ಶನಿವಾರ, ಜನವರಿ 25, 2020
28 °C

ಸಾಧನೆಗೆ ವಯಸ್ಸು ಮುಖ್ಯವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉತ್ತಾನಪಾದನಿಗೆ ಇಬ್ಬರು ಹೆಂಡಿರು: ಸುಮತಿ ಮತ್ತು ಸುರಚಿ. ಆ ರಾಜನಿಗೆ ಕಿರಿಯ ಹೆಂಡತಿ, ಸುರಚಿಯಲ್ಲಿ ತುಂಬ ಪ್ರೀತಿ. 

ಒಂದು ದಿನ ಸಿಂಹಾಸನದಲ್ಲಿ ಉತ್ತಾಪಾದ ಕುಳಿತಿದ್ದಾನೆ. ಕಿರಿಯ ಹೆಂಡತಿಯ ಮಗನಾದ ಉತ್ತಮಕುಮಾರನನ್ನು ಅವನು ತೊಡೆಯ ಮೇಲೆ ಕೂಡಿಸಿಕೊಂಡಿದ್ದಾನೆ. ಅದೇ ವೇಳೆಗೆ ಹಿರಿಯ ಹೆಂಡತಿಯ ಮಗನಾದ ಧ್ರುವಕುಮಾರನೂ ಅಲ್ಲಿಗೆ ಬಂದ. ಅವನಿಗೂ ತಂದೆಯ ತೊಡೆಯನ್ನೇರಿ ಕುಳಿತುಕೊಳ್ಳುವ ಆಸೆಯಾಯಿತು. ಏರಲೆಂದು ಹತ್ತಿರಕ್ಕೆ ಹೋದ. ತಂದೆಯೂ ಅವಕಾಶ ಕೊಡಲಿಲ್ಲ. ಸುರಚಿಯೂ ಧ್ರುವನನ್ನು ಗದರಿಸುತ್ತ ‘ಎಲೆ, ಹುಡುಗ, ನಿನಗೆ ಸಿಂಹಾಸನವನ್ನು ಏರುವ ಯೋಗ್ಯತೆಯಿಲ್ಲ. ನೀನು ರಾಜನ ಮಗನಾದರೂ ನನ್ನ ಹೊಟ್ಟೆಯಲ್ಲಿ ಹುಟ್ಟಲಿಲ್ಲ. ನೀನು ಸಿಂಹಾಸನವನ್ನು ಹತ್ತಬೇಕಾದರೆ ನನ್ನ ಹೊಟ್ಟೆಯಲ್ಲಿ ಹುಟ್ಟಿಬರಬೇಕು; ಅದಕ್ಕಾಗಿ ತಪಸ್ಸು ಮಾಡುಹೋಗು’  ಎಂದು ಅವನನ್ನು ನೂಕಿದಳು.

ತನ್ನ ತಾಯಿಯಯಲ್ಲಿ ಧ್ರುವನು ಅವನಿಗಾದ ದುಃಖವನ್ನೂ ಅಪಮಾನವನ್ನೂ ತಿಳಿಸಿದ. ಅವನ ತಾಯಿಯೂ ಅಸಹಾಯಕಳು. ಭಗವಂತನನ್ನು ಕುರಿತು ತಪಸ್ಸು ಮಾಡು ಎಂದು ಆಕೆ ಅವನಿಗೆ ಹೇಳಿದಳು. ಅದರಂತೆಯೇ ಅವನು ಕಾಡಿಗೆ ತಪಸ್ಸಿಗೆಂದು ಹೋದ. ನಾರದಮಹರ್ಷಿಗಳು ಅವನಿಗೆ ತಪಸ್ಸಿನ ಮರ್ಮವನ್ನು ತಿಳಿಸಿದರು. ‘ಒಂದೇ ಮನಸ್ಸಿನಿಂದ ಶ್ರೀಹರಿಯನ್ನು ಧ್ಯಾನಮಾಡು’ ಎಂದು ಹೇಳಿ ಮಂತ್ರೋಪದೇಶವನ್ನು ಮಾಡಿದರು.

ಧ್ರುವ ಕಾಡಿನಲ್ಲಿ ದೃಢವಾದ ತಪಸ್ಸಿನಲ್ಲಿ ತೊಡಗಿದನು. ವಾಸುದೇವಮಂತ್ರವನ್ನು ಜಪಿಸುತ್ತ ಹೊರಗಿನ ವ್ಯಾಪಾರದಿಂದ ಪೂರ್ಣವಾಗಿ ದೂರವಾದ. ಅವನ ತಪಸ್ಸಿಗೆ ಮೆಚ್ಚಿದ ನಾರಾಯಣನು ಪ್ರತ್ಯಕ್ಷನಾದ. ಅವನಿಗೆ ರಾಜ್ಯಸುಖದ ವರವನ್ನೂ, ಜೊತೆಗೆ ಶಾಶ್ವತಪದವಿಯ ವರವನ್ನೂ ದಯಪಾಲಿಸಿದ. ಆದರೆ ‘ನಾನು ದೇವರು ಪ್ರತ್ಯಕ್ಷನಾದರೂ ರಾಜ್ಯಪದವಿಯನ್ನೇ ಕೇಳಿದೆನಲ್ಲಾ’ ಎಂದು ಧ್ರುವನಿಗೆ ಸಂಕಟವೂ ಆಯಿತು. ಹಲವು ವರ್ಷಗಳು ರಾಜ್ಯಸುಖವನ್ನು ಅನುಭವಿಸಿ, ಕೊನೆಗೆ ಅವನು ಶಾಶ್ವತಪದವಿಯನ್ನು – ಎಂದರೆ ಧ್ರುವಲೋಕವನ್ನು ಪಡೆದ.

***

ಇದು ಭಾಗವತದಲ್ಲಿ ಬರುವ ಕಥೆ.

ಧ್ರುವ ತಪಸ್ಸಿಗೆ ಕುಳಿತಾಗ ಅವನಿನ್ನೂ ಚಿಕ್ಕ ಬಾಲಕ. ಆದರೆ ಆ ವಯಸ್ಸಿನಲ್ಲೂ ಅವನು ತಪ್ಸಸ್ಸಿನಲ್ಲಿ ತೊಡಗಿಕೊಂಡ. ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂಬುದಕ್ಕೆ ಉದಾಹರಣೆಯಾದ. ತನ್ನ ಆಸೆಯನ್ನು ನೆರವೇರಿಸಿಕೊಂಡ. ಅವನ ಏಕಾಗ್ರತೆ ತುಂಬ ವಿಶೇಷವಾದದ್ದು. ಇದರ ಜೊತೆಗೆ ಅವನಿಗೆ ಒದಗಿದ ಪಶ್ಚಾತ್ತಾಪವನ್ನೂ ಗಮನಿಸಬೇಕು. ದೇವರೇ ಪ್ರತ್ಯಕ್ಷನಾದರೂ ನಾನು ಕ್ಷಣಿಕವಾದ ಸಿಂಹಾಸದ ವರವನ್ನೇ ಪಡೆದೆ ಎಂದು ಅವನು ಕೊರಗಿದ.

ಇದನ್ನೂ ಓದಿ: ಹರಿದಾಸಮಾಲಿಕೆಯ ಅಪೂರ್ವರತ್ನ: ರಾಮದಾಸರು

ರಾಜ್ಯ, ಹಣ, ವಯಸ್ಸು – ಇವೆಲ್ಲವೂ ಕ್ಷಣಿಕವಾದ ಸಂಪತ್ತು. ಇದನ್ನು ಮೀರಿ ಎಂದೆಂದಿಗೂ ನಮಗೆ ಸಂತೋಷವನ್ನು ಕೊಡಬಲ್ಲ ವಸ್ಸತುವಿನ ಬಗ್ಗೆ ನಮ್ಮ ನಿರಂತರ ತಪಸ್ಸುನಡೆಯುತ್ತಿರಬೇಕು ಎಂಬ ಸಂದೇಶವನ್ನು ಧ್ರುವನ ಕಥೆ ನಮಗೆ ನೀಡುತ್ತಿದೆ. 

ಪ್ರತಿಕ್ರಿಯಿಸಿ (+)