ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಶ್ರದ್ಧೆ ಸಂತಸ ಬೆಳಕು

Last Updated 26 ಅಕ್ಟೋಬರ್ 2019, 7:14 IST
ಅಕ್ಷರ ಗಾತ್ರ

ಆಶ್ವಿನ ಕೃಷ್ಣ ಚತುರ್ದಶಿಯಿಂದ ಮೂರು ದಿನಗಳಲ್ಲಿ (ಅಕ್ಟೋಬರ್‌ 27-29) ದೀಪಾವಳಿಯನ್ನು ಆಚರಿಸಲಾಗುತ್ತದೆ. ಚತುರ್ದಶಿಯನ್ನು ನರಕಾಸುರನನ್ನು ಶ್ರೀಕೃಷ್ಣನು ನಿಗ್ರಹಿಸಿದ ನೆನಪಿಗಾಗಿ ‘ನರಕ ಚತುರ್ದಶಿ’ ಎಂದೇ ಕರೆಯಲಾಗಿದೆ. ನರಕವನ್ನು ತಪ್ಪಿಸಿಕೊಳ್ಳಲು ಆ ದಿನ ಸುಲಭವಾದ ಉಪಾಯವನ್ನು ಹೇಳಿದೆ. ನಸುಕಿನಲ್ಲೆದ್ದು ಅಭ್ಯಂಗಸ್ನಾನವನ್ನು ಮಾಡಬೇಕು. ಸ್ನಾನ ಮಾಡುವಾಗ ನೇಗಿಲ ಮಣ್ಣಿನಿಂದ ಕೂಡಿದ ಉತ್ತರಣೆ, ಕರಿಗುಂಬಳ, ತಗಟೆ ಗಿಡ ಇವುಗಳ ರೆಂಬೆಯನ್ನು ಕೈಯಲ್ಲಿ ಹಿಡಿದು ಮೂರು ಸಲ ದೇಹಕ್ಕೆ ಸುಳಿಯಬೇಕು.

ಸಂಜೆ ದೇವಾಲಯ ಉದ್ಯಾನ ಗೋಶಾಲೆ ಗಜಶಾಲೆ ಮೊದಲಾದವುಗಳಲ್ಲಿ ಮನೋಹರವಾಗಿ ಕಾಣುವಂತೆ ದೀಪಗಳನ್ನು ಬೆಳಗಲು ಆರಂಭಿಸಿ ಮೂರು ದಿನಗಳ ವರೆಗೆ ಮುಂದುವರೆಸಬೇಕು. ಚತುರ್ದಶಿ ಮತ್ತು ಅಮಾವಾಸೆಯ ದಿನ ಪಿತೃಗಳ ಪ್ರೀತಿಗಾಗಿ ಕೊಳ್ಳಿದೀಪವನ್ನು ಬೆಳಗಬೇಕು.

ಅಮಾವಾಸ್ಯೆಯಂದು ಬೆಳಿಗ್ಗೆ ಅಭ್ಯಂಗಸ್ನಾನ, ಮಧ್ಯಾಹ್ನ ಉಪವಾಸ, ಸಂಜೆ ದೀಪಾರಾಧನೆ ಮತ್ತು ಲಕ್ಷ್ಮೀಪೂಜೆ ಮಾಡಬೇಕು.

ದೀಪಾವಳಿಯ ಸಂದರ್ಭದಲ್ಲಿ ಲಕ್ಷ್ಮಿಯನ್ನು ಮನೆಗಳಲ್ಲಿಯೂ ವಿಶೇಷವಾಗಿ ಅಂಗಡಿಗಳಲ್ಲಿಯೂ ಪೂಜಿಸುವ ರೂಢಿಯಿದೆ. ಬೇರೆಯ ಪೂಜೆಗಳನ್ನು ದೇವರ ಮನೆಯಲ್ಲಿ ಮಾಡಿದರೆ, ಈ ಪೂಜೆಯನ್ನು ಹಣ ಒಡವೆ ರತ್ನ ಮುಂತಾದವುಗಳಿರುವ ಪೆಟ್ಟಿಗೆ ಅಥವಾ ಕಪಾಟಿಗೆ ಮಾಡುತ್ತಾರೆ. ಅಲ್ಲಿಯೇ ಲಕ್ಷ್ಮಿಯ ಚಿತ್ರ ಗೊಂಬೆ ಧಾನ್ಯ ಅಥವಾ ಫಲವನ್ನು ಇಟ್ಟುಕೊಳ್ಳುವುದೂ ಉಂಟು. ಸಾಮಾನ್ಯವಾಗಿ ‘ಶ್ರೀಲಕ್ಷ್ಮ್ಯೈ ನಮಃ’ ಎಂಬ ಮಂತ್ರದಿಂದ ಸಂಕ್ಷೇಪವಾಗಿಯೇ ಪೂಜೆ ನಡೆಯುತ್ತದೆ. ಪ್ರಸಾದವನ್ನು ಸಾರ್ವಜನಿಕವಾಗಿ ವಿತರಿಸಲಾಗುತ್ತದೆ.

ಪೂಜೆಯ ಸ್ಥಾನವು ಗೋಮಯ ರಂಗವಲ್ಲಿಗಳಿಂದ ಶುದ್ಧವಾಗಿರಬೇಕು. ದೀಪಾವಳಿಯಲ್ಲಿ ಲಕ್ಷ್ಮೀದೇವಿಯು ಎಲ್ಲಾ ಮನೆಗಳಿಗೂ ಹೋಗುವಳೆಂದೂ ಅಲ್ಲಿ ಶುಚಿತ್ವವನ್ನು ಅಪೇಕ್ಷಿಸುವಳೆಂದೂ ಹೇಳಲಾಗಿದೆ. ಈ ಕಾರಣದಿಂದಲೇ ದೀಪಾವಳಿಗೆ ಮೊದಲು ಮನೆಯನ್ನು ಸುಣ್ಣ ಬಣ್ಣಗಳಿಂದ ಪರಿಷ್ಕರಿಸಲಾಗುತ್ತದೆ.

ಪೂಜೆಯನ್ನು ಮಾಡುವವನೂ ಶುದ್ಧವಾಗಿರಬೇಕು. ಸ್ನಾನ ಮಾಡಿ ತಿಲಕವನ್ನು ಧರಿಸಿರಬೇಕು. ಪೂಜೆಯ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡು ಪೂಜೆಯನ್ನು ಆರಂಭಿಸಬೇಕು. ಅರಿಸಿನ ಕುಂಕುಮ ಧಾನ್ಯ ದರ್ಭೆ ಹೂ ಹಣ್ಣು ಹಾಲು ಮೊಸರು ತುಪ್ಪ ಜೇನು ಬೆಲ್ಲ ಎಣ್ಣೆ ಕಾಡಿಗೆ ಬೆಳ್ಳಿ ಚಿನ್ನ ರತ್ನ ಕನ್ನಡಿ ಚವರಿ ಧೂಪ ದೀಪ ಕರ್ಪೂರ ಆರತಿ ಘಂಟೆ ತೆಂಗು ಬಾಳೆಹಣ್ಣು ಅಡಿಕೆ ತಾಂಬೂಲ ದಕ್ಷಿಣೆ ಕಲಶ ಬಳೆ ಹಣಿಗೆ ಕೆಂಪುವಸ್ತ್ರ ಸೀರೆ ಬಿಲ್ವಪತ್ರೆ ಶ್ರೀಗಂಧ ಮೊದಲಾದ ಸಾಮಗ್ರಿಗಳ ಮೂಲಕ ಪೂಜೆಯನ್ನು ಮಾಡಬೇಕು.

ಮಧ್ಯಾಹ್ನ ಉಪವಾಸ ಮಾಡಿ ಸಾಯಂಕಾಲ ಸ್ಥಿರವಾದ ಆಸನದಲ್ಲಿ ಕುಳಿತು, ಪ್ರಾಣಾಯಾಮ ಮಾಡಿ ಗಣಪತಿಯೇ ಮೊದಲಾದ ದೇವತೆಗಳನ್ನೂ ಗುರು–ಹಿರಿಯರನ್ನೂ ಸ್ಮರಿಸಿ ಸುಮುಹೂರ್ತವನ್ನು ಭಾವಿಸಿ, ದೇಶಕಾಲಾದಿಗಳನ್ನು ಹೇಳಿ ಲಕ್ಷ್ಮೀನಾರಾಯಣನ ಪ್ರೀತಿಗಾಗಿ ಪೂಜಿಸುವ ಸಂಕಲ್ಪ ಮಾಡಬೇಕು; ಕ್ಷೇತ್ರಾಧಿಪತಿಯನ್ನು ಪ್ರಾರ್ಥಿಸಿ ಫಲ ತಾಂಬೂಲವನ್ನಿಟ್ಟು ವಾಸ್ತುಪೂಜೆಯನ್ನು ಮಾಡಬೇಕು. ಪುಣ್ಯಾಹವನ್ನು ವಾಚಿಸಿ ಆಸನಾದಿ ವಿಧಿಯನ್ನು ಮಾಡಬೇಕು. ನದಿಗಳನ್ನು ಸ್ಮರಿಸಿ ಕಲಶಾರ್ಚನೆ ಮಾಡಬೇಕು. ಶಂಖಾರ್ಚನೆ ಆತ್ಮಾರ್ಚನೆ ಮಂಡಪಾರ್ಚನೆ ದ್ವಾರಪಾಲಪೂಜೆ ಪೀಠಪೂಜೆ ನವಶಕ್ತಿಪೂಜೆಗಳನ್ನು ಕ್ರಮವಾಗಿ ಮಾಡಿ ಸುವರ್ಣಪೀಠವನ್ನು ಕಲ್ಪಿಸಿ ಅದರ ಮೇಲೆ ಅಷ್ಟದಳ ಪದ್ಮವನ್ನು ಬರೆದು ಕಲಶ, ಯಂತ್ರ ಅಥವಾ ಚಿತ್ರ ಸ್ಥಾಪಿಸಬೇಕು. ಭೂಮಿಯನ್ನು ಸ್ಪರ್ಶಿಸಿ, ಧಾನ್ಯರಾಶಿಯಲ್ಲಿ ಕಲಶವನ್ನು ಇಟ್ಟು, ಷೋಡಶೋಪಚಾರ ಪೂಜೆ ಮಾಡಬೇಕು.

ಬಳಿಕ ನವಗ್ರಹ ದಿಕ್ಪಾಲಕರು ಗರುಡ ಭೂಮಿಗಳನ್ನು ಆವಾಹಿಸಿ, ಲಕ್ಷ್ಮೀ ಪ್ರತಿಮೆಯನ್ನು ಸ್ಥಾಪಿಸಿ, ಪುಷ್ಪಾಂಜಲಿಯೊಂದಿಗೆ ಧ್ಯಾನಿಸಿ ಆವಾಹಿಸಿ, ಪ್ರಾಣಪ್ರತಿಷ್ಠೆ ಮಾಡಬೇಕು. ಕ್ರಮವಾಗಿ ಆಸನ ಪಾದ್ಯ ಅರ್ಘ್ಯ ಆಚಮನ ಮಧುಪರ್ಕ ತೈಲಾಭ್ಯಂಗ ಆದಮೇಲೆ ಶುದ್ಧೋದಕ ಸ್ನಾನಗಳೊಂದಿಗೆ ಮಹಾಭಿಷೇಕ ಮಾಡಬೇಕು.ಅರಿಸಿನ ಕುಂಕುಮ ಕಾಡಿಗೆ ಸಿಂಧೂರ ಪರಿಮಳದ್ರವ್ಯ ಅಕ್ಷತೆ ಹೂಗಳನ್ನು ಸಮರ್ಪಿಸಬೇಕು. ಪತ್ರಪೂಜೆ ಪುಷ್ಪಪೂಜೆ ಅಂಗಪೂಜೆ ಆವರಣಪೂಜೆ ದ್ವಾದಶನಾಮಪೂಜೆ ಅಷ್ಟೋತ್ತರ ಶತನಾಮಪೂಜೆ ಸಹಸ್ರನಾಮಪೂಜೆಗಳನ್ನು ಯಥಾಶಕ್ತಿ ಮಾಡಿದ ಮೇಲೆ ಧೂಪ ದೀಪ ನೈವೇದ್ಯ ಫಲಸಮರ್ಪಣ ತಾಂಬೂಲ ದಕ್ಷಿಣೆ ಮಂಗಳಾರತಿ ಮಂತ್ರಪುಷ್ಪ ರಾಜೋಪಚಾರ (ಅಂದರೆ ಪಾದುಕೆ ಛತ್ರ ಚಾಮರ ಕನ್ನಡಿ ಬೀಸಣಿಗೆ ಉಯ್ಯಾಲೆ)ಗಳನ್ನು ಸಮರ್ಪಿಸಿದ ಮೇಲೆ ಪ್ರದಕ್ಷಿಣ ನಮಸ್ಕಾರ ಪ್ರಾರ್ಥನೆಗಳನ್ನು ಮಾಡಬೇಕು.

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ
ನಮೋಸ್ತು ತೇ ||

– ಮುಂತಾದ ಲಕ್ಷ್ಮೀದೇವಿಯ ಸ್ತೋತ್ರಗಳನ್ನು ಹೇಳಬಹುದು. ಪೂಜೆಯನ್ನು ಮುಗಿಸಿ ಪ್ರಸಾದವನ್ನು ಎಲ್ಲರಿಗೂ ಹಂಚಬೇಕು.

ಬಲಿಪಾಡ್ಯಮಿ
ಬಲಿಪಾಡ್ಯದ ದಿನ ಬಲಿಪೂಜೆ ದೀಪೋತ್ಸವ ಗೋಕ್ರೀಡೆ ಗೋವರ್ಧನಪೂಜೆ, ಮಾರ್ಗಪಾಲೀ ಬಂಧನ, ಹಗ್ಗವನ್ನು ಜಗ್ಗುವುದು, ಹೊಸ ವಸ್ತ್ರಧಾರಣ, ಸ್ತ್ರೀಕರ್ತೃಕ ನೀರಾಜನ, ಮಂಗಲ ಮಾಲಿಕೆ ಮುಂತಾದವುಗಳನ್ನು ಮಾಡಬೇಕು.ಬಲಿ ಚಕ್ರವರ್ತಿಯ ಪ್ರತಿಮೆಯ ಪೂಜೆಯನ್ನು ಮಾಡಬೇಕು. ಈ ದಿನವನ್ನು ಯಾವ ಮನೋಭಾವದಿಂದ ಕಳೆಯುವರೋ, ಅದರ ಪ್ರಭಾವ ಇಡಿಯ ವರ್ಷದಲ್ಲಿಯೂ ಆಗುವುದು ಎನ್ನುವುದುಂಟು.

ಈ ದಿನ ಪಗಡೆಯ ಆಟವನ್ನು ಆಡಬೇಕೆಂದು ಹೇಳಲಾಗಿದೆ. ಮಧ್ಯಾಹ್ನ ಬಂಧುಗಳೊಂದಿಗೆ ಮೃಷ್ಟಾನ್ನ ಭೋಜನ ಮಾಡಬೇಕು. ಸಂಜೆ ದೀಪೋತ್ಸವ ಮಾಡುವುದರಿಂದ ಸಂಪತ್ತು ಸ್ಥಿರವಾಗುವುದು. ದೀಪಗಳಿಂದ ಉತ್ಸವ ಮಾಡಿದರೆ, ಆ ಮನೆಯಲ್ಲಿ ದೀಪವು ಯಾವಾಗಲೂ ಉಳಿಯುವುದು ಎನ್ನಲಾಗಿದೆ. ಲಕ್ಷ್ಮೀಪೂಜೆ ಮತ್ತು ಕುಬೇರ ಪೂಜೆಯನ್ನು ಅಲಂಕೃತ ಗೋವುಗಳಲ್ಲಿ ಮಾಡುತ್ತಾರೆ. ಈ ದಿನ ಹಾಲು ಕರೆಯಬಾರದು ಹಾಗೂ ಗೋವುಗಳ ಮೇಲೆ ಒಜ್ಜೆಯನ್ನು ಹೇರಬಾರದು. ಗೋಮಯ ಅಥವಾ ಅನ್ನದ ರಾಶಿಯನ್ನು ಮಾಡಿ ಅದನ್ನೇ ಗೋವರ್ಧನವೆಂದು ತಿಳಿದು ಪೂಜಿಸುವುದರ ಜೊತೆಗೆ ಗೋಪಾಲಪೂಜೆಯನ್ನೂ ಮಾಡಬೇಕು.

ಊಟವಾದ ಮೇಲೆ, ಪೂರ್ವ ದಿಕ್ಕಿನಲ್ಲಿ ಜೊಂಡುಹುಲ್ಲಿನಿಂದ ಗಟ್ಟಿಯಾದ ಹಗ್ಗವನ್ನು ಮಾಡಿ ಎತ್ತರವಾದ ಮರಕ್ಕೆ ಕಟ್ಟುವುದನ್ನು ಮಾರ್ಗಪಾಲೀಬಂಧನ ಎನ್ನುತ್ತಾರೆ. ಆ ಮರದ ಅಡಿಯಲ್ಲಿ ಎಲ್ಲರೂ ಹೋಗಬೇಕು. ಹಗ್ಗವನ್ನು ಎಳೆದಾಡಲು ಜಾತಿ ವಯಸ್ಸು ಅಂತಸ್ತು ಮುಂತಾದ ಭೇದವನ್ನು ಮಾಡುವಂತಿಲ್ಲ. ಸ್ತ್ರೀಯರು ಬೆಳಿಗ್ಗೆ ನೀರಾಜನ ಮಾಡಬೇಕು. ರಾತ್ರಿಯಲ್ಲಿ ಎಲ್ಲರೂ ಸೇರಿ ಸಂಗೀತೋತ್ಸವವನ್ನು ಮಾಡಬೇಕು.

ದೀಪಗಳ ಸಾಲು
ದೀಪಾವಳಿ ನಮ್ಮ ಹಬ್ಬಗಳ ಸಾಲಿನಲ್ಲಿ ಅತ್ಯಂತ ಪ್ರಮುಖವಾದುದು. ದೀಪಾವಳಿ ಎಂದರೆ ದೀಪಗಳ ಸಾಲು ಎಂದೇ ಅರ್ಥ.

ದೀಪಾವಳಿ ಒಂದು ದಿನದ ಹಬ್ಬವಲ್ಲ; ಪ್ರಧಾನವಾದ ಆಚರಣೆ ಮೂರು ದಿನಗಳು – ಎಂದರೆ ನರಕಚತುರ್ದಶಿ, ಅಮಾವಾಸ್ಯೆ ಮತ್ತು ಬಲಿಪಾಡ್ಯಮಿ – ನಡೆದರೂ ಹಬ್ಬ ಆರಂಭವಾಗುವುದು ನೀರು ತುಂಬುವ ಹಬ್ಬದಿಂದಲೇ. ಅಂದು ಅಪಮೃತ್ಯುವಿನ ನಿವಾರಣೆಗಾಗಿ ಮನೆಯ ಹೊರಗಡೆ ದೀಪವನ್ನು ಬೆಳಗಿಸಲಾಗುತ್ತದೆ. ಇದೇ ‘ಯಮದೀಪ’.

ದೀಪಾವಳಿಯ ಆಚರಣೆಯೂ ವೈವಿಧ್ಯಪೂರ್ಣವಾಗಿದೆ. ನರಕಾಸುರನ ಸಂಹಾರವನ್ನು ಉತ್ಸವವನ್ನು ಆಚರಿಸಿ ಸಂಭ್ರಮಿಸಲಾಗುತ್ತದೆ. ಬಳಿಕ ಲಕ್ಷ್ಮೀಪೂಜೆ, ಬಲೀಂದ್ರನ ಪೂಜೆ, ಮಹಾದೇವನ ಪೂಜೆ, ಕುಬೇರನ ಪೂಜೆ, ಯಮಧರ್ಮನ ಪೂಜೆ, ಗೋಪೂಜೆ, ಗೋವರ್ಧನಪೂಜೆ – ಹೀಗೆ ಪೂಜೆಗಳ ಸಾಲೇ ನಡೆಯುತ್ತದೆ.

ಕತ್ತಲು ಎನ್ನುವುದು ಅಜ್ಞಾನಕ್ಕೆ ಸಂಕೇತ. ಕತ್ತಲನ್ನು ಗೆಲ್ಲದ ಹೊರತು ಜೀವನದಲ್ಲಿ ಮುಂದುವರೆಯಲು ಆಗದು. ಇದರ ಧ್ವನಿಯನ್ನೇ ದೀಪಾವಳಿಯಲ್ಲಿ ನಾವು ನೋಡುವುದು. ನಮ್ಮ ಮನೆ, ಮಂದಿರ, ರಸ್ತೆಗಳು, ನದೀತೀರಗಳಲ್ಲಿ ಮಾತ್ರವಲ್ಲದೆ, ನಮ್ಮ ಅಂತರಂಗದಲ್ಲೂ ಬೆಳಕು ಮೂಡಬೇಕು ಎಂಬ ಆಶಯವೇ ದೀಪಾವಳಿಯ ಹಬ್ಬದಲ್ಲಿರುವುದು.

ಕತ್ತಲೆಯ ಸೋಲನ್ನು, ಕೆಟ್ಟತನದ ಸೋಲನ್ನು ಸಂಭ್ರಮಿಸಿ, ಬೆಳಕಿನ ಗೆಲುವನ್ನೂ ಒಳಿತನ ವೈಭವವನ್ನೂ ಉತ್ಸವನ್ನಾಗಿ ಆಚರಿಸುವ ಉತ್ಸಾಹವೇ ಪಟಾಕಿ–ಬಾಣಬಿರುಸುಗಳಲ್ಲಿ ಕಾಣುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT