ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಒಲವು ಸುಲಭವಲ್ಲ

Last Updated 19 ಮಾರ್ಚ್ 2020, 10:13 IST
ಅಕ್ಷರ ಗಾತ್ರ

ಗಾಣದಲ್ಲಿ ಸಿಲುಕಿದ ಎಳ್ಳು, ನೋಯದೆ ಎಣ್ಣೆಯ ಬಿಡುವುದೆ?
ಕಾಯದಲ್ಲಿ ಸಿಲುಕಿದ ಜೀವ, ನೋಯದೆ ಕರಣಂಗಳ ಬಿಡುವನೆ?
ಭಾವದಲ್ಲಿ ಸಿಲುಕಿದ ಭೃಮೆ, ನೋಯದೆ ವಿಕಾರವ ಬಿಡುವುದೆ?
ಇಂತಿವನರಿದಲ್ಲದೆ ಜ್ಞಾನಲೇಪವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ

ಇದು ಮೋಳಿಗೆ ಮಾರಯ್ಯನ ವಚನ. ಕಾಶ್ಮೀರದ ಅರಸನಾಗಿದ್ದವನು ಬಸವಣ್ಣನವರ ತತ್ವಗಳಿಗೆ ಮಾರುಹೋಗಿ ಅವನು ಪತ್ನಿ ಸಮೇತನಾಗಿ ಕಲ್ಯಾಣಕ್ಕೆ ಬಂದು ಶರಣನಾದನೆಂದು ಪ್ರತೀತಿಯಿದೆ. ನಿಃಕಳಂಕ ಮಲ್ಲಿಕಾರ್ಜುನ ಎಂಬುದು ಈತನ ಅಂಕಿತ.

ಎಳ್ಳಿನಿಂದ ಎಣ್ಣೆಯನ್ನು ಪಡೆಯುವ ಪ್ರಕ್ರಿಯೆಯನ್ನು ಗಮನಿಸಿದಾಗ ಎಳ್ಳು ಭಾರವಾದ ಕಲ್ಲು ಅಥವಾ ಕಬ್ಬಿಣದ ಹಲ್ಲುಗಳ ನಡುವೆ ಸಿಕ್ಕು ಜಜ್ಜಲ್ಪಡುತ್ತದೆ. ಈ ಚಟುವಟಿಕೆಯಲ್ಲಿ ಎಳ್ಳಿಗೆ ನೋವು ಪಡೆಯುವುದು ಅನಿವಾರ್ಯ. ಹಾಗಲ್ಲವಾದರೆ ಎಳ್ಳಿನಿಂದ ಎಣ್ಣೆ ದೊರೆಯುವುದಿಲ್ಲ. ಇದೇ ರೀತಿಯಾಗಿ ಮನುಷ್ಯನ ದೇಹದಲ್ಲಿ ಸಿಲುಕಿಗೊಂಡಿರುವ ಜೀವವೂ ಕೂಡ ಮುಕ್ತಿ ಹೊಂದಬೇಕೆಂದರೆ ನೋಯಬೇಕಾಗುತ್ತದೆ. ಇಲ್ಲದಿದ್ದರೆ ಅದಕ್ಕೆ ಕರಣಗಳಿಂದ ಬಿಡುಗಡೆ ಸಿಗುವುದಿಲ್ಲ. ಜೀವವು ದೇಹದಲ್ಲಿ ಸಿಲುಕಿಕೊಂಡ ರೀತಿಯಲ್ಲಿಯೇ ಭಾವದಲ್ಲಿ ಭ್ರಮೆಯು ಸಿಲುಕಿರುತ್ತದೆ. ಈ ಭ್ರಮೆಯು ತನ್ನ ಒಳಗಿನ ವಿಕಾರವನ್ನು ಕಳೆದುಕೊಂಡ ನಂತರ ಭಕ್ತಿಗೆ ಯೋಗ್ಯವಾಗುತ್ತದೆ. ಆದ್ದರಿಂದ ವಿಕಾರರಾಹಿತ್ಯವಾದ ಸ್ಥಿತಿಯನ್ನು ತಲುಪಬೇಕಾಗಿರುವುದು ಅಪೇಕ್ಷಣೀಯ ಬೆಳವಣಿಗೆ. ಆನಂತರದಲ್ಲಿ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮೋಳಿಗೆ ಮಾರಯ್ಯನ ಈ ವಚನವು ಜ್ಞಾನವನ್ನು ಪಡೆದುಕೊಳ್ಳಲು ನಾವು ಯೋಗ್ಯತೆಯನ್ನು ಸಂಪಾದಿಸಿಕೊಳ್ಳುವುದು ಹೇಗೆನ್ನುವುದರ ಕುರಿತು ತಿಳಿಸಿಕೊಡುತ್ತದೆ. ವಿದ್ಯೆ-ಅರಿವು-ಜ್ಞಾನ ಇವುಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಹಾದಿ ಸುಖದಿಂದ ಕೂಡಿರಲು ಸಾಧ್ಯವಿಲ್ಲ. ಸುಖ-ಭೋಗಗಳಲ್ಲಿ, ವಿಷಯಾಸಕ್ತಿಯಲ್ಲಿ ತೊಡಗಿಕೊಂಡಿರುವ ಮನಸ್ಸು ಜ್ಞಾನವನ್ನು ಪಡೆದುಕೊಳ್ಳಲಾರದು. ಜೀವನದಲ್ಲಿ ಕಷ್ಟದ ಅನುಭವಗಳಿಗೆ ನಮ್ಮನ್ನು ಒಡ್ಡಿಕೊಂಡಾಗ ಅರಿವು ಸಾಕ್ಷಾತ್ಕಾರವಾಗುತ್ತದೆ. ನಮ್ಮ ದೇಹದಲ್ಲಿರುವ ಕರಣಗಳೂ ಕೂಡ ಭೋಗಾಸಕ್ತಿಯಿಂದ ಸುಖಲೋಲುಪತೆಯಲ್ಲಿ ತೊಡಗಿಕೊಂಡಾಗ ಭವದ ಮಾಯಾಪಾಶದಲ್ಲಿ ಬಂಧಿತವಾಗಿರುತ್ತವೆ. ಆಗ ಅವುಗಳಿಗೆ ಜ್ಞಾನದ ದಾಹವಿರುವುದಿಲ್ಲ. ಅಂತಹ ಸ್ಥಿತಿಯಲ್ಲಿ ನಮ್ಮ ಭಾವಕೋಶದ ತುಂಬ ಭ್ರಮೆಯೇ ತುಂಬಿಕೊಂಡಿರುತ್ತದೆ. ನಾವು ಪರಮಸುಖಿಗಳು ಎಂಬ ಹುಸಿನಂಬಿಕೆಯಲ್ಲಿ ಈಜುತ್ತಿರುತ್ತೇವೆ. ದೇಹದಲ್ಲಿರುವ ಕರಣಂಗಳು ಬಗೆಬಗೆಯ ಚಟುವಟಿಕೆಗಳನ್ನು ನಡೆಸಿ ಐಹಿಕ ಸುಖ-ಭೋಗವನ್ನು ಪ್ರಾಪ್ತಿ ಮಾಡಿಕೊಳ್ಳುತ್ತವೆ.

ಆದರೆ ಇಂದ್ರಿಯಗಳು ದೊರಕಿಸುವ ಈ ಸುಖ ಎನ್ನುವುದು ನಿಜವಾಗಿಯೂ ಒಂದು ಭ್ರಮೆ ಮಾತ್ರ. ಇದನ್ನು ಅರ್ಥ ಮಾಡಿಕೊಳ್ಳಲು ಜ್ಞಾನದ ಆವಶ್ಯಕತೆಯಿದೆ. ಜ್ಞಾನವು ಅಜ್ಞಾನದ ಪೊರೆಯನ್ನು ಸೀಳಿಕೊಂಡು ದೊರಕುತ್ತದೆ. ಆದ್ದರಿಂದಲೇ ಇದು ನೋವಿನ ಅನುಭೂತಿಯನ್ನು ನೀಡುತ್ತದೆ. ಕರಣಂಗಳನ್ನು ವಿಷಯಾಸಕ್ತಿಯಿಂದ ವಿಮುಖಗೊಳಿಸುವುದೂ ಕೂಡ ನೋವನ್ನು ಉಂಟುಮಾಡುವ ಪ್ರಕ್ರಿಯೆಯೇ ಆಗಿದೆ. ಹೀಗೆ ಭ್ರಮೆಯನ್ನು ನೀಗುವುದು, ಜೀವ ಭೋಗಾಸಕ್ತಿಯನ್ನು ತೊರೆಯುವುದು – ಇವೆರಡೂ ಎಳ್ಳು ತನ್ನನ್ನು ತಾನು ಹಿಂಡಿಕೊಂಡು ಎಣ್ಣೆಯನ್ನು ನೀಡುವಂತಹ ನೋವಿನ ಕ್ರಿಯೆಗಳು. ಜ್ಞಾನವನ್ನು ಹೊಂದಬೇಕೆಂದರೆ ಇದು ಅನಿವಾರ್ಯ ಎನ್ನುವುದನ್ನು ಮೋಳಿಗೆ ಮಾರಯ್ಯ ತಿಳಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT