ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಸೃಷ್ಟಿ ರಹಸ್ಯ ಹೇಳಿದ ಬ್ರಹ್ಮ

ಅಕ್ಷರ ಗಾತ್ರ

ವ್ಯಾಸರ ಪರಮಶಿಷ್ಯ ಸೂತಮುನಿಯು ಹೇಳಿದ ಶಿವಪುರಾಣದ ಮಹಿಮೆಯನ್ನೆಲ್ಲ ಕೇಳಿದ ಪ್ರಯಾಗದ ಮಹಾಸತ್ರಯಾಗದ ಋಷಿಗಳಿಗೆಲ್ಲಾ ಸಂತೋಷವಾಗುತ್ತದೆ. ವೇದಾಂತಸಾರಯುಕ್ತವಾದ, ಅದ್ಭುತವಾದ ಶಿವಪುರಾಣವನ್ನು ತಮಗೆ ಶ್ರವಣಮಾಡಿಸಬೇಕೆಂದು ಸೂತಮುನಿಯನ್ನು ಕೇಳಿಕೊಳ್ಳುತ್ತಾರೆ. ಆಗ ಸೂತಮುನಿಯು ವೇದಸಾರಗಳಿಂದ ಕೂಡಿರುವ ಜಗತ್ತಿನಲ್ಲೆ ಉತ್ಕೃಷ್ಟವಾದ ಶಿವಪುರಾಣವನ್ನು ಹೇಳುತ್ತಾನೆ. ಶಿವಪುರಾಣದಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳೆಂಬ ಮೂರು ವಿಧವಾದ ಮುಕ್ತಿಸಾಧನಗಳು ವರ್ಣಿತವಾಗಿವೆ. ವೇದಾಂತ ಪ್ರತಿಪಾದ್ಯವಾದ ಪರಬ್ರಹ್ಮವಸ್ತುವಿನ ಬಗ್ಗೆ ವಿಶೇಷವಾಗಿ ವರ್ಣಿತವಾಗಿದೆ. ಇದರಲ್ಲಿ ವೇದಗಳ ಸಾರವೂ ಇದೆ ಎಂದು ವಿವರಿಸುತ್ತಾನೆ.

ಬಹು ಪೂರ್ವಕಾಲದಲ್ಲಿ, ಅನೇಕ ಕಲ್ಪಗಳು ಕಳೆದು, ಈ ಶ್ವೇತವರಾಹಕಲ್ಪ ಬಂದಾಗ, ಸೃಷ್ಟಿಕಾರ್ಯ ನಡೆಯುತ್ತಿತ್ತು. ಆಗ ತ್ರಿವೇಣಿಸಂಗಮವಾದ ಪ್ರಯಾಗಕ್ಷೇತ್ರದಲ್ಲಿ ವಾಸಿಸುತ್ತಿದ್ದ ಋಷಿಗಳಲ್ಲಿ ಒಂದು ವಿವಾದ ಹುಟ್ಟಿತು. ಯಾವ ವಸ್ತು ಶ್ರೇಷ್ಠ? ಯಾರು ಪರಮಶ್ರೇಷ್ಠರು ಎಂಬಿತ್ಯಾದಿ ಚರ್ಚೆಗಳು ವಿಪರೀತವಾಗಿ ವಿವಾದದ ರೂಪ ಪಡೆದವು. ಪ್ರಯಾಗ ಅಂದರೆ ಮೂರು ನದಿಗಳ ಸಂಗಮ. ಈ ಮೂರು ನದಿಗಳ ಎರಡು ಕಡೆಯ ದಡಗಳು ಸೇರಿಸಿದರೆ ಒಟ್ಟು ಆರು ತೀರಗಳಾಗುತ್ತವೆ. ಇಂಥ ಆರು ತೀರ ಇರುವ ಪ್ರಯಾಗದಲ್ಲಿ ವಾಸಿಸುವ ಋಷಿಗಳಿಗೆ ಷಟ್ಕುಲೀನರೆಂದು ಕರೆಯುತ್ತಾರೆ. ಇಂಥ ಶ್ರೇಷ್ಠ ಯತಿಗಳಲ್ಲಿ ಹುಟ್ಟಿದ ಶ್ರೇಷ್ಠತೆಯ ವಿವಾದ ಬಗೆಹರಿಯದೆ, ಪರಿಹಾರಕ್ಕಾಗಿ ಬ್ರಹ್ಮನ ಬಳಿ ಹೋದರು.

ಷಟ್ಕುಲೀನ ಮುನಿಗಳೆಲ್ಲಾ ಸೃಷ್ಟಿಕರ್ತನಾದ ಬ್ರಹ್ಮನ ಬಳಿ ಹೋಗಿ ಕೈಮುಗಿದು ‘ಸಮಸ್ತ ತತ್ವಗಳಿಗಿಂತ ಮತ್ತು ಸಮಸ್ತ ವಸ್ತುಗಳಿಗಿಂತ ಶ್ರೇಷ್ಟನಾದ ಪುರುಷ ಯಾರು?’ ಎಂದು ಕೇಳುತ್ತಾರೆ. ಇಲ್ಲಿ ಸಮಸ್ತ ತತ್ವಗಳೂ ಅಂದರೆ, ಪ್ರಕೃತಿಯಿಂದ ಉಂಟಾದ ಮಹತ್ತಾದ ತತ್ವಗಳು ಅಂತ ಅರ್ಥ. ಸಮಸ್ತ ವಸ್ತುಗಳು ಅಂದರೆ, ಸೃಷ್ಟಿಯ ಚರಾಚರಜೀವಿಗಳಿಗಿಂತಲೂ ಅಂತ ಅರ್ಥ. ಮುನಿಗಳ ಪ್ರಶ್ನೆ ಏನೆಂದರೆ, ಸೃಷ್ಟಿಗೂ ಪೂರ್ವದಲ್ಲಿ ಇದ್ದ ಮತ್ತು ಈಗಿನ ಪ್ರಪಂಚಕ್ಕಿಂತಲೂ ಭಿನ್ನನಾದ ಶ್ರೇಷ್ಠನಾದವ ಯಾರು – ಎಂಬುದಾಗಿತ್ತು. ಸೃಷ್ಟಿಯ ಒಡೆಯನಾದ ಬ್ರಹ್ಮ ಎಲ್ಲಾ ರಹಸ್ಯ ಬಲ್ಲವನಾಗಿದ್ದರಿಂದ ಮುನಿಗಳು ತಮ್ಮ ಪ್ರಶ್ನೆಗೆ ಉತ್ತರ ಬಯಸಿ ಬ್ರಹ್ಮನಲ್ಲಿ ಬಂದಿದ್ದರು. ಆಗ ಬ್ರಹ್ಮ ಸೃಷ್ಟಿರಹಸ್ಯ ಹೇಳುತ್ತಾನೆ.

‘ಯಾವ ಪರಬ್ರಹ್ಮನನ್ನು ಮಾತುಗಳಿಂದ ವರ್ಣಿಸಲು, ಮನಸ್ಸಿನಿಂದ ಧ್ಯಾನಿಸಲೂ ಸಹ ಆಗುವುದಿಲ್ಲವೋ, ಮತ್ತು ಯಾವ ನಿತ್ಯವಸ್ತುವಾದ ಆ ಪರಬ್ರಹ್ಮದಿಂದ ಸೃಷ್ಟಿಕಾಲದಲ್ಲಿ ಬ್ರಹ್ಮ-ವಿಷ್ಣು-ರುದ್ರ-ಇಂದ್ರ ಮೊದಲಾದ ದೇವತೆಗಳೂ ಪಂಚಮಹಾಭೂತಗಳೂ ಇಂದ್ರಿಯಗಳೆಲ್ಲ ಉತ್ಪನ್ನವಾದವೋ, ಅಂತಹ ಜಗದೊಡೆಯನೂ ಸರ್ವಜ್ಞನೂ ಆದ ದೇವದೇವನಾದ ಪರಮೇಶ್ವರನು ಒಬ್ಬನಿದ್ದಾನೆ. ಇಲ್ಲಿ ನಿರ್ಗುಣ ಸ್ವರೂಪವಾದ ಪರಬ್ರಹ್ಮವು ನಿರ್ದೇಶಿಸಲ್ಪಟ್ಟಿದೆ. ಈ ನಿರ್ಗುಣ ಬ್ರಹ್ಮಸ್ವರೂಪವನ್ನು ಮಾತುಗಳಿಂದ ವರ್ಣಿಸುವುದಿರಲಿ, ಮನಸ್ಸಿನಲ್ಲಿ ಸಹ ಹೀಗೆಯೇ ಇರುವುದೆಂದು ಊಹಿಸಿ, ಧ್ಯಾನಮಾಡಲು ಸಹ ಸಾಧಾರಣ ಜನರಿಗೆ ಸಾಧ್ಯವಿಲ್ಲ. ತಪಸ್ವಿಗಳೂ ಸಹ ಪರಬ್ರಹ್ಮನನ್ನು ಸಾಕ್ಷಾತ್ಕರಿಸಲು ಬಹು ಶ್ರಮಪಡುವಷ್ಟು ಅಗಾಧ ಸ್ವರೂಪ ಅವನದು. ಈಗ ನಮಗೆ ಕಾಣುತ್ತಿರುವ ಪ್ರಪಂಚವು ಸೃಷ್ಟಿಪೂರ್ವದಲ್ಲಿ ಈ ಸ್ಥಿತಿಯಲ್ಲಿ ಇರಲಿಲ್ಲ.

‘ಸೃಷ್ಟಿಗೆ ಪೂರ್ವದಲ್ಲಿ ದೃಶ್ಯಪದಾರ್ಥಗಳು ಒಂದೂ ಇರಲಿಲ್ಲ. ಪರಬ್ರಹ್ಮವಸ್ತು ಒಂದೇ ತಾನೇ ತಾನಾಗಿ ಎಲ್ಲೆಲ್ಲಿಯೂ ವ್ಯಾಪಿಸಿತ್ತು. ನಿರ್ಗುಣಾತ್ಮಕವಾದ ಪರಬ್ರಹ್ಮನಲ್ಲಿ ಸೃಷ್ಟಿಮಾಡಬೇಕೆಂಬ ಇಚ್ಛೆ ಬಂದೊಡನೆಯೇ ಪ್ರಕೃತಿಗಳಲ್ಲಿ ರೂಪಾಂತರಗಳುಂಟಾಯಿತು. ಬಳಿಕ ಪ್ರಕೃತಿಯಿಂದ ಮಹದಾಧಿತತ್ವಗಳೂ, ಅವುಗಳಿಂದ ಪಂಚಭೂತಾದಿಗಳೂ ಉದ್ಭವಿಸಿದವು. ಆ ಪಂಚಭೂತಗಳ ಪಂಚೀಕರಣಕ್ರಮದಿಂದ ನಾವು ಈಗ ಕಾಣುತ್ತಿರುವ ದೃಶ್ಯಪ್ರಪಂಚ ಸೃಷ್ಟಿಯಾಯಿತು. ಸತ್ವ–ರಜಸ್ಸು-ತಮೋಗುಣಗಳ ಸಮಾವಸ್ಥೆಯಲ್ಲಿ ಇರುವ ವಸ್ತುವೇ ನಿರ್ಗುಣಾತ್ಮಕ. ಈ ಮೂರು ಗುಣಗಳಲ್ಲಿ ಯಾವುದೊಂದು ಗುಣವೂ ಹೆಚ್ಚುಕಡಿಮೆ ಇಲ್ಲದ, ಸಮಾವಸ್ಥೆಯಲ್ಲಿ ಇರುತ್ತದೆ. ಸೃಷ್ಟಿಕಾಲದಲ್ಲಿ ಈ ಗುಣಗಳು ವ್ಯತ್ಯಸ್ತವಾಗಿ ವಿಷಮಾವಸ್ಥೆಗೆ ಬಂದಾಗ ಹೆಚ್ಚು ಕಡಿಮೆಯಾಗಿ ಮಾರ್ಪಡುವುದು. ಅದೇ ಸೃಷ್ಟಿ ಎಂದು ಸಾಂಖ್ಯದರ್ಶನದಲ್ಲಿ ಹೇಳಲಾಗಿದೆ’ ಅಂತ ಬ್ರಹ್ಮ ಹೇಳುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT