ಭಾನುವಾರ, ನವೆಂಬರ್ 27, 2022
27 °C
ಭಾಗ 239

ವೇದವ್ಯಾಸರ ಶಿವಪುರಾಣಸಾರ: ಶಿವನ ಮನ ಗೆದ್ದ ಪಾರ್ವತಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಶಿವನನ್ನು ಸಮರ್ಥಿಸಿ ಮಾತಾಡಿದ ಪಾರ್ವತಿಯು ವೃದ್ಧವೇಷಧಾರಿಯಾದ ರುದ್ರನಿಗೆ ಮತ್ತಷ್ಟು ಚುರುಕು ಮುಟ್ಟಿಸುತ್ತಾಳೆ. ‘ದುರಾಚಾರಿಗಳಾದವರು ಶಿವನ ಸ್ವರೂಪವನ್ನು ತಿಳಿಯಲಾರರು. ಶಿವನಿಂದನೆ ಮಾಡಿದರೆ ಜನ್ಮಜನ್ಮಾಂತರಗಳ ಪುಣ್ಯವೆಲ್ಲವೂ ನಾಶವಾಗುವುದು. ನಿನ್ನಂತಹ ಶಿವದ್ವೇಷಿಯನ್ನು ನೋಡಿದರೆ ಪಾಪ ಬರುತ್ತದೆ. ಎಲೈ ದುಷ್ಟ ಸನ್ಯಾಸಿಯೇ, ಶಂಕರನನ್ನು ನಾನು ಚೆನ್ನಾಗಿ ಬಲ್ಲೆ. ಆದಿಪುರುಷನಾದ ಶಿವನನ್ನು ನೀನು ಸರಿಯಾಗಿ ತಿಳಿದಿಲ್ಲ. ಅವನು ಹೇಗೇ ಇರಲಿ, ಎಂತಹ ರೂಪವುಳ್ಳವನಾಗಲಿ, ಅವನೇ ನನಗೆ ಬೇಕಾದವನು. ಅವನಿಗೆ ಯಾವ ವಿಕಾರಗಳು ಇಲ್ಲ. ವಿಷ್ಣುಬ್ರಹ್ಮರೂ ಶಿವನಿಗೆ ಸರಿಸಮರಲ್ಲ’ ಎಂದ ಗಿರಿಜೆ ಮತ್ತೆ ಶಿವನನ್ನು ಧ್ಯಾನಿಸುತ್ತಾ ಕುಳಿತಳು.

ಗಿರಿಜೆಯ ಮಾತುಗಳನ್ನು ಕೇಳಿದ ವೃದ್ಧಬ್ರಹ್ಮಚಾರಿ ಮತ್ತೆ ಏನೋ ಹೇಳಲು ಉದ್ಯುಕ್ತನಾದ. ಶಿವನಿಂದೆಯನ್ನು ಮತ್ತೆ ಕೇಳಲು ಇಷ್ಟವಿಲ್ಲದ ಪಾರ್ವತಿ, ಅವನು ಮಾತಾಡದಂತೆ ತನ್ನ ಸಖಿ ವಿಜಯೆಯ ಮೂಲಕ ತಡೆದಳು. ನಂತರ ತನ್ನ ಸಖಿಯನ್ನುದ್ದೇಶಿಸಿ, ‘ಶಿವನಿಂದನೆಯನ್ನು ಮಾಡುವವನಿಗೆ ಮಾತ್ರ ಪಾಪಬರುವುದಿಲ್ಲ. ಆ ಶಿವನಿಂದನೆಯನ್ನು ಕೇಳುವವನಿಗೂ ಪಾಪ ಬರುತ್ತದೆ. ಆದ್ದರಿಂದ ಈ ದುಷ್ಟ ಮತ್ತೆ ಶಿವನಿಂದನೆ ಮಾಡುವ ಮೊದಲು, ನಾವು ಈ ಸ್ಥಳದಿಂದ ಬೇರೆ ಕಡೆಗೆ ತೆರಳೋಣ. ಈ ಮೂರ್ಖ ಮುದುಕನೊಡನೆ ನಾನು ಮತ್ತೆ ಮಾತನಾಡಲಿಚ್ಛಿಸುವುದಿಲ್ಲ’ ಎಂದಳು.

ಹೀಗೆ ಹೇಳಿದ ಗಿರಿಜೆ ಅಲ್ಲಿಂದ ಹೊರಡಲು ಒಂದು ಹೆಜ್ಜೆ ಮುಂದಿಟ್ಟಳು. ಆ ಕೂಡಲೇ ಶಿವ ಅವಳ ಕೈಯನ್ನು ಹಿಡಿದ. ಆಗ ಗಿರಿಜೆಗೆ ಮತ್ತಷ್ಟು ಕೋಪ ಉಕ್ಕಿತು. ಪಾರ್ವತಿಯನ್ನು ಮತ್ತಷ್ಟು ಪರೀಕ್ಷಿಸಲು ಇಷ್ಟಪಡದ ಶಿವ ತನ್ನ  ವೇಷವನ್ನು ಕಳಚಿ, ಸಹಜ ಸುಂದರರೂಪವನ್ನು ಧರಿಸಿದ. ಪಾರ್ವತಿ ತನ್ನ ಮನಸ್ಸಿನಲ್ಲಿ ಸದಾ ಕಲ್ಪಿಸಿಕೊಂಡು ಧ್ಯಾನಿಸುತ್ತಿದ್ದ ಶಿವ ಪ್ರತ್ಯಕ್ಷನಾಗಿದ್ದು ಕಂಡು ರೋಮಾಂಚಿತಳಾದಳು. ಶಿವನನ್ನು ನೋಡಿ ಗಿರಿಜೆಯು ನಾಚಿಕೆಯಿಂದ ತಲೆಯನ್ನು ಬಗ್ಗಿಸಿ ನಿಂತಳು.

ಆಗ ಶಿವ ಹೇಳಿದ ‘ಗಿರಿಜೆ, ನನ್ನನ್ನು ಬಿಟ್ಟು ಎಲ್ಲಿಗೆ ಹೋಗುವೆ? ಇನ್ನೆಂದೂ ನಿನ್ನನ್ನು ಬಿಡಲಾರೆ. ನೀನು ತಪಸ್ಸಿನಿಂದಲೂ, ಸೌಂದರ್ಯದಿಂದಲೂ ನನ್ನನ್ನು ಗೆದ್ದುಬಿಟ್ಟಿರುವೆ. ನೀನು ನನ್ನ ಅನಾದಿಪತ್ನಿ. ಹೀಗಿರುವಾಗ ಲಜ್ಜೆ ಏಕೆ ಪಡುವೆ?. ಸೂಕ್ಷ್ಮಬುದ್ಧಿಯಿಂದ ವಿಚಾರಮಾಡು. ಆಗ ನಾನು ಹೇಳಿದುದರ ನಿಜಾಂಶವು ತಿಳಿಯುವುದು. ಲೋಕಲೀಲೆಯನ್ನ ಅನುಸರಿಸಿ ನಿನ್ನನ್ನು ಬಹುವಿಧವಾಗಿ ಪರೀಕ್ಷಿಸಿದೆ. ಆದರೂ ಸ್ಥಿರಮನಸ್ಸಿನವಳಾದ ನೀನು ನಿನ್ನ ಪ್ರತಿಜ್ಞೆಯನ್ನು ಬಿಡಲಿಲ್ಲ. ನನಗೆ ನಿನ್ನಷ್ಟು ಪ್ರೀತಪಾತ್ರಳಾದವಳು ಮೂರು ಲೋಕಗಳಲ್ಲಿ ಯಾರೂ ಇಲ್ಲ. ಸರ್ವವಿಧದಿಂದಲೂ ನಾನು ನಿನ್ನ ಅಧೀನನು. ಎಲೈ ಪ್ರಿಯೆ, ನನ್ನ ಬಳಿಗೆ ಬಾ. ನೀನು ನನ್ನ ಪತ್ನಿಯು. ನಾನು ನಿನ್ನ ವರನು. ನಿನ್ನೊಡನೆ ಈ ಕೂಡಲೇ ನನ್ನ ಸ್ಥಾನವಾದ ಕೈಲಾಸಕ್ಕೆ ತೆರಳುವೆನು’ ಎಂದು ಮಹಾದೇವನು ಹೇಳಿದಾಗ ಪಾರ್ವತಿಯು ತುಂಬಾ ಹರ್ಷೋಲ್ಲಾಸದಿಂದ ಬೀಗಿದಳು. ಆ ಕೂಡಲೇ ಅವಳಿಗೆ ತಪಸ್ಸಿನಿಂದುಂಟಾದ ಕ್ಲೇಶವು ಮಾಯವಾಯಿತು. ಗಿರಿಜೆ ಪಟ್ಟ ಪರಿಶ್ರಮವೆಲ್ಲವೂ ಸಾರ್ಥಕವಾಯಿತು ಎಂಬಲ್ಲಿಗೆ ಶ್ರೀಶಿವಮಹಾಪುರಾಣದ ರುದ್ರಸಂಹಿತೆಯ ಮೂರನೇ ಖಂಡವಾದ ಪಾರ್ವತೀಖಂಡದಲ್ಲಿ ಇಪ್ಪತ್ತೆಂಟನೆಯ ಅಧ್ಯಾಯ ಮುಗಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.