ಭಾನುವಾರ, ಮೇ 22, 2022
21 °C

ವೇದವ್ಯಾಸರ ಶಿವಪುರಾಣ ಸಾರ: ಲಿಂಗ ಎಂದರೆ ಎಲ್ಲವೂ ಲೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸದಾಶಿವನ ಮುಖದಿಂದ ಹೊರಟ ಉಚ್ಛ್ವಾಸವಿರುವವರೆಗೆ ಪುರುಷ ರೂಪದಿಂದ ಹರನು ಇರುವನು. ಆತನ ನಿಃಶ್ವಾಸ ಇರುವವರೆಗೂ ಆ ಹರನು ಶಕ್ತಿಯಲ್ಲಿ ಅಡಕವಾಗುವನು ಎಂದು ಪರಮಶಿವ ತಿಳಿಸಿದ್ದಲ್ಲದೆ, ಬ್ರಹ್ಮ-ವಿಷ್ಣು-ಮಹೇಶ್ವರರ ಉಸಿರಾಟದ ವಿವರವನ್ನೂ ಹೇಳುತ್ತಾನೆ. ‘ಲಿಂಗ’ ಎಂದರೆ ಲೋಕದ ಚರಾಚರವಸ್ತುಗಳೆಲ್ಲವೂ ಲೀನವಾಗುವುದು ಎಂದರ್ಥ ಎಂಬುದನ್ನೂ ತಿಳಿಸುತ್ತಾನೆ.

‘ಓ ಸುರಶ್ರೇಷ್ಠರಿರಾ, ನಿಶ್ಶ್ವಾಸೋಚ್ಛ್ವಾಸಗಳು ಇಪ್ಪತ್ತೊಂದು ಸಾವಿರದ ಆರುನೂರು ನಡೆದರೆ, ಗಂಧರ್ವರು-ನಾಗರು-ರಾಕ್ಷಸರಿಗೆ ಅದು ಒಂದು ಅಹೋರಾತ್ರಿ. ಆರು ಸಲ ಉಚ್ಛ್ವಾಸ-ನಿಃಶ್ವಾಸಗಳು ನಡೆಯುವಷ್ಟು ಕಾಲವು ಒಂದು ಫಲವೆನಿಸುವುದು. ಫಲಗಳು ಅರವ ತ್ತಾಗಲು ಒಂದು ಗಳಿಗೆ. ಆ ಗಳಿಗೆಗಳು ಇಪ್ಪತ್ನಾಲ್ಕು ಆದರೆ, ಹಗಲು ರಾತ್ರಿಯಾಗಿ ಒಂದು ದಿವಸವೆನಿಸುವುದು.

‘ಸದಾಶಿವನ ಮುಖದಿಂದ ಹೊರಡುವ ನಿಶ್ಶ್ವಾಸೋಚ್ಛ್ವಾಸಗಳಿಗೆ ತುದಿಮೊದಲೇ ಇಲ್ಲ. ಅದನ್ನು ಎಣಿಸಲು ಅಸಾಧ್ಯ. ಆದುದರಿಂದಲೇ ಆತನು ಅಕ್ಷಯನೆನಿಸಿರುವ. ನನ್ನ ಅಪ್ಪಣೆಯಂತೆ ನಿನ್ನ ಸ್ವರೂಪವನ್ನು ಸಂರಕ್ಷಿಸಿಕೊಳ್ಳುತ್ತಾ, ನಾನಾವಿಧವಾದ ಗುಣಗಳ ಸಹಕಾರದಿಂದ ಸೃಷ್ಟಿ ಕಾರ್ಯವನ್ನು ನೆರವೇರಿಸಬೇಕು’ ಎಂದು ಶಿವನು ಬ್ರಹ್ಮ-ವಿಷ್ಣು ಇಬ್ಬರಿಗೂ ತಿಳಿಸಿದ.

ಈ ಕಥೆಯನ್ನು ಬ್ರಹ್ಮನು ನಾರದನಿಗೆ ಹೇಳುತ್ತಿರುವಾಗ, ಮತ್ತೆ ವಿಷ್ಣು ಶಿವನಲ್ಲಿ ಭಿನ್ನವಿಸಿದ್ದ ವಿಷಯವನ್ನು ಹೀಗೆ ವಿವರಿಸುತ್ತಾನೆ.

‘ನನ್ನೊಡನೆ ಮಹಾತ್ಮನಾದ ವಿಷ್ಣುವು ಶಿವನ ನುಡಿಯನ್ನಾಲಿಸಿದ ನಂತರ, ವಿಶ್ವೇಶ್ವರನಿಗೆ ನಮಸ್ಕರಿಸಿ, ಹೇಳಿದ: ಓ ಕರುಣಾನಿಧಿ, ನಿನ್ನ ಅಪ್ಪಣೆಯನ್ನು ಎಳ್ಳಷ್ಟೂ ಮೀರುವುದಿಲ್ಲ. ನನ್ನ ಭಿನ್ನಹವೊಂದನ್ನು ಈಡೇರಿಸು. ನಾನು ಯಾವಾಗಲೂ ನಿನ್ನನ್ನು ಧ್ಯಾನಿಸುತ್ತಿರಬೇಕು, ಮತ್ತೆ ಬೇರೆ ಏನೂ ಬೇಡ. ನಿನ್ನ ಅನುಗ್ರಹದಿಂದ ನಿನ್ನ ಸಾಮರ್ಥ್ಯವೆಲ್ಲವನ್ನೂ ನಾನೀಗಾಗಲೆ ಪಡೆದಿರುವೆ. ನಿನ್ನ ಧ್ಯಾನವು ಕ್ಷಣಮಾತ್ರವೂ ದೂರವಾಗದಿರಲಿ.

‘ಓ ಪ್ರಭು, ನನ್ನ ಭಕ್ತನಾದವನು ನಿನ್ನ ನಿಂದನೆಯನ್ನು ಮಾಡಿದರೆ, ಅವನಿಗೆ ನರಕವಾಸವನ್ನು ವಿಧಾಯಕವನ್ನಾಗಿ ಮಾಡು. ಯಾವ ನಿನ್ನ ಭಕ್ತನೋ, ಆತನು ನನಗೆ ಅತ್ಯಂತ ಪ್ರೀತಿಪಾತ್ರನು. ಹೀಗೆ ಯಾರು ತಿಳಿಯು ವರೋ ಅವರಿಗೆ ಮುಕ್ತಿ ದುರ್ಲಭವಾಗದಿರಲಿ. ನಿನ್ನ ಕೃಪೆಯಿಂದ ನನ್ನ ಮಹಿಮೆಯು ಹೆಚ್ಚಿಸಲ್ಪಟ್ಟಿತು. ನನ್ನಿಂದ ಅಚಾತುರ್ಯವೇನಾದರೂ ನಡೆದರೆ ಕ್ಷಮಿಸಬೇಕು’ ಎಂದು ವಿಷ್ಣು ಪ್ರಾರ್ಥಿಸಿದ.

ವಿಷ್ಣುವಿನ ಮಾತನ್ನು ಕೇಳಿ ಸುಪ್ರೀತನಾದ ಶಿವನು ‘ನಿನ್ನ ಅವಗುಣ ಗಳೇನಾದರೂ ಇರುವಲ್ಲಿ ನಾನವನ್ನು ಕ್ಷಮಿಸುವೆನು’ ಎಂದು ವಿಷ್ಣುವಿಗೆ ಅಭಯ ನೀಡುತ್ತಾನೆ. ನಂತರ ಪರಮಶಿವ ತಮ್ಮನ್ನು ಆದರಿಸಿ, ಹರಸಿದ ಪ್ರಸಂಗವನ್ನು ಬ್ರಹ್ಮ ನಾರದನಿಗೆ ತಿಳಿಸುತ್ತಾನೆ.

‘ಪರಮೇಶ್ವರನು ವಿಷ್ಣುವಿನ ಕೋರಿಕೆಯನ್ನು ಈಡೇರಿಸುವುದಾಗಿ ಹೇಳಿ, ನಮ್ಮೀರ್ವರ ಶರೀರವನ್ನು ಕೃಪೆಯಿಂದ ತನ್ನ ಎರಡು ಕೈಗಳಿಂದಲೂ ತಡವಿದ. ನಾನಾ ವಿಧವಾದ ಧರ್ಮಗಳನ್ನು ಉಪದೇಶಿಸಿದ್ದಲ್ಲದೆ, ನಮ್ಮೀರ್ವರಿಗೂ ಅನೇಕ ವರಗಳನ್ನಿತ್ತ. ನಾವಿಬ್ಬರೂ ನೋಡುತ್ತಿರು ವಂತೆಯೇ ತಕ್ಷಣವೇ ಅಲ್ಲಿಂದ ಕಣ್ಮರೆಯಾದ.

‘ಅಂದಿನಿಂದ ಈ ಲೋಕದಲ್ಲಿ ಲಿಂಗಪೂಜಾ ವಿಧಾನವು ಆಚರ ಣೆಗೆ ಬಂತು. ಭೋಗಭಾಗ್ಯಗಳನ್ನೂ, ಮೋಕ್ಷಫಲವನ್ನೂ ನೀಡುವ ಆ ಶಂಭುವು, ಲಿಂಗದಲ್ಲಿ ಸದಾ ಸನ್ನಿಹಿತವಾಗಿರುವನು. ಲಿಂಗದ ವೇದಿ ಕೆಯು ಮಹಾದೇವಿಯಾದ ಪಾರ್ವತಿಯೆಂದು ತಿಳಿ. ಲಿಂಗವು ಸಾಕ್ಷಾತ್ ಮಹೇಶ್ವರನೇ ಆಗಿದೆ. ಎಲ್ಲವೂ ಇದರಲ್ಲಿ ಲೀನವಾಗಿ ಹೋಗುವು ದರಿಂದಲೇ ಇದಕ್ಕೆ ಲಿಂಗವೆಂಬ ಹೆಸರುಂಟಾಯಿತು. ಸಮಸ್ತ ಪ್ರಪಂಚವೂ ಆ ಲಿಂಗದಲ್ಲೇ ಅಡಕವಾಗಿಬಿಟ್ಟಿದೆ’ ಎಂದು ನಾರದನಿಗೆ ಬ್ರಹ್ಮ ತಿಳಿಸಿದ.

‘ಯಾರು ಲಿಂಗದ ಸನ್ನಿಧಿಯಲ್ಲಿ ಪ್ರತಿನಿತ್ಯವೂ ಲಿಂಗದ ಮಹಿಮಾಮಯವಾದ ಅಖ್ಯಾನವನ್ನು ಓದುವನೋ, ಆತನು ಆರು ತಿಂಗಳೊಳಗಾಗಿ ಶಿವನಂತೆಯೇ ಆಗುವನು. ಯಾವ ಪುರುಷನು ಶಿವ ಲಿಂಗದ ಬಳಿ ಯಾವುದೇ ಉತ್ತಮ ಕೆಲಸ ಮಾಡಿದರೂ ಫಲ ಸಿಗುತ್ತದೆ. ಅದರಲ್ಲೂ ನಿಃಸ್ವಾರ್ಥವಾಗಿ ಲೋಕಕಲ್ಯಾಣ ಮಾಡಿದರಂತೂ ಆತನಿಗೆ ಸಿಗುವ ಅಸಂಖ್ಯ ಪುಣ್ಯಫಲವನ್ನು ಹೇಳಲು ನನಗೆ ಸಾಧ್ಯವಿಲ್ಲ’ ಎಂದು ನಾರದನಿಗೆ ಬ್ರಹ್ಮ ತಿಳಿಸುತ್ತಾನೆ. ಇಲ್ಲಿಗೆ ಶ್ರೀ ಶಿವಮಹಾಪುರಾಣದ ರುದ್ರಸಂಹಿತೆಯ ಸೃಷ್ಟಿಖಂಡದಲ್ಲಿ ಪರಮಶಿವ ತತ್ತ್ವವರ್ಣನ ಎಂಬ ಹತ್ತನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.