ಬುಧವಾರ, ಡಿಸೆಂಬರ್ 2, 2020
16 °C

ಕಥೆಯ ದೀಪ ಬೆಳಗೋಣ

ಉಮಾಕಾಂತ ಭಟ್ಟ ಕೆರೇಕೈ Updated:

ಅಕ್ಷರ ಗಾತ್ರ : | |

Prajavani

ದೀಪಾವಳಿ ಬೆಳಕಿನ ಹಬ್ಬ. ದೀಪಗಳ ಸಾಲನ್ನು ಹಚ್ಚಿ ಮನೆ ಮನಗಳನ್ನು ಬೆಳಗಿಸುವ ಮಹಾಪರ್ವ. ಶಾರ್ವರಿ ಸಂವತ್ಸರದ ದೀಪಾವಳಿಯಂದು ಕಥೆಯ ದೀಪವನ್ನು ಬೆಳಗಿಸೋಣ. ದೀಪದ ಕಥೆಯನ್ನು ಆಲಿಸೋಣ.

ಪ್ರಾಗ್ಜೋತಿಷಪುರ. ಪ್ರಸಿದ್ಧವಾದ ನಗರ. ಅದು ಕೋಟೆ ಕೊತ್ತಲಗಳಿಂದ ಸುರಕ್ಷಿತವಾಗಿತ್ತು. ಗಿರಿದುರ್ಗ, ವನದುರ್ಗ, ಜಲದುರ್ಗಗಳಿಂದ ಪರಿವೃತವಾಗಿ ಶತ್ರುಗಳಿಗೆ ದುರ್ಗಮವಾಗಿತ್ತು. ಊರಲ್ಲಿ ಸಂಪತ್ತು ಹೇರಳವಾಗಿತ್ತು. ಮನೆ ಮನೆಗಳಲ್ಲಿ ದವಸ ಧಾನ್ಯಗಳು ತುಂಬಿದ್ದವು. ಜನರ ಸುಖ ಭೋಗಗಳಿಗೆ ಅಂಕೆಯಿರಲಿಲ್ಲ,  ಅಳತೆಯಿರಲಿಲ್ಲ. ಬಯಸಿದುದು ಕೈಗೆ ಸಿಗುತ್ತಿತ್ತು. ಎಲ್ಲರೂ ಭೋಗಿಗಳು. ತಮಗೆ ಬೇಕಾದುದು ಯಾರ ಕೈಯಲ್ಲಿ ಇದ್ದರೂ ಅದನ್ನು ಕಿತ್ತು ತಿನ್ನುವುದೇ ಅವರ ಸ್ವಭಾವವಾಗಿತ್ತು. ಆದ್ದರಿಂದ ಅವರು ರಕ್ಷರಾಗಲಿಲ್ಲ; ರಾಕ್ಷಸರಾದರು. ಅಸುರರಾದರು. ತಮ್ಮ ಬದುಕಿಗಾಗಿ ಬೇರೆಯವರ ಪ್ರಾಣಹರಣ ಮಾಡಲೂ ಹಿಂಜರಿಯುತ್ತಿರಲಿಲ್ಲ. ಸುಳ್ಳಿಗೆ ಅಂಜಿದವರಲ್ಲ. ಮೋಸಕ್ಕೆ ಹೇಸಿದವರಲ್ಲ. ಪ್ರಜೆಗಳಲ್ಲಿ ಕ್ರೌರ್ಯ ಮತ್ತು ಬಲಗಳು ಮೆರೆದಿದ್ದವು. ದಯೆ ದಾಕ್ಷಿಣ್ಯಗಳು ಮರೆಯಾಗಿದ್ದವು. ಊರು ಭೌತಿಕವಾಗಿ ಬೆಳಗಿತ್ತು, ಬೌದ್ಧಿಕವಾಗಿ ಸೊರಗಿತ್ತು. ಸಾಂಸ್ಕೃತಿಕವಾಗಿ ದೀಪದ ಬುಡದಲ್ಲಿ ಅಡಗಿದಂತೆ ಇತ್ತು.

ಅಲ್ಲಿಯ ಅರಸ ನರಕ. ವೈರಿಗಳಿಗೆ ನರಕವನ್ನೇ ಸೃಷ್ಟಿಸಬಲ್ಲ ನರಕಾಸುರ. ಕಾಣುವುದಕ್ಕೆ ನರ. ನರರಿಗಿಂತ ಸಾವಿರ ಪಟ್ಟು ಪ್ರಖರ-ಪ್ರಬಲ. ಅವನ ಕೆಂಗಣ್ಣಿಗೆ ಗುರಿಯಾದವರ ಬಾಳು ನಾಯಿ ನರಕ. ಅವನು ಯಾರ ಮಗನೆಂದು ಗೊತ್ತಿಲ್ಲ. ನೋಡಿದವರೆಲ್ಲ ಭೂಮಿಯ ಮಗ ಎಂದು ನಂಬಿದರು. ಹಾಗೇ ಹಾಡಿ ಹೊಗಳಿದರು. ಆದಿ ವರಾಹನ ಮೈ ಬೆವರಿನಿಂದ ಹುಟ್ಟಿದವನಂತೆ! ಭೂಮಿಯಂತೆ ಗುಂಡಗೆ ಇದ್ದ. ಎಲ್ಲರೂ ಭೂಮಿಯ ಮಕ್ಕಳೇ. ಆದರೆ, ಭೂಮಿಯ ಈ ಮಗನಲ್ಲಿ ಭೂಮಿಯ ‘ಭೂಮಾ’ ಇತ್ತು. ಕಸುವಿತ್ತು. ಬಿಸಿಯಿತ್ತು. ಬಿಸುಪೂ ಇತ್ತು. ಕೆಲವೊಮ್ಮೆ ಕೆಂಪು, ಕೆಲವೊಮ್ಮೆ ಕಪ್ಪು, ಕೆಲವೊಮ್ಮೆ ಹಳದಿ - ಹೀಗೆ ಬಗೆ ಬಗೆಯಾಗಿ ತೋರುತ್ತಿದ್ದ. ಭೂಮಿಯ ‘ವಾಸನಾ’ ಇವನನ್ನು ಸುತ್ತಿಕೊಂಡಿತ್ತು.

ಬೆಳೆಗಿಂತ ಕಳೆಯೇ ಬೆಳೆಯುವುದು ಹೆಚ್ಚು. ಇದು ಭೂಮಿಯ ಜಾಯಮಾನ. ಇವನು ಬಿದ್ದಲ್ಲಿ ಬೆಳೆದವನು. ಬಿದ್ದಲ್ಲೇ ಎದ್ದು ನಿಂತವನು. ಶಿಕ್ಷಣವಿಲ್ಲ. ಮಾರ್ಗದರ್ಶಕರಿಲ್ಲ. ಹೇಳಿ ಕೇಳುವವರು ಯಾರೂ  ಇರಲಿಲ್ಲ. ಅಧಿಕಾರ ಸಿಕ್ಕಿತು. ಪಟ್ಟ ದಕ್ಕಿತು. ಸೇನೆ ಸಹಕರಿಸಿತು. ಕಂಡ ಕಂಡವರಲ್ಲಿ ಕಾಲು ಕೆದರಿ ಜಗಳಕ್ಕೆ ನಿಂತ. ಜಯ ದೊರೆಯಿತು. ನರಕನ ಅಟ್ಟುಳಿಗೆ ದೇವರಾಜನೂ ದಂಗಾದ. ಜಗವೇ ಕಂಗಾಲಾಯಿತು. ಇವನು ಅದಿತಿಯ ಕುಂಡಲಗಳನ್ನು ಕದ್ದ. ಮೇರು ಪರ್ವತದ ಮಣಿ ಶಿಖರವನ್ನು ಅಪಹರಿಸಿದ. ಬಯಸಿದುದು ಸಿಕ್ಕಿದಂತೆ ಇವನ ಮೈ ಮನಗಳಲ್ಲಿ ಸೊಕ್ಕು ಉಕ್ಕುಗಳು ತುಳುಕಿದವು. ನರ ನರಕನಾದ. ಭೂಮಿಯ ಮಗ ಭೌಮಾಸುರನಾಗಿ ಭೂಮಿಯನ್ನೇ ನಡುಗಿಸಿದ.

ಇವನ ಮಿತ್ರ-ಸೇನಾಪತಿ ಮುರ. ಅವನೂ ಶೂರ, ನರಕನಂತೆ ಕ್ರೂರ. ಅವನಲ್ಲಿ ಐದು ಪಾಶಗಳು ಇದ್ದವು. ಅವು ರೂಪ, ರಸ, ಗಂಧ, ಸ್ಪರ್ಶ ಮತ್ತು ಶಬ್ದ ಎಂಬ ತನ್ಮಾತ್ರಗಳೇ. ಜೀವ ಜೀವನದ ಮೂಲ ಸೆಳೆತಗಳು ಅವು. ಅವುಗಳನ್ನೇ ಪಾಶವಾಗುವಂತೆ ಬಳಸುವ ಕೌಶಲ ಅವನದು. ಗರ್ಭದಲ್ಲಿ ಇರುವ ಶಿಶು ಪೂರ್ವಜನ್ಮದ ಸ್ಮರಣೆಯೊಂದಿಗೆ ಹಾಯಾಗಿ ಇರುತ್ತದೆ. ಅದು ಪಲ್ಲಟವಾಗಿ ಪ್ರಸವವಾಗಿ ‘ಮುರಾ’ ಎಂಬ ಗರ್ಭಗತ ವಾಯುವಿನ ಕಾರಣದಿಂದ ಎಲ್ಲವನ್ನೂ ಮರೆಯುತ್ತದೆ. ಆದುದರಿಂದ ಹುಟ್ಟಿದೊಡನೆ ಅಳುತ್ತದೆ. ಅಳುವಿಗೆ ಮರೆವೇ ಕಾರಣ. ನಗುವಿಗೆ ಅರಿವೇ ಸಾಧನ. ಆ ಮುರ ಬೇರೆ ಅಲ್ಲ. ಈ ಮುರಾ ಬೇರೆಯಲ್ಲ. ಜಗದ ಜನರಿಗೆ ಮರೆವು ಮತ್ತು ಅಳುವನ್ನು ತಂದು ಕೊಡುವ ‘ದೈತ್ಯ ಪ್ರತಿಭೆ’ ಈ ದೈತ್ಯನದೆ. ಯಾರೇ ಆದರೂ ಒಂದಿಲ್ಲೊಂದು ಪಾಶಕ್ಕೆ ಒಳಗಾಗಲೇ ಬೇಕು. ಕೆಲವರಿಗೆ ರೂಪ, ಕೆಲವರಿಗೆ ರಸ, ಕೆಲವರಿಗೆ ಸ್ಪರ್ಶ. ಪಾಶಕ್ಕೆ ಸಿಲುಕಿದವರು ಸೋಲಲೇಬೇಕು. ಸಾಯಲೇಬೇಕು. ಕ್ರೂರಿಗಳ ಕೈಯಲ್ಲಿ ಅಧಿಕಾರ, ದುಷ್ಟರ ಕೈಯ್ಯಲ್ಲಿ ದಂಡ ವ್ಯವಸ್ಥೆ ಇದ್ದರೆ ಊರಿಗೆ ಉಳಿಗಾಲ ಉಂಟೇ? ಮುಗ್ಧರಿಗೆ ಸಂಕಟ ತಪ್ಪಬಹುದೇ?

ಇಷ್ಟು ಸಾಲದು ಎಂಬಂತೆ ಭೋಗಲಾಲಸೆಯ ಕೈಹಿಡಿದು ಹೆಣ್ಣಿನ ಹುಚ್ಚೂ ಅವರ ಮನೆ ಮನಗಳನ್ನೂ ಹೊಕ್ಕಿದೆ. ನರಕನು ಹದಿನಾರು ಸಾವಿರ ಸುಂದರ ರಾಜಕುಮಾರಿಯರನ್ನು ತನ್ನ ಸೆರೆಮನೆಯೊಳಗೆ ಬಂದಿಯಾಗಿಸಿದ್ದ. ಒಬ್ಬೊಬ್ಬರನ್ನೂ ತನ್ನ ತೋಳ್ಬಂಧನಕ್ಕೆ ಬಯಸಿದ್ದ. ಮುಗ್ಧೆಯರ ಕಣ್ಣೀರು ಕೋಡಿಯಾಗಿ ಹರಿದಿತ್ತು. ಮನದಿಂಗಿತವನ್ನು ಮೀರಿ ಬದುಕುವ ಕರಾಳ ಭವಿಷ್ಯ ಭಯಂಕರವಾಗಿ ಕಾಡಿತ್ತು. ರಕ್ಷಕರಿಲ್ಲ. ಅನಾಥ ಪ್ರಜ್ಞೆ ಆವರಿಸಿತ್ತು. ಹೊಂಬಾಳ ಬೆಳಕನ್ನು ಬಯಸಿದ ಎಳೆಯ ಬಾಲೆಯರು ಸೆರೆಮನೆಯ ಕತ್ತಲೆಯ ಗೂಡಲ್ಲಿ ಕೊರಗುತ್ತಿದ್ದರು.

ಕೃಷ್ಣನಿಗೆ ಈ ವಿಷಯ ತಿಳಿಯಿತು. ದೇವರಾಜನೇ ಅರಿಕೆಯನ್ನೂ ಮಾಡಿಕೊಂಡಿದ್ದ. ಮುರ ನರಕರ ದುರಾಲೋಚನೆಯ ಎಳೆ ಸಿಕ್ಕಿತ್ತು. ದೀನ ದುರ್ಬಲರ ರಕ್ಷಣೆಗೆ ಧಾವಿಸುವವನು ಅವನು. ಮುಗ್ಧರ ಮನಸ್ಸನ್ನು ಅರಳಿಸುವುದು ಅವನ ಸ್ವಭಾವ. ಆದುದರಿಂದ ಅವನು ಆಕರ್ಷಕ- ಕೃಷ್ಣ. ಅಳು ಅವನಿಗೆ ಹಿಡಿಸದು. ಅಳುವವರ ಕಣ್ಣೀರನ್ನು ಒರೆಸದೇ ಅವನಿಗೆ ನೆಮ್ಮದಿಯಿಲ್ಲ. ಅಳುವವರನ್ನು ನಗಿಸದೇ ಅವನು ತಣಿಯುವುದಿಲ್ಲ. ಕಾಣುವುದಕ್ಕೆ ನರ. ಒಳಗಿನಿಂದ ಹರಿ. ನರಹರಿ ಎಂಬ ನೆಗಳ್ತೆಗೆ ಒಳಗಾದವನು. ಮನುಷ್ಯನಾಗಿ ಹುಟ್ಟಿದರೂ ದೇವನಂತೆ ಮೆರೆದವನು. ದೇವನಾಗಿಯೂ ನರನಂತೆ ವಿಹರಿಸುವವನು. ನಂದಗೋಕುಲವನ್ನು ದಿವ್ಯಧಾಮವಾಗಿಸಿದವನು. ಮುನಿಗಳ ತಪಸ್ಸಿಗೆ ಒಲಿದವನು. ಗೋಪಿಯರ ಭಕ್ತಿಯ ತೆಕ್ಕೆಯೊಳಗೆ ನಲಿದವನು.

ಜತೆಯಲ್ಲಿ ಸತ್ಯಭಾಮಾ ಸೇರಿಕೊಂಡಳು. ಸತ್ಯದ ಭಾ-ಬೆಳಕು, ಮಾ- ಅಳತೆ, ಎರಡೂ ಅವಳೇ. ಸತ್ಯಭಾಮಾ ಸಮನ್ವಿತನಾದ ಹರಿ ಗರುಡನನ್ನು ಏರಿ ಹೊರಟ. ಗರುಡ ಧರ್ಮಾತ್ಮ. ಧರ್ಮ ಸ್ವರೂಪ. ಧರ್ಮಕ್ಕೆ ತಾನೆ ಹರಿಯನ್ನೂ, ಸತ್ಯಪ್ರಮೆಯನ್ನೂ ಹೊರುವ ಸಾಮರ್ಥ್ಯ ಇರುವುದು! ಪ್ರಾಗ್ಜೋತಿಷವನ್ನು ಸೇರುವಷ್ಟರಲ್ಲಿ ಹೋರಾಟ ಸಮನಿಸಿತು. ಮುರ ಮೊದಲು ಎದುರಿಸಿದ. ಪಾಶದ ಪ್ರಯೋಗಕ್ಕೆ ಮುಂದಾದ. ಭೋಗಿಯನ್ನು ಪಾಶ ಬಂಧಿಸಬಹುದು. ಯೋಗೀಶ್ವರ- ಯೋಗೇಶ್ವರನಾದ ಕೃಷ್ಣನನ್ನು ಪಾಶಗಳು ಸಮೀಪಿಸಲಾರವು. ಹರಿ ಪಾಶಗಳನ್ನು ಕತ್ತರಿಸಿದ. ಮುರನ ಏಳು ತಮ್ಮಂದಿರನ್ನು ಮಡುಹಿದ. ಮುರನನ್ನೂ ಕೊಂದ. ಆಗ ನರಕನೇ ಎದುರಾಗಿ ಎಗರಾಡಿದ. ಯುದ್ಧ ಭಯಂಕರವಾಗಿ ನಡೆಯಿತು. ನರಕನ ಕಪಾಲವನ್ನು ಕೃಷ್ಣ ಒಡೆದ. ಭೂಮಿಯನ್ನು ಸಂತೈಸಿದ. ನಗರದಲ್ಲಿ ಪ್ರೀತಿಯ ಬಾಗಿಲನ್ನು ತೆರೆದ. ಅಕ್ರೂರ ಮಾರ್ಗಗಳನ್ನು ತೆರವುಗೊಳಿಸಿದ.

ಹದಿನಾರು ಸಾವಿರ ಸುಂದರ ರಾಜಕುಮಾರಿಯರನ್ನು ಹರಿ ಸೆರೆಯಿಂದ ಬಿಡಿಸಿದ. ಎಲ್ಲರೂ ಕತ್ತಲೆಯಿಂದ ಹೊರಬಂದರು. ಸ್ವಾತಂತ್ರ್ಯದ ಸ್ವಾದವನ್ನು ಸವಿದರು. ಇಹದಿಂದ ಪರಕ್ಕೆ ಸಾಗುವ ಬೆಳಕನ್ನು ಕಂಡರು. ಸೂರ್ಯಾಸ್ತದ ಸಮಯ. ಆಶ್ವಯುಜ ಕೃಷ್ಣ ಚತುರ್ದಶಿ. ಮೈಯ್ಯಲ್ಲಿ ಕೊಳೆ. ಮನದಲ್ಲಿ ದುಗುಡ ದುಮ್ಮಾನಗಳು. ಮುಂದೇನು? ಬಾಳಿಗೆ ಉರುಳಾಗುವ ಪ್ರಶ್ನೆ. ಸಾವಿರ ಸಾವಿರ ಮುಗ್ಧೆಯರು ಕತ್ತಲೆಯಿಂದ ಹೊರಬಂದರೂ ಕತ್ತಲೆಗೇ ಸಾಗುವ ಅನಿವಾರ್ಯ ಸ್ಥಿತಿ. ಕೃಷ್ಣ ಕ್ಷಣಕಾಲ ಯೋಚಿಸಿದ. ಅವರ ಆರ್ತತೆಯನ್ನು ಹೊಳೆಯುವ ಕಂಗಳಲ್ಲಿ ಗಮನಿಸಿದ. ಗಂಭೀರವಾಗಿ ನುಡಿದ. ‘ಕೂಡಲೇ ಎಣ್ಣೆ ನೀರು ಸ್ನಾನ ಮಾಡಿ ಬನ್ನಿ. ಸಾಲಾಗಿ ಹಣತೆ ದೀಪಗಳನ್ನು ಬೆಳಗಿಸಿ, ದೀಪಗಳು ನಿಮ್ಮ ಬದುಕಿಗೆ ದಾರಿಯನ್ನು ತೋರಿಸುತ್ತವೆ.’

ಹದಿನಾರು ಸಾವಿರ ಮುಗ್ಧೆಯರು ತೈಲಾಭ್ಯಂಗ ಮಾಡಿ ಮಡಿಯಾದರು. ಸಾಲಾಗಿ ಹದಿನಾರು ಸಾವಿರ ಪ್ರಣತಿ (ಹಣತೆ) ದೀಪಗಳನ್ನು ಹಚ್ಚಿದರು. ದೀಪಗಳು ಬೆಳಗಿದವು. ಆಶ್ಚರ್ಯ..! ಎಲ್ಲ ದೀಪಗಳ ಕುಡಿಗಳಲ್ಲೂ ಕೃಷ್ಣನೇ ಕಾಣುತ್ತಿದ್ದ. ಕೃಷ್ಣ ಎಲ್ಲರ ಬದುಕಿಗೂ ದಾರಿದೀಪನಾದ.

-ಇದು ದೀಪದ ಕಥೆ. ಕಥೆಯ ದೀಪ ನಮ್ಮ ಮನೆಯಲ್ಲಿ ಬೆಳಗಲಿ. ನಮ್ಮೊಳಗಿನ ಮುರ ನರಕರನ್ನು ಸಂಹರಿಸಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು