ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಪಾರ್ವತಿಯನ್ನು ಹಡೆದ ಮೇನಾದೇವಿ

ಅಕ್ಷರ ಗಾತ್ರ

ಹಿಮವಂತ ಮತ್ತು ಮೇನಾದೇವಿ ದಂಪತಿ ತಮ್ಮ ಮಗಳಾಗಿ ಮಹೇಶ್ವರಿ ಜನಿಸುವಂತೆ ಭಕ್ತಿಯಿಂದ ಧ್ಯಾನಿಸಿದರು. ಇವರ ಕೋರಿಕೆಯಂತೆ ಮಹೇಶ್ವರಿ ಮತ್ತೆ ಜನ್ಮ ತಾಳಲು ನಿರ್ಧರಿಸಿದಳು. ಹಿಂದಿನ ಜನ್ಮದಲ್ಲಿ ತಂದೆಯಾಗಿದ್ದ ದಕ್ಷನಿಂದ ಅವಮಾನಿತಳಾಗಿ ಯೋಗಸಮಾಧಿಯಿಂದ ಶರೀರವನ್ನು ತ್ಯಜಿಸಿದ್ದ ಉಮಾದೇವಿ, ಈಗ ತನ್ನ ಮಾತನ್ನು ಈಡೇರಿಸಲು ಹಿಮವಂತನ ಪತ್ನಿಯ ಗರ್ಭದಲ್ಲಿ ಜನಿಸಲು ಸಂಕಲ್ಪಮಾಡಿದಳು. ಇದಕ್ಕಾಗಿ ಉಮಾದೇವಿಯು ಹಿಮವಂತನ ಮನಸ್ಸಿನಲ್ಲಿ ಪೂರ್ಣಾಂಶದಿಂದ ನೆಲಸಿದಳು. ಜಗನ್ಮಾತೆಯ ಅನುಗ್ರಹದಿಂದ ಮೇನಾದೇವಿಯು ಉಮಾದೇವಿಯ ಅಂಶವುಳ್ಳ ಗರ್ಭವನ್ನು ಧರಿಸಿದಳು.

ಮೇನಾದೇವಿಯು ಗರ್ಭವನ್ನು ಧರಿಸಿದಾಗ ಅವಳಲ್ಲಿ ಅನೇಕ ಗರ್ಭಲಕ್ಷಣಗಳು ಕಾಣಿಸಿದವು. ಅವಳ ಶರೀರವು ಕೃಶವಾಯಿತು, ಆಭರಣಗಳನ್ನು ಹೊರಲಾರದಂತಾದಳು. ಶರೀರವು ಬಿಳುಪೇರಿ, ಚುಕ್ಕೆಗಳಡಗಿದ ಉಷಃಕಾಲದಂತೆ ಅವಳು ತೋರುತ್ತಿದ್ದಳು. ಮಣ್ಣಿನ ವಾಸನೆ ಮೇನಾದೇವಿ ಮುಖದಿಂದ ಹೊರಸೂಸುತ್ತಿತ್ತು. ಗರ್ಭಿಣಿಯಾಗಿದ್ದ ಮೇನಾದೇವಿ ಪತಿ ಹಿಮವಂತನ ಮನಸ್ಸನ್ನು ರಂಜಿಸುತ್ತಿದ್ದರೆ, ಪತ್ನಿಯ ಬಸಿರ ಬಯಕೆ ಏನೆಂಬುದನ್ನು ತಿಳಿಯಲು ಹಿಮವಂತ ಉತ್ಸುಕನಾಗುತ್ತಿದ್ದ. ಸಖಿಯರಿಂದ ಮೇನಾದೇವಿ ಬಯಕೆ ತಿಳಿದುಕೊಂಡು, ಪತ್ನಿ ಬಯಸಿದುದೆಲ್ಲವನ್ನೂ ತಂದುಕೊಡುತ್ತಿದ್ದ. ಗರ್ಭವತಿಯಾದ ಪತ್ನಿಯನ್ನು ಹಿಮವಂತನು ರತ್ನಗರ್ಭದ ಭೂಮಿಯಂತೆ ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದ. ಪತ್ನಿಯನ್ನು ಅಗ್ನಿ ಅಡಗಿರುವ ಶಮಿಯಂಥ ಪವಿತ್ರಳೆಂದು ಭಾವಿಸಿ ಪೂಜ್ಯಭಾವನೆಯಿಂದ ವರ್ತಿಸುತ್ತಿದ್ದ.

ಗರ್ಭವ್ಯಥೆಯನ್ನು ದಾಟಿ ಮೇನಾದೇವಿಯ ಉದರವು ಬೆಳೆದು ದೊಡ್ಡದಾಗತೊಡಗಿತು. ಹಿಮವಂತ ತನ್ನ ಮಡದಿಯ ಗರ್ಭಸಂಸ್ಕಾರಕ್ಕಾಗಿ ಅನೇಕ ಧರ್ಮಕಾರ್ಯಗಳನ್ನು ಮಾಡಿದ. ಒಂದು ಶುಭದಿವಸ ಹಿಮವಂತನು, ಮಳೆಗರೆಯಲು ಸಿದ್ಧವಾದ ಮೇಘ ತುಂಬಿದ ಆಕಾಶದಂತೆ ಪ್ರಸವಕ್ಕೆ ಸಿದ್ಧಳಾದ ಮೇನಾದೇವಿಯನ್ನು ನೋಡಿದ. ಮೇನಾದೇವಿಗೆ ಪ್ರಸವಕಾಲವು ಸಮೀಪಿಸಿತು ಎಂಬುದನ್ನು ದೃಢಪಡಿಸಿಕೊಂಡ. ಮೇನಾದೇವಿ ತುಂಬು ಗರ್ಭವತಿಯಾಗಿದ್ದ ಸಮಯದಲ್ಲಿ ವಿಷ್ಣು, ಬ್ರಹ್ಮ ಮುಂತಾದ ದೇವತೆಗಳು, ಮುನಿಗಳು ಹಿಮವಂತನ ಮನೆಗೆ ಬಂದು ಮೇನಾದೇವಿಯ ಗರ್ಭದಲ್ಲಿರುವ ಜಗನ್ಮಾತೆಯನ್ನು ಸ್ತುತಿಸಿದರು.

‘ಜಗನ್ಮಾತೆಯಾದ ಓ ದುರ್ಗಾದೇವಿ, ನಿನಗೆ ಜಯವು. ನೀನು ಸತ್ಯವ್ರತಳೂ ಸತ್ಯಪರಳೂ ಮನೋವಾಕ್ಯಗಳೆಂಬ ತ್ರಿಕರಣ ಶುದ್ಧಿಯುಳ್ಳವಳೂ ಆಗಿರುವೆ. ನೀನು ಸತ್ಯಸ್ವರೂಪಳು, ಸತ್ಯನಿಷ್ಠಳು, ಸತ್ಯದಲ್ಲಿ ಪ್ರೀತಿಯುಳ್ಳವಳು, ಸತ್ಯಕಾರಣಳು. ನಿನಗಿಂತಲೂ ಸತ್ಯವಾದ ವಸ್ತುವಿಲ್ಲ, ಸತ್ಯವೇ ನಿನ್ನ ಕಣ್ಣುಗಳು. ನೀನು ಶಿವನ ಪ್ರಿಯಮಡದಿಯು, ದೇವತೆಗಳ ದುಃಖವನ್ನು ಪರಿಹರಿಸುವ ಜಗನ್ಮಾತೆ. ಸರ್ವವ್ಯಾಪಕಳು, ಭಕ್ತವತ್ಸಲಳು, ಈಗ ನೀನು ನಿಶ್ಚಯಿಸಿದಂತೆ ಅವತರಿಸಿ ದೇವತೆಗಳ ಕಾರ್ಯವನ್ನು ನಡೆಸಿಕೊಡಬೇಕು. ನಿನ್ನ ಅನುಗ್ರಹದಿಂದ ನಾವು ಸನಾಥರಾಗಿರುವೆವು. ಪುಣ್ಯವಂತರೆಲ್ಲರೂ ನಿನ್ನಿಂದಲೇ ಸುಖವನ್ನು ಪಡೆಯುವರು. ನೀನಿಲ್ಲದೇ ಜಗತ್ತಿನಲ್ಲಿ ಯಾವುದೂ ಶೋಭಿಸಲಾರದು’ ಎಂದು ಸ್ತುತಿಸಿ, ತೆರಳಿದರು.

ಮೇನಾದೇವಿಯ ಗರ್ಭದಲ್ಲಿದ್ದ ಕಾಳಿಕಾದೇವಿಯು ಜಗತ್ತಿಗೆ ಆವಿರ್ಭವಿಸಲು ಉದ್ಯುಕ್ತಳಾದಳು. ಆ ಸಮಯದಲ್ಲಿ ನಕ್ಷತ್ರಗಳು ಶಾಂತವಾಗಿ ಪ್ರಕಾಶಿಸಿದವು. ಗ್ರಹಗಳು ಮಂಗಳಕರವಾಗಿದ್ದವು. ಗಾಳಿಯು ತಂಪಾಗಿ ಬೀಸಿತು. ಸತ್ಪುರುಷರು ಹರ್ಷಗೊಂಡರು. ಪಾಪಿಗಳು ದುಃಖಗೊಂಡರು. ಆಕಾಶವು ನಿರ್ಮಲವಾಗಿತ್ತು. ಅರಣ್ಯ, ಗ್ರಾಮ, ಸಮುದ್ರ ಮುಂತಾದ ಎಲ್ಲದರೊಡನೆ ಭೂಮಿಯು ಮಂಗಳಕರವಾಗಿತ್ತು. ಸರೋವರಗಳಲ್ಲಿ ಕಮಲಗಳು ಅರಳಿದರೆ, ಗಗನದಲ್ಲಿ ದೇವದುಂದುಭಿಯು ಮೊಳಗಿ, ಪುಷ್ಪವೃಷ್ಟಿಯಾಯಿತು. ಸ್ವರ್ಗದಲ್ಲಿ ದೇವತೆಗಳು ಉತ್ಸವವನ್ನಾಚರಿಸಿದರು. ಗಂಧರ್ವರು, ವಿದ್ಯಾಧರಸ್ತ್ರೀಯರು ಇಂಪಾಗಿ ಹಾಡಿದರೆ, ಅಪ್ಸರೆಯರು ನರ್ತನ ಮಾಡಿದರು. ಇಂತಹ ಮಂಗಳ ಸಮಯದಲ್ಲಿ ಉಮಾದೇವಿಯು ಮೇನಾದೇವಿಯ ಗರ್ಭದಿಂದ ಜನಿಸಿದಳು ಎಂಬಲ್ಲಿಗೆ ಪಾರ್ವತೀಖಂಡದ ಆರನೇ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT