ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಏಟೋ ಸ್ವೀಟೋ

Last Updated 6 ಜನವರಿ 2021, 19:31 IST
ಅಕ್ಷರ ಗಾತ್ರ

ಅಹೋ ದುರ್ಜನಸಂಸರ್ಗಾನ್ಮಾನಹಾನಿಃ ಪದೇ ಪದೇ ।

ಪಾವಕೋ ಲೋಹಸಂಗೇನ ಮುದ್ಗರೈರಭಿಹನ್ಯತೇ ।।

ಇದರ ತಾತ್ಪರ್ಯ ಹೀಗೆ:

‘ದುರ್ಜನರ ಸಹವಾಸದಿಂದ ಹೆಜ್ಜೆಹೆಜ್ಜೆಗೂ ಮಾನಹಾನಿ ಆಗುತ್ತದೆ. ಬೆಂಕಿಯು ಕಬ್ಬಿಣದೊಡನೆ ಸೇರಿದ್ದರಿಂದ ಅದು ಸುತ್ತಿಗೆಗಳ ಹೊಡೆತವನ್ನು ಅನುಭವಿಸಬೇಕಾಗುತ್ತದೆ.’

ನಾವು ಯಾರ ಸಂಪರ್ಕದಲ್ಲಿರುತ್ತೇವೆಯೋ ಅವರ ಪ್ರಭಾವಕ್ಕೆ ತುತ್ತಾಗುತ್ತೇವೆ; ಕೆಟ್ಟವರ ಸಹವಾಸದಿಂದ ನಾವು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದು ಸುಭಾಷಿತದ ಸಂದೇಶ.

ಸಹವಾಸದಿಂದ ಸನ್ಯಾಸಿಯೂ ಕೆಟ್ಟ – ಎಂಬ ಮಾತಿದೆ. ಈ ಮಾತು ಈ ಸುಭಾಷಿತದ ಸಂದೇಶಕ್ಕೂ ಹೊಂದಾಣಿಕೆ ಆಗುತ್ತದೆ.

ನಮ್ಮ ಪರಿಸರ ನಮ್ಮ ಮೇಲೆ ತುಂಬ ಪ್ರಭಾವವನ್ನು ಬೀರುತ್ತದೆ ಎಂಬುದು ನಮಗೆಲ್ಲ ಗೊತ್ತಿದೆ, ನಮ್ಮ ಅನುಭವಕ್ಕೂ ಅದು ತಿಳಿಯುತ್ತಿರುತ್ತದೆ. ಪರಿಸರ ಎಂದರೆ ನಮ್ಮ ಸುತ್ತಮುತ್ತಲಿನ ಜಗತ್ತು. ಇದರಲ್ಲಿ ನಮ್ಮ ಮನೆಯವರೂ ಇರುತ್ತಾರೆ, ಹೊರಗಿನವರೂ ಇರುತ್ತಾರೆ. ನಾವು ಯಾರ ಜೊತೆ ಹೆಚ್ಚಿನ ಸಮಯ ಇರುತ್ತೇವೆಯೋ ಅವರ ಗುಣಾವಗುಣಗಳಲ್ಲಿ ನಾವು ಕೂಡ ಭಾಗಿಯಾಗುತ್ತೇವೆ. ಒಳ್ಳೆಯವರ ಸಂಗಡ ಇದ್ದರೆ ಅವರ ಒಳಿತಿನ ಪ್ರಭಾವ ನಮ್ಮ ವ್ಯಕ್ತಿತ್ವದ ಮೇಲೂ ಆಗುತ್ತಿರುತ್ತದೆ; ಕೆಟ್ಟವರ ಸಂಗಡ ಇದ್ದರೆ ಅದು ಕೂಡ ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವವನ್ನು ಬೀರುತ್ತದೆ.

ಇಲ್ಲಿ ಸುಭಾಷಿತ ಹೇಳುತ್ತಿರುವಂಥದ್ದು ದುರ್ಜನರ ಸಹವಾಸದಲ್ಲಿ ನಾವು ಇದ್ದರೆ ಒಂದೊಂದು ಹೆಜ್ಜೆಯಲ್ಲೂ ನಾವು ಮಾನಹಾನಿಗೆ ಒಳಗಾಗುತ್ತಿರುತ್ತೇವೆ ಎಂದು. ದುರ್ಜನರು ಮಾಡುವುದೆಲ್ಲವೂ ಕೇಡಿನ ಕೆಲಸಗಳು. ಅವುಗಳ ಕಾರಣದಿಂದ ಸಮಾಜದಲ್ಲಿ ಅವರ ಬಗ್ಗೆ ಟೀಕೆಗಳೇ ಹೆಚ್ಚು; ಎಲ್ಲರೂ ಅವರನ್ನು ಕಂಡು ಅಸಹ್ಯಪಟ್ಟುಕೊಳ್ಳುತ್ತಾರೆ. ಅಂಥವರ ಜೊತೆ ನಾವು ಇದ್ದರೆ ಆ ಅಪಮಾನಗಳಲ್ಲಿ ನಾವು ಪಾಲುದಾರರಾಗುವುದು ಸಹಜವೇ ಅಲ್ಲವೆ?

ಇದನ್ನು ಅರ್ಥಮಾಡಿಸಲು ಸುಭಾಷಿತ ಹೇಳಿರುವ ಉದಾಹರಣೆ ಸೊಗಸಾಗಿದೆ.

ಬೆಂಕಿ ಎಂದರೆ ಅಗ್ನಿ; ಅದು ಅತ್ಯಂತ ಪವಿತ್ರ ಎಂಬ ಶ್ರದ್ಧೆಯಿದೆ. ಎಲ್ಲ ರೀತಿಯ ಕಲ್ಮಶವನ್ನೂ ಅದು ದೂರ ಮಾಡುತ್ತದೆ; ಹೀಗಾಗಿ ಅದು ಪವಿತ್ರ. ಕಭ್ಭಿಣ ಎಂಬುದು ಇಲ್ಲಿ ದುರ್ಜನನ ಪ್ರತಿನಿಧಿ. ಕಬ್ಬಿಣದೊಂದಿಗೆ ಬೆಂಕಿ ಸೇರಿದರೆ ಏನಾಗುತ್ತದೆ? ಸುತ್ತಿಗೆಯ ಏಟುಗಳು ಬೀಳುತ್ತವೆ! ಸುತ್ತಿಗೆಯಲ್ಲಿ ಹೊಡೆಯುವುದು ಕಬ್ಬಿಣವನ್ನು ಬಗ್ಗಿಸಲು. ಆದರೆ ಕಬ್ಬಿಣದ ಜೊತೆ ಬೆಂಕಿಯೂ ಸೇರಿರುವುದರಿಂದ ಆ ಏಟುಗಳನ್ನು ಕಬ್ಬಿಣದೊಂದಿಗೆ ಬೆಂಕಿಯೂ ತಿನ್ನಬೇಕಾಗುತ್ತದೆ, ಪಾಪ!

ಹೀಗಾಗಿ ನಾವು ಯಾರ ಜೊತೆ ಸೇರಬೇಕೆಂಬುದನ್ನು ಚೆನ್ನಾಗಿ ಆಲೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ನಾವು ಏಟು ತಿನ್ನುವವರ ಜೊತೆ ಇರುತ್ತೇವೆಯೋ ಅಥವಾ ಸ್ವೀಟು ತಿನ್ನುವವರ ಜೊತೆಯಲ್ಲಿರುತ್ತೇವೆಯೋ – ಎಂಬ ಆಯ್ಕೆಯನ್ನು ಮಾಡಿಕೊಳ್ಳಬೇಕಾದವರು ನಾವೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT