ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಯ ಅಮಾವಾಸ್ಯೆ: ಪಿತೃಗಳ ದಿನ

Last Updated 5 ಅಕ್ಟೋಬರ್ 2021, 19:00 IST
ಅಕ್ಷರ ಗಾತ್ರ

ಪ್ರತಿವರ್ಷವೂ ಭಾದ್ರಪದ ಮಾಸದ ಕೃಷ್ಣಪಕ್ಷದಲ್ಲಿ ಮಹಾಲಯವನ್ನು ಪಿತೃಗಳ ಪ್ರಸನ್ನತೆಗಾಗಿ ಆಚರಿಸಲಾ ಗುತ್ತದೆ. ಅದು ಮಹಾಲಯ ಅಮಾವಾಸ್ಯೆ ಯಂದು (ಈ ವರ್ಷ ಅಕ್ಟೋಬರ್ ಆರರಂದು) ಕೊನೆಗೊಳ್ಳಲಿದೆ. ಇದಕ್ಕೆ ಮಹಾಭಾರತದ ಒಂದು ಉದಾಹರಣೆ ಯಿದೆ.

ಕರ್ಣನು ನಿಜವಾಗಿ ಕ್ಷತ್ರಿಯ ಕುಲದವನಾದರೂ ಅವನು ರಾಧೇಯನಾಗಿ ಬೆಳೆದಿದ್ದಾನೆ. ತಂದೆ ತಾಯಿ ಯಾರು ಎಂಬುದೇ ಅವನಿಗೆ ತಿಳಿದಿರುವುದಿಲ್ಲ. ಇದರ ಪರಿಣಾಮವಾಗಿ, ರಾಜನೇ ಆದರೂ, ಪಿತೃಕರ್ಮಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಜೀವನದ ಸಂಧ್ಯೆಯಲ್ಲಿ ನಿಜವಾದ ಹಿನ್ನೆಲೆಯ ಪರಿಚಯವಾದರೂ ಅದಕ್ಕೆ ರಾಜಕೀಯದ ಬಣ್ಣವಿತ್ತು. ಸ್ವತಃ ಶ್ರೀಕೃಷ್ಣನೇ ಹೇಳಲಿ, ಕುಂತಿಯು ಬಂದು ಮಗನೆಂದು ಗೋಳಾಡಲಿ, ಅದೆಲ್ಲಾ ಯುದ್ಧತಂತ್ರವೆಂದೇ ಊಹಿಸಬೇಕಾದ ಅನಿವಾರ್ಯತೆ ಕರ್ಣನಿಗಿತ್ತು. ಯುದ್ಧದಲ್ಲಿ ವೀರೋಚಿತವಾದ ಮರಣವನ್ನಪ್ಪಿದ ಕರ್ಣನು ಸಹಯೋಧರೊಂದಿಗೆ ಸ್ವರ್ಗಲೋಕಕ್ಕೆ ಹೋದರೆ ಅವನಿಗೆ ಅಚ್ಚರಿ ಕಾದಿತ್ತು. ಎಲ್ಲರಿಗೂ ಷಡ್ರಸೋಪೇತವಾದ ಆಹಾರವನ್ನು ನೀಡಿದರೆ, ಕರ್ಣನಿಗೆ ಕೇವಲ ಚಿನ್ನದ ಆಭರಣಗಳನ್ನು ನೀಡಲಾಗುತ್ತಿತ್ತು. ಉಳಿದವರೆಲ್ಲರೂ ಅನ್ನದಾನ ಮಾಡಿ ಪಿತೃಗಳನ್ನು ಪ್ರಸನ್ನಗೊಳಿಸಿದ್ದರು. ಆದರೆ ಕರ್ಣನಿಗೆ ಆ ಭಾಗ್ಯವಿರಲಿಲ್ಲ. ಅವನಿಗೆ ತನ್ನ ಪಿತೃಪಿತಾಮಹಾದಿಗಳ ಹೆಸರೇ ಬಹಳ ವರ್ಷಗಳ ವರೆಗೆ ಗೊತ್ತಿರಲಿಲ್ಲ. ಅವನು ದಾನಶೂರನೇ ಆಗಿದ್ದರೂ, ಧಾರಾಳವಾಗಿ ಬೆಳ್ಳಿ – ಬಂಗಾರ ದಾನ ಮಾಡಿದ್ದರೂ, ಅನ್ನದಾನ ಮಾಡಿರಲಿಲ್ಲ. ಅದನ್ನು ಅವನು ಸ್ವರ್ಗಲೋಕದ ಅಧಿಪತಿಯಾದ ಇಂದ್ರನಲ್ಲಿ ವಿಜ್ಞಾಪಿಸಿದ ಮೇಲೆ ಇಂದ್ರನು ಕರ್ಣನಿಗೆ ಹದಿನೈದು ದಿನಗಳ ಅವಕಾಶ ನೀಡಿ, ಪಿತೃಶ್ರಾದ್ಧಾದಿಗಳನ್ನು ಪೂರೈಸಿ ಬರುವಂತೆ ಆದೇಶಿಸಿದ. ಕರ್ಣನಿಗೆ ದೊರೆತ ಹದಿನೈದು ದಿನಗಳೇ ಮಹಾಲಯ ಎಂದು ಪ್ರಸಿದ್ಧವಾಗಿವೆ.

ಈ ದಂತಕತೆಯನ್ನು ಅರ್ಥೈಸಿದರೆ, ಗಮನಾರ್ಹವಾದ ಕೆಲವು ಅಂಶಗಳು ಹೊಳೆಯುತ್ತವೆ. ಒಂದು, ಈ ದಿನಗಳಲ್ಲಿ ಅಪರಿಚಿತರಾದ ಪಿತೃಗಳಿಗೂ ಶ್ರಾದ್ಧವನ್ನು ಮಾಡಬಹುದಾದ ಸದವಕಾಶವಾದರೆ, ಜಾತಿ–ನೀತಿಗಳೆಲ್ಲವನ್ನೂ ಮೀರಿ, ಗತಿಸಿದ ಬಾಂಧವರಿಗೆ ಸಂತೋಷವನ್ನು ಉಂಟುಮಾಡುವುದು ಇನ್ನೊಂದು. ಜನರು ಗತಿಸಿದವರಿಗೆ ಕೃತಜ್ಞರಾಗಿರುವುದು ನಿಜವೇ ಆದರೂ ಜೀವನದ ಬಿರುಗಾಳಿಗೆ ಸಿಲುಕಿ ಏನನ್ನೂ ಮಾಡಲು ಸಾಧ್ಯವಾಗದಿರಬಹುದು. ಹೆಣ್ಣು ಗಂಡನ ಮನೆಯ ಪರಿಸರಕ್ಕೆ ಹೊಂದಿಕೊಳ್ಳಬೇಕಾಗುವುದರಿಂದ, ತನ್ನ ಮಕ್ಕಳ ಲಾಲನೆ–ಪೋಷಣೆ ಮಾಡಬೇಕಾಗಿರುವುದರಿಂದ ತಂದೆ-ತಾಯಿಯ ಅಪೇಕ್ಷೆಯನ್ನು ಪೂರ್ಣಗೊಳಿಸುವುದು ಕೆಲವೊಮ್ಮೆ ಸಾಧ್ಯವಾಗಲಾರದು. ಇಂತಹ ಸನ್ನಿವೇಶಗಳಲ್ಲಿ ಮಹಾಲಯ ಶ್ರಾದ್ಧ ಎಲ್ಲರನ್ನೂ ಪ್ರಸನ್ನಗೊಳಿಸುವ ಸುಲಭೋಪಾಯವಾಗುತ್ತದೆ. ಅದರ ಅನುಷ್ಠಾನದಿಂದ ಗೊತ್ತಿರಲಿ, ಗೊತ್ತಿಲ್ಲದಿರಲಿ – ಗತಿಸಿದವರೆಲ್ಲರಿಗೂ ಅನ್ನ-ನೀರು ದೊರೆಯುತ್ತದೆ. ಇಲ್ಲಿ ಅನ್ನ-ನೀರು ಕೊಟ್ಟರೆ ಮಾತ್ರ ಪರಲೋಕದಲ್ಲಿ ಅದು ಲಭಿಸುತ್ತದೆ. ಇದು ಯಾವುದೋ ಒಂದು ಜಾತಿಗೆ ಸೀಮಿತವಾದುದಲ್ಲ. ಇದಕ್ಕೆ ಬೇಕಾದುದು ಜಾತಿಯಲ್ಲ, ಶ್ರದ್ಧೆ. ಶ್ರದ್ಧೆಯಿಲ್ಲದೆ ಇದನ್ನು ಮಾಡಿದರೂ ಫಲವಿಲ್ಲ. ಈ ಕಾರಣದಿಂದಲೇ ಇದನ್ನು ಶ್ರಾದ್ಧವೆನ್ನುತ್ತಾರೆ. ಅದನ್ನು ಮಂತ್ರ ಸಹಿತವಾಗಿ ಮಾಡುವಂತೆ, ಮಂತ್ರವಿಲ್ಲದೆಯೂ ಮಾಡುತ್ತಾರೆ. ತಾವೇ ಮಾಡಲು ಸಾಧ್ಯವಿಲ್ಲದಿದ್ದರೆ, ಬೇರೆಯವರಿಂದಲೂ ಮಾಡಿಸುತ್ತಾರೆ.

ಈ ಪಕ್ಷದ ಒಂದೊಂದು ದಿನದಲ್ಲಿಯೂ ಶ್ರಾದ್ಧವನ್ನು ಮಾಡಬಹುದಾದರೂ ಅಮಾವಾಸ್ಯೆಯು ಅತ್ಯಂತ ಶ್ರೇಷ್ಠವೆನ್ನಲಾಗಿದೆ. ಅದು ಸರ್ವ ಪಿತೃ ಅಮಾವಾಸ್ಯೆ. ಅಂದರೆ, ಎಲ್ಲಾ ಪಿತೃಗಳ ತಿಥಿ. ಅದು ಎಲ್ಲಾ ಮಾತೃಗಳ ತಿಥಿಯೂ ಹೌದು. ಅಂದು ತಮ್ಮ ವಂಶದ ಗತಿಸಿದವರೆಲ್ಲರಿಗೂ ಒಂದೇ ಪ್ರಯತ್ನದಿಂದ ಶ್ರಾದ್ಧ ಮಾಡಬಹುದು. ಅದಕ್ಕೆ ಪ್ರತಿಯಾಗಿ ಪಿತೃಗಳು ಆರೋಗ್ಯವನ್ನೂ ಆಯುಷ್ಯವನ್ನೂ ಸಂಪತ್ತನ್ನೂ ಸಂತಾನವನ್ನೂ ದಯಪಾಲಿಸುತ್ತಾರೆ ಎಂದು ಪುರಾಣಗಳಲ್ಲಿದೆ.

ಮಹಾಲಯ ಅಮಾವಾಸ್ಯೆಯಂದು ಶ್ರಾದ್ಧ ಮಾಡಿದರೆ ಗಯೆಯಲ್ಲಿ ಶ್ರಾದ್ಧ ಮಾಡಿದ ಫಲ ಬರುತ್ತದೆ ಎನ್ನಲಾಗಿದೆ. ವಾರ್ಷಿಕ ಶ್ರಾದ್ಧ ಮಾಡಲು ಮರೆತು ಹೋದರೆ, ಅಥವಾ ಸಾಧ್ಯವಾಗದಿದ್ದರೆ, ಆ ದಿನ ಶ್ರಾದ್ಧ ಮಾಡಿ ಪಿತೃಗಳನ್ನು ಸಂತುಷ್ಟಿಗೊಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT