ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಧ್ಯಾನದಲ್ಲಿ ಮಿಂದೆದ್ದ ಭಕ್ತರು

ಚಿಂಚೋಳಿ: ವಿವಿಧೆಡೆ ಮಹಾಶಿವರಾತ್ರಿ ಆಚರಣೆ
Last Updated 22 ಫೆಬ್ರುವರಿ 2020, 11:26 IST
ಅಕ್ಷರ ಗಾತ್ರ

ಚಿಂಚೋಳಿ: ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ಶಿವಭಕ್ತರು ಉಪವಾಸ ಆಚರಿಸಿ ಶಿವಧ್ಯಾನದಲ್ಲಿ ಮಿಂದೆದ್ದರು. ಬೆಳಿಗ್ಗೆಯಿಂದಲೇ ಉಪವಾಸ ಆಚರಿಸಿದ ಭಕ್ತರು ಸಂಜೆಗೆ ಮನೆಯಲ್ಲಿ ಇಷ್ಟಲಿಂಗ ಪೂಜೆ ನಡೆಸಿಕೊಂಡು ಫಲಹಾರ ಸೇವಿಸುವ ಮೂಲಕ ಉಪವಾಸಕ್ಕೆ ತೆರೆ ಎಳೆದರು.

ಪಟ್ಟಣದ ಹೊರ ವಲಯದ ಮುಲ್ಲಾಮಾರಿ ನದಿ ದಂಡೆಯಲ್ಲಿರುವ ಪಂಚಲಿಂಗೇಶ್ವರ ಬುಗ್ಗೆಯಲ್ಲಿ ಮಹಾಶಿವರಾತ್ರಿ ಆಚರಣೆ ಕಳೆಗಟ್ಟಿತ್ತು. ಬೆಳಿಗ್ಗೆ ಪಂಚಲಿಂಗಗಳಿಗೆ ಅಭಿಷೇಕ ನಡೆಸಿದ ಪಂಚಲಿಂಗೇಶ್ವರ ದೇವಸ್ಥಾನ ಟ್ರಸ್ಟ್‌ನ ಭಕ್ತರು ಮಧ್ಯಾಹ್ನ ಹೋಮ ನಡೆಸಿದರು.

ಸಂಜೆಗೆ ಅವಳಿ ಪಟ್ಟಣಗಳಾದ ಚಿಂಚೋಳಿ ಮತ್ತು ಚಂದಾಪುರದ ಶಿವಭಕ್ತರು ಬಂದು ಪಂಚಲಿಂಗೇಶ್ವರನಿಗೆ ನೈವೇದ್ಯ ಅರ್ಪಿಸಿ ದೇವರ ದರ್ಶನ ಪಡೆದರು.

ಭಕ್ತರಿಗಾಗಿ ದೇವಸ್ಥಾನದ ವತಿಯಿಂದ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಗಾಯಕ ಮರೆಪ್ಪ ಭಜಂತ್ರಿ ಅವರು ಶುಶ್ರಾವ್ಯವಾಗಿ ಭಕ್ತಿಗೀತೆಗಳು ಹಾಡಿ ಜನರನ್ನು ರಂಜಿಸಿದರು. ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಶಾಖೆಯಿಂದ ಆತ್ಮದ ವಿಕಾಸ ಹಾಗೂ ಪರಮಾತ್ಮ ಕುರಿತ ಚಿತ್ರಪಟಗಳ ಪ್ರದರ್ಶನ ನಡೆಯಿತು.

ಅರ್ಚಕರಾದ ಅನಂತಾಚಾರ ಪುರಾಣಿಕ, ವಾಸುದೇವರಾವ್ ಸೊಂಡೂರು, ಜಿಲ್ಲಾ ಪಂಚಾಯಿತಿ ಸದಸ್ಯ ಗೌತಮ ಪಾಟೀಲ, ಜಗನ್ನಾಥ ಅಗ್ನಿಹೋತ್ರಿ, ಡಾ.ಅಜಯ ಕಾಟಾಪುರ, ಪ್ರಮೋದ ಓಂಕಾರ, ಭಾಸ್ಕರ್ ಕುಲಕರ್ಣಿ, ಮಲ್ಲಿಕಾರ್ಜುನ ಚಿಂಚೋಳಿ, ರೇವಣಸಿದ್ದಪ್ಪ ದಾದಾಪುರ, ಅನಂತ ಓಂಕಾರ, ವಿಶ್ವನಾಥ ನಾಯನೂರ, ಭೋಗೇಶ್ವರರಾವ್ ಪಂಚಾಳ್, ಶಾಂತವೀರ ಹೀರಾಪುರ ಮೊದಲಾದವರು ಇದ್ದರು.

ಚಂದಾಪುರ: ಚನ್ನವೀರ ನಗರದ ಶಿವಮಂದಿರದಲ್ಲಿ ಭಕ್ತರ ಸಂದಣಿ ಹೆಚ್ಚಾಗಿ ಕಂಡು ಬಂತು.ಇಡೀ ದೇವಾಲಯದಲ್ಲಿ ಭಜನೆ, ಶಿವಧ್ಯಾನ, ಇಷ್ಟಲಿಂಗ ಪೂಜೆ ಮೊದಲಾದ ಚಟುವಟಿಕೆಗಳು ನಡೆದವು. ಸಂಜೆಗೆ ಮನೆಯಿಂದ ಫಲಾಹಾರದ ನೈವೇದ್ಯ ತೆಗೆದುಕೊಂಡು ಹೋದ ಭಕ್ತರು ಶಿವನಿಗೆ ಅರ್ಪಿಸಿ ಮರಳಿದರು. ಮಹಾಶಿವರಾತ್ರಿ ಪ್ರಯುಕ್ತ ಪಟ್ಟಣದ ಹಾರಕೂಡ ಚನ್ನಬಸವ ಶಿವಯೋಗಿಗಳ ಮಠ ಹಾಗೂ ಮಹಾಂತೇಶ್ವರ ಮಠದಲ್ಲಿ ಪೂಜ್ಯರ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ ಹಾಗೂ ನೈವೇದ್ಯ ಸಮರ್ಪಣೆ ಭಕ್ತಿ ಶ್ರದ್ಧೆಯಿಂದ ಜರುಗಿತು.

ಕೆಲವು ಶಿವಭಕ್ತರು ಇಲ್ಲಿಗೆ ಸಮೀಪದ ಚಾಂಗ್ಲೇರಾ ವೀರಭದ್ರೇಶ್ವರ, ಹುಮನಾಬಾದ್‌,ವೀರಭದ್ರೇಶ್ವರ, ಗೊಟ್ಟಮಗೊಟ್ಟದ ಬಕ್ಕಪ್ರಭುಗಳ ದೇವಾಲಯ ಹಾಗೂ ಮಿರಿಯಾಣದ ಪಾಪನಾಶ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT