ಗುರುವಾರ , ಜೂನ್ 4, 2020
27 °C

ಸಂಸ್ಕೃತಿ ಸಂಭ್ರಮ | ಶುಭ ಶುಕ್ರವಾರ: ಅಮೃತ ಸಮಯ

ವಿ. ನರಹರಿ Updated:

ಅಕ್ಷರ ಗಾತ್ರ : | |

Prajavani

ಅಂದು ಶುಕ್ರವಾರ, ಬೆಳಗಿನ ಸಮಯ, ನ್ಯಾಯಪೀಠವು ದುಡುಕು, ಆರ್ಭಟಕ್ಕೆ ನಡುಗಿ ಬಡಗಿ ಮಗನಿಗೆ ಶಿಲುಬೆವಧೆ ವಿಧಿಸಿ, ಧರ್ಮದ ನಡು ಮುರಿದ ಸಮಯ. ತನ್ನ ಶಿಲುಬೆಯ ತಾನೆ ಹೊತ್ತು ಸಾಗಿದ ದೇವಸುತ ಯೇಸು. ಬಲಗಡೆ ಒಬ್ಬ ಕಳ್ಳ ಮತ್ತು ಎಡಗಡೆ ಒಬ್ಬ ಕೊಲೆಗಡುಕನೂ ತಮ್ಮ ತಮ್ಮ ಶಿಲುಬೆಗಳನ್ನು ಹೊತ್ತು ಸಾಗಿದರು.

ಈ ಮರಣಮಾರ್ಗದ ಎರಡೂ ಕಡೆ ಆಢ್ಯ ಯಹೂದಿಗಳು ನೋಡುತ್ತ ನಿಂತರು. ಯೇಸು ಬೋಧನೆಯನ್ನು ಕೇಳಿದ್ದ ಜನಸಾಮಾನ್ಯರು ಆತನ ಮಹಿಮೆಗೆ ಈ ಸ್ಥಿತಿಯೊದಗಿದ್ದಕ್ಕೆ ಮುಮ್ಮಲ ಮರುಗಿದರು.

ಯಹೂದ್ಯಧರ್ಮಕ್ಕೆ ಅಪಚಾರ ಎಸಗಿದ ಎಂಬ ಆರೋಪಕ್ಕೆ ಒಳಗಾಗಿ, ತಾನು ನೆಚ್ಚಿದ ತನ್ನ ಶಿಷ್ಯರಲ್ಲೊಬ್ಬ ಮಾಡಿದ ದ್ರೋಹವೂ ಸೇರಿಕೊಂಡು ಕರುಣಾಕರ ಯೇಸುವಿನ ನಿಷ್ಕರುಣೆಯ ಶಿಕ್ಷೆಯ ಪರಿಣಾಮವೇ ಈ ಶ್ಮಶಾನಯಾತ್ರೆ.

ಹೆಣಭಾರದ ಶಿಲುಬೆಯನ್ನು ಹೊರಲಾರದೆ ಯೇಸು ಮುಗ್ಗರಿಸಿದಾಗ ದಳಪತಿಯು ದಷ್ಟಪುಷ್ಟನೊಬ್ಬನಿಗೆ ಆ ಶಿಲುಬೆಯನ್ನು ಹೊತ್ತುತರಲು ಅದೇಶಿಸಿದ. ಈ ಮರಣಯಾತ್ರೆಯು ದೀರ್ಘ ದಾರಿಯ ಕ್ರಮಿಸಿ, ಮನುಷ್ಯನ ತಲೆಬುರುಡೆ ಆಕೃತಿಯ ದಿಣ್ಣೆ ಗೊಲ್ಗೊಥಾಕ್ಕೆ ಬಂದಿತು.

ಈ ಮರಣದ ಉತ್ಸವದಲ್ಲಿ ಯೇಸು ತಲೆ ಎತ್ತಿ ಗುಂಪಿನಲ್ಲಿದ್ದ ತಾಯಿ ಮೇರಿಯ ಕಡೆಗೆ ತಿರುಗಿ ನಸುನಗುತ್ತಾರೆ. ಅವರ ಬಳಲಿದ ಮುಖದಿಂದ ಬೆವರಿಳಿಯುವುದನ್ನು ಕಂಡು ತಾಳಲಾರದೆ ಮಹಿಳೆಯೊಬ್ಬಳು ಮುಂದೆ ಬಂದು ಒರಸುತ್ತಾಳೆ. ದುಃಖ ತಡೆಯದೆ ಅಳುತ್ತಿರುವ ಮಹಿಳೆಯರಿಗೆ ‘ನನಗಾಗಿ ನೀವು ಅಳಬೇಡಿ’ ಎಂದು ಯೇಸುವು ಸಮಾಧಾನದ ನುಡಿಗಳನ್ನಾಡಲು ಮರೆಯುವುದಿಲ್ಲ. ಅಷ್ಟೇನು, ಮೂರು ದಿನಗಳ ಬಳಿಕ ತಾನು ಮತ್ತೆ ಬರುವೆನೆಂದೂ ಅವರು ಭರವಸೆಯ ಭವಿಷ್ಯವನ್ನು ನುಡಿಯುತ್ತಾರೆ,

ಶಿಲುಬೆಯಲ್ಲಿ ಅವರ ಕೈಗಳನ್ನು ಚಾಚಿ, ಅಂಗೈಗಳಿಗೆ ಮೊಳೆ ಬಡಿದು, ಪಾದಗಳನ್ನು ಜೋಡಿಸಿ ಅವಕ್ಕೂ ಮೊಳೆ ಜಡಿದು, ಶಿಲುಬೆಯನ್ನು ನಿಲ್ಲಿಸಿ ನೆಟ್ಟರು. ಮರಣವೃಕ್ಷದಲ್ಲಿ ಅಮೃತಫಲದಂತೆ ಯೇಸು ತೋರಿದರೆಂದು ಗೋವಿಂದ ಪೈ ಉದ್ಗರಿಸಿದ್ದಾರೆ. ಅಕ್ಕಪಕ್ಕದಲ್ಲಿ ಕಳ್ಳ, ಕೊಲೆಗಡುಕರ ಶಿಲುಬೆಗಳೂ ನಿಂತವು. ಯೇಸುವಿನ ಮುಳ್ಳು ಕಿರೀಟದ ತಲೆಯ ಮೇಲಿನ ಫಲಕದಲ್ಲಿ ‘ಯಹೂದ್ಯರ ಅರಸನಿವ’ ಎಂಬ ವ್ಯಂಗನುಡಿಯ ಹೀಬ್ರೂ, ಲ್ಯಾಟಿನ್‌ ಮತ್ತು ಗ್ರೀಕ್‌ಭಾಷೆಗಳಲ್ಲಿ ಸಾರಿತು.

ಮರಣಬಿಲ್ಲಿಗೆ ಯೇಸುದೇಹವೇ ಬಾಣವಾಗಿ ಮೇಲಿನ ಲೋಕಕ್ಕೆ ಗುರಿಯಿಟ್ಟಂತಿತ್ತು. ದೈಹಿಕ ಯಾತನೆಯ ನಡುವೆಯೂ, ಲೋಕ ನೆನಪಿಡುವಂಥ ಉದ್ಗಾರ ಅವರ ಬಾಯಿಂದ ಹೊರಬಿತ್ತು: ‘ತಮ್ಮ ತಪ್ಪಿಲ್ಲದ ಈ ಅಮಾಯಕರನ್ನು ದೇವಪಿತನೇ ಕ್ಷಮಿಸಿಬಿಡು’. ಮನುಕುಲದ ಸಾಧುಗುಣದ ಪರವಾಗಿ ಅವರು ದೇವನಿಗೆ ಮೊರೆಯಿಟ್ಟಂತೆ ಇತ್ತು.

ಈ ಹಿಂದೆ ಮರಣಿಸಿದವರನ್ನು ತನ್ನ ಅಲೌಕಿಕ ಪವಾಡಗಳಿಂದ ಬದುಕಿಸಿದ ಈ ದೇವಸುತ ತನ್ನ ಜೀವನವನ್ನು ಉಳಿಸಿಕೊಳ್ಳಲು ಪವಾಡವನ್ನು ಬಳಸದೆ ಇದ್ದುದು ಅಚ್ಚರಿ. ಜಗದ ನಿರೀಕ್ಷೆಯನ್ನು ನಿಜಗೊಳಿಸದ ಸೋಜಿಗ.

ಮರಣಯಾತನೆಯ ನಡುವೆಯೂ ತನ್ನ ತಾಯಿಗೆ ‘ಶಿಷ್ಯ ಜಾನನು ಇನ್ನು ಮುಂದೆ ನಿನಗೆ ಮಗ’ ಎಂದು ಹೇಳಿ ಮಾತೃಋಣವನ್ನು ಸಲ್ಲಿಸಲು ಮರೆಯಲಿಲ್ಲ. ಸಾವಿನ ಕ್ಷಣವು ಹತ್ತಿರ ಬರಲು ‘ಎನ್ನ ದೇವರೇ! ನೀನೇಕೆ ನನ್ನ ಕೈ ಬಿಟ್ಟೆ!’ ಎಂದು ಯೇಸುವಿನ ಉದ್ಗಾರ ಹೊರಬಿತ್ತು.

‘ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿದೆ, ತಂದೆ!’ ಎಂದು ಕ್ಷಮಾಯಾಚನೆ ಮಾಡಿ ಯೇಸು ಕೊನೆಯುಸಿರು ಎಳೆದಾಗ ಅಂದು ಅಪರಾಹ್ನ ಮೂರು ಗಂಟೆ.

ಯೇಸು ನಿರ್ಗಮನದ ದಿನವೇ ‘ಶುಭ ಶುಕ್ರವಾರ’ – ಗುಡ್‌ ಫ್ರೈಡೆ; ಗಲ್ಗಂಬದಿಂದ ಇಳಿದು ಅವರು ಗೆಲ್ಗಂಬವನ್ನು ಏರಿದ ದಿನ; ಮೃತ್ಯುವಿನಿಂದ ಅಮೃತತ್ವಕ್ಕೆ ಏರಿದ ದಿನ; ಹಿಂಸೆಯಿಂದ ಅಳಿದು, ಅಹಿಂಸೆಯ ಹಂತಕ್ಕೆ ತೆರಳಿದ ದಿನ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.