ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಮಿತ್ರನಿಗೆ ರಾಮನೇ ಬೇಕು!

Last Updated 10 ಆಗಸ್ಟ್ 2018, 19:48 IST
ಅಕ್ಷರ ಗಾತ್ರ

ಮಾರೀಚ–ಸುಬಾಹುಗಳೆಂಬ ರಕ್ಕಸರನ್ನು ಸಂಹರಿಸಲು ವಿಶ್ವಾಮಿತ್ರಮಹರ್ಷಿಯು ತನ್ನನ್ನು ಕರೆದುಕೊಂಡುಹೋಗಲು ಬಂದಿರುವರು – ಎಂದು ತಿಳಿದು ದಶರಥ ಸಂತೋಷಗೊಂಡ. ಆದರೆ ವಿಶ್ವಾಮಿತ್ರನ ಬಯಕೆಯನ್ನು ಕೇಳಿ ಅವನು ತಬ್ಬಿಬ್ಬಾದ. ‘ನಾನು ನಿಮ್ಮೊಡನೆ ಬರಲು ಸಿದ್ಧ’ ಎಂದು ಅವನು ಹೇಳುವಷ್ಟರಲ್ಲಿ ವಿಶ್ವಾಮಿತ್ರರು ಹೀಗೆ ನುಡಿದರು:

‘ರಾಮನನ್ನು ನನ್ನೊಡನೆ ಕಳುಹಿಸು ದಶರಥ. ನಿನ್ನ ಹಿರಿಯ ಮಗ ಸತ್ಯಪರಾಕ್ರಮ. ಅವನು ವಯಸ್ಸಿನಲ್ಲಿ ಇನ್ನೂ ಚಿಕ್ಕವನಿರಬಹುದು; ಆದರೆ ಮಹಾವೀರ. ನನ್ನ ಯಜ್ಞಕ್ಕೆ ವಿಘ್ನಮಾಡುತ್ತಿರುವ ರಾಕ್ಷಸರನ್ನು ವಿನಾಶಗೊಳಿಸಬಲ್ಲ. ರಾಮನಿಗೆ ಶ್ರೇಯಸ್ಸು ದೊರೆಯುವಂತೆ ಮಾಡುತ್ತೇನೆ; ನಿನಗೆ ಸಂದೇಹ ಬೇಡ. ರಾಮನ ಹೆಸರು ಮೂರು ಲೋಕಗಳಲ್ಲಿಯೂ ಪ್ರಸಿದ್ಧಿ ಪಡೆಯುತ್ತಾನೆ. ಈ ಮಾರೀಚ–ಸುಬಾಹುಗಳು ಅವನ ಎದುರಿಗೆ ನಿಲ್ಲಲ್ಲಾರರು. ಅವರನ್ನು ಕೊಲ್ಲವುದಕ್ಕೆ ರಾಮನಿಗೆ ಮಾತ್ರವೇ ಸಾಧ್ಯ. ರಾಮನಿಗೆ ಏನಾದರೂ ಆದೀತೆಂದು ನೀನು ಹೆದರಬೇಡ. ನಾನು ನಿನಗೆ ಮಾತು ಕೊಡುತ್ತೇನೆ – ಇಬ್ಬರು ರಾಕ್ಷಸರು ರಾಮನಿಂದ ಹತರಾದರು ಎಂದೇ ತಿಳಿ. ಸತ್ಯಪರಾಕ್ರಮನೂ ಮಹಾತ್ಮನೂ ಆದ ರಾಮ ಎಂಥವನು ಎಂಬುದು ನನಗೆ ಗೊತ್ತು! ಮಹಾತೇಜಸ್ವಿಗಳಾದ ವಸಿಷ್ಠರಿಗೆ ಗೊತ್ತು! ಈ ತಪಸ್ವಿಗಳಿಗೆ ಗೊತ್ತು! ನಿನಗೆ ಪುಣ್ಯ ಬೇಕಾದರೆ, ಕೀರ್ತಿ ಬೇಕಾದರೆ ರಾಮನನ್ನು ನನ್ನೊಡನೆ ಕಳುಹಿಸು. ನಿನ್ನ ಮಂತ್ರಿಗಳೂ ವಸಿಷ್ಠರೂ ಅನುಮತಿಯನ್ನು ಕೊಡುವುದಾದರೆ ಅವನನ್ನು ನನ್ನೊಡನೆ ಕಳುಹಿಸಲು ನಿನಗೇನೂ ತೊಂದರೆಯಿಲ್ಲವಷ್ಟೆ? ರಾಮನನ್ನು ಬೇಗ ನನ್ನೊಡನೆ ಕಳುಹಿಸು. ಅವನು ಹತ್ತು ರಾತ್ರಿಗಳ ಮಾತ್ರ ನನ್ನ ಜೊತೆ ಇದ್ದರೆ ಸಾಕು. ಅವನನ್ನು ಹೆಚ್ಚು ದಿನಗಳು ಉಳಿಸಿಕೊಳ್ಳುವುದಿಲ್ಲ; ಯಜ್ಞ ಮುಗಿದ ಕೂಡಲೇ ಅವನನ್ನು ಹಿಂದೆ ಕಳುಹಿಸುವೆ. ದಶರಥ, ನಾನು ಹೇಳಿದಂತೆ ಮಾಡು, ಶೋಕಿಸಬೇಡ...’

ವಿಶ್ವಾಮಿತ್ರರು ಮಾತನಾಡುತ್ತಲೇ ಇದ್ದಾರೆ, ಆದರೆ ‘ರಾಮನನ್ನು ನನ್ನೊಡನೆ ಕಳುಹಿಸು’ ಎಂಬ ವಾಕ್ಯ ಅವನಿಗೆ ಕೇಳಿತೇ ವಿನಾ ಅನಂತರ ಯಾವ ಮಾತುಗಳೂ ಕೇಳಲೇ ಇಲ್ಲ. ಅವನ ಮೈಯಲ್ಲಿ ನಡುಕವೇ ಕಾಣಿಸಿಕೊಂಡಿತು. ಅವನ ಪ್ರಜ್ಞೆಯೂ ತಪ್ಪಿತು. ಸ್ವಲ್ಪ ಹೊತ್ತಿನ ಮೇಲೆ ಚೇತರಿಸಿಕೊಂಡನಾದರೂ ಮತ್ತೆ ಭಯದಿಂದ ನಡುಗಿಹೋದ. ವಿಶ್ವಾಮಿತ್ರರ ಆ ಮಾತು ಮತ್ತೆ ಪ್ರತಿಧ್ವನಿಸಿದಂತಾಗಿ ಎಚ್ಚರ ತಪ್ಪಿದ, ಅವನ ಆಸನದಿಂದ ಕೆಳಗೆ ಉರುಳಿಬಿದ್ದ.

* * *

ರಾಕ್ಷಸರನ್ನು ಸಂಹರಿಸಲು ತನ್ನನ್ನು ಕರೆದೊಯ್ಯಬಹುದು ಎಂಬ ನಿರೀಕ್ಷೆಯಲ್ಲಿದ್ದ ದಶರಥನಿಗೆ ವಿಶ್ವಾಮಿತ್ರದ ಆಯ್ಕೆಯನ್ನು ಕೇಳಿ ಆಘಾತವಾದದ್ದು ಸಹಜವೇ ಹೌದು. ರಾಮ

ಅವನ ಮುದ್ದಿನ ಮಗ; ಅವನಿನ್ನೂ ಚಿಕ್ಕವ – ಈ ಎರಡು ಕಾರಣಗಳು ಅವನ ವ್ಯಥೆಗೆ ಕಾರಣವಾದವು. ಆದರೆ ನಾವಿಲ್ಲಿ ಗಮನಿಸಬೇಕಾದದ್ದು ವಿಶ್ವಾಮಿತ್ರರಿಗೆ ರಾಮನ ಬಗ್ಗೆ ಇದ್ದ ವಿಶ್ವಾಸ. ‘ರಾಮನ ಬಗ್ಗೆ ನನಗೆ ಗೊತ್ತು; ವಸಿಷ್ಠರಿಗೆ ಗೊತ್ತು; ಋಷಿಗಳಿಗೆ ಗೊತ್ತು’ ಎಂಬ ಮಾತು ಗಮನಾರ್ಹ. ತಂದೆಗೇ ಮಗನ ಸಾಮರ್ಥ್ಯ ಗೊತ್ತಾಗಿಲ್ಲ; ಅಷ್ಟರಲ್ಲಿ ವಿಶ್ವಾಮಿತ್ರರಂಥವರ ಗ್ರಹಿಸಿದ್ದಾರೆ. ಅವರು ರಾಮನ ಸಾಮರ್ಥ್ಯವನ್ನು ಹೇಗೆ ಕಂಡುಕೊಂಡರು? ಬಹುಶಃ ತಪಸ್ಸಿನ ಮೂಲಕವೇ ಎನಿಸುತ್ತದೆ. ಏಕೆಂದರೆ ರಾಮನ ಶಕ್ತಿ ಪ್ರಕಟವಾಗುವಂಥ ಯಾವ ಘಟನೆಯೂ ಅಲ್ಲಿಯವರೆಗೆ ವಾಲ್ಮೀಕಿ ಕಾಣಿಸಿಲ್ಲ. ರಾಮನು ಲೋಕೊತ್ತರ ಪುರುಷ ಎನ್ನುವುದನ್ನು ವಿಶ್ವಾಮಿತ್ರರ ಮಾತಿನ ಮೂಲಕ ಧ್ವನಿಸುತ್ತಿದ್ದಾನೆ. ‘ಸತ್ಯಪರಾಕ್ರಮ’ ಎಂಬ ವಿಶೇಷಣವೂ ಇಲ್ಲಿ ಗಮನಾರ್ಹ.

* * *

ಮೂರ್ಛೆಯಿಂದ ಚೇತರಿಸಿಕೊಂಡ ದಶರಥ ನಿಧಾನವಾಗಿ ಮೇಲೆದ್ದ. ಸ್ವಲ್ಪ ಹೊತ್ತಿನ ಬಳಿಕ ಚೇತರಿಸಿಕೊಂಡ ಅವನು ವಿಶ್ವಾಮಿತ್ರರನ್ನು ಉದ್ದೇಶಿಸಿ ಹೀಗೆಂದ:

‘ಎಲೈ ಮಹರ್ಷಿಗಳೇ! ಕಮಲನೇತ್ರನಾದ (‘ರಾಜೀವಲೋಚನ’ –ರಾಮನನ್ನು ಹೀಗೆ ಹಲವು ಸಲ ಕರೆಯಲಾಗಿದೆ) ನನ್ನ ಮಗನಿಗೆ ಇನ್ನೂ ಹದಿನಾರು ವರ್ಷಗಳು ಕೂಡ ತುಂಬಿಲ್ಲ. ಅವನಿಗಿನ್ನೂ ರಾಕ್ಷಸರೊಡನೆ ಯುದ್ಧಮಾಡುವ ಯೋಗ್ಯತೆಯೇ ಇಲ್ಲ. ನನ್ನ ಸೈನ್ಯದ ಬಲ ಒಂದು ಅಕ್ಷೌಹಿಣೀ ಸೇನೆಯಿದೆ. ನನ್ನ ಸೇನೆಯೊಡನೆ ನಾನೇ ಬಂದು ಆ ರಾಕ್ಷಸರೊಡನೆ ಯುದ್ಧಮಾಡುವೆ. ನನ್ನ ಸೈನಿಕರು ಕೂಡ ಶೂರರು, ಅಸ್ತ್ರಗಳನ್ನು ಚೆನ್ನಾಗಿ ಬಳಸಬಲ್ಲವರು. ರಾಮನನ್ನು ಮಾತ್ರ ನೀವು ಕರೆದುಕೊಂಡು ಹೋಗದಿರಿ. ನಿಮ್ಮ ಯಜ್ಞವನ್ನು ರಾಕ್ಷಸರಿಂದ ರಕ್ಷಿಸುವ ಹೊಣೆಗಾರಿಕೆ ನನ್ನದು. ನನ್ನ ಕೊನೆಯ ಉಸಿರಿನ ತನಕವೂ ನಾನು ಹೋರಾಡುತ್ತೇನೆ. ದಯವಿಟ್ಟು ರಾಮನನ್ನು ಕರೆದೊಯ್ಯಬೇಡಿ...’ ಹೀಗೆ ಪದೇ ಪದೇ ‘ರಾಮನನ್ನು ಕರೆದುಕೊಂಡುಹೋಗಬೇಡಿ’ ಎಂದು ಹೇಳುವುದು, ಬೇಡಿಕೊಳ್ಳುವುದು, ಅಳುವುದು ದಶರಥನಿಂದ ಮುಂದುವರೆದಿತ್ತು: ‘... ರಾಮ ಇನ್ನೂ ಹುಡುಗ; ಯುದ್ಧವಿದ್ಯೆಯನ್ನೂ ಚೆನ್ನಾಗಿ ಕಲಿತಿಲ್ಲ. ಅವನಿಗೆ ಅಸ್ತ್ರಗಳ ಬಲವೂ ಇಲ್ಲ. ರಾಕ್ಷಸರು ಮಾಯಾಯುದ್ಧದಲ್ಲಿ ನಿಷ್ಣಾತರು. ರಾಮನು ಅವರನ್ನು ಎದುರಿಸಲಾರು. ರಾಮನಿಲ್ಲದೆ ನಾನು ಒಂದು ಕ್ಷಣವನ್ನೂ ಬದುಕಲಾರೆ. ಮಹರ್ಷಿಗಳೇ, ರಾಮನನ್ನು ಕರೆದೊಯ್ಯದಿರಿ. ರಾಮನು ನಿಮ್ಮೊಂದಿಗೆ ಬರಲೇಬೇಕಾದರೆ ನಾನೂ ಜೊತೆಯಲ್ಲಿ ಬರುವೆ; ನನ್ನ ಚತುರಂಗಬಲದ ಸೇನೆಯೊಂದಿಗೆ ಬರುವೆ. ನಾನು ಹುಟ್ಟಿ ಅರವತ್ತು ಸಾವಿರ ವರ್ಷಗಳಾದವು. ಸಂತಾನಭಾಗ್ಯ
ವಿಲ್ಲದೆ ತುಂಬ ಕಷ್ಟಪಟ್ಟಿರುವೆ. ಈಗ ನನ್ನ ಮಗನನ್ನು ಕರೆದುಕೊಂಡುಹೋಗಿ ಅವನನ್ನು ನನ್ನಿಂದ ದೂರಮಾಡದಿರಿ. ನನ್ನ ನಾಲ್ವರು ಮಕ್ಕಳಲ್ಲಿ ನನಗೆ ರಾಮನೆಂದರೆ ಬಹಳ ಪ್ರೇಮ; ಏಕೆಂದರೆ ಅವನು ಧರ್ಮಿಷ್ಠ. ಅವನನ್ನು ಕರೆದುಕೊಂಡು
ಹೋಗದಿರಿ. ಈ ರಾಕ್ಷಸರು ಯಾರು? ಅವರ ಚರಿತ್ರೆ ಏನು? ಅವರು ಯಾರ ಮಕ್ಕಳು? ಅವರಿಗೆ ಸಹಾಯಮಾಡುತ್ತಿರುವವರು ಯಾರು? ರಾಮ ಅವರನ್ನು ಹೇಗೆ ಸಂಹರಿಸಬೇಕಾಗುತ್ತದೆ? ರಾಕ್ಷಸರು ಬಲದಿಂದ ಕೊಬ್ಬಿರುತ್ತಾರೆ. ನಾನು ಮತ್ತು ನನ್ನ ಸೇನೆ ಅವರನ್ನು ಹೇಗೆ ಎದುರಿಸಬೇಕು? ಇವೆಲ್ಲವನ್ನೂ ವಿವರವಾಗಿ ಹೇಳಿರಿ. ಆದರೆ ರಾಮನನ್ನು ಮಾತ್ರ ಕರೆದೊಯ್ಯಬೇಡಿ’ ಎಂದು ವಿಶ್ವಾಮಿತ್ರನಲ್ಲಿ ಪ್ರಾರ್ಥಿಸಿಕೊಂಡ.

* * *

ವಿಶ್ವಾಮಿತ್ರ ಒಂದು ಸ್ಪಷ್ಟ ನಿಲುವಿನಿಂದ ಬಂದಿರುವುದು ತಿಳಿಯುತ್ತದೆ. ರಾಮನನ್ನು ಯಜ್ಞಸಂರಕ್ಷಣಾರ್ಥವಾಗಿ ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು – ಇದೇ ಆ ನಿಲುವು. ಇಲ್ಲೊಂದು ಸಾಂಕೇತಿಕತೆಯೂ ಉಂಟು. ಯಜ್ಞ ಎಂದರೆ ಲೋಕಹಿತ; ವ್ಯಷ್ಟಿಹಿತದ ಜೊತೆಗೆ ಸಮಷ್ಟಿಹಿತವನ್ನು ಕಾಪಾಡುವ ಕರ್ತವ್ಯವೇ ಅದರ ಉದ್ದೇಶ. ಈ ಹಿತದ ವಿಸ್ತಾರ ಹೇಗಿರುತ್ತದೆ – ಎನ್ನುವುದನ್ನು ಮಹಾಭಾರತದ ಈ ಸೊಲ್ಲು ಸೊಗಸಾಗಿ ವಿವರಿಸುತ್ತದೆ:

ತ್ಯಜೇದೇಕಂ ಕುಲಸ್ಯಾರ್ಥೇ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್‌ |

ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್‌ ||

ಇದರ ತಾತ್ಪರ್ಯ: ‘ಒಟ್ಟು ಕುಟುಂಬದ ಒಳಿತಿಗಾಗಿ ಒಬ್ಬ ವ್ಯಕ್ತಿಯನ್ನೂ, ಒಂದು ಊರಿನ ಒಳಿತಿಗಾಗಿ ಒಂದು ಕುಟುಂಬವನ್ನೂ, ನಾಡಿನ ಒಳಿತಿಗಾಗಿ ಊರೊಂದನ್ನೂ, ಕೊನೆಗೆ ಆತ್ಮದ ಒಳಿತಿಗಾಗಿ ಈ ಭೂಮಿಯನ್ನೇ ಬಿಡ
ಬೇಕಾಗುತ್ತದೆ.’

ಇಂಥ ಆದರ್ಶದ ಸಾಕಾರರೂಪವಾಗಿ ತನ್ನ ನಾಯಕ ಹೇಗೆ ಸದಾ ಸಿದ್ಧವಾಗಿರುತ್ತಾನೆ – ಎನ್ನುವುದನ್ನು ಮಹಾಕಾವ್ಯ ಇಲ್ಲಿ ಪ್ರತಿಪಾದಿಸುತ್ತಿದೆ. ಎಲ್ಲರಂತೆ ಅವನಿಗೂ ಸಾಂಸಾರಿಕವಾದ ಒತ್ತಡಗಳೂ ಬಂಧನಗಳೂ ಇರುತ್ತವೆ. ಆದರೆ ಅವನು ಅವೆಲ್ಲವನ್ನೂ ಮೀರಿ ಹೇಗೆ ಲೋಕಾಭಿಮುಖವಾಗಿ ಹೊರಡುತ್ತಾನೆ ಎಂಬುದನ್ನು ಇಲ್ಲಿಯ ಪ್ರಸಂಗ ನಿರೂಪಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT