ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಸಂಧ್ಯೆ ತಪಸ್ಸು ಮೆಚ್ಚಿದ ಶಿವ

ಭಾಗ 131
ಅಕ್ಷರ ಗಾತ್ರ

ಸಂಧ್ಯಾದೇವಿ ಹೇಗೆ ತಪಸ್ಸನ್ನಾಚರಿಸಿದಳು ಎಂಬುದನ್ನು ಸತೀಖಂಡದ ಐದನೇ ಅಧ್ಯಾಯದಲ್ಲಿ ಬ್ರಹ್ಮ ನಾರದನಿಗೆ ತಿಳಿಸುತ್ತಾನೆ.

ವಸಿಷ್ಠಮುನಿಯು ತಪಸ್ಸಿನ ಸ್ವರೂಪವನ್ನು ಸಂಧ್ಯೆಗೆ ಉಪದೇಶಿಸಿ ಹೋದಮೇಲೆ, ಅವಳು ತಪಸ್ಸಿಗೆ ಯೋಗ್ಯವಾದ ವೇಷವನ್ನು ಧರಿಸಿದಳು. ಬೃಹಲ್ಲೋಹಿತ ಸರಸ್ಸಿನ ತೀರದಲ್ಲಿ ಕುಳಿತು ತಪಸ್ಸನ್ನು ಪ್ರಾರಂಭಿಸಿ ದಳು. ತಪಸ್ಸಿಗೆ ಸಾಧನವಾದ ಶಿವಪಂಚಾಕ್ಷರೀ ಮಂತ್ರದಿಂದ ಭಕ್ತಿ ಪೂರ್ವಕವಾಗಿ ಶಂಕರನನ್ನು ಪೂಜಿಸಿದಳು. ಸ್ಥಿರವಾದ ಮನಸ್ಸಿನಿಂದ ಶಂಕರನಲ್ಲಿಯೇ ಬುದ್ಧಿಯನ್ನಿರಿಸಿ, ನಾಲ್ಕು ಯುಗಗಳ ಕಾಲ ಮಹತ್ತಾದ ತಪವನ್ನಾಚರಿಸತೊಡಗಿದಳು.

ಆಗ ಶಂಕರನು ಸಂಧ್ಯೆಯ ತಪಸ್ಸಿಗೆ ಮೆಚ್ಚಿ ಪ್ರಸನ್ನನಾದ. ಅವಳು ಧ್ಯಾನಿಸುತ್ತಿರುವಂತಹ ಸ್ವರೂಪದಿಂದಲೇ ಆಕಾಶದ ಒಳಗೂ ಹೊರಗೂ ಗೋಚರಿಸಿ, ಅವಳೆದುರಿಗೆ ಪ್ರತ್ಯಕ್ಷನಾದ. ಶಿವನನ್ನು ಕಂಡು ಸಂಧ್ಯೆ ತುಂಬಾ ಹರ್ಷಗೊಂಡಳು. ಹಾಗೇ, ಗಾಬರಿಗೊಂಡು ಏನು ಹೇಳಲಿ? ಶಿವನನ್ನು ಹೇಗೆ ಸ್ತುತಿಸಲಿ ಎಂದು ತಿಳಿಯದೆ ಚಿಂತಿಸುತ್ತಾ ಕಣ್ಣುಗಳನ್ನು ಮುಚ್ಚಿಕೊಂಡಳು. ಸಂಧ್ಯೆಯು ಗಾಬರಿಯಿಂದ ಕಣ್ಣುಗಳನ್ನು ಮುಚ್ಚಿ ದಾಗ ಶಿವ ಅವಳ ಹೃದಯವನ್ನು ಪ್ರವೇಶಿಸಿ ದಿವ್ಯಜ್ಞಾನವನ್ನೂ ದಿವ್ಯ ವಾಕ್ಕನ್ನೂ ದಿವ್ಯವಾದ ದೃಷ್ಟಿಯನ್ನೂ ಅನುಗ್ರಹಿಸಿದ. ಕಣ್ತೆರೆದು ತನ್ನೆ ದುರು ಪ್ರತ್ಯಕ್ಷನಾದಂತಹ ಜಗದೊಡೆಯನಾದ ಉಮಾಪತಿಯನ್ನು ನೋಡಿ ಸಂತೋಷದಿಂದ ಸ್ತುತಿಸತೊಡಗಿದಳು.

‘ಆಕಾರವಿಲ್ಲದ, ಜ್ಞಾನದಿಂದ ಪಡೆಯಲ್ಪಡುವ. ಉತ್ಕೃಷ್ಟವಾದ, ಸ್ಥೂಲತ್ವ, ದೀರ್ಘತ್ವ ಮುಂತಾದ ವಿಕಾರವಿಲ್ಲದ, ಯೋಗಿಗಳಿಂದ ಹೃದಯದಲ್ಲಿ ಧ್ಯಾನಿಸಲ್ಪಡುವ ಯಾವ ಪರಬ್ರಹ್ಮಸ್ವರೂಪವುಂಟೋ, ಅಂತಹ ಬ್ರಹ್ಮಸ್ವರೂಪನಾದ ನಿನಗೆ ನಮಸ್ಕಾರ. ಜಗತ್ತನ್ನು ಸೃಷ್ಟಿಸುವ ಬ್ರಹ್ಮನೂ ನೀನೆ, ಪಾಲಿಸುವ ವಿಷ್ಣುವೂ ನೀನೆ, ಸಂಹರಿಸುವ ರುದ್ರನೂ ನೀನೆ. ಬ್ರಹ್ಮನೇ ಮೊದಲಾದವರಿಗೆ ಕಾರಣನೂ, ಅಮೃತ ಜ್ಞಾನ ಐಶ್ವರ್ಯಗಳನ್ನು ಕೊಡುವವನು. ಪ್ರಕಾಶಸ್ವರೂಪನೂ, ಅತ್ಯಂತ ಉತ್ಕೃಷ್ಟನೂ ಆದ ನಿನಗೆ ನಮಸ್ಕಾರ. ಭೂಮಿ, ದಿಕ್ಕುಗಳು, ಸೂರ್ಯ, ಚಂದ್ರ, ಮನಸ್ಸು, ಬ್ರಹ್ಮ, ದೇವತೆಗಳು ಮುಂತಾದ ಈ ಜಗತ್ತು ಯಾವ ಈಶ್ವರನಿಗಿಂತಲೂ ಭಿನ್ನವಾಗಿಲ್ಲವೆಂದು ‘ಸರ್ವಂ ಖಲ್ವಿದಂ ಬ್ರಹ್ಮ’ ಮುಂತಾದ ಶ್ರುತಿಗಳು ಹೇಳುವವೋ, ಯಾರ ನಾಭಿಯಿಂದ ಆಕಾಶವೂ ಜನಿಸಿರುವುದೋ, ಅಂತಹ ಶಂಕರನಿಗೆ ನಮಸ್ಕಾರ. ನಿರ್ಗುಣನಾದ ನಿನ್ನ ಮಾಯಾಮಯವಾದ ಗುಣಗಳನ್ನು ಇಂದ್ರ ಮೊದಲಾದ ದೇವದಾನವರೂ ತಿಳಿಯಲಾರರು. ಅಂದಮೇಲೆ ಸ್ತ್ರೀಮಾತ್ರಳಾದ ನಾನು ಹೇಗೆ ತಿಳಿಯಬಲ್ಲೆ?’ ಎಂದು ಸಂಧ್ಯೆ ಸ್ತೋತ್ರ ಮಾಡಿದಳು.

ಇದನ್ನು ಕೇಳಿದ ಭಕ್ತವತ್ಸಲನಾದ ಪರಮೇಶ್ವರ ತುಂಬಾ ಪ್ರಸನ್ನನಾದ. ಬಳಿಕ ಶಿವನು ಸಂಧ್ಯೆ ಉಟ್ಟಿರುವ ನಾರುಬಟ್ಟೆ ಮತ್ತು ಕೃಷ್ಣಾಜಿನಗಳನ್ನೂ, ಶಿರಸ್ಸಿನಲ್ಲಿ ಧರಿಸಿರುವ ಜಟೆಗಳನ್ನೂ, ಹಿಮದ ತುಂತುರು ಗಳಿಂದ ಮಲಿನವಾದ ಶರೀರವನ್ನೂ, ಕಮಲದಂತಿರುವ ಮುಖವನ್ನೂ ನೋಡಿ ದಯೆಯುಳ್ಳವನಾಗಿ ಸಂಧ್ಯೆಯನ್ನು ಕುರಿತು ಹೀಗೆ ಹೇಳಿದ:

‘ಎಲೈ, ಮಂಗಳರೂಪಿಯಾದ ಸಂಧ್ಯೆಯೇ! ನಿನ್ನ ಮಹತ್ತಾದ ತಪಸ್ಸಿನಿಂದ, ಸ್ತೋತ್ರದಿಂದ ಪ್ರಸನ್ನನಾಗಿರುವೆ. ನಿನಗೆ ಬೇಕಾದ ವರ ವನ್ನು ಕೇಳು. ನಿನ್ನ ಮನಸ್ಸಿನಲ್ಲಿ ಯಾವ ಕಾರ್ಯವು ಆಗಬೇಕೆಂದಿರು ವುದೋ ಅದನ್ನು ಹೇಳು, ನಡೆಸಿ ಕೊಡುವೆ’ ಎಂದ. ಮಹೇಶ್ವರನು ಹೇಳಿದ ಮಾತುಗಳನ್ನು ಕೇಳಿ ಸಂಧ್ಯೆಯು ತುಂಬಾ ಹರ್ಷಗೊಂಡು ಶಿವನನ್ನು ಪುನಃ ಪುನಃ ನಮಸ್ಕರಿಸಿ ಹೀಗೆ ಹೇಳಿದಳು:

‘ಓ ಶಂಕರನೆ! ದೇವದೇವನಾದ ನೀನು ನನ್ನಲ್ಲಿ ಅನುಗ್ರಹವುಳ್ಳವನಾಗಿದ್ದರೆ, ನಿನ್ನಿಂದ ವರವನ್ನು ಪಡೆಯಲು ನಾನು ಯೋಗ್ಯಳಾಗಿದ್ದರೆ ಮತ್ತು ನಾನು ಪಾಪದಿಂದ ಪರಿಶುದ್ಧಳಾಗಿದ್ದರೆ, ನನ್ನ ತಪಸ್ಸಿನಿಂದ ನೀನು ಪ್ರಸನ್ನನೂ ಆಗಿದ್ದರೆ ನನ್ನ ಕೋರಿಕೆಗಳನ್ನು ಈಡೇರಿಸು. ಮೊದಲಿಗೆ ಈ ಪ್ರಪಂಚದಲ್ಲಿ ಪ್ರಾಣಿಗಳು ಜನಿಸಿದೊಡ ನೆಯೇ ಕಾಮವಿಕಾರವನ್ನು ಹೊಂದಬಾರದು. ಹಾಗೇ, ನನ್ನ ವೃತ್ತಾಂತವು ಮೂರು ಲೋಕಗಳಲ್ಲಿಯೂ ಪ್ರಸಿದ್ಧವಾಗಿ ಅದರಿಂದ ನಾನೂ ಪ್ರಸಿದ್ಧಳಾಗುವಂತೆ ಮಾಡು. ನನ್ನ ದೃಷ್ಟಿಯು ನನ್ನ ಪತಿಯ ಹೊರತು ಇನ್ನೆಲ್ಲಿಯೂ ಕಾಮ ವಿಕಾರವುಳ್ಳದ್ದಾಗಬಾರದು. ನನ್ನ ಪತಿ ಯಾಗುವವನು ನನ್ನಲ್ಲಿ ತುಂಬಾ ಪ್ರೇಮವುಳ್ಳವನಾಗಬೇಕು. ನನ್ನನ್ನು ಕಾಮದೃಷ್ಟಿಯಿಂದ ನೋಡಿದ ಪರಪುರುಷನ ಪೌರುಷವೂ ನಾಶವಾಗಿ, ಅವನು ನಪುಂಸಕನಾಗಬೇಕು. ಈ ರೀತಿ ವರವನ್ನು ಕೊಡು’ ಎಂದು ಪ್ರಾರ್ಥಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT