ಗುರುವಾರ , ಆಗಸ್ಟ್ 11, 2022
21 °C

ದಿನದ ಸೂಕ್ತಿ| ಆಸೆ ಬೇಡ ಎನ್ನಬೇಡಿ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಲಘೀಯಃ ಪ್ರಾಜ್ಯಂ ವಾ ಫಲಮಭಿಮುಖಂ ಯಾತು ಮನಸಾ

ನಿರೀಹೇಣ ಸ್ಥಾತುಂ ಕ್ವಚಿದಪಿ ನ ಯುಕ್ತಂ ಮತಿಮತಾ ।

ಕುಲಾಲೋ ದಂಡೇನ ಭ್ರಮಯತಿ ನ ಚೇಚ್ಚಕ್ರಮನಿಶಂ

ಶರಾವಃ ಕುಂಭೋ ವಾ ನ ಹಿ ಭವತಿ ಸತ್ಯಾಮಪಿ ಮೃದಿ ।।

ಇದರ ತಾತ್ಪರ್ಯ ಹೀಗೆ:

‘ಬಹಳ ಚಿಕ್ಕದೋ ಅಥವಾ ಬಹಳ ದೊಡ್ಡದೋ - ಯಾವುದೇ ಆದರೂ ಸರಿ, ಪ್ರಯೋಜನವನ್ನು ಕುರಿತು ಮನಸ್ಸು ಪ್ರವರ್ತಿಸಲಿ. ಬುದ್ಧಿವಂತನಾದವನು ಯಾವ ಆಶೆಯೂ ಇಲ್ಲದೆ ನಿಂತಿರಬೇಕೆಂಬುದು ಯಾವಾಗಲೂ ಯುಕ್ತವಲ್ಲ. ಕುಂಬಾರನು ಚಕ್ರವನ್ನು ಕೋಲಿನಿಂದ ತಿರುಗಿಸದೇ ಇದ್ದರೆ ಮಣ್ಣಿದ್ದರೂ ಮಡಕೆಯೂ ತಯಾರಾಗದು, ತಟ್ಟೆಯೂ ತಯಾರಾಗದು.’

ಕರ್ಮಮಾರ್ಗವನ್ನು ಎತ್ತಿಹಿಡಿಯುತ್ತಿದೆ ಈ ಸುಭಾಷಿತ.

ಯಾವುದೇ ಕೆಲಸ ಅದರಷ್ಟಕ್ಕೆ ಅದೇ ಆಗುವುದಿಲ್ಲ. ನಾವು ಮೊದಲಿಗೆ ಆ ಕೆಲಸದಲ್ಲಿ ತೊಡಗಬೇಕಾಗುತ್ತದೆ. ಪ್ರವೃತ್ತಿಯೇ ಇಲ್ಲದೆ ಯಾವುದೇ ಕೆಲಸ ಆರಂಭವೇ ಆಗದಷ್ಟೆ!

ನಮ್ಮ ದೇಶದ ವಿಚಾರಧಾರೆಯಲ್ಲಿ ಎರಡು ಪ್ರಮುಖ ದಾರಿಗಳ ಬಗ್ಗೆ ಹೇಳಲಾಗಿದೆ. ಒಂದು: ಪ್ರವೃತ್ತಿಮಾರ್ಗ; ಇನ್ನೊಂದು: ನಿವೃತ್ತಿಮಾರ್ಗ. ಹೀಗಿದ್ದರೂ ನಮ್ಮಲ್ಲಿ ನಿವೃತ್ತಿಮಾರ್ಗದ ಬಗ್ಗೆ ಹೆಚ್ಚು ಮಾತನಾಡುವುದನ್ನು ಕೇಳುತ್ತಿರುತ್ತೇವೆ. ಅದೇ ನಿಜವಾದ ಜೀವನಮಾರ್ಗ ಎಂಬಂತೆ ಅದನ್ನು ಬಿಂಬಿಸಲಾಗುತ್ತಿರುತ್ತದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಹೀಗೆ ಮಾತನಾಡುವವರು ದಿಟವಾಗಿ ಪ್ರವೃತ್ತಿಮಾರ್ಗದಲ್ಲಿ ಇರುವವರೇ ಆಗಿರುತ್ತಾರೆ ಎಂಬುದು ಗಮನೀಯ! ಇರಲಿ!!

ಪ್ರವೃತ್ತಿಮಾರ್ಗಕ್ಕೆ ವಿರುದ್ಧ ನಿವೃತ್ತಿಮಾರ್ಗ ಎಂಬಂತೆ ವ್ಯಾಖ್ಯಾನಿಸಲಾಗುತ್ತದೆ. ಮಾತ್ರವಲ್ಲ, ನಿವೃತ್ತಿಯನ್ನೇ ದಿಟವಾದ ಆದರ್ಶ ಎಂಬಂತೆಯೂ ಹೊಗಳುವುದುಂಟು. ಸುಭಾಷಿತ ಈ ಮನೋಧರ್ಮವನ್ನೇ ಸರಿಯಲ್ಲ ಎಂದು ಹೇಳುತ್ತಿರುವುದು. ಅದಕ್ಕಾಗಿ ಅದು ಬಳಸಿಕೊಂಡಿರುವ ಉದಾಹರಣೆಯೂ ನಮ್ಮ ನಿತ್ಯದ ಅನುಭವಕ್ಕೆ ಬರುವಂಥದ್ದೇ. ಮಡಕೆಯನ್ನು ಮಾಡಬೇಕೆಂದರೆ ನಮ್ಮ ಬಳಿ ಕೇವಲ ಮಣ್ಣು ಮಾತ್ರವೇ ಇದ್ದರೆ ಸಾಲದು ಅಲ್ಲವೆ? ಮೊದಲಿಗೆ ನಮಗೆ ಮಡಕೆ ಬೇಕು ಎಂಬ ಆಶೆ ನಮ್ಮಲ್ಲಿ ಚಿಗುರೊಡೆಯಬೇಕು; ನಾವು ಮಡಕೆಯನ್ನು ತಯಾರಿಸಬೇಕೆಂಬ ಸಂಕಲ್ಪ ಮೂಡಬೇಕು. ಆ ಸಂಕಲ್ಪ ಕ್ರಿಯೆಯಾಗಿ ಬದಲಾಗಬೇಕು; ಚಕ್ರವನ್ನು ತಿರುಗಿಸಬೇಕು; ಕೈ ಮಣ್ಣಾಗಬೇಕು; ಕುಶಲತೆಯಿಂದ ಮಡಕೆಯನ್ನು ತಯಾರಿಸಬೇಕು.

ಎಂದರೆ ಯಾವುದೇ ಸಣ್ಣ ಕೆಲಸ ಇರಲಿ, ದೊಡ್ಡ ಕೆಲಸ ಇರಲಿ, ಮೊದಲಿಗೆ ನಮ್ಮಲ್ಲಿ ಅದನ್ನು ಮಾಡಬೇಕೆಂಬ ಸಂಕಲ್ಪ ಮೂಡಿಕೊಳ್ಳಬೇಕು. ನನಗೆ ಮಡಕೆ ಬೇಕು ಎಂಬ ಆಶೆ ಮೊದಲಿಗೆ ನಮ್ಮಲ್ಲಿ ಹುಟ್ಟಬೇಕಾಗುತ್ತದೆ. ಆದರೆ ಹೀಗೆ ಯಾವುದನ್ನೂ ಆಶೆ ಪಡಲೇಬಾರದು – ಎಂಬಂತೆ ಅತಿರೇಕದಿಂದ ನಮ್ಮ ಕೆಲವೊಂದು ಶಾಸ್ತ್ರವಾಕ್ಯಗಳನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ. ಇದನ್ನು ತಪ್ಪು ಎಂದು ಹೇಳುತ್ತಿದೆ ಸುಭಾಷಿತ.

ಆಶೆಯೇ ತಪ್ಪಲ್ಲ; ಅದು ನಮ್ಮ ಜೀವನದ ಸಂಭ್ರಮ–ಸೌಂದರ್ಯಗಳಿಗೆ ಕಾರಣ. ಆದರೆ ಈ ಆಶೆ ಅತಿಯಾಶೆ ಆಗದಂತೆ ನೋಡಿಕೊಳ್ಳುವ ಸಂಕಲ್ಪವನ್ನೂ ಮಾಡಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು