ಭಾನುವಾರ, ಜನವರಿ 19, 2020
23 °C

ಸಂಕ್ರಾಂತಿ: ಎಳ್ಳು ಬೆಲ್ಲದ ಹಬ್ಬ

ಸೂರ್ಯನಾರಾಯಣ ಭಟ್ಟ Updated:

ಅಕ್ಷರ ಗಾತ್ರ : | |

ಸಂಕ್ರಾಂತಿಯೆಂಬುದು ಸೂರ್ಯನಿಗೆ ಸಂಬಂಧಿಸಿದ ಹಬ್ಬವಾಗಿದ್ದು ಅದನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಕೆಲವೆಡೆ ಅದು ಮಾಘಿಯಾದರೆ, ತಮಿಳುನಾಡಿನಲ್ಲಿ ಅದನ್ನು ಪೊಂಗಲ್ ಎನ್ನುತ್ತಾರೆ. ಕನ್ನಡನಾಡಿನಲ್ಲಿ ಅದು ಸುಗ್ಗಿಯ ಹಬ್ಬವಾದರೆ, ಮರಾಠರಿಗೆ ಅದು ಹಳದಿ-ಕುಂಕುಮ. ಹೀಗೆಯೇ ಭಾರತೀಯರೆಲ್ಲರಿಗೂ ಅದು ಹಬ್ಬವಾಗಿದ್ದು, ಹಲವು ಸಾಮ್ಯ-ವೈಷಮ್ಯಗಳನ್ನು ಹೊಂದಿದೆ.

ಸೂರ್ಯನು ಹಗಲು-ರಾತ್ರಿಗಳಿಗೆ ಕಾರಣವೆಂಬುದು ಎಲ್ಲರಿಗೂ ತಿಳಿದಿದೆ. ಭೂಮಂಡಲದಲ್ಲಿ ಇರುವ ಜೀವಿಗಳಿಗೆ ಸೂರ್ಯೋದಯದೊಂದಿಗೆ ಹಗಲು ಆರಂಭವಾದರೆ, ದೇವತೆಗಳಿಗೆ ಮಕರ ಸಂಕ್ರಾಂತಿಯಂದು ಅದು ಮೊದಲಾಗುತ್ತದೆ. ಮುಂದೆ ಆರು ತಿಂಗಳ ವರೆಗೆ ಅದು ಮುಂದುವರೆಯುತ್ತದೆ. ಅದನ್ನು ಉತ್ತರ ಅಯನ ಎನ್ನುತ್ತಾರೆ. ಮುಂದೆ ಆರು ತಿಂಗಳು ದಕ್ಷಿಣ ಅಯನ. ಅದು ಪಿತೃಗಳಿಗೆ ಪ್ರಶಸ್ತವಾದುದು. ಆಗ ಮುಕ್ತವಾಗಿ ಸಂಚರಿಸುವುದು ದುಸ್ಸಾಧ್ಯ. ಉತ್ತರಾಯಣದಲ್ಲಿ ಸುಲಭವಾಗಿ ಸಂಚರಿಸಬಹುದು. ಸಾಧುಗಳೂ ಸಂತರೂ ದೇವತೆಗಳೂ ಋಷಿಗಳೂ ಜನರನ್ನು ಅನುಗ್ರಹಿಸಲು ಮನೆಯಿಂದ ಮನೆಗೆ, ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುತ್ತಾರೆ.

ಇಚ್ಛಾಮರಣಿಯಾದ ಭೀಷ್ಮನು ಸಾವಿಗೆ ಉತ್ತರಾಯಣವನ್ನು ಎದುರು ನೋಡಿದ ಸಂಗತಿಯು ಮಹಾಭಾರತದಲ್ಲಿದೆ. ಗೀತೆಯಲ್ಲಿಯೂ ಈ ಕುರಿತು ಹೇಳಿಕೆಯೊಂದಿದ್ದು ಉತ್ತರಾಯಣವು ಮುಮುಕ್ಷುಗಳಿಗೆ ಯೋಗ್ಯವೆನ್ನಲಾಗಿದೆ. ಅದರ ಅರ್ಥವೇನೇ ಇರಲಿ, ಸಂಕ್ರಾಂತಿಯು ಪುಣ್ಯಕಾಲವೆಂದು ತಿಳಿದು ಎಲ್ಲರೂ ಹಬ್ಬವನ್ನು ಆಚರಿಸುತ್ತಾರೆ. ಮಿಂದು ಹೊಸ ಬಟ್ಟೆಯನ್ನು ಧರಿಸಿ, ಎಳ್ಳು ಬೀರಲು ಸಿದ್ಧರಾಗುತ್ತಾರೆ. ಎಲ್ಲರಿಗೂ ಎಳ್ಳು ಬೆಲ್ಲ ಕೊಡುವುದು ವಾಡಿಕೆ. ಅಷ್ಟೇ ಅಲ್ಲ, ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತಾಡಿ ಎನ್ನುವುದುಂಟು.

ದೇವಾಲಯದಲ್ಲಿ ಅಯನವನ್ನು ಆಚರಿಸುತ್ತಾರೆ. ಇಲ್ಲಿ ಅಯನವೆಂದರೆ, ರಾತ್ರಿಯ ಪೂಜೆಯಾದ ಮೇಲೆ ಘಂಟೆಯನ್ನು ಎಡಗೈಯಲ್ಲಿ ತೂಗುತ್ತಾ, ಬಲಗೈಯಲ್ಲಿ ದೀಪವನ್ನು ಹಿಡಿದುಕೊಂಡು, ಗರ್ಭಗುಡಿಯನ್ನು ಮೂರು ಸಾರೆ ಪ್ರದಕ್ಷಿಣ ಮಾಡುತ್ತಾ ಹೋಗುವುದು. ಕ್ಷೇತ್ರದ ಕಾವಲು ದೇವತೆಗೆ ಬಲಿಗಾಯಿ ಸಮರ್ಪಿಸಿ, ಪ್ರಧಾನ ದೇವತೆಗೆ ಸುದೀರ್ಘವಾಗಿ ನೀರಾಜನ ಮಾಡಲಾಗುತ್ತದೆ. ಆ ಸಮಯದಲ್ಲಿ ಮಕ್ಕಳು ಹಿರಿಯರು ಮಹಿಳೆಯರು - ಎಲ್ಲರೂ ಜಾಗಟೆ ಬಾರಿಸುವುದು, ಶಂಖ ಊದುವುದು ಮುಂತಾದವುಗಳನ್ನು ಮಾಡುತ್ತಾ ಅರ್ಚಕನನ್ನು ಹಿಂಬಾಲಿಸುತ್ತಾರೆ. ಸಂಕ್ರಾಂತಿಯಂದು ಹಗಲಿನಲ್ಲಿ ಮಹಾಪೂಜೆಯಿದ್ದೇ ಇರುತ್ತದೆ.

ತಮಿಳರಿಗೆ ಮಕರ ಸಂಕ್ರಾಂತಿಯು ಹೊಸ ಧಾನ್ಯದ ಆರಂಭದ ದಿನವಾಗಿರುತ್ತದೆ. ಕನ್ನಡನಾಡಿನಲ್ಲಿಯೂ ಕೆಲವರು ಅದನ್ನು ಹೊಸ ಅಕ್ಕಿಯ ಅಥವಾ ಧಾನ್ಯದ ಹಬ್ಬವಾಗಿ ಆಚರಿಸುತ್ತಾರೆ. ಅದರ ಹಿಂದಿನ ದಿನ ಮನೆಯನ್ನು ಶುಚಿಯಾಗಿಸಿ ಹಳೆಯ ಬಟ್ಟೆಗಳನ್ನು ಸುಟ್ಟು ಬೋಗಿಯ ದಿನವನ್ನು ಪೂರೈಸುತ್ತಾರೆ. ಸಂಕ್ರಾಂತಿಯ ದಿನ ಹೊಸ ಬಟ್ಟೆಯನ್ನು ಧರಿಸಿ ದೇವಾಲಯಕ್ಕೆ ಹೋಗಿಬರುತ್ತಾರೆ. ಹೆಂಗಸರು ಹುಗ್ಗಿಯನ್ನು ಬೇಯಿಸುತ್ತಾರೆ ಹಾಗೂ ನಿಂಬೆಯ ಸಿಪ್ಪೆಯಲ್ಲಿ ದೀಪವನ್ನು ಬೆಳಗುತ್ತಾರೆ. ರೈತರು ಎತ್ತುಗಳನ್ನು ಸಿಂಗರಿಸಿ ಆಟವಾಡುತ್ತಾರೆ. ಮಕ್ಕಳಿಗೆ ಆರತಿಯನ್ನು ಮಾಡುತ್ತಾರೆ. ಹೀಗೆ ಸಂಕ್ರಾಂತಿಯು ಶಿಶುಗಳಿಂದ ಪಶುಗಳ ವರೆಗೆ, ಶ್ರೀಸಾಮಾನ್ಯನಿಂದ ಶ್ರೀಮಂತನ ವರೆಗೆ, ಬಡವರಿಂದ ಬಲ್ಲಿದರ ವರೆಗೆ, ಮನೆಯಿಂದ ಮಠದ ವರೆಗೆ ಎಲ್ಲರೂ ಆನಂದಿಸುವ ಸಂದರ್ಭವಾಗಿದೆ. 

ಸೂರ್ಯನ ಸಂಚಾರ
ಸೂರ್ಯನು ಆಕಾಶದಲ್ಲಿ ಸಂಚರಿಸುವಂತೆ ಕಾಣುವುದಾದರೂ, ಅವನು ಇದ್ದ ಜಾಗದಲ್ಲಿಯೇ ಇರುವನೆಂದು ವಿಷ್ಣುಪುರಾಣದಲ್ಲಿ ಹೇಳಲಾಗಿದೆ. ಆದರೆ ಭೂ ಮಂಡಲದಲ್ಲಿ ಸೂರ್ಯನ ಉದಯಾಸ್ತಗಳಾಗುವುದು ಎಲ್ಲರ ಅನುಭವದಲ್ಲಿದೆ. ಉದಯದಿಂದ ಉದಯದ ವರೆಗೆ ಒಂದು ದಿನವಾದರೆ, ಸುಮಾರು ಮೂವತ್ತು ದಿನಗಳ ವರೆಗೆ, ಸೂರ್ಯನು ಆಕಾಶದಲ್ಲಿ ಕಲ್ಪಿತವಾದ ಹನ್ನೆರಡು ರಾಶಿಗಳಲ್ಲಿ ಒಂದು ರಾಶಿಯಲ್ಲಿಯೇ ಕಾಣುವನು. ಅವನು ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಯನ್ನು ಪ್ರವೇಶಿಸುವಂತೆ ಕಾಣುವ ಕಾಲವನ್ನು ‘ಸಂಕ್ರಾಂತಿ’ ಎಂದು ಕರೆಯಲಾಗಿದೆ.

ಹೀಗೆ ಒಂದು ವರ್ಷದಲ್ಲಿ ಹನ್ನೆರಡು ಸಂಕ್ರಾಂತಿಗಳಿರುತ್ತವೆ. ಅವುಗಳಲ್ಲಿ ಕರ್ಕ ಮತ್ತು ಮಕರ ಸಂಕ್ರಾಂತಿಗಳಿಗೆ ಹೆಚ್ಚು ಮಹತ್ತ್ವವಿದೆ. ಎಲ್ಲ ಸಂಕ್ರಾಂತಿಗಳೂ ಪುಣ್ಯಪ್ರದಗಳು ಎನ್ನಲಾಗಿದ್ದರೂ, ಇವೆರಡು ಸಂಕ್ರಾಂತಿಗಳು ಹೆಚ್ಚು ಮಹತ್ತ್ವವನ್ನು ಹೊಂದಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು