ಭಾನುವಾರ, ಜುಲೈ 3, 2022
27 °C

ಯುವ ಮನಸು; ಹೊಸ ಕನಸು| ನಾಡಿನ ಅಭಿವೃದ್ಧಿಯೇ ನನ್ನ ಕನಸು: ಬಿ.ವೈ ವಿಜಯೇಂದ್ರ

ಬಿ.ವೈ.ವಿಜಯೇಂದ್ರ Updated:

ಅಕ್ಷರ ಗಾತ್ರ : | |

Prajavani

ಹೊಸ ವರ್ಷದಲ್ಲಿ ಕನ್ನಡ ನಾಡಿನ ಎಲ್ಲ ಪ್ರದೇಶಗಳ, ವರ್ಗಗಳ ಜನರ ಸಮಾನ ಅಭಿವೃದ್ಧಿ ಆಗಬೇಕು ಎಂಬುದು ನನ್ನ ಕನಸು.  ನೈಜ ‘ಕಲ್ಯಾಣ ರಾಜ್ಯ’ದ (welfare state) ಪರಿಕಲ್ಪನೆಯೇ ಅದಲ್ಲವೇ? ನಾಡಿನ ಎಲ್ಲ ಭಾಗಗಳ ಸಮಾನ ಅಭಿವೃದ್ಧಿ. ರಾಜ್ಯ ಇದುವರೆಗೆ ಏಕರೂಪದ ಪ್ರಗತಿಯನ್ನು ಕಂಡಿಲ್ಲ ಎನ್ನುವುದು ನಿಜ. ಇದಕ್ಕೆ ಐತಿಹಾಸಿಕ ಕಾರಣಗಳೂ ಇವೆ. ವಿಶೇಷವಾಗಿ ‘ಕಲ್ಯಾಣ ಕರ್ನಾಟಕ’ ಮತ್ತು ‘ಕಿತ್ತೂರು ಕರ್ನಾಟಕ’ ಪ್ರದೇಶಗಳು ಇತರ ಮುಂದುವರಿದ ಪ್ರದೇಶಗಳ ಜತೆ ಎಲ್ಲ ಕ್ಷೇತ್ರಗಳಲ್ಲೂ ಸಮಾನವಾಗಿ ಹೆಜ್ಜೆ ಇಡುವ ಸ್ಥಿತಿ ನಿರ್ಮಾಣವಾಗಬೇಕು. ಇದಕ್ಕಾಗಿ ಮೂಲಸೌಕರ್ಯ, ಕೈಗಾರಿಕೆ, ಉದ್ಯೋಗ, ನೀರಾವರಿ ಮತ್ತು ಕೃಷಿ ಕ್ಷೇತ್ರಕ್ಕೆ ಅಲ್ಲಿ ಆದ್ಯತೆ ಸಿಗಬೇಕು.

ಸುಸ್ಥಿರ ಅಭಿವೃದ್ಧಿಯ ‘ಮಂತ್ರ’ದ ಜತೆಗೆ; ಪರಿಸರ ಸಂರಕ್ಷಣೆಯೂ ಹೊಸವರ್ಷದಲ್ಲಿ ನಮ್ಮ ಆದ್ಯತೆ ಆಗಬೇಕು. ಪರಿಸರ ನಾಶದಿಂದ ಆಗಿರುವ ದುರಂತಗಳ ಭೀಕರತೆ ಕಳೆದ ಕೆಲವು ವರ್ಷಗಳಲ್ಲಿ ನಾಡನ್ನೇ ತಲ್ಲಣಗೊಳಿಸಿದೆ. ಉತ್ತರಕರ್ನಾಟಕ, ಮಲೆನಾಡು ಮತ್ತು ಕರಾವಳಿಗಳಲ್ಲಿ ಆಗಿರುವ ಅನಾಹುತ ನಮ್ಮೆಲ್ಲರ ಕಣ್ಣು ತೆರೆಸಬೇಕಾಗಿದೆ. ನಾವೆಲ್ಲ ಗಂಭೀರವಾಗಿ ಯೋಚಿಸಿ, ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಬೇಕಾಗಿದೆ. ನಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಜತೆಗೆ ಮನಸ್ಸನ್ನೂ ನಿರ್ಮಲವಾಗಿಟ್ಟುಕೊಳ್ಳಬೇಕು. ಪ್ಲಾಸ್ಟಿಕ್‌ ಬಳಕೆ ಬಿಟ್ಟು, ಪರಿಸರಸ್ನೇಹಿ ವಸ್ತುಗಳನ್ನು ಒಪ್ಪಿಕೊಳ್ಳಬೇಕು.

ಮೋದಿ ಕನಸಿನ ಬಲಿಷ್ಠ ಭಾರತದ ಸಾಕಾರಕ್ಕೆ ಹೂಡಿಕೆಯಲ್ಲಿ ನಾವು ಮೊದಲ ಸ್ಥಾನಕ್ಕೆ ಏರಬೇಕು. ಉದ್ಯೋಗಾವಕಾಶಗಳು ದೊಡ್ಡಮಟ್ಟದಲ್ಲಿ ಸೃಷ್ಟಿಯಾಗಬೇಕು ಎಂಬ ಕನಸೂ ಕಾಡುತ್ತಿದೆ. ರಾಜ್ಯದಲ್ಲಿ ಪ್ರವಾಸೋದ್ಯಮ ಅತಿ ಹೆಚ್ಚಿನ ಉದ್ಯೋಗ ಸೃಷ್ಟಿಸಬಹುದಾದ ಕ್ಷೇತ್ರ. ಆ ಕ್ಷೇತ್ರದ ಸಾಧ್ಯತೆಯನ್ನು ನಾವು ಸರಿಯಾಗಿ ಅನಾವರಣಗೊಳಿಸಿಲ್ಲ. ಎಸ್‌ಎಸ್‌ಎಲ್‌ಸಿ, ಪಿಯುಸಿ ಮಾಡಿ ಉದ್ಯೋಗ ಇಲ್ಲದೇ ಸಂಕಷ್ಟದಲ್ಲಿರುವ ಯುವ ಜನರ ಅನ್ನಕ್ಕೆ ದಾರಿಯಾಗಲಿದೆ. ಇದಕ್ಕಾಗಿ ನಿರ್ದಿಷ್ಟ ಯೋಜನೆ ರೂಪಿಸಿ, ಬಂಡವಾಳ ಹೂಡಿಕೆ ಮಾಡಿದರೆ ಚೆನ್ನ. 

ಕೃಷಿ ಲಾಭದಾಯಕ ಕ್ಷೇತ್ರವಾದಾಗ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಲಸೆ ಬರುವುದು ನಿಲ್ಲುತ್ತದೆ. ನಮ್ಮಲ್ಲಿ ಹಲವರು ಐಟಿ, ಬಿಟಿ ಕ್ಷೇತ್ರ ಬಿಟ್ಟು ಕೃಷಿಯತ್ತ ಮರಳಿದ್ದಾರೆ. ಕೃಷಿಯಿಂದ ಉತ್ತಮ ಆದಾಯವನ್ನೂ ಪಡೆಯುತ್ತಿದ್ದಾರೆ. ಇವರ ಯಶಸ್ಸಿನ ಸೂತ್ರವನ್ನು ನಮ್ಮ ರೈತಾಪಿ ಜನರಿಗೆ ತಲುಪಿಸಬೇಕು. ಅವರಲ್ಲಿ ಹೊಸ ಹುಮ್ಮಸ್ಸು ತುಂಬಬೇಕು ಎನ್ನುವ ಆಸೆಯಿದೆ.

ಬಿ.ವೈ.ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಯುವ ಮೋರ್ಚಾ

ನಿರೂಪಣೆ: ಎಸ್‌. ರವಿಪ್ರಕಾಶ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು