ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಮಹಾತ್ಮರ ಸಂಗ

Last Updated 24 ಜುಲೈ 2020, 1:39 IST
ಅಕ್ಷರ ಗಾತ್ರ

ಗಂಗಾ ಪಾಪಂ ಶಶೀ ತಾಪಂ ದೈನ್ಯಂ ಕಲ್ಪತರುಸ್ತಥಾ ।
ಪಾಪಂ ತಾಪಂ ಚ ದೈನ್ಯಂ ಚ ಘ್ನಂತಿ ಸಂತೋ ಮಹಾಶಯಾಃ ।।

ಇದರ ತಾತ್ಪರ್ಯ ಹೀಗೆ:
‘ಗಂಗೆಯು ಪಾಪವನ್ನು ಮಾತ್ರ ಹೋಗಲಾಡಿಸುತ್ತದೆ; ಚಂದ್ರನು ಬೇಸಗೆಯ ಬೇಗೆಯನ್ನು ಮಾತ್ರ ಹೋಗಲಾಡಿಸುತ್ತಾನೆ. ಕಲ್ಪವೃಕ್ಷವು ಬಡತನವನ್ನು ಮಾತ್ರ ಹೋಗಲಾಡಿಸುತ್ತದೆ; ಆದರೆ ಉದಾತ್ತವಾದ ಅಭಿಪ್ರಾಯವುಳ್ಳ ಸಂತರು ಪಾಪವನ್ನೂ ದುಃಖವನ್ನೂ ಬಡತನವನ್ನೂ ಹೋಗಲಾಡಿಸುತ್ತಾರೆ.’

ಸಮಾಜದ ಒಳಿತು, ಕುಟುಂಬದ ಒಳಿತು, ವೈಯಕ್ತಿಕ ಒಳಿತು ಎಲ್ಲಿವೆ – ಎಂಬುದನ್ನು ಈ ಸುಭಾಷಿತ ಧ್ವನಿಪೂರ್ಣವಾಗಿ ನಿರೂಪಿಸಿದೆ.

ನಮಗೆ ಮಾನಸಿಕ, ದೈಹಿಕ ಮತ್ತು ವ್ಯಾವಹಾರಿಕ ಸ್ತರಗಳಲ್ಲಿ ಹಿತ ಬೇಕಾಗಿದೆ, ಒಳಿತು ಸಾಧಿತವಾಗಬೇಕಿದೆ. ಇವನ್ನು ಸಾಧಿಸಿಕೊಳ್ಳುವುದಕ್ಕಾಗಿಯೇ ನಾವು ಹಲವು ದಾರಿಗಳನ್ನು ಬಳಸುವುದು. ಅದನ್ನು ಸುಭಾಷಿತ ಇಲ್ಲಿ ಸೊಗಸಾಗಿ ಹೇಳುತ್ತಿದೆ.

ನಮ್ಮ ಮಾನಸಿಕ ಕ್ಲೇಶಗಳನ್ನು ಗಂಗೆ ಕಳೆಯುತ್ತಾಳಂತೆ; ಮಾನಸಿಕ ಕ್ಲೇಶಗಳನ್ನು ’ಪಾಪ‘ ಎಂಬ ಪದದಿಂದ ಸೂಚಿಸಿದೆ. ದೈಹಿಕ ಕ್ಲೇಶಗಳನ್ನು ಚಂದ್ರ ಪರಿಹರಿಸುತ್ತಾನಂತೆ; ದೈಹಿಕ ಕ್ಲೇಶಗಳನ್ನು ’ಬಿಸಿಲಿನ ಬೇಗೆ‘ ಎಂಬ ಪದದಿಂದ ಸೂಚಿತವಾಗಿದೆ. ಇನ್ನು ವ್ಯಾವಹಾರಿಕವಾದ ಎದುರಾಗುವ ಕ್ಲೇಶಗಳು; ನಿತ್ಯದ ಕ್ಲೇಶಗಳನ್ನು ಕಲ್ಪವೃಕ್ಷ ಬಗೆಹರಿಸುತ್ತದೆಯಂತೆ. ಇಂಥ ಕ್ಲೇಶಗಳನ್ನು ’ಬಡತನ‘ ಎಂಬ ಪದದಿಂದ ತಿಳಿಯಬಹುದಾಗಿದೆ.

ನಾವು ನಮ್ಮ ಮಾನಸಿಕ, ದೈಹಿಕ ಮತ್ತು ವ್ಯಾವಹಾರಿಕ ತೊಂದರೆಗಳನ್ನು ಪರಿಹರಿಸಿಕೊಳ್ಳಲು ಮೂವರು ಪ್ರತ್ಯೇಕ ವ್ಯಕ್ತಿಗಳನ್ನು ಆಶ್ರಯಿಸಬೇಕಾಗುತ್ತದೆ. ಆದರೆ ಉದಾರವಾದ ಭಾವ–ಬುದ್ಧಿಗಳಿರುವ ಒಬ್ಬ ಮಹಾತ್ಮನಿಂದ ಈ ಮೂರು ತೊಂದರೆಗಳೂ ಒಮ್ಮೆಲೆ ಪರಿಹಾರವಾಗುತ್ತವೆ – ಎನ್ನುತ್ತಿದೆ, ಸುಭಾಷಿತ.

ಇಲ್ಲೊಂದು ಎಚ್ಚರ! ಇಲ್ಲಿ ಮಹಾತ್ಮ ಎಂದರೆ ಅವನು ದೊಡ್ಡ ಯೋಗಿ, ಹಿಮಾಲಯದಿಂದ ಬಂದಿರಬೇಕು, ನೊಬೆಲ್‌ ಪ್ರಶಸ್ತಿ ಬಂದಿರಬೇಕು, ದೊಡ್ಡ ಚಳವಳಿಗಾರ ಆಗಿರಬೇಕು – ಇಂಥ ಏನೇನೋ ಗುಣಲಕ್ಷಣಗಳನ್ನು ಊಹಿಸಿಕೊಳ್ಳಬೇಕಾಗಿಲ್ಲ; ಇಂಥವರು ಆಗಿರಬಾರದು ಎಂದೇನಿಲ್ಲ, ಆದರೆ ಇಂಥವರೇ ಆಗಿರಬೇಕು ಎಂದೂ ಇಲ್ಲ. ಈ ’ಮಹಾತ್ಮ‘ ನಮ್ಮಂತೆಯೇ ಸಾಮಾನ್ಯ ಮನುಷ್ಯನೇ ಆಗಿರುತ್ತಾನೆ, ಆಗಿರಬೇಕು – ಎಂಬುದನ್ನು ಮರೆಯಬಾರದು. ಅವನು ನಮ್ಮ ಮನೆಯ ಸದಸ್ಯನೇ ಆಗಿರಬಹುದು, ನಮ್ಮ ಸ್ನೇಹಿತನೇ ಆಗಿರಬಹುದು – ಯಾರೂ ಆಗಿರಬಹುದು. ಅವರು ಯಾರೇ ಆಗಿದ್ದರೂ ಅವರು ಉದಾತ್ತರಾಗಿರುತ್ತಾರೆ; ಅವರ ಚಿಂತನೆಗಳಲ್ಲಿ, ನಡವಳಿಕೆಗಳಲ್ಲಿ ವಿಶ್ವಾತ್ಮಭಾವ ತುಂಬಿರುತ್ತದೆ; ಎಂದರೆ ಇಡೀ ಜಗತ್ತು ನನ್ನ ಮನೆ ಎಂಬಂಥ ವಿಶಾಲಬುದ್ಧಿ ಅವರದ್ದು.

ಇವರೇ ಸಾಧುಜನರು, ಸಜ್ಜನರು; ಅಂಥವರ ಸಾಮೀಪ್ಯ ಹೇಗಿರುತ್ತದೆ – ಎನ್ನುವುದನ್ನು ಇನ್ನೊಂದು ಶ್ಲೋಕ ಸೊಗಸಾಗಿ ವರ್ಣಿಸಿದೆ:

ಖಲಸಖ್ಯಂ ಪ್ರಾಙ್ಮಧುರಂ ವಯೋಂತರಾಲೇ ನಿದಾಘದಿನಮಂತೇ ।
ಏಕಾದಿಮಧ್ಯಪರಿಣತಿರಮಣೀಯಾ ಸಾಧುಜನಮೈತ್ರೀ ।।

‘ದುರ್ಜನರ ಸಂಗ ಆರಂಭದಲ್ಲಿ ಮಧುರ; ವಯಸ್ಸು ತಾರುಣ್ಯದಲ್ಲಿ ಮಧುರ; ಬೇಸಿಗೆಯ ದಿನದ ಕಡೆ – ಎಂದರೆ ಸಂಜೆ ಮಧುರ. ಆದರೆ ಸಜ್ಜನರ ಸಂಗವು ಆರಂಭ–ನಡುವೆ–ಕಡೆಯಲ್ಲಿಯೂ ಒಂದೇ ರೀತಿ ಮಧುರವಾಗಿರುತ್ತದೆ.’

ಮಹಾತ್ಮರ ಔದಾರ್ಯ ನಮ್ಮ ಜೀವನದುದ್ದಕ್ಕೂ ಜೊತೆಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT