ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧದರ್ಶನದ ಮೂಲತತ್ವಗಳು

ಅಕ್ಷರ ಗಾತ್ರ

ಬೌದ್ಧದರ್ಶನದಲ್ಲಿ ಆರ್ಯಸತ್ಯಗಳು, ಆರ್ಯ ಅಷ್ಟಾಂಗಿಕ ಮಾರ್ಗಗಳು ಮತ್ತು ಪ್ರತೀತ್ಯಸಮಯತ್ಪಾದ ಚಕ್ರ – ಇವು ತುಂಬ ಮುಖ್ಯ ವಿವರಗಳು. ಇವುಗಳ ಬಗ್ಗೆ ಎಚ್‌. ಗಂಗಾಧರನ್‌ ಅವರ ವಿವರಣೆ ಹೀಗಿದೆ:

ಆರ್ಯಸತ್ಯಗಳು
1. ದುಃಖ, 2. ದುಃಖ ಸಮುದಾಯ, 3. ದುಃಖನಿರೋಧ, 4. ದುಃಖನಿರೋಧಗಾಮಿನಿ ಪ್ರತಿಪತ್ ಎಂಬಿವೇ ನಾಲ್ಕು ಆರ್ಯಸತ್ಯಗಳು. ಜೀವನವು ರೋಗರುಜಿನಾದಿಗಳಿಂದಲೂ, ಜನನ- ಮರಣಭಯದಿಂದಲೂ ಕೂಡಿ ದುಃಖ
ಮಯವಾದುದೆಂದೂ, ನಾವು ಅನುಭವಿಸುವ ಸುಖಗಳು ಕ್ಷಣಿಕವೂ ಮರುಕ್ಷಣದಲ್ಲೇ ದುಃಖವನ್ನು ತರುತ್ತವೆಯಾದುದರಿಂದ ಜೀವನವೆಂಬುದು ದುಃಖಮಯವಾದುದೆಂದು ಬುದ್ಧ ಭಗವಾನರು ಬೋಧಿಸಿದರು. ದುಃಖಸಮುದಾಯವೆಂದರೆ ಜೀವನದಲ್ಲಿ ಬರುವ ದುಃಖಗಳಿಗೆಲ್ಲಾ ಕಾರಣಗಳಿವೆ. ಕಾರಣಗಳು ಒಂದಕ್ಕೊಂದು ಸರಪಳಿಯಾಗಿ ಚಕ್ರದಂತೆ ಸುತ್ತುತ್ತಿರುತ್ತವೆ. ಈ ಸರಪಳಿಯ ಚಕ್ರದ ಕೊಂಡಿಗಳು ಬೌದ್ಧಧರ್ಮದಂತೆ ಹನ್ನೆರಡು. ಇದಕ್ಕೆ ಪ್ರತೀತ್ಯ ಸಮುತ್ಪಾದವೆಂದು ಕರೆಯುತ್ತಾರೆ. ಕಾರ್ಯಕಾರಣ ವಿವರಣೆಗೆ ದುಃಖಸಮುದಾಯವೆಂದು ಹೆಸರು.

ದುಃಖನಿರೋಧವೆಂದರೆ ದುಃಖಕ್ಕೆ ಮೂಲ ಕಾರಣವನ್ನೇ ನಿರ್ಮೂಲಮಾಡುವುದು. ಕಾರ್ಯಕ್ಕೆ ಕಾರಣವು ಅಂಟಿಕೊಂಡಿರುವುದೆಂದೂ, ಕಾರಣವನ್ನೇ ನಿರ್ಮೂಲಮಾಡಿ ದುಃಖಕಾರಣವಾದ ಚಕ್ರವನ್ನು ನಿರ್ನಾಮಗೊಳಿಸಬೇಕೆಂಬುದು ಮೂರನೆಯ ಸತ್ಯ.

ದುಃಖನಿರೋಧಗಾಮಿನಿ ಪ್ರತಿಪತ್ ಎಂದರೆ ದುಃಖಕಾರಣ ನಿರ್ಮೂಲಮಾಡಲು ಮಾರ್ಗವುಂಟೆಂದು ಅರಿಯುವುದು. ಆ ಮಾರ್ಗಕ್ರಮವನ್ನು ಆರ್ಯ ಅಷ್ಟಾಂಗಿಕಮಾರ್ಗಗಳೆಂದು ಕರೆಯುತ್ತಾರೆ. ಇದು ನಾಲ್ಕನೆಯ ಸತ್ಯ.

ಆರ್ಯ ಅಷ್ಟಾಂಗಿಕ ಮಾರ್ಗಗಳು
1. ಸಮ್ಯಕ್‌ದೃಷ್ಟಿ: ಯಾವುದೇ ವಿಷಯವನ್ನಾಗಲೀ ವಿಚಾರಮಾಡಿ ಸ್ವೀಕರಿಸಬೇಕು. ಯಾವುದೊಂದು ಗೌರವದ ಅಂಧನಂಬಿಕೆಯಂದಾಗಲೀ ದಾಕ್ಷಿಣ್ಯದಿಂದಾಗಲೀ ಒಪ್ಪಬಾರದೆಂಬುದು ಮೊದಲನೆಯ ಮಾರ್ಗ.

2. ಸಮ್ಯಕ್‌ಸಂಕಲ್ಪ: ವಿಶ್ವಕ್ಷೇಮಚಿಂತಕರಾಗಿ ತಮ್ಮ ತಮ್ಮ ಸುಖಲೋಲುಪತೆಯನ್ನು ತೊರೆದು ರಾಗದ್ವೇಷಗಳನ್ನು ಬಿಟ್ಟು ಪರಹಿತಚಿಂತಕರಾಗಿರಬೇಕೆಂದು ಎರಡನೆಯ ಮಾರ್ಗ.

3. ಸಮ್ಯಕ್‌ವಚನ: ಪರಹಿಂಸ್ಮಾತಕವಾದ ಚಾಡಿಮಾತು ಸುಳ್ಳುನುಡಿಗಳನ್ನಾಡಬಾರದು. ನಮ್ರನುಡಿಗಳಿಂದ ಪರಹಿತವನ್ನು ಬಯಸುತ್ತಿರಬೇಕೆಂಬುದೇ ಮೂರನೆಯ ಮಾರ್ಗ.

4. ಸಮ್ಯಕ್‌ಕಾರ್ಯ: ಪ್ರಾಣಿಹಿಂಸೆ ಮಾಡಬಾರದು. ಕಳ್ಳತನ ಮಾಡಬಾರದು. ನೀತಿಗೆಟ್ಟು ನಡೆಯಬಾರದು ಎಂಬುವುದೇ ನಾಲ್ಕನೆಯ ಮಾರ್ಗ.

5. ಸಮ್ಯಕ್‌ಜೀವಿಕಾ: ಪರಾವಲಂಬಿಗಳಾಗದೆ ಉತ್ತಮ ವೃತ್ತಿಯನ್ನು ಅವಲಂಬಿಸಿ ಪರೋಪಕಾರಿಗಳಾಗಿ ಜೀವನ ನಡೆಸುವುದು ಐದನೆಯ ಮಾರ್ಗ.

6. ಸಮ್ಯಕ್‌ವ್ಯಾಯಾಮ: ದೈಹಿಕ ಮತ್ತು ಮಾನಸಿಕ ಪರಿಶುದ್ಧತೆಗೆ ಸಾಧನೆಮಾಡುವುದು ನಿಶ್ಚಲವಾದ ಮನಸ್ಸನ್ನು ಪಡೆಯಲು ಧ್ಯಾನಮಾರ್ಗವನ್ನು ಅವಲಂಬಿಸುವುದು ಆರನೆಯ ಮಾರ್ಗ.

7. ಸಮ್ಯಕ್‌ಸ್ಮೃತಿ: ದುಃಖವನ್ನು ಮನಸ್ಸಿನಿಂದ ದೂರ ಮಾಡಿ ಹೇಡಿತನವನ್ನು ಅಳಿದು ಕ್ರೂರಭಾವನೆಯನ್ನು ನೀಗಿ ಯೋಗಸಾಧಕನಾಗಿರುವುದು ಏಳನೆಯ ಮಾರ್ಗ.

8. ಸಮ್ಯಕ್ ಸಮಾಧಿ: ಇದು ಸಾಧನೆಯ ಅಂತಿಯ ಗುರಿ. ಜನನ–ಮರಣಚಕ್ರಗಳಿಂದಲೂ ದೂರವಾದ ಉನ್ನತಾವಸ್ಥೆ. ಇದಕ್ಕೆ ‘ಬೋಧಿಸತ್ವ’ವೆಂದೂ ‘ಬುದ್ಧತತ್ವ’ವೆಂದೂ ಕರೆಯುತ್ತಾರೆ. ಇದು ಎಂಟನೆಯ ಮಾರ್ಗ. ಇದೇ ನಿರ್ವಾಣ.

ಪ್ರತೀತ್ಯಸಮುತ್ಪಾದ ಚಕ್ರ

1. ಅವಿದ್ಯಾ 2. ಸಂಸ್ಕಾರ 3. ವಿಜ್ಞಾನ 4. ನಾಮರೂಪ 5. ಷಡಾಯತನ 6. ಸ್ಪರ್ಶ 7. ವೇದನಾ 8. ತೃಷ್ಣ 9. ಉಪದಾನ 10. ಭವ 11. ಜಾತಿ 12. ಜರಾಮರಣ.

ಅವಿದ್ಯೆ ಅಥವಾ ಅಜ್ಞಾನದಿಂದ ತೃಷ್ಣೆ ಅಥವಾ ಆಶೆ ಹೆಚ್ಚುತ್ತದೆ. ಅಥವಾ ಅಜ್ಞಾನದಿಂದ ಸಂಸ್ಕಾರಚಕ್ರಕ್ಕೆ ಸಿಲುಕುತ್ತೇವೆ. ಸಂಸ್ಕಾರ ಜನ್ಮರೂಪ ತಾಳುತ್ತದೆ. ಅದರಿಂದ ಶಿಶುವಾಗಿ ಜನ್ಮ ಹೊಂದುತ್ತೇವೆ. ಜನ್ಮವೇ ಷಡಿಂದ್ರಿಯಗಳ ಪ್ರವೃತ್ತಿಗೆ ಕಾರಣವಾಗುತ್ತವೆ. ಇದೇ ಮುಂದೆ ವಿಷಯಬಾಂಧವ್ಯಕ್ಕೆ ಕಾರಣವಾಗುತ್ತದೆ. ಇದರಿಂದ ವೇದನೆಯು ಸಂಭವಿಸುತ್ತದೆ. ಮುಂದೆ ಅಕಾಂಕ್ಷೆ ಹೆಚ್ಚುತ್ತದೆ. ಅದರಿಂದ ವಿಷಯಾದಿಗಳಿಗೆ ಬಲಿಯಾಗುತ್ತೇವೆ. ವಿಷಯಗಳಲ್ಲಿ ಅತೃಪ್ತಿಹೊಂದಿ ಜನ್ಮಾಂತರವನ್ನು ಅಪೇಕ್ಷಿಸುತ್ತೇವೆ. ಅದರಿಂದ ಪುನರ್‌ಜನ್ಮವಾಗುತ್ತದೆ. ಜನಿಸಿದ ಮೇಲೆ ಮುಪ್ಪು ಸಾವು ಬರುತ್ತದೆ. ಮರಣವು ಅಜ್ಞಾನದಿಂದ ಕೂಡಿ ಯಥಾಪ್ರಕಾರ ಈ ಚಕ್ರದಲ್ಲಿ ಸಿಕ್ಕಿ ದುಃಖಭಾಗಿಯಾಗಲು ಕಾರಣವಾಗುತ್ತದೆ ಎಂಬುದನ್ನು ವಿವರಿಸುವುದೇ ಪ್ರತೀತ್ಯಸಮುತ್ಪಾದ ಚಕ್ರ.

ಮುಂದೆ ಬೌದ್ಧಧರ್ಮದಲ್ಲಿ ಹೀನಾಯಾನ ಮತ್ತು ಮಹಾಯಾನ ಎಂಬ ಎರಡು ಮೂಲಪ್ರಭೇದಗಳು ಉಂಟಾದವು. ಹೀನಾಯಾನದರ್ಶನವು ಮಹಾಯಾನದರ್ಶನದಿಂದ ಎಷ್ಟೋ ವಿಧ ಭಿನ್ನತೆಯನ್ನು ಹೊಂದಿದೆ. ಮಹಾಯಾನವು ಕಾಲಧರ್ಮಾನುಗುಣವಾಗಿ ಶಾಸ್ತ್ರೀಯವಾಗಿ ಬೆಳೆದುಬರುವ ದರ್ಶನವಾಗುತ್ತದೆ. ಎರಡು ದರ್ಶನಗಳೂ ಬುದ್ಧ ಭಗವಾನರ ಸಂದೇಶಕ್ಕೆ ಪ್ರಾಶಸ್ತ್ಯವನ್ನು ಕೊಟ್ಟುಕೊಂಡು ವಿಮರ್ಶಾರೂಪದಲ್ಲಿ ಬೆಳೆದು ಜಗತ್ತಿನ ಮನ್ನಣೆಗೆ ಪಾತ್ರವಾದ ದರ್ಶನಗಳಾಗಿವೆ.

(ಆಧಾರ: ‘ಬುದ್ಧ ಭಗವಾನ್’; ಎಚ್‌. ಗಂಗಾಧರನ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT