪಿಗೆ

ಸೋಮವಾರ, ಮೇ 27, 2019
24 °C
ಮೇ ಅಂತ್ಯದಲ್ಲಿ ಶಿಕ್ಷಕರ ವರ್ಗಾವಣೆಗೆ ಚಾಲನೆ

ನೇರ ನೇಮಕಾತಿ, ವರ್ಗಾವಣೆಗೆ ಆಯೋಗದಿಂದ ಒಪ್ಪಿಗೆ

Published:
Updated:

ಬೆಂಗಳೂರು: ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ವಿವಿಧ ಇಲಾಖೆಗಳು, ನಿಗಮ–ಮಂಡಳಿಗಳು, ಸ್ಥಳೀಯ ಸಂಸ್ಥೆಗಳಲ್ಲಿ ನೇರ ನೇಮಕಾತಿ, ವರ್ಗಾವಣೆ, ಸ್ಥಳ ನಿಯುಕ್ತಿಗೆ ಚುನಾವಣಾ ಆಯೋಗ ಅನುಮತಿ ನೀಡಿದೆ.

ವಿವಿಧ ಇಲಾಖೆಗಳಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಆಡಳಿತಾತ್ಮಕ ದೃಷ್ಟಿಯಿಂದ ಅವುಗಳನ್ನು ತಕ್ಷಣ ಭರ್ತಿ ಮಾಡಬೇಕಿದೆ. ರಾಜ್ಯದಲ್ಲಿ ‌ಲೋಕಸಭೆಗೆ ಮತದಾನ ಈಗಾಗಲೇ ಮುಗಿದಿದೆ. ಹೀಗಾಗಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ವರ್ಗಾವಣೆ, ಸ್ಥಳ ನಿಯುಕ್ತಿಗೆ (ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡವರು ಆ ಪ್ರಕ್ರಿಯೆಯ ಹೊಣೆಗಾರಿಕೆಯಿಂದ ಮುಕ್ತರಾದ ಬಳಿಕ) ಅನುಮತಿ ನೀಡುವಂತೆ ಆಯೋಗಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿತ್ತು.

‘ಸರ್ಕಾರದ ಪ್ರಸ್ತಾವಕ್ಕೆ ಆಯೋಗ ಒಪ್ಪಿಗೆ ನೀಡಿರುವುದರಿಂದ ಸಕ್ಷಮ ಪ್ರಾಧಿಕಾರಗಳು ಈ ನಿಟ್ಟಿನಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬಹುದು’ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ ತಿಳಿಸಿದ್ದಾರೆ.

ಮೇ ಅಂತ್ಯಕ್ಕೆ ಶಿಕ್ಷಕರ ವರ್ಗಾವಣೆ : ಈ ತಿಂಗಳ ಅಂತ್ಯದಿಂದಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಸದ್ಯದಲ್ಲೇ ಈ ಕುರಿತು ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ.

ಮೂರು ವರ್ಷಗಳಿಂದ ಹಲವು ಕಾರಣಗಳಿಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ವರ್ಗಾವಣೆಗೆ ಪಾಲಿಸಬೇಕಾದ ನಿಯಮಗಳ ಅಸ್ಪಷ್ಟತೆ, ತಂತ್ರಾಂಶದಲ್ಲಿ ಕಂಡುಬಂದ ದೋಷ, ಹೆಚ್ಚುವರಿ ಶಿಕ್ಷಕ ವರ್ಗಾವಣೆಗೆ ವ್ಯಕ್ತವಾದ ತೀವ್ರ ವಿರೋಧ ಮತ್ತಿತರ ಕಾರಣಗಳಿಗೆ 2018–19ನೇ ಸಾಲಿನಲ್ಲಿ ವರ್ಗಾವಣೆ ಪ್ರಕ್ರಿಯೆ ಬಾರಿ ಆರು ಬಾರಿ ಮುಂದೂಡಿಕೆಯಾಗಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ವರ್ಗಾವಣೆ ನಿಯಂತ್ರಣ ಕಾಯ್ದೆ ತಿದ್ದುಪಡಿಗೆ ಪ್ರಸ್ತಾಪಿಸಿ ಕಳೆದ ಬೆಳಗಾವಿ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿತ್ತು. ಆದರೆ, ಹೆಚ್ಚಿನ ಚರ್ಚೆಗೆ ಒಳಗಾಗದೆ ಈ ತಿದ್ದುಪಡಿ ಅಂಗೀಕಾರಗೊಂಡಿದೆ. ತಿದ್ದುಪಡಿಗೊಂಡ ಕಾಯ್ದೆ ಅನ್ವಯವೇ ಪ್ರಸಕ್ತ ಸಾಲಿನಲ್ಲಿ (2019–2020) ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ಖಚಿತಪಡಿಸಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !