ಗುರುವಾರ , ಜನವರಿ 27, 2022
27 °C
ಭಾಗ 17

ವೇದವ್ಯಾಸರ ಶಿವಪುರಾಣಸಾರ | ಜನರಿಗೆ ಸದ್ಬುದ್ಧಿ ಕೊಡುವ ಶಿವಪುರಾಣ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಪ್ರಯಾಗದ ಋಷಿ–ಮುನಿಗಳು ಹೇಳಿದ ಮಾತನ್ನು ಕೇಳಿದ ಸೂತಪುರಾಣಿಕರು, ಮೊದಲಿಗೆ ತಮ್ಮ ಮನಸ್ಸಿನಲ್ಲಿ ಪರಮೇಶ್ವರನನ್ನು, ತಮ್ಮ ಗುರು ವೇದವ್ಯಾಸರನ್ನು ಧ್ಯಾನಿಸುತ್ತಾರೆ. ನಂತರ ಋಷಿಮುನಿಗಳನ್ನುದ್ದೇಶಿಸಿ ‘ಎಲೈ ಸಾಧುಗಳಾದ ಮುನಿಗಳೇ, ನೀವು ಕೇಳಿದ ಪ್ರಶ್ನೆ ಒಳ್ಳೆಯದು. ನಿಮ್ಮ ಪ್ರಶ್ನೆಗಳು ಮೂರು ಲೋಕಕ್ಕೂ ಹಿತವನ್ನುಂಟುಮಾಡುವುದಾಗಿವೆ. ನಿಮ್ಮ ಮೇಲಿನ ವಿಶ್ವಾಸದಿಂದ ನನ್ನ ಗುರುವಾದ ವ್ಯಾಸಮಹರ್ಷಿಯ ಆಜ್ಞೆ ಅನುಸಾರ, ನೀವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವೆ. ವಿಶ್ವಾಸದಿಂದ ಕೇಳಿರಿ’ ಎನ್ನುತ್ತಾನೆ.

ಸಮಸ್ತ ವೇದಾಂತ ಸಿದ್ಧಾಂತಗಳ ಸಾರಭೂತವಾಗಿರುವ, ಸಮಸ್ತ ಪಾಪಗಳನ್ನು ನಾಶಮಾಡುವ, ಪರಲೋಕದಲ್ಲಿ ಉತ್ತಮಗತಿ ಕೊಡುವ, ಕಲಿಗಾಲದ ಪಾಪಗಳನ್ನೆಲ್ಲ ನಾಶಮಾಡುವ ಅತ್ಯುತ್ತಮವಾದ ಸಾಧನ ಎಂದರೆ ಶಿವಪುರಾಣ. ಶಿವನಿಂದ ಸನತ್ಕುಮಾರ ದೇವನಿಗೆ, ಸನತ್ಕುಮಾರನಿಂದ ವೇದವ್ಯಾಸರಿಗೆ, ವ್ಯಾಸರಿಂದ ನನಗೆ ತಿಳಿದ ಶಿವಪುರಾಣದಿಂದ ಕಲಿಕಾಲದಲ್ಲಿ ಜನರು ಮಾಡುತ್ತಿರುವ ದುರಾಚಾರಗಳು ತೊಲಗಿ, ಸದಾಚಾರ ಗುಣಗಳು ಮೂಡುತ್ತವೆ. ಅದರಲ್ಲಿ ವರ್ಣಿತವಾಗಿರುವ ಪರಮೇಶ್ವರನ ಮಹಾತ್ಮೆ ಕೇಳಿದ ಸತ್ಪುರುಷರು ಉತ್ಕರ್ಷರಾಗುವರು. ಇದು ಚತುರ್ವಿಧ ಪುರುಷಾರ್ಥಗಳನ್ನು ಕೊಡುವುದು. ಅಂತಹ ಶಿವಪುರಾಣವನ್ನು ನಿಮಗೆ ಹೇಳುವೆನು ಕೇಳಿ’ ಅಂತ ಸೂತಮುನಿ ಶಿವಮಹಾಪುರಾಣವನ್ನು ಹೇಳುತ್ತಾನೆ.

‘ಜಗತ್ತಿನಲ್ಲಿ ಶಿವಪುರಾಣವು ಉದಯಿಸುವವರೆಗೂ ಕಲಿಕಾಲ ಸಂಬಂಧವಾದ ಮಹೋತ್ಪಾತಗಳು ನಿರ್ಭಯವಾಗಿ ಸಂಭವಿಸುವವು. ಸಮಸ್ತ ಶಾಸ್ತ್ರಗಳೂ ಒಂದಕ್ಕೊಂದು ವಿರುದ್ಧವಾಗಿ ವರ್ತಿಸುತಾ, ಬ್ರಹ್ಮವಿದ್ಯೆಯನ್ನು ಯಥಾವತ್ತಾಗಿ ವಿವರಿಸಲಾರದೆ ಇರುವವು. ಹಾಗೆಯೇ ಶಿವಪುರಾಣ ಪ್ರಪಂಚಕ್ಕೆ ಬರದಿದ್ದರೆ, ಜ್ಞಾನಿಗಳಿಗೂ ಶಿವನ ಪರಸ್ವರೂಪ ತಿಳಿಯಲು ಸಾಧ್ಯವಾಗುವುದಿಲ್ಲ. ಶಿವಪುರಾಣವು ಪ್ರಪಂಚಕ್ಕೆ ಬರುವವವರೆಗೂ ಯಮಭಟರು ನಿರ್ಭಯರಾಗಿ ಸಂಚರಿಸುವರು. ಜನರು ಮುಕ್ತಿಮಾರ್ಗವನ್ನು ಕಾಣದೆ ಪಾಪ ಮಾಡುತ್ತಿರುತ್ತಾರೆ. ಇಂಥ ಪಾಪಿಷ್ಠರನ್ನು ಕ್ರೂರರಾದ ಯಮಕಿಂಕರರು ನರಕಕ್ಕೆ ಒಯ್ದು ಚಿತ್ರಹಿಂಸೆ ನೀಡುವರು.

ಶಿವಪುರಾಣ ಪ್ರಪಂಚಕ್ಕೆ ಬರುವವವರೆಗೂ ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು ಎಂಬ ನಿರ್ಣಯಿಸುವ ಬುದ್ಧಿಶಕ್ತಿಯೂ ಜನರಲ್ಲಿರುವುದಿಲ್ಲ. ಶಿವಪುರಾಣದಿಂದ ಜ್ಞಾನವಂತರಾದ ಜನ ಪುನೀತರಾಗುವರು. ಶಿವಪುರಾಣ ಎಲ್ಲೆಡೆ ಮೊಳಗುವುದರಿಂದ ಪುಣ್ಯ ಎಲ್ಲೆಡೆ ವ್ಯಾಪಿಸಿ, ಯಮಕಿಂಕರರು ಭೂಮಿಗೆ ಬರುವುದು ಕಡಿಮೆಯಾಗುತ್ತದೆ. ಜನರಿಗೆಲ್ಲಾ ದುಃಖ ಕಳೆದು, ಸರ್ವಸುಖ ಮಾತ್ರವೇ ಲಭಿಸುತ್ತದೆ. ಶಿವಪುರಾಣ ಪ್ರಪಂಚದಲ್ಲಿ ಉದಯಿಸುವವರೆಗೆ ಸಮಸ್ತ ತೀರ್ಥಗಳೂ, ನಾನು ಹೆಚ್ಚು ತಾನು ಹೆಚ್ಚೆಂದು ತಮ್ಮತಮ್ಮಲ್ಲಿ ವಾದವಿವಾದ ಮಾಡುತ್ತವೆ. ಸಮಸ್ತ ಮಂತ್ರಗಳೂ ಕ್ಷೇತ್ರಗಳೂ ಪೀಠಗಳೂ ದಾನಗಳೂ ದೇವತೆಗಳೂ ಶಾಸ್ತ್ರ-ಸಿದ್ಧಾಂತಗಳೆಲ್ಲವೂ, ತಮ್ಮ ತಮ್ಮಲ್ಲೇ ಉತ್ತಮಸ್ಥಾನಕ್ಕಾಗಿ ವಾದವಿವಾದ ಸೃಷ್ಟಿ ಮಾಡುತ್ತವೆ. ಆದರೆ ಶಿವಪುರಾಣವು ಪ್ರಕಾಶವಾದ ಮೇಲೆ ಉತ್ತಮಸ್ಥಾನ ಶಿವಪುರಾಣಕ್ಕೆ ಮಾತ್ರ ಲಭಿಸಿ, ಎಲ್ಲಾ ವಾದವಿವಾದಗಳು ನಿಂತುಹೋಗುತ್ತವೆ.

ಜನರು ತಮಗೆ ಇಷ್ಟವಾದ ನದಿಯ ತೀರ್ಥ ಶ್ರೇಷ್ಠವಾದದ್ದು ಅಂತ ವಾದ ಮಾಡುತ್ತಾರೆ. ದಾನದ ವಿಷಯಗಳಲ್ಲೂ ಹಾಗೆಯೇ, ತಮಗೆ ಇಂತಹ ದಾನ ಪುಣ್ಯಪ್ರದ ಅಂತ ಭ್ರಮಿಸಿದ್ದನ್ನ ನಂಬಿ, ಇತರೆ ದಾನ ವ್ಯರ್ಥ ಅಂತ ವಾದವಿವಾದದ ಅಶಾಂತಿ ಸೃಷ್ಟಿಸುತ್ತಾರೆ. ಪುಣ್ಯಕ್ಷೇತ್ರಗಳಲ್ಲೂ ಭೇದಭಾವ ಮಾಡಿ, ತಮಗೆ ಅನುಕೂಲವಾಗುವ ಕ್ಷೇತ್ರ ಪುಣ್ಯವೆಂದು ಜನರನ್ನು ದಿಕ್ಕು ತಪ್ಪಿಸುತ್ತಾರೆ. ಇಂಥ ಚಿತ್ತಭ್ರಾಂತಿ, ಸ್ವಾರ್ಥಬುದ್ಧಿಯಿಂದ ಜನ ಆಚಾರ-ವಿಚಾರಗಳಲ್ಲಿ ವಿವಾದ ಸೃಷ್ಟಿಸಿ, ಜನರ ಮಧ್ಯೆ ಭೇದಭಾವ ತೋರಿಸುತ್ತಾರೆ. ಆದರೆ ಈ ಭಾವಗಳು ಶಿವಪುರಾಣ ಪ್ರಚಾರವಾದನಂತರ ನಾಶವಾಗುತ್ತವೆ. ಶಿವಮಹಾತ್ಮೆಯ ಶ್ರೇಷ್ಠತೆಯನ್ನು ತಿಳಿದ ಜನ ಶಿವಪುರಾಣಕ್ಕೆ ಶ್ರೇಷ್ಠ ಸ್ಥಾನ ನೀಡುತ್ತಾರೆ. ಶಿವಪುರಾಣಕ್ಕಿಂತ ಮತ್ತೊಂದು ಪುರಾಣ ಮತ್ತೊಂದಿಲ್ಲ ಅಂತ ಜನ ಆತ್ಮಸಂತೋಷದಿಂದ ಸಂಭ್ರಮಿಸುತ್ತಾರೆ. ಪುಣ್ಯತೀರ್ಥ, ಪುಣ್ಯಕ್ಷೇತ್ರ ಮತ್ತು ಸಕಲ ದಾನಗಳಲ್ಲೂ ಶಿವಪುರಾಣವೇ ಶ್ರೇಷ್ಟ. ಜೀವನ್ಮುಕ್ತಿಗೆ ಶಿವಪುರಾಣ ಕೇಳುವುದೇ ಸರಿಯಾದ ಮಾರ್ಗ’ – ಎಂಬ ದೃಢ ನಿರ್ಧಾರಕ್ಕೆ ಬರುತ್ತಾರೆ ಅಂತ ತಿಳಿಸುತ್ತಾನೆ, ಸೂತಮುನಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು