ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಮೀಮಾಂಸೆಯಮಾದರಿಗಳು

Last Updated 10 ಆಗಸ್ಟ್ 2018, 20:02 IST
ಅಕ್ಷರ ಗಾತ್ರ

ಪಾಶ್ವಾತ್ಯ ಜ್ಞಾನಮೀಮಾಂಸೆಯ ಬಗ್ಗೆ ಪರಿಚಯವನ್ನು ಮಾಡಿಕೊಂಡಿದ್ದೇವೆ. ಈಗ ಅದರ ಕೆಲವೊಂದು ಶಾಖೆಗಳನ್ನು ನೋಡೋಣ:

1. ಇಂದ್ರಿಯಾನುಭವ ಪ್ರಧಾನವಾದ (ಎಂಪಿರಿಸಿಸಂ): ಇಂದ್ರಿಯಗಳೇ ಜ್ಞಾನಕ್ಕೆ ಮೂಲಾಧಾರ ಎಂಬ ವಾದವಿದು. ಜ್ಞಾನ ಪ್ರಾರಂಭವಾಗುವುದು ಇಂದ್ರಿಯಾನುಭವದಿಂದ. ಬಣ್ಣ, ರುಚಿ ಮತ್ತು ಗಡಸು, ಸದ್ದು, ವಾಸನೆ – ಇವುಗಳ ಮೂಲಕವೇ ನಮಗೆ ವಿಷಯ ಪರಿಚಯವಾಗುವುದು ಎಂಬುದನ್ನು ಎಲ್ಲರೂ ಅರಿತಿರುತ್ತಾರೆ. ಆದರೆ ಗ್ರೀಕ್ ತಾತ್ವ್ತಿಕರಲ್ಲಿ ಕೆಲವರೂ ಆಧುನಿಕರಲ್ಲಿ ಕೆಲವರೂ ಇಂದ್ರಿಯಾನುಭವವೊಂದೇ ಜ್ಞಾನಕ್ಕೆ ಆಧಾರ ಎಂದು ವಾದಿಸಿರುತ್ತಾರೆ. ಇವರಿಗೆ ‘ಸೆನ್ಸೇಷನಲಿಸ್ಟ್’ ಎಂದು ಹೆಸರು. ಇನ್ನು ಕೆಲವರು (ಉದಾಹರಣೆಗೆ ಜಾನ್ ಲಾಕ್ (1632–1704) ಎಂಬ ಆಂಗ್ಲ ತಾತ್ವ್ತಿಕ) ಇಂದ್ರಿಯಾನುಭವಗಳ ಜೊತೆಗೆ ಅವುಗಳಷ್ಟು ಸ್ಪಷ್ಟವೂ ಲವಲವಿಕೆಯೂ ಇಲ್ಲದ, ಅವುಗಳಿಗಿಂತ ಮಸಕಾದ, ಅವುಗಳ ನಕಲುಗಳ ಅರಿವೂ ಇದೆ ಎಂದು ಹೇಳುತ್ತಾರೆ. ಈ ನಕಲುಗಳನ್ನು ಭಾವನೆಗಳು ಎಂದು ಕರೆದರು. ನಮ್ಮ ಜ್ಞಾನಸರ್ವಸ್ವವೂ ಮೂಲವಾದ ಇಂದ್ರಿಯ ಅನುಭವಗಳನ್ನು ಮತ್ತು ಅವುಗಳ ನಕಲುಗಳನ್ನು ವಿವಿಧವಾಗಿ ಸೇರಿಸುವುದರಿಂದ ನಮ್ಮ ಜ್ಞಾನ ಬೆಳೆದಿದೆ ಎಂಬುದು ಅವರ ತರ್ಕ.

2. ಸಂದೇಹವಾದ (ಸ್ಕೆಪ್ಟಿಸಿಸಂ): ನಮ್ಮ ಸಕಲ ಜ್ಞಾನವೂ ಈ ಇಂದ್ರಿಯಾನುಭವಗಳಿಂದ ಮತ್ತು ಅವುಗಳ ನಕುಲಗಳಾದ ಮಾನಸಿಕ ಭಾವನೆಗಳಿಂದ, ಅವುಗಳ ವಿವಿಧ ಕಲಬೆರಕೆಯಿಂದ ಇಳಿದು ಬಂದಿರುವುದಾದರೆ, ಇವುಗಳಿಂದ ಬೇರೆಯಾದ, ಇವುಗಳಿಗೆ ಆಧಾರವಾದ, ಹೊರವಸ್ತು ಅಥವಾ ದ್ರವ್ಯಗಳ ಅರಿವುಂಟಾಗುವುದು ಹೇಗೆ ಎಂಬ ಪ್ರಶ್ನೆ ಹುಟ್ಟುತ್ತದೆ. ನಮಗೆ ತಿಳಿಯುವುದೆಲ್ಲ ಬಿಡಿಬಿಡಿಯಾದ ಇಂದ್ರಿಯಾನುಭವಗಳೂ ಅವುಗಳ ಮಾನಸಿಕ ನಕಲುಗಳೂ. ಆದರೆ ಅವನ್ನು ಎಷ್ಟು ಬಗೆಬಗೆಯಾಗಿ ಕೂಡಿಸಿದರೂ ನಮಗೆ ದೊರೆಯುವುದು ಅವುಗಳ ಸಮುದಾಯವೇ. ಅವುಗಳಿಗಿಂತ ಕೂಡಿಸಿದರೂ ನಮಗೆ ದೊರೆಯುವುದು ಅವುಗಳ ಸಮುದಾಯವೇ. ಅವುಗಳಿಗಿಂತ ಬೇರೆಯಾದ, ಅವುಗಳಿಗೆ ಆಧಾರವಾದ, ಹೊರವಸ್ತುವನ್ನಾಗಲಿ ಒಳವಸ್ತುವನ್ನಾಗಲಿ ನಮಗೆ ತಿಳಿಯಲಾಗುವುದಿಲ್ಲ ಎಂದು ಹೇಳಬೇಕಾಗುತ್ತದೆ. ಹೀಗೆ ಹೇಳುವವರಿಗೆ ‘ಸಂದೇಹವಾದಿಗಳು’ ಎಂದು ಹೆಸರು. ಹೊರವಸ್ತು, ಆತ್ಮ ಮುಂತಾದ ದ್ರವ್ಯಗಳು ನಮಗೆ ತಿಳಿಯುವುದಿಲ್ಲ. ಅವುಗಳ ಇರವು, ಆತ್ಮ ಸಂದೇಹಾಸ್ಪದವಾದುದು ಎಂಬುದೇ ಸಂದೇಹತಾವಾದ. ಡೇವಿಡ್ ಹ್ಯೂಮ್ (1711–1776) ಎಂಬವನ ವಾದ ಇದಕ್ಕೆ ಒಂದು ಉತ್ತಮ ನಿರ್ದಶನ.

3. ವಿಚಾರಬುದ್ಧಿವಾದ (ರ‍್ಯಾಷನಲಿಸಂ): ‘ನಮ್ಮ ಬುದ್ಧಿ ಕೇವಲ ನಿಷ್ಕ್ರಿಯವಾದುದ್ದು. ಇಂದ್ರಿಯಾನುಭವಗಳನ್ನು ಬಿಟ್ಟರೆ ನಮ್ಮ ಬುದ್ಧಿಯಲ್ಲಿ ಬೇರೆ ಏನೂ ಇಲ್ಲ’ ಎಂದು ಲಾಕ್ ಹೇಳಿದುದಕ್ಕೆ ಪ್ರತ್ಯುತ್ತರವಾಗಿ ಲೈಬ್ನಿಟ್ಸ್‌ ಎಂಬ ಜರ್ಮನ್ ತಾತ್ವಿಕ, ‘ಇಂದ್ರಿಯಗಳಿಗೆ ಮುಂಚೆ ಅವುಗಳ ಅನುಭವಕ್ಕೆ ಆಧಾರವಾಗಿ ಬುದ್ಧಿ ಇದೆ. ಅದು ನಿಷ್ಕ್ರೀಯವಲ್ಲ, ಉದಾಸೀನವಲ್ಲ; ಬುದ್ಧಿಯಲ್ಲಿ ಅಂತರ್ಗತವಾದ ಭಾವನೆಗಳಿವೆ. ಈ ಅಂರ್ತಭಾವನೆಗಳು ಇಂದ್ರಿಯಗಳಿಂದ ಇಳಿದುಬಂದವಲ್ಲ. ಈ ಅಂರ್ತಭಾವನೆಗಳೇ ಹೊರದ್ರವ್ಯಕ್ಕೆ, ಒಳದ್ರವ್ಯವಾದ ಆತ್ಮಕ್ಕೆ ಕಾರಣ’ – ಎಂದು ಹೇಳಿದ. ಇವನು ತನಗಿಂತ ಮುಂಚೆ ಇದ್ದ ಡೇಕಾರ್ಟ್‌ನ ವಾದದಿಂದ ತನ್ನ ಹೇಳಿಕೆಯನ್ನು ಸಮರ್ಥಿಸಿದ. ನಾವು ಇಂದ್ರಿಯಾನುಭವಗಳು, ಹೊರವಸ್ತುಗಳು ಮತ್ತು ಉಳಿದೆಲ್ಲದರ ವಿಚಾರವಾಗಿ ಸಂದೇಹಪಡುವ ಆತ್ಮವನ್ನು ನಿರಾಕರಿಸುವುದಕ್ಕಾಗುವುದಿಲ್ಲ. ಸಂದೇಹ, ನಿಶ್ಚಯ ಮುಂತಾದ ಎಲ್ಲ ಕ್ರಿಯೆಗಳಿಗೂ ತಿಳಿಯುವ ಚೇತನವೇ ಆಧಾರ. ಆದ್ದರಿಂದ ಒಳವಸ್ತುವಾದ ಚೇತನ ಮತ್ತು ಅದರಲ್ಲಿ ಅಂತರ್ಗತವಾದ ಒಳಭಾವನೆಗಳೇ ಎಲ್ಲ ಜ್ಞಾನಕ್ಕೂ ಮೂಲಧಾರ. ಹಾಗೆಯೇ ಇಂದ್ರಿಯಗಳಿಂದ ಹುಟ್ಟಿದ ಅನುಭಾವನೆಗಳಿಗೆ ಹೊರವಸ್ತು ಆಧಾರ ಎಂಬುದು ಡೇಕಾರ್ಟನ ವಾದ. ಅವನಿಂದ ಆಚಿನ ಕಾಲದಲ್ಲಿ ಹುಟ್ಟಿದ ಸ್ಪಿನೋಜ ಆ ವಾದವನ್ನು ಬೆಳೆಸಿದ. ಈ ಅಂತರ್ಭಾವನೆಗಳಿಗೆ ಗಣಿತದ ಭಾವನೆಗಳು ಅತ್ಯಂತ ಉತ್ತಮ ಮಾದರಿಗಳು. ಗಣಿತಶಾಸ್ತ್ರ – ಅಂಥ ಒಳಭಾವಗಳ ಆಧಾರದ ಮೇಲೆ ನಿಗಮನ ಅನುಮಾನದ ಮೂಲಕ ನಿಶ್ಚಿತ ಜ್ಞಾನದ ಮಹಲನ್ನು ಕಟ್ಟಿದೆ. ಗಣಿತಶಾಸ್ತ್ರದ ವಿಧಾನವನ್ನು ತತ್ತ್ವಶಾಸ್ತ್ರವೂ ಅನುಸರಿಸಿದರೆ ತತ್ತ್ವಜ್ಞಾನವೂ ಗಣಿತದಷ್ಟೇ ನಿಶ್ಚಿತ ಜ್ಞಾನಸೌಧವನ್ನು ಕಟ್ಟಬಹುದು ಎಂದು ನೆಚ್ಚಿ ಅವನು ‘ಎತಿಕ್ಸ್’ ಎಂಬ ಗ್ರಂಥದಲ್ಲಿ ಅಂಥ ತತ್ತ್ವಸೌಧವನ್ನು ನಿರ್ಮಿಸಿದ. ಡೇಕಾರ್ಟ್, ಸ್ಪಿನೋಜ, ಲೈಬ್ನಿಟ್ಸ್ – ಈ ಮೂವರು ಬೆಳೆಸಿದ ವಾದವೇ ‘ರ‍್ಯಾಷನಲಿಸಂ’.

ಮುಂದೆ ಇನ್ನೂ ಕೆಲವು ಮಾದರಿಗಳನ್ನು ನೋಡೋಣ.

(ಆಧಾರ: ‘ಜಿ. ಹನುಮಂತರಾವ್‌ ಅವರ ಆಯ್ದ ಲೇಖನಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT