ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶದ ಒಡಲು

Last Updated 26 ಸೆಪ್ಟೆಂಬರ್ 2018, 19:31 IST
ಅಕ್ಷರ ಗಾತ್ರ

ದಿನಕರ ದೇಸಾಯಿ ಅವರ ಚೌಪದಿಯೊಂದು ಹೀಗಿದೆ:

ರಕ್ತನಾಳಗಳಲ್ಲಿ ಹರಿಯುತಿದೆ ಕಡಲು.

ಇಡಿಯ ಬ್ರಹ್ಮಾಂಡವಾಯಿತು ನರನ ಒಡಲು.

ಕೋಟಿ ಕಿರಣಗಳಿಂದ ಹೃದಯದಾಕಾಶ.

ಬೆಳಗಿದರೆ ಯಮನಿಗೂ ಇಲ್ಲ ಅವಕಾಶ.

ಮನುಷ್ಯನು ಸಾಧಿಸಬೇಕಾದ ಆದರ್ಶದ ಔನ್ನತ್ಯವನ್ನು ಈ ಪದ್ಯ ಸೊಗಸಾಗಿ ಎತ್ತಿಹಿಡಿದಿದೆ. ವಿಶ್ವಮಾನವನ ಕಲ್ಪನೆ ಇಲ್ಲಿ ಸೊಗಸಾಗಿ ಹರಳುಗಟ್ಟಿದೆ.

ಸಂಸ್ಕೃತದ ಪ್ರಸಿದ್ಧ ಸುಭಾಷಿತವೊಂದನ್ನು, ‘ಹಿತೋಪದೇಶ’ದ್ದು, ಇಲ್ಲಿ ಉಲ್ಲೇಖಿಸಬಹುದು:

ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಂ| ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್‌ ||

‘ಇವನು ನನ್ನವನು ಅಥವಾ ಬೇರೆಯವನು ಎಂಬ ಎಣಿಕೆ ಹುಲುಮನಸ್ಸಿನವರದು. ಉದಾರವಾದ ಮನಸ್ಸಿನವನಿಗೆ ಈ ಭೂಮಂಡಲವೇ ತನ್ನ ಕುಟುಂಬವಾಗಿರುವುದು.’

‘ಇವನು ನನ್ನವನು; ಅಥವಾ ‘ಇವನು ನನ್ನವನಲ್ಲ’ ಎಂಬ ಎಣಿಕೆ ಅಲ್ಪಜನರದ್ದು ಹೌದು, ಒಪ್ಪೋಣ. ಆದರೆ ಈ ಮನಃಸ್ಥಿತಿಯಿಂದ ನಾವು ಪಾರಾಗುವುದಾದರೂ ಹೇಗೆ? ಹೀತೋಪದೇಶ ಅದಕ್ಕೊಂದು ದಾರಿಯನ್ನು ತೋರಿಸುತ್ತಿದೆ: ‘ಉದಾರತೆಯನ್ನು ಸಂಪಾದಿಸಿಕೊಳ್ಳಿ.’

ಉದಾರತೆಯ ತುಂಬುತನದಲ್ಲಿರುವ ಮನಸ್ಸು ಇಡೀ ವಿಶ್ವವನ್ನೇ ತನ್ನ ಕುಟುಂಬವನ್ನಾಗಿ, ಮನೆಯನ್ನಾಗಿ ಮಾಡಿಕೊಂಡು ಅದರಲ್ಲಿ ನೆಮ್ಮದಿಯಿಂದ ಇರುತ್ತದೆ – ಎನ್ನುವುದು ಇಲ್ಲಿಯ ಭಾವ. ಹಾಗಾದರೆ ಉದಾರತೆಯನ್ನು ಸಂಪಾದಿಸಿಕೊಳ್ಳುವುದು ಅಷ್ಟು ಸುಲಭವೇ?

ಮನುಷ್ಯನಲ್ಲಿ ಸಹಜವಾಗಿಯೇ ಈ ಉದಾರತೆ – ಔದಾರ್ಯ – ಇರುತ್ತದೆ; ಆದರೆ ಅವನು ಮರೆತಿರುತ್ತಾನೆ, ಅಷ್ಟೆ. ಹೀಗೆ ಮರೆತಿರುವ ಅವನ ಸಹಜಸ್ವಭಾವವನ್ನು ಪ್ರಕೃತಿಯೇ ನೆನಪಿಗೂ ತರುತ್ತಿರುತ್ತದೆ. ಮನುಷ್ಯ ತಾನು ಸ್ವತಂತ್ರನಲ್ಲ; ಅವನು ಪಡೆದ ಶರೀರವೂ ಬೇರೆಯವರು ಅವನಿಗೆ ಕೊಟ್ಟದ್ದು; ಅವನು ತಿನ್ನುವ ಅನ್ನವೂ ಬೇರೆಯವರ ಫಸಲು; ಅವನಾಡುವ ಮಾತು ಅವನಿಗೆ ಬೇರೆಯವರು ಕಲಿಸಿದ್ದು; ಅವನು ಬರೆಯುವ ಅಕ್ಷರವನ್ನು ತಿದ್ದಿಸಿದವರು ಬೇರೆಯವರು. ಹೀಗೆ ಅವನ ಉಸಿರಾಟದ ಒಂದೊಂದು ಕ್ಷಣವೂ ಅವನು ಬೇರೆಯವರಿಗೆ ಋಣಿಯಾಗಿರುತ್ತಾನೆ. ಪ್ರಕೃತಿಯಲ್ಲೂ ಹೀಗೆಯೇ ಇದೆ; ಒಂದು ವಿದ್ಯಮಾನ ಇನ್ನೊಂದು ವಿದ್ಯಮಾನಕ್ಕೆ ಮೂಲವಾಗಿರುತ್ತದೆ. ಹೀಗಾಗಿ ಒಂದರ ಬೆಳವಣಿಗೆ ಇನ್ನೊಂದು ಬೆಳವಣಿಗೆಯ ಮೇಲೆ ನಿಂತಿರುತ್ತದೆ. ಹರಿಯುವ ನದಿಗೆ ಮೂಲ ಮಳೆ; ಮಳೆಗೆ ಮೂಲ ಕಡಲು; ಕಡಲಿಗೆ ಮೂಲ ನದಿ. ಹೀಗೆ ಚಕ್ರವು ನಿರಂತರವಾಗಿ ಸುತ್ತುತ್ತಲೇ ಇರುತ್ತದೆ. ಮೊಮ್ಮಗನಲ್ಲಿ ತನ್ನನ್ನು ಕಾಣುವ ಅಜ್ಜ, ಗಿಡದಿಂದ ಉದುರಿದ ಬೀಜದಲ್ಲಿ ಇರುವ ವೃಕ್ಷ, ರಾತ್ರಿಯಲ್ಲಿ ಅಡಗಿಕೊಂಡಿರುವ ಬೆಳಗು – ಹೀಗೆ ಸೃಷ್ಟಿಯ ಎಲ್ಲ ವಿವರಗಳಲ್ಲೂ ಈ ಪರಿಭ್ರಮಣವನ್ನು ಕಾಣಬಹುದು. ಅದನ್ನೇ ಇಲ್ಲಿ ದಿನಕರ ದೇಸಾಯಿ ಅವರು ‘ರಕ್ತನಾಳಗಳಲ್ಲಿ ಹರಿಯುತಿದೆ ಕಡಲು’ ಎಂದಿರುವುದು. ನಮ್ಮ ದೇಹದಲ್ಲಿ ನಿರಂತರವಾಗಿ ರಕ್ತಪರಿಚಲನೆ ನಡೆಯುತ್ತಲೇ ಇರುತ್ತದೆ. ಈ ರಕ್ತಕ್ಕೆ ಮೂಲಕಾರಣ ನಾವು ತಿನ್ನುವ ಆಹಾರ. ಆ ಆಹಾರಕ್ಕೆ ಮೂಲ ನಾವು ಬೆಳೆಯುವ ಬೆಳೆ. ಆ ಬೆಳೆಗೆ ಮೂಲ ನೀರು. ಆ ನೀರಿಗೆ ಮೂಲ ಮಳೆ. ಆ ಮಳೆಗೆ ಮೂಲ ಕಡಲು. ಈ ಸಂಬಂಧಸೂತ್ರದಲ್ಲಿ ನಾವು ಗಮನಿಸಬೇಕಾದುದಾದರೂ ಏನು? ನಮ್ಮ ಶರೀರದಲ್ಲಿ ಹರಿಯುತ್ತಿರುವ ರಕ್ತ, ಅದು ‘ನಮ್ಮದಲ್ಲ’; ಎಂದರೆ ಅದು ನಮ್ಮಿಂದ ಆದುದ್ದಲ್ಲ. ನಮ್ಮ ದೇಹದ ರಕ್ತದಒಂದೊಂದು ಹನಿಯ ಸಿದ್ಧತೆಯಲ್ಲೂ ಇಡಿಯ ವಿಶ್ವದ ಪಾತ್ರವಿದೆ; ಒಬ್ಬನಿಗಾಗಿ ಇಡಿಯ ಸೃಷ್ಟಿಯೇ ಒಂದಾಗಿ ಶ್ರಮಿಸುತ್ತಿರುತ್ತದೆ. ಆದುದರಿಂದಲೇ ನಮ್ಮ ಒಂದೊಂದು ರಕ್ತನಾಳದಲ್ಲೂ ಹರಿಯುತ್ತಿರುವುದು ಕಡಲು; ವಿಶ್ವಸಾಗರ. ಇದನ್ನು ನಾವು ಮರೆಯಬಾರದು.

ಚೌಪದಿಯ ಮುಂದಿನ ಸಾಲು ಮತ್ತಷ್ಟು ಹೃದ್ಯವಾಗಿದೆ: ‘ಇಡಿಯ ಬ್ರಹ್ಮಾಂಡವಾಯಿತು ನರನ ಒಡಲು.’ ನಮ್ಮ ಶರೀರ ಅದು ಕೇವಲ ‘ನನ್ನ ಒಬ್ಬನ ದೇಹ’ವಷ್ಟೆ ಅಲ್ಲ; ಅದು ಇಡಿಯ ಬ್ರಹ್ಮಾಂಡದ ದೇಹ. ಈ ಭಾವವೇ ‘ಇಡಿಯ ಜಗತ್ತು ನನ್ನ ಕುಟುಂಬ’ ಎಂಬ ಆತ್ಮವಿಸ್ತರಣಕ್ಕೆ ಮೂಲಕಾರಣ. ಈ ಭಾವ ನಮ್ಮಲ್ಲಿ ಉದ್ದೀಪ್ತವಾದಾಗ ನಮ್ಮ ಹೃದಯವೇ ಬೆಳಕಿನ ಕೇಂದ್ರ. ಈ ಅಂತರಂಗದ ಪ್ರಕಾಶವಿದ್ದಾಗ ನಮ್ಮ ಹತ್ತಿರ ಯಮ – ಎಂದರೆ, ಸಾವು – ಕೂಡ ಬರುವುದಿಲ್ಲ. ಇಡಿಯ ಜಗತ್ತು ನನ್ನ ಕುಟುಂಬ, ನನ್ನ ದೇಹ ಇಡಿಯ ವಿಶ್ವದ ಶರೀರ – ಎಂಬ ಮನಸ್ಸು ನಮ್ಮಲ್ಲಿ ಮೂಡಿದಾಗ, ಸ್ವಾರ್ಥ, ದ್ವೇಷ, ಮತ್ಸರ – ಮುಂತಾದ ಶತ್ರುಗಳೆಲ್ಲರೂ ನಮ್ಮಿಂದ ಹತರಾಗಿರುತ್ತಾರೆ. ಆಗ ಇಡಿಯ ವಿಶ್ವಹೃದಯದ ಚಕ್ರವರ್ತಿಗಳಾಗಿ ನಾವು ಬೆಳಗುತ್ತಿರುತ್ತೇವೆ. ಜಗದ ಅಳು ನಮ್ಮ ಅಳುವೂ ಆಗಿರುತ್ತದೆ, ಜಗದ ನಗು ನನ್ನ ನಗುವೂ ಆಗಿರುತ್ತದೆ. ಈ ಮನೋಧರ್ಮವೇ ವಿಶ್ವಾತ್ಮಭಾವ; ವಿಶ್ವಮಾನವನ ಅಂತರಂಗ. ಈ ವೈಶಾಲ್ಯದಲ್ಲಿ ನೆಲೆ ನಿಂತ ಮನಸ್ಸು ಅದು ಏನನ್ನು ಮಾಡಿದರೂ ಲೋಕದ ಹಿತಕ್ಕಾಗಿಯೇ ಆಗಿರುತ್ತದೆ. ಈ ದೇಹವೇ ವಿಶ್ವದ ಒಡಲು ಎಂಬ ಭಾವ ಗಟ್ಟಿಯಾಗಿರುವಾಗ ಲೋಭಕ್ಕೆ ಅವಕಾಶವಾದರೂ ಎಲ್ಲಿದ್ದೀತು? ಈ ಭಾವದ ಸ್ಥಾಯಿಗುಣವೇ ಲೋಕೋಪಕಾರ. ಈ ಲೋಕೋಪಕಾರಕಾರ್ಯವೇ ನಮ್ಮನ್ನು ಶಾಶ್ವತರನ್ನಾಗಿಸುವುದು. ಇದನ್ನೇ ಈ ಸುಭಾಷಿತ ಹೀಗೆಂದಿದೆ:

ಪಿಬಂತಿ ನದ್ಯಃ ಸ್ವಯಮೇವ ನಾಂಭಃ

ಖಾದಂತಿ ನ ಸ್ವಾದುಫಲಾನಿ ವೃಕ್ಷಾಃ |

ಪಯೋಧರೋ ನ ಕ್ವಚಿದತ್ತಿ ಸಸ್ಯಂ

ಪರೋಪಕಾರಾಯ ಸತಾಂ ವಿಭೂತಯಃ ||

‘ನದಿಗಳು ನೀರನ್ನು ತಾವೇ ಕುಡಿಯುವುದಿಲ್ಲ; ಮರಗಳು ತಮ್ಮ ಸಿಹಿಯಾದ ಹಣ್ಣುಗಳನ್ನು ತಾವೇ ತಿನ್ನುವುದಿಲ್ಲ; ಮೋಡವೇ ಯಾವ ಕಾಲದಲ್ಲೇ ಆಗಲಿ ಸಸ್ಯಗಳನ್ನು ತಿಂದಿಲ್ಲ; ಸಜ್ಜನರ ದಿಟವಾದ ಸಂಪತ್ತು ಎಂದರೆ ಮತ್ತೊಬ್ಬರ ಉಪಕಾರವೇ ಹೌದು.’

ಇಡಿಯ ಜಗತ್ತು ನಮ್ಮ ಮನೆಯೇ ಆದಾಗ ನಾವು ಸಂಪಾದಿಸುವುದೆಲ್ಲವೂ ಆ ಮನೆಗೇ ಸೇರಬೇಕಷ್ಟೆ. ನಮ್ಮ ಮನೆಯಲ್ಲೇ ನಾವು ಕಳ್ಳತನವನ್ನು ಮಾಡುವುದಿಲ್ಲ‌. ಹೀಗಾಗಿ ಸ್ವಾರ್ಥವೊ ಲೋಭವೋ ನಮ್ಮಲ್ಲಿ ಇರಲು ಸಾಧ್ಯವಿಲ್ಲ. ಇಂಥ ಉದಾರಗುಣವೇ ನಮ್ಮ ವ್ಯಕ್ತಿತ್ವವನ್ನು ಎಲ್ಲೆಲ್ಲೂ ಹಬ್ಬಿಸುವುದು, ಎಲ್ಲ ಕಾಲದಲ್ಲೂ ಉಳಿಸುವುದು.

– ಹಾರಿತಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT